ಮರದೊಳಡಗಿದ ಅಗ್ನಿಯಂತೆ ಶರೀಫರ ಕವಿತೆ


"ಒಬ್ಬ ಕವಿ ತನ್ನ ನಾಡು ನುಡಿ ಬಗ್ಗೆ ಬರೆದಾಗ ಮಾತ್ರ ಅವನ ಮನಸ್ಸು ನಿರಾಳ. ಅಂತೆಯೇ ಕವಿ ಶರೀಫ ಅವರು ಬರೆಯುತ್ತಾರೆ: ಕನ್ನಡ ಇದು ಅಮೃತ, ಕಲೆ ಸಾಹಿತ್ಯ, ಶಿಲ್ಪಕಲೆಯ ತೊಟ್ಟಿಲು. ಸ್ವಾಭಿಮಾನದ ಕನ್ನಡ ಇದು ಚಿರ ಚೇತನ". ಎನ್ನುತ್ತಾರೆ ಶಿಕ್ಷಕ, ಸಾಹಿತಿ ಸಂತೋಷ್ ಬಿದರಗಡ್ಡೆ. ಅವರು ಲೇಖಕ ಶರೀಫ ಗಂ ಚಿಗಳ್ಳಿ ಬರೆದ 'ಕಿಚ್ಚು ಹಚ್ಚುವ ಕವಿತೆಗಳು'ಗೆ ಬರೆದ ಮುನ್ನುಡಿ.

 "ಕವಿಯಿಂದ ಕವಿತೆ ಹುಟ್ಟುವುದಿಲ್ಲ, ಬದಲಿಗೆ ತಾನು ರಚಿಸುವ ಕಾವ್ಯದಿಂದ ಕವಿ ಜನ್ಮಿಸುತ್ತಾನೆ". 
ರವಿ ಕಾಣದನ್ನು ಕವಿ ಕಾಣುತ್ತಾನೆ. ತಾನು ಕಂಡಿದ್ದನ್ನು ಲೋಕದ ಕಣ್ಣಿಗೂ ಕಾಣಿಸುತ್ತಾನೆ. ಸತ್ಯವಲ್ಲದ ಸತ್ಯವನ್ನು ಸಹ ಎತ್ತಿ ಹಿಡಿಯುತ್ತಾನೆ. ನೋವು ನಲಿವನ್ನು ಸಹ ಸುಂದರವಾಗಿ ವರ್ಣಿಸುತ್ತಾನೆ. ಸಮಷ್ಠಿಯೇ ಶೂನ್ಯದಲ್ಲಿ ಅಡಗಿದೆ ಎಂಬುದನ್ನು ಗ್ರಹಿಸುತ್ತಾನೆ. ಒಡಲಾಳದ ನೋವನು ಸಹ ನಲಿವಿನ ಗೀತೆಯಂತೆ ರಚಿಸುತ್ತಾನೆ ಕವಿ. ಇಲ್ಲಿ ಕವಿ ತನ್ನ ಅಂತರಾಳದ ನೋವು ನಲಿವುಗಳನ್ನು ಲೇಖನಿಯಿಂದ ಹೊರ ಹಾಕುತ್ತಾನೆ. 

ಯುವ ಕವಿಮಿತ್ರ ಶರೀಫ ಚಿಗಳ್ಳಿ ಅಂತಹ ಭರವಸೆಯ ಬೆಳಕಿನಲ್ಲಿ ಹೆಜ್ಜೆ ಹಾಕುತ್ತಿದ್ದಾರೆ. ಹುಬ್ಬಳ್ಳಿ ತಾಲೂಕಿನ ಬೆಳಗಲಿ ಗ್ರಾಮದ ಶ್ರೀಮತಿ ಗದಿಗೆವ್ವ ಗಂಗಪ್ಪ ದಂಪತಿಗಳ ಮಗನಾದ ಇವರು ವೃತ್ತಿಯಲ್ಲಿ ಗ್ರಾಮ ಪಂಚಾಯತ್ ನೌಕರನಾಗಿದ್ದು ತಮ್ಮನ್ನು ಸಾಹಿತ್ಯ, ಸಮಾಜಸೇವೆ, ಸಂಶೋಧನೆಯಲ್ಲಿ ತೊಡಗಿಸಿಕೊಂಡ ಅಪರೂಪದ ವ್ಯಕ್ತಿ. ನಾಡಿನ ವಿವಿಧ ಪತ್ರಿಕೆಗಳಲ್ಲಿ ಲೇಖನ ಕವನ ಕಥೆಗಳನ್ನ ಈಗಾಗಲೇ ಪ್ರಕಟಿಸಿದ್ದು, ಕಾವ್ಯ ಕುಸುಮ, ಕರ್ನಾಟಕ ರಾಜ್ಯೋತ್ಸವ, ಕರುನಾಡ ಹಣತೆ ಸಾಹಿತ್ಯ ಸೇವಾರತ್ನ ಮುಂತಾದ ಗೌರವ ಪುರಸ್ಕಾರಗಳಿಗೆ ಒಳಗಾಗಿರುವ ಕವಿ ಶರೀಫ ಅವರು ವಿಚಾರ ದೀಪ್ತಿ, ಮಣ್ಣಿಗಾಗಿ ಮಡಿದವರು, ಅನ್ನದ ಬಟ್ಟಲು ಕೃತಿಗಳನ್ನು ಈಗಾಗಲೇ ಸಾರಸ್ವತ ಲೋಕಕ್ಕೆ ನೀಡಿರುತ್ತಾರೆ. 

ಕುಂದಾ ನಗರಿಯ ಶಿಕ್ಷಕ, ಕವಿಮಿತ್ರ ಶಿವರಾಜ ಅರಳಿ ಅವರ ಅಪೇಕ್ಷೆ ಮೇರೆಗೆ, ಹಾಗೂ ಈಗಾಗಲೇ ವಾಟ್ಸಪ್ , ಸಾಮಾಜಿಕ ಜಾಲತಾಣದಲ್ಲಿ ಪರಿಚಿತರಿದ್ದ ಶರೀಫ್ ಚಿಗಳ್ಳಿ ಅವರ ಕರೆಯ ಇಂಗಿತಕ್ಕೆ ಇಂಬು ಕೊಟ್ಟು ಅವರ "ಕಿಚ್ಚು ಹಚ್ಚುವ ಕವಿತೆ" ಗಳ ಕವನ ಸಂಕಲನಕ್ಕೆ ಮುನ್ನುಡಿ ಬರೆಯಲು ಸಂತಸವಾಗುತ್ತಿದೆ. ಕಾರಣ ಇಂದಿನ ಆಧುನಿಕ ವಿಲಾಸಿ, ಸ್ಪರ್ಧಾತ್ಮಕ, ಜಂಜಾಟದ ಬದುಕಿನ ನಡುವೆಯೂ ಕಾವ್ಯಕ್ಕೆ ಕೈಹಾಕಿರುವ ಯುವ ಕವಿಮಿತ್ರನ ಸಾಹಿತ್ಯ ಪ್ರೀತಿ.

ಲೆಬನಾನಿನ ದಾರ್ಶನಿಕ ಕವಿ ಖಲೀಲ್ ಗೀಬ್ರಾನ್ ಹೇಳುತ್ತಾನೆ: "ಕಾವ್ಯ ಒಂದು ಅಭಿಪ್ರಾಯದ ಅಭಿವ್ಯಕ್ತಿ ಅಷ್ಟೇ ಅಲ್ಲ, ರಕ್ತ ಸುರಿಯುತ್ತಿರುವ ಗಾಯದಿಂದ ಇಲ್ಲವೇ ಮುಗುಳ್ನಗುತ್ತಿರುವ ಬಾಯಿಂದ ಹೊಮ್ಮಿದ ಗಾನ ಅದು" ಎಂದು. ಅಂದರೆ ಇಲ್ಲಿ ಕವಿತೆಗಳು ಕೇವಲ ಪದಗಳಿಂದ ಕೂಡಿದ ಸಾಲುಗಳಲ್ಲ ಬದಲಿಗೆ ಕವಿಯ  ಹಂಬಲದ ಕೂಸು ಕಾವ್ಯ.

