ಓದುಗನಿಗೆ ತನ್ನ ಜವಾಬ್ದಾರಿಯನ್ನು ನೆನಪಿಸುವ ಕೃತಿ


ಗ್ರಾಮೀಣ ಭಾಗದ ಶಿಕ್ಷಕರು ಮಕ್ಕಳ ಏಳಿಗೆಗೆ ಮಾಡುವ ಕಾಳಜಿಗಳ ಅನಾವರಣವಿದೆ. ಓರ್ವ ಬುದ್ದಿಮಾಂದ್ಯ ಮಗುವನ್ನು ಸಹಜ ಮಗುವಿನ ವರ್ತನೆಯಂತೆ ಬದಲಾಯಿಸಲು ಶಿಕ್ಷಕನೋರ್ವ ಹೇಗೆಲ್ಲ ಕಷ್ಟಪಟ್ಟರು ಎನ್ನುವ ಮನಮಿಡಿಯುವ ಲೇಖನವು ಶಿಕ್ಷಕರಿಗೆ ಮಾರ್ಗದರ್ಶಿಯಾಗುತ್ತದೆ. ಎನ್ನುತ್ತಾರೆ ಡಾ. ಎನ್ ಲಕ್ಷ್ಮಿ ಅವರು ಲೇಖಕ, ಮಕ್ಕಳ ಸಾಹಿತಿ ವೈ. ಜಿ. ಭಗವತಿ ಬರೆದ 'ಬೆವರಿನ ಹನಿಗಳು' ಕೃತಿಗೆ ಬರೆದ ಮುನ್ನುಡಿ ಹೀಗಿದೆ....

ಶಿಕ್ಷಕ ಯಾವಾಗಲೂ ವಿದ್ಯಾರ್ಥಿಯೇ ಆಗಿರಬೇಕು ಎಂಬುದು ನನ್ನ ಹಂಬಲ ಆತ ಅಧ್ಯಯನಶೀಲನಾಗಿದ್ದರೆ ಮಾತ್ರ ಉತ್ತಮ ವಿದ್ಯಾರ್ಥಿಗಳನ್ನು ಸಮಾಜಕ್ಕೆ ನೀಡಬಲ್ಲ. ಜ್ಞಾನವು ನಿಂತ ನೀರಾಗಬಾರದು. ಸದಾ ಹರಿಯುವ ನೀರಾಗಬೇಕು.ನಾನು ಗಮನಿಸಿದಂತೆ ಬಿ.ಇಡಿ. ಎಂ.ಇಡಿ. ಶಿಕ್ಷಕ ತರಬೇತಿ ಪಡೆಯುವಾಗ ಓದಿನಲ್ಲಿ ಬರವಣೆಗೆಯಲ್ಲಿ ಕ್ರೀಯಾಶೀಲರಾಗಿರುವ ವಿದ್ಯಾರ್ಥಿಗಳು ಶಿಕ್ಷಕ ವೃತ್ತಿ ಪಡೆದಾದ ಮೇಲೆ ಓದಿನ ಕ್ರೀಯಾಶೀಲ ಮನೋಭಾವನೆಯನ್ನು ಮುಂದುವರೆಸುತ್ತಾರಾ? ಇದು ನನ್ನ ಪ್ರಶ್ನೆ. ನೆನಪಿಸಿಕೊಂಡರೆ ನನಗೆ ತುಂಬಾ ಖೇದವೆನಿಸುತ್ತದೆ. ಬಹುತೇಕರು ಓದಿನಿಂದ ಹಿಮ್ಮುಖವಾಗುತ್ತಿದ್ದಾರೆ. ಹೊಸ ಪುಸ್ತಕಗಳ ಓದನ್ನೆ ಮರೆತು ಬಿಡುತ್ತಾರೆ. ಹಾಗಾಗಬಾರದು. ಈಗೆಲ್ಲಾ ಮಕ್ಕಳ ಕೈಗೆ ತಂತ್ರಜ್ಞಾನದ ಸಲಕರಣೆಗಳಾದ ಮೋಬೈಲ್,ಕಂಪೂಟರ್ ವಿವಿಧ ಟಿ.ವಿ. ಚಾನೆಲ್ ಗಳು ಸುಲಭವಾಗಿ ದೊರೆಯುತ್ತಿವೆ. ಹೀಗಾಗಿ ಮಕ್ಕಳ ಜ್ಞಾನ ಮಟ್ಟವೂ ಹೆಚ್ಚಾಗಿದೆ ಅವರಿಗೆ ತಕ್ಕಂತೆ ಶಿಕ್ಷಕರು ಕೂಡಾ ಸಿದ್ದರಾಗಬೇಕಲ್ಲವೇ?

