ಮಗಳ ನೋವನ್ನು ಕಂಡು ಹೆತ್ತವರು ಜರ್ಜರಿತರಾಗುವ ದೃಶ್ಯವನ್ನು ಹಾಗೂ ಅಪ್ಪ ಅಮ್ಮನ ಧಾವಂತದ ಬದುಕಿನಲ್ಲಿ ಮಕ್ಕಳು ಬಡವಾಗುವ ಸನ್ನಿವೇಶವನ್ನು, ಆ ಮಗುವಿನ ಮನಸ್ಥಿತಿಯನ್ನು ಲೇಖಕಿಯು ಮನಕರಗುವ ಹಾಗೆ ಚಿತ್ರಿಸಿದ್ದಾರೆ. ಪುಸ್ತಕ ಓದಿ ಕೆಳಗಿಟ್ಟ ಮೇಲೂ ಈ ಎರಡು ಕಥೆಗಳು ಓದುಗರನ್ನು ಕಾಡುತ್ತದೆ'. ಎನ್ನುತ್ತಾರೆ ಲೇಖಕಿ ಚೇತನ ಭಾರ್ಗವ. ಅವರು ಬರಹಗಾರರಾದ ಚಿತ್ರಲೇಖ ಅವರು ಬರೆದ 'ನಿನ್ನ ಕಣ್ಣೀರು ನನ್ನೆದೆಯ ನೆತ್ತರು' ಮತ್ತು 'ಮಮತೆಯ ಮಡಿಲು' ಕೃತಿಗೆ ಬರೆದ ಅನಿಸಿಕೆ ಹೀಗಿದೆ ;
'ನಿನ್ನ ಕಣ್ಣೀರು ನನ್ನೆದೆಯ ನೆತ್ತರು' ಮತ್ತು 'ಮಮತೆಯ ಮಡಿಲು' ಎಂಬ ಎರಡು ಸಾಮಾಜಿಕ ಕಥೆ ಓದುಗನ ಹೃದಯ ಸ್ಪರ್ಶಿಸುತ್ತದೆ. ಈ ಕಥೆಯನ್ನು ಓದುತ್ತಿದ್ದರೆ ಓದುಗನಿಗೆ ಅರಿಯದೆ ಕಣ್ಣುಗಳು ತೇವವಾಗುತ್ತದೆ. ಲೇಖಕಿಯು ಒಬ್ಬ ಅಸಹಾಯಕ ತಂದೆಯ ಸುತ್ತಾ 'ನಿನ್ನ ಕಣ್ಣೀರು ನನ್ನೆದೆಯ ನೆತ್ತರು' ಕಥೆಯನ್ನು ಹೆಣೆದಿದ್ದಾರೆ. ಈ ಕಥೆಯ ಆದಿಭಾಗ ನಿಜ ಸಂಗತಿಯ ಆಧಾರ, ಅಂತ್ಯಭಾಗ ನನ್ನ ಕಲ್ಪನೆ ಎಂದು ಲೇಖಕಿಯೇ ಸ್ವತಃ ಹೇಳಿದ್ದಾರೆ.
90ರ ದಶಕದಲ್ಲಿ ವರದಕ್ಷಿಣೆ ಎಂಬುದು ಸಮಾಜದಲ್ಲಿ ಅತಿ ದೊಡ್ಡ ಪಿಡುಗಾಗಿತ್ತು. ಈಗಲೂ ಅಲ್ಲೊಂದು ಇಲ್ಲೊಂದು ಪ್ರಕರಣವನ್ನು ನಾವು ನೋಡಬಹುದಾಗಿದೆ. ಹೆಣ್ಣು ಮಗು ಹುಟ್ಟಿದರೆ ಆ ಕಾಲದಲ್ಲಿ ಜನ ಮೂಗು ಮುರಿಯುತ್ತಿದ್ದರು. ಹೆಣ್ಣು ಬ್ರೂಣ ಹತ್ಯೆಯು ನಡೆಯುತ್ತಿತ್ತು.