ಒಬ್ಬ ಪಂಜಾಬಿ ಕವಿ ಹೇಳ್ತಾರೆ:- ನಾನೇಕೆ ಕವಿತೆಗಳನ್ನು ಬರೆಯುತ್ತೇನೆಂದರೆ.. ಕವಿತೆಗಳಿಲ್ಲದಿದ್ದರೆ: ತಾಯಿ ತನ್ನ ಮಕ್ಕಳಿಗೆ ಹೃದಯತುಂಬಿ ಆಶೀರ್ವದಿಸಲಾರಳು, ಕವಿತೆಗಳಿಲ್ಲದಿದ್ದರೆ ಜಗದೊಳಗೆ ದ್ವೇಷ ವೈಷಮ್ಯಗಳ ಯುದ್ಧಗಳನ್ನು ನಿಲ್ಲಿಸಲಾಗುತ್ತಿರಲಿಲ್ಲ, ಮನುಷ್ಯ ಮನುಷ್ಯತ್ವದಿಂದ ವ್ಯವಹರಿಸುತ್ತಿರಲಿಲ್ಲ, ಕವಿತೆಗಳಿಲ್ಲದಿದ್ದರೆ ದೇವಾಲಯ ಮನೆ ಮಠಗಳ ಕಲೆ ವಾಸ್ತುಶಿಲ್ಪಗಳು ಕೇವಲ ಕಲ್ಲಾಗಿ ಉಳಿಯುತ್ತಿದ್ದವು, ಅವು ಬದುಕಿನ ಭಾವನೆಗಳಾಗುತ್ತಿರಲಿಲ್ಲ! .. ಹೌದಲ್ಲವೇ, ಸಾಹಿತ್ಯವೆಂಬುದು ನಮಗೆ ಅನ್ನದಷ್ಟೇ ಮುಖ್ಯವಾದೀತು. ಅಂತಹ ಪ್ರಯತ್ನವನ್ನು ಶರೀಫ ಅವರು ಇಲ್ಲಿ ಮಾಡುತ್ತಾ ಸಾಗುತ್ತಾರೆ. ಇಲ್ಲಿನ ಕವಿತೆಗಳು ಪ್ರತಿಯೊಂದೂ ಒಂದೊಂದು ವಿಷಯವನ್ನು ಬಿಂಬಿಸುತ್ತವೆ. 

ಒಬ್ಬ ಕವಿ ತನ್ನ ನಾಡು ನುಡಿ ಬಗ್ಗೆ ಬರೆದಾಗ ಮಾತ್ರ ಅವನ ಮನಸ್ಸು ನಿರಾಳ. ಅಂತೆಯೇ ಕವಿ ಶರೀಫ ಅವರು ಬರೆಯುತ್ತಾರೆ: ಕನ್ನಡ ಇದು ಅಮೃತ, ಕಲೆ ಸಾಹಿತ್ಯ, ಶಿಲ್ಪಕಲೆಯ ತೊಟ್ಟಿಲು. ಸ್ವಾಭಿಮಾನದ ಕನ್ನಡ ಇದು ಚಿರ ಚೇತನ.. ಅನ್ನುತ್ತಾರೆ.

ಶರೀಫ ಅವರಿಗೆ ಉತ್ತರ ಕರ್ನಾಟಕದ ಜನರ ಬರ ಪರಿಸ್ಥಿತಿ ಬಗ್ಗೆ ಕಾಳಜಿ ಇದೆ. ಇಲ್ಲಿನ ರೈತರಿಗೆ ದುಡಿಯುವ ಛಲ ಇದೆ, ಸರ್ಕಾರವಾದರೂ ಸರಿಯೇ, ಪ್ರಕೃತಿ ಮಾತೆ ಆದರೂ ಸರಿಯೇ ನೀರಿನ ಭಾಗ್ಯ ನೀಡಿ ಎಂದು ತಮ್ಮ ಕವಿತೆಯೊಂದರ ಸಾಲುಗಳಲ್ಲಿ ಬೇಡುತ್ತಾರೆ. ದಾಸ ಶ್ರೇಷ್ಠ ಕನಕದಾಸರನ್ನು ಕನ್ನಡ ನಾಡಿನ ಕನಕ ಎಂದು ಬಣ್ಣಿಸುತ್ತಾರೆ. ಕೊರೊನ ಸಂದರ್ಭದಲ್ಲಿ ಭಾರತದ ಧೈರ್ಯವನ್ನು ಮೆಚ್ಚಿ, ವಿಶ್ವ  ಭಾರತಿ ಅಂತಾನೆ ಭಾರತವನ್ನು ಬಿಂಬಿಸುತ್ತಾರೆ. ಇನ್ನು ನಿಸರ್ಗವನ್ನು ರಮಣೀಯ ದೃಶ್ಯಗಳನ್ನು ಹೀಗೆ ವರ್ಣಿಸುತ್ತಾರೆ..

ಸರಣಿಯ ಬೆಟ್ಟದ ಇಳಿಜಾರಿನಲ್ಲಿ
ತಂಗಾಳಿಯ ನೃತ್ಯ ಮಾಡುತ್ತಿವೆ ವೃಕ್ಷಗಳು
ಪ್ರಕೃತಿಯ ಬಿಂಬಾಬಾ ಸೆರೆ ಹಿಡಿಡಿವೆ ನದಿಗಳು
ಅನಂತ ಕೋಟಿ ಜೀವಿಗಳ ತಾಣ ಪ್ರಕೃತಿ ಒಡಲು.

ಭುವಿಯ ಮೇಲಿನ ಜನಗೆ ಅಕ್ಷರ ಜ್ಞಾನ ಬೇಕೇ ಬೇಕು, ಬನ್ನಿ ಕಲಿಯೋಣ ಎಂದು ಕರೆ ನೀಡುವ ಪರಿ ಕವಿಯ ಕಾಳಜಿಗೆ ಕನ್ನಡಿ ಹಿಡಿದಿದೆ.
 
ವೇದ ವ್ಯಾಸ ಆದಿ ಕವಿಗಳ
ಚರಿತ್ರೆ ಓದೋಣ ಬನ್ನಿ,
ಅಜ್ಞಾನ ಅನಕ್ಷರತೆ ಅಂಧಕಾರ
ಮೌಢ್ಯತೆ ಹೊಡೆದೋಡಿಸೋಣ ಬನ್ನಿ .. ಕರೆ ನೀಡುತ್ತಾರೆ.

ಶರೀಫ ಅವರ ಕವಿತೆಗಳು ಬಹುತೇಕ ಸಾಮರಸ್ಯಕ್ಕೆ ಕರೆದೊಯ್ಯುತ್ತವೆ. ನಾವು ಭಾರತಿಯರೆಂಬ ಮಂತ್ರ ಪಠಿಸಿ ಎಂದು ಕರೆ ನೀಡುವ ಇವರ ಒಂದು ಪದ್ಯದಲ್ಲಿ ಹೀಗೆ ಬರೆಯುತ್ತಾರೆ..

ನನ್ನ ಗಡಿ, ನಿನ್ನ ಗಡಿ ಎಂದು ಏಕೆ
ಕಾಲ ಹರಣ ಕೋಮುದಂಗೆ ಮಾಡುವಿರಿ
ನನ್ನ ಜನತೆ ನಿನ್ನ ಜನತೆ ಎನ್ನದೆ
ನಾವು ಭಾರತೀಯರೆಂದು ಒಂದಾಗಿ ಬನ್ನಿರಿ.

