ಸಾಯುವ ವೇಳೆ ಪಾಪ ಪ್ರಜ್ಞೆ ಕಾಡಬಾರದಲ್ಲಾ?


"ಈ ಮಹಾಭಾರತದಲ್ಲಿ ಏನುಂಟು, ಏನಿಲ್ಲ ಎನ್ನುವುದನ್ನು ತಿಳಿಯುವುದಕ್ಕೆ ಬಹಳಷ್ಟು ತಾಲೀಮು ನಡೆಸಬೇಕಾಗುತ್ತದೆ. ಪ್ರಾಸಂಗಿಕವಾಗಿ ಓದುತ್ತಾ ಹೋದರೆ ಕಥೆಯಂತೆ ಮುಗಿದು ಹೋಗುವ ಮಹಾಭಾರತ, ಪ್ರಸಂಗಗಳ ಒಳ ಸುಳಿಗಳನ್ನು ಹಿಡಿಯುತ್ತಾ ಹೋದಂತೆ ಹೊಸ ಅರ್ಥಗಳನ್ನು ಕೊಡಲು ಆರಂಭಿಸುತ್ತವೆ. ವ್ಯಾಸರ ದೃಷ್ಟಿಯಲ್ಲಿ ಮಹಾಭಾರತವನ್ನು ನಿರ್ಭಾವುಕರಾಗಿ ನೋಡುವ ಕುಂಟಿನಿಯವರ ಪರಿ ನನ್ನನ್ನು ಬಹಳಷ್ಟು ಬಾರಿ ಕಾಡಿದೆ," ಎನ್ನುತ್ತಾರೆ ಮಾಕೋನಹಳ್ಳಿ ವಿನಯ್‌ ಮಾಧವ. ಅವರು ಗೋಪಾಲಕೃಷ್ಣ ಕುಂಟಿನಿಯವರ ʻಕೃಷ್ಣ ಭಾರತʼ ಕೃತಿ ಕುರಿತು ಬರೆದ ಅನಿಸಿಕೆ.

ʻಒಂದೊಮ್ಮೆ ಶಾಂತಿ ಸಾಧ್ಯವಾಗಲಿಲ್ಲ ಎಂದುಕೋ, ಕನಿಷ್ಠ ಅದಕ್ಕಾಗಿ ಪ್ರಯತ್ನಿಸಿದ ಪುಣ್ಯ ನನ್ನದಾಗುತ್ತಲ್ಲಾ ಅಷ್ಟು ಸಾಕು… ಗೊತ್ತಿದ್ದೂ ಗೊತ್ತಿದ್ದೂ ಮಹಾಯುದ್ದ ಆಗದಂತೆ ಕೃಷ್ಣ ತಡೆಯಲಿಲ್ಲವಲ್ಲಾ ಎಂದು ಇತಿಹಾಸ ಹೇಳಬಾರದು. ನಾನು ಹೇಳುವುದನ್ನು ಹೇಳುತ್ತೇನೆ, ನನ್ನ ಮಾತು ಕೇಳದೇ ಹೋದರೆ ಆ ಬಾಲಕ ದೈವದ ವಶವಾಗುತ್ತಾನೆ ಅಷ್ಟೆ.ʼ

ಕೃಷ್ಣನು ಈ ಮಾತನ್ನು ವಿಧುರನಿಗೆ ಹೇಳುವುದನ್ನು ಓದುತ್ತಾ ಇದ್ದ ನನ್ನ ತಲೆಯಲ್ಲಿ ಒಂದು ಮಿಂಚು ಹೊಡೆದಂತಾಯಿತು. ಹಾಗೆಯೇ ತಲೆ ಎತ್ತಿ ನೋಡಿದೆ. ಎಲ್ಇಡಿ ಪರದೆಯಲ್ಲಿ ಕುಂಟಿನಿಯವರು ಮಾತನಾಡುತ್ತಿದ್ದರು. ಆಗಷ್ಟೇ ಬಿಡುಗಡೆಯಾಗಿದ್ದ ಅವರ ಕೃಷ್ಣ ಭಾರತ ಪುಸ್ತಕದ ವಾಕ್ಯವನ್ನು ಓದಿದವನಿಗೆ, ಸುಮಾರು ಎರಡು ದಶಕಗಳ ಹಿಂದೆ ನಡೆದ ಒಂದು ಸಂಭಾಷಣೆ ನೆನಪಿಗೆ ಬಂದಿತು.