ಮಕ್ಕಳಿಗೆ ಗುರುವೆನಿಸಿಕೊಂಡವರು ಸದಾ ಅಧ್ಯಯನದಲ್ಲಿ ತೊಡಗಬೇಕು. ಸಾಹಿತ್ಯದ ಪ್ರಾಕಾರಗಳಾದ ಕಥೆ, ಕವನ,ಕಾದಂಬರಿ, ಪ್ರವಾಸಕಥನ, ಜೀವನಚರಿತ್ರೆಯಂಥಹ ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಂಡಿರಬೇಕು. ಅಂದಾಗ ಆತ ವಿದ್ಯಾರ್ಥಿಗಳಿಗೆ ಉತ್ತಮ ಬೋಧಕನಾಗಬಲ್ಲ. ನನಗೆ ತಿಳಿದಂತೆ ನಮ್ಮ ವಿಶ್ವವಿದ್ಯಾನಿಲಯದಲ್ಲಿ ಬಾಹ್ಯ ವಿದ್ಯಾರ್ಥಿಗಳಾಗಿ ಬಿ.ಇಡಿ. ಎಂ.ಇಡಿ. ಶಿಕ್ಷಣ ಪಡೆದ ಸಾವಿರಾರು ವಿದ್ಯಾರ್ಥಿಗಳಲ್ಲಿ ಅನೇಕರು ಉತ್ತಮ ಬೋಧಕರಾಗಿದ್ದಾರೆ. ಉತ್ತಮ ಆಡಳಿತಗಾರರಾಗಿದ್ದಾರೆ. ಜೊತೆಗೆ ಉತ್ತಮ ಸಾಹಿತಿಗಳಾಗಿದ್ದಾರೆ. ಅವರಲ್ಲಿ ಹಲವರು ಆಗಾಗ ನನ್ನ ಸಂಪರ್ಕಕ್ಕೆ ಬರುತ್ತಿರುತ್ತಾರೆ. ಅವರಲ್ಲಿ ವೈ.ಜಿ.ಭಗವತಿ ಕೂಡಾ ಮುಖ್ಯರಾಗಿದ್ದಾರೆ. ಇಂದಿಗೂ ಅವರು ತಮ್ಮ ಪ್ರಕಟಿತ ಬರಹಗಳನ್ನು ತಮ್ಮ ಶಲೆಯ ಶೈಕ್ಷಣಿಕ ಕಾರ್ಯಕ್ರಮಗಳ ಬಗ್ಗೆ ನನಗೆ ತಿಳಿಸುತ್ತಲೇ ಇದ್ದಾರೆ.