ದೇವಾಸ್ತಿತ್ವವನ್ನು ನಿರಾಕರಿಸಲಾದೀತೆ, ಖಂಡಿತ ಇಲ್ಲ. ಈ ಪ್ರಕೃತಿಯ ಸೃಷ್ಟಿ ಸ್ಥಿತಿ ಲಯಗಳ ಸಾಮರಸ್ಯವೇ ದೇವರು ಎಂಬುದನ್ನು ಸಾರುತ್ತಾರೆ. 

ಗ್ರಹಗಳಿಗೆ ಉಂಗುರ ತೊಡಿಸಿ
ತಾರೆಗಳಿಗೆ ಮಿನುಗು ಉಡಿಸಿ
ಆಕಾಶದಲ್ಲಿ ಎಲ್ಲವನು ಹೋಗಿಸಿ
ಜಗತ್ತಿನ ಸೂತ್ರವನ್ನು ಹಿಡಿದವನಾರು..?

ಎಂದು ಪ್ರಶ್ನಿಸುವ ಮೂಲಕ ದೇವರು ಯಾರೆಂದು ಮಾರ್ಮಿಕವಾಗಿ ಬಣ್ಣಿಸುತ್ತಾರೆ.

ನೀಲಂಗಳದಲ್ಲಿ ಹಗಲಿರುಳಿನಲ್ಲಿ
ತೇಲುತಿವೆ ಆ ಮೇಘಗಳು..
ಸಮಯಕ್ಕೆ ತಕ್ಕಂತೆ ಬಂದರೆ ಮಳೆಗಳು
ಜಗತ್ತಿಗೆ ಅನ್ನದಾತರು ನಾವುಗಳು..

ಹೀಗೆ ಪ್ರಕೃತಿಯ ಸರಿದೂಗಿಸುವಿಕೆ ಅತ್ಯವಶ್ಯವೆಂದು ನೀಲಂಗಳದ ಮೇಘಗಳ ಕವಿತೆಯಲ್ಲಿ ಹೇಳುತ್ತಾರೆ.
ಕವಿಗೆ ಕಾಯಕದಲ್ಲಿ ನಂಬುಗೆ ಇದ್ದಂತಿದೆ. ಮಾಯಾ, ಜಾದೂ ಇವನ್ನೆಲ್ಲ ಬಿಟ್ಟು ಮೈ ಮುರಿದು ದುಡಿಯಿರಿ ಎಂಬುದಾಗಿ ಹೇಳುವ ಕವಿ ಶರೀಫರು ದುಡ್ಡಿನ ತಾಯಿ ಪದ್ಯದಲ್ಲಿ ಹೀಗೆ ಬರೆಯುತ್ತಾರೆ..

ಮಾಟ ಮರುಡೆಯನ್ನು ನಂಬದಿರಿ
ಜ್ಯೋತಿಷ್ಯ ಪವಾಡಗಳಿಗೆ ಮೋಸ ಹೋಗದಿರಿ,
ಯಾರು ದುಡಿದು ದಣಿಯುತ್ತಾರೋ
ಅವರ ಬಾಳು ಹಸನು ಎಂದು ತಿಳಿಯಿರಿ.

ಪರಿಸರ ರಕ್ಷಣೆ ಹೊಣೆ ನಮ್ಮ ಮೇಲಿದೆ ಎಂಬುದನ್ನು ಈ ಕೆಳಗಿನ ಸಾಲುಗಳಲ್ಲಿ ಕಾಣಬಹುದು.
ನಾಡಿನ ನರನಾಡಿ ಮರಗಳು ಬೋಳಾದವು, ನದಿ ಕೆರೆಗಳು ಬತ್ತಿ ಬರಡಾದವು, ಜಲಚರಗಳು ಸತ್ತು ಸ್ವರ್ಗ ಸೇರಿದವು, ಸಾವು ನೋವುಗಳು ದಿನವಿಡೀ ಕಂಡವು, ಓ ಗೆಳೆಯರೇ, ಸಹೋದರರೇ ಬನ್ನಿ.. ಎಂದು ಬರಗಾಲದ ಬೇಗೆಯನ್ನು ಬಿಂಬಿಸುತ್ತಾರೆ. ಶರೀಫರ ಬಹುತೇಕ ಕವಿತೆಗಳು ಹೇಗೆಂದರೆ ಮರದೊಳಡಗಿದ ಆಗ್ನಿಯಂತೆ ಎಚ್ಚರಿಕೆಯನ್ನು, ಹೊಸ ಸಂದೇಶವನ್ನು ನೀಡುತ್ತವೆ.
ಇಂದಿನ ಗ್ಯಾರಂಟಿ ಇಲ್ಲದ ಬದುಕಿನ ಬೇಗೆಯನ್ನು ಕವಿಯು "ಶುಭೋದಯದ ಮಂಜು" ಎಂಬ ಕವಿತೆಯಲ್ಲಿ ತಮ್ಮ ಆತಂಕವನ್ನು ಸೆರೆಹಿಡಿದಿದ್ದಾರೆ.

ಹಕ್ಕಿಗಳ ಝೇಂಕಾರ ಕೇಳಿದೆ ಕಣ್ಣಿಗೆ ಕಾಣದೆ,
ಮಾವಿನ ಹೂಗಳು ಕತ್ತರಿಸಿ ಸುಗಂಧ ವಾಸನೆ ಬೀರಿವೆ,
ಮೈಮನ ಭೂಮಿಗೆ ಮಂಜಿನ ತಂಪುಸುತ್ತಿದೆ,
ಉರಿ ಉಗ್ರನಾಶಕಕ್ಕೆ ದೂರ ದೂರ ಸರಿಯುತ್ತಿದೆ. 
ಎಂದು ಒಂದು ಕವಿತೆಯಲ್ಲಿ ಹೇಳಿದರೆ,
ನಮ್ಮನ್ನು ಕಾಯುವ ಬಂದೂಕುಗಳು
ಗಡಿಯಡೆಗೆ ತಿರುಗಿ ಸಿಡಿದು ನಿಲ್ಲಲಿ..

ಎಂಬುದಾಗಿ ಕೋಮುಗಲಭೆ ಎಂಬ ಮತ್ತೊಂದು ಕವಿತೆಯಲ್ಲಿ ಹೇಳುತ್ತಾರೆ. ಜಗತ್ತಿನ ಮಹಾನ್ ಸಾಧಕರ ಸ್ಮರಿಸುತ್ತಾ ಭಾರತ ರತ್ನ ಸಚಿನ್ ಅವರನ್ನು ರನ್ ಮಶೀನ್ ಎಂದು ಹೊಗಳುತ್ತಾರೆ ಕವಿ ಶರೀಫರು.

ಶಿಸ್ತು ಸಜ್ಜನ ದಕ್ಷತೆಯ ವ್ಯಕ್ತಿತ್ವ
ಆಟದಲ್ಲಿ ಪಳಗಿದ ನಾಯಕತ್ವ
ದೇಶ ಕಂಡ ಮಹಾನ್ ದಂತಕಥೆ ಕ್ರೀಡಾಪಟು
ರನ್ ಮಶೀನ್ ನಿಂದ ಸಿಡಿದವು ಶತ ಶತಕಗಳು.

ಧರೆಯ ಪರೆಯೊಳಗೆ ಉದಯಿಸಿದ ಮನೆ, ಸಜ್ಜನ ಸೌಜನ್ಯ ಮೆರೆಯುವ ಮನೆ, ತಟ್ಟೆ ಹಿಟ್ಟನ್ನಿಟ್ಟರು ತಿಂದು ಹೋಗುವ ಬಾಗಿಲಿಲ್ಲದ ಮನೆ, ಕತ್ತಲಲ್ಲಿ ಗೋಡೆ ಗೆಬರಿ ರಾಶಿ ಮಾಡಿ ಹೋಗುವ ಹೆಗ್ಗಣ ಮನೆ... ಹೀಗೆ ಬಡವನ ಮನೆ ಎಂಬ ಕವಿತೆಯಲ್ಲಿ ನುಡಿಯುತ್ತಾರೆ. 

