ನಾಸ್ತಿಕ ಆಸ್ತಿಕತೆಯ ಮೂಲಭೂತ ವ್ಯತ್ಯಾಸವೇ ನಂಬಿಕೆ


"ನಂಬಿಕೆ ಅಪನಂಬಿಕೆಗಳನ್ನು ದಾಟಿ ಓದಬಹುದಾದ ಪುಸ್ತಕವಿದು. ನಂಬುವವರಿಗೆ ಅವರ ನಂಬಿಕೆಗೆ ಪುಷ್ಠಿ. ನಂಬದಿರುವವರಿಗೆ ಇದು ರೋಚಕತೆ. ಒಟ್ಟಾರೆಯಾಗಿ ಚಂದದ ಓದಿಗೆ ಮಾತ್ರ ನಾನು ಗ್ಯಾರಂಟಿ ಕೊಡಬಲ್ಲೆ," ಎನ್ನುತ್ತಾರೆ ಗುರುರಾಜ ಕೊಡ್ಕಣಿ, ಯಲ್ಲಾಪುರ. ಅವರು ತಮ್ಮ `ಪ್ಯಾರಾನಾರ್ಮಲ್’ ಕೃತಿಗೆ ಬರೆದ ಮೊದಲ ಮಾತು.

For those who believe, no explaination is necessary. For those who dont , no explaination is possible...

1980ರಲ್ಲಿ ತೆರೆ ಕಂಡ ಅನಂತ್ ನಾಗ್ ಅಭಿನಯದ , ’ಗೆಹರಾಯಿ’ ಎನ್ನುವ ಹಿಂದಿ ಹಾರರ್ ಸಿನಿಮಾದ ಆರಂಭಿಕ ಸಾಲುಗಳಿವು. ’ನಂಬುವವರಿಗೆ ಯಾವ ವಿವರಣೆಯ ಅಗತ್ಯವೂ ಇಲ್ಲ. ನಂಬದಿರುವವರಿಗೆ ಯಾವ ವಿವರಣೆಯೂ ಸಾಧ್ಯವಿಲ್ಲ’ ಎನ್ನುವುದು ಅರ್ಥ. ನಂಬಿಕೆಯ ಬಗೆಗಿನ ಅತ್ಯಂತ ಸೂಕ್ತವಾದ ವಿವರಣೆಯೆನ್ನಿಸಿತು ಯಾಕೋ. ದೇವರು, ದೆವ್ವದಂತಹ ಅತಿಮಾನುಷ ಶಕ್ತಿಗಳನ್ನು ನಂಬುವವರಿಗೆ ಅವುಗಳ ಕುರಿತು ನಂಬಿಸುವ ಅಗತ್ಯವಿರದು. ಏನನ್ನೂ ನಂಬದೇ ಇರುವ ನಾಸ್ತಿಕರಿಗೆ ಅದೇನೇ ವಿವರಣೆ ಕೊಟ್ಟರೂ ನಂಬಿಕೆ ಹುಟ್ಟದು. ನಾಸ್ತಿಕ ಆಸ್ತಿಕತೆಯ ಮೂಲಭೂತ ವ್ಯತ್ಯಾಸವೇ ನಂಬಿಕೆ.

ಹಾಗೆಂದು ನಂಬಿಕೆಯೊಂದೇ ನಾಸ್ತಿಕ ಆಸ್ತಿಕತೆಗಳ ಅಸ್ತಿತ್ವದ ಬುನಾದಿಯಾ..? ಅಲ್ಲವೆನ್ನುತ್ತಾರೆ ಆಚಾರ್ಯ ರಜನೀಶ್ ಓಶೋ. , ’ನಂಬಿಕೆ ಎನ್ನುವ ಪದವೇ ಅನರ್ಥಕಾರಿ. ಆಸ್ತಿಕ ಎನ್ನುವವನು ದೇವರನ್ನು ನಂಬುತ್ತಾನೆ. ನಾಸ್ತಿಕ ಎನ್ನುವವನು ದೇವರನ್ನು ನಂಬುವುದಿಲ್ಲ. ಒಟ್ಟಾರೆ ಇಬ್ಬರ ಅಹಂ ತಣಿಕೆಗೂ ನಂಬಿಕೆಯೇ ಜೀವಾಳ. ಆದರೆ ಅದು ಸತ್ಯವಲ್ಲ. ನಂಬಿಕೆ, ಅಪನಂಬಿಕೆಗಳ ಹೊರತಾಗಿ ವಾಸ್ತವ ಬೇರೆಯದ್ದೇ ಇದೆ. ದೇವರು ಇಲ್ಲ ಎನ್ನುವವನು ದೇವರು ಇಲ್ಲವೆನ್ನುವುದನ್ನು ಕಂಡುಕೊಳ್ಳಬೇಕು. ದೇವರು ಇದ್ದಾನೆ ಎನ್ನುವ ಆಸ್ತಿಕರು ದೈವತ್ಯಕ್ಕೆ ಸಾಕ್ಷಿ ಕಾಣಬೇಕು. ಸತ್ಯವೆಂದರೆ ಹಾಗೆ, ಅದು ವಾಸ್ತವದ ಹುಡುಕಾಟ. ವಾಸ್ತವದ ಸಂಶೋಧನೆ. ಅಂಥ ಕಡೆಗಳಲ್ಲಿ ನಂಬಿಕೆ ಎನ್ನುವ ಪದಕ್ಕೆ ಅರ್ಥವಿಲ್ಲ. ಅರ್ಥ ಇರಲೂ ಬಾರದು ’ಎನ್ನುವುದು ಅವರ ತರ್ಕ.