ಈ ಕಥೆಯ ಕಥಾನಾಯಕನಾದ ಗಜೇಂದ್ರನಾಥನು ಸಾಧಾರಣ ಗುಮಾಸ್ತ. ಆತನದ್ದು ದೊಡ್ಡ ಸಂಸಾರ, ಹಿರಿಯ ಮಗನಾಗಿದ್ದರಿಂದ ಅವನ ಹೆಗಲ ಮೇಲೆ ಸಂಸಾರದ ಜವಾಬ್ದಾರಿಯ ಹೊರೆ ಬಿದ್ದಿತ್ತು. ಭವಾನಿ ಆತನಿಗೆ ಅನುರೂಪವಾದ ಹೆಂಡತಿ. ಗಂಡನ ಕಷ್ಟ ಸುಖ ಅರಿತು ಅವನೊಡನೆ ಹೆಜ್ಜೆ ಹಾಕುತ್ತಿದ್ದಳು. ಇವರಿಬ್ಬರಿಗೆ ಒಬ್ಬಳೇ ಮಗಳು ಬಿಂದು. ಅವಳಿಗೆ 12 ವರ್ಷ ತುಂಬುತ್ತಿದ್ದಾಗ ಗಜೇಂದ್ರನಾಥರಿಗೆ ಒಂದು ಹಂತದ ಜವಾಬ್ದಾರಿ ಕಳೆದಿತ್ತು. ಮಗಳನ್ನು ಅನುಕೂಲಸ್ಥ ಮನೆಗೆ ವಿವಾಹ ಮಾಡಿ ಕೊಡಬೇಕು, ಆಕೆ ತಮ್ಮ ರೀತಿ ಬಡತನದ ಕಷ್ಟ ಅನುಭವಿಸದೆ, ಒಳ್ಳೆಯ ಮನೆ ಸೇರಿ ಚೆನ್ನಾಗಿ ಇರಬೇಕೆಂಬುದು ಆ ದಂಪತಿಗಳ ಗುರಿಯಾಗಿತ್ತು. ಆದ್ದರಿಂದ ಅವಳ ವಿವಾಹದ ಸಲುವಾಗಿ ಈಗಿನಿಂದಲೇ ಹಣವನ್ನು ಕೂಡಿಡುತ್ತಿದ್ದರು.
ಬಿಂದು ಹತ್ತನೇ ತರಗತಿ ಮುಗಿಸಿದ ನಂತರ "ಮುಂದೆ ಓದಿದರೆ ಮದುವೆ ಮಾಡುವುದು ನಮ್ಮಂತ ಅಸಹಾಯಕ ಬಡವರಿಗೆ ಕಷ್ಟವೆಂದು" ಅವಳ ವಿದ್ಯಾಭ್ಯಾಸವನ್ನು ಹೆತ್ತವರು ಮೊಟಕುಗಳಿಸಿದರು. ಆಕೆಗೆ 18 ತುಂಬತ್ತಿದ್ದಂತೆ ಬಿಕಾಂ ಪದವಿ ಹೊಂದಿದ ಫ್ಯಾಕ್ಟರಿ ಒಂದರಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ ದೀಪಕ್ ಎಂಬುವ ವರನೊಂದಿಗೆ, ಅವರು ಕೇಳಿದಷ್ಟು, ತಮ್ಮ ಶಕ್ತಿ ಮೀರಿ ವರದಕ್ಷಿಣೆ ವರೋಪಚಾರ ಮಾಡಿ, ವಿವಾಹವನ್ನು ಮಾಡಿಕೊಟ್ಟರು.
ಗಯ್ಯಾಳಿ ಅತ್ತೆ, ಪರಮಲೋಭಿ ಮಾವ, ಶೂರ್ಪನಕಿಯನ್ನು ನೆನಪಿಸುವ ನಾದಿನಿಯರು, ಅಮ್ಮನ ತಾಳಕ್ಕೆ ಕುಣಿಯುವ ಅಂಜುಬುರುಕ ಗಂಡ ಇವರೊಂದಿಗೆಲ್ಲ ಹೆಣಗಾಡಿ, ಎಲ್ಲಾ ನೋವನ್ನು ಸಹಿಸಿಕೊಂಡು ಗಾಣದ ಎತ್ತಿನಂತೆ ಬಿಂದು ಆ ಮನೆಯಲ್ಲಿ ದುಡಿಯುತ್ತಿದ್ದಳು. ದೀಪಕ್ ಹೆತ್ತವರ ಸ್ವಭಾವವನ್ನು ಪ್ರತಿಭಟಿಸದಿದ್ದರೂ, ಹೆಂಡತಿಯನ್ನು ತುಂಬಾ ಪ್ರೀತಿಸುತ್ತಿದ್ದನು. ಅದು ಅವಳಿಗೆ ಮರುಭೂಮಿಯಲ್ಲಿ ನೀರಿನ ಸೆಲೆ ಸಿಕ್ಕಂತಾಗಿ, ತನ್ನ ನೋವನ್ನು ಮರೆಯುತ್ತಿದ್ದಳು.
