"ನನ್ನ ಅದೃಷ್ಟವನ್ನು, ಭವಿಷ್ಯವನ್ನು, ಬದುಕನ್ನು ಬದುಕಿನ ಪಥವನ್ನು ಹೊರಗೆ ಅರಸುತ್ತಿದ್ದ ನನಗೆ ಮಡಿವಾಳಪ್ಪನವರ ನುಡಿಗಳು ನನ್ನೊಳಗಿನ ಅರಿವಿನ ಕಣ್ಣುಗಳನ್ನು ತೆರೆಸಿದ್ದವು. ನನ್ನ ನಾ ತಿಳಿದ ಮೇಲೆ ಇನ್ನೇನಿದೆ? ಈ ಜಗವನ್ನರಿಯಬೇಕಾದರೆ ಅದರ ಸ್ವರೂಪವಾದ ನನ್ನನ್ನು ನನ್ನೊಳಗನ್ನು ನನ್ನೊಳಗಿರುವ ಆತನನ್ನು ಮೊದಲು ನಾನು ಅರಿಯಬೇಕೆಂಬ ಅದ್ಭುತವಾದ ಅನುಭಾವಿಕ ನುಡಿ ನನಗಿಷ್ಟವಾಗಿತ್ತು," ಎನ್ನುತ್ತಾರೆ ವೆಂಕಟೇಶ ಕೆ. ಜನಾದ್ರಿ. ಅವರು ಕಡಕೊಳ ಮಡಿವಾಳಪ್ಪನ ಕುರಿತು ಬರೆದ ಲೇಖನ.
ಕಡಕೊಳ ಮಡಿವಾಳಪ್ಪನ ಗಟ್ಟಿ ನಿಲುವು
"ತನ್ನ ತಾನು ತಿಳಿದ ಮೇಲೆ ಇನ್ನೇನಿನ್ನೇನೋ ತನ್ನಂತೆ ಸರ್ವರ ಜೀವ ಮನ್ನಿಸಿ ಮೂಕಾದ ಮೇಲೆ ಇನ್ನೇನಿನ್ನೇನೋ” ಎಂಬ ಕಡಕೋಳ ಮಡಿವಾಳಪ್ಪನವರ ಅನುಭಾವದ ನುಡಿ ನನಗೆ ಬಹಳ ವಿಶಿಷ್ಠವಾಗಿ ತೋರಿತ್ತು. ಅವರ ಕುರಿತು ತಿಳಿದುಕೊಳ್ಳುವ ಅದಮ್ಯ ಬಯಕೆಯೆನಗಿತ್ತು. ಬಿರುಬೇಸಿಗೆಯ ಒಂದು ದಿನ ನನ್ನ ಸಂಸ್ಥೆಯ ಸಹೋದ್ಯೋಗಿಗಳೊಂದಿಗೆ ವಾಹನಗಳ ತಪಾಸಣೆಗೆಂದು ಕಲಬುರ್ಗಿ ಜಿಲ್ಲೆಯ ಜೇವರ್ಗಿ, ಜೇರಟಿಗಿ, ಯಡ್ರಾಮಿ, ಅರಳಗುಂಡಗಿ ಭಾಗದಲ್ಲಿ ಸಂಚರಿಸುತ್ತಾ ಸಾಗಿದ್ದಾಗ ಥಟ್ಟನೇ ನನಗೆ ನೆನಪಾಗಿದ್ದು ಕಡಕೋಳ ಕ್ಷೇತ್ರ.
ಅಲ್ಲಿ ಕಡಕೋಳ ಮಡಿವಾಳಪ್ಪನ ಮಠ ಇರುವುದಾಗಿ ಆತನ ಶರಣತ್ವದ ಕುರಿತು, ತತ್ವ ಪದಗಳ ಕುರಿತು, ಅನುಭಾವಿಕ ನಡೆಯ ಕುರಿತು ನನ್ನ ಸಹೋದ್ಯೋಗಿಗಳಿಗೆ ತಿಳಿಸಿದಾಗ ಅವರೂ ಚಕಿತರಾಗಿ ಹಾಗಾದರೆ ಆ ಮಠಕ್ಕೆ ತೆರಳಿ ಮುತ್ಯಾನ ದರ್ಶನ ಮಾಡಿಕೊಂಡೇ ಮುಂದೆ ಹೋಗೋಣವೆಂದು ತೀರ್ಮಾನಿಸಿದ ಫಲಿತವಾಗಿ ಅಂದು ಅಪರಾಹ್ನ ವಾಹನದಲ್ಲಿ ತೆರಳಿ ಮಠದ ಆವರಣದಲ್ಲಿಳಿಯುವ ಮುನ್ನ ನನಗೋ ಮಡಿವಾಳಪ್ಪ ನಡೆದಾಡಿದ ಆ ನೆಲಕ್ಕೆ ಕಾಲಿಡುವ ಮನಸ್ಸಾಗದೇ ಮೊದಲು ವಾಹನದಿಂದ ಕೆಳಗೆ ಕೈ ಮುಂದೆ ಮಾಡಿ, ಆ ನೆಲದ ಮಣ್ಣನ್ನು ಕೈಯಲ್ಲಿಡಿದು ಹಣೆಗಿಟ್ಟುಕೊಂಡು ಆಮೇಲೆ ಮಠದ ಆವರಣದ ನೆಲದ ಮೇಲೆ ಕಾಲಿರಿಸಿದೆ.
ಮೂಲತಃ ಜ್ಞಾನಿಯಾಗಿದ್ದ ಮಡಿವಾಳಪ್ಪನವರಿಗೆ ಹನ್ನೆರಡನೇ ಶತಮಾನದ ಶರಣರ ವಿಚಾರಧಾರೆಗಳು ಮತ್ತವರ ಪ್ರಭಾವ ಇವರ ಮೇಲೆ ಹೆಚ್ಚು ಪರಿಣಾಮವಾಗಿ ಶ್ರೇಷ್ಠ ಅನುಭಾವಿಯಾಗಿದ್ದವರು. ಆ ಪರಶಿವನೇ ಜೀವಾತ್ಮನಾಗಿ ನಮ್ಮೊಳಗಿದ್ದು, ನಮಗೆಲ್ಲಾ ಆತನೇ ಎಲ್ಲವೂ ಆಗಿ, ಆತನೇ ನನ್ನ ನಡೆಯನ್ನು ಕಂಡು ಅಹುದಹುದೆಂದಾದ ಮೇಲೆ ನನಗಿನ್ನೇನು ನನಗಿನ್ನೇನು? ಬೇರಿನ್ನೇನಿದೆ? ಎಂಬು ಅನುಭಾವಿಕ ನುಡಿಯನ್ನು ತಮ್ಮದಾಗಿಸಿಕೊಂಡಿದ್ದ ಮಡಿವಾಳಪ್ಪ ನನಗೆ ಒಬ್ಬ ಶರಣನಾಗಿ, ಸಂತನಾಗಿ, ಪ್ರಗತಿಪರನಾಗಿ, ಜಂಗಮನಾಗಿ, ಮಹಾಮಾನವತಾವಾದಿಯಾಗಿ, ಸಕಲ ಜೀವಿಗಳಿಗೂ ಲೇಸ ಬಯಸುವ ಶರಣಜ್ಜನಾಗಿ ಪೂಜ್ಯನೀಯರು.
ನನ್ನ ಅದೃಷ್ಟವನ್ನು, ಭವಿಷ್ಯವನ್ನು, ಬದುಕನ್ನು ಬದುಕಿನ ಪಥವನ್ನು ಹೊರಗೆ ಅರಸುತ್ತಿದ್ದ ನನಗೆ ಮಡಿವಾಳಪ್ಪನವರ ನುಡಿಗಳು ನನ್ನೊಳಗಿನ ಅರಿವಿನ ಕಣ್ಣುಗಳನ್ನು ತೆರೆಸಿದ್ದವು. ನನ್ನ ನಾ ತಿಳಿದ ಮೇಲೆ ಇನ್ನೇನಿದೆ? ಈ ಜಗವನ್ನರಿಯಬೇಕಾದರೆ ಅದರ ಸ್ವರೂಪವಾದ ನನ್ನನ್ನು ನನ್ನೊಳಗನ್ನು ನನ್ನೊಳಗಿರುವ ಆತನನ್ನು ಮೊದಲು ನಾನು ಅರಿಯಬೇಕೆಂಬ ಅದ್ಭುತವಾದ ಅನುಭಾವಿಕ ನುಡಿ ನನಗಿಷ್ಟವಾಗಿತ್ತು. ಅದೇ ಪಥದಲ್ಲಿ ನನ್ನ ಬದುಕನ್ನು ಕಂಡುಕೊಳ್ಳುವತ್ತ ನಾ ಸಾಗಿರುವಂಥ ದಿನಗಳವು. ಅವರ ತತ್ವಗಳನ್ನು ಓದಿ ಒಂದಿಷ್ಟು ತಿಳಿದುಕೊಂಡಿದ್ದ ನನಗಂದು ಅವರ ಸ್ಥಳಕ್ಕೆ ಬಂದಾಗ ಆದ ಅನುಭೂತಿಯೇ ಮಹದಾನಂದವಾಗಿತ್ತು.