ಮತ್ತೊಂದು ಕವಿತೆ ಯಲ್ಲಿ ಹೀಗೆ ಹೇಳುತ್ತಾರೆ..
ಬೆತ್ತಲೆ ತೆಗೆದೊಗೆದು ಶಿಸ್ತನ್ನು ತುಂಬಿತು
ಕರಾಳತೆ ಕಳಚಿ ಬೆಳಕನ್ನು ಚಿಮ್ಮಿತು
ಸಮಾಜಕ್ಕೆ ಆಧುನಿಕ ಹೊಳಪನ್ನು ತಂದಿತು
ಹೊಸತು ಮೂಡಿಸುತ್ತ ತಿರುಗಿದೆ ನಾಗರಿಕತೆ.

ಶರೀಫ್ ಕವಿಗಳು ತಮ್ಮ ಅನೇಕ ಕವಿತೆಗಳಲ್ಲಿ ಭೂತಾಯಿ, ಪ್ರಕೃತಿ, ಗಿಡ ಮರ ಬೆಟ್ಟ ಇವುಗಳನ್ನು ವರ್ಣಿಸುತ್ತಾರೆ. ಅಂತೆಯೇ ಮನುಷ್ಯನ ದುರಾಡಳಿತ ಹಾಗೂ ದುರ್ಗುಣಗಳನ್ನು, ಇಂದಿನ ಸಾಮಾಜಿಕ ಅಸ್ತವ್ಯಸ್ತಗಳನ್ನು, ಸಾಮಾಜಿಕ ಪಿಡುಗುಗಳನ್ನು ಕೂಡ ತಮ್ಮ ಅನೇಕ ಕವಿತೆಗಳಲ್ಲಿ ವರ್ಣಿಸಿದ್ದಾರೆ. 

ಜೀತ ಜೀತ ಜೀತ
ಎಲ್ಲಿಂದ ಬಂತು ಈ ಭೂತ
ಬಡವರ ಕಣ್ಣೀರಿನ ಅಜ್ಞಾತ
ನರ ಹಿಂಡುವ ರಾಕ್ಷಸ ಭೂತ.. 
ಹೀಗೆ ತಮ್ಮ ಅಳಲನ್ನು ಹೊರ ಹಾಕುತ್ತಾರೆ.ಇಂದಿನ ಪ್ರಸ್ತುತ ಸ್ಥಿತಿಗತಿಯಲ್ಲಿ ಯಾರನ್ನು ನಂಬುವುದು, ಯಾರನ್ನು ಬಿಡುವುದು ಎಂಬುದೇ ಪ್ರಶ್ನೆಯಾಗಿದೆ. ಯಾರು ನಮಗೆ ಆದರ್ಶ ಎಂಬುದನ್ನು ಮನಗಾಣುವುದು ಕಷ್ಟವಾಗಿದೆ. ಸನ್ಯಾಸಿ ಅಂದರೆ ಯಾರು?, ಅವರ ಆದರ್ಶ ತತ್ವಗಳೇನು ಎಂಬುದನ್ನು ತಮ್ಮ ಸನ್ಯಾಸಿ ಎಂಬ ಕವಿತೆಯಲ್ಲಿ ಹೀಗೆ ಹೇಳುತ್ತಾರೆ.

ಸರ್ವಧರ್ಮ ಒಂದೆಂದರು
ಧರ್ಮದ ಒಳ ಮರ್ಮ ತಿಳಿದರು
ಪಾಪ ಪುಣ್ಯ ಜನರಿಗೆ ತೋರಿಸಿದರು
ಸಹಕಾರ ಬಾಳ್ವೆಯಿಂದ ಬಾಳೆಂದರು.

ಚಿತೆ ಸತ್ತ ದೇಹವನ್ನು ಸುಟ್ಟರೆ, ಚಿಂತೆ ಜೀವಂತ ದೇಹವನ್ನು ಸುಡುತ್ತಲೇ ಇರುತ್ತದೆ' ಎಂಬ ಈ ಮಾತು ಶರೀಫ ಅವರ 'ಚಿಂತೆ' ಕವನದಲ್ಲಿ ಮರುಕಳಿಸಿದೆ. 

ಚಿಂತೆ ಚಿಂತೆ ಚಿಂತೆಯಣ್ಣ..
ಚಿಂತೆಯು ಯಾರನ್ನು ಬಿಟ್ಟಿಲ್ಲ ಅಣ್ಣ,
ಚಿಂತೆಯಲ್ಲಿ ಏಕೆ ಅಳುತ್ತಿರುವಿರಿ
ಚಿಂತೆಯ ಸಂತೆಯಲ್ಲಿ ನೆಲಕಟ್ಟುವಿರಿ.. 

ಹೀಗೆ ಚಿಂತೆಯ ಬಗ್ಗೆ ತಮ್ಮ ಕವಿತೆಯನ್ನ ಸಾರುತ್ತಾರೆ.

ಇನ್ನು ಭವ್ಯ ಸಂಸ್ಕೃತಿಯ ಭಾರತ ಗೋಮಾತೆಯನ್ನು ಪೂಜಿಸುವ ಅಪರೂಪದ ದೇಶ. ಸನಾತನ ಸಂಸ್ಕೃತಿಯ ಮನೆಮಾತೆ, ಮನುಕುಲವನ್ನೇ ಉದ್ದರಿಸಿದ ಮಾತೆ ಎಂಬುದಾಗಿ ಗೋವಧೆ ಕವಿತೆಯಲ್ಲಿ ತಮ್ಮ ಸಂಕಟ ತೋಡಿಕೊಳ್ಳುತ್ತಾರೆ. 

ನೊಂದವರ ಹಸಿದವರ ಬಾಳ ಕತ್ತಲಲ್ಲಿ, ಅನ್ನ, ಸ್ನೇಹ ಪ್ರೀತಿಯ, ಬಾಳು ಬೆಳಗಲಿ, ಕ್ರೌರ್ಯ ಕೋಪದ ಕತ್ತಲ ಹೃದಯದಲ್ಲಿ ಶಾಂತಿ ಸಹ ಬಾಳ್ವೆಯ ಬೆಳಕು ಹರಡಲಿ ಎಂಬ ಆಶಯವನ್ನು ಬೆಳಕು ಕವಿತೆಯಲ್ಲಿ ವ್ಯಕ್ತಪಡಿಸುತ್ತಾರೆ. 

ಸಹಜವಾಗಿಯೇ ಗುರುಭಕ್ತಿಯನ್ನು ತಮ್ಮ "ಅಕ್ಷರಶಿಲ್ಪಿ ಶಿಕ್ಷಕರು" ಕವನದಲ್ಲಿ ಪ್ರಕಟಪಡಿಸಿದ್ದಾರೆ. 

ಚಿಂತನೆ ಶೋಧನೆ ಸಾಧನೆ ಮೂಡಿಸಿ
ಸರ್ವಶಕ್ತಿ ಸಹಬಾಳ್ವೆ ಬದುಕಲಿ ತೋರಿಸಿ
ಜ್ಞಾನಕ್ರಾಂತಿ ಪತಾಕೆ ದಿಗಂತದಲ್ಲಿ ಹಾರಿಸಿ
ಹೊಸದನ್ನು ಮೂಡಿಸುವ ರಾಷ್ಟ್ರ ರಕ್ಷಕ ಶಿಕ್ಷಕ..
ಹೀಗೆ ಶಿಕ್ಷಕನ ಗುಣಗಾನ ಶರೀಫ್ ಅವರ ಕವಿತೆಯಲ್ಲಿ ಕಂಡುಬರುತ್ತದೆ. 

