ಅಗುಳಿನಿಂದ ಅನ್ನದ ಪರೀಕ್ಷೆಯಾಗುವಂತೆ ಆರಂಭದ ಸಾಲುಗಳಿಂದ ಕೃತಿರತ್ನದ ವಿಶ್ಲೇಷಣೆಯೂ ಸಂಭವಿಸುವುದರಿಂದ ಆರಂಭಕ್ಕೂ ಮಹತ್ವವನ್ನು ದಯಪಾಲಿಸಿದವನು ಮಾರ್ಕ್ವೆಜ್". ಎನ್ನುತ್ತಾರೆ ಪ್ರಾಧ್ಯಾಪಕ, ಲೇಖಕ ಚಂದ್ರಶೇಖರ ಹೆಗಡೆ. ಅವರು ಎಸ್ ಗಂಗಾಧರಯ್ಯನವರು ಕನ್ನಡಕ್ಕೆ ಅನುವಾದಿಸಿದ ಗೇಬ್ರಿಯಲ್ ಮಾರ್ಕ್ವೆಜ್ ಕೃತಿ 'ಫ್ರಾಗ್ರನ್ಸ್ ಆಫ್ ಗ್ವಾವ' ಗೆ ಬರೆದ ಅನಿಸಿಕೆ ಹೀಗಿದೆ....
'ಫ್ರಾಗ್ರನ್ಸ್ ಆಫ್ ಗ್ವಾವ' ಎಂಬುದು ಗ್ಯಾಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ ನನ್ನು ಸಂದರ್ಶನ ಮಾಡಿ ಅದರ ಸಾರವನ್ನು ಯಥಾವತ್ತಾಗಿ ಸಂಗ್ರಹಿಸಿದ ಅವನ ಗೆಳೆಯ ಅಪುಲೆಯೋನ ಮೌಲಿಕ ಕೃತಿಯಾಗಿದೆ. ವಿಶ್ವದ ಸಾಂಸ್ಕೃತಿಕ ಚರಿತ್ರೆಯಲ್ಲಿ ಮಹತ್ವದ ಲೇಖಕನಾಗಿ ದಾಖಲಾಗಿರುವ ನೋಬೆಲ್ ಪ್ರಶಸ್ತಿ ವಿಜೇತ ಮಾರ್ಕ್ವೆಜ್ ನ ಸಂದರ್ಶನ ಸಾರವನ್ನು ಶ್ರೀ ಎಸ್. ಗಂಗಾಧರಯ್ಯರವರು ಕನ್ನಡಕ್ಕೆ ಅರ್ಥವತ್ತಾಗಿ ತಂದಿರುವುದು ಅಪೂರ್ವ ಶ್ಲಾಘನೀಯ ಕಾರ್ಯವಾಗಿದೆ. ಬಾನು ಮುಷ್ತಾಕ್ ಅವರ ಎದೆಯ ಹಣತೆ ಕಥಾ ಸಂಕಲನವು ಬೂಕರ್ ಪ್ರಶಸ್ತಿಯನ್ನು ಪಡೆದು ವಿಶ್ವದ ಸಾಂಸ್ಕೃತಿಕ ಇತಿಹಾಸದಲ್ಲಿ ಕನ್ನಡದ ಪಾತ್ರ ಮಹತ್ವದ್ದಾಗಿದೆ ಎಂಬುದನ್ನು ಸಾಬೀತು ಮಾಡಿದೆ. ಇಂತಹ ಸಾಹಿತ್ಯದ ಜಾಗತೀಕರಣವು ಭಾಷೆ, ಜನಾಂಗ, ವರ್ಣ, ವರ್ಗ, ಜಾತಿ, ಮತ, ಪಂಥ, ದೇಶ, ಕಾಲಗಳ ಸೀಮೆಯನ್ನು ಮೀರಿ ಸಂವೇದನಾಶೀಲವಾಗಿ ಸಂಭವಿಸುತ್ತಿರುವ ಈ ಹೊತ್ತಿನಲ್ಲಿಯೇ ಸಮಕಾಲೀನ ಬರಹಗಾರ ಮಹಾಂತೇಶ ಹೊದ್ಲೂರರವರು ಕೈಗಿತ್ತ ಮೌಲಿಕ ಕೃತಿಯೇ ಗ್ಯಾಬ್ರಿಯಲ್ ಮಾರ್ಕ್ವೆಜ್ ನ ಈ ಫ್ರಾಗ್ರನ್ಸ್ ಆಫ್ ಗ್ವಾವ.
ಒಂಭತ್ತನೇ ಶತಮಾನದ ಅಂದಿನ ನಮ್ಮ ಕವಿಗಳಿಗೆ ಶ್ರೀವಿಜಯನ ಕೃತಿಯು ರಾಜಮಾರ್ಗವಾದಂತೆ, ಕೃತಕ ಬುದ್ಧಿಮತ್ತೆಯ ಯುಗದ ಬರಹಗಾರರಿಗೆ ಮಾರ್ಕ್ವೆಜ್ ನ 'ಫ್ರಾಗ್ರನ್ಸ್ ಆಫ್ ಗ್ವಾವʼ ಕೃತಿಯು ಕೈದೀವಿಗೆಯಾಗಿದೆ. ಈ ಕೃತಿಯನ್ನು ಓದುತ್ತಿದ್ದರೆ ನನ್ನೊಂದಿಗೆ ನಾನೇ ಅನುಸಂಧಾನ ಮಾಡಿಕೊಳ್ಳಬೇಕಾದ ಅಗತ್ಯವನ್ನು ಮನಗಾಣುವಂತಾಯಿತು. ತೌಲನಿಕವಾಗಿಯೂ ತನ್ನೊಂದಿಗೆ ನಮ್ಮ ವ್ಯಕ್ತಿತ್ವವನ್ನು ತೂಗಿ ನೋಡಿಕೊಳ್ಳುವಂತೆ ಮಾರ್ಕ್ವೆಜ್ ಜಗದ ಎಲ್ಲ ಲೇಖಕರಿಗೂ ಒತ್ತಾಯಿಸುತ್ತಾನೆ. ಅವನೇ ಹೇಳುವಂತೆ ತನ್ನ ಬದುಕಿನ ಬಹಳ ದೊಡ್ಡ ಸಾಧನೆಯೆಂದರೆ ತನ್ನ ಕೃತಿಗಳಲ್ಲ; ಬದಲಾಗಿ ತನ್ನ ಮಕ್ಕಳೇ ಎಂದು ಭಾವನೆಗಳಿಲ್ಲದೇ ಬತ್ತಿಹೋಗುತ್ತಿರುವ ಹೃದಯಗಳಿಗೆ ವಾತ್ಸಲ್ಯದ ಬನಿಯನ್ನು ಹಂಚುತ್ತಾನೆ. ಮಾರ್ಕ್ವೆಜ್ ಹೀಗೆ ಸಾರಲು ಕಾರಣಗಳು ಇಲ್ಲದಿಲ್ಲ. ತನಗೆ ಎದುರಾಗುವ ಪ್ರತಿಯೊಂದು ಘಳಿಗೆಯನ್ನೂ ಕಲಾತ್ಮಕವಾಗಿ ಬದುಕಿದವನು. ಬದುಕು ಹಾಗೂ ಬರಹಗಳೆರಡರ ನಡುವಿನ ಸಮರಸವನ್ನು ಸೋಮರಸದಂತೆ ಹೀರಿದ ತತ್ವಜ್ಞಾನಿ ಈ ಮಾರ್ಕ್ವೆಜ್. ಹಾಗೆಂದು ನಾಟಕೀಯತೆ- ಸಿನಿಮೀಯತೆಗಳ ಅಮಲನ್ನು ತನ್ನ ತಲೆಗೆಂದೂ ಏರಿಸಿಕೊಂಡವನಲ್ಲ. ವಾಸ್ತವಿಕತೆಗಳ ಮರ್ತ್ಯಲೋಕವನ್ನು ಆಳವಾಗಿ ಶೋಧಿಸುತ್ತಲೇ ತನ್ನಜ್ಜಿ ಹೇಳಿದ ಮಾಂತ್ರಿಕ ಪಾತ್ರಗಳನ್ನು ತನ್ನ ಪಕ್ಕದ ಮನೆಯಂಗಳದಲ್ಲಿ ಒಣಹಾಕಿದ ಹಾರುತ್ತಿದ್ದ ಬಟ್ಟೆಗಳಲ್ಲಿ ತಡಕಾಡಿದವನು. ಹಸಿಹಸಿಯಾದ ಹುಸಿಗಳನ್ನು ಹೊಸೆ ಹೊಸೆದು ಕಸಿ ಮಾಡುವ ಭ್ರಮಾತ್ಮಕ ಸೃಜನಶೀಲತೆಗಿಂತ, ಹತ್ತಿರದಲ್ಲಿಯೇ ವಾಸವಿದ್ದು ಉಪವಾಸ ವನವಾಸಗಳಲ್ಲಿ ತೊಳಲಾಡುವ ಒಡಲೊಡಲ ಕೆಚ್ಚಿನಾ ಕಿಡಿಗಳೇ ಸಾಹಿತ್ಯದ ಅಂತರಾಳವಾಗಬೇಕು ಎಂಬ ಸರಳ ಸಮಾಜವಾದ ಮಾರ್ಕ್ವೆಜ್ ನದು. ಆತನ ಕೃತಿಗಳಿಗೆಲ್ಲಾ ವಾಸ್ತವಿಕತೆಯೇ ಮೂಲಾಧಾರ. ಇದುವರೆಗೂ ಸಾಗಿ ಬಂದಿರುವ ಲೇಖಕರಿಗೂ ಸಾಧ್ಯವಾಗದ ಪ್ರಮಾಣವೊಂದನ್ನು ಮಾಡುತ್ತಾನೆ ಹೀಗೆ- "ವಾಸ್ತವಿಕತೆಯ ಆಧಾರವಿಲ್ಲದ ಒಂದೇ ಒಂದು ಸಾಲನ್ನೂ ನಾನು ನನ್ನ ಕೃತಿಗಳಲ್ಲಿ ರಚಿಸಿಲ್ಲ" ಈ ಪ್ರತಿಜ್ಞೆಯು ಬರಹದೆಡೆಗಿನ ಮಾರ್ಕ್ವೆಜ್ ನ ಅದಮ್ಯ ಪ್ರೀತಿಯನ್ನು ತೋರುವುದರ ಜೊತೆಗೆ ಅವನ ಬರಹದೊಡಲಿನ ಬಡಬಾಗ್ನಿಯಾದ ಪ್ರಾಮಾಣಿಕತೆ, ಸಾಮಾಜಿಕತೆ, ಶ್ರದ್ಧೆ, ನೈತಿಕತೆಗಳನ್ನು ಎತ್ತಿಹಿಡಿಯುತ್ತದೆ. ಮಕ್ಕಳೇ ತನ್ನ ಜೀವನದ ಅದ್ಭುತ ಸಾಧನೆಗಳು ಎಂಬ ಹೆಮ್ಮೆಯು ಮಾರ್ಕ್ವೆಜ್ ಮುಗ್ಧತೆಯನ್ನು ತನ್ನ ಬದುಕಿನ ಭಾಗವನ್ನಾಗಿ ಹೇಗೆ ಮಾಡಿಕೊಂಡಿದ್ದ ಎಂಬುದಕ್ಕೆ
ಸಾಕ್ಷಿಯಾಗುತ್ತದೆ.
ಅವನು ತನ್ನ ಜೀವನದ ಬಹುಮುಖ್ಯವಾದ ಬಾಲ್ಯವನ್ನು ಕಳೆದ ಕೊಲಂಬಿಯಾದ ಅರಕಟಕಾದಲ್ಲಿದ್ದಾಗ ಅವನ ಅಜ್ಜಿ ಹೇಳಿದ ಕಥೆಗಳು ಅವನ ಬರಹಗಳಿಗೆ ಮುನ್ನುಡಿಯನ್ನು ಬರೆದವು. ಅಜ್ಜಿ ಡೋನಾ ಟ್ರಾಂಕ್ಯುಲೈನಾಳು ಮಾರ್ಕ್ವೆಜ್ ನ ಕೌತುಕಕ್ಕಾಗಿ ತುಡಿಯುತ್ತಿದ್ದ ಮನಸಿನಲ್ಲಿ ತುಂಬಿದ ತನ್ನದೇ ಮನೆಯಲ್ಲಿ ಆತ್ಮವಾಗಿ ಓಡಾಡುತ್ತಿದ್ದ ಸತ್ತವರ ಕಥೆಗಳು, ಜಾನಪದ ಲೋಕದ ಮಾಂತ್ರಿಕ ಕಥನಗಳು, ಪುರಾಣದಲ್ಲಿನ ವಿಸ್ಮಯಗಳು, ಇತಿಹಾಸದ ಘಟನೆಗಳಲ್ಲಿನ ರೋಚಕತೆ, ಪರಂಪರೆಯ ಹಾಡುಗಳಲ್ಲಿನ ಸಂಸ್ಕೃತಿಯಂತಹ ಸಂಗತಿಗಳು ಯಶಸ್ವಿ ಬರಹಗಾರನೊಬ್ಬನ ಪ್ರತಿಭೆ ಹಾಗೂ ಸೃಜನಶೀಲತೆಗೆ ಆಕರ ಸಾಮಗ್ರಿಗಳಾಗಿ ಒಂದಗಿ ಬಂದವು. ಹದಿಮೂರು ವರ್ಷದವನಾಗಿದ್ದಾಗ ಮುಂದಿನ ಶಿಕ್ಷಣಕ್ಕಾಗಿ ತನ್ನ ಊರನ್ನು ಬಿಟ್ಟು