ಬಿಂದುವಿನ ತಂದೆ ಮಗಳ ಮದುವೆಗಾಗಿ ವಾಲೆಂಟರಿ ರಿಟೈರ್ಮೆಂಟನ್ನು ತೆಗೆದುಕೊಂಡಿದ್ದರು. ಮದುವೆಯ ಸಾಲ ತೀರಿಸಲು ಮನೆಯನ್ನು ಸ್ಥಳಾಂತರಿಸಿದರು. ತಾವು ಇಷ್ಟೆಲ್ಲ ಕಷ್ಟ ಪಟ್ಟರು ಏನು ಪ್ರಯೋಜನವಾಗಲಿಲ್ಲ ಮಗಳು ಕಷ್ಟ ಪಡುತ್ತಿದ್ದಾಳೆ ಎನ್ನುವ ಸಂಕಟ ಅವರಿಗೆ ಬಾಧಿಸುತ್ತಿತ್ತು.
ಬಿಂದು ನರಕ ಯಾತನೆ ಅನುಭವಿಸಿ ಮಗುವನ್ನು ಪತಿಯ ಕೈ ಮೇಲಿಟ್ಟು ಇಹಲೋಕ ತ್ಯಜಿಸಿದಳು. ಇದರಿಂದ ಗಜೇಂದ್ರ ನಾಥರಿಗೆ ಆಘಾತವಾಯಿತು. ಅಂದಿನಿಂದ ಅವರ ವರ್ತನೆಯೇ ಬದಲಾಗತೊಡಗಿತು. ಇದೇ ಕೊರಗಿನಲ್ಲಿ ಭವಾನಿಯವರು ಹಾಸಿಗೆ ಹಿಡಿದು ಮರಣ ಹೊಂದಿದರು. ಗಜೇಂದ್ರನಾಥರು ಒಂಟಿಯಾಗಿ ಊರೂರು ಸುತ್ತುತ್ತಿದ್ದರು.
ತನ್ನ ಅಸಹಾಯಕತೆಯಿಂದಲೇ ಹೆಂಡತಿ ಮಗಳು ಮರಣ ಹೊಂದಿದ್ದಾರೆ ಎಂಬ ಪಾಪಪ್ರಜ್ಞೆ ಅವರಿಗೆ ಕಾಡುತ್ತಿತ್ತು. ಈ ಎಲ್ಲಾ ನೋವು ಸಂಕಟದ ಚಿತ್ರಣವನ್ನು ಲೇಖಕಿಯು ಇಲ್ಲಿ ಸೊಗಸಾಗಿ ಚಿತ್ರಿಸಿದ್ದಾರೆ.
ಒಂದು ದಿನ ಬಸ್ಟ್ಯಾಂಡ್ ಒಂದರಲ್ಲಿ ಗಜೇಂದ್ರನಾಥರು ಮಲಗಿರುವಾಗ ಬಾಲಕನೊಬ್ಬ "ಸ್ಕೂಲ್ ಫೀಸ್ ಕಟ್ಟಲು ಹಣ ಬೇಕು"ಲಾಟರಿ ಟಿಕೆಟ್ ತೆಗೆದುಕೊಳ್ಳಿ ಎನ್ನುತ್ತಾ ಲಾಟರಿ ಟಿಕೆಟ್ ಒಂದನ್ನು ಇವರಿಗೆ ನೀಡಿದನು. ಆ ಲಾಟರಿ ಟಿಕೆಟ್ ನ ಬಂಪರ್ ಬಹುಮಾನದಿಂದಾಗಿ ಗಜೇಂದ್ರನಾಥರು ಶ್ರೀಮಂತನಾದನು. ಒಂದು ಗಾರ್ಮೆಂಟ್ ಎಕ್ಸ್ಪೋರ್ಟ್ ಕಂಪನಿಯ ಒಡೆಯನಾದನು. ಬಡವರಿಗೆ ಸಹಾಯ ಮಾಡುತ್ತಿದ್ದನು.