ʻಎಲ್ಲಾದಕ್ಕೂ ಸಾವಿದ್ದ ಹಾಗೆ, ಭಾಷೆಗೂ ಸಾವಿರುತ್ತೆ ಮಾರಾಯಾ. ನಮ್ಮ ಕನ್ನಡ ಕೂಡ ಒಂದಲ್ಲಾ ಒಂದು ದಿನ ಸಾಯುತ್ತೆ. ಹಾಗಂತ ನಾವು ಕೈ ಕಟ್ಟಿಕೊಂಡು ಕೂರೋಕೆ ಆಗೋಲ್ಲ. ಈಗ ನಾವೆಲ್ಲಾ ಹೋರಾಡಿ ಕನ್ನಡವನ್ನು ಪೂರ್ತಿಯಾಗಿ ಉಳಿಸಿಕೊಳ್ಳುತ್ತೇವೆ ಎನ್ನುವ ಭ್ರಮೆಯಲ್ಲೂ ನಾನಿಲ್ಲ. ಆದರೆ, ಸಾಯುವ ಸಮಯದಲ್ಲಿ, ಕನ್ನಡ ಉಳಿಸೋಕೆ ನಾನು ಹೀಗೆ ಮಾಡಬಹುದಿತ್ತು ಅನ್ನೋ ಪಾಪ ಪ್ರಜ್ಞೆ ಕಾಡಬಾರದಲ್ಲಾ?

ಅದಕ್ಕಾಗಿ ಇದನ್ನೆಲ್ಲಾ ನಾವು ಮಾಡಬೇಕಾಗುತ್ತದೆ. ನೀನು ಒಂದು ಕೆಲಸ ಮಾಡು. ಬೆಂಗಳೂರಿಗೆ ಹೋದ ತಕ್ಷಣ ಕಂಬಾರ (ಚಂದ್ರಶೇಖರ ಕಂಬಾರ) ಅವರನ್ನು ಭೇಟಿಯಾಗಿ, ಆ ಕೃಷ್ಣನನ್ನೂ (ಆಗಿನ ಮುಖ್ಯಮಂತ್ರಿ) ಭೇಟಿಯಾಗಿ, ವಿಷಯಗಳನ್ನು ವಿವರಿಸು. ನುಡಿ ಸಾಫ್ಟ್‌ವೇರ್‌ನ ಸೋರ್ಸ್‌ ಕೋಡ್‌ ಎಲ್ಲರಿಗೂ ಹಂಚಿಕೊಡಲು ಹೇಳು. ನಾವು ತಯಾರಿಸಿದ ಸಾಫ್ಟ್‌ವೇರನ್ನು ಮೈಕ್ರೋಸಾಫ್ಟ್‌ ಕೈಯಲ್ಲಿ ಕೊಟ್ಟು, ಇನ್ನೊಂದು ಗುಲಾಮಗಿರಿಗೆ ಬೀಳೋದು ಬೇಡ.ʼ

ರಾತ್ರಿ ಹನ್ನೊಂದು ಘಂಟೆಯ ಸಮಯದಲ್ಲಿ, ಶಾಕ್‌ ನಿಂದ ಬಾಯಿಬಿಟ್ಟುಕೊಂಡು ನಾನು ಎದುರಿಗೆ ಕುಳಿತಿದ್ದ ಪೂರ್ಣಚಂದ್ರ ತೇಜಸ್ವಿಯವರನ್