ನಾನು ನಿಮ್ಮೆಲ್ಲರ ಹಳೆಯ ಸಂಗಾತಿ


ಎಲ್ಲರಿಗೂ ನಮಸ್ಕಾರ..

ನಾನು ನಿಮ್ಮೆಲ್ಲರ ಹಳೆಯ ಸಂಗಾತಿ "ಪತ್ರ" ಮಾತನಾಡುತ್ತಿದ್ದೇನೆ.

ಕೆಲವರಿಗೆ ಮಾತ್ರ ನನ್ನ ನೆನಪಿರಬಹುದು, ಉಳಿದವರಿಗೆ ನನ್ನ ಬಗ್ಗೆ ಅಷ್ಟು ತಿಳಿದಿಲ್ಲ.ಟೆಲಿಫೋನ್ ಎಂಬ ರಾಕ್ಷಸ ಬರುವ ತನಕ ಸಂಪರ್ಕ ಮಾಧ್ಯಮದ ಏಕಮೇವ ದೊರೆಯಾಗಿದ್ದ ನಾನು, ಇಂದು ಅಸ್ತಿತ್ವವೇ ಇಲ್ಲದಂತಾಗಿದ್ದೇನೆ. ಕೇವಲ ಕಛೇರಿಗಳಲ್ಲಿ ಮಾತ್ರ ನಾಮಕಾವಸ್ತೆ ರೂಪದಲ್ಲಿ ಅರ್ಧಂಬರ್ಧ ಜೀವವಾಗಿ ಇನ್ನೂ ಉಸಿರಾಡುತ್ತಿದ್ದೇನೆ.

ಆಹಾ! ಹೇಗಿತ್ತು ಆ ನನ್ನ ಗತವೈಭವ. ನೆನೆಸಿಕೊಂಡರೆ ಮೈ ರೋಮಾಂಚನವಾಗುತ್ತದೆ.

ಓಲೆ ಗರಿಯಾಗಿ ಆರಂಭವಾದ ನನ್ನ ಬದುಕು ಪಾರಿವಾಳದ ಕಾಲಿನಲ್ಲಿ ಬೆಳೆದು, ಕುದುರೆ ಗಾಡಿಯಲ್ಲಿ ಓಡಿ, ಕಡೆಗೆ ರೈಲಿನಲ್ಲಿ, ಬಸ್ಸಿನಲ್ಲಿ, ಹಡಗಿನಲ್ಲಿ, ವಿಮಾನದಲ್ಲಿ ಪಯಣಿಸುವ ತನಕ ಸಾಗಿ ಬಂತು. ಪೋಸ್ಟ್ ಕಾರ್ಡ್ ಆಗಿ ಚಿಕ್ಕ ಮತ್ತು ತೆರೆದ ವಿಚಾರಗಳಿಗೆ, ಅಂತರ್ದೇಶೀಯ ಪತ್ರವಾಗಿ ರಹಸ್ಯ ಮತ್ತು ಸುದೀರ್ಘ ವಿಚಾರಗಳಿಗೆ ನಾನೇ ಸಂವಹನವಾಗಿದ್ದೆ. ನನ್ನನ್ನು ಬರೆಯುವುದೇ ಒಂದು ಕೌಶಲ. ಬೀದಿಯಲ್ಲಿ ಒಬ್ಬಿಬ್ಬರು ಮಾತ್ರ ಅಚ್ಚುಕಟ್ಟಾಗಿ ಬರೆಯುತ್ತಿದ್ದರು. ಅವರಿಗಾಗಿ ಉಳಿದವರು ಕಾದು ಕುಳಿತಾಗ, ನನ್ನ ಬಗ್ಗೆ ಹೆಮ್ಮೆ ಮೂಡುತ್ತಿತ್ತು. ನನ್ನನ್ನು ಹೊತ್ತು ತರುತ್ತಿದ್ದ ಅಂಚೆಯಣ್ಣನಿಗಾಗಿ ಜನ ಶಬರಿಯಂತೆ ಕಾತರಿಸಿ ಕುಳಿತಿರುತ್ತಿದ್ದರು. ಆತ ತನ್ನ ಸೈಕಲ್ ನಲ್ಲಿ ಟ್ರಿನ್ ಟ್ರಿನ್ ಅಂತ ಬೆಲ್ ಹೊಡೆಯುತ್ತಾ ಬಂದರೆ ಸಾಕು, ಊರಿಗೆ ಊರೇ ಅವನನ್ನು ಆದರಿಸುತ್ತಿತ್ತು.

