ಕುಮಟೆಯ ಇಬ್ಬರ ಗೆಳೆಯರ ಕಥೆ ಇಲ್ಲಿದೆ..


"ಒಂದೊಂದು ಕಡೆ ಹೋದಾಗ ಅವರದೇ ಕಥೆ. ಈ ತರುಣರ ಒಡನಾಟ ಊರಿನ ಜನರಿಗೆ ಎಷ್ಟು ಆತ್ಮೀಯವಾಗಿತ್ತೆಂದರೆ ಓದಲು ಕಾಲೇಜಿಗೆ ಸೇರಿದಾಗ ಅವರಿಲ್ಲದ ಊರು ಬೀಕೋ ಎನಿಸುವಷ್ಟು ವಾತಾವರಣ ಸೃಷ್ಟಿಯಾಗುತ್ತದೆ," ಎನ್ನುತ್ತಾರೆ ಕಾರ್ತಿಕೇಯ. ಅವರು ಯಶವಂತ ಚಿತ್ತಾಲ ಅವರ ʻಕುಮಟೆಗೆ ಬಂದ ಕಿಂದರಜೋಗಿʼ ಕೃತಿ ಕುರಿತು ಬರೆದ ಅನಿಸಿಕೆ.

ಕುಮಟೆಯ ಇಬ್ಬರ ಗೆಳೆಯರ ಕಥೆ ಇಲ್ಲಿ ಬರುತ್ತದೆ. ಒಬ್ಬನು ಗೋವಿಂದ, ಮತ್ತೊಬ್ಬನು ವಿಷ್ಣು, ಇಬ್ಬರೂ ಒಂದೇ ವಯಸ್ಸಿನವರು. ಗೋವಿಂದ ಮಠದ ವೆಂಕಟರಮಣ ದೇವರ ಮುಖ್ಯ ಪೂಜಾರಿಯ ಮಗ, ವಿಷ್ಣು ಕುಮಟೆಯಲ್ಲಿ ಪೈ ಸಾವಕಾರರೆಂದೇ ಕರೆಯಲ್ಪಡುತ್ತಿದ್ದ ಶೇಷ ಪೈಗಳ ಮಗ. ಚಿಕ್ಕವರಿಂದ ಕೈ ಹಿಡಿದು ಓಡಾಡುತ್ತಿದ್ದ ಈ ಗೆಳೆಯರನ್ನು ನೋಡಿದ ಜನರು ಇವರನ್ನು ಲವ-ಕುಶರಿಗೆ ಹೋಲಿಸಿದರು, ಬೆಳೆದ ನಂತರ ಭರತ-ಶತ್ರುಘ್ನರಿಗೆ ಹೋಲಿಸಿದರು, ಯಾವ ಪೂರ್ವಜನ್ಮದ ಋಣಾನುಬಂಧವೋ ಎಂದು ತಮ್ಮಲ್ಲೇ ಮಾತನಾಡಿಕೊಂಡರು. ತಾನು ಊರಿಗೆ ಬಂದಾಗ ಈ ಗೆಳೆಯರದೇ ಸುದ್ದಿ. ಒಂದೊಂದು ಕಡೆ ಹೋದಾಗ ಅವರದೇ ಕಥೆ. ಈ ತರುಣರ ಒಡನಾಟ ಊರಿನ ಜನರಿಗೆ ಎಷ್ಟು ಆತ್ಮೀಯವಾಗಿತ್ತೆಂದರೆ ಓದಲು ಕಾಲೇಜಿಗೆ ಸೇರಿದಾಗ ಅವರಿಲ್ಲದ ಊರು ಬೀಕೋ ಎನಿಸುವಷ್ಟು ವಾತಾವರಣ ಸೃಷ್ಟಿಯಾಗುತ್ತದೆ. ಹೀಗಿರುವಾಗ ತಮ್ಮ ಪರೀಕ್ಷೆ ಮುಗಿಸಿ ಊರಿಗೆ ಬಂದ ಕೆಲವೇ ದಿನಗಳಲ್ಲಿ ಇಬ್ಬರೂ ಊರು ಬಿಟ್ಟು ನಾಪತ್ತೆಯಾಗಿರುತ್ತಾರೆ, ಇಬ್ಬರ ಮನೆಯಲ್ಲೂ ಒಂದು ಒಳ್ಳೆ ಉದ್ದೇಶಕ್ಕಾಗಿ ಹೊರಟಿದ್ದೇವೆ ತಮ್ಮನ್ನು ಹುಡುಕಬೇಡಿ ಎಂದು ಪತ್ರ ಬರೆದಿಟ್ಟು ಹೋಗಿರುತ್ತಾರೆ. ಇದು ಕಥಾ ಪ್ರಸಂಗವು.