ದೇಶ ರಕ್ಷಣೆಗಾಗಿ, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದ ಅನೇಕ ಮಹಾತ್ಮರನ್ನ ನೆನೆಯುತ್ತಾ "ಜೈ ಹಿಂದ್ ನೇತಾಜಿ" ಕವನದ ಮೂಲಕ ಸುಭಾಷ್ ಚಂದ್ರ ಬೋಸ್ ಅವರನ್ನು ಸ್ಮರಿಸಿಕೊಳ್ಳುತ್ತಾರೆ.

ಗುಲಾಮರಂತೆ ನೂರು ವರ್ಷ ಬದುಕು ಬೇಡ
ಸ್ವಾತಂತ್ರ್ಯದ ಒಂದು ವರ್ಷ ಬದುಕು ಲೇಸು
ಎಂಬುದಾಗಿ ಸ್ವಾತಂತ್ರ್ಯದ ಹೋರಾಟದ ಕಿಚ್ಚನ್ನು ಕವಿತೆಯಲ್ಲಿ ಕಟ್ಟಿಕೊಡುತ್ತಾರೆ. ಇತ್ತೀಚಿಗೆ ಅನೇಕ ಕಡೆ ಉಗ್ರರ ಅಟ್ಟಹಾಸ ಕೈಮೀರಿ ನಡೆಯುತ್ತಿದೆ. ಅಂತಹ ಉಗ್ರ ಕೃತ್ಯ ವನ್ನು ತಮ್ಮ ಕವಿತೆಯಲ್ಲಿ ಖಂಡಿಸಿದ್ದಾರೆ. 

ಶಾಂತ ರಾಜ್ಯದಲ್ಲಿ ಕ್ರಾಂತಿ ಹರಡುವ ಉಗ್ರಕಾರರೇ
ಸರ್ವಸ್ವ ಬಯಸುವ ಸರ್ವಾಧಿಕಾರಿಗಳ ಹಿಂಬಾಲಕರೇ
ಜಗದ ಸೌಂದರ್ಯ ನಾಶ ಮಾಡಬೇಡಿ
ಮುಗ್ಧ ಜೀವ ಸಂಪತ್ತು ಕಳೆಯಬೇಡಿ.
ಬದುಕು ಜೋಕಾಲಿಯ ಹಾಗೆ.

ಒಮ್ಮೆ ಮೇಲೆ ಮತ್ತೆ ಕೆಳಗೆ ಬರುತ್ತಲೇ ಇರುತ್ತದೆ. ಸ್ವರ್ಗದ ಸಿರಿ ಸಂಭ್ರಮದ ಗರಿ ಹಬ್ಬದೊಳಗೆ, ಮೇಲೆ ಕೆಳಗೆ ಬಳುಕುತ್ತಿದೆ ಜೋಕಾಲಿ ಎಂದು ಹೇಳುತ್ತಾರೆ ಕವಿ ಶರೀಫರು.

ಜಗತ್ತಿಗೆ ಗುರುವಾಗುತ್ತಿದೆ ಭಾರತ ಎಂಬ ಮಾತು ಇತ್ತೀಚೆಗೆ ನಮಗೆ ಸಂತಸವನ್ನು ತರುತ್ತದೆ. 'ಭಾರತ ನಂ ೧' ಕವಿತೆಯಲ್ಲಿ ಭಾರತದ ಬಗ್ಗೆ ಆಶಾಭಾವ ಹೀಗೆ ವ್ಯಕ್ತಪಡಿಸುತ್ತಾರೆ.

ಕೊಳಗೇರಿ, ಅಜ್ಞಾನಗಿರಿ ನಿರ್ನಾಮವಾಗಲಿ
ಶಿಕ್ಷಣ ಆರೋಗ್ಯ ವಿಜ್ಞಾನ ಗಿರಿ ಬೆಳೆದು ನಿಲ್ಲಲಿ.

ಹಾಗೆಯೇ ಹಳ್ಳಿಗಳಲ್ಲಿ ಶಿಕ್ಷಣವಿಲ್ಲದೆ ಬಡತನದಲ್ಲಿ ಕೆಲವರು ಇದ್ದರೆ, ಉಳ್ಳವರ ದರ್ಪದಿಂದ ದಾಸ್ಯತನದಲ್ಲಿ ಹಲವರಿದ್ದಾರೆ. ಅಂತಹ ಹಳ್ಳಿ ದರ್ಶನ ಕವಿತೆಯಲ್ಲಿ ಕವಿ ತಮ್ಮ ಆಶಾಭಾವನೆಯನ್ನು ಹೀಗೆ ತೋಡಿಕೊಳ್ಳುತ್ತಾರೆ..

ತಿಳಿದವರ ಆಟ ಸ್ವಾರ್ಥಕ್ಕಾಗಿ ನಡೆದಿದೆ
ತಿಳಿಯದವರನ್ನು ಶೋಷಣೆಗೆ ದೂಕಿದೆ
ಕಡು ಬಡತನದ ಗುಂಡಿಗೆ ಕುಸಿದು ಬಿದ್ದಿದೆ
ಕೈಹಿಡಿದು ಮೇಲೆತ್ತುವರು ಎಲ್ಲಿದ್ದೀರಿ  ಬನ್ನಿ.

ತಮ್ಮ ಅನೇಕ ಕವಿತೆಗಳಲ್ಲಿ ಸಾಮಾಜಿಕ ಪಿಡುಗುಗಳು ಹಾಗೂ ವ್ಯವಸ್ಥೆಯ ವಿರುದ್ಧದ ಕೂಗನ್ನು ವ್ಯಕ್ತಪಡಿಸಿದ ಕವಿ ಮಿತ್ರ ಶರೀಫರು ಅಪ್ಪ ಮತ್ತು ಅಮ್ಮನ ಗುಣಗಾನ ಮಾಡುವ ಮೂಲಕ ತಂದೆ ತಾಯಿಗೆ ಋಣಿಯಾಗಿದ್ದಾರೆ. 

ಕಾಣದ ಕೈಯಂತೆ ಕೆಲಸ ಮಾಡಿದ್ದಾನೆ 
ಮಮತೆ ಪ್ರೀತಿ ಆದರ್ಶ ತುಂಬಿದ್ದಾನೆ ಎಂದು ಅಪ್ಪನನ್ನು ಸ್ಮರಿಸಿಕೊಂಡರೆ, 
ತಾಯಿ ಪ್ರೀತಿ ಭೂಮಿಗೆ ಸಮ 
ತಾಯಿ,ನಿನ್ನ ಋಣ ದೇವರಿಗೆ ಸಮ ಎಂದು ಅವ್ವನನ್ನು ಕಂಡಿದ್ದಾರೆ. 

ಜಗತ್ತಿಗೆ ಮಾರಕವಾಗಿ ಕಾಡಿದ ಕೊರೊನ ವೈರಸ್, ಹಾಗೆ ಕಾಡುತ್ತಿರುವ ಗ್ಯಾಂಗ್ ರೇಪ್ ಇವುಗಳ ಬಗ್ಗೆ ಕವಿಗೆ ಅಸಮಾಧಾನವಿದ್ದು ತಮ್ಮ ಕವಿತೆಯಲ್ಲಿ ವ್ಯಕ್ತವಾಗಿದೆ. 