ಬಾಗಟಕ್ಕೆ ಬಂದಾಗ ಅಕ್ಷರಶಃ ಬೇರುಗಡಿತನಾದಂತೆ ವಿಹ್ವಲಗೊಂಡ ಮಾರ್ಕ್ಷೆಜ್ ನಿಗೆ ಉಸಿರು ನೀಡಿ ಕಾಪಾಡಿದ್ದು ಫ್ರಾಂಜ್ ಕಾಫ್ಕಾನ "ಮೆಟಾಮಾರ್ಫಾಸಿಸ್" ಕಾದಂಬರಿ. ಅದರಲ್ಲಿನ "ಒಂದು ದಿನ ಬೆಳಿಗ್ಗೆ ಗ್ರೆಗೋರ್ ಸಂಸನು ಆತಂಕದ ಕನಸುಗಳಿಂದ ಎಚ್ಚರಗೊಂಡಾಗ, ತಾನೊಂದು ದೈತ್ಯ ಕೀಟವಾಗಿ ಪರಿವರ್ತನೆಗೊಂಡುಬಿಟ್ಟಿರುತ್ತಾನೆ" ಎಂಬ ಮೊದಲ ಸಾಲುಗಳೇ ಮಾರ್ಕ್ವೆಜ್ ನಲ್ಲಿ ದಿಗ್ಭ್ರಮೆಯನ್ನು ಹುಟ್ಟಿಸುತ್ತವೆ. ಈ ಘಟನೆಯೇ ಮಾರ್ಕ್ವೆಜ್ ನೊಳಗಡಗಿದ್ದ ಲೋಕವನ್ನೇ ಸೆಳೆಯಬಲ್ಲ ಮಾಂತ್ರಿಕ ಬರಹಗಾರನೊಬ್ಬ ಆವಿರ್ಭವಿಸಲು ಕಾರಣವಾಯಿತೆನ್ನವುದು ಅಚ್ಚರಿಯಾದರೂ ಸತ್ಯ. ಈ ಘಟನೆ ಜ್ಞಾನದ ಜಾಗತಿಕ ಇತಿಹಾಸದಲ್ಲೊಂದು ಅಪೂರ್ವವಾದ ಮೈಲುಗಲ್ಲು. ವ್ಯಕ್ತಿಯೊಬ್ಬನ ಸೃಜನಶೀಲ ಪ್ರತಿಭೆಯ ಮಣಿಗೆ,ಇನ್ನ್ಯಾವ ಸಂದರ್ಭದಲ್ಲಿ ಅದಾವ ಸ್ಪೂರ್ತಿಯ ಕಿರಣದ ಸ್ಪರ್ಶವೊದಗಿ ಕೃತಿಯೊಂದನ್ನು ಬೆಳಗಿಸುವಂತೆ ಮಾಡುವುದೋ ಬಲ್ಲವರಾರು? ಅಂತಹ ಉಜ್ವಲಿಪ ಮಣಿಯಾಗಿ ಬದಲಾಗಿದ್ದ ಮಾರ್ಕ್ವೆಜ್. ಲೇಖಕನಾಗಿ ತನ್ನ ಪೀಳಿಗೆಗೆ ಸಾಬೀತು ಮಾಡಬೇಕಾಗಿದ್ದ ಸವಾಲನ್ನು ಸ್ವತಃ ಮೈಮೇಲೆ ಎಳೆದುಕೊಂಡ ಮಾರ್ಕ್ವೆಜ್ ನೆಪದ ಬರಹವನ್ನೇ ತಪದ ಬದುಕಾಗಿಸಿಕೊಂಡ. ಎಲ್ಲ ಲೇಖಕರಿಗೂ ಸಾಮಾನ್ಯವಾಗಿ ಎದುರಾಗುವಂತೆ ಇವನ ಆರಂಭದ ಬರಹಗಳನ್ನು ಅನುಮಾನದಿಂದ ಕಂಡ ವಿಮರ್ಶಕರೊಬ್ಬರು ಮಾರ್ಕ್ವೆಜ್ ಬರೆಯುವುದನ್ನು ಬಿಡುವುದೇ ಲೇಸು ಎಂಬ ಉಚಿತ ಸಲಹೆಯನ್ನು ನೀಡುತ್ತಾರೆ. ಕುವೆಂಪುರವರಿಗೆ ದಕ್ಕಿದ ಜೇಮ್ಸ್ ಎಚ್ ಕಸಿನ್ಸ್ ನಂಥವರು ಮಾರ್ಕ್ವೆಜ್ ನಿಗೆ ದೊರೆಯಲಿಲ್ಲ. ಹಾಗೆಂಬ ವಿಷಾದದ ತೆಳುವಾದ ಎಳೆಯನ್ನೂ ಎದೆಯೊಳಗೆ ಇಳಿಸಿಕೊಳ್ಳದ ಈತ ಜಗತ್ತು ಹೊರಳಿ ನೋಡಬಲ್ಲ ಬರಹಗಾರನಾಗಿಯೇ ತೀರಬೇಕೆಂದು ಶಪಥ ಮಾಡಿದ್ದ.ಎದೆಗುಂದದ ಆತ ತನ್ನ ಕೃತಿಯನ್ನು ತಾನೇ ಪ್ರಕಟಿಸಿ ಇಂದಿನ ಲೇಖಕರಿಗೆ ಮಾದರಿಯಾಗುತ್ತಾನೆ. ಬರಹಗಾರನೊಬ್ಬನು ಅನುಭವಿಸುವ ಸಕಲ ತಲ್ಲಣಗಳು, ನೋವು- ಸಂಕಟ, ವಿಷಣ್ಣತೆಗಳ ಬೇಗೆಯಲ್ಲಿ ಬೆಂದು ದಂತಕಥೆಯಾದವನು ಮಾರ್ಕ್ವೆಜ್. ಬರೆಯುವುದನ್ನು ಆರಂಭಿಸುವವರೆಗೆ ಮಾತ್ರ ನಮ್ಮ ಮಾತುಗಳನ್ನು ನಮ್ಮೊಳಗಿನ ಬರಹಗಾರ ಚಾಚೂ ತಪ್ಪದೇ ಪಾಲಿಸುವ ವಿನಮ್ರತೆಯನ್ನು ತೋರುತ್ತಾನೆ; ಒಮ್ಮೆ ಬರಹಯಜ್ಞ ಆರಂಭವಾಯಿತೆಂದರೆ ಸಾಕು, ನಮ್ಮೊಳಗಿನ ಬರಹಗಾರನ ತಲ್ಲಣಗಳನ್ನು ನಾವು ಶಿರಸಾವಹಿಸಿ ಅನುನಯದಿಂದ ಸ್ವೀಕರಿಸಲೇಬೇಕಾಗುತ್ತದೆ. ಇತಂಹ ಬಿಡಿಸಿಕೊಳ್ಳಲಾಗದ ಬರಹದ ಮೋಹನ ಮುರಳಿಯೊಳಗೆ ಅದ್ವೈತನಾಗಿದ್ದ ಮಾರ್ಕ್ವೆಜ್ ತನ್ನ ಜೀವನದ ಕೊನೆಯ ಘಳಿಗೆಯವರೆಗೂ ಈ ಆಹ್ಲಾದವನ್ನು ಭಾಗ್ಯವೆಂಬಂತೆ ಆಸ್ವಾದಿಸಿದ್ದ. ಅಂತಿಮ ದಿನಗಳಲ್ಲಿ ಮೈಗಂಟಿದ ಕ್ಯಾನ್ಸರ್ ರೋಗದ ಕುತ್ತದಲಿ ಕುದಿದು ಗೆದ್ದುಬಂದರೂ ಮರೆವಿನ ಕಾಯಿಲೆ ಮಾರ್ಕ್ವೆಜ್ ನನ್ನು ಶಾಶ್ವತವಾಗಿ ಬರಹಕ್ಕೆ ಮರಳದಂತಹ ಸಂದಿಗ್ಧತೆಯನ್ನು ಹೊತ್ತು ತಂದಿತ್ತು. ತನ್ನ 86 ಸಂವತ್ಸರಗಳ ತುಂಬು ಜೀವನದಲ್ಲಿ ಮಾರ್ಕ್ವೆಜ್ ಕಂಡ ಏಳುಬೀಳುಗಳಿಗೆ ಲೆಕ್ಕವಿಲ್ಲ. ಜಾನಪದ, ಇತಿಹಾಸ, ಪುರಾಣಗಳನ್ನು ನವನವೋನ್ಮೇಷಶಾಲಿಯಾಗಿ ಹೊಸೆದು ವರ್ತಮಾನವನ್ನಾಗಿ ಕಟ್ಟಬಲ್ಲ ಮಾರ್ಕ್ವೆಜ್ ನ ಪ್ರತಿಭಾ ಕೌಶಲ್ಯ ಅವನಿಗೆ ನೋಬೆಲ್ ಪಾರಿತೋಷಕವನ್ನೇ ತಂದುಕೊಟ್ಟಿತು. ʼಎ ಹಂಡ್ರೆಡ್ ಇಯರ್ಸ್ ಆಫ್ ಸಾಲಿಟ್ಯುಡ್" ಎಂಬ ಈತನ ಜೀವಮಾನದ ಶ್ರೇಷ್ಠ ಕೃತಿಯಲ್ಲಿ ಅದುವರೆಗೂ ತಾನು ಕಂಡರಿದ ವ್ಯಕ್ತಿ, ಪರಿಸರ, ಘಟನೆ, ಸಂದರ್ಭ, ಸಂಸ್ಕೃತಿಗಳನ್ನೆಲ್ಲಾ ಒರೆದು ಕಲಾತ್ಮಕವಾಗಿ ನಿರೂಪಿಸಿರುವುದು ಅವನ ಅನೂಹ್ಯ ಸೃಜನಶೀಲತೆಗೆ ಸಾಕ್ಷಿಯಾಗಿದೆ. ಅವನು ನಂಬಿಕೆಯನ್ನಿಟ್ಟಿರುವುದೇ ವಾಸ್ತವಿಕತೆಯನ್ನು ಯಥಾವತ್ತಾಗಿ ಅನುಕರಣೆ ಮಾಡುವುದಕ್ಕಿಂತ ಕಲಾತ್ಮಕವಾಗಿ ಕಟ್ಟಿಕೊಡಬೇಕೆನ್ನುವುದರಲ್ಲಿ.
ಎಸ್ ಗಂಗಾಧರಯ್ಯ ರವರು ಹೇಳುವಂತೆ ಬದುಕಿನಲ್ಲಿ ತನಗೆ ಎದುರಾದ ಅಸಂಖ್ಯ ಬಿಕ್ಕಟ್ಟುಗಳ ಮಧ್ಯೆಯೂ ಸಹನೆ, ತಾಳ್ಮೆ, ಕರುಣೆ, ಸಾವಧಾನದ ಅವನ ಸಮಚಿತ್ತವು ಕಟ್ಟಿಕೊಂಡ ಅನುಭಾವದ ಹುತ್ತ ಸಂಘರ್ಷದ ಪ್ರವಾಹಗಳಿಂದ ಕರಗಿಹೋಗುವುದಾಗಿರಲಿಲ್ಲವೆನ್ನುವುದೇ ಮಾರ್ಕ್ವೆಜ್ ನ ಹೆಗ್ಗಳಿಕೆಯಾಗಿತ್ತು.ಇದಕ್ಕೆ ಕಾರಣಗಳಿವೆ; ಹುಟ್ಟಿದಂದಿನಿಂದ ಮಾರ್ಕ್ವೆಜ್ ನು ಅಜ್ಜಿ ಟ್ರ್ಯಾಂಕುಲೈನಾಳ ಮಡಿಲಲ್ಲಿ ಬೆಳೆಯುತ್ತಾ ಅವಳಿಂದ ಕೇಳಿಸಿಕೊಂಡ ಸತ್ತವರ ಕಥೆಗಳಲ್ಲದೇ, ಮಸಣ
ಸೇರಿದವರೊಂದಿಗೆ ಆ ಗಟ್ಟಿಗಿತ್ತಿ ಮಾತನಾಡಬಲ್ಲ ನಿಟ್ಟುಸಿರಿನ ಧಗೆಯೂ ಅವನ ಎಳೆಯ ಮನಸಿನ ಮೇಲೆ ಗಾಢವಾದ ಪರಿಣಾಮಗಳನ್ನುಂಟು ಮಾಡಿತ್ತು. ಸಾಲದ್ದಕ್ಕೆ ತನ್ನಳತೆಯಲ್ಲಿರುವ ಕ್ಷೇತ್ರದುದ್ದಕ್ಕೂ ಅದೆಷ್ಟೋ ಅಕ್ರಮ ಮಕ್ಕಳ ಹುಟ್ಟಿಗೆ ಕಾರಣನಾಗಿದ್ದ ಅಜ್ಜ ಕರ್ನಲ್ ಮಾರ್ಕ್ವೆಜ್ ನ ತೀವ್ರ ಲಂಪಟತನ, ವೈರುಧ್ಯವೆಂಬಂತೆ ಯುದ್ಧಪೀಡಿತ ಪ್ರದೇಶದಲ್ಲಿ ಚತುರತೆಯಿಂದ ಹೋರಾಡಿ ಗೆದ್ದ ಅಜ್ಜನ ಪರಾಕ್ರಮದ ಇತಿಹಾಸ ಮತ್ತು ತನ್ನ ಎಂಟು ವರ್ಷಗಳವರೆಗಿನ ಬಾಲ್ಯದಲ್ಲಿ ಇಂತಹ ವೀರಾವೇಶ ಅಜ್ಜನೊಂದಿಗೆ ಕೈಹಿಡಿದು ನಡೆದ ಗೆಳೆತನಗಳು ಮಾರ್ಕ್ವೆಜ್ ನ ವ್ಯಕ್ತಿತ್ವದ ಬೆಳವಣಿಗೆಯ ಮೇಲೆ ತೀವ್ರವಾದ ಪ್ರಭಾವ ಬೀರಿದವು.