ಊರಿನಲ್ಲಿರುವಾಗ ಇವರ ಒಡನಾಟ, ಅತೀ ಸ್ನೇಹ ಕಂಡು ಅವರ ತಾಯಿ ತಂದೆಯರಿಗೆ ಇದೇಕೋ ಅತಿರೇಖಕ್ಕೆ ಹೋಗುತ್ತಿದೆ, ಅವರ ಒಳ್ಳೆಯ ಭವಿಷ್ಯಕ್ಕೆ ಹೇಗಾದರೂ ಅವರಿಗಿರುವ ಹುಚ್ಚು ಬಿಡಿಸಬೇಕೆನ್ನುವ ನಿರ್ಧಾರಕ್ಕೆ ಬರುತ್ತಾರೆ. ಆದರೆ ಅವರ ಈ ಸಣ್ಣತನಕ್ಕೆ ನಾಚಿಕೆಪಟ್ಟು ಆ ಯೋಚನೆಯನ್ನು ಬಿಟ್ಟುಬಿಡುವ ಸಮಯದಲ್ಲಿ ಕುಮಟೆಯಲ್ಲಿ ಒಬ್ಬ ವ್ಯಕ್ತಿಯ ಆಗಮನವಾಗುತ್ತದೆ. ಈ ಅಪರಿಚಿತ ವ್ಯಕ್ತಿಯನ್ನು ಊರಲ್ಲಿ ಎಂದೂ ಯಾರು ಕಂಡಿರಲಿಲ್ಲ, ಶೇಷ ಪೈಗಳ ಮನೆಗೆ ಆಗಮಿಸಿ ಆ ಗೆಳೆಯರ ಭವಿಷ್ಯವನ್ನು ಹೇಳಲು ಮುಂದಾಗುತ್ತಾನೆ, *ನೀವಿಬ್ಬರೂ ಬೆಳಕಿನ ಆರಾಧಕರು, ಬೆಳಕಿನ ರಹಸ್ಯವನ್ನು ಕುರಿತು ನಿಮಗೆ ಕುತೂಹಲವಿದೆ, ಅದಕ್ಕೆ ಎಳೆ ವಯಸ್ಸು ಸಾಲದು, ಆ ಕುತೂಹಲವೇ ನಿಮ್ಮಿಬ್ಬರನ್ನು ಒಂದು ಮಾಡಿದೆ, ಈ ಕ್ಷೇತ್ರದಲ್ಲಿ ಮಹತ್ವದ್ದನ್ನು ಸಾಧಿಸುತ್ತೀರಿ ನಿಮ್ಮಿಬ್ಬರ ಸಂಸ್ಕೃತ ಹಾಗು ವಿಜ್ಞಾನದ ಅಭ್ಯಾಸ ಇದಕ್ಕೆ ನೆರವಾಗುತ್ತದೆ.* ಇದನ್ನು ತಿಳಿದ ಆ ಗೆಳೆಯರು ಕೆಲವೇ ದಿನದಲ್ಲಿ ಊರು ಬಿಟ್ಟು ಹೋಗುತ್ತಾರೆ. ಇದರಿಂದ ಊರಿನ ಜನರಿಗೆ ಕುಮಟೆಗೆ ಬಂದ ಈ ಜ್ಯೋತಿಷಿ ಅವಿರಿಬ್ಬರ ಮನೆಗಳನ್ನು ಬಿಟ್ಟು ಇನ್ನೆಲ್ಲೂ ಹೋಗದಿದ್ದ ಕಾರಣ ಈತನು ಜ್ಯೋತಿಷಿಯಾಗಿರಲಾರ, ಮಾಟಗಾರನಿರಬೇಕು, ಯಾರೋ ಹೊಟ್ಟೆ ಕಿಚ್ಚಿನವರೇ ಮಾಡಿಸಿದ ಕೆಲಸವಿದು ಎಂದು ನಿರ್ಧಾರಕ್ಕೆ ಬರುತ್ತಾರೆ.