ಓರ್ವ ಶಿಕ್ಷಕ ತನ್ನ ಕಾರ್ಯವ್ಯಾಪ್ತಿಯಲ್ಲಿ ಏನೆಲ್ಲಾ ಬದಲಾವಣೆ ಮಾಡಬಹುದು ಎಂಬುದಕ್ಕೆ ಭಗವತಿ ಅವರು ಮಾದರಿಯಾಗಿದ್ದಾರೆ. ಅವರು ತಮ್ಮ ವೃತ್ತಿಯಲ್ಲೂ ನಾವಿನ್ಯತೆಯನ್ನು ಗಳಸಿಕೊಂಡಿದ್ದಾರೆ. ಅವರು ನಮ್ಮ ವಿಶ್ವವಿದ್ಯಾನಿಲಯದಲ್ಲಿ ಬಾಹ್ಯ ವಿದ್ಯಾರ್ಥಿಯಾಗಿ ಬಿ,ಇಡಿ ಹಾಗೂ ಎಂ,ಇಡಿ ಪದವಿಗಳನ್ನು ಪಡೆದುಕೊಂಡಿದ್ದಾರೆ. ಆಗ ಅವರು ವಿದ್ಯಾರ್ಥಿ ಪ್ರತಿನಿಧಿಯಾಗಿ ಕೆಲಸ ಮಾಡಿದರು.ಆ ದಿನಗಳಿಂದಲೂ ಅವರ ಕ್ರೀಯಾಶಿಲತೆಯನ್ನು ನಾನು ಗಮನಸಿದ್ದೇನೆ. ಅವರು ವಿದ್ಯಾರ್ಥಿಗಳ ಸಮಸ್ಯೆಯ ಬಗ್ಗೆ ಶೈಕ್ಷಣಿಕ ಕಾರ್ಯಕ್ರಮಗಳ ಬಗ್ಗೆ ಆಗಾಗ ನನ್ನ ಬಳಿಗೆ ಬಂದು ಪರಿಹಾರ ಕಂಡುಕೊಳ್ಳುತ್ತಿದ್ದರು. ಆಗಿನಿಂದಲೇ ಭಗವತಿ ನನಗೆ ಪರಿಚಿತರು.

ವೃತ್ತಿಯ ಜೊತೆಗೆ ಬರವಣಿಗೆಯನ್ನು ಭಗವತಿಯವರು ಗಂಭೀರವಾಗಿ ತೆಗೆದುಕೊಂಡಿದ್ದಾರೆ ಎಂದೆನಿಸುತ್ತದೆ. ಜೊತೆಗೆ ತುಂಬಾ ಅಧ್ಯಯನಶೀಲರೂ ಎಂದೆನಿಸುತ್ತದೆ. ಕಾರಣ ಅವರು ಬರೆದಿರುವ ಎಲ್ಲಾ ಮಕ್ಕಳ ಕೃತಿಗಳು ವಿಮರ್ಶಾ ಪುಸ್ತಕಗಳು ಓದುಗರ ಮೆಚ್ಚುಗೆ ಪಡೆದಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ಬಾಲವಿಕಾಸ ಅಖಾಡೆಮಿಯ ಪುಸ್ತಕ ಪುರಸ್ಕಾರಗಳನ್ನು ಪಡೆದಿವೆ. ಹೀಗಾಗಿ ಭಗವತಿಯವರ ಬರವಣಿಗೆಯ ಕ್ರಮ ನನಗೆ ಹಿಡಿಸುತ್ತದೆ. ಮಕ್ಕಳ ಕೃತಿಗಳಲ್ಲಿ ಪ್ರಯೋಗಾತ್ಮಕವಾಗಿ ಬರೆಯುತ್ತಿದ್ದಾರೆ. “ದೇವಮ್ಮನ ಲೋಟ” ಕೃತಿ ತೆಲುಗು ಹಾಗೂ ಇಂಗ್ಲೀಷ ಭಾಷೆಯಲ್ಲಿ ಅನುವಾದಗೊಂಡಿದೆ. ಹೀಗೆ ವಿಶಾಲವ್ಯಾಪ್ತಿಯಲ್ಲಿ ಅವರ ಸಾಹಿತ್ಯ ಕೃಷಿ ಕಂಡಿದೆ. ಇವೆಲ್ಲಾ ಸಂತಸದ ಸಂಗತಿಗಳು.

