ನಮ್ಮ ದೃಷ್ಟಿಕೋನವನ್ನು ವಿಶಾಲಗೊಳಿಸುವ ಉತ್ತಮ ಕಥನವಿದು


"ಜಾಗದ ಮಾಹಿತಿಯೊಂದಿಗೆ ಮನುಷ್ಯ ಸಂಬಂಧಗಳು, ಆಹಾರ ಪದ್ಧತಿ, ಯೋಚನಾಲಹರಿಗಳಲ್ಲಿನ ಸಾಮ್ಯತೆ, ಭಿನ್ನತೆ, ವೈವಿಧ್ಯತೆಗಳನ್ನು ನಿರುದ್ವಿಗ್ನವಾಗಿ ತಿಳಿಸುವ ರೀತಿ ಪ್ರಿಯವಾಗುತ್ತದೆ," ಎನ್ನುತ್ತಾರೆ ಎಸ್. ನಾಗಶ್ರೀ ಅಜಯ್. ಅವರು ಜಯಶ್ರೀ ದೇಶಪಾಂಡೆಯವರ ‘ಹಲವು ನಾಡು ಹೆಜ್ಜೆ ಹಾಡು’ ಕೃತಿ ಕುರಿತು ಬರೆದ ಅನಿಸಿಕೆ.

ಶ್ರೀಮತಿ ಜಯಶ್ರೀ ದೇಶಪಾಂಡೆಯವರು ಅವರ ಮಾತಿನಲ್ಲಿ ಪುಸ್ತಕದ ಶುರುವಿನಲ್ಲಿಯೇ ಹೇಳುವಂತೆ ಇದು 'ಪ್ರವಾಸ ಕಥನ' ಎನ್ನುವುದಕ್ಕಿಂತ 'ಅನುಭವ ಕಥನ'. ಹಾಗೆಂದು ಜಾಗದ ಮಾಹಿತಿ, ವಿವರಗಳನ್ನು ನೀಡದೆ ವೈಯಕ್ತಿಕ ಇಷ್ಟ-ಕಷ್ಟ, ನೋವು-ನಲಿವುಗಳನ್ನು ಮೆರೆಸುವ ಪುಸ್ತಕವಲ್ಲ. ಸೊಗಸಾದ ಭಾಷೆ, ಲವಲವಿಕೆಯ ನಿರೂಪಣೆ, ಚೊಕ್ಕದಾದ ಮಾಹಿತಿ ಹಾಗೂ ವಿಶಾಲ ಅನುಭವದಿಂದ ಪಕ್ವವಾಗಿರುವ ದೃಷ್ಟಿಕೋನವು ಈ ಅನುಭವ ಕಥನವನ್ನು ವಿಶೇಷವಾಗಿಸಿದೆ.

ಎಳೆಯ ಹುಡುಗಿಯಾಗಿದ್ದಾಗ ಮೇಜಿನ ಮೇಲಿದ್ದ ಪ್ರಪಂಚ ಗೋಲವನ್ನು ಕಂಡು ಕಣ್ಣು ಮಿಂಚಿದ್ದರಿಂದ ಹಿಡಿದು ಹಲವು ನಾಡನ್ನು ದರ್ಶಿಸಲು ಸಿಕ್ಕ ಅವಕಾಶದ ಬಗ್ಗೆ ವಿನಮ್ರವಾಗುವ ತನಕದ ಅನುಭವಗಳು ಇಲ್ಲಿನ ಬರಹಗಳ ಜೀವದ್ರವ್ಯ. ಇಲ್ಲಿ ಸಾಮಾನ್ಯವಾಗಿ ಭಾರತೀಯರು ವಿದೇಶದ ಕುರಿತು ಹೇಳುವಾಗ ಕಾಣುವ ಅತಿಶಯೋಕ್ತಿ, ವಿದೇಶಿಯರು ಶ್ರೇಷ್ಠರು ನಾವು ಕನಿಷ್ಟವೆಂಬ ಕೀಳರಿಮೆ ಅಥವಾ ನಮ್ಮಲ್ಲಿ ಇಲ್ಲದ್ದು ಅಲ್ಲೇನಿದೆ ಮಣ್ಣಂಗಟ್ಟಿ ಎಂಬ ಹುಸಿಧೋರಣೆಯ ಲವಲೇಶವೂ ಇಲ್ಲ. ನೈಜತೆ, ಸಹಜತೆ ಹಾಗೂ ಸಹೃದಯತೆಯಿಂದ ವಿಸ್ಮಯ ವಿಶ್ವವನ್ನು ದಾಖಲಿಸುವ ಪ್ರಬುದ್ಧ ರಚನೆಗಳು ಮಾನವೀಯತೆಗೂ ಕನ್ನಡಿ ಹಿಡಿಯುತ್ತವೆ.

