"ಕಥೆಯಾದರೂ ಟೈಮ್ ಟ್ರಾವೆಲ್ , ವಾರ್ಮ್ ಹೋಲ್ ಹಾಗೂ ಬೇರೊಂದು ಆಯಾಮದ ಸಾಧ್ಯಾ ಸಾಧ್ಯತೆ ಜೊತೆಗೆ ಪೊಲೀಸ್ ಆಫೀಸರ್ ಒಬ್ಬನ ವೃತ್ತಿಪರ ಸಾಹಸ ಓದುಗನನ್ನು ಮಂತ್ರಮುಗ್ಧಗೊಳಿಸುವುದು ಸುಳ್ಳಲ್ಲ . ಕೊನೆಗೆ ಅನುಪಮಾಳ ಹೊಲೊಗ್ರಾಮ್ ಜೊತೆ ಮಾತಾಡುವ ನಾಯಕ ಹಾಗೂ ಅವರ ಭಾವ ತರಂಗ ಮನಸ್ಸನ್ನು ತಟ್ಟುತ್ತದೆ," ಎನ್ನುತ್ತಾರೆ ಚೇತನ ಭಾರ್ಗವ. ಅವರು ನಾಗೇಶ್ ಕುಮಾರ್ ಸಿ ಎಸ್ ಅವರ ʻನಾಳೆಯನ್ನು ಗೆದ್ದವನು ಮತ್ತು ಮುಳುಗುವ ಕೊಳʼ ಕೃತಿ ಕುರಿತು ಬರೆದ ಅನಿಸಿಕೆ.
ನಾಗೇಶ್ ಕುಮಾರ್ ಸಿ.ಎಸ್ ಅವರ ನಾಳೆಯನ್ನು ಗೆದ್ದವನು ಮತ್ತು ಮುಳುಗುವ ಕೊಳ. ಇದು ಎರಡು ಕಥೆಗಳ ಹೊತ್ತಗೆ, ನಾಳೆಯನ್ನು ಗೆದ್ದವನು ಒಂದು ವೈಜ್ಞಾನಿಕ ಹಂದರವುಳ್ಳ ರೋಚಕ ಕಥೆ.
ಜನವರಿ ಒಂದರ ಹೊಸವರ್ಷದ ದಿನ ಇಂಟೆಲಿಜೆನ್ಸ್ ಅಧಿಕಾರಿ ಅಭಿಮನ್ಯು ನಂದಿ ಬೆಟ್ಟದಿಂದ ಇಳಿದು ಬರುವಾಗ ಹಾರುವ ತಟ್ಟೆಯೊಂದು ತನ್ನೊಳಗೆ ಸೆಳೆದುಕೊಳ್ಳುತ್ತದೆ . ಎಲ್ಲವೂ ಅಯೋಮಯ ಎನಿಸುತ್ತಿರುವಾಗಲೇ ಕ್ಯಾಪ್ಟನ್ ಎಸ್ ಎನಿಸಿಕೊಳ್ಳುವ ಐದನೇ ಆಯಾಮದ ಜೀವಿ ಅಭಿಮನ್ಯುವಿನ ಇತ್ಯೋಪರಿ ತಿಳಿಸಿ ಕೆಲ ವರುಷದ ಹಿಂದೆ ಆದ ಬಾಂಬ್ ಸಿಡಿತ ವೃತ್ತಾಂತವನ್ನೂ ಅರುಹಿ ತಾನು ಮದುವೆ ಆಗಬೇಕಿದ್ದ ಅನುಪಮಾ ಭಯೋತ್ಪಾದಕರ ಬಾಂಬ್ ಸಿಡಿತಕ್ಕೆ ಸತ್ತಿದ್ದು ತಾನು ಗಾಯಗೊಂಡಿದ್ದು ಹಾಗೂ ಉಗ್ರ ಕೃತ್ಯದ ಎಳೆಯನ್ನು ಬಿಡಿಸಿಟ್ಟಾಗ ಅಭಿಮನ್ಯು ಹಾಗೂ ಅನ್ಯ ಗ್ರಹ ಜೀವಿಯ ಸಂಭಾಷಣೆ ನಮ್ಮನ್ನು ಯಾವುದೋ ಹಾಲಿವುಡ್ ಸಿನೆಮಾದ ಅನುಭವ ನೀಡುತ್ತದೆ . ಲೇಖಕರು ಸಾಪೇಕ್ಷ ಸಿದ್ಧಾಂತ ಇತಿಹಾಸ, ಭಾರತ ಸಂಸ್ಕೃತಿಯ ಆಳ ಅಲ್ಲದೆ ಗ್ರಹಾಂತರ ಯಾನದ ಮಜಲುಗಳನ್ನು ಕಾಲ ದೇಶಗಳ ಕಲ್ಪನೆಯನ್ನು ಭೂಗ್ರಹ ಹಾಗೂ ಜೀವ ವೈವಿಧ್ಯವನ್ನು ಕಾಪಿಡುವ ಕಳಕಳಿ ಸಂಭಾಷಣೆಯ ರೀತಿ ನಮ್ಮ ಮುಂದೆ ಇಟ್ಟು ಆದಿನ ನಡೆಯಲಿರುವ ಮತ್ತೊಂದು ಭಯೋತ್ಪಾದಕ ಕೃತ್ಯವನ್ನು ಅರುಹಿ ಅದನ್ನು ತಡೆಯಲು ಅಭಿಮನ್ಯುವನ್ನು ಒಂದು ದಿನ ಹಿಂದೆ ಭೂತಕಾಲಕ್ಕೆ ಕಳುಹಿಸಿ ಭಯೋತ್ಪಾದಕರ ಸಂಚನ್ನು ಭೇದಿಸಿ ಅವರನ್ನು ಹೆಡೆಮುರಿ ಕಟ್ಟುವ ರೋಚಕ ಕಥೆಯನ್ನು ನಮ್ಮ ಮುಂದೆ ಇಟ್ಟಿದ್ದಾರೆ.