ಎಷ್ಟೋ ವರ್ಷಗಳ ನಂತರ ಅಕ್ಷಯ ತೃತೀಯ ದಿವಸ ಊರಿನ ದೇವಸ್ಥಾನದಲ್ಲಿ ಚಂಡಿಕಾ ಹೋಮದ ಸಮಯದಲ್ಲಿ ಇಬ್ಬರ ಯುವಕರ ಆಗಮನವಾಗುತ್ತದೆ, ನೋಡಿದರೆ ಈ ಊರಿನವರು ಇರಲಾರರು ಯಾರಿರಬಹುದು ಇವರು ಎಂದು ಅವರಲ್ಲೇ ಗುಸು ಗುಸು , ಕೆಲವರು ಯಾವೂರಿನ ಕಡೆಯವರು ಎಂದು ಕೇಳಿದಾಗ ಇಲ್ಲಿಯವರೇ ಎಂದು ಚುಟುಕಾಗಿ ಉತ್ತರ ಕೊಟ್ಟು ತಮ್ಮ ತಮ್ಮ ಮನೆಗಳಿಗೆ ತೆರಳುತ್ತಾರೆ. ಇವರಿಬ್ಬರನ್ನು ನೋಡಿದ ಊರಿನವರಿಗೆ ಇವರು ಇಷ್ಟು ದಿನ ಎಲ್ಲಿದ್ದರಂತೆ?ಒಬ್ಬರೊನ್ನೊಬ್ಬರು ಎಲ್ಲಿ ಭೇಟಿಯಾದರಂತೆ? ಹೊಟ್ಟೆಪಾಡಿಗೆ ಏನು ಮಾಡಿದರಂತೆ? ಊರು ಬಿಡಲು ಕಾರಣವೇನು?ಆ ಹಾಳು ಜ್ಯೋತಿಷಿ ಹೇಳಿದ್ದಾದರೂ ಏನು? ಈ ಪ್ರಶ್ನೆಗಳಿಗೆ ಅವರಿಬ್ಬರೂ ಉತ್ತರ ಕೊಡಲಿಲ್ಲ. ನಡೆದದ್ದು ಇಷ್ಟೆ, ಜ್ಯೋತಿಷಿ ಇವರಿಬ್ಬರನ್ನೂ ಬೇರೆಬೇರೆಯಾಗಿ ಕಂಡು ತಾವಿಬ್ಬರೂ ಕೆಲವು ವರ್ಷ ದೂರವಿರುವುದು ಒಳ್ಳೆಯದು, ಹತ್ತಿರವಿದ್ದರೆ ಹೆಚ್ಚು ಅನಾಹುತಗಳಾಗಬಹುದು ಜಾಗ್ರತೆ ಎಂದು ನುಡಿದಾಗ ಇವರಿಬ್ಬರಿಗೆ ಅದರಲ್ಲಿ ನಂಬಿಕೆ ಮೂಡುವುದಿಲ್ಲ. ಆದರೂ ಯಾರು ಬಲ್ಲರು ಮುಂದಿನ ಮೂರು ವರ್ಷ ದೂರವಿರುವುದು ಒಳ್ಳೆಯದೇನೋ ಎಂದು ಊರು ತೊರೆದರು. ಮೂರು ವರ್ಷದ ನಂತರ ಊರಿಗೆ ಬಂದ ತರುಣರು ಮಾರನೇ ದಿನ ಅವಸರ ಅವಸರವಾಗಿ ಮತ್ತೆ ಊರು ಬಿಟ್ಟಾಗ ಎಲ್ಲಿ ಹೋದರು? ಏನಾದರು ಎಂಬುದೇ ಪ್ರಶ್ನೆಗಳು.