ಕಡಕೋಳ ಮಡಿವಾಳಪ್ಪ ಕಲ್ಬುರ್ಗಿ ಜಿಲ್ಲೆಯ ಅಫಜಲಪೂರ ತಾಲ್ಲೂಕಿನ ಬಿದನೂರಿನಲ್ಲಿ ಮಠಾದೀಶ ವಿರುಪಾಕ್ಷಯ್ಯ ಮತ್ತು ಗಂಗಮ್ಮನವರ ಮಗನಾಗಿ ಕ್ರಿಶ. ೧೭೮೦ರಲ್ಲಿ ಜನಿಸಿ, (ಕೆಲವರ ಪ್ರಕಾರ ಇವರ ತಂದೆ ದುಂಡಪ್ಪ ಬಗಲಿ ಎಂತಲೂ ಗುರುತಿಸಿದ್ದಾರೆ) ಶರಣರ, ಮಹಾತ್ಮರ ಹುಟ್ಟು, ಕಾಲ, ಸ್ಥಳಗಳ ಕುರಿತಾಗಿಯೇ ಚಿಂತಿಸದೇ ಅವರ ಬದುಕಿನ ನೆಲೆ ಮತ್ತು ತತ್ವಗಳನ್ನು ಅರಿತುಕೊಳ್ಳುವುದು ಮುಖ್ಯ ಎಂಬುದು ನನ್ನ ನಿಲುವು. ಬಾಲ್ಯದಲ್ಲಿ ಚಿಣಮಗೇರಿ ಮಹಾಂತ ಮಠದ ಪರಿಸರ ಇವರ ಮೇಲೆ ಪರಿಣಾಮ ಬೀರಿತ್ತು. ಮಠದ ಮೂಲ ಪುರುಷ ಮಹಾಂತೇಶ್ವರರ ಮೇಲೆ ಶ್ರದ್ಧಾಭಕ್ತಿಯನ್ನಿರಿಸಿಕೊಂಡಿದ್ದರು. ಮಠದ ಹತ್ತನೇ ತಲೆಮಾರಿನ ಶ್ರೀ ಗುರು ಬಸವದೇವರಿಂದ ಇವರಿಗೆ ಎಂಟನೇ ವಯಸ್ಸಿನಲ್ಲಿ ಲಿಂಗಧೀಕ್ಷೆಯೂ ಆಗಿರುತ್ತದೆ. ಇವರಲ್ಲಿಯೇ ತಮ್ಮ ತಂದೆ, ತಾಯಿ, ಬಂದು, ಬಳಗವನ್ನು ಕಂಡುಕೊಂಡಿದ್ದರು ಮಡಿವಾಳಪ್ಪ.
ಇವರ ಕುಲದ ಕಾರಣಕ್ಕಾಗಿ ಅರಳಗುಂಡಿಗಿಯ ಬಸಯ್ಯನೆಂಬಾತ ಇವರಿಗೆ ಅಯ್ಯಾಚಾರ/ಲಿಂಗದೀಕ್ಷೆ ಕೊಡಬಾರದೆಂದು ವಿರೋಧಿಸುತ್ತಾನೆ. ಆದರೆ ಕಲ್ಬುರ್ಗಿಯ ಶರಣಬಸವೇಶ್ವರರು ಇವರಿಗೆ ಲಿಂಗದೀಕ್ಷೆ ಕೊಡಿಸಲೇಬೇಕೆಂಬ ಸದುದ್ದೇಶದಿಂದ ತಮ್ಮ ಗುರುಗಳಾಗಿದ್ದ ಕಲಕೇರಿಯ ಮರುಳಾರಾಧ್ಯರಿಂದ ಮಡಿವಾಳಪ್ಪನಿಗೆ ಅಯ್ಯಾಚಾರ/ಲಿಂಗದೀಕ್ಷೆ ಮಾಡಿಸಿದರೆಂಬುದು, ಸ್ವತಃ ಶರಣಬಸವೇಶ್ವರರೇ ಲಿಂಗದೀಕ್ಷೆ ಮಾಡಿದರೆಂಬುದು, ಓರ್ವ ಜಂಗಮ ಸ್ವರೂಪಿಯಿಂದ ಶರಣಬಸವೇಶ್ವರರು ಲಿಂಗದೀಕ್ಷೆ ಮಾಡಿಸಿದರೆಂಬ ನಂಬುಗೆಯೂ ಇದೆ. ಆದರೆ ಈ ಎಲ್ಲಕ್ಕಿಂತ ಮುಂಚೆಯೇ ಬಹುಶಃ ಗರ್ಭಾವಸ್ಥೆಯಲ್ಲಿಯೇ ಚಿಣಮಗೇರಿ ಮಹಾಂತ ಮಠದ ಮೂಲ ಪುರುಷರಿಂದ ಲಿಂಗಧೀಕ್ಷೆಯಾಗಿರುವ ಕಾರಣ ಆರಂಭದಿAದಲೇ ಅನುಭಾವಿಕ ನೆಲೆಯಲ್ಲಿ ಇವರ ಚಿಂತನೆಗಳಿದ್ದವೆಂಬುದನ್ನು ಗಮನಿಸಬೇಕಿದೆ.
ಮುಂದೆ ಕಲ್ಬುರ್ಗಿ ಶರಣಬಸಪ್ಪ ಮತ್ತು ಮಡಿವಾಳಪ್ಪನವರ ಮಧ್ಯ ಅನ್ಯೋನ್ಯ ಸಂಬಂಧದ ಕಾರಣ ದಿನನಿತ್ಯ ಇಬ್ಬರೂ ಸೇರಿ ಅನ್ನದಾಸೋಹ ಮತ್ತು ಜ್ಞಾನದಾಸೋಹ ನಡೆಸುತ್ತಿದ್ದರು. ಶರಣಬಸಪ್ಪ ನೇರವಾಗಿ ಸಾಹಿತ್ಯ ರಚನೆ ಮಾಡದಿದ್ದರೂ ಪರೋಕ್ಷವಾಗಿ ಮಡಿವಾಳಪ್ಪನವರ ಬರವಣಿಗೆಗೆ ಗಟ್ಟಿದ್ರವ್ಯ ಒದಗಿಸಿ, ತಮ್ಮ ಅರ್ಥಪೂರ್ಣ ಮೌನಕ್ಕೆ ಮಡಿವಾಳಪ್ಪನ ಅನುಭಾವಪೂರ್ಣ ತಾತ್ವಿಕ ಸಾಹಿತ್ಯದ ಪ್ರಖರತೆಯಲ್ಲಿ ಅಂದಿನ ಜನ ಸಾಮಾನ್ಯರ ಮನದ ಮೈಲಿಗೆ ಕಳೆಯುವಲ್ಲಿ ಸತ್ಪಾತ್ರವಾಗಿದ್ದವು. ಇಂದಿಗೂ ಮಡಿವಾಳಪ್ಪನವರ ವಚನಗಳು, ತತ್ವಗಳು ಜನಾನುರಾಗಿಯಾಗಿ ಜನ ಪದವಾಗಿ ಜಂಗಮದ ಮಧ್ಯ ಜೀವಂತವಾಗಿಯೇ ಉಳಿದಿವೆ.
