ಮೊದಲೆಲ್ಲಾ ಫೋನ್ ರಿಂಗ್ ಆದ ಕೂಡಲೇ ಓಡಿ ರಿಸೀವ್ ಮಾಡುತ್ತಿದ್ದೆವು . ಬಚ್ಚಲು ಮನೆ, ಶೌಚಾಲಯದಲ್ಲಿದ್ದರೂ ಫೋನ್ ತರಿಸಿಕೊಂಡು ಕರೆ ಸ್ವೀಕರಿಸಿ ಮಾತನಾಡುತ್ತಿದ್ದೆವು . ಫೋನ್ ಬ್ಯಾಟರಿ ಕಡಿಮೆಯಾಗುತ್ತಿದ್ದರೆ, ನಮ್ಮ ಬಿಪಿ ಯೇ ಇಳಿಯುತ್ತಿರುವಂತೆ ಅನಿಸುತ್ತಿತ್ತು.
ಈಗ ಅಂತಹ ಧಾವಂತ ತೋರುತ್ತಿಲ್ಲ. ಅಷ್ಟೊಂದು ತಲೆ ಕೆಡಿಸಿಕೊಳ್ಳುವ ಅಗತ್ಯವೂ ಕಾಣುತ್ತಿಲ್ಲ . ಏಕೆಂದರೆ ಈ ಫೋನ್ ಇಲ್ಲದೆ ನಾಲ್ಕು ಯುಗಗಳನ್ನೇ ಕಳೆದಿದ್ದೇವೆ. ಮೂರ್ನಾಲ್ಕು ನಿಮಿಷ , ಒಂದರ್ಧ ದಿವಸ ತಡೆಯಲು ಸಾಧ್ಯವಿಹುದೆಂದು ಭಾವಿಸಿದ್ದೇವೆ.
ಮೊದಲೆಲ್ಲಾ ಮಕ್ಕಳು ಹೇಳಿದ ಮಾತು ಕೇಳದಿದ್ದಾಗ ಅಥವಾ ತಿರುಗಿ ಮಾತನಾಡಿದಾಗ ಕೋಪ ಬರುತ್ತಿತ್ತು. ಬೇಸರವಾಗುತ್ತಿತ್ತು.ಈಗ ಹಾಗೇನಿಲ್ಲ. ಏಕೆಂದರೆ ಇದು ಕಂಪ್ಯೂಟರ್ ಯುಗ. ನಮಗೂ ಅವರಿಗೂ ಜನರೇಶನ್ ಗ್ಯಾಪ್ ಇದೆ. ಎಲ್ಲರಿಗೂ ಸ್ವತಂತ್ರ ನಿಲುವಿದೆ. ವ್ಯಕ್ತಿ ಭಿನ್ನತೆಯನ್ನು ಅರ್ಥ ಮಾಡಿಕೊಂಡಿದ್ದೇವೆ.
ಮೊದಲೆಲ್ಲಾ ಯಾರಾದರೂ ಅವಹೇಳನ ಮಾಡಿದಾಗ ಪಿತ್ತ ನೆತ್ತಿಗೇರುತ್ತಿತ್ತು. ಕೊಂದು ಬಿಡುವಷ್ಟು ರೋಷ ಉಕ್ಕುತ್ತಿತ್ತು.ಈಗ ನಾವು ಬದಲಾಗಿದ್ದೇವೆ. ಜರಿದವರೆಮ್ಮ ಜನ್ಮ ಬಂಧುಗಳೆಂದು, ಎಲ್ಲವನ್ನೂ ನುಂಗುತ್ತಿದ್ದೇವೆ. ಸುಮ್ಮನಿರುವುದಕ್ಕಿಂತ ದೊಡ್ಡದಾಗಿ ಸೇಡು ತೀರಿಸಿಕೊಳ್ಳುವ ದಾರಿ ಯಾವುದು ಇಲ್ಲವೆಂದು ತಿಳಿದುಕೊಂಡಿದ್ದೇವೆ.