ಅವರು ಹೊರಟು ಹೋದ ರಾತ್ರಿಯೇ ಊರಿನಲ್ಲಿ ನಡೆದ ದುರ್ಘಟನೆ ಊರನವರಿಗೆ ಇನ್ನಿಲ್ಲದಷ್ಟು ಅನುಮಾನ ಸೃಷ್ಟಿಸಿತು. ನಲ್ಲಿಕೇರಿಯ ವೈಕುಂಟ ಬಾಳ್ಗಿ ಉಟ್ಟ ಧೋತರದಿಂದಲೇ ನೇಣು ಹಾಕಿ ಅಸುನೀಗಿದ್ದು , ಕಾಲಬುಡಕ್ಕೆ ಒಂದರ ಮೇಲೊಂದು ಪೇರಿಸಿಟ್ಟ ಟ್ರಂಕುಗಳು. ಈ ಟ್ರಂಕುಗಳು ಆ ಇಬ್ಬರ ಗೆಳೆಯರದ್ದು, ಖಾಲಿ ಟ್ರಂಕು ಮಾತ್ರವಿತ್ತು, ಅದರಲ್ಲೇನಿತ್ತು, ಆ ಗೆಳೆಯರಿಗೆ ದೊರಕಿತೆ ಅಥವಾ ಅವರೇ ಈತನನ್ನು ಕೊಲೆ ಮಾಡಿದರೆ ಎಂದು ಊರಿನಲ್ಲಿ ಎಲ್ಲಿಲ್ಲದ ಸುದ್ದಿಯಾಗುತ್ತದೆ.

*ಆದರೆ ಕೆಲವು ವರ್ಷಗಳ ನಂತರ ಭಾರತೀಯ ಮೂಲದ ಇಬ್ಬರು ವಿದ್ವಾಂಸರು ಪ್ರಿನ್ಸ್ ಟನ್ ಯೂನಿವರ್ಸಿಟಿಯಲ್ಲಿ ಬೆಳಕಿನ ಸ್ವರೂಪವನ್ನು ಕುರಿತು ಮಂಡಿಸಿದ ಹೊಸ ವಿಚಾರಗಳು: ನ್ಯೂಟನ್ ಹಾಗು ಐನ್ಸ್ಟೀನ್ ವಿಚಾರಗಳಿಂದ ತೀರ ಭಿನ್ನವಾದ ವಿಚಾರಗಳಿಗೆ ವಿಜ್ಞಾನಗಳಿಗೆ ಕುತೂಹಲ ಕೆರಳಿಸುತ್ತದೆ.ಇವರ ಪ್ರಕಾರ ಬೆಳಕು ಕಣವೂ ಹೌದು, ತರಂಗವೂ ಹೌದು, ಇದನ್ನು ಸಾರಿದ ವಿದ್ವಾಂಸರು ಡಾ ॥ ಕೆ.ಜಿ. ವರ್ಮಾ ಹಾಗು ಡಾ॥ ಕೆ.ವಿ ಶರ್ಮಾ..ಒಬ್ಬನು ಕುಮಟೆಯ ಗೋವಿಂದ ಮತ್ತೊಬ್ಬನು ವಿಷ್ಣು, ಉರಿನವರಿಗೆ ಇದನ್ನು ತಿಳಿದು ಅವರ ಬಗ್ಗೆ ಹೆಮ್ಮೆಯನಿಸುತ್ತದೆ. ಆದರೂ ಎಲ್ಲೋ ಒಂದು ಅನುಮಾನ, ಆ ಜ್ಯೋತಿಷಿ ಇವರನ್ನು ಬೇಕೆಂದೆ ಕುಮಟೆಯಿಂದ ಕರೆದೊಯ್ಯಲು ಬಂದವನೆ? ಇದರಲ್ಲಿ ಈ ಗೆಳೆಯರ ಕೈವಾಡವಿದೆಯೇ? ಬಂದಿರುವ ಜ್ಯೋತಿಷಿ ಅಲ್ಲವೇ ಅಲ್ಲ, ಆತ ವೇಷ ಹಾಕಿಕೊಂಡ ಮತ್ತಾರೋ ಇರಬಹುದು. ಅಥವಾ ಆ ಜ್ಯೋತಿಷಿ ಬೇರೆ ಯಾರು ಅಲ್ಲ ತಮ್ಮ ಊರಿನ ಚಿತ್ರಿಗಿಯ ಜಟ್ಕಾದೇವರೇ ಇರಬಹುದು. ಕಷ್ಟದಲ್ಲಿರುವವರನ್ನ ರಕ್ಷಿಸಲು, ಯೋಗ್ಯರಾದವರಿಗೆ ಅಭ್ಯುದಯ ತೋರಿಸಲು ಎಂಥೆಂಥ ವೇಷ ಧರಿಸಿ ಬರುತ್ತಿದ್ದವನ ಕತೆಗಳು ಇಲ್ಲಿ ನಿಜವಾಗಿರಬಹುದೆ?*