ಅಂದಿನ ಜಾತಿ ವ್ಯವಸ್ಥೆ ಮತ್ತು ತಮ್ಮದೇ ಬದುಕಿನಲ್ಲಿ ನಡೆದ ಲಿಂಗಧೀಕ್ಷೆಯ ಘಟನೆಯಿಂದ ವ್ಯವಸ್ಥೆಯ ಕುರಿತು ಮನನೊಂದುಕೊಂಡಿದ್ದ ಮಡಿವಾಳಪ್ಪ ತಮ್ಮೊಳಗಿನ ಅರಿವೆಂಬ ಗುರುವಿನಿಂದಲೇ ದೀಕ್ಷೆ ಪಡೆದುಕೊಂಡಿರಬಹುದೆAದು ನನ್ನ ಅನಿಸಿಕೆ. ಅದಕ್ಕೆ ಅವರ ಕವನದ ಸಾಲಿನಲ್ಲಿ “ತನ್ನ ತಾನರಿತ ಮೇಲೆ ಇನ್ನೇನು ಇನ್ನೇನು?” ಎಂಬ ಸಾಲನ್ನು ಗಮನಿಸುತ್ತೇವೆ. ಓರ್ವ ಗುರು ಮತ್ತು ತಮ್ಮೊಳಗಿನ ಅರಿವೆಂಬ ಗುರುವಿನಿಂದ ಮಡಿವಾಳಪ್ಪನವರಿಗೆ ಅರಿವಿನೊಂದಿಗಿನ ಜ್ಞಾನದ ಅನುಸಂಧಾನ ಆಗಿರುವದೆಂಬುದು ನನ್ನ ಮನದ ಅಂಬೋಣ. ಅಂದಿನ ಅವ್ಯವಸ್ಥೆಯಲ್ಲಿಯ ಜಾತಿ, ವರ್ಗ ಸಂಘರ್ಷದ ದಿನಗಳಲ್ಲಿ ಕೆಲ ಉನ್ನತ ವರ್ಗದವರು ಮಡಿವಾಳಪ್ಪನವರಿಗೆ ಕಿರಿಕಿರಿ ಮಾಡಿದರೆ ದಲಿತರು ಇವರನ್ನು ತಮ್ಮವರೆಂದು ಪರಿಗಣಿಸಿ ತಮ್ಮ ತೆಕ್ಕೆಯಲ್ಲಿ ಅಪ್ಪಿಕೊಂಡು ಪ್ರೀತಿಯಿಂದ ಕಡಕೊಳದಲ್ಲಿ ವಾಸಿಸಲು ಅನುಕೂಲವಾಗಿದ್ದರೆಂದು ತೋರುತ್ತದೆ. ಅದಕ್ಕೆ ಅಲ್ಲಿಯ ಅಂದಿನ ಪರಿಸರ ಮತ್ತು ಮಠ ಇಂದಿಗೂ ತನ್ನ ಪ್ರಭಾವಳಿಯಲ್ಲಿ ಭಕ್ತರ ಭಕ್ತಿಯನ್ನು ಜಂಗಮದಲ್ಲಿ ತೊಳಗಿ ಬೆಳಗುತ್ತಲಿದೆ.
ಬದುಕಿನಲ್ಲಿ ಎಂಥದ್ದೇ ಸವಾಲುಗಳೆದುರಾದರೂ ದಿಟ್ಟತನದಿಂದ ಸ್ವೀಕರಿಸುತ್ತಿದ್ದ ಮಡಿವಾಳಪ್ಪನವರು ಸದಾ ಮಠದ ಪರಿಸರದಲ್ಲಿ ಯಾವುದಾದರೊಂದು ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದವರು. ಶ್ರಮವಹಿಸಿ ಕಾಯಕ ಮಾಡಿದ ಮೇಲೆಯೇ ತಾವು ಪ್ರಸಾದ ಮಾಡುತ್ತಿದ್ದರು. ಹೀಗೆ ಒಮ್ಮೆ ಮಠದ ಹಸುಗಳಿಗೆ ಮೇವು ತರಲು ಹೋದಾಗ ಕೆಲವು ಕಿಡಿಗೇಡಿಗಳು ಇವರಿಗೆ ತೊಂದರೆ ಕೊಡುವ ಉದ್ದೇಶದಿಂದ ಇವರಿಗೆ ಕಾಣದಂತೆ ಒಂದು ದೊಡ್ಡ ಕಲ್ಲಿನ ಸುತ್ತ ಮೇವನ್ನು ಪೇರಿಸಿ ಗಂಟು ಕಟ್ಟಿ ಹೊರೆಯನ್ನು ಸಿದ್ದಪಡಿಸಿ, “ಮುತ್ಯಾ ಮೇವಿನ ಹೊರೆಯನ್ನು ಕಟ್ಟಿದ್ದೀವಿ ಎತ್ತಿಕೊಂಡು ಮಠಕ್ಕೆ ಹೋಗು” ಎಂದು ಹೇಳಿದ ಜನರ ಮಾತನ್ನು ಅನುಸರಿಸಿ ಆ ಭಾರವನ್ನು ಹೊತ್ತು ಕಡಕೋಳ ಮಠಕ್ಕೆ ತಂದು ನೆಲಕ್ಕೆ ಹಾಕಿದಾಗ ಅದರಲ್ಲಿದ್ದ ಕಲ್ಲನ್ನು ನೋಡಿ ಒಂದಿಷ್ಟ್ಟೂ ಬೇಸರಿಸಿಕೊಳ್ಳದೇ ‘ಪರವಾಗಿಲ್ಲ ಈ ಕಲ್ಲು ಮಠದ ಮೆಟ್ಟಿಲಿನ ಬಳಕೆಗೆ ಆಗುತ್ತದೆ’ ಎಂದರಂತೆ. ಈಗಲೂ ಆ ಕಲ್ಲನ್ನು ಮಠದ ಮುಂದಿರುವ ಮೆಟ್ಟಿಲುಗಳ ಹತ್ತಿರ ಇಟ್ಟಿರುವುದನ್ನು ಕಾಣಬಹುದು. ಕಷ್ಟವನ್ನು ಸಹಿಸಿಕೊಂಡು ಪೂಜೆಯ ರೀತಿಯಲ್ಲಿ ತಮ್ಮ ಕಾಯಕ ಮಾಡಿ ಅದರಿಂದ ಬಂದಿರುವ ಯಾವುದೇ ರೀತಿಯ ಫಲಿತವನ್ನು ಸಕಾರಾತ್ಮಕವಾಗಿ ಪ್ರಸಾದವೆಂದು ಒಪ್ಪಿಕೊಳ್ಳಬೇಕೆಂಬ ಹನ್ನೆರಡನೇ ಶತಮಾನದ ಶರಣರ ತತ್ವವಿಲ್ಲಿದೆ.
ಒಮ್ಮೆ ಚಿಂಚೋಳಿ ತಾಲ್ಲೂಕಿನ ಸುಲೇಗಾಂವಕ್ಕೆ ಬಂದಿರುವ ಒಬ್ಬ ಮಾಂತ್ರಿಕನ ಬಳಿ ಒಂದು ಮಾಟದ ಮಂಚವಿತ್ತಂತೆ, ಈ ಮಂಚದ ಮೇಲೆ ತನ್ನ ಹೊರತು ಬೇರೆ ಯಾರೇ ಮಲಗಿದರೂ ಒಂದೇ ದಿನದಲ್ಲಿ ಅವರು ಸಾಯುತ್ತಾರೆ ಎಂದು ಆ ಬಾಬಾ ಮಾಂತ್ರಿಕ ಹೇಳಿದಾಗ, ಅಲ್ಲಿದ್ದ ಮಡಿವಾಳಪ್ಪ ಬಾಬಾನ ಈ ಮಾತನ್ನು ಸವಾಲಾಗಿ ಸ್ವೀಕರಿಸಿ, ಆ ಇಡೀ ರಾತ್ರಿ ಆ ಮಾಟದ ಮಂಚದ ಮೇಲೆ ಮಲಗುತ್ತಾರೆ. ಬೆಳಿಗ್ಗೆ ಜೀವಂತವಾಗಿಯೇ ಉಳಿದು ಆ ಮಾಂತ್ರಿಕನ ಸೊಕ್ಕಿಗೆ ವಿನಯದಿಂದಲೇ ಉತ್ತರಿಸಿದಾಗ ಅವಮಾನಿತನಾದ ಆ ಬಾಬಾ ತನ್ನ ಆ ಮಾಟದ ಮಂಚವನ್ನು ಮಡಿವಾಳಪ್ಪನಿಗೆ ಕೊಟ್ಟಿದ್ದರಂತೆ.
ಈಗಲೂ ಈ ಮಂಚ ಮಠದ ಆವರಣದಲ್ಲಿದೆ. ಈಗಲೂ ಆ ಬಾಬಾ ನಂಬಿಸಿದ್ದ ಮೌಢ್ಯತೆಯ ಕಾರಣಕ್ಕೋ ಅಥವಾ ಮಡಿವಾಳಪ್ಪನವರ ಮೇಲಿನ ಭಕ್ತಿಯ ಗೌರವದ ಕಾರಣಕ್ಕೋ ಆ ಮಂಚದ ಮೇಲೆ ಯಾರೂ ಕುಳಿತುಕೊಳ್ಳುವುದಿಲ್ಲ. ಈ ಇಡೀ ಘಟನೆಯನ್ನು ವೈಚಾರಿಕವಾಗಿ ಅನುಭಾವಿಕ ನೆಲೆಯಲ್ಲಿ ಯೋಚಿಸಿದಾಗ ಯಾವುದೇ ಸಾಧನೆಗೆ ಮೌಢ್ಯದ ಭಯಕ್ಕಿಂತ ಆತ್ಮವಿಶ್ವಾಸದ ಪ್ರಯತ್ನ ಮುಖ್ಯವೆಂಬ ತತ್ವವಿರುವುದನ್ನು ಗಮನಿಸಬೇಕಿದೆ. ಭಯದ ಬದಲಿಗೆ ದಯೆ ಇದ್ದಲ್ಲಿ, ಮೌಢ್ಯದ ಬದಲಿಗೆ ಪ್ರಾಮಾಣಿಕ ಪ್ರಯತ್ನವಿದ್ದಲ್ಲಿ ಕೊರಡೂ ಕೊನರುವುದೆಂಬ ಭರವಸೆಯು ಇರಬೇಕೆಂಬುದು ಶರಣರ ನಿಲುವಾಗಿತ್ತು. ಈ ನಿಲುವನ್ನು ಮಡಿವಾಳಪ್ಪ ಸಮರ್ಪಕವಾಗಿ ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಿದ್ದರು.