ದೂರದಲ್ಲೆಲ್ಲೋ ಓದುತ್ತಿದ್ದ ಮಕ್ಕಳು “ಮಾತೃಶ್ರೀ ಅಮ್ಮಾ, ತೀರ್ಥರೂಪ ಅಪ್ಪಾ" ಎಂದು ಆರಂಭಿಸಿ ಬರೆದು ಕಳಿಸುತ್ತಿದ್ದ ನನ್ನನ್ನು ಓದುತ್ತಿದ್ದಂತೆ, ನನ್ನೊಳಗೆ ಮಕ್ಕಳ ಸಿರಿಮೊಗವನ್ನು ಕಲ್ಪಿಸಿಕೊಂಡು ಹೆತ್ತವರು ಓದುತ್ತಾ ಆನಂದಬಾಷ್ಪವನ್ನು ಸುರಿಸುವಾಗ ನನ್ನ ಜನ್ಮ ಪಾವನವಾದಂತೆ ಭಾಸವಾಗುತ್ತಿತ್ತು. ಅದಕ್ಕೆ ಉತ್ತರವಾಗಿ ಹೆತ್ತಕರುಳು “ಚಿರಂಜೀವಿ ಕಂದಾ" ಎಂದು ಶುರುವಾಗಿಸಿ ತನ್ನ ವಾತ್ಸಲ್ಯವನ್ನೇ ನನ್ನ ಮೇಲೆ ಹರಿಸಿ, ಹೃದಯತುಂಬಿದ ಆಶೀರ್ವಾದವನ್ನು ತುಳುಕಿಸುತ್ತಿತ್ತು. ಮನುಷ್ಯ ಸಂಬಂಧಗಳನ್ನು ಅರಿಯುವ ಅವಕಾಶ ನನಗೆ ಅನುಕ್ಷಣವೂ ಸಿಗುತ್ತಿತ್ತು. ನನಗೆ ತಿಳಿಯದ ಯಾವುದೇ ರಹಸ್ಯ ಈ ಭೂಮಿಯ ಮೇಲಿರಲಿಲ್ಲ. ಎಲ್ಲರ ಮನೆಯ ಮೂಲೆಯಲ್ಲೊಂದು ತಂತಿಯನ್ನು ಕಟ್ಟಿ ಅದಕ್ಕೆ ನನ್ನನ್ನು ಸಿಕ್ಕಿಸುತ್ತಿದ್ದ ಪರಿಯನ್ನು ನೆನೆಸಿಕೊಂಡರೆ ಎದೆ ತುಂಬಿ ಬರುತ್ತದೆ. ಪ್ರತಿ ಮನೆಯ ಕಷ್ಟ ಸುಖಗಳನ್ನು ಕೇಳಿ ತಿಳಿದಿದ್ದ ನಾನು ಪುನೀತಭಾವದಿಂದ ಅಲ್ಲಿಂದಿಲ್ಲಿಗೆ, ಇಲ್ಲಿಂದಲ್ಲಿಗೆ ನಾರದ ಮುನಿಯ ಅಪರಾವತಾರದಂತೆ ಓಡಾಡಿಕೊಂಡಿದ್ದೆ.ಇನ್ನು ಪ್ರೇಮಿಗಳದ್ದೇ ಒಂದು ಕತೆ. ಅವರ ಪ್ರೀತಿಯ ಮಾತುಗಳನ್ನು ಕೇಳಿ ನನಗೆ ಕೆಲವೊಮ್ಮೆ ಜೀವ ಬಂದುಬಿಡುತ್ತಿತ್ತು. ಅದೇನು ಪದ ಜೋಡಣೆ, ಅದೆಂಥ ವ್ಯಾಕರಣ. ಅಬ್ಬಾ! ಈ ಪ್ರೇಮಿಗಳೆಲ್ಲರೂ ಕವಿಗಳೇ. ಕೆಲವೊಮ್ಮೆ ಅವರ ವಿರಹದ ನುಡಿಗಳನ್ನು ತಲುಪಿಸುವಾಗ ನನ್ನ ಎದೆ ಭಾರವಾಗಿದ್ದೂ ಇದೆ. ಹದಿ ಹರೆಯದವರಂತೂ ನನ್ನನ್ನು ಓದುವುದೇ ಒಂದು ಕಾಯಕವನ್ನಾಗಿ ಮಾಡಿಕೊಂಡಿದ್ದರು.ನಾನು ಅವರ ನೋಟ್ ಪುಸ್ತಕದ ಹಾಳೆಗಳ ನಡುವೆ ನವಿಲುಗರಿಯ ಜೊತೆ ಅದೆಷ್ಟೋ ದಿನ ನಿದ್ರಿಸಿದ್ದೇನೆ. ಪ್ರೇಮಿಯ ನೆನಪಿನಲ್ಲಿ ನನ್ನನ್ನು ಅವರ ಎದೆಗೆ ಅಪ್ಪಿಕೊಂಡಾಗ ನಾಚಿ ನೀರಾಗಿದ್ದೇನೆ. ಆ ನೆನಪುಗಳು ಈಗಲೂ ನನ್ನನ್ನು ಪುಳಕಿಸುತ್ತವೆ. ಅದೆಷ್ಟೋ ಜೀವಗಳನ್ನು ಬೆಸೆದ ಪುಣ್ಯ ನನ್ನ ಖಾತೆಯಲ್ಲಿ ಜಮೆಯಾಗಿದೆ.