ಅಂತೂ ಆ ಜ್ಯೋತಿಷಿ ಯಾರಿರಬಹುದು? ಊರು ಬಿಡಲು ಈ ಇಬ್ಬರ ಗೆಳೆಯರ ಕೈವಾಡವಿದೆಯಾ? ವೈಕುಂಟ ಬಾಳ್ಗಿ ನೇಣು ಹಾಕಿಕೊಂಡದ್ದಾದರೂ ಏಕೆ? ಇವರಿಬ್ಬರ ಟ್ರಂಕಿನಲ್ಲಿ ಅಂತಹದ್ದು ಏನಿತ್ತು ? ಅದು ಏನಾಯಿತು? ಬೆಳಕಿನ ರಹಸ್ಯವನ್ನು ತಿಳಿಯುವ ಕುತೂಹಲದಿಂದ ಸಪ್ತಸಾಗರ ದಾಟಿಹೋದ ಇಬ್ಬರು ವೀರ ಯುವಕರ ಸುತ್ತ ಬೆಳೆದ ಈ ಪುರಾಣಕ್ಕೆ ಕಾರಣಪುರುಷನಾಗುವ ಯೋಗ್ಯತೆ ಜಟ್ಕಾದೇವರಂಥ ಮಹಾಮಹಿಮನಿಗೆ ಸೇರಿದ್ದೇ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕಲು ಲೇಖಕರು ನಮಗೇ ಬಿಟ್ಟುಕೊಟ್ಟಿದ್ದಾರೆ.

 

MORE FEATURES

ಅಂಬೇಡ್ಕರ್ ವಿದ್ಯಾವಂತ ಜನರ ಕೈಯಲ್ಲಿ ಮೋಜಿನ ವಸ್ತುವಾಗಿ ಕಾಣಿಸಿಕೊಳ್ಳುತ್ತಿದ್ದಾರೆ..

07-12-2025 ಬೆಂಗಳೂರು

"ದಲಿತರು ಒಳಪಂಗಡಗಳ ಭಾವನಾತ್ಮಕ ಸೆಳವಿಗೆ ಸಿಕ್ಕು ಮೂಲ ಸಿದ್ದಾಂತದಿಂದ ದೂರವಾಗುತ್ತಿದ್ದಾರೆ. ಇಂದು ಅಂಬೇಡ್ಕರ್ ವಿ...

BlrLitFest 2025: ಸಾಹಿತ್ಯಾಸಕ್ತರ ಮಹಾಸಂಗಮ!

06-12-2025 ಬೆಂಗಳೂರು

ಬೆಂಗಳೂರು : ಬೆಂಗಳೂರು ಸಾಹಿತ್ಯ ಉತ್ಸವ (BlrLitFest)ವು ಪ್ರತಿ ವರ್ಷ ನಡೆಯುವ ಅತ್ಯಂತ ನಿರೀಕ್ಷಿತ ಸಾಂಸ್ಕೃತಿಕ ಕಾರ್ಯ...

ಮತ್ತೆ ಮತ್ತೆ ಕಾಡುವ ಕಥೆಗಳು

06-12-2025 ಬೆಂಗಳೂರು

ಮಗಳ ನೋವನ್ನು ಕಂಡು ಹೆತ್ತವರು ಜರ್ಜರಿತರಾಗುವ ದೃಶ್ಯವನ್ನು ಹಾಗೂ ಅಪ್ಪ ಅಮ್ಮನ ಧಾವಂತದ ಬದುಕಿನಲ್ಲಿ ಮಕ್ಕಳು ಬಡವಾಗುವ ಸ...