ಒಮ್ಮೆ ಬಿದನೂರಿನ ಲಕ್ಷ್ಮೀ ಎಂಬಾಕೆ ಮಡಿವಾಳಪ್ಪನವರಿಗೆ ತನ್ನನ್ನು ಮದುವೆಯಾಗಲು ಒತ್ತಾಯಿಸುತ್ತಾಳೆ. ಮಡಿವಾಳಪ್ಪ ಒಪ್ಪದೇ “ನಾವ್ಹ್ಯಾಗ ಮಾಡಬೇಕರೋ” ಎಂದು ಕಡಕೋಳಕ್ಕೆ ಹೊರಟು ಹೋದಾಗ ಈಕೆ ಅಲ್ಲಿಗೂ ಬಂದು ಇವರನ್ನು ಮತ್ತೇ ಕಾಡಿ ಬೇಡಿಕೊಂಡು ನೀವು ಮದುವೆಯಾಗದಿದ್ದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುವೆ ಎಂದು ಹೇಳುತ್ತಲೇ ಬಾವಿಯಲ್ಲಿ ಹಾರಿ ಪ್ರಾಣ ಕಳೆದುಕೊಂಡು ಮುಂದಿನ ದಿನಗಳಲ್ಲಿ ದೆವ್ವ ಆಗಿ ಬರುತ್ತಾಳಂತೆ. ಹಾಗೆ ದೆವ್ವ ಆಗಿ ಬಂದಾಗ ಆ ದೆವ್ವದಿಂದಲೇ ಮಠದ ಕೆಲಸ ಮಾಡಿಸುತ್ತಾರೆಂಬ ವದಂತಿ ಇದೆ. ಈಗಲೂ ಕಡಕೋಳ ಮಠದ ಒಂದು ಕೋಣೆಗೆ ಲಕ್ಷ್ಮೀ ಕೋಣೆ ಎನ್ನುತ್ತಾರೆ. ಈ ಘಟನೆಯ ಸತ್ಯಾಸತ್ಯತೆಯನ್ನು ಯೋಚಿಸಬಾರದು. ಇದು ಕೇವಲ ವದಂತಿಯೇ ಆಗಿರಬಹುದು. ಆದರೆ ಅಲ್ಲಮನಿಗೆ ಹೇಗೆ ಮಾಯೆ ಕಾಡಿಸಿದ್ದಳೋ ಹಾಗೆಯೇ ಈ ಪ್ರಕರಣವಿರಬಹುದೆಂದು ನನಗನಿಸುತ್ತದೆ. ಅದಕ್ಕೆ ಕೆಲವರು “ಮಾಯೆಯ ಗಂಡ ಮಡಿವಾಳ” ಎಂತಲೂ ಕರೆಯುವರು.
ಈ ಎಲ್ಲ ಪ್ರಗತಿಪರ ಕಾರಣಗಳಿಗಾಗಿ ಇಂದಿಗೂ ಕಡಕೋಳ ಮಠ ದಲಿತ ದುರ್ಬಲರಿಗೆ ತಂಗುದಾಣವಾಗಿ, ಆಧ್ಯಾತ್ಮಿಕ ಗರಡಿ ಮನೆಯಾಗಿ ಜ್ಞಾನ ಸಾಧಕರಿಗೆ ಅನುಭವ ಮಂಟಪವಾಗಿ ತಲೆ ಎತ್ತಿ ನಿಂತಿದೆ. ಮಡಿವಾಳಪ್ಪನವರು ಆತ್ಮ ಪರಮಾತ್ಮ, ಸೃಷ್ಟಿ ಕರ್ತ ಎಂಬ ನಿಗೂಢತೆಯನ್ನರಿತುಕೊಂಡಿರುವದಷ್ಟೇ ಅಲ್ಲ ಸ್ವತಃ ಅನುಭಾವದ ಉನ್ನತಿಗೇರಿ ಹಲವಾರು ಸಿದ್ದಿಗಳನ್ನು ಕೈವಶ ಮಾಡಿಕೊಂಡಿದ್ದವರು. ಹುಟ್ಟಾ ಹೋರಾಟಗಾರಾಗಿ, ಅಪಾರ ಜೀವನ ಪ್ರೇಮಿಯಾಗಿ, ಮೌಢ್ಯತೆಯನ್ನು ಖಂಡಿಸುವ ಛಲಗಾರರಾಗಿ, ಕಾಯಕ ದಾಸೋಹ ಪ್ರಸಾದದ ಮಹತ್ವವನ್ನು ಅರಿತವರಾಗಿ ಸತತ ಅನುಭಾವದ ಅನುಸಂಧಾನದಿಂದ ಶಿವಯೋಗಿಯೆನಿಸಿಕೊಂಡು ಜಗದ ಒಳಿತನ್ನು, ಸಕಲ ಜೀವಿಗಳ ಲೇಸನ್ನು ಖಾಯಂಗೊಳಿಸುವಿಕೆಯ ಉದ್ದೇಶವನ್ನಿಟ್ಟುಕೊಂಡು ತಮ್ಮ ಕಾಯವನ್ನು ಜಂಗಮಕ್ಕಾಗಿ ಸವೆಸಿದ್ದವರು. ಹಲವು ಭಾಗದಲ್ಲಿ ಸಂಚರಿಸಿ ತಮ್ಮ ಬದುಕನ್ನು ಮತ್ತು ವಿಚಾರಗಳನ್ನು ಜಂಗಮಗೊಳಿಸಿದ್ದರೂ ಸಹ ಕೊನೆಗೆ ಜೇವರ್ಗಿ ತಾಲ್ಲೂಕಿನ ಕಡಕೋಳದಲ್ಲಿ ತಮ್ಮ ಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಂಡಿದ್ದರು.