ಪ್ರಸ್ತುತ ಫ್ರೇಗ್ರನ್ಸ್ ಆಫ್ ಗ್ವಾವ ಕೃತಿಯಲ್ಲಿನ ಗ್ಯಾಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ ನ ಜೀವನದ ಒಳನೋಟಗಳತ್ತ ಇಣುಕಿದಾಗ ಹೊಸ ತಲೆಮಾರಿನ ಬರಹಗಾರರ ಮೌಲ್ಯಾಧಾರಿತ ಬದುಕಿಗೆ ಬೇಕಾದ ತತ್ವಗಳು ಸುಳಿದು ಹೋಗುತ್ತವೆ. ಕುಟುಂಬದ ನಿರ್ವಹಣೆ, ಕುಟುಂಬದಲ್ಲಿ ತುಂಬು ಪ್ರೀತಿಯ ಹಂಚುವಿಕೆ, ಗೆಳೆಯರೊಂದಿಗಿನ ಸೌಹಾರ್ದ ಒಡನಾಟ, ತಂದೆ ತಾಯಿಗಳೊಂದಿಗೆ ಕಳೆದ ಸಂವೇದನಾಶೀಲ ಕ್ಷಣಗಳು, ಅಜ್ಜ ಅಜ್ಜಿಯರೊಂದಿಗೆ ಕಟ್ಟಿಕೊಳ್ಳಬೇಕಾದ ಮಮತೆಯ ಸೇತುವೆ - ಹೀಗೆ ಅವನ ಬದುಕಿನ ಪ್ರತಿಯೊಂದು ಘಳಿಗೆಗಳೂ ನಮ್ಮ ಇಂದಿನ ಆಧುನಿಕ ಜೀವನಕ್ಕೆ ಪಾಠ ಮಾಡುವಂತಿವೆ. ಹೆಚ್ಚಾಗುತ್ತಿರುವ ವೃದ್ಧಾಶ್ರಮಗಳು, ಅನಾಥಾಲಯಗಳು, ಅಪರಾಧ ಪ್ರಕರಣಗಳು, ಜೀವ ಹಿಂಡುವ ಒತ್ತಡದ ಸಂಘರ್ಷಗಳು ಕ್ಷಣ ಕ್ಷಣಕ್ಕೂ ನಮ್ಮನ್ನು ಅಗ್ನಿಪರೀಕ್ಷೆಗೆ ದೂಡುತ್ತಿರುವ ದುರ್ಗಮ ದಾರಿಯ ಬದುಕಿಗೆ ಮಾರ್ಕ್ವೆಜ್ ನ ಜೀವನ ಹಾಗೂ ಅವನ ಕೃತಿಯಲ್ಲಿನ ಸಂದೇಶಗಳು ತಡೆದು ನಿಲ್ಲಿಸಿ ಸಾಂತ್ವನ ಹೇಳುವಂತಿರುವುದು ಅಚ್ವರಿಯನ್ನುಂಟು ಮಾಡುತ್ತದೆ.
ಸಾಮಾಜಿಕ ಮಾಧ್ಯಮಗಳಿಂದಾಗಿ ಇಂದು ಬರಹಗಾರರಿಗೆ ಸುಲಭವಾಗಿ ದಕ್ಕುತ್ತಿರುವ ಕೀರ್ತಿಯನ್ನು ಕುರಿತು ಮಾರ್ಕ್ವೆಜ್ ಹೇಳುವ ಮಾತುಗಳನ್ನೊಮ್ಮೆ ತುಂಬು ಹೃದಯದಿಂದ ಕೇಳಿಸಿಕೊಳ್ಳಿ - "ನಾನು ಯಾವೊಬ್ಬ ಲೇಖಕನಿಗೂ ಯಶಸ್ಸನ್ನು ಬಯಸುವುದಿಲ್ಲ. ಅದು ಪರ್ವತದ ತುತ್ತ ತುದಿಯನ್ನು ಹತ್ತುವ ಸಲುವಾಗಿ ಪರ್ವತಾರೋಹಿಯೊಬ್ಬ ಹೆಚ್ಚೂ ಕಡಿಮೆ ತನ್ನನ್ನು ತಾನು ಕೊಂದುಕೊಳ್ಳುವಂಥದ್ದು. ಅದೇ ರೀತಿ ಸಾಹಿತ್ಯಿಕ ಯಶಸ್ಸಿನ ಪ್ರವೃತ್ತಿ ಇರದವನ ಪುಸ್ತಕಗಳು ಬಿಸಿ ಬಿಸಿ ಕೇಕುಗಳಂತೆ ಖರ್ಚಾಗುವುದೇ ಅವನಿಗೆ ಸಂಭವಿಸಬಹುದಾದಂತಹ ಕೆಟ್ಟ ಸಂಗತಿಯಾಗಿದೆ" ಎಂಬ ಮಾತುಗಳು ಲೈಕ್- ಡಿಸ್ಲೈಕ್ ಗಳ ಕೀರ್ತಿಶನಿಯನ್ನು ಬೆರಳ ತುದಿಯಲ್ಲಿಟ್ಟುಕೊಂಡು ಬೆನ್ನುಹತ್ತಿ ಹೊರಟಿರುವ ನವಪೀಳಿಗೆಯ ಲೇಖಕರ ಅವಸರದ ಜೀವನ ಪಥವನ್ನೇ ಬದಲಿಸುವಂತಿವೆ. ಯಶಸ್ಸಿನ ತುತ್ತ ತುದಿಗೇರಿದ ನಂತರ ಅಲ್ಲಿ ಮಾಡುವುದೇನಿದೆ ? ಈ ಸತ್ಯ ಭರತೇಶ ವೈಭವದಲ್ಲಿ ತನ್ನ ದಿಗ್ವಿಜಯದ ಶಾಸನ ನೆಡಲು ಹೋದ ಭರತನ ಕೊಳಗೊಂಡ ಗರ್ವರಸಂ ಸೋರ್ದುದು ಎಂಬ ಸನ್ನಿವೇಶವನ್ನು ನೆನಪಿಗೆ ತರುವಂತಿರುವುದು ಕಾಕತಾಳೀಯವಾಗಿರಲಾರದು. ತನ್ನೊಳಗಿನ ಸಾವಿರಾರು ಸಂಘರ್ಷಗಳನ್ನೆಲ್ಲಾ ತಾನೊಬ್ಬನೇ ಎದುರಿಸಿ ನೂರಾರು ಕೃತಿಗಳ ದಿಗ್ವಿಜಯವನ್ನು ಸಾಧಿಸಬಲ್ಲ ಬರಹಗಾರನೂ ಮತ್ತೊಬ್ಬ ಭರತೇಶನಾಗಿಯೇ ಗೋಚರವಾಗುತ್ತಾನೆ. ಬರಹಗಾರನಿಗಿರಬೇಕಾದ ಅನುಭಾವದ ನೆಲೆಯನ್ನು ಶೋಧಿಸುವ ಲೇಖಕ ಮಾರ್ಕ್ವೆಜ್ ಕುವೆಂಪುರವರಂತೆ ಕೀರ್ತಿಯನ್ನು ಧಿಕ್ಕರಿಸಿರುವುದು ಶರವೇಗದ ಲೇಖಕ ಸರದಾರರಿಗೆ ಸರಿದಾರಿಯಂತಿದೆ. ಯಶಸ್ಸೆಂಬ ಬೇತಾಳನ ಬೆನ್ನುಬಿದ್ದು ಬೆಂಗಾವಲಾಗುವುದಕ್ಕಿಂತ, ಪ್ರಾಯೋಗಿಕವಾಗಿ ಬರೆದು ಬಯಲಾಗುವುದೇ ಹೆಚ್ಚು ಲೇಸುʼ ಎಂಬ ತಾತ್ವಿಕತೆ ಮಾರ್ಕ್ವೆಜ್ ನದು.