ಹಗಲೆಲ್ಲ ವ್ಯಾಪಾರ ಮಾಡಿ, ರಾತ್ರಿಯಾದೊಡನೆ ಪಾಶ್ಚಾತ್ಯ ಮಧ್ಯ ಸಿಗರೇಟ್ ಗಳ ದಾಸನಾದಂತೆ ಗೆಳೆಯರ ಕೂಡಿ ಆನಂದಿಸುತ್ತಿದ್ದನು. ಅವನಿಗೆ 20ರ ಹರೆಯದ ಹೆಣ್ಣನ್ನು ಕೊಡಲು ಅನೇಕರು ಮುಂದಾದರು. ಭವಾನಿಯ ಜಾಗದಲ್ಲಿ ಬೇರೊಂದು ಹೆಣ್ಣಿಲ್ಲವೆಂದು ವಿವಾಹವನ್ನು ದ್ವೇಷಿಸುತ್ತಿದ್ದನು.
ಆದರೆ ಗಜೇಂದ್ರನಾಥರು ಬ್ರಹ್ಮಚಾರಿಯ ವ್ರತವನ್ನು ಪಾಲಿಸುತ್ತಿರಲಿಲ್ಲ ತಿಂಗಳಿಗೆ ಎರಡು ಬಾರಿ ಮೋಜಿನ ಬಂಗಲೆಯಲ್ಲಿ ಹೆಣ್ಣುಗಳನ್ನು ಬರ ಮಾಡಿಕೊಳ್ಳುತ್ತಿದ್ದನು. ಈ ಕೆಲಸಕ್ಕೆ ಒಪ್ಪುವ, ಕಷ್ಟದಲ್ಲಿರುವ, ಹೆಣ್ಣನ್ನು ಕರೆತ ಎಂದು ಅವನ ಬಂಗಲೆಯ ಮುಖ್ಯ ನಿರ್ವಾಹಕನಾದ ಕುಮಾರ್ ಗೆ ತಾಕೀತು ಮಾಡಿದ್ದನು.
ಒಂದು ದಿನ ರಕ್ಷಾ ಎನ್ನುವ ಹದಿನಾರರ ಅಸುಪಾಸಿನ ಹುಡುಗಿ ಈ ಕೆಲಸಕ್ಕೆ ಬಂದಳು. ಅವಳನ್ನು ನೋಡಿದೊಡನೆ, ಇಷ್ಟು ಚಿಕ್ಕ ವಯಸ್ಸಿನಲ್ಲಿ ಈ ಕೆಲಸಕ್ಕೆ ಏಕೆ ಬಂದೆ ಎಂದು ಗದರಿದನು. ಅವಳ ಕಥೆ ಕೇಳಿದೊಡನೆ, ಅವಳ ಕಣ್ಣೀರು ಕಂಡೊಡನೆ, ಆಕೆಯನ್ನು ಸಮಾಧಾನಿಸುತ್ತಾ, "ನಿನ್ನ ಕಣ್ಣೀರು ನನ್ನೆದೆಯಲಿ ನೆತ್ತರು ಹರಿಸುತ್ತದೆ" ಎಂದು ಗಜೇಂದ್ರನಾಥನು ಹೇಳಿದನು. ಹಾಗಾದರೆ ಈ ರಕ್ಷಾ ಯಾರು? ಗಜೇಂದ್ರನಾಥನಿಗೂ ಈ ರಕ್ಷಾ ಗೂ ಸಂಬಂಧವಿದೆಯೇ? ಇದ್ದರೆ ಯಾವ ರೀತಿಯ ಸಂಬಂಧವಿರಬಹುದು? ಇವಳ ಕಥೆ ಏನು? ಇವಳ ಕಥೆ ಕೇಳಿದೊಡನೆ ಗಜೇಂದ್ರನಾಥನು ಏಕೆ ಮರಗಿದನು ಎಂದು ತಿಳಿಯಲು ಚಿತ್ರಲೇಖ ಅಮ್ಮನವರ ನಿನ್ನ ಕಣ್ಣೀರು ನನ್ನೆದೆಯ ನೆತ್ತರು ಪುಸ್ತಕವನ್ನು ಓದಿ ತಿಳಿಯಬೇಕು.