ಒಂದೆಡೆ ಶರಣ ಸಾಹಿತ್ಯದ ಒಲವು, ಮತ್ತೊಂದೆಡೆ ಶಂಕರಾಚಾರ್ಯ ನಿಜಗುಣಾದಿಗಳ ಅದ್ವೈತ ಸಿದ್ದಾಂತದ ತತ್ವ, ಮಗದೊಂದೆಡೆ ಸಿದ್ದಿಗಳ ಕುತುಹಲಗಳೆಂಬ ಬಹುಮುಖ ಪಾಂಡಿತ್ಯದ ಫಲಿತವಾಗಿ ತನ್ನ ತಾನರಿಯುವ ಶ್ರೇಷ್ಟ ಸಾಧನೆಯ ಮಾರ್ಗವನ್ನು ಕ್ರಮಿಸುತ್ತಾರೆ. ಇಷ್ಟಲಿಂಗದೊAದಿಗೆ ಅನುಸಂಧಾನ ಮಾಡಿಕೊಳ್ಳುವ ಮೂಲಕ ತಮ್ಮದೇ ಕಾಯದಿಂದ ಕಾಯಕವೆಂಬ ಪೂಜೆಯನ್ನು ಮಾಡಿಕೊಳ್ಳುತ್ತ ಶಿವಯೋಗ ಸಾಧನೆಯಿಂದ ಅನುಭಾವ ಎಂಬ ಪ್ರಸಾದವನ್ನು ಕಂಡುಕೊಳ್ಳುತ್ತಾರೆ. ಬಿದನೂರು, ಚಿಣಮಗೇರಿಯಲ್ಲಿ ಇವರಿಗೆ ನಿಜದ ಅಂತರAಗ, ಬಹಿರಂಗಗಳ ಸಂಘರ್ಷ ಆರಂಭವಾಗಿ ಒಂದೆಡೆ ತಮ್ಮ ಹುಟ್ಟಿನ ಸಮಸ್ಯೆ, ಮತ್ತೊಂದೆಡೆ ಅಂತರಾತ್ಮದ ಸ್ಪಂದನ, ತಾಕಲಾಟ, ಸಾಮಾಜಿಕ ತಲ್ಲಣಗಳು, ಹಲವು ಬಗೆಯ ವಿಷಮತೆಗಳು, ಹಲವು ವೈರುದ್ಯಗಳೆಲ್ಲವೂ ಸೇರಿ ಮತ್ತಷ್ಟು ಗಟ್ಟಿಗೊಳ್ಳುತ್ತಲೇ ಹೋಗುತ್ತಾರೆ. ಇಷ್ಟೆಲ್ಲ ಆದ ಮೇಲೆ ನನಗೆ “ಆವ ಭಯವು ಇನ್ನೇನು” ಎಂದು ತಮ್ಮೊಳಗೇ ಗಟ್ಟಿಯಾಗಿ ಕಲ್ಯಾಣವನ್ನು ಸೃಜಿಸಿಕೊಳ್ಳುತ್ತಾರೆ. ತಮ್ಮಿಡಿ ಆಯುಷ್ಯವನ್ನು ಪೂರ್ತಿಯಾಗಿ ಆದ್ಯಾತ್ಮ ಮತ್ತು ಸಾಧನೆ ಲೋಕೋದ್ದಾರಕ್ಕಾಗಿಯೇ ಮೀಸಲಿರಿಸಿದ್ದ ಕಾರಣ ಉಳಿದ ಯಾವುದೇ ಹಸಿವೆಗಳು ಇವರ ಗಮನಕ್ಕೆ ಬರುತ್ತಿರಲಿಲ್ಲ. ಅಪ್ಪಟ ಜಂಗಮಿಯಾಗಿದ್ದ ಮಡಿವಾಳಪ್ಪ ಒಂದೇ ಸ್ಥಳದಲ್ಲಿ ನಿಂತುಕೊಳ್ಳದೇ ಶ್ರೀಶೈಲ, ಕದಳಿ ಇತರ ತಾಣಗಳತ್ತಲೂ ಪಯಣಿಸುತ್ತಾರೆ. ತಮ್ಮ ನುಡಿಗಳನ್ನು ನಡೆಯ ಮೂಲಕ ಜಂಗಮಗೊಳಿಸಿಕೊಳ್ಳುತ್ತಾರೆ.
ಜೀವಿತದಲ್ಲಿ ಘಟನೆಗಳನ್ನೇ ಸಾಧನೆಯ ಮೆಟ್ಟಿಲುಗಳನ್ನಾಗಿಸಿಕೊಂಡಿದ್ದ ಮಡಿವಾಳಪ್ಪ ಒಂದೊಮ್ಮೆ ಹೊಲವೊಂದರಲ್ಲಿ ಕಬ್ಬು ಚೆನ್ನಾಗಿ ಬೆಳೆದಿರುವುದನ್ನು ನೋಡಿ, ಕೂಡಲೇ ಕಬ್ಬನ್ನು ತಿನ್ನಲು ಆರಂಭಿಸುತ್ತಾರೆ. ತಕ್ಷಣ ಹೊಲದ ಯಜಮಾನ ಬಂದು ಈತ ಕಳ್ಳ ಇರಬಹುದೆಂದು ಚೆನ್ನಾಗಿ ಥಳಿಸುತ್ತಾರೆ. ಆಗಿವರು, “ಹೊಡಿ ಹೊಡಿ ಇನ್ನು ಹೊಡಿ ಈ ನಾಚಿಕೆಗೇಡಿ ಮನಸ್ಸಿಗೆ ಎಷ್ಟು ಹೇಳಿದರೂ ಬುದ್ದಿ ಇಲ್ಲ, ಮಂದಿ ಹೊಲದಾಗ ಕಬ್ಬ ತನ್ನಬೇಕಂತದ ಹೊಡಿ” ಎನ್ನುತ್ತಾರಂತೆ. ಇಲ್ಲಿ ತಮ್ಮ ತಪ್ಪಿನ ಅರಿವಾಗಿ, ಶ್ರಮವಿಹಿಸಿ ಮಾಡುವ ಕಾಯಕದಿಂದಲ್ಲದೇ ಬಂದದ್ದು ಎಂದಿಗೂ ನಮ್ಮ ಪ್ರಸಾದವಾಗದೆಂಬ ಶರಣರ ತತ್ವವಿದೆ. ಹಾಗೆ ಬಂದದ್ದನ್ನು ಪಡೆದರೆ ಶಿಕ್ಷೆಗೆ ಗುರಿಯಾಗಲೇಬೇಕೆಂಬ ಸೂತ್ರವಿದೆ.
ಒಂದೊಮ್ಮೆ ಯಾರದೋ ಮನೆಗೆ ಊಟಕ್ಕೆ ಹೋದಾಗ ಬದನೆಕಾಯಿ ಪಲ್ಲೆ ತುಂಬ ರುಚಿಯಾಗಿದ್ದ ಕಾರಣಕ್ಕೆ ಮತ್ತೇ ಮತ್ತೇ ಬೇಕೆಂದು ಬೇಡುತ್ತಾರೆ. ಕೊನೆಗೆ ಆ ಮನೆಯ ಯಜಮಾನಿ, “ಮುತ್ಯಾ ಪಲ್ಲೆ ಎಲ್ಲ ಖಾಲಿಯಾಗಿದೆ, ದಯಮಾಡಿ ಕ್ಷಮಿಸು” ಎಂದು ಕೈ ಮುಗಿದು, ಇವರ ಕಾಲಿಗೆ ಬಿದ್ದು ಅಳತೊಡಗುತ್ತಾಳೆ. ತಮ್ಮ ಬಾಯಿ ಚಪಲದ ಕುರಿತು ಮಡಿವಾಳಪ್ಪಗೆ ಬೇಸರವಾಗಿ ಮಠಕ್ಕೆ ಬಂದು ತಾವೇ ಒಂದು ಭಾವಿ ತೋಡಿ, ಬೀಳು ಭೂಮಿಯನ್ನು ಸಾಗುವಳಿ ಮಾಡಿ, ಬದನೆ ಗಿಡಗಳನ್ನು ಬೆಳೆದು, ಆ ಗಿಡದಲ್ಲಿ ಬೆಳೆದಿರುವ ಬದನೆಕಾಯಿಗಳಿಂದಲೇ ಪಲ್ಲೆ ಮಾಡಿ ತಿನ್ನುತ್ತಾ, “ಇನ್ನು ತಿನ್ನು ಇನ್ನು ತಿನ್ನು, ಇನ್ನೊಮ್ಮೆ ಯಾರ ಮನೆಯಲ್ಲಿಯೂ ಹೀಗೆ ಬೇಡಬಾರದು” ಎನ್ನುತ್ತಾರಂತೆ.
ಈ ಎರಡೂ ಘಟನೆಗಳಿಗೆ ಇಂಬಾಗುವ ಹಾಗೆ ಒಂದು ಪದ್ಯ ಬರೆಯುತ್ತಾರೆ. ಆ ಪದ್ಯದ ಸಾಲು ಹೀಗಿದೆ, “ಮಾಡಿ ಉಣ್ಣೋ ಬೇಕಾದಷ್ಟು, ಬೇಡಿ ಉಣ್ಣೋ ನೀಡಿದಷ್ಟು, ಕೇಡಿಲ್ಲದರೊಳ ಎಳ್ಳಷ್ಟು, ನಾ ನೋಡಿ ಹೇಳಿದೆನು ಬಲ್ಲಷ್ಟು” ಎಂದು ತಾವು ಅನುಭವಿಸಿ ಬರೆದ ಈ ಕವಿತೆಯ ಮೂಲಕ ಮನುಷ್ಯನಲ್ಲಿರುವ ಹಲವು ಸ್ವಾರ್ಥಗಳನ್ನು ಅನಾವರಣಗೊಳಿಸುತ್ತಾರೆ. ಈ ಕವಿತೆಯಲ್ಲಿ ತಿನ್ನುವುದರ ವಿರುದ್ದ ಸಮರವಿದೆ. ಕಾಯಕ ಮಾಡಿ ತಿನ್ನಬೇಕೆಂಬ ಸೂತ್ರವಿದೆ. ನಮ್ಮ ನಡುವಿನ ಅಪರೂಪದ ಜೀವನದ ಧೀರತನವಿದೆ.