`ಪ್ಯಾರಾನಾರ್ಮಲ್’ ಎನ್ನುವ ಈ ಪುಸ್ತಕ ಬರೆಯುವ ಹೊತ್ತಿಗೆ ನಂಬಿಕೆ ಅಪನಂಬಿಕೆಗಳ ನಡುವಿನ ಜಿಜ್ಞಾಸೆ ನನಗೆ ಮನದಲ್ಲಿ. ಇಲ್ಲಿಯವರೆಗೆ ನಾಲ್ಕು ಹಾರರ್ ಕೃತಿಗಳನ್ನು, ಒಂದು ಅನುವಾದಿತ ಕಥಾ ಸಂಕಲನವನ್ನು ಮತ್ತೊಂದು ಲಲಿತ ಪ್ರಬಂಧಗಳ ಕೃತಿಯನ್ನು ರಚಿಸಿದ್ದೇನೆ. ಆದರೆ ಹಾರರ್ ನನ್ನ ನೆಚ್ಚಿನ ಸಾಹಿತ್ಯದ ಪ್ರಕಾರ. ಮೊಟ್ಟ ಮೊದಲ ಕೃತಿಯಾದ ’ ಪ್ರತಿಜ್ಞೆ’ ಇಂಗ್ಲಿಷಿನ ಪ್ರಸಿದ್ಧ ಹಾರರ್ ಕಾದಂಬರಿ ’ಇಟ್’ ನ ಮರುಸೃಷ್ಟಿ. ಎರಡನೇ ಕಾದಂಬರಿ, `ವಿಕ್ಷಿಪ್ತ ’ ಕೂಡ ಹಾರರ್ ಕಥಾವಸ್ತುವಿದ್ದ ಕಾದಂಬರಿಯೇ. ಮೂರನೇಯ ಕಾದಂಬರಿ ’ಅತಿಮಾನುಷ’ ಹಾರರ್ ಥ್ರಿಲ್ಲರ್ ಆಗಿದ್ದರೂ ಹೆಚ್ಚಾಗಿ ವಾಮ ವಿದ್ಯೆಗಳನ್ನು ಕೇಂದ್ರಬಿಂದುವಾಗಿಟ್ಟುಕೊಂಡು ಬರೆದ ಕೃತಿ. ಎಲ್ಲ ಕಾದಂಬರಿಗಳ ಧಾಟಿಯೊಂದೇ. ಸ್ವಲ್ಪ ಸಂಶೋಧನೆ, ಜಾಸ್ತಿ ಕಲ್ಪನೆ ಮತ್ತು ಭರಪೂರ್ ಮನೋರಂಜನೆ.

ಆದರೆ ಈ ಬಾರಿ ಮತ್ತೊಂದು ಕೃತಿ ರಚಿಸುವಾಗ ಕೊಂಚ ವಿಭಿನ್ನವಾದುದ್ದೇನೋ ರಚಿಸಬೇಕು ಎನ್ನಿಸಿತ್ತು. ನೆಚ್ಚಿನ ಪ್ರಕಾರವೇ ಬರೆದರೂ ಅದರಲ್ಲಿಯೇ ವಿಶೇಷವಾದದ್ದೇನೋ ಕೊಡಬೇಕು ಎನ್ನುವ ಆಸೆ. ಹಾಗಾಗಿ ಈ ಬಾರಿ ಕೇವಲ ಕಲ್ಪನಾಶಕ್ತಿಯನ್ನು ಅವಲಂಬಿಸಿ ಏನನ್ನೋ ರಚಿಸಬೇಕು ಎನ್ನಿಸಲಿಲ್ಲ. ಕಲ್ಪನೆಗಿಂತ ವಾಸ್ತವದ ಅನುಭವಗಳನ್ನು ದಾಖಲಿಸಿ ಕೃತಿಯೊಂದನ್ನು ರಚಿಸೋಣವೆಂದುಕೊಂಡೆ. ಅದರ ಫಲವಾಗಿ ಹೊರ ಬಂದದ್ದೇ ಈ ’ಪ್ಯಾರಾನಾರ್ಮಲ್’