ಇದೀಗ “ಬೆವರಿನ ಹನಿಗಳು” ಈ ಕೃತಿಗೆ ಮುನ್ನುಡಿ ಬರೆಯಲು ಕೇಳಿಕೊಂಡಿದ್ದಾರೆ. ಲೇಖನ ಸಾಹಿತ್ಯ ಒಂದು ವಿಶಿಷ್ಠ ಬಗೆಯ ಪ್ರಾಕಾರ. ಸಾಧಕರನ್ನು ಪರಿಚಯಿಸುವ, ಸಾಮಾಜಿಕ ಸಮಸ್ಯೆಗಳನ್ನು ಮುಂದಿಡುವ, ಸಮಾಜದ ಕಣ್ಣು ತೆರೆಸುವ ಕೆಲಸ ಲೇಖನಗಳ ಮೂಲಕ ಮಾಡಬಹುದು. ಅಂತಹದೊಂದು ಹೊಸ ಪ್ರಯತ್ನದ ಹಾದಿಯಲ್ಲಿ ಭಗವತಿ ಇದ್ದಾರೆ. ಅದು ಮುಂದುವರೆಯಲಿ ಎಂಬುದು ನನ್ನ ಆಶಯ. ಒಂದು ಯಶಸ್ಸು ಅಪಾರ ಪರಿಶ್ರಮದ ಫಲವೇ ಆಗಿರುತ್ತದೆ. ಬೆವರು ಹರಿಸದೇ ಯಾವುದು ಫಲ ದೊರೆಯದು.ಹೀಗಾಗಿ ಈ ಕೃತಿಯಲ್ಲಿ ಅಂತಹದೊಂದು ಬೆವರಿನ ಸಂವೇದನೆಯುಳ್ಳ ಲೇಖನಗಳು ಇಲ್ಲಿವೆ. ಅವು ಪತ್ರಿಕೆಲ್ಲಿ ಪ್ರಕಟಗೊಂಡಿವೆ. ಇಲಿ ಅಭಿನಂದನಾ ಗ್ರಂಥಕ್ಕೆ ಬರೆದ ಲೇಖನಗಳಿವೆ. ವೈವಿಧ್ಯಮಯ ಪುಸ್ತಕಗಳಿಗೆ ಬರೆದ ಮುನ್ನುಡಿ, ಬೆನ್ನುಡಿ ಬರೆದ ಬರಹಗಳಿವೆ. ಕೊನೆಯಲ್ಲಿ ಕಲಘಟಗಿ ತಾಲೂಕಿನ ಎಂಟನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಭಗವತಿಯವರು ಮಾತನಾಡಿದ ಅಧ್ಯಕ್ಷೀಯ ಭಾಷಣದ ಮಾತುಗಳಿವೆ. ಹೀಗೆ ಮಾತು, ಬರಹಗಳ ಸಮ್ಮೀಳಿತದ ಗುಚ್ಛವೇ ಈ ಕೃತಿಯಾಗಿದೆ.

ಭಗವತಿಯವರು ತಮ್ಮ ಸುತ್ತಲಿನ ಸಾಧಕರ ಕುರಿತಾಗಿ ವ್ಯಕ್ತಿಗತ ಲೇಖನಗಳನ್ನು ಬರೆಯುತ್ತಾರೆ. ಇತರರಿಗೆ, ವಿಶೇಷವಾಗಿ ವಿದ್ಯಾರ್ಥಿಗಳಿಗೆ ಸ್ಪೂರ್ತಿ ಸಿಗುತ್ತದೆ. ಕಲಘಟಗಿ ಬಣ್ಣದ ತೊಟ್ಟಲಿಗೆ ಸುಪ್ರಸಿದ್ದಿ ಪಡೆದಿದೆ. ಅದರ ನಿರ್ಮಾಣದ ಹಿಂದಿರುವ ಶ್ರಮ ಕಳಕಳಿ ಇವರ ಲೇಖನದಲ್ಲಿ ಕಾಣಸಿಗುತ್ತದೆ. ರಂಗನಟರಾದ ಅಶೋಕ ಅರ್ಕಸಾಲಿ, ಬಸವರಾಜ ದೊಡಮನಿ ಇವರ ಬಾಲ್ಯದಲ್ಲಿ ಕಂಡುಂಡ ಕಷ್ಟಕಾರ್ಪಣ್ಯಗಳು ಬದುಕು ಕಟ್ಟಿಕೊಳ್ಳಲು ಹೇಗೆ ಸಹಾಯವಾದವು ಎಂಬುದು ಲೇಖನಗಳನ್ನು ಓದಿದಾಗ ತಿಳಿಯುತ್ತದೆ. ಯುವಕರುಗಳಾದ ಪರಿಸರವಾದಿ ಬಸವರಾಜ ಹಾಗೂ ನಾಣ್ಯಸಂಗ್ರಾಹಕ ಸುನಿಲ ಅವರ ಹವ್ಯಾಸಗಳು ಇಂದಿನ ಮಕ್ಕಳಿಗೆ ಮಾದರಿಯಾಗಿವೆ. ಲೇಖಕ ತನ್ನ ಪರಿಸರದ ನಡುವೆ ಇರುವ ಇಂಥಹ ವ್ಯಕ್ತಿಗಳ ಬಗ್ಗೆ ಬರೆದಾಗ ಕಲೆ ಹಾಗೂ ಅವರಗಳ ಸಾಧನೆಗೆ ಬೆಲೆ ಬರುತ್ತದೆ. ಸಮಾಜ ಹಾಗೂ ಸರಕಾರ ಇವರನ್ನು ಗುರುತಿಸುತ್ತದೆ.

ಲೇಖನಕ್ಕೆ ಬೇಕಾಗುವ ಬರಹದ ಸೊಗಸಿನ ಕಲೆ ಭಗವತಿಯವರಿಗೆ ಸಿದ್ದಿಸಿದೆ. ಬಣ್ಣದ ತೊಟ್ಟಲಿನ ಮಾರುತಿ ಬಡಿಗೇರ, ನಾಣ್ಯ ಸಂಗ್ರಹಕಾರ ಸುನಿಲ ಕಮ್ಮಾರ ಅವರ ಹವ್ಯಾಸಗಳ ಕುರಿತಾಗಿ ಮಕ್ಕಳಿಗೆ ಓದುಗರಿಗೆ ಪರಿಚಯವಾಗುತ್ತದೆ.” ಅರೇ ಅದ್ಹೇಗೆ ಬದಲಾದ ಆ ಬಾಲಕ” ಈ ಲೇಖನ ನಿಜಕ್ಕೂ ಮನ ಕರಗುತ್ತದೆ. ಗ್ರಾಮೀಣ ಭಾಗದ ಶಿಕ್ಷಕರು ಮಕ್ಕಳ ಏಳಿಗೆಗೆ ಮಾಡುವ ಕಾಳಜಿಗಳ ಅನಾವರಣವಿದೆ. ಓರ್ವ ಬುದ್ದಿಮಾಂದ್ಯ ಮಗುವನ್ನು ಸಹಜ ಮಗುವಿನ ವರ್ತನೆಯಂತೆ ಬದಲಾಯಿಸಲು ಶಿಕ್ಷಕನೋರ್ವ ಹೇಗೆಲ್ಲ ಕಷ್ಟಪಟ್ಟರು ಎನ್ನುವ ಮನಮಿಡಿಯುವ ಲೇಖನವು ಶಿಕ್ಷಕರಿಗೆ ಮಾರ್ಗದರ್ಶಿಯಾಗುತ್ತದೆ.

ಧಾರವಾಡ ಆಕಾಶವಾಣಿಗೂ ಭಗವತಿಯವರಿಗೂ ಒಂದು ಅವಿನಾಭಾವ ಸಂಬAಧವಿದೆ. ಕಳೆದ ಹತ್ತು ವರ್ಷಗಳಿಂದ ಅವರ ಚಿಂತನಗಳು, ಸಂದರ್ಶನಗಳು, ವಿಷಯ ಭಾಷನಗಳು, ಶೈಕ್ಷಣಿಕ ಸಾಹಿತಿಕ ಚರ್ಚೆಗಳು, ಪುಸ್ತಕ ಪರಿಚಯ ಹೀಗೆ ವೈವಿದ್ಯಮಯ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡಿದ್ದಾರೆ. ಇದಕ್ಕೆಲ್ಲಾ ಆಕಾಶವಾಣಿಯ ಮುಖ್ಯಸ್ಥರಾಗಿದ್ದ ಡಾ. ಬಸು ಬೇವಿನಗಿಡದ ಅವರ ಪ್ರೋತ್ಸಾಹ, ಸಹಕಾರಗಳನ್ನು ನೆನಪಿಸಿಕೊಳ್ಳುತ್ತಾರೆ.

ಅಧ್ಯಯನದ ಜೊತೆಯಲ್ಲಿ ಅನೇಕ ಕೃತಿಗಳ ಅವಲೋನ, ವಿಮರ್ಶೆ ಅವರ ಅಚ್ಚುಮೆಚ್ಚಿನ ಕೆಲಸವೂ ಆಗಿದೆ. ನಾಡಿನ ಹಲವು ಸಾಹಿತ್ಯ ಮಿತ್ರರ ಕೃತಿಗಳಿಗೆ ಬೆನ್ನುಡಿ ಮುನ್ನುಡಿ ಬರೆಯುತ್ತಲೇ ಇದ್ದಾರೆ. ಅಂತಹ ಕೆಲವು ಬರಹಗಳು ಓದಲು ಸಿಗುತ್ತದೆ. ತೆಲಗು ಭಾಷೆಯಿಂದ ಕನ್ನಡಕ್ಕೆ ಅನುವಾದಗೊಂಡ “ಸ್ವಾತಿಮುತ್ತು”, ಕೃಷಿ ಬರಹಗಳ “ಅನ್ನದ ಬಟ್ಟಲು” ಕೃತಿಗಳು, “ಜೀವಸೆಲೆ”, ಬೆರಗು ಕಾದಂಬರಿಗಳು ಕೃತಿಗಳ ವಿಮರ್ಶಾ ಗೊಂಚಲು ಇಲ್ಲಿದೆ. ಇದರಿಂದಾಗಿ ಇತ್ತೀಚಿನ ಹೊಸ ಬಗೆಯ ಸಾಹಿತ್ಯಕೃತಿಗಳ ಪರಿಚಯ ನಮಗಾಗುತ್ತದೆ.

ಇನ್ನೊಂದು ಖುಶಿಯ ವಿಚಾರ ಇವರ ಸಾಹಿತ್ಯ ಶ್ರಮಕ್ಕೆ, ಸಾಹಿತ್ಯ ಕಳಕಳಿಗೆ ಕಲಘಟಗಿ ತಾಲೂಕಿನ ಮಿಶ್ರಿಕೋಟಿ ಊರಿನಲ್ಲಿ 2023 ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸಂಘಟಿಸಿದ ತಾಲೂಕಿನ ಎಂಟನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷಸ್ಥಾನ ಅರಸಿ ಬಂದಿದೆ. ಇದು ಅವರ ಸಾಹಿತ್ಯ ಕೃಷಿಗೆ ಸಂದ ಗೌರವವಾಗಿದೆ. ಆ ಸಂದರ್ಭದಲ್ಲಿ ಸಮ್ಮೇಳನವನ್ನು ಉದ್ದೇಶಿಸಿ ಮಾತಾಡಿದ ಮಾತುಗಳು ಈ ಕೃತಿಯಲ್ಲಿವೆ. ಅವು ಪ್ರತಿಯೊಬ್ಬರಲ್ಲಿ ಕನ್ನಡದ ಅಭಿಮಾನ ಮೂಡಿಸುತ್ತವೆ. ಕನ್ನಡ ಭಾಷೆಯ ಸೊಗಸು, ಪರಂಪರೆಯ ಮಾತುಗಳು, ಕನ್ನಡದ ಕಾಳಜಿ ಹೇಗಿರಬೇಕು, ಕನ್ನಡಕ್ಕಾಗಿ ನಾವೆಲ್ಲ ಎಂಥಹ ಕ್ರಿಯಾಶೀಲತೆ ಹೊಂದಿರಬೇಕು. ಕನ್ನಡ ಬೆಳೆಸಲು ಏನೆಲ್ಲ ಅವಶ್ಯಕತೆ ಇದೆ ಎಂಬುದನ್ನು ವಿವರವಾಗಿ ತಮ್ಮ ಮಾತಿನಲ್ಲಿ ಹೇಳಿದ್ದಾರೆ. ಇದೊಂದು ಅರ್ಥಪೂರ್ಣವಾದ ಮಾತುಗಳಾಗಿವೆ. ಜೊತೆಗೆ ಕನ್ನಡದ ಕಳಕಳಿಯ ಮಾತುಗಳು ಎನ್ನಬಹುದು.

ಈ ಕೃತಿಯನ್ನು ಭಗವತಿ ಅವರು ತಾವು ಸಾಕಿ ಬೆಳೆಸಿದ ನಾಯಿಮರಿಗೆ ಸಮರ್ಪಿಸಿದ್ದಾರೆ. ಪ್ರಾಣಿಗಳಲಿ ಬಂಧುತ್ವವನ್ನು ಕಂಡಿದ್ದಾರೆ. ಇದು ಕೂಡಾ ಒಂದು ವಿಶೇಷವೇ ಆಗಿದೆ. ಈ ಕೃತಿಯು ಓದುಗನಿಗೆ ತನ್ನ ಜವಾಬ್ದಾರಿಯನ್ನು ನೆನಪಿಸುತ್ತದೆ. ಯಾವುದೇ ನೆಪವನ್ನು ಹೇಳಿ ತನ್ನ ಸೃಜಶೀಲತೆಯನ್ನು ಕಳೆದುಕೊಳ್ಳಬಾರದು. ಸದಾ ಜೀವನಪ್ರೀತಿಯನ್ನು ಕಾಪಿಟ್ಟುಕೊಂಡು ತನ್ನಷ್ಟಕ್ಕೆ ತಾನು ಕಾಯಕದಲ್ಲಿ ಪ್ರಾಮಾಣಿಕತೆಯ ಕೆಲಸಗಾರನಾಗಿದ್ದಲ್ಲಿ ಯಶಸ್ಸು ಬೆನ್ನು ಹಿಂದೆ ಬರುತ್ತದೆ ಎಂಬ ಪರೋಕ್ಷ ಸಂದೇಶಗಳನ್ನು ಇಲ್ಲಿ ಕಾಣಬಹುದು. ಓದುಗನಿಗೆ ಅಂತಹ ಜಾಗೃತೆಯನ್ನು ಇಲ್ಲಿಯ ಬರಹಗಳು ಮೂಡಿಸುವ ಸತ್ವವನ್ನು ಹೊಂದಿವೆ. ಸಾಮಾನ್ಯ ಶಿಕ್ಷಕ ತನ್ನ ವೃತ್ತಿಯ ಜೊತೆಗೆ ಬರವಣಿಗೆಯಲ್ಲೂ, ಮಾತಿನಲ್ಲೂ ( ಆಕಾಶವಾಣಿಯ ಮಾತುಗಳು) ಸಾಧಿಸಿದ ಕ್ರಮ ನನಗೆ ಸೋಜಿಗವಾಗುತ್ತದೆ. ಇದು ಬೆವರಿನ ಫಲವೇ ಆಗಿದೆ. ಕೇವಲ ಓದುಗರಿಗಲ್ಲದೆ, ಉದಯೋನ್ಮಖ ಬರಹಗಾರರಿಗೆ ಮಾದರಿಯ ಬರವಣಿಗೆ ಹೇಗಿರಬೇಕು ಎಂಬುದಕ್ಕೆ ಈ ಕೃತಿಯ ಲೇಖನಗಳು ಸಹಾಯಕಾರಿಯಾಗಿವೆ. ಅವರ ಸಾಹಿತ್ಯದ ಅಧ್ಯಯನಕ್ಕೂ ಅನಕೂಲವಾಗಿದೆ. ಇದೊಂದು ವಿಶಿಷ್ಠ ಕೃತಿಯಾಗಿ ಸಾಹಿತ್ಯಲೋಕದಲ್ಲಿ ನಿಲ್ಲುತ್ತದೆ ಎಂಬ ಭರವಸೆ ನನಗಿದೆ.

ಈ ಕೃತಿಗೆ ಒಪ್ಪುವಂತಹ “ಬೆವರಿನ ಹನಿಗಳು” ಹೆಸರು ಸಾರ್ಥಕಗೊಳಿಸುವಂತಹ ಬರಹಗಳು ಇಲ್ಲಿವೆ. ಇಂತಹ ವಾಸ್ತವಿಕ ಬದುಕಿಗೆ ಬರವಣಿಗೆಗಳು ಇಂದು ಸಮಾಜಕ್ಕೆ ಅವಶ್ಯವಾಗಿ ಬೇಕಾಗಿವೆ. ಸಶಕ್ತ ನಾಗರಿಕರನ್ನಾಗಿಸಲು ಇಂಥಹ ಕೃತಿಗಳು ಸಹಾಯಕಾರಿಯಾಗಿವೆ. ಲೇಖಕರಿಗೆ ಅಂತಹ ಸಾಮಾಜಿಕ ಜವಾಬ್ದಾರಿಯೂ ಇದೆ. ಭಗವತಿಯವರಿಗೆ ಸಮಾಜದ ಬಗ್ಗೆ ಅತೀವ ಕಳಕಳಿಇದೆ. ಅದು ಅವರ ಬರವಣಿಗೆಯಲ್ಲಿ ಕಾಣುತ್ತದೆ. ಇನ್ನಷ್ಟು ಶೈಕ್ಷಣಿಕ, ಸಾಮಾಜಿಕ ಕಕ್ಕುಲಾತಿ ಹೊಂದಿದ ಕೃತಿಗಳು ಮೂಡಿಬರಲಿ. ಅಂತಹ ಶಕ್ತಿ ಭಗವತಿ ಅವರಲ್ಲಿದೆ. ಅವರಿಗೆ ಇನ್ನೂ ಹೇರಳವಾದ ಸಾಹಿತ್ಯದ ಯಶಸ್ಸು ಪ್ರಾಪ್ತವಾಗಲಿ ಎಂದು ಶುಭಕೋರುತ್ತಾ ಅಭಿನಂದಿಸುತ್ತೇನೆ.

MORE FEATURES

ಅಂಬೇಡ್ಕರ್ ವಿದ್ಯಾವಂತ ಜನರ ಕೈಯಲ್ಲಿ ಮೋಜಿನ ವಸ್ತುವಾಗಿ ಕಾಣಿಸಿಕೊಳ್ಳುತ್ತಿದ್ದಾರೆ..

07-12-2025 ಬೆಂಗಳೂರು

"ದಲಿತರು ಒಳಪಂಗಡಗಳ ಭಾವನಾತ್ಮಕ ಸೆಳವಿಗೆ ಸಿಕ್ಕು ಮೂಲ ಸಿದ್ದಾಂತದಿಂದ ದೂರವಾಗುತ್ತಿದ್ದಾರೆ. ಇಂದು ಅಂಬೇಡ್ಕರ್ ವಿ...

BlrLitFest 2025: ಸಾಹಿತ್ಯಾಸಕ್ತರ ಮಹಾಸಂಗಮ!

06-12-2025 ಬೆಂಗಳೂರು

ಬೆಂಗಳೂರು : ಬೆಂಗಳೂರು ಸಾಹಿತ್ಯ ಉತ್ಸವ (BlrLitFest)ವು ಪ್ರತಿ ವರ್ಷ ನಡೆಯುವ ಅತ್ಯಂತ ನಿರೀಕ್ಷಿತ ಸಾಂಸ್ಕೃತಿಕ ಕಾರ್ಯ...

ಮತ್ತೆ ಮತ್ತೆ ಕಾಡುವ ಕಥೆಗಳು

06-12-2025 ಬೆಂಗಳೂರು

ಮಗಳ ನೋವನ್ನು ಕಂಡು ಹೆತ್ತವರು ಜರ್ಜರಿತರಾಗುವ ದೃಶ್ಯವನ್ನು ಹಾಗೂ ಅಪ್ಪ ಅಮ್ಮನ ಧಾವಂತದ ಬದುಕಿನಲ್ಲಿ ಮಕ್ಕಳು ಬಡವಾಗುವ ಸ...