ಅವರು ಕರ್ತಾರನ ಕಮ್ಮಟದಲ್ಲಿ ನಿರಂತರ ಚಲಾವಣೆಯಾಗಿ ಹಲವು ಹೊಡೆತಗಳನ್ನನುಭವಿಸಿ ಗಟ್ಟಿತನವನ್ನನುಭವಿಸುತ್ತಲೇ ಹೋರಾಟ ಮತ್ತು ಸಂಘರ್ಷಗಳ ಮೂಲಕವೇ ಎಲ್ಲವನ್ನು ತಮ್ಮದಾಗಿಸಿಕೊಂಡಿದ್ದರೆಂಬುದನ್ನು ಇಲ್ಲಿ ಅರಿಯಬಹುದಾಗಿದೆ. ಹೀಗೆ ಅವರ ಬದುಕಿನುದ್ದಗಲಕ್ಕೂ ಘಟಿಸಿದ ಬಾಹ್ಯ ಸಂಕಟಗಳೆಲ್ಲವೂ ಅಂತರಂಗವನ್ನೆಲ್ಲ ಹಸನುಗೊಳಿಸುತ್ತದ್ದವು. ಮಡಿವಾಳಪ್ಪ ಇಷ್ಟೆಲ್ಲ ಸಿದ್ದಗೊಳ್ಳಲು ಕಾರಣ ಅವರಿಗೆ ಇಷ್ಟಲಿಂಗದೊಂದಿಗಿನ ನಿರಂತರ ಲಿಂಗಾನುಸಂಧಾನದಿಂದ ಸಂಚಯವಾಗಿರುವ ಯೋಗಶಕ್ತಿ ಎನಿಸುತ್ತದೆ.
ಮಡಿವಾಳಪ್ಪ ತಮ್ಮ ಬದುಕಿನಲ್ಲಿ ಘಟಿಸಿದ ಘಟನೆಗಳಿಂದಲೇ ಅನುಭಾವದ ಅಡುಗೆ ಮಾಡಿದ್ದರು. ಜೊತೆಗೆ ಬಸವಾದಿ ಶರಣರು ಭಾರತೀಯ ತತ್ವ ಶಾಸ್ತçಕ್ಕೆ ನೀಡಿದ್ದ ವಿಶಿಷ್ಟ ಪರಿಕಲ್ಪನೆಯಾಗಿದ್ದ ಹಲವಾರು ಅಸಮಾನತೆ ರಹಿತ ಬದುಕೊಂದನ್ನು ಲಿಂಗ ಸ್ವರೂಪದಲ್ಲಿ ಇಷ್ಟಲಿಂಗದ ಮೂಲಕ ಕಟ್ಟಿಕೊಟ್ಟ ಅನುಭವದ ಸಿದ್ದಾಂತಗಳನ್ನು ಅನುಸಂಧಾನ ಮಾಡಿಕೊಂಡಾಗ ಆಗಿರುವ ಅನುಭಾವದ ಅಡುಗೆಯನ್ನು ಮಾಡಿ ಉಣಬಡಿಸಿದರು. ಅನುಭವ ಎಂಬುದು ಇಹದ ಬದುಕಿನ ಅನುಷ್ಠಾನವಾದರೆ ಆಂತರಿಕವಾಗಿ ಆತ್ಯಂತಿಕ ಸತ್ಯದತ್ತ ಕ್ರಮಿಸುವುದನ್ನೇ ಅನುಭಾವ ಎಂದು ಅಂಥವರನ್ನು ಅನುಭಾವಿ ಎಂದೂ ವಿಶ್ಲೇಷಿಸುತ್ತಿದ್ದರು.
ಅಂದು ದುಡಿಯುವ ಕೈಗಳಿಗಿಂತ ಗವಿಯಲ್ಲಿ, ಗುಡಿಯಲ್ಲಿ ಕುಳಿತು ಪೂಜೆ ಮಾಡುವ ಕೈಗಳೇ ಅಮೃತ ಹಸ್ತವೆಂದು ವೈಭವಿಕರಿಸಿರುವ, ಗಂಧ ವಿಭೂತಿ ಕರ್ಪುರಾದಿಗಳಿಂದಾವರಿಸಿದ ಅಲಂಕಾರಿಕ ದೇಹಗಳೇ ಶ್ರೇಷ್ಠವೆಂದು ನಂಬಿಸಿದ್ದ ವ್ಯವಸ್ಥೆಯಲ್ಲಿ ಬಾಹ್ಯಾಡಂಭರದ ತೋರಿಕೆಯ ಸಾಧನೆಗಳಿಗಿಂತ ಆಂತರ್ಯದಲ್ಲಿಯ ಅರಿವಿನ ಕಣ್ತೆರೆಸಿಕೊಳ್ಳುವಿಕೆಯೇ ಮಹತ್ಸಾಧನೆ, ಬಹಿರಂಗದಲ್ಲಿ ದುಡಿಯುವ ಕಾಯಕದ ಕೈಗಳೇ ಶ್ರೇಷ್ಠವೆಂದು ಮನನ ಮಾಡಿಸಿ ಕಾಯವೇ ದೇವಾಲಯ, ಕಾಯಕವೇ ಕೈಲಾಸ ಎಂದು ನಿರೂಪಿಸಿದ್ದನ್ನೇ ತಮ್ಮ ಅನುಭಾವದ ಅಡುಗೆಯಲ್ಲಿ ಪ್ರಸಾದ ಮಾಡಿ ಅದನ್ನೇ ಜಂಗಮಕ್ಕೆ ದಾಸೋಹಿಸಿದ್ದರು.
ಮಡಿವಾಳಪ್ಪನವರ ಶರಣತ್ವದ ಸರಳತೆಯ ಬದುಕಿನ ಕುರಿತು ಅವರ ಬದುಕಿನಲ್ಲಿ ಒಂದು ಪ್ರಸಂಗ ನಡೆಯುತ್ತದೆ. ಒಮ್ಮೆ ಜೇವರ್ಗಿಯ ಗಂವ್ಹಾರದ ಬಸಲಿಂಗಪ್ಪ ಶಾಸ್ತಿçಗಳು ಮಡಿವಾಳಪ್ಪನನ್ನು ಕಾಣಲು ಕಡಕೋಳಕ್ಕೆ ಬಂದಾಗ ಅಲ್ಲಿ ಒಬ್ಬಾತ ಸೆಗಣಿ ಕಲೆಸುತ್ತ ಕೆಲಸದಲ್ಲಿ ಮಗ್ನನಾಗಿದ್ದ ಆತನನ್ನುದ್ದೇಶಿಸಿ ಶಾಸ್ತಿçಗಳು “ಏ ಮುತ್ಯಾ ಮಡಿವಾಳಪ್ಪನವರು ಎಲ್ಲಿದ್ದಾರೆ?” ಎಂದು ಕೇಳಿದಾಗ, ಆ ವ್ಯಕ್ತಿ “ಅವರು ಬೇರೆ ಊರಿಗೆ ಹೋಗಿದ್ದಾರೆ, ಅವರು ಬರುವವರೆಗೆ ವಿಶ್ರಾಂತಿ ಪಡೆಯಿರಿ” ಎಂದು ಹೇಳಿ ಅವರ ಸಂಪೂರ್ಣ ಅತಿಥಿ ಸೇವೆ ಮಾಡುತ್ತಾರೆ.
ಇದಾಗಿ ಒಂದೆರಡು ದಿನಗಳ ನಂತರ ಬೇರೆ ಊರಿನ ನಾಲ್ಕಾರು ಜನ ಬಂದು ಸೆಗಣಿ ಕಲೆಸುವ ಕೆಲಸ ಮಾಡಿದ್ದ ವ್ಯಕ್ತಿಯನ್ನುದ್ದೇಶಿಸಿ, “ಎಪ್ಪಾ ಮುತ್ಯಾ ಮಡಿವಾಳಪ್ಪ, ನಮ್ಮಲ್ಲಿ ಬಿತ್ತನೆಯ ಜೋಳದ ಕಾಳುಗಳು ಖಾಲಿಯಾಗಿವೆ, ಈ ವರ್ಷ ಹೊಲದಲ್ಲಿ ಬಿತ್ತಲು ನಿಮ್ಮಲ್ಲಿರುವ ಜೋಳದ ಕಾಳುಗಳನ್ನು ತಮ್ಮ ಕೈಯಾರ ಆಶೀರ್ವದಿಸಿ ನಮಗೆ ಕೊಡಬೇಕು” ಎನ್ನುತ್ತಾರೆ. ಆಗ ಬಸಲಿಂಗಪ್ಪ ಶಾಸ್ತ್ರಿಗಳು ಆಶ್ಚರ್ಯಚಕಿತರಾಗಿ ಇಲ್ಲಿಯವರೆಗೆ ನಮ್ಮ ಸೇವೆ ಮಾಡಿದವರೇ ಮಡಿವಾಳಪ್ಪ ಎಂದು ತಿಳಿದು “ಇದೇನು ಮಡಿವಾಳಪ್ಪ ಹೆಂಡಿ ಕಸದ ಮಾಯೆ ತಮಗಿನ್ನು ಬಿಟ್ಟಲ್ಲವೇ” ಎಂದು ಗೇಲಿ ಮಾಡಿದಾಗ. ಮಡಿವಾಳಪ್ಪ ಅರ್ಥಪೂರ್ಣವಾಗಿ ಮುಗಳ್ನಕ್ಕು ತಮ್ಮ ಕಾಯಕದಲ್ಲಿ ಮುಂದುವರೆಯುತ್ತಾರಂತೆ.