ಮೊದಲೆಲ್ಲಾ ನಮ್ಮನ್ನು ಹೀಯಾಳಿಸಿ ಗೇಲಿ ಮಾಡಿದಾಗ ಸಂಕಟವಾಗುತ್ತಿತ್ತು. ಸಿಟ್ಟು ಬರುತ್ತಿತ್ತು. ಈಗ ಹಾಗೆನಿಸುತ್ತಿಲ್ಲ.ನಾವೂ ಅವರ ಜೊತೆ ಸೇರಿ ನಕ್ಕು ಬಿಡುತ್ತೇವೆ. ವಾತಾವರಣ ತಿಳಿಯಾಗುತ್ತದೆ ಎಂದು ನಂಬಿದ್ದೇವೆ.
ಮೊದಲೆಲ್ಲಾ ಪ್ರತಿ ಮಾತಿಗೂ ಪ್ರತಿಕ್ರಿಯಿಸುತ್ತಿದ್ದೆವು. ಎಲ್ಲವನ್ನೂ ವೈಯಕ್ತಿಕವಾಗಿ ತೆಗೆದುಕೊಳ್ಳುತ್ತಿದ್ದೆವು.ಈಗ ಹಾಗಿಲ್ಲ.ಎಲ್ಲಕ್ಕೂ ಪ್ರತಿಕ್ರಿಯಿಸುವುದಿಲ್ಲ.ಅಕಸ್ಮಾತ್ ಪ್ರತಿಕ್ರಿಯಿಸಬೇಕಾದರೂ ಪದ ಬಳಕೆಯಲ್ಲಿ ನಿಗಾ ವಹಿಸುತ್ತೇವೆ. ಮಾತುಗಳು ಸೌಮ್ಯವಾಗಿದ್ದಷ್ಟೂ ಸುಂದರ ಎಂಬುದನ್ನು ಅರಿತಿದ್ದೇವೆ.
ಮೊದಲೆಲ್ಲಾ ಕಂಡಿದ್ದೆಲ್ಲವೂ ಬೇಕೆನುಸುತ್ತಿತ್ತು.ಅದು ಸಿಗದ ಕಾರಣಕ್ಕೇ ಚಿಂತೆ ಮೂಡುತ್ತಿತ್ತು.ಈಗ ಅಷ್ಟೊಂದು ಬಯಕೆಯಿಲ್ಲ.ಅವಶ್ಯಕತೆಯ ಅರಿವು ಮತ್ತು ಮಿತಿಯ ಜ್ಞಾನವು ಸಂತೃಪ್ತಿಯನ್ನು ನಮ್ಮೊಳಗೆ ಒಂದು ಹಂತಕ್ಕೆ ಬೆಳೆಸಿವೆ. ಸ್ವಯಂ ತೃಪ್ತಿಯೇ ಸುಖದ ಸಾಧನ ಎಂದು ತಿಳಿದಿದ್ದೇವೆ.
ಮೊದಲೆಲ್ಲಾ ಇತರರಿಂದ ಪ್ರೀತಿ ಸ್ನೇಹ ಸಹಕಾರವನ್ನು ಸಾಕಷ್ಟು ನಿರೀಕ್ಷಿಸುತ್ತಿದ್ದೆವು. ಎಷ್ಟಾದರೂ ಮನುಷ್ಯರಲ್ಲವೇ?. ಈಗ ವಾಸ್ತವದ ಅರಿವಾಗಿದೆ. ನಿರೀಕ್ಷೆ ಕಡಿಮೆಯಾದಷ್ಟು ಬದುಕು ಸುಭೀಕ್ಷೆ ಅನಿಸುತ್ತಿದೆ. ಕೊಡದೆ ಕೇಳುವುದು ಹಾಗೂ ಕೊಟ್ಟೆವೆಂದು ನಿರೀಕ್ಷಿಸುವುದು ತಪ್ಪೆಂದು ಮೆಲ್ಲನೆ ತಿಳಿಯುತ್ತಿದೆ. ಕಾಲ ಉರುಳಿದಂತೆ ನಾವು ಕೂಡ ಚಲಿಸಬೇಕೆಂದು ಗೊತ್ತಾಗಿಸಿಕೊಂಡಿದ್ದೇವೆ.