ಪ್ಯಾರಾನಾರ್ಮಲ್ ಎನ್ನುವುದಕ್ಕೆ ಕನ್ನಡದಲ್ಲಿ ’ಅಧಿಸಾಮಾನ್ಯ’ ಎನ್ನುತ್ತಾರಂತೆ. ದೆವ್ವ ಭೂತ ಪ್ರೇತಗಳ ಕುರಿತಾದ ವೈಜ್ಞಾನಿಕ ಅಧ್ಯಯನಕ್ಕೆ ಇಂಗ್ಲಿಷ್ ಹೆಸರು ಅದು. ದೆವ್ವ ಭೂತಗಳ ಬಗ್ಗೆ ವೈಜ್ಞಾನಿಕ ಅಧ್ಯಯನ ಎನ್ನುವುದೇ ವಿರೋಧಾಭಾಸದಂತೆ ಭಾಸವಾದರೂ ಹೀಗೊಂದು ವೈಜ್ಞಾನಿಕ ಅನ್ವೇಷಣೆಯ ಶಾಖೆ ಇರುವುದಂತೂ ಹೌದು. ಅವರ ಅಧ್ಯಯನಕ್ಕೆ ಅವರದ್ದೇ ಆದ ನಿಯಮಗಳಿವೆ. ಸತ್ಯಾಸತ್ಯತೆಯ ನಿರೂಪಣೆಗೆ ಅವರದ್ದೇ ಆದ ಪ್ರಯೋಗಗಳಿವೆ. ಪ್ರಯೋಗಕ್ಕೆ ಸಹಕಾರಿಯಾಗುವ ಯಂತ್ರಗಳೂ ಇವೆ. ವಿದೇಶದಲ್ಲಿ ಈ ವಿಭಾಗ ತುಂಬ ಪ್ರಸಿದ್ಧವಾದರೂ ಭಾರತದಲ್ಲಿ ಈ ವಿಭಾಗದ ಆಕರ್ಷಣೆಗೊಳಗಾದವರು ತೀರ ಕಡಿಮೆ. Indian Paranormal Society ಯನ್ನು ಸ್ಥಾಪಿಸಿದ ಗೌರವ್ ತಿವಾರಿ ಅಧಿಕೃತವಾಗಿ ಭಾರತದ ಮೊಟ್ಟ ಮೊದಲ ಪ್ಯಾರಾನಾರ್ಮಲ್ ಸಂಶೋಧಕ. ಅವನ ನಂತರ ನಿಧಾನವಾಗಿ ಅನೇಕರು ಈ ಕ್ಷೇತ್ರದತ್ತ ಆಕರ್ಷಿತರಾದರು. ಇಂದಿಗೂ ಪ್ಯಾರಾನಾರ್ಮಲ್ ಕ್ಷೇತ್ರದ ಬಗ್ಗೆ ಭಾರತೀಯರ ಆಸಕ್ತಿ ಕಡಿಮೆಯಾದರೂ ಇತ್ತೀಚಿನ ದಿನಗಳಲ್ಲಿ ಅಧಿಸಾಮಾನ್ಯ ಕ್ಷೇತ್ರ ಬೆಳವಣಿಗೆ ಕಾಣುತ್ತಿರುವುದಂತೂ ಹೌದು.

ಆಗಲೇ ಹೇಳಿದಂತೆ ಈ ಪುಸ್ತಕ ಪ್ಯಾರಾನಾರ್ಮಲ್ ವಿಷಯಗಳ ಕುರಿತಾದ ಪುಸ್ತಕ. ಇಲ್ಲಿ ಭಾರತದ ಅನೇಕಾನೇಕ ಹೌಂಟೆಡ್ (ಭಯಜನಕ) ಸ್ಥಳಗಳ ಕುರಿತಾದ ಮಾಹಿತಿಯಿದೆ. ದೆವ್ವ ಭೂತಗಳ ಬಗೆಗೆ ಅಧಿಸಾಮಾನ್ಯದ ಸಂಶೋಧಕರಿಗೆ ’ವಿವಾದಿತ’ ಸಾಕ್ಷಿ ಸಿಕ್ಕಿರುವ ಸ್ಥಳಗಳ ವಿವರಗಳಿವೆ. ವೈಜ್ಞಾನಿಕವಾಗಿ ನಿರೂಪಿಸಲಾಗದ ಆದರೆ ಮನುಷ್ಯನ ಪ್ರಜ್ಞೆಯ ಅನುಭವಕ್ಕೆ ಬರುವ ಅಲೌಕಿಕ ಘಟನೆಗಳ ಬಗ್ಗೆ ವಿವರಗಳಿವೆ. ನಂಬುವವರಿಗೆ ಸತ್ಯವಿದೆ, ನಂಬದವರಿಗೆ ರೋಚಕತೆ ಇದೆ.