ಹೀಗೆ ಮಡಿವಾಳಪ್ಪನಿಗೆ ಹುಲ್ಲು ಹೊರೆಯುವುದು, ಬೆರಣಿ ತಟ್ಟುವುದು, ಕಸ ಗುಡಿಸುವುದು ಇವೆಲ್ಲ ಇಷ್ಟಲಿಂಗದೊಂದಿಗೆ ಅನುಸಂಧಾನ ಮಾಡಿಕೊಳ್ಳುವ ಕಾಯಕದ ಪೂಜೆಯಂತಾಗಿದ್ದವು. ಹೀಗೆ ಮಾಡುತ್ತಲೇ ಈ ಕ್ರಿಯೆಗಳೊಂದಿಗೆ ಆಧ್ಯಾತ್ಮದ ಪರಿಭಾಷೆ ಹೊಂದಿಸುತ್ತ ಪದಗಳನ್ನು, ವಚನಗಳನ್ನು ಕಟ್ಟಿ ಹಾಡುತ್ತಿದ್ದರು. ತಮ್ಮ ತತ್ವ ಪದಗಳ ಮೂಲಕವೇ ಹನ್ನೆರಡನೆ ಶತಮಾನದ ಶರಣರ ಜೀವನ ತತ್ವಗಳನ್ನು ಪುನರ್ ಪ್ರತಿಷ್ಠಾಪಿಸುವ ಕಾಯಕದ ಸಿದ್ದಾಂತ, ಜಾತಿ, ಲಿಂಗ, ವರ್ಣ, ಅಸಮಾನತೆಯನ್ನು ಮೀರಿದ ಸಹಜ ಬದುಕಿನ ಕುರಿತು ಅನುಭವವನ್ನು ಜಂಗಮಗೊಳಿಸುತ್ತಾ, ಇದಕ್ಕಿಂತ ದೊಡ್ಡದಾವುದು ಇಲ್ಲವೆನ್ನುತ್ತಾರೆ. ತಮ್ಮೊಂದಿಗೆ ಖೈನೂರು ಕೃಷ್ಣಪ್ಪ, ತೆಲಗಬಾಳ ರ‍್ಯಾವಪ್ಪ, ಕಡ್ಲೇವಾಡದ ಸಿದ್ದಪ್ಪ, ಚನ್ನೂರು ಜಲಾಲಸಾಬ, ಅರಳಗುಂಡಿಗೆ ಭಾಗಮ್ಮ ಹೀಗೆ ಹಲವಾರು ಸಾಧಕರೊಡನೆ ಆದ್ಯಾತ್ಮದ ಆಟ ಆಡುತ್ತಿದ್ದರು.
ಅನುಭವ ಮಂಟಪವದು ಬರೀ ಮಾತಿನ ಮಂಟಪವಲ್ಲವೆಂದು ನಂಬಿಕೊಂಡು, ಕಡಕೊಳ ಮಠವನ್ನು ಅನುಭವ ಮಂಟಪವನ್ನಾಗಿಸುವತ್ತ ಸ್ಪಷ್ಟವಾದ ಕಾರ್ಯ ಯೋಜನೆಯೊಂದನ್ನು ಅನುಸರಿಸಿ ಸಾಕಾರಗೊಳಿಸುವ ಸಾಧನವಾಗಿ ಗರಡಿ ಮನೆಯನ್ನಾಗಿಸಿದ್ದರು. ಅದಕ್ಕೆ ಇವರನ್ನು ಜನ ಆರೂಢರಂತೆ, ವೇದಾಂತಿಯಂತೆ, ಮಠದಯ್ಯನಂತೆ, ಅನುಭಾವಿಯಂತೆ, ಸಮಾಜ ಸುಧಾರಕನಂತೆ, ಬಂಡಾಯಗಾರನಂತೆ, ಜಗದ ಜ್ಯೋತಿಯಂತೆ ಕಂಡಿದ್ದರು. ನನಗಂತೂ ಮಡಿವಾಳಪ್ಪನೆಂದರೆ ಶರಣರ ಮುಂದುವರಿದ ಭಾಗವಾಗಿ ಶ್ರಮಿಸುತ್ತಾ ಮುರಿದು ಹೋದ ವ್ಯವಸ್ಥೆಯನ್ನು ಮರುಕಟ್ಟುವ ಮೂಲಕ ಮತ್ತೇ ಕಲ್ಯಾಣವಾಗಿಸುವತ್ತ ಸದಾ ಯೋಚಿಸುತ್ತಿದ್ದರೆನಿಸುತ್ತಿದೆ. ಮಡಿವಾಳಪ್ಪನ ಅದೆಷ್ಟೋ ತತ್ವ/ವಚನ ಪದಗಳಲ್ಲಿ ನನಗೆ ಅತಿ ಹೆಚ್ಚು ಇಷ್ಟವಾಗಿದ್ದು ಇದು.
“ತನ್ನ ತಾನು ತಿಳಿದ ಮೇಲೆ ಇನ್ನೇನಿನ್ನೇನೋ ತನ್ನಂತೆ ಸರ್ವರ ಜೀವ ಮನ್ನಿಸಿ ಮೂಕಾದ ಮೇಲೆ.
ತಾನೇ ಪೃಥ್ವಿ ಅಪ್ಪು ತೇಜ ತಾನೆ ವಾಯು ಆಕಾಶಾತ್ಮ ತಾನೆ ಸೂರ್ಯ ಚಂದ್ರ ತಾರೆ ತಾನೆ ಬ್ರಹ್ಮಾಂಡಾದ ಮೇಲೆ.
ತಾನೇ ಘ್ರಾಣ ಜಿಹ್ವೆ ನೇತ್ರ ತಾನೆ ತ್ವಕ್ಕುಶ್ರೋತೃ ಹೃದಯ ತಾನೆ ಕಾಯ ಕರಣ ಹರಣ ತಾನೆ ಪಿಂಡಾಂಡಾದ ಮೇಲೆ.
ತಾನೆ ಹೆತ್ತ ಸತ್ತ ಅತ್ತ ತಾನೆ ನಿತ್ಯ ನುತ್ಯ ಸತ್ಯ ತಾನೆ ಆರ್ತ ಬೆರ್ತ ಮರ್ತ ತಾನೆ ಸರ್ವವಾದ ಮೇಲೆ.
ತಾನೆ ಲಕ್ಷ ಸಾವಿರ ನೂರ ಹತ್ತೊಂಬತ್ತಗೆಂಟೇಳು ತಾನೆ ಆರೈದು ನಾಲ್ಕು ಮೂರು ತಾನೆ ಎರಡೊಂದಾದ ಮೇಲೆ.
ತಾನೆ ನೀನು ನೀನೆ ತಾನು ತಾನೆ ಅಲ್ಲ ತಾನೆ ಇಲ್ಲ ತಾನೆ ಮಹಾಂತ ತಾನೆ ತಾನು ಏನೋ ಏನೊಂದಾದ ಮೇಲೆ”.
ಮೇಲಿನ ಇಡೀ ಪದ್ಯ ಅವರ ನಿಲುವಿಗಿಡಿದ ನಿಲುವುಗನ್ನಡಿಯಾಗಿದೆ. ವಿಶ್ವ ಕುಟುಂಬಿಯಾಗಿ ತಾದ್ಯಾತ್ಮವೇ ಶಿವಯೋಗ ಅದುವೇ ಜೀವ ಮತ್ತು ಜೀವನದ ಬಹುದೊಡ್ಡ ಸಾಧನೆ ಎನ್ನುತ್ತಾರೆ. ಈ ಪದ್ಯ ಓದಿದ ಮೇಲೆ ವಿಶ್ಲೇಷಿಸಿದರೆ ಅದರ ಗಟ್ಟಿತನಕ್ಕೆ ಪೆಟ್ಟಾಗಿ ಜಾಳುತನ ಮನದಲ್ಲುಳಿಯುವದೆಂಬ ಭಾವನೆಯಿಂದ ಮತ್ತೊಮ್ಮೆ ವಿಶ್ಲೇಷಿಸದೇ ಸ್ವಯಂವೇದ್ಯವಾಗಿರುವ ಇಡೀ ಪದ್ಯವನ್ನು ತಮ್ಮೊಂದಿಗೆ ಯಥಾವತ್ತಾಗಿ ಹಂಚಿಕೊಂಡಿರುವೆ.
