ಹೇಮಾ ಅವರು ಅನುವಾದ ಮಾಡಲು ಆಯ್ಕೆ ಮಾಡಿಕೊಂಡ ಕತೆಗಳು ಅವರ ಆಶಯಗಳನ್ನು ಹೇಳುತ್ತವೆ.ಅನುವಾದ ಎಂಬುದನ್ನೇ ಮರೆಸಿ ಮನಮುಟ್ಟುವಲ್ಲಿ ಯಶಸ್ವಿಯಾಗಿವೆ. ಉತ್ತರ ಕರ್ನಾಟಕದ ಸಂಭಾಷಣೆಗಳು ಹೇಮಾ ಅವರ ಕಥನ ಶೈಲಿಯ ಹೈಲೈಟ್'.ಎನ್ನುತ್ತಾರೆ ಲೇಖಕಿ ಕೆ ಆರ್ ಸಿದ್ದಗಂಗಮ್ಮ. ಅವರು ಕವಿ, ಬರಹಗಾರ್ತಿ ಹೇಮಾ ಪಟ್ಟಣಶೆಟ್ಟಿ ಬರೆದ 'ಪೇಷಂಟ್ ಪಾರ್ಕಿಂಗ್' ಕೃತಿಗೆ ಬರೆದ ಅನಿಸಿಕೆ ಹೀಗಿದೆ.....
ಪೇಷಂಟ್ ಪಾರ್ಕಿಂಗ್, ಅನಿವಾಸಿ ಭಾರತೀಯರ 12 ಹಿಂದಿ ಕತೆಗಳ ಡಾ ಹೇಮಾ ಪಟ್ಟಣಶೆಟ್ಟಿಯವರ ಅನುವಾದ ಸಂಕಲನವಿದು. ಈ ಸಂಕಲನದ ‘ಅವಳ ಭೆಟ್ಟಿ ‘ಮತ್ತು ‘ಪೇಶಂಟ್ ಪಾರ್ಕಿಂಗ್ ‘ಮತ್ತೆ ಮತ್ತೆ ಕಾಡುವ ಕತೆಗಳಾಗಿವೆ .
ಸಾಹಿತ್ಯದ ರಚನೆಯನ್ನು ಗಂಭೀರವಾಗಿ ತೆಗೆದುಕೊಂಡಿರುವ ಲೇಖಕಿ ಮಾತ್ರ ಇಂತಹ ಕತೆಗಳನ್ನು ಅನುವಾದಕ್ಕೆ ಆಯ್ಕೆ ಮಾಡಿಕೊಳ್ಳಬಲ್ಲರು. ಮನುಷ್ಯ ಮನುಷ್ಯನಾಗಿ ಉಳಿಯುವ ಮತ್ತು ಬೆಳೆಯುವ ಪ್ರಕ್ರಿಯೆಯಲ್ಲಿ ಸಾಹಿತ್ಯದ ಜವಾಬ್ದಾರಿ ಅಡಗಿದೆ. ಇನ್ನೂ ಹೇಳುವುದಾದರೆ ಮನುಷ್ಯನಾಗುವ ಯಾತ್ರೆಯೇ ಶ್ರೇಷ್ಠ ಸಾಹಿತ್ಯದ ರಚನೆಯ ಉದ್ದೇಶವಾಗಿದೆ.
