ರಾಜೀವ್ ಅವರ ಅಕ್ಷರಗಳಲ್ಲಿ ಕಾವ್ಯವಿದೆ. ಚಿಂತನೆಯ ಕಿಡಿಯಿದೆ. ಮನುಷ್ಯತ್ವದ ಹಂಬಲವಿದೆ. ಪ್ರತಿಯೊಂದು ಪತ್ರವೂ ಓದುಗರ ಹೃದಯದ ಬಾಗಿಲನ್ನು ತಟ್ಟುತ್ತದೆ. ಎನ್ನುತ್ತಾರೆ ವಿಜಯ ಕರ್ನಾಟಕ ಸಂಪಾದಕ ಸುದರ್ಶನ ಚನ್ನಂಗಿಹಳ್ಳಿ. ಅವರು ಹಿರಿಯ ಪತ್ರಕರ್ತ ಚೀ ಜ ರಾಜೀವ ಅವರು ಬರೆದ 'ಪ್ರಿಯ ಗಾಂಧಿ' ಕೃತಿಗೆ ಬರೆದ ಮುನ್ನುಡಿ.
ಗಾಂಧೀಜಿ ಅವರ ಜೀವನ, ತತ್ವ ಹಾಗೂ ಚಿಂತನೆಗಳು ಇಂದಿಗೂ ನಮ್ಮ ಸಮಾಜಕ್ಕೆ ದಿಕ್ಕು ತೋರಿಸುತ್ತಿವೆ. ಆದರೆ ಕಾಲ ಬದಲಾಗುತ್ತಿದ್ದಂತೆ ಆ ತತ್ವಗಳೊಂದಿಗೆ ಸಂವಾದ ನಡೆಸುವ ಅಗತ್ಯ ಹೆಚ್ಚಾಗಿದೆ. ನಾಡಿನ ಹಿರಿಯ ಪತ್ರಕರ್ತ ಹಾಗೂ ನನ್ನ ಹಿರಿಯ ಸಹೋದ್ಯೋಗಿ ಮಿತ್ರ ಚೀ.ಜ. ರಾಜೀವ ಅವರು ತಮ್ಮ ಅಂಕಣ ಬರಹಗಳ ಮೂಲಕ ಈ ಸಂವಾದವನ್ನು ನಡೆಸಿದ್ದಾರೆ.
ಅವರು ಮಹಾತ್ಮನಿಗೆ ಬರೆದಿರುವ ಪತ್ರಗಳು ಕೇವಲ ಬರಹಗಳಲ್ಲ.ಅದು ಕಾಲದ ನಾಡಿ ತಟ್ಟುವ ಪ್ರಾಮಾಣಿಕ ಸಂಭಾಷಣೆ.
ಪ್ರತಿ ಪತ್ರದಲ್ಲೂ ಪ್ರಶ್ನೆಗಳಿವೆ, ಸಂಶಯಗಳಿವೆ. ಹಾಗೆಯೇ ಪರಿಹಾರಗಳನ್ನು ಹುಡುಕುವ ಆಳವಾದ ಆಕಾಂಕ್ಷೆಯೂ ಇದೆ. ಗಾಂಧಿ ಅವರ ತತ್ವವನ್ನು ಇಂದಿನ ವಾಸ್ತವಿಕ ಬದುಕಿನ ಬೆಳಕಿನಲ್ಲಿ ಹೇಗೆ ಅರ್ಥೈಸಿಕೊಳ್ಳಬಹುದು ಎಂಬುದೇ ಈ ಬರಹಗಳ ಹೃದಯ.
ಈ ಅಂಕಣಗಳನ್ನು ಓದಿದಾಗ ಓದುಗರಿಗೆ ಗಾಂಧಿ ಅವರೊಂದಿಗೆ ನಾವು ನೇರವಾಗಿ ಮಾತನಾಡುತ್ತಿರುವ ಅನುಭವವಾಗುತ್ತದೆ. ಕೇವಲ ಇತಿಹಾಸದ ವ್ಯಕ್ತಿಯಂತೆ ಅಲ್ಲ, ಬದಲಿಗೆ ಇಂದಿನ ಸಮಸ್ಯೆಗಳಿಗೆ ಉತ್ತರ ಹುಡುಕುತ್ತಿರುವ ಜೀವಂತ ವ್ಯಕ್ತಿಯಂತೆ ಗಾಂಧಿ ಇಲ್ಲಿ ಪ್ರತ್ಯಕ್ಷರಾಗುತ್ತಾರೆ.