ಮಾರ್ಕ್ವೆಜ್ ನ ಗೆಳೆಯ ಅಪುಲೆಯೋ ನು ನಡೆಸಿದ ಸಂದರ್ಶನದಲ್ಲಿ “ಒಂದು ಕೃತಿ ಅಂಕುರಿಸುವ ಕ್ಷಣ ಯಾವುದು?'ಎಂದು ಕೇಳಿದ ಪ್ರಶ್ನೆಗೆ ಮಾರ್ಕ್ಚೆಜ್ ಒಂದು ದೃಷ್ಟಿಗೋಚರ ಪ್ರತಿಮೆಯಿಂದ ಕೃತಿಯು ಅಂಕುರವಾಗಬೇಕೆಂದು ಪ್ರತಿಪಾದಿಸಿ ತನ್ನ ಅತ್ಯುತ್ತಮ ಕಥೆಯಾದ ಟ್ಯೂಸ್ ಡೇ ಸಿಯೆಸ್ತಾ ಅಂಕುರಿಸಿದ್ದು ನಿರ್ಜನ ನಗರದ ಸುಡುಬಿಸಿಲಿನಲ್ಲಿ ಕಪ್ಪುಬಟ್ಟೆಗಳನ್ನು ಧರಿಸಿ ಕಪ್ಪು ಛತ್ರಿಯನ್ನು ಹಿಡಿದು ಹೋಗುತ್ತಿದ್ದ ಹೆಂಗಸನ್ನು ಮತ್ತು ಅವಳ ಜೊತೆಗಿದ್ದ ಪುಟ್ಟ ಹುಡುಗಿಯನ್ನು ನೋಡಿದಾಗ ಎಂದು ಸಾಕ್ಷೀಕರಿಸುತ್ತಾನೆ. ನಮ್ಮ ನಾಡಿನ ಅಡಿಗರಂತೆ ಪ್ರತಿಮೆಗಳ ಮೇಲೆ ಅಪಾರವಾದ ವ್ಯಾಮೋಹವನ್ನಿಟ್ಟುಕೊಂಡಿದ್ದ ಮಾರ್ಕ್ವೆಜ್‌ನಿಗೆ ತನ್ನ ಬದುಕೂ ಒಂದು ಅಪ್ರತಿಮ ಪ್ರತಿಮೆಯಂತೆ ಕಂಡಿದ್ದರಲ್ಲಿ ಆಶ್ಚರ್ಯವೇನಿಲ್ಲ. ನಿತ್ಯೋತ್ಸವವಾಗಿರುವ ಜೀವನದಲ್ಲಿ ಪ್ರತಿಮೆಗಳಿಗೇನು ಕೊರತೆ ಅಲ್ಲವೇ? ಸೆರೆಹಿಡಿಯಬೇಕಾದರೆ ಮಾರ್ಕ್ವೆಜ್ ಹೊರಟಂತೆ ಹೆಜ್ಜೆಗಳ ಜಾಡುಹಿಡಿದು ಗುಪ್ತಚರರಾಗಿ ಹಿಂಬಾಲಿಸಿ ಹೊರಡಬೇಕಷ್ಟೇ.ಅಳತೆಗೆ ದಕ್ಕಿದಾಗಲೇ ಕೈವಶ ಮಾಡಿಕೊಂಡು ಪರವಶನಾಗಿಬಿಡುವುದೇ ಲೇಖಕನ ಕೈಚಳಕ.ಆಗ ಹುಟ್ಟುವ ಕೃತಿಯೇ ಕರಸ್ಥಲದಲ್ಲಿನ ಚುಳುಕು.
ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ;
ಪಾತಾಳದಿಂದತ್ತತ್ತ ನಿಮ್ಮ ಶ್ರೀಚರಣ
ಬ್ರಹ್ಮಾಂಡದಿಂದತ್ತತ್ತ ನಿಮ್ಮ ಶ್ರೀ ಮುಕುಟ
ಅಗೋಚರ ಅಪ್ರತಿಮ ಲಿಂಗವೇ
ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯ
ಎಂದು ಬಸವಣ್ಣನವರು ಹಾಡಿದ ಈ ವಚನವು ಒಲಿದಂತೆ ಹಾಡುವ ಲೇಖಕರಿಗೆ ಎದುರಾಗುವ ಪ್ರತಿಮೆಗಳನ್ನು ಕುರಿತಾಗಿಯೇ ಹಾಡಿದಂತೆ ಭಾಸವಾಗುವುದು ಕೇವಲ ಭ್ರಮೆಯಾಗಿರಲಿಕ್ಕಿಲ್ಲ! ಮಾರ್ಕ್ವೆಜ್ ನ ದೃಷ್ಟಿಯಲ್ಲಿ ತನ್ನೊಡಲು ತೋರಿ ಕೃತಿಯೊಳಗೆ ಕಡಲಾಗುವ ಪ್ರತಿಮೆಗಳೇ ಲೇಖಕನೊಳಗೆ ಪ್ರಜ್ವಲಿಸುವ ಪ್ರತಿಭೆಯ ಕುಲುಮೆಗಳು. ಒಲುಮೆಯಿಂದ ಎರಕ ಹೊಯ್ಯಬೇಕಷ್ಟೇ. ಮಾಹಿತಿ ತಂತ್ರಜ್ಞಾನಯುಗದ ಲೇಖಕರು ತಮ್ಮ ಕೃತಿಯೊಂದರ ಹುಟ್ಟನ್ನು ಹೇಗೆ ಮತ್ತು ಎಲ್ಲಿ ಕಂಡುಕೊಳ್ಳಬೇಕು ಎನ್ನುವ ಸಮಸ್ಯೆಗೆ ಅರ್ಥಪೂರ್ಣ ಪರಿಹಾರೋಪಾಯವೂ ಆಗಿದೆ. ಪ್ರತಿಮೆಗಳು ಸಾಹಿತ್ಯದ ಅವಿಭಾಜ್ಯ ಅಂಗಗಳಾದಾಗ ಕೃತಿಲಿಂಗವು ಮೌಲಿಕವಾಗಲು ಸಾಧ್ಯವಾಗುತ್ತದೆ. ಇದರಿಂದ ಕೃತಿಯೊಳಗೆ ಲಿಂಗಾಂಗ ಸಮರಸದ ಕಳೆಯು ತಾನಾಗಿಯೇ ಬೆಳಗುತ್ತದೆ ಎಂಬುದಕ್ಕೆ ಮಾರ್ಕ್ವೆಜ್ ನ ಶೋಧನೆಗಳು ನಿದರ್ಶನವಾಗಿವೆ.