‘ಅವಳ ಭೆಟ್ಟಿ’ ಕತೆಯ ಚೌಕಟ್ಟು ರೈಲ್ವೇ ಭೋಗಿಯಲ್ಲಿ. ಪ್ರತಿಯೊಬ್ಬರೂ ಅವರವರ ನಿಲ್ದಾಣ ಬಂದಾಗ ಇಳಿಯಲೇಬೇಕು ಇದು ಬದುಕು. ಇರುವಷ್ಟು ಸಮಯದಲಿ ಭೇಟಿಯಾಗುವರು ಎಲ್ಲರೂ ನೆನಪಿನಲ್ಲಿ ಉಳಿಯುವುದಿಲ್ಲ. ಆದರೆ ಆ ಉದಾಸ ಮುಖದ ಮಹಿಳೆ ಲೇಖಕಿಯ ಎದುರು ಸೀಟಿನಲ್ಲಿ ಕುಳಿತಿದ್ದಾಳೆ. ಅವರಿಬ್ಬರೂ ಮಾತನಾಡಿದ್ದು ಬಹಳ ಕಡಿಮೆ. ಮೌನ ಮಾತಾಗಿ ಅಡಗಿರುವ ನೋವು ಮಾನವೀಯತೆಯ ಸ್ಪರ್ಶದಿಂದ ಆಕಾರ ತಳೆದು ಕ್ರಿಯೆಯಾಗುವ ಕ್ಷಣಗಳನ್ನು ಕಲಾತ್ಮಕವಾಗಿ ಹಿಡಿಯಲಾಗಿದೆ. ಅನುವಾದದ ನೆನಪು ತರದೆ ಮೂಲ ಕತೆಯೆಂಬಂತೆ ಮನ ಮುಟ್ಟುತ್ತದೆ. ಸ್ತ್ರೀವಾದದ ಭಾಷೆಯೊಂದು ಸಹೋದರಿ ಭಾವ ದೊಳು ಮೂಡಿರುವ ಕ್ರಮ ಅನನ್ಯ. ಜಗತ್ತಿನಎಲ್ಲ ಅನ್ಯಾಯಕ್ಕೀಡಾದ ಶೋಷಿತ ಮಹಿಳೆಯರ ದಯನೀಯತೆಯನ್ನು ಆ ಮುಖದಲ್ಲಿ ಗುರುತಿಸಿದ ಲೇಖಕಿ, ಅವಳಿಗೇ ಆಶ್ಚರ್ಯವಾಗುವಂತೆ ತಕ್ಷಣ ಜಾಗೃತಳಾಗುವ ಕ್ರಿಯೆ ಅಪರೂಪದ್ದಾಗಿದೆ. ಈ ಜಾಗೃತಿ ಕೇವಲ ಅಕ್ಷರಗಳಲ್ಲಿ ಉಳಿಯುವುದಿಲ್ಲ ಎಂಬುದೇ ಕತೆಯ ಸೊಗಸು. ಶಬನಮ್ ನನ್ನ ಜೀವನ ಬದಲಿಸಿದಳು ಕನಸು ಕಾಣುವ ನನ್ನ ಸ್ವಭಾವಕ್ಕೆ ಒಂದು ಹೊಸ ತಿರುವು ನೀಡಿದಳು ‘ಎಂಬ ಉಷಾ ರಾಜೇ ಸಕ್ಸೇನಾ ಅವರ ಈ ಕತೆಯ ಕಡೆಯ ಸಾಲು ಮಾನವೀಯತೆಗೆ ಭಾಷ್ಯ ಬರೆದಂತಿದೆ.
‘ಪೇಷಂಟ್ ಪಾರ್ಕಿಂಗ್' ಕತೆಯ ಧ್ವನಿಯು ಮಾನವತ್ವದ ಕಡೆ ಚಲಿಸುತ್ತದೆ.ಅಮೇರಿಕಾ ವಾಸಿ ಡಾ ವಿಶಾಖ ಠಾಕರ್ ಬರೆದಿರುವ ಈ ಕತೆ ಸರಳ ಸುಂದರ. ಹೆಚ್ಚಿನ ಗದ್ದಲವಿಲ್ಲದೆ ಹೇಳಬೇಕಾದುದನ್ನೆಲ್ಲ ಶೀರ್ಶಿಕೆಯೇ ಹೇಳಿಬಿಡುತ್ತದೆ. ಕ್ಯಾನ್ಸರ್ ಪೀಡಿತ ಸಾವಿನತ್ತ ಹೊರಟ ಯುವತಿಯ ಜೀವನ ಪ್ರೀತಿ ಜೀವನೋತ್ಸಾಹಗಳು,ಬದುಕಿನ ಎದುರು ನಿಲ್ಲುವ ಕ್ಷಣಗಳು ಅಪರೂಪದ್ದಾಗಿದೆ. ಈ ಬದುಕು ಒಂದು ನಿಲ್ದಾಣವೇ ಇಲ್ಲಿ ಅನಿವಾರ್ಯವಾಗಿ ಕಾಪಾಡಿಕೊಳ್ಳಬೇಕಾದದ್ದು ತಾಳ್ಮೆ ಅದು ಬರೀ ಕ್ಯಾನ್ಸರ್ ರೋಗಿ ರೀಟಾಳ ಕಥನವೇ?