ಈ ಪುಸ್ತಕವು ಕೇವಲ ಪತ್ರಗಳ ಸಂಕಲನವಾಗದೆ, ಇಂದಿನ ಸಮಾಜಕ್ಕೆ ಅಗತ್ಯವಾದ ಸತ್ಯ, ಅಹಿಂಸೆ ಮತ್ತು ನೈತಿಕತೆ ಕುರಿತು ನಡೆಯುವ ನಿರಂತರ ಚರ್ಚೆಯ ಒಂದು ಪ್ರಮುಖ ದಾಖಲೆ.
ರಾಜೀವ್ ಅವರ ಅಕ್ಷರಗಳಲ್ಲಿ ಕಾವ್ಯವಿದೆ. ಚಿಂತನೆಯ ಕಿಡಿಯಿದೆ. ಮನುಷ್ಯತ್ವದ ಹಂಬಲವಿದೆ. ಪ್ರತಿಯೊಂದು ಪತ್ರವೂ ಓದುಗರ ಹೃದಯದ ಬಾಗಿಲನ್ನು ತಟ್ಟುತ್ತದೆ-
'ನೀನು ಗಾಂಧಿಯನ್ನು ಓದಿದ್ದೀಯಾ?' ಅಲ್ಲ, 'ನೀನೂ ಗಾಂಧಿಯಾಗಿ ಬದುಕುತ್ತಿದ್ದಿಯಾ?' ಎಂದು ಕೇಳುತ್ತದೆ.
ಸೂಕ್ಷ್ಮ ಸಂವೇದನೆಯುಳ್ಳ ಪತ್ರಕರ್ತ ಮಿತ್ರರಲ್ಲಿ ರಾಜೀವ್ ಮುಂಚೂಣಿಯಲ್ಲಿ ಕಾಣುತ್ತಾರೆ. ನನಗೆ ಹೊಳೆಯದ ಎಷ್ಟೋ ಸಂಗತಿಗಳು ಅವರಿಗೆ ಹೊಳೆಯುತ್ತವೆ. ಮಹಾತ್ಮನಿಗೆ ಪತ್ರ ಅಂಕಣದಲ್ಲಿ ಪ್ರತಿ ವಾರವೂ ಏನು ಬರೆಯುತ್ತಾರೆ ಎಂಬ ಕುತೂಹಲ ಕಾಡುತ್ತಿತ್ತು. ರಾಜೀವ್ ಕೊನೆಯವರೆಗೂ ಚಿಂತನಾರ್ಹ ಬರಹಗಳನ್ನು ತರುತ್ತಿದ್ದದ್ದು ಬಹಳ ವಿಶೇಷ ಸಮ ಸಮಾಜದ ತುಡಿತ ಹೊಂದಿರುವ ರಾಜೀವ್ ಅವರ ಬರವಣಿಗೆ ಹೀಗೆಯೇ ಚಿಂತನಾರ್ಹವಾಗಿರಲಿ.
"ದಲಿತರು ಒಳಪಂಗಡಗಳ ಭಾವನಾತ್ಮಕ ಸೆಳವಿಗೆ ಸಿಕ್ಕು ಮೂಲ ಸಿದ್ದಾಂತದಿಂದ ದೂರವಾಗುತ್ತಿದ್ದಾರೆ. ಇಂದು ಅಂಬೇಡ್ಕರ್ ವಿ...
ಬೆಂಗಳೂರು : ಬೆಂಗಳೂರು ಸಾಹಿತ್ಯ ಉತ್ಸವ (BlrLitFest)ವು ಪ್ರತಿ ವರ್ಷ ನಡೆಯುವ ಅತ್ಯಂತ ನಿರೀಕ್ಷಿತ ಸಾಂಸ್ಕೃತಿಕ ಕಾರ್ಯ...
ಮಗಳ ನೋವನ್ನು ಕಂಡು ಹೆತ್ತವರು ಜರ್ಜರಿತರಾಗುವ ದೃಶ್ಯವನ್ನು ಹಾಗೂ ಅಪ್ಪ ಅಮ್ಮನ ಧಾವಂತದ ಬದುಕಿನಲ್ಲಿ ಮಕ್ಕಳು ಬಡವಾಗುವ ಸ...
©2025 Book Brahma Private Limited.