ಕೃತಿಯ ಮೊದಲ ವಾಕ್ಯವೆಷ್ಟು ಮುಖ್ಯವೆಂಬ ಪ್ರಶ್ನೆಗೆ ಮಾರ್ಕ್ವೆಜ್ "ಮೊದಲ ವಾಕ್ಯವೇ ಆ ಇಡೀ ಪುಸ್ತಕದ ಶೈಲಿ, ರಚನೆ ಹಾಗೂ ಅದರ ಗಾತ್ರವನ್ನು ಕೂಡ ಒರೆ ಹಚ್ಚುವ ಆಕರವಾಗಿಬಿಡಬಲ್ಲದು " ಎಂದು ನಿವೇದಿಸುತ್ತಾನೆ. ಕೃತಿಯ ವಸ್ತು, ಒಡಲು, ಅಂತ್ಯಗಳು ಎಷ್ಟು ಮುಖ್ಯವೋ, ಅದಕ್ಕಿಂತ ಮುಖ್ಯವಾದುದು ಅದರ ಆರಂಭ. "Well begun is half done" ಎಂಬ ನಾಣ್ಣುಡಿಯಂತೆ ಅತ್ಯುತ್ತಮ ಆರಂಭವು ಕೃತಿಯ ಗಂತವ್ಯಕ್ಕೊಂದು ಸಾರ್ಥಕ ದಿಕ್ಸೂಚಿಯಾಗಬಲ್ಲದು. ಅಗುಳಿನಿಂದ ಅನ್ನದ ಪರೀಕ್ಷೆಯಾಗುವಂತೆ ಆರಂಭದ ಸಾಲುಗಳಿಂದ ಕೃತಿರತ್ನದ ವಿಶ್ಲೇಷಣೆಯೂ ಸಂಭವಿಸುವುದರಿಂದ ಆರಂಭಕ್ಕೂ ಮಹತ್ವವನ್ನು ದಯಪಾಲಿಸಿದವನು ಮಾರ್ಕ್ವೆಜ್. ಕೃತಿಯ ಪ್ರತಿಯೊಂದು ಸಾಲೂ ಅದೆಷ್ಟು ಪ್ರಮಾಣಬದ್ಧವಾಗಿರಬೇಕು ಎಂಬುದನ್ನು ಅವನ ಮಾತುಗಳಿಂದ ಅರಿಯಬಹುದಾಗಿದೆ. ಶಬ್ದಗಳ ಸಂತೆಯಿಂದಾಗಿ ಗದ್ದಲದ ಪುಟಗಳನ್ನು ತುಂಬಿಸಿಬಿಡಬೇಕೆನ್ನವು ವ್ಯರ್ಥಪ್ರಲಾಪಕ್ಕಿಂತ, ಶಬ್ದದೊಳಗೆ ನಿಶ್ಯಬ್ದವನ್ನು ತುಂಬುವ ಅರ್ಥಾಲಾಪವೇ ಬಹಳ ಶ್ರೇಷ್ಠ ಎಂಬ ಅವನ ಚಿಂತನೆ ಸಾರ್ವಕಾಲಿಕವಾದುದು. ಇದರಿಂದ ಆತ ಹೇಳುವ ಕೃತಿಯ ಆರಂಭವೂ ಹೊರತಾಗಿಲ್ಲ.
ಕೃತಿಯೊಂದು ಹುತ್ತಗಟ್ಟಲು ಸಮಯವೆಷ್ಟಿರಬೇಕು ಎಂದಾಗ ಮಾರ್ಕ್ವೆಜ್ 'ಕೇವಲ ಎರಡು ವರ್ಷದೊಳಗೆ ನಾನುʼಒನ್ ಹಂಡ್ರೆಡ್ ಇಯರ್ ಆಫ್ ಸಾಲಿಟ್ಯೂಡ್ʼ ಕೃತಿಯನ್ನು ಬರೆದು ಮುಗಿಸಿದೆ. ಆದರೆ ಅದನ್ನು ಬರೆಯಲು ಆರಂಭಿಸುವುದಕ್ಕಿಂತ ಮುಂಚೆ ಸುಮಾರು ಹದಿನೈದರಿಂದ ಹದಿನಾರು ವರ್ಷಗಳನ್ನು ಅದರ ಬಗ್ಗೆ ಯೋಚಿಸುವುದಕ್ಕಾಗಿಯೇ ಕಳೆದಿರುವೆ" ಎಂದು ಹೇಳಿರುವುದು ವಿಸ್ಮಯವನ್ನೇ ಉಂಟು ಮಾಡುತ್ತದೆ. ಸೂಪರ್ ಸಾನಿಕ್ 5ಜಿ ವೇಗದ ಇಂದಿನ ಬರಹಗಾರರಿಗೊಂದು ಅತ್ಯುತ್ತಮ ನಿಲ್ದಾಣವೆಂದರೆ ಮಾರ್ಕ್ವೆಜ್ ನ ಈ ಮಾತುಗಳು. ಡಿಜಿಟಲ್ ಪರದೆಯ ಮೇಲೆ ರಚನೆಯಾಗುತ್ತಲೇ ಹೊಗೆಯಾಡಲು ಶುರುಮಾಡುವ ನಮ್ಮ ಪ್ರಚಾರಪ್ರಿಯತೆಯ ದಾಹವನ್ನು ತಣಿಸಿ, ಮಣಿಸಬಲ್ಲ ಸಾವಧಾನದ ಅರವಟ್ಟಿಗೆ ಪ್ರಸ್ತುತ ಕೃತಿಯೆಂದರೆ ತಪ್ಪಾಗಲಾರದು.
ತಾಳುವಿಕೆಗಿಂತನ್ಯ ತಪವು ಇಲ್ಲ
ಕೇಳಬಲ್ಲವರಿಂಗೆ ಪೇಳುವೆನು ಸೊಲ್ಲ
ನೆಟ್ಟಸಸಿ ಫಲಬರುವ ತನಕ ಶಾಂತಿಯ ತಾಳು
ಕಟ್ಟು ಬುತ್ತಿಯ ಮುಂದೆ ಉಣಲುಂಟು ತಾಳು
ಎಂದು ಹಾಡಿದ ವಾದಿರಾಜರ ಸಮಚಿತ್ತವು ಮಾರ್ಕ್ವೆಜ್ ನ ತಾಳ್ಮೆಯನ್ನೇ ಕೀರ್ತನೆಯ ಸ್ವರೂಪದಲ್ಲಿ ಬಣ್ಣಿಸಿದಂತಿದೆ. ಪೂರ್ವಸೂರಿಗಳಾದ ಪಂಪ, ರನ್ನಾದಿಗಳು ಅರ್ಧವಾರ್ಷಿಕಕ್ಕೊಂದೆಂಬಂತೆ ಕೃತಿಗಳನ್ನು ರಚಿಸಿದ ನಿದರ್ಶನಗಳು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ದಾಖಲಾಗಿರುವುದು ಕೃತಿ ರಚನೆಯಲ್ಲಿ ತಾಳುವಿಕೆಯೆಷ್ಟು ಮುಖ್ಯ ಎಂಬುದನ್ನರಿಯುವಂತೆ ಮಾಡುತ್ತವೆ. ಬರೆಯಬೇಕೆಂದ ಕೂಡಲೇ ಕೃತಿರತ್ನವೊಂದು ನಮ್ಮ ಕೈವಶವಾಗಿಬಿಡಬೇಕೆಂಬ ಹುಚ್ಚು ಹಂಬಲವಿಂದು ಜನಜನಿತವಾಗುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ. ಇದರಿಂದಾಗಿ ಗರ್ಭಪಾತಕ್ಕೊಳಗಾಗುವ ಪ್ರವೃತ್ತಿಯು ಡಿಜಿಟಲ್ ಯುಗದ ಲೇಖಕರ ಮತ್ತೊಂದು ಪ್ರಮುಖ ಲಕ್ಷಣವಾಗುತ್ತಿರುವದು ದುರದೃಷ್ಟಕರ. ಮಾರ್ಕ್ವೆಜ್ ತನ್ನ "ಕ್ರಾನಿಕಲ್ ಆಫ್ ಎ ಡೆತ್ ಫೋರ್ ಟೋಲ್ಡ್" ಕಾದಂಬರಿ ರಚನೆಗೆ ತೆಗೆದುಕೊಂಡ ಸಮಯ ಮೂವತ್ತು ವರ್ಷಗಳು. ವಸ್ತು ದೊರೆತ ತಕ್ಷಣವೇ ಅದನ್ನು ಬರೆಯುವುದಕ್ಕಿಂತ, ಎದೆಯೊಳಗೆ ಬೆಚ್ಚನೆಯ ಭಾವಗಳ ಮಧ್ಯೆ ಕಾವು ಕೊಟ್ಟು ಕಾಪಾಡಿದಾಗಲೇ ಕಸುವಿನ ಕೃತಿ ಹಸುಳೆಯೊಂದು ಜನ್ಮತಾಳಬಲ್ಲ ಸದವಕಾಶವೊದಗುತ್ತದೆ. ಹಾಗೆಂದು ತುಂಬಾ ದಿನಗಳವರೆಗೂ ಅದನ್ನು ಬೈಚಿಟ್ಟರೂ ಪ್ರಯೋಜನವಿಲ್ಲ ಎಂದು ಅರ್ನೆಸ್ಟ್ ಹೆಮಿಂಗ್ವೆ ಹೇಳಿರುವ ಮಾತನ್ನು ಅಪುಲೆಯೊ ಕೂಡ ಇಲ್ಲಿ ಸ್ಮರಿಸಿಕೊಂಡಿರುವುದು ಔಚಿತ್ಯಪೂರ್ಣವಾಗಿದೆ.