ಮನುಷ್ಯತ್ವದ ಸಿಂಚನವಾದ ಮರುಘಳಿಗೆ ಬದುಕು ಅಪ್ಯಾಯಮಾನವಾಗಿಬಿಡುವ ಸತ್ಯವಿಲ್ಲಿದೆ.
ತೇಜೇಂದ್ರ ವರ್ಮ ಅವರ ‘ಶಾಪಗ್ರಸ್ಥರು ‘ಕತೆ ಹೊಟ್ಟೆಯ ಪಾಡಿಗೆ ಅನಿವಾರ್ಯವಾಗಿ ಪರದೇಶಕ್ಕೆ ಹೋಗಿ ಬದುಕು ಕಟ್ಟಿಕೊಳ್ಳಲಾಗದೇ ಬದುಕಿರುವವರ ಕಥನವಿದು. ಸೌಲಭ್ಯ ಸೌಕರ್ಯಗಳೇ ಬಂಧನವಾದ ಬದುಕು ಇಲ್ಲಿದೆ ಪೂರ್ಣಿಮಾ ಗುಪ್ತ. ಅವರ ‘ನ್ಯೂರೋಸಿಸ್ ‘ಕಥೆಯು ಅಮೇರಿಕಾದಲ್ಲಿ ಸ್ವತಂತ್ರ ಬದುಕನ್ನು ಹುಡುಕಿ ಹೊರಟ ಹೆಣ್ಣಿನ ಕಥನ. ಲವಲವಿಕೆಯ ಸಂಭಾಷಣೆ ಕತೆಯ ಬೆಳವಣಿಗೆಯಲ್ಲಿ ಗಮನಾರ್ಹ ವಾಗಿದೆ. ಇಂದಿಗೂ ಈ ಪರದೇಶ ಯಾತ್ರೆಗಳು ನಿರಂತನವಾಗಿವೆ ಹಾಗೆಯೇ ಅಲ್ಲಿ ಹೋದವರ ಅಳಲುಗಳು ಜೊತೆಗೆ ಸೌಕರ್ಯಗಳೂ ಹೆಚ್ಚುತ್ತಲೇ ಇವೆ. ಇವರೆಲ್ಲರೂ ಶಾಪಗ್ರಸ್ಥರೋ ಅಲ್ಲವೋ ಅವರವರ ಭಾವಕ್ಕೆ ಬಿಟ್ಟದ್ದು ಆದರೆ ಒಂಟಿತನವನ್ನು ಮಾತ್ರ ಸುಖದಿಂದ ಸ್ವೀಕರಿಸಬೇಕಾದ ಅನಿವಾರ್ಯವನ್ನು ಕತೆಗಳು ಹೇಳುತ್ತಿವೆ.
ಬೀದಿ ಮಕ್ಕಳ ‘ಅಲೆದಾಟದ ಅಂತ್ಯ’ ಸ್ನೇಹ ಠಾಕೂರರ ಕತೆ ಮನಸ್ಸನ್ನು ಕಲಕುತ್ತದೆ. ಅನುವಾದ ಸೊಗಸಾಗಿದೆ. ಅನೀತಳ ದುರಂತ ಪರದೇಶಗಳಲ್ಲಿ ಸಾಮಾನ್ಯವಾಗಿದೆ ಅಪ್ಪ ನನ್ನೋ ಅಥವಾ ಅಮ್ಮನನ್ನು ಕಳೆದುಕೊಂಡವರು ನಮ್ಮ ದೇಶಗಳಲ್ಲಿ ಹೀಗೆ ಅನಾಥರಾಗುವುದಿಲ್ಲ, ಕುಟುಂಬ ಎಂಬುದು ರಕ್ಷಣೆಯ ಮನೋಭಾವವನ್ನು ನೀಡುತ್ತದೆ. ಭಾರತದಲ್ಲಿರುವ ಈ ವ್ಯವಸ್ಥೆಯಲ್ಲಿ ಏನೇ ಲೋಪ ದೋಷಗಳಿದ್ದರೂ ಎಲ್ಲೋ ನಮಗೆ ನೀಡುವ ನೈತಿಕ ಶಕ್ತಿ ಒಂಟಿತನವನ್ನು ಕೈ ಹಿಡಿದು ಎತ್ತುತ್ತದೆ. ರಾಜವಂಶಿ ಅವರ ‘ಪರಿಹಾರ ‘ಕತೆಯ ಒಡಲು ಭಾರತೀಯವಾಗಿದೆ. ಗಂಡು ಹೆಣ್ಣಿನ ಸಂಬಂಧಗಳ ವಿಶ್ಲೇಷಣೆಯೇ ಅವರ ಅನೇಕ ಕತೆಗಳಲ್ಲಿ ಕಂಡು ಬರುತ್ತದೆ.