ಪುಸ್ತಕ ಪ್ರಕಟವಾಗುವ ಈ ಹೊತ್ತಿಗೆ ಒಂದಷ್ಟು ಜನರಿಗೆ ಕೃತಜ್ಞತೆಗಳನ್ನು ತಿಳಿಸುವುದು ನನ್ನ ಕರ್ತವ್ಯ. ಮೊದಲಿಗೆ ಇಂಥದ್ದೊಂದು ಪುಸ್ತಕ ಬರೆಯಬೇಕು ಎನ್ನುವ ಯೋಚನೆ ಬಂದಾಗ ,’ಬರೀರಿ ಸರ್ ನೀವು’ ಎನ್ನುವ ಪ್ರೀತಿಯ ಆಗ್ರಹದೊಂದಿಗೆ ’ಕೊಡಿ ಪ್ರಕಟಿಸೋಣ’ ಎಂದವರು ’ಅಂಕಿತ ಪುಸ್ತಕ’ದ ಪ್ರಕಾಶ್ ಕಂಬತ್ತಳಿ ಸರ್. ನನ್ನ ಮೊಟ್ಟ ಮೊದಲ ಕೃತಜ್ಞತೆ ಅವರಿಗೇ ಸಲ್ಲಬೇಕು. ಹೀಗೊಂದು ಪುಸ್ತಕ ಬರೆಯಲು ಆಕರ ಬೇಕು, ಸರಿಯಾದ ಮಾಹಿತಿ ಬೇಕು ಎಂದಾಗ ಮೊದಲು ನೆನಪಾಗಿದ್ದು ಇಂಡಿಯನ್ ಪ್ಯಾರಾನಾರ್ಮಲ್ ಸೊಸೈಟಿ. ಭಾರತದಲ್ಲಿ ಅಧಿಸಾಮಾನ್ಯ ಸಂಗತಿಗಳ ಕುರಿತಾಗಿ ಅವರಷ್ಟು ಆಳವಾದ ಅಧ್ಯಯನ ಮಾಡಿರುವವರು ಕಡಿಮೆ. ಹಾಗಾಗಿ ಸಹಾಯಕ್ಕಾಗಿ ಅವರಿಗೊಂದು ಈ ಮೇಲ್ ಕಳುಹಿಸಿದೆ. ತಕ್ಷಣವೇ ಸ್ಪಂಧಿಸಿದ ಅವರು ಅನೇಕಾನೇಕ ಆಕರ ಕೃತಿಗಳ ಹೆಸರನ್ನು ತಿಳಿಸಿಕೊಟ್ಟರು. ಹಾಗೆ ಸಹಾಯಕ್ಕೆ ಬಂದವರಲ್ಲಿ ಮತ್ತೊಬ್ಬರು ಪಶ್ಚಿಮ್ ಬಂಗಾಳದ ದೇವರಾಜ್ ಸನ್ಯಾಲ್ ಎನ್ನುವ ಪ್ಯಾರಾನಾರ್ಮಲ್ ಅನ್ವೇಷಕ. ’ Detectives Of Supernaturals' ಎನ್ನುವ ತಂಡದ ಸಂಸ್ಥಾಪಕರಾಗಿರುವ ದೇವರಾಜ್ , ಕೊಲ್ಕೊತ್ತಾದ ಪೋಲಿಸರೊಡಗೂಡಿ, ’Rise Above Fear' ಅಭಿಯಾನವನ್ನೂ ಸಹ ನಡೆಸಿದವರು. ಕೊಲ್ಕತ್ತಾದಲ್ಲಿ ನಡೆದ ಘಟನೆಯೊಂದಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಕೊಟ್ಟಿದ್ದಲ್ಲದೇ , ಪುಸ್ತಕದ ಕುರಿತಾಗಿ ನಾಲ್ಕು ಸಾಲುಗಳನ್ನು ಸಹ ಬರೆದರು. ಅವರೆಲ್ಲರಿಗೂ ನಾನು ಚಿರಋಣಿ. ಪುಸ್ತಕದ ಮುದ್ರಕರಿಂದ ಹಿಡಿದು .ಮುಖಪುಟ ವಿನ್ಯಾಸದಂತಹ ಮಹತ್ತರದ ಕೆಲಸಗಳನ್ನು ಮುಗಿಸಿಕೊಟ್ಟ ಎಲ್ಲರಿಗೂ ನನ್ನದೊಂದು ಹೃತ್ಪೂರ್ವಕ ವಂದನೆ.ಇನ್ನು ಪ್ರತಿಸಲದಂತೆ ಈ ಬಾರಿಯೂ ಪುಸ್ತಕದ ಪ್ರತಿ ಅಧ್ಯಾಯವನ್ನು ಓದಿ ತಿದ್ದಿ ತೀಡಿದ ಆಪ್ತ ಗೆಳತಿ ಭಾರತಿ ಬಿವಿ, ಮಡದಿ ಪ್ರೀತಿ ಶೆಟ್ಟಿಗೆ ನನ್ನದ್ದೊಂದು ಪ್ರೀತಿಯ ಥ್ಯಾಂಕ್ಸು. ಕೊನೆಯದಾಗಿ ಬದುಕಿನ ಆಪ್ತ ಗೆಳೆಯ ಭಗವಂತ ಶ್ರೀಕೃಷ್ಣನ ಪಾದಕಮಲಗಳಿಗೆ ಪುಸ್ತಕ ಅರ್ಪಣೆ.