ಮೊದಲೆಲ್ಲಾ ನಮ್ಮಿಂದಲೇ ಎಲ್ಲವೂ ನಡೆಯುತ್ತಿದೆ. ನಾವಿಲ್ಲದಿದ್ದರೆ ಕತೆಯೇ ಮುಗಿಯುತ್ತದೆಂದು ಭಾವಿಸಿದ್ದೆವು.ಈಗ ಅನುಭವಗಳು ಪಾಠ ಕಲಿಸಿವೆ. ಇಲ್ಲಿ ಯಾರು ಅನಿವಾರ್ಯರಲ್ಲ, ಎಲ್ಲರೂ ನಿಮಿತ್ತರು ಎಂದು ತಿಳಿದುಕೊಂಡಿದ್ದೇವೆ. ಹೊಸತನಕ್ಕೆ ತೆರೆದುಕೊಳ್ಳುವುದನ್ನು ಅಭ್ಯಾಸ ಮಾಡಿಕೊಂಡಿದ್ದೇವೆ. ಅಜ್ಜಿಯ ಹುಂಜದ ಕತೆಯನ್ನು ಆಗಾಗ ನೆನಪಿಗೆ ತಂದುಕೊಳ್ಳುತ್ತಿದ್ದೇವೆ.
ಮೊದಲೆಲ್ಲಾ ನಾಳೆಯದ್ದೇ ಆಲೋಚನೆ ಇರುತ್ತಿತ್ತು. ನಿನ್ನೆಯೇ ಇಂದನ್ನು ಆವರಿಸಿರುತ್ತಿತ್ತು. ಈಗ ಆ ಅಭಿಪ್ರಾಯವಿಲ್ಲ. ಸತ್ತ ನಿನ್ನೆಗೆ ಜೀವ ಕೊಡಲು ಸಾಧ್ಯವಿಲ್ಲವೆಂದು ಗೊತ್ತಾಗಿದೆ. ಹುಟ್ಟುವ ನಾಳೆಗೂ ಸಮಯಾವಕಾಶ ಕಡಿಮೆ ಮಾಡಿ, ಕೈಯಲ್ಲಿರುವ ಈ ದಿನವನ್ನು ಆನಂದಿಸಲು ಪ್ರಯತ್ನಿಸುತ್ತಿದ್ದೇವೆ. ನಿನ್ನೆ ನಿನ್ನೆಗೆ, ನಾಳೆ ನಾಳೆಗೆ, ಇಂದು ಮಾತ್ರ ನಮ್ಮದೆಂದು ತೀರ್ಮಾನಿಸಿದ್ದೇವೆ.
ನಲವತ್ತು ದಾಟಿದ್ದೇವೆ, ನಯವಾದ , ನವಿರಾದ, ನಗುತುಂಬಿದ ಬದುಕು ನಮ್ಮದಾಗಲಿ..
ಲೇಖನ - ಗಿರೀಶ್ ಕುಮಾರ್ ಎಚ್.ಆರ್. (ಸತ್ಯರಂಗಸುತ)
"ದಲಿತರು ಒಳಪಂಗಡಗಳ ಭಾವನಾತ್ಮಕ ಸೆಳವಿಗೆ ಸಿಕ್ಕು ಮೂಲ ಸಿದ್ದಾಂತದಿಂದ ದೂರವಾಗುತ್ತಿದ್ದಾರೆ. ಇಂದು ಅಂಬೇಡ್ಕರ್ ವಿ...
ಬೆಂಗಳೂರು : ಬೆಂಗಳೂರು ಸಾಹಿತ್ಯ ಉತ್ಸವ (BlrLitFest)ವು ಪ್ರತಿ ವರ್ಷ ನಡೆಯುವ ಅತ್ಯಂತ ನಿರೀಕ್ಷಿತ ಸಾಂಸ್ಕೃತಿಕ ಕಾರ್ಯ...
ಮಗಳ ನೋವನ್ನು ಕಂಡು ಹೆತ್ತವರು ಜರ್ಜರಿತರಾಗುವ ದೃಶ್ಯವನ್ನು ಹಾಗೂ ಅಪ್ಪ ಅಮ್ಮನ ಧಾವಂತದ ಬದುಕಿನಲ್ಲಿ ಮಕ್ಕಳು ಬಡವಾಗುವ ಸ...
©2025 Book Brahma Private Limited.