ಗಡಿ ಕಾಯುವ ಸೈನಿಕರಿಗೆ ಧೈರ್ಯ ತುಂಬುವ ಶರೀಫರ ಸಾಲುಗಳು ಮನಮಿಡಿಯುತ್ತವೆ. 
ಪಾಕ್ ಚೀನಾ ಆಕ್ರಮಣಕ್ಕೆ ಆತ್ಮಸ್ಥೈರ್ಯ ಕುಂದದಿರಲಿ
ದಾಳಿಗೆ ಪ್ರತಿ ದಾಳಿಯ ಆತ್ಮಸ್ಥೈರ್ಯ ಹೆಚ್ಚಲಿ
ಜನ ಮನ ಧನ ಭೂಮಿ ನಿಮ್ಮ ಹಿಂದಿದೆ
ಧೈರ್ಯಗುಂದದಿರಿ ಸೈನಿಕರೇ ಶತ್ರು ಸೈನ್ಯ ಹಿಮ್ಮೆಟ್ಟಲಿ

ಎಂಬುದಾಗಿ ಕರೆ ನೀಡಿದರೆ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರನ್ನು ಕುರಿತು ಅಂದಿನ ಗಾಂಧಿ ತತ್ವಗಳು ಇಂದು ಹೇಗೆ ಪ್ರಸ್ತುತ ಎಂಬುದನ್ನು ಹೇಳುತ್ತಾರೆ. ಒಂದು ಕಪಾಳಕ್ಕೆ ಹೊಡೆದರೆ ಮತ್ತೊಂದು ಕಪಾಳ ತೋರಿಸು ಎಂಬ ಶಾಂತಿ ಸಂದೇಶ ಸಾರಿದ ಅಂದಿನ ಗಾಂಧಿ ಇಂದು ಅದೇ ಶಾಂತಿಗಾಗಿ ನವ ಅವತಾರದಲ್ಲಿ ಹುಟ್ಟಿ ಬಾ ಎಂಬುದಾಗಿ ಕರೆ ನೀಡುತ್ತಾರೆ.

ನಿನ್ನ ನಾಡಿನಲ್ಲಿ ಉಗ್ರ ನರ ಬೆದರಿಕೆ ಎದ್ದಿದೆ..
ಶಾಂತಿಗಾಗಿ ನಾವು ಅವತಾರದಲ್ಲಿ ಹುಟ್ಟಿ ಬಾ ಗಾಂಧಿ.

ಎಂಬುದಾಗಿ ಶಾಂತಿದೂತನ ಹೊಸ ಹುಟ್ಟನ್ನು ಬೇಡುತ್ತಾರೆ. ಹಾಗೆಯೇ ಭಾರತದ ಮಾಜಿ ಪ್ರಧಾನಿ, ದೇಶಪ್ರೇಮಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರನ್ನು , ವರಲೋಕದ ಸಂಗೀತ ಮಾಂತ್ರಿಕ ಎಸ್ ಪಿ ಬಾಲಸುಬ್ರಮಣ್ಯ ಅವರನ್ನು "ಕಳಚಿದ ಕನ್ನಡ ರಾಗ ರತ್ನ" ಕವಿತೆಯಲ್ಲಿ ಗುಣಗಾನ ಮಾಡುತ್ತಾರೆ.

ಇಂದಿನ ರಾಜಕೀಯ ದೊಂಬರಾಟದಿಂದ ಜನರ ಪ್ರಗತಿ ಏನಾಗಿದೆ ಎಂಬುದನ್ನು ತಿಳಿಯುತ್ತಾ "ಹಳ್ಳಿ ಸರಕಾರ" ಎಂಬ ಕವಿತೆಯಲ್ಲಿ ಹೀಗೆ ಹೇಳುತ್ತಾರೆ..
ದಿಲ್ಲಿಯಾಗಲಿ ನಮ್ಮೂರ ಹಳ್ಳಿ
ದಕ್ಷ ಸರಕಾರ ರಚಿಸಲಿ ಮತದಾರರು ಮರಳಿ
ಗುಡಿಸಲ ಮನೆಯ ಹಳ್ಳಿಗಳು ಅರಮನೆಯಾಗಲಿ
ಸರ್ವಶಕ್ತಿಯಾಗಿ ಮಿಂಚಲಿ ನಮ್ಮೂರಹಳ್ಳಿ.

ಪ್ರೀತಿ ಇಲ್ಲದ ಮೇಲೆ ಹೂವು ಅರಳಿತು ಹೇಗೆ ಎಂಬ ಜಿಎಸ್ ಶಿವರುದ್ರಪ್ಪನವರ ಕವಿತೆಯಂತೆ ದೇವರು ಹಾಗೂ ಮಂದಿರ ನಮ್ಮ ಬದುಕಿಗೆ ಆದರ್ಶ ಸಾರ್ಥಕ ಆಗಬೇಕು ಎಂಬುದನ್ನು ಶರೀಫ್ ಕವಿ ಮಿತ್ರ ಹೀಗೆ ಹೇಳುತ್ತಾರೆ..

ಸಮಾನತೆಯ ಇಟ್ಟಿಗೆ ಜೋಡಿಸಬೇಕು
ಸಹೋದರತೆಯ ಬೆಸುಗೆ ಹಾಕಬೇಕು
ನೊಂದವರ ನೆರಳಾಗಲು ಮಾಳಿಗೆ ಮಾಡಬೇಕು
ಮಂದಿರ ಕಟ್ಟಬೇಕು ಸರ್ವ ಆದರ್ಶವಾಗಿರಬೇಕು.
ಆಧುನಿಕ ವಿಲಾಸಿ ಬದುಕಿನಲ್ಲಿ ಹಿಂದಿನ ಕಾಲದ ಹಳ್ಳಿಗಳ ಸೊಗಡು ಹಾಗೂ ಅವಿಭಕ್ತ ಕುಟುಂಬಗಳ ಪ್ರೀತಿ-ವಿಶ್ವಾಸಗಳು ಇಂದು ಮರೆಮಾಚಿವೆ ಎಂಬುದನ್ನು ತಮ್ಮ "ಒಗ್ಗಟ್ಟು" ಕವಿತೆಯಲ್ಲಿ ವ್ಯಕ್ತಪಡಿಸುತ್ತಾರೆ..

ತಂದೆ ಒಂದು ಕಡೆ, ತಾಯಿ ಒಂದು ಕಡೆ
ದೊಡ್ಡಮನೆ ಮನಸ್ಸು ಒಡೆದು ಚಿಕ್ಕದಾಗಿದೆ
ಒಗ್ಗಟ್ಟಿನಲ್ಲಿ ಇಲ್ಲದ ಬಲ ಗೌರವ ಇಲ್ಲದಾಗಿದೆ
ಅವಿಭಕ್ತ ಕುಟುಂಬ ಇತಿಹಾಸ ಪುಟ ಸೇರಿದೆ.

ಇನ್ನು "ನಾಲ್ಕನೇ ಅಂಗ" ಎಂಬ ಕವಿತೆಯಲ್ಲಿ ನ್ಯಾಯ ಸಮ್ಮತ ಸುದ್ದಿ ಸಮಾಚಾರವನ್ನು ನಿರೀಕ್ಷಿಸುತ್ತಾರೆ.

ಪೆನ್ನು ಎಂಬ ಅಕ್ಷರ ಕೋವಿ ಹಿಡಿದು
ಜಗದ ಸುದ್ದಿ ಕಣ್ಣ ಮುಂದೆ ತಂದು
ತಪ್ಪು ಒಪ್ಪು ನ್ಯಾಯ ಬಯಲಿಗೆಳೆದು
ಸರಿ ದಾರಿಗೆ ತರುತ್ತಿದೆ ಪತ್ರಿಕಾರಂಗ.. 
ಎಂಬ ಆಶಾಭಾವ ಹೂಡಿದ್ದಾರೆ. ಭವ್ಯ ಭಾರತದ ಸಂಸ್ಕೃತಿಯನ್ನು ಮರೆತು ಪಾಶ್ಚಿಮಾತ್ಯ ಸಂಸ್ಕೃತಿಯತ್ತ ವಾಲುತ್ತಿರುವ ಇಂದಿನ ಯುವ ಪೀಳಿಗೆಗೆ ಯುವ ಕವಿಮಿತ್ರ "ಸಗ್ಗದ ಸಿರಿ ಸಂಕ್ರಾಂತಿ" ಕವಿತೆಯಲ್ಲಿ ಹೀಗೆ ಬಣ್ಣಿಸುತ್ತಾರೆ..