ಆ ಕಾಲದಲ್ಲಿ ನನ್ನದು ಅದೆಂಥ ಗತ್ತು ಎಂದರೆ, ಪ್ರತಿ ತರಗತಿಯಲ್ಲೂ ನನ್ನ ಕುರಿತು ಪಾಠವಿರುತ್ತಿತ್ತು. ನನ್ನನ್ನು ಬರೆಯುವುದು ಹೇಗೆ? ಓದುವುದು ಹೇಗೆ?ಎಂಬುದನ್ನು ಹೇಳಿಕೊಡುವುದೇ ಇದರ ಉದ್ದೇಶ. ಯಾರಿಗಿದೆ ಹೇಳಿ ಈ ಸೌಭಾಗ್ಯ?. ಇಪ್ಪತೊಂದನೇ ಶತಮಾನದ ಆರಂಭ ನನ್ನನ್ನು ಅವನತಿಯತ್ತ ಸಾಗಿಸಿಬಿಟ್ಟಿತು. ಈ E-ಮೇಲ್, ಮೊಬೈಲ್ ಬಂದ ಮೇಲೆ ಜನ ನನ್ನನ್ನು ಮರೆತುಬಿಟ್ಟರು. ಅದು ಅವರ ಅಗತ್ಯವೂ ಹೌದು. ಎದುರು ಇದ್ದಂತೆ ಮಾತನಾಡುವ ಸೌಲಭ್ಯ ಇದ್ದಾಗ, ಎರಡು ಮೂರು ದಿನದ ತನಕ ಯಾರು ತಾನೆ ಕಾಯುವರು ಹೇಳಿ. ಆದರೂ ನನ್ನಲ್ಲಿದ್ದ ಆತ್ಮೀಯತೆ, ಆಕರ್ಷಣೆ, ಅನುಭಾವ ಈ ಮೊಬೈಲಿನಲ್ಲಿ ನೀವು ಕಾಣಲು ಸಾಧ್ಯವಿಲ್ಲ. ಈಗ ಎಲ್ಲವೂ ಕೃತಕ. ಹಿರಿಯರಾದ ನೀವು, ನಿಮ್ಮ ಮಕ್ಕಳಿಗೆ ಕಡೆ ಪಕ್ಷ ನಾನಿದ್ದೆ, ಅಂಚೆಯಣ್ಣನಿದ್ದ, ಅಂಚೆಪೆಟ್ಟಿಗೆಯಿತ್ತು ಎಂಬುದನ್ನಾದರೂ ತಿಳಿಸಿದರೆ ಸಾಕು, ನನಗೊಂದು ತೃಪ್ತಿ ಸಿಗುತ್ತದೆ. ನನ್ನನ್ನು ಕೊಂದ ಮೊಬೈಲಿನಲ್ಲೇ ನನ್ನ ಕತೆಯನ್ನು ಹೇಳಬೇಕಾಗಿ ಬಂದದ್ದು ವಿಧಿಯ ಅಣಕ. ಇರಲಿ ಕಾಲಕ್ಕೆ ತಕ್ಕಂತೆ ನಾವೆಲ್ಲರೂ ಬದಲಾಗಲೇಬೇಕು. ಮುಂದಿನ ಜನ್ಮವಿದ್ದರೆ ಮತ್ತೊಂದು ರೂಪದಲ್ಲಿ ಬಂದು ನಿಮ್ಮ ಮನ ಮುಟ್ಟುತ್ತೇನೆ. ಎಲ್ಲರಿಗೂ ಪ್ರಣಾಮಗಳು.