ಮಮತೆ ಮಡಿಲು
ಗಂಡ ಹೆಂಡಿರಿಬ್ಬರೂ ಹೊರಗೆ ದುಡಿಯುವ ಪರಿಸ್ಥಿತಿ ಇದ್ದಾಗ, ಮನೆಯ ಹಿರಿಯರ ಸಹಾಯವಿಲ್ಲದಿದ್ದಾಗ, ಮಗುವನ್ನು ಡೇ ಕೇರ್ ಅಥವಾ ಬೇಬಿ ಸಿಟ್ಟಿಂಗಿಗೆ ಬಿಟ್ಟು ಹೋಗುವುದು ತಾಯಿಗೆ ಅನಿವಾರ್ಯವಾಗುತ್ತದೆ. ಆಗ ತಾಯಿಯ ಮನದಲ್ಲಾಗುವ ತಳಮಳ, ಹೊರ ವಾತಾವರಣದಲ್ಲಿ ಬೆಳೆದ ಮಗುವಿನ ಮಾನಸಿಕ ಒತ್ತಡ, ಸಮಸ್ಯೆಯನ್ನು ಲೇಖಕಿಯು ಈ ಕಥೆಯಲ್ಲಿ ಮನ ಮುಟ್ಟುವ ಹಾಗೆ ಅವಲೋಕಿಸಿದ್ದಾರೆ. ಇದು ಎಲ್ಲಾ ತಾಯಂದಿರಿಗೂ ಹತ್ತಿರವಾಗುವ ಕಥೆಯಾಗಿದೆ.
ವಯಸ್ಸಿಗೆ ಮೀರಿದ ಬುದ್ಧಿ, 6 ವರ್ಷದ ತುಂಟ ವಿವೇಕ್ ನ ತಂದೆ ತಾಯಿ ಇಬ್ಬರಿಗೂ ಹೊರಗೆ ದುಡಿಯುವ ಅನಿವಾರ್ಯತೆ ಇತ್ತು. ಅಜ್ಜ-ಅಜ್ಜಿಯ ಅನುಪಸ್ಥಿತಿ ಇದ್ದಾಗ ಆತನನ್ನು ಬೇಬಿ ಸಿಟ್ಟಿಂಗಿಗೆ ಸೇರಿಸದೆ ಅವರಿಗೆ ಬೇರೆ ದಾರಿ ಇರಲಿಲ್ಲ.
ವಿವೇಕ್ ತಂಗಿಯನ್ನು ಸ್ವಾಗತಿಸಲು ಕಾತುರನಾಗಿರುತ್ತಾನೆ. ಆದರೆ ಆತನಿಗೆ ತಮ್ಮನ ಆಗಮನವಾಗುತ್ತದೆ. ಆತನ ಮನಸ್ಸು ಇದನ್ನು ಒಪ್ಪಿಕೊಳ್ಳಲು ತಯಾರಿರುವುದಿಲ್ಲ. ಆದರೆ ತಾಯಿಯ ಪ್ರೀತಿ ಅಕ್ಕರೆಯ ಮಾತಿನಿಂದ ಆತನು ಒಪ್ಪಿಕೊಳ್ಳುತ್ತಾನೆ. ಅಜ್ಜಿ ಅಜ್ಜನ ಆಗಮನವಾದೊಡನೆ, ಅವರು ಆತನ ತಮ್ಮನನ್ನು ಅತಿಯಾಗಿ ಪ್ರೀತಿಸುವುದು, ಇವನ ತುಂಟಾಟ ತಾಳದೆ ಸದಾ ಬಯ್ಯುತ್ತಿರುವುದು, ಇವನು ಮಾಡದ ತಪ್ಪಿಗೆ ಅಜ್ಜಿಯ ಚಾಡಿ ಮಾತದಿಂದ ಅಪ್ಪನಿಂದ ಪೆಟ್ಟನ್ನು ತಿನ್ನುವುದು, ಈ ಎಲ್ಲಾ ಸನ್ನಿವೇಶದಿಂದ ವಿವೇಕ್ ಗೆ ಅಜ್ಜಿ, ಅಜ್ಜ, ಅಪ್ಪ ಎಲ್ಲರೂ ಕೆಟ್ಟವರು ಎಂಬ ಭಾವನೆ ಮೂಡುತ್ತದೆ ಅಲ್ಲದೆ ತಮ್ಮನ ಮೇಲೆ ಈರ್ಷೆ ದ್ವೇಷ ಬೆಳೆಯುತ್ತದೆ. ಇದಕ್ಕೆಲ್ಲ ಮೂಕ ಸಾಕ್ಷಿಯಾಗಿ ಆತನ ತಾಯಿ ಅಸಹಾಯಕಳಾಗಿ ಮಮತೆಯನ್ನು ತುಂಬಿಕೊಂಡು ರೋಧಿಸುತ್ತಿರುವುದನ್ನು ಲೇಖಕಿಯು ಸೊಗಸಾಗಿ ವಿವರಿಸಿದ್ದಾರೆ.