ಹೀಗೆ, ಕಡಕೊಳ ಮಡಿವಾಳಪ್ಪ ತಮ್ಮ ಗಟ್ಟಿಯಾದ ದಿಟ್ಟ, ಸ್ಪಷ್ಟ ನಿಲುವಿನಿಂದಾಗಿ ಇಂದಿಗೂ ಹಲವಾರು ಜಿಜ್ಞಾಸುಗಳಿಗೆ ಆಶ್ಚರ್ಯಕರವಾಗಿ ಗಮನ ಸೆಳೆಯುವಂತೆ ಮಾಡಿದ್ದಾರೆ. ೧,೧೦೦ ತಾತ್ವಿಕ ಪದಗಳನ್ನು, ೧,೧೦೦ ಭಕ್ತಿ ಪದಗಳನ್ನು ಮತ್ತು ೧,೧೦೦ ಮಂಗಳಾರತಿ ಪದಗಳನ್ನು ಒಟ್ಟು ೩,೩೦೦ ಸ್ವರ ವಚನಗಳನ್ನು ಬರೆದಿರುವರೆಂಬ ಒಂದು ಲೆಕ್ಕಾಚಾರವಿದೆ. ಆದರೆ ಜನ ಮಾನಸದ ಜನಪದವಾಗಿ ಅದೆಷ್ಟೋ ಲೆಕ್ಕವಿಲ್ಲದಷ್ಟು ತತ್ವಪದಗಳನ್ನು ಕಟ್ಟಿಕೊಟ್ಟು ಬಿಟ್ಟು ಹೋಗಿದ್ದಾರೆ. ಇವುಗಳಲ್ಲಿ ಪ್ರಕಟವಾಗಿವುದು ಸದ್ಯ ೩೧೦ ಪದಗಳು.
ಕಲ್ಯಾಣದ ಹೆಬ್ಬಾಗಿಲನ ಇಳೆಯ ಮಗನಾದ ಮಡಿವಾಳಪ್ಪ ಕಡಕೊಳದ ಸ್ಥಾವರದ ಮಠದಲ್ಲಿ ಕೇವಲ ಸ್ಮಾರಕವಾಗಿ ನನ್ನಂಥವರೊಳಗೆ ಸದಾ ಜಂಗಮವಾಗಿದ್ದಾನೆಂದುಕೊಂಡೇ ಮಠದ ಆವರಣದಲ್ಲಿ ಸುತ್ತಾಡುತ್ತಾ ಮೂಲ ಕರ್ತೃ ಗದ್ದಿಗೆಗೆ ಕೈ ಮುಗಿದು ಬಾಗಿ ನಮಿಸುವಾಗ ಬೇಡವೆಂದರೂ ಆತನ ಕಡೆಯ ದಿನದ ಕ್ಷಣಗಳು ನೆನಪಾಗಿ ಅಕ್ಷರಶಃ ಕಣ್ಣೀರಾದೆ. ಅಂದು ಉರಿಯುಂಡ ಕರ್ಪೂರದಂತೆ ಕ್ರಿ.ಶ. ೧೮೭೬ರಲ್ಲಿ ಒಂದು ದಿವಸ ಮಡಿವಾಳಪ್ಪ ಮಠದ ಆವರಣದಲ್ಲಿ ಸ್ವಂತ ಕಟ್ಟಿದ ಗವಿಯೊಂದರಲ್ಲಿ ಧ್ಯಾನಕ್ಕೆ ಕುಳಿತುಕೊಳ್ಳುವಾಗ “ಮೂರು ದಿನಗಳ ನಂತರ ಬಾಗಿಲು ತೆರೆಯಿರಿ” ಎಂದು ಅಲ್ಲಿದ್ದವರನ್ನುದ್ದೇಶಿಸಿ ತಿಳಿಸಿದ್ದರಂತೆ. ಆದರೆ ಯಾವುದೋ ಕಾರಣಕ್ಕೆ ಅಲ್ಲಿದ್ದ ಯಾರೊಬ್ಬರು ಬಾಗಿಲು ತೆರೆಯದಿದ್ದಾಗ ಕೆಲ ದಿನಗಳ ನಂತರ ಮುಚ್ಚಿದ ಗವಿಯಲ್ಲಿ ಒಂದು ರಂದ್ರ ಕಂಡಂತಾಗಿ ಆ ಮೂಲಕ ಮಡಿವಾಳಪ್ಪನ ಜೀವಾತ್ಮ ಬೆಳಕಿನ ಪ್ರಭೆಯಾಗಿ ಬಯಲಲ್ಲಿ ಬಯಲಾಗಿ ಮಹಾಬಯಲಲ್ಲಿ ಜಂಗಮಾತ್ಮವಾಗಿ ಲೀನವಾಯಿತೆಂಬ ವಿಷಯ ನೆನಪಾಯಿತು.
ತಮ್ಮ ಪದಾರ್ಥ ಕಾಯವನ್ನು ಪ್ರಸಾದೀಕರಣಗೊಳಿಸಿಕೊಳ್ಳಲು ಮಡಿವಾಳಪ್ಪ ಆಯ್ದುಕೊಂಡಿದ್ದು ಭಕ್ತಿಪಂಥ ಅದರಲ್ಲೂ ಬಸವಾದಿ ಪ್ರಮಥರ ಗಾಢ ಪ್ರಭಾವವನ್ನು ತಮ್ಮೊಳಗಿಂಬಿಟ್ಟುಕೊಂಡೇ ತಮ್ಮ ಪ್ರಸಾದಿ ಕಾಯವನ್ನು ಜಂಗಮಕ್ಕೆಡೆಮಾಡಿಕೊAಡಿರುವ ಇವರನ್ನು ಆ ದೇವ ತನಗೆ ಬೇಕೆಂದು ಬಲು ಪ್ರೀತಿಯಿಂದ ಎತ್ತಿಕೊಂಡಿದ್ದ. ಹೀಗೆ ಜಂಗಮಕ್ಕಳಿವಿಲ್ಲವಾದ ಇವರ ನೆನಪನ್ನು ಸ್ಥಾವರವನ್ನಾಗಿ ಉಳಿಸಿಕೊಳ್ಳಲು ಇದೇ ಗವಿಯ ಮೇಲಿನ ಭಕ್ತರು ಕಟ್ಟಿರುವ ಕಟ್ಟೆಯು ಗದ್ದುಗೆಯಾಗಿ ಕಡಕೊಳದ ಮಠದಲ್ಲಿ ಭಕ್ತರ ಭಕ್ತಿಭಾವದಲ್ಲಿ ಇಂದಿಗೂ ಪೂಜನೀಯವಾಗಿದೆ. “ನನ್ನೊಳಗಿದ್ದಾತನೇ ನನ್ನ ನಡೆಗೆ ಅಹುದಹುದೆಂದಮೇಲೆ ನನಗಿನ್ನೇನಿನ್ನೇನು...?” ಎಂಬ ಗಟ್ಟಿ ಭಾವದಲ್ಲಿ ಜಂಗಮವಾಗಿ ಸವೆದಿದ್ದ ಮಡಿವಾಳಪ್ಪ ನಮ್ಮಂಥವರಿಗೊಂದು ಆದರ್ಶ ಪಥವಾಗಿದ್ದಾರೆ ಆ ಪಥದ ಪಥಿಕರು ನಾವಾಗಬೇಕಷ್ಟೆ.
"ದಲಿತರು ಒಳಪಂಗಡಗಳ ಭಾವನಾತ್ಮಕ ಸೆಳವಿಗೆ ಸಿಕ್ಕು ಮೂಲ ಸಿದ್ದಾಂತದಿಂದ ದೂರವಾಗುತ್ತಿದ್ದಾರೆ. ಇಂದು ಅಂಬೇಡ್ಕರ್ ವಿ...
ಬೆಂಗಳೂರು : ಬೆಂಗಳೂರು ಸಾಹಿತ್ಯ ಉತ್ಸವ (BlrLitFest)ವು ಪ್ರತಿ ವರ್ಷ ನಡೆಯುವ ಅತ್ಯಂತ ನಿರೀಕ್ಷಿತ ಸಾಂಸ್ಕೃತಿಕ ಕಾರ್ಯ...
ಮಗಳ ನೋವನ್ನು ಕಂಡು ಹೆತ್ತವರು ಜರ್ಜರಿತರಾಗುವ ದೃಶ್ಯವನ್ನು ಹಾಗೂ ಅಪ್ಪ ಅಮ್ಮನ ಧಾವಂತದ ಬದುಕಿನಲ್ಲಿ ಮಕ್ಕಳು ಬಡವಾಗುವ ಸ...
©2025 Book Brahma Private Limited.