'ಹಲಗೆ ಬಳಪವ ಪಿಡಿಯದೊಂದಗ್ಗಳಿಕೆ ಪದವಿಟ್ಟಳುಪದೊಂದಗ್ಗಳಿಕೆ ಎಂಬುದು ಕುಮಾರವ್ಯಾಸನಂತಹ ಶ್ರೇಷ್ಠ ಸಾಮರ್ಥ್ಯದ ಕವಿಗಳಿಗೆ ಮಾತ್ರ ಸಾಧಿಸಬಹುದಾದ ಸಾಧನೆ. ಬರೆದದ್ದನ್ನು ಅದೆಷ್ಟು ಬಾರಿ ತಿದ್ದಬಹುದು ಎಂಬುದಕ್ಕೆ ಮಾರ್ಕ್ವೆಜ್ ತನ್ನದೇ ಉದಾಹರಣೆ ಸಹಿತ "ಒಂದು ಬಾರಿ ಹನ್ನೆರಡು ಪುಟಗಳ ಕಥೆಯೊಂದನ್ನು ಬರೆಯಲು ನಾನು ಸುಮಾರು ಐನೂರರಷ್ಟು ಹಾಳೆಗಳ ಪ್ರಮಾಣದಲ್ಲಿ ತಿದ್ದಿರುವೆ" ಎಂದು ಹೇಳುತ್ತಲೇ ಶರವೇಗದ ಬರಹಗಾರರನ್ನು ಎಚ್ಚರಿಸುತ್ತಾನೆ. ಭಾಷೆ, ರೀತಿ, ಶೈಲಿಯ ಅಭೂತಪೂರ್ವವಾದ ಸಂಯೋಜನೆಯೊಂದು ಆಯೋಜನೆಯಾಗುವವರೆಗೂ ಬರೆಯುತ್ತಲೇ ಇರಬೇಕಾಗುತ್ತದೆ. ಹಾಳೆ ಹನ್ನೆರಡಾದರೂ ಅಷ್ಟೇ… ಲಯ ತಾಳ ತಪ್ಪಾದರೂ ಕಷ್ಟವೇ. ಕೇವಲ ನಾಲ್ಕು ಸಾಲುಗಳ ಕಾವ್ಯದಲ್ಲಿ ಹೊಂದಾಣಿಕೆಯೂ ಕರಕಷ್ಟವೇ. ಬರುವವರೆಗೂ ʼಅತ್ತಿತ್ತ ನೋಡದಿರು ಅತ್ತು ಹೊರಳಾಡದಿರು ಕವಿತೆ ಬರುವಳು ಎದ್ದು ಮಲಗದಿರು ಮಗುವೇʼ ಎಂದು ನಾವೇ ವಿಭಿನ್ನವಾದ ಜೋಗುಳವೊಂದನ್ನು ಕಟ್ಟಿ ಹಾಡುವುದಷ್ಟೇ ನಮ್ಮ ಕಾರ್ಯ. ಇದು ಅವರವರ ಪ್ರತಿಭಾ ಕೌಶಲ್ಯದ ಮೇಲೆ ಅವಲಂಬಿತವಾಗಿದ್ದರೂ ತಪ್ಪುಗಳಿಲ್ಲದ, ಯೋಜನಾಬದ್ಧ, ಶಿಸ್ತುಬದ್ಧ, ಪ್ರಮಾಣಬದ್ಧ ಅಚ್ಚುಕಟ್ಟಾದ ಕಾಲೈಕ್ಯ, ಕ್ರಿಯೈಕ್ಯ, ಸ್ಥಳೈಕ್ಯಗಳ ಬರಹವೊಂದು ಜನ್ಮತಾಳಲು ಸಾವಧಾನದ ಪರಿಷ್ಕರಣೆಯೂ ಬಹಳ ಮುಖ್ಯವಾಗಿರುವುದನ್ನು ಮಾರ್ಕ್ವೆಜ್ ನ ಮಾತುಗಳು ಧೃಢೀಕರಿಸುತ್ತವೆ. ಒಟ್ಟಿನಲ್ಲಿ ಮಾರ್ಕ್ವೆಜ್ ಸಮಕಾಲೀನ ಬರಹಗಾರರ ಕೈಹಿಡಿದು ನಡೆಸಬಲ್ಲ ಮಾರ್ಗದರ್ಶಕನಾಗಿ ನಮಗೆ ಗೋಚರವಾಗುತ್ತಾನೆ. ಸಾಮಾನ್ಯ ಲೇಖಕನಾಗಿ ಅಸಾಮಾನ್ಯ ಕೃತಿಗಳನ್ನು ರಚಿಸಿದ ಕೀರ್ತಿ ಮಾರ್ಕ್ವೆಜ್ ನದಾಗಿದೆ. ನಾವು ಎಲ್ಲರೊಳಗೊಂದಾಗಿ ಬದುಕಬೇಕೆನ್ನವುದು ಅವನ ಕೃತಿಗಳ ಒಟ್ಟು ಆಶಯ. ಸಮಾಜವಾದ ನೆರಳಿನಲ್ಲಿ ಜಗತ್ತು ಒಂದಾಗಿ ನಲಿಯಬೇಕೆನ್ನುವುದು ಅವನ ಜೀವಮಾನದ ಸಂದೇಶ.
"ದಲಿತರು ಒಳಪಂಗಡಗಳ ಭಾವನಾತ್ಮಕ ಸೆಳವಿಗೆ ಸಿಕ್ಕು ಮೂಲ ಸಿದ್ದಾಂತದಿಂದ ದೂರವಾಗುತ್ತಿದ್ದಾರೆ. ಇಂದು ಅಂಬೇಡ್ಕರ್ ವಿ...
ಬೆಂಗಳೂರು : ಬೆಂಗಳೂರು ಸಾಹಿತ್ಯ ಉತ್ಸವ (BlrLitFest)ವು ಪ್ರತಿ ವರ್ಷ ನಡೆಯುವ ಅತ್ಯಂತ ನಿರೀಕ್ಷಿತ ಸಾಂಸ್ಕೃತಿಕ ಕಾರ್ಯ...
ಮಗಳ ನೋವನ್ನು ಕಂಡು ಹೆತ್ತವರು ಜರ್ಜರಿತರಾಗುವ ದೃಶ್ಯವನ್ನು ಹಾಗೂ ಅಪ್ಪ ಅಮ್ಮನ ಧಾವಂತದ ಬದುಕಿನಲ್ಲಿ ಮಕ್ಕಳು ಬಡವಾಗುವ ಸ...
©2025 Book Brahma Private Limited.