ಕೊನೆಯಲ್ಲೊಂದು ಮಾತು. ನಂಬಿಕೆ ಅಪನಂಬಿಕೆಗಳನ್ನು ದಾಟಿ ಓದಬಹುದಾದ ಪುಸ್ತಕವಿದು. ನಂಬುವವರಿಗೆ ಅವರ ನಂಬಿಕೆಗೆ ಪುಷ್ಠಿ. ನಂಬದಿರುವವರಿಗೆ ಇದು ರೋಚಕತೆ. ಒಟ್ಟಾರೆಯಾಗಿ ಚಂದದ ಓದಿಗೆ ಮಾತ್ರ ನಾನು ಗ್ಯಾರಂಟಿ ಕೊಡಬಲ್ಲೆ. ಓದಿ ನೋಡಿ. ಓದುವ ಸುಖ ನಿಮ್ಮದಾಗಲಿ.

 

MORE FEATURES

ಕಲ್ಪನಾ ವಿಳಾಸ: ಅವಳ ಸಾವಿಗೆ ಅವಳೇ ಕಾರಣವಾದಳೆ?

13-12-2025 ಬೆಂಗಳೂರು

" ಸದಾ ಅಚ್ಚುಕಟ್ಟುತನ ಶಿಸ್ತು ಸೌಂದರ್ಯ ಪ್ರಜ್ಞೆಗೆ ಹೆಸರುವಾಸಿಯಾಗಿದ್ದ ಕಲ್ಪನಾ ವಿಲಾಸಿ ಜೀವನದಿಂದ ವಿಮುಖವಾಗಿ ಒ...

ನಮ್ಮ ಮಣ್ಣಿನ ಕಥೆಗಾರನಿಗೆ ಇನ್ನಷ್ಟು ಕಥೆಗಳು ಒಲಿದು ಬರಲಿ

13-12-2025 ಬೆಂಗಳೂರು

"'ಗೆರೆಗೆ ಸಿಗದ ನದಿ' ಯಲ್ಲಿನ ತಾರಾನಾಥನ ಚಿತ್ರ ಮತ್ತು ಬದುಕಿನ ಚಿತ್ರಣ, ಕೇರೆ ಹಾವಿನಲ್ಲಿ ಊರನ್ನು ಸುಡ...

ಕವಿಹೃದಯದ ಕವಿಯಿತ್ರಿ ಬರೆದ ಈ ಕೃತಿ ಗದ್ಯಕಾವ್ಯದಂತಿದೆ!

13-12-2025 ಬೆಂಗಳೂರು

"ಈ ಪುಸ್ತಕವನ್ನು ಅವರ ಹಸ್ತಾಕ್ಷರ ಸಹಿತ ಲೇಖಕಿಯವರಿಂದಲೇ ತರಿಸಿಕೊಂಡು ಬಹಳ ದಿನಗಳಾಗಿವೆ‌ ಓದಲು ಈಗ ಕಾಲ ಕೂಡ...