ಫಿನ್ಲಾಂಡೆಂಬ ಹಿಮನಾಡು, ರಷ್ಯಾದ ಸೇಂಟ್ ಪೀಟರ್ಸ್ ಬರ್ಗ್, ಹರ್ಮಿಟೇಜ್ ಎಂಬ ಬೃಹತ್ ಮ್ಯೂಸಿಯಂ, ನೋಬಲ್ ವೆನ್ಯೂ, ಪೋಲೆಂಡ್ ನ ಕತೆ ಹೇಳುವ ಕುರ್ಚಿಗಳು, ಬರ್ಮುಡಾ ಟ್ರಯಾಂಗೆಲ್ ನ ಸತ್ಯ, ನಯಾಗರಾ ಎಂಬ ಮನೋವಿಹಾರಿಣಿ, ಲೇಕ್ ಮಿಷಿಗನ್, ಅಮೇರಿಕಾದ ಒಲಂಪಿಕ್ಸ್ ತರಬೇತಿಯ ಸ್ಥಳ, ಲಾಸ್ ವೆಗಾಸ್ ಹೀಗೆ ವಿವಿಧ ತಾಣಗಳನ್ನು ಪರಿಚಯಿಸುವ ಲೇಖನಗಳು ಇಲ್ಲಿವೆ. ಜಾಗದ ಮಾಹಿತಿಯೊಂದಿಗೆ ಮನುಷ್ಯ ಸಂಬಂಧಗಳು, ಆಹಾರ ಪದ್ಧತಿ, ಯೋಚನಾಲಹರಿಗಳಲ್ಲಿನ ಸಾಮ್ಯತೆ, ಭಿನ್ನತೆ, ವೈವಿಧ್ಯತೆಗಳನ್ನು ನಿರುದ್ವಿಗ್ನವಾಗಿ ತಿಳಿಸುವ ರೀತಿ ಪ್ರಿಯವಾಗುತ್ತದೆ. ಈ ಲೇಖನಗಳು ಬಿಡಿ ಬಿಡಿಯಾಗಿ ಈಗಾಗಲೇ ಹಲವು ಪತ್ರಿಕೆ, ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡು ಓದುಗರ ಮೆಚ್ಚುಗೆ ಗಳಿಸಿವೆ.‌ ಹಾಗಿದ್ದೂ ಇಡಿಯಾಗಿ ಓದುವ ಸುಖಕ್ಕಾಗಿ ಪುಸ್ತಕ ಖರೀದಿಸಬೇಕು.