ಎಳ್ಳುಬೆಲ್ಲ ಕಬ್ಬುಸಿಹಿ ಒಳ್ಳೆಯ ಮನದ ಮಾತು
ರೈತನ ಕಣಜ ಫಸಲಿನ ರಾಶಿ ಕುಣಿಯುವ ಹೊತ್ತು
ಬಲಭೀಮ ಬಸವ ಹೋರಿ ಅಗ್ನಿ ಜಿಗಿಯುವ ಗತ್ತು
ಬಣ್ಣ ಬಣ್ಣದ ಗಾಳಿಪಟದಲ್ಲಿ ಮಿಂದೆದ್ದ ಸಂಕ್ರಾಂತಿ.

ಪ್ರತಿಯೊಬ್ಬ ಕವಿ ಹೃದಯವು ಪರಿಸರವನ್ನು ಉಳಿಸುವ ಜಾಗೃತ ಬರಹಗಳನ್ನು ಬರೆಯುತ್ತಲೇ ಇರುತ್ತದೆ. ಅಂತಯೇ ನಮ್ಮ ಚಿಗಳ್ಳಿ ಶರೀಫ್ ಅವರು "ಕಾಡು ಬೆಳೆಸೋಣ" ಕವಿತೆಯ ಮೂಲಕ ಪ್ರಕೃತಿ ಪ್ರೇಮ ಮೆರೆದಿದ್ದಾರೆ, ಅದರ ಜೊತೆಯಲ್ಲಿ ಗಡಿ ಖ್ಯಾತೆ ತೆಗೆಯುವ ಶತ್ರು ದೇಶಗಳ ಬಗ್ಗೆ ಕಠೋರ ನಿಲುವನ್ನು ಕೂಡ ಸೈನಿಕರ ಮುಖೇನ "ಅಶಾಂತ ಗಡಿ" ಕವಿತೆಯಲ್ಲಿ ಸಾರಿದ್ದಾರೆ. ಸ್ವಚ್ಛತೆ ಹಾಗೂ ನೈರ್ಮಲ್ಯ ಆರೋಗ್ಯದ ಗುಟ್ಟು. "ಶೌಚಾಲಯ ಕ್ರಾಂತಿ" ಎಂಬ ಕವಿತೆಯ ಮೂಲಕ ಮನೆ ಮನೆಯಲ್ಲೂ ಶೌಚಾಲಯ ಕಟ್ಟುವ ಮೂಲಕ ಶಿಸ್ತುಬದ್ಧ ಜೀವನಕ್ಕೆ ಕರೆ ನೀಡುತ್ತಾರೆ. 

ಹಲಿಗೆಯ ಬಡಿತ ಮಕ್ಕಳ ಕುಣಿತ
ಕೈ ಕೈಯಲ್ಲಿ ಬಣ್ಣ ಬಣ್ಣದ ಚಿತ್ತಾರ
ಗುರುತಿಸದ ಮೈ ಮುಖದ ಆಕಾರ
ಬಣ್ಣದಲ್ಲಿ ಮಿಂದೆದ್ದು ನಲಿದಿದೆ ಬಣ್ಣದ ಹೋಳಿ..
ಹೀಗೆ ಹೋಳಿ ಹಬ್ಬದ ಮಹತ್ವವನ್ನು ತಮ್ಮ ಕವಿತೆಯೊಂದರಲ್ಲಿ ಚಿತ್ರಿಸುತ್ತಾರೆ.

ಮನುಷ್ಯನ ಬದುಕು ನಾಲ್ಕು ದಿನದ ಸಂತೆ. ಇರುವವರೆಗೆ ಸಾರ್ಥಕ ಜೀವನ ಮಾಡಿ ಪಾತ್ರ ಮುಗಿದ ಕೂಡಲೇ ಹೊರಡಬೇಕು. ಆತ್ಮ ದೇಹ ತ್ಯಜಿಸಿದ ಮೇಲೆ ದೇಹದ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಮಾನವೀಯತೆ ಮೆರೆಯಬೇಕು ಎಂಬ ಮೌಲ್ಯವನ್ನು ಶರೀಫರು "ದೃಷ್ಟಿ ದಾನ" ಕವಿತೆಯಲ್ಲಿ ಹೀಗೆ ಪ್ರಕಟಿಸಿದ್ದಾರೆ...

ಬೆಂಕಿಯಲ್ಲಿ ಸುಟ್ಟು ಮಣ್ಣಲ್ಲಿ ಹೂತು ನಾಶವಾಗದಿರಲಿ
ಜೀವವಿದ್ದು ಬದುಕು ಕತ್ತಲಾದವರಿಗೆ ದೃಷ್ಟಿ ನೀಡಲಿ
ಆಸರೆಯಾಗಲಿ ದೃಷ್ಟಿ ದಾನ ಕರಾಳ ಬದುಕಿಗೆ ಜೀವ ತುಂಬಲಿ
ದೃಷ್ಟಿ ಜಗದ ಭಾಗ್ಯವಾಗಿದೆ ಕಣ್ಣು ಮತ್ತೊಬ್ಬರಿಗೆ ಕಣ್ಣಾಗಲಿ.

ಶರೀಫ ಅವರು ತಮ್ಮ ಕವಿತೆಗಳನ್ನು ಕೇವಲ ಕಾಲ್ಪನಿಕತೆಗೆ ಮೀಸಲಿಡದೆ ವಾಸ್ತವತೆ ಹಾಗೂ ಸಮಾಜದ ಓರೆ ಕೋರೆಗಳನ್ನು ತಿದ್ದುವಲ್ಲಿ ಬಳಸಿದ್ದಾರೆ. ತಾರೆಗಳನ್ನು ನೋಡುತ್ತಾ ನಾನು ತಾರೆಯಾಗಬೇಕು, ಗೂಟದ ಕಾರು, ಮಂತ್ರಿ ಬೆಂಗಾವಲು ಪಡೆ ನೋಡಿದೆ, ರಾಜನ ಗತ್ತು ಗಮ್ಮತ್ತಿನಲ್ಲಿರಬೇಕು ಅನಿಸಿತು ಎಂದು ತಮ್ಮ ಕವಿತೆಯ ಒಳ ಗುಟ್ಟನ್ನು ಬಡವ ಬಲ್ಲಿದನ ಸ್ಥಿತಿಯನ್ನು ವರ್ಣಿಸುವಲ್ಲಿ ಹೊರಹಾಕಿದ್ದಾರೆ. 

ಸ್ವತಹ ಗ್ರಾಮ ಪಂಚಾಯಿತಿ ನೌಕರನಾಗಿರುವ ಗೆಳೆಯ ಪಂಚಾಯತ್ ರಾಜ್ ವ್ಯವಸ್ಥೆಯ ಬಗ್ಗೆ ಬರೆದಿದ್ದಾರೆ.  ಪ್ರೀತಿ ಇಲ್ಲದ ಮೇಲೆ ಹೂವು ಅರಳಿತು ಹೇಗೆ ಎಂಬ ಕವಿವಾಣಿಯಂತೆ ಶರೀಫ್ ಅವರು "ನನ್ನಾಕಿ" ಕವಿತೆಯಲ್ಲಿ ತನ್ನ ಸಂಗಾತಿಯ ಸಾಂಗತ್ಯ ಹಾಗೂ ಹೊಂದಾಣಿಕೆಯನ್ನು ವಿವರಿಸುತ್ತಾ ಶ್ರೀಮತಿಯ ದೊಡ್ಡತನವನ್ನು ಬಿಂಬಿಸಿದ್ದಾರೆ. ಅದೇ ರೀತಿ ನಿರುದ್ಯೋಗಿಗಳ ನರಳಾಟ, ರಕ್ತ ಸಿಕ್ತ ಕಾಶ್ಮೀರ, ಕ್ರಾಂತಿ ಮಣ್ಣಿನಿಂದ ಬಂದವರು, ಅಗೋಚರ, ಭಗ್ನ ಚೂರಿ ಮುಂತಾದ ಕವಿತೆಗಳಲ್ಲಿ ತಮ್ಮ ಚಿಂತನೆಯನ್ನು ಬಿಂಬಿಸಿದ್ದಾರೆ. 