ದೊಡ್ಡವರ ವರ್ತನೆಯಿಂದಾಗಿ ಮಕ್ಕಳ ಮನಸ್ಸಿನ ಮೇಲಾಗುವ ಪರಿಣಾಮವನ್ನು ಲೇಖಕಿ ಇಲ್ಲಿ ಸೂಕ್ಷ್ಮವಾಗಿ ಅವಲೋಕಿಸಿದ್ದಾರೆ. ತಮ್ಮನ ಮೇಲೆ ಎಷ್ಟೇ ಈರ್ಷೆ ಇದ್ದರು ಆತನ ತಲೆಗೆ ಪೆಟ್ಟು ಬಿದ್ದು ಪ್ರಜ್ಞಾಶೂನ್ಯ ಸ್ಥಿತಿಯಲ್ಲಿದ್ದಾಗ ವಿವೇಕ್ ತೋರಿದ ಪ್ರೀತಿ ಮಮತೆ ಚಾಣಾಕ್ಷತನ ಸಾಹಸ ಇಲ್ಲಿ ರೋಚಕವಾಗಿ ಮೂಡಿ ಬಂದಿದೆ.
ಮಗಳ ನೋವನ್ನು ಕಂಡು ಹೆತ್ತವರು ಜರ್ಜರಿತರಾಗುವ ದೃಶ್ಯವನ್ನು ಹಾಗೂ ಅಪ್ಪ ಅಮ್ಮನ ಧಾವಂತದ ಬದುಕಿನಲ್ಲಿ ಮಕ್ಕಳು ಬಡವಾಗುವ ಸನ್ನಿವೇಶವನ್ನು, ಆ ಮಗುವಿನ ಮನಸ್ಥಿತಿಯನ್ನು ಲೇಖಕಿಯು ಮನಕರಗುವ ಹಾಗೆ ಚಿತ್ರಿಸಿದ್ದಾರೆ. ಪುಸ್ತಕ ಓದಿ ಕೆಳಗಿಟ್ಟ ಮೇಲೂ ಈ ಎರಡು ಕಥೆಗಳು ಓದುಗರನ್ನು ಕಾಡುತ್ತದೆ.
ಪುಸ್ತಕ: ನಿನ್ನ ಕಣ್ಣೀರು ನನ್ನೆದೆಯ ನೆತ್ತರು ಮತ್ತು ಮಮತೆಯ ಮಡಿಲು
ಲೇಖಕರು: ಚಿತ್ರಲೇಖ
ಪ್ರಕಾಶಕರು: ಸಾಹಿತ್ಯ ಲೋಕ ಪಬ್ಲಿಕೇಶನ್
ಪ್ರಥಮ ಮುದ್ರಣ: 1994
ಪರಿಷ್ಕೃತ ಪ್ರಥಮ ಮುದ್ರಣ: 2024
ಪುಟ: 140
ಬೆಲೆ: Rs.170
"ದಲಿತರು ಒಳಪಂಗಡಗಳ ಭಾವನಾತ್ಮಕ ಸೆಳವಿಗೆ ಸಿಕ್ಕು ಮೂಲ ಸಿದ್ದಾಂತದಿಂದ ದೂರವಾಗುತ್ತಿದ್ದಾರೆ. ಇಂದು ಅಂಬೇಡ್ಕರ್ ವಿ...
ಬೆಂಗಳೂರು : ಬೆಂಗಳೂರು ಸಾಹಿತ್ಯ ಉತ್ಸವ (BlrLitFest)ವು ಪ್ರತಿ ವರ್ಷ ನಡೆಯುವ ಅತ್ಯಂತ ನಿರೀಕ್ಷಿತ ಸಾಂಸ್ಕೃತಿಕ ಕಾರ್ಯ...
ಅಂಧತ್ವವನ್ನು ಬದುಕಿನ ಹೋರಾಟದ ಮೆಟ್ಟಿಲಾಗಿ ಪರಿವರ್ತಿಸಿಕೊಂಡು ಯಶ ಕಂಡಿರುವ ಸಿದ್ದೇಶ್ ಕೆ ಅವರಿಗೆ ಗೌರವಪೂರ್ವಕ ನಮನಗಳು...
©2025 Book Brahma Private Limited.