ಮೌಲಿಕವಾದ ಮಾಹಿತಿಯೊಂದಿಗೆ ಆಪ್ತವಾಗಿ ನಮ್ಮೊಡನೆ ಸಂವಾದಿಸುತ್ತಾ ಲೇಖಕಿಯು ಪ್ರಕೃತಿಯ ಅನಂತ ಸೌಂದರ್ಯ, ಜನರ ವರ್ತನೆ, ಜನಜೀವನ, ನಂಬಿಕೆ, ಆಚರಣೆಗಳು, ಸ್ನೇಹಪರತೆ, ಆರ್ಥಿಕ ಸಂಕಷ್ಟ, ಮೋಸಬುದ್ಧಿ, ದೇಹದಾಢ್ಯತೆ, ಪರಿಶ್ರಮ ಪ್ರವೃತ್ತಿ, ಐತಿಹಾಸಿಕ ಮಹತ್ವ, ಗತಕಾಲದ ವೈಭವ, ಮನುಷ್ಯನ ಇತಿಮಿತಿ, ಕ್ರೌರ್ಯ, ವಿಜ್ಞಾನ ತಂತ್ರಜ್ಞಾನದ ಕೊಡುಗೆ ಇತ್ಯಾದಿಗಳನ್ನು ಪ್ರಸ್ತಾಪಿಸುತ್ತಾ ಪ್ರಪಂಚ ಪರ್ಯಟನೆ ಮಾಡಿಸುತ್ತಾರೆ. ಅವಸರದಲ್ಲಿ ಮುಗಿಸಿದರೆ ಊಟದ ರುಚಿಯೇ ಹಾಳಾಗುವುದಲ್ಲ ಎಂದು ಪುಟ್ಟ ಪುಟ್ಟ ತುತ್ತು ಎತ್ತಿಕೊಂಡಂತೆ, ಒಂದೊಂದೇ ಬರಹವನ್ನು ಮಗ್ನರಾಗಿ ಓದಿ, ಕಲ್ಪಿಸಿಕೊಂಡು ಹಲವು ನಾಡಿಗೆ ಹೆಜ್ಜೆ ಹಾಕಬೇಕಾದ ಕೃತಿಯಿದು. 'ಮನುಷ್ಯಜಾತಿ ತಾನೊಂದೇ ವಲಂ' ಎಂಬ ಮಾತಿಗೆ ಸಾಕ್ಷಿಯಾಗಿ ಇಲ್ಲಿ ಭೇಟಿಯಾಗುವ ವಿವಿಧ ನಾಡಿನ ಜನರು ನಿಲ್ಲುತ್ತಾರೆ. ಸುಂದರ ಚಿತ್ರಗಳ ಗ್ಯಾಲರಿಯೂ ಹಿಂದಿನ ಪುಟಗಳಲ್ಲಿವೆ. ಒಮ್ಮೆ ಓದಿದರಷ್ಟೇ ಪುಸ್ತಕದ ವೈಶಿಷ್ಟ್ಯ ಅರ್ಥವಾದೀತು. ನಮ್ಮ ದೃಷ್ಟಿಕೋನವನ್ನು ವಿಶಾಲಗೊಳಿಸುವ ಉತ್ತಮ ಕಥನವಿದು.

MORE FEATURES

ಕನಸುಗಳ ಕಣಿವೆಯಲ್ಲಿ ಭ್ರಮೆಗಳನ್ನು ಮಾರಿದವಳು..

12-12-2025 ಬೆಂಗಳೂರು

"ಕದಡಿದ ಕೊಳವು ತಿಳಿಯಾಗಿರಲು (ಬಿಡಿ ಬರಹ, ಪ್ರಬಂಧ) ಓದಿದೆ. ಇಲ್ಲಿನ ಹೆಚ್ಚಿನ ಲೇಖನಗಳನ್ನು ನಾನು ಈ ಮೊದಲೇ ಓದಿದ್...

ಎರಡು ರಟ್ಟುಗಳ ನಡುವೆ ಏನಿದೆ, ಏನಿಲ್ಲ!

12-12-2025 ಬೆಂಗಳೂರು

"ಪುಸ್ತಕ, ಓದು ಮತ್ತು ಬರವಣಿಗೆ ಒಂದು ವರ್ಗದ ಪ್ಯಾಶನ್. ತನ್ಮಯತೆಯಿಂದ ಓದುತ್ತಾ ಕೂತ ವ್ಯಕ್ತಿ ನಮಗೆ ಯಾವತ್ತೂ ಒಂದ...

ಕಥನ ಕಾರಣ ವಿನೂತನ

11-12-2025 ಬೆಂಗಳೂರು

"ಈ ನಡುವೆ ದಶಕಗಳ ಹಿಂದೆಯೇ ಆಗೀಗ ಬರೆದಿಟ್ಟಿದ್ದ ಚೀಟಿಗಳು ಕಣ್ಣಿಗೆ ಬಿದ್ದಾಗೆಲ್ಲಾ 'ನಮ್ಮನ್ನು ಹೀಗೇ ಬಿಟ್ಟರ...