ಕಥೆಯಾದರೂ ಟೈಮ್ ಟ್ರಾವೆಲ್, ವಾರ್ಮ್ ಹೋಲ್ ಹಾಗೂ ಬೇರೊಂದು ಆಯಾಮದ ಸಾಧ್ಯಾ ಸಾಧ್ಯತೆ ಜೊತೆಗೆ ಪೊಲೀಸ್ ಆಫೀಸರ್ ಒಬ್ಬನ ವೃತ್ತಿಪರ ಸಾಹಸ ಓದುಗನನ್ನು ಮಂತ್ರಮುಗ್ಧಗೊಳಿಸುವುದು ಸುಳ್ಳಲ್ಲ. ಕೊನೆಗೆ ಅನುಪಮಾಳ ಹೊಲೊಗ್ರಾಮ್ ಜೊತೆ ಮಾತಾಡುವ ನಾಯಕ ಹಾಗೂ ಅವರ ಭಾವ ತರಂಗ ಮನಸ್ಸನ್ನು ತಟ್ಟುತ್ತದೆ. ಇಲ್ಲಿ ಲೇಖಕರ ತಯಾರಿ ಹಾಗೂ ಕಥೆಯ ಪ್ರಸ್ತುತಿ ಓದುಗರು ಪುಸ್ತಕ ಬಿಟ್ಟೇಳದಂತೆ ಮಾಡುತ್ತದೆ. ನಮಗೂ ಒಂದ್ ಬಾರಿ ಅನ್ಯ ಗ್ರಹದವರು ಬಂದು ಸಹಕರಿಸಬಾರದೇ ಎಂದು ಅನಿಸುವುದು ಸುಳ್ಳಲ್ಲ. ಈ ಕಥೆ ದೃಶ್ಯ ಮಾಧ್ಯಮದಲ್ಲಿ ಬಂದರೆ ಇನ್ನೂ ಪರಿಣಾಮಕಾರಿ ಎಂಬುದು ನನ್ನ ಅಭಿಮತ. ನಾಗೇಶ್ ಅವರ ಕಲ್ಪನೆಗೆ ಅವರೇ ಸಾಟಿ
ಇನ್ನು ಮುಳುಗುವ ಕೊಳ ಪ್ರಖ್ಯಾತ ಉದ್ಯಮಿಯ ಪತ್ನಿ ಈಜುಕೊಳದಲ್ಲಿ ತಡ ರಾತ್ರಿ ಪಾರ್ಟಿಯ ನಂತರ ಬಿದ್ದು ಸತ್ತಾಗ ಆಕೆಯ ಅವಳಿ ತಂಗಿಯ ಹೆಸರಲ್ಲಿದ್ದ 5 ಕೋಟಿ ವಿಮೆಯ ಹಣದ ಅರ್ಜಿಯನ್ನು ಪುರಸ್ಕರಿಸುವ ಮೊದಲು ಕೈಗೆತ್ತಿಕೊಳ್ಳುವ ಪತ್ತೇದಾರ ಕೀರ್ತಿಮಾನ್ ನ ತನಿಖೆಯ ಸುತ್ತ ಬಿಚ್ಚಿಕೊಳ್ಳುತ್ತದೆ. ಅಕ್ಕ ತಂಗಿ ಇಬ್ಬರೂ ಅವಳಿ ಜವಳಿ ಅಲ್ಲದೆ ತದ್ರೂಪಿ. ದೊಡ್ಡ ಉದ್ಯಮಿಯನ್ನು ಮದುವೆಯಾಗಿ ಐಷಾರಾಮದಲ್ಲಿ ಮುಳುಗಿದ್ದ ಅಕ್ಕ ಅದ್ಹೇಗೆ ಈಜು ಕೊಳದಲ್ಲಿ ಬಿದ್ದು ಸತ್ತಳು, ಇದು ಕೊಲೆಯೇ ಆಕಸ್ಮಿಕವೇ ಅಥವಾ ಆತ್ಮಹತ್ಯೆಯೇ ಎಂಬ ಹಲವು ಪ್ರಶ್ನೆಗಳು ಕಾಡುತ್ತಲೇ 5 ಕೋಟಿಯ ವಿಮೆಯ ಆಸೆಗೆ ನಡೆದಿರುವ ವ್ಯವಸ್ಥಿತ ಕೊಲೆ ಸಂಚು