ಹೇಮಾ ಅವರು ಅನುವಾದ ಮಾಡಲು ಆಯ್ಕೆ ಮಾಡಿಕೊಂಡ ಕತೆಗಳು ಅವರ ಆಶಯಗಳನ್ನು ಹೇಳುತ್ತವೆ.ಅನುವಾದ ಎಂಬುದನ್ನೇ ಮರೆಸಿ ಮನಮುಟ್ಟುವಲ್ಲಿ ಯಶಸ್ವಿಯಾಗಿವೆ. ಉತ್ತರ ಕರ್ನಾಟಕದ ಸಂಭಾಷಣೆಗಳು ಹೇಮಾ ಅವರ ಕಥನ ಶೈಲಿಯ ಹೈಲೈಟ್. ಅನಿವಾಸಿ ಬದುಕಿನ ದ್ವಂದ್ವಗಳನ್ನು ತಲ್ಲಣಗಳನ್ನು ತೆರೆದಿಡುವಲ್ಲಿ ಯಶಸ್ವಿಯಾಗಿರುವ ಕತೆಗಳು ಈ ಸಂಕಲನದಲ್ಲಿವೆ. ಲೇಖಕಿ ಹೇಮಾ ಅವರಿಗೆ ಅಭಿನಂದನೆಗಳು.
ಕೃತಿ : ಪೇಷಂಟ್ ಪಾರ್ಕಿಂಗ್ (ಅನುವಾದ ಕಥೆಗಳು)
ಲೇಖಕಿ :ಡಾ ಹೇಮಾ ಪಟ್ಟಣಶೆಟ್ಟಿ
ಪ್ರಕಾಶನ : ಅನನ್ಯ ಪ್ರಕಾಶನ, ಧಾರವಾಡ
ಪುಸ್ತಕದ ಬೆಲೆ : 140.00/-
"ದಲಿತರು ಒಳಪಂಗಡಗಳ ಭಾವನಾತ್ಮಕ ಸೆಳವಿಗೆ ಸಿಕ್ಕು ಮೂಲ ಸಿದ್ದಾಂತದಿಂದ ದೂರವಾಗುತ್ತಿದ್ದಾರೆ. ಇಂದು ಅಂಬೇಡ್ಕರ್ ವಿ...
ಬೆಂಗಳೂರು : ಬೆಂಗಳೂರು ಸಾಹಿತ್ಯ ಉತ್ಸವ (BlrLitFest)ವು ಪ್ರತಿ ವರ್ಷ ನಡೆಯುವ ಅತ್ಯಂತ ನಿರೀಕ್ಷಿತ ಸಾಂಸ್ಕೃತಿಕ ಕಾರ್ಯ...
ಮಗಳ ನೋವನ್ನು ಕಂಡು ಹೆತ್ತವರು ಜರ್ಜರಿತರಾಗುವ ದೃಶ್ಯವನ್ನು ಹಾಗೂ ಅಪ್ಪ ಅಮ್ಮನ ಧಾವಂತದ ಬದುಕಿನಲ್ಲಿ ಮಕ್ಕಳು ಬಡವಾಗುವ ಸ...
©2025 Book Brahma Private Limited.