ಇಂತಿ ನಿಮ್ಮ ಒಲವಿನ
"ಪತ್ರ"

ಲೇಖನ - ಗಿರೀಶ್ ಕುಮಾರ್

MORE FEATURES

ಅಂಬೇಡ್ಕರ್ ವಿದ್ಯಾವಂತ ಜನರ ಕೈಯಲ್ಲಿ ಮೋಜಿನ ವಸ್ತುವಾಗಿ ಕಾಣಿಸಿಕೊಳ್ಳುತ್ತಿದ್ದಾರೆ..

07-12-2025 ಬೆಂಗಳೂರು

"ದಲಿತರು ಒಳಪಂಗಡಗಳ ಭಾವನಾತ್ಮಕ ಸೆಳವಿಗೆ ಸಿಕ್ಕು ಮೂಲ ಸಿದ್ದಾಂತದಿಂದ ದೂರವಾಗುತ್ತಿದ್ದಾರೆ. ಇಂದು ಅಂಬೇಡ್ಕರ್ ವಿ...

BlrLitFest 2025: ಸಾಹಿತ್ಯಾಸಕ್ತರ ಮಹಾಸಂಗಮ!

06-12-2025 ಬೆಂಗಳೂರು

ಬೆಂಗಳೂರು : ಬೆಂಗಳೂರು ಸಾಹಿತ್ಯ ಉತ್ಸವ (BlrLitFest)ವು ಪ್ರತಿ ವರ್ಷ ನಡೆಯುವ ಅತ್ಯಂತ ನಿರೀಕ್ಷಿತ ಸಾಂಸ್ಕೃತಿಕ ಕಾರ್ಯ...

ಮತ್ತೆ ಮತ್ತೆ ಕಾಡುವ ಕಥೆಗಳು

06-12-2025 ಬೆಂಗಳೂರು

ಮಗಳ ನೋವನ್ನು ಕಂಡು ಹೆತ್ತವರು ಜರ್ಜರಿತರಾಗುವ ದೃಶ್ಯವನ್ನು ಹಾಗೂ ಅಪ್ಪ ಅಮ್ಮನ ಧಾವಂತದ ಬದುಕಿನಲ್ಲಿ ಮಕ್ಕಳು ಬಡವಾಗುವ ಸ...