"ಯಾರಿಗೆ ಬೇಕು ಯುದ್ಧ" ಎಂಬ ಕವಿತೆಯಲ್ಲಿ ಶಾಂತಿಯ ಸಂದೇಶ ಸಾರಲು ಪ್ರಯತ್ನಿಸಿದ್ದಾರೆ. 
ಬೆಳೆಯುವ ಅರಳುವ ಕಂದಮ್ಮಗಳ ಮೈಮೇಲೆ ರಕ್ತ ಹರಿದಿದೆ
ಮಹಿಳೆ ವೃದ್ಧ ಮಕ್ಕಳು ಜನರ ಹಸಿವು ಗಗನ ಮುಟ್ಟಿದೆ
ಯುದ್ಧದಾಹಿ, ಆಕ್ರಮಣಶೀಲ, ರಾಜಕೀಯ ಶತ್ರುತ್ವ ಗರಿಗೆದರಿದೆ
ರಕ್ತ ಕಾಲುವೆ ಹರಿಯುತ್ತಿವೆ ನಿಲ್ಲಿಸಿ ಯುದ್ಧ ಯಾರಿಗೆ ಬೇಕು ?

ಹೀಗೆ ತಮ್ಮ ಅಳಲನ್ನು ವ್ಯಕ್ತಪಡಿಸುತ್ತಾರೆ.  ಒಟ್ಟಾರೆ ವಾಸ್ತವವನ್ನು ಮರೆಯದೆ, ಕಲ್ಪನಾ ವಿಲಾಸವನ್ನು ಮರೆಮಾಚದೆ, ಜಗದ ಹಿತವನ್ನು ಮೇಳೈಸಿ ತಮ್ಮ ಕವಿತೆಗಳನ್ನು ಪ್ರಕಟಪಡಿಸುವ ಪ್ರಯತ್ನವನ್ನು ಶರೀಫ್ ಅವರು "ಕಿಚ್ಚು ಹಚ್ಚುವ ಕವಿತೆಗಳು" ಸಂಕಲನದಲ್ಲಿ ಮಾಡಿದ್ದಾರೆ
"ಕಾವ್ಯ ಎಂದರೆ ಕಟ್ಟುವುದಲ್ಲ, ಚಿಂತನೆಯನ್ನು ಬಿತ್ತುವುದು. ಅಂತರಂಗದ ಜ್ಞಾನ ಗರ್ಭದಲ್ಲಿ ಹುಟ್ಟುವಂಥದ್ದು. ಕಟ್ಟಿದ್ದು ಕಾಲಕ್ರಮೇಣ ಬಿದ್ದುಹೋಗುತ್ತದೆ, ಆದರೆ ಹುಟ್ಟಿದ ಕಾವ್ಯ ಕಾಲದ ಕರಪಿಡಿದು ಅದರೊಟ್ಟಿಗೆ ಬೆಳೆಯುತ್ತಾ ಸಾಗುತ್ತದೆ." 

ಮನುಷ್ಯರೆಲ್ಲರಿಗೂ ಭಾವನೆಗಳಿರುತ್ತವೆ, ಆದರೆ ಭಾವನೆಗಳನ್ನು ಹೊಂದಿರುವ ಎಲ್ಲರೂ ಕವಿಯಾಗಲಾರರು. ಕಾವ್ಯ ಎಂಬುದು ಸೃಜನಶೀಲ ಚಿಂತನೆಯ ಆಯಾಮ. ಅಂತರ್ಗತ ಮಂಥನದ ಅಭಿವ್ಯಕ್ತಿ. ಕವಿಯಾದವನಿಗೆ ತಾನು ಕವಿತೆ ರಚಿಸಲು ಬಳಸುವ ಭಾಷೆಯ ಮೇಲಿನ ಹಿಡಿತ ಮತ್ತು ಶಬ್ಧ ಭಂಡಾರ ಬಹಳ ಮುಖ್ಯವಾಗುತ್ತದೆ. ಆ ಪ್ರಯತ್ನವನ್ನು ಇನ್ನಷ್ಟು ಗಟ್ಟಿಯಾಗಿ ನಿರ್ವಹಿಸಲಿ, ಶರೀಫರ ಕಾವ್ಯ ಸರ್ವರ ಕಾವ್ಯವಾಗಲಿ ಎಂದು ಶುಭ ಹಾರೈಸುತ್ತಾ, ಯುವ  ಕವಿಮಿತ್ರ ಶರೀಫ ಚಿಗಳ್ಳಿ ಅವರ “ಕಿಚ್ಚು ಹಚ್ಚುವ ಕವಿತೆಗಳು” ಓದುಗರ ಮನದಲ್ಲಿ ಹೊಸ ಚಿಂತನೆಯೆಂಬ ಕಿಚ್ಚನ್ನು ಜಾಗೃತಗೊಳಿಸಲಿ ಎಂದು ಆಶಿಸುತ್ತಾ, ಜಗದ ಜಂಜಡಗಳಿಗೆ ಜಾಗೃತ ಪ್ರಜ್ಞೆ ಶರೀಫ ಅವರ ಬರಹ ಆಗಲೆಂದು ಬಯಸುತ್ತಾ ಮುನ್ನುಡಿ ನುಡಿಯುತ್ತಿದ್ದೇನೆ.

MORE FEATURES

ಅಂಬೇಡ್ಕರ್ ವಿದ್ಯಾವಂತ ಜನರ ಕೈಯಲ್ಲಿ ಮೋಜಿನ ವಸ್ತುವಾಗಿ ಕಾಣಿಸಿಕೊಳ್ಳುತ್ತಿದ್ದಾರೆ..

07-12-2025 ಬೆಂಗಳೂರು

"ದಲಿತರು ಒಳಪಂಗಡಗಳ ಭಾವನಾತ್ಮಕ ಸೆಳವಿಗೆ ಸಿಕ್ಕು ಮೂಲ ಸಿದ್ದಾಂತದಿಂದ ದೂರವಾಗುತ್ತಿದ್ದಾರೆ. ಇಂದು ಅಂಬೇಡ್ಕರ್ ವಿ...

BlrLitFest 2025: ಸಾಹಿತ್ಯಾಸಕ್ತರ ಮಹಾಸಂಗಮ!

06-12-2025 ಬೆಂಗಳೂರು

ಬೆಂಗಳೂರು : ಬೆಂಗಳೂರು ಸಾಹಿತ್ಯ ಉತ್ಸವ (BlrLitFest)ವು ಪ್ರತಿ ವರ್ಷ ನಡೆಯುವ ಅತ್ಯಂತ ನಿರೀಕ್ಷಿತ ಸಾಂಸ್ಕೃತಿಕ ಕಾರ್ಯ...

ಮತ್ತೆ ಮತ್ತೆ ಕಾಡುವ ಕಥೆಗಳು

06-12-2025 ಬೆಂಗಳೂರು

ಮಗಳ ನೋವನ್ನು ಕಂಡು ಹೆತ್ತವರು ಜರ್ಜರಿತರಾಗುವ ದೃಶ್ಯವನ್ನು ಹಾಗೂ ಅಪ್ಪ ಅಮ್ಮನ ಧಾವಂತದ ಬದುಕಿನಲ್ಲಿ ಮಕ್ಕಳು ಬಡವಾಗುವ ಸ...