ಎಂದು ಪತ್ತೇದಾರನಿಗೆ ಸುಳುಹು ಹತ್ತುತ್ತದೆ. ಇದರ ಜಾಡು ಹಿಡಿದು ಹೋಗುವ ಆತನಿಗೆ ಕಾಣುವ ಸತ್ಯವೇನು, ನಿಜಕ್ಕೂ ಕೊಂದವರಾರು ಎಂಬ ಪ್ರಶ್ನೆಯೊಡನೆ ಕೊಲ್ಲಲ್ಪಟ್ಟವರಾರು ಎಂಬ ಆಯಾಮ ದೊಡ್ಡ ಸತ್ಯ ದರ್ಶನವನ್ನೇ ಅರುಹುತ್ತದೆ. ಪಕ್ಕಾ ಕ್ರೈಮ್ ಕಥಾನಕದ ಎಳೆ ಇದರಲ್ಲಿ ಬಿಚ್ಚಿಟ್ಟಿದ್ದಾರೆ. ಕಥೆಯ ಅಂತ್ಯವೂ ಈಜುಕೊಳದ ಬಳಿಗೆ ಬಂದು ನಿಲ್ಲುತ್ತದೆ. ಕ್ಷಣ ಕ್ಷಣಕ್ಕೂ ರೋಚಕ ಟ್ವಿಸ್ಟ್ ಗಳನ್ನು ಕೊಡುತ್ತಾ ಸಾಗುವ ಕಥೆ ಪತ್ತೇದಾರನ ಕುಶಾಗ್ರ ಬುದ್ಧಿಮತ್ತೆಯನ್ನು ಹಾಗೂ ಆರೋಪಿಗಳ ಬೆನ್ನು ಹಿಡಿದು ಅಪರಾಧದ ರಹಸ್ಯ ಭೇದಿಸುವ ಪೋಲೀಸರ ಮೇಲೆ ಅಭಿಮಾನ ಮೂಡಿಸುತ್ತದೆ ಒಟ್ಟಿನಲ್ಲಿ ಎರಡು ಅದ್ಭುತ ಕತೆಗಳ ಈ ಪುಸ್ತಕ ಓದುಗರ ಪಾಲಿಗೆ ಡಬಲ್ ಧಮಾಕ
ನಾಗೇಶ್ ಅವರ ಲೇಖನಿಯ ಜಾದೂ ಹೀಗೆ ನಡೆಯುತ್ತರಲಿ. ಮತ್ತೂ ಹಲವು ಹೊತ್ತಗೆಗಳು ಬಂದು ಓದುಗರ ಗ್ರಂಥಭಂಡಾರ ಬೆಳೆಯಲಿ, ಅಕ್ಷರ ದಾಹ ಹಸಿವು ತಣಿಯಲಿ
"ದಲಿತರು ಒಳಪಂಗಡಗಳ ಭಾವನಾತ್ಮಕ ಸೆಳವಿಗೆ ಸಿಕ್ಕು ಮೂಲ ಸಿದ್ದಾಂತದಿಂದ ದೂರವಾಗುತ್ತಿದ್ದಾರೆ. ಇಂದು ಅಂಬೇಡ್ಕರ್ ವಿ...
ಬೆಂಗಳೂರು : ಬೆಂಗಳೂರು ಸಾಹಿತ್ಯ ಉತ್ಸವ (BlrLitFest)ವು ಪ್ರತಿ ವರ್ಷ ನಡೆಯುವ ಅತ್ಯಂತ ನಿರೀಕ್ಷಿತ ಸಾಂಸ್ಕೃತಿಕ ಕಾರ್ಯ...
ಮಗಳ ನೋವನ್ನು ಕಂಡು ಹೆತ್ತವರು ಜರ್ಜರಿತರಾಗುವ ದೃಶ್ಯವನ್ನು ಹಾಗೂ ಅಪ್ಪ ಅಮ್ಮನ ಧಾವಂತದ ಬದುಕಿನಲ್ಲಿ ಮಕ್ಕಳು ಬಡವಾಗುವ ಸ...
©2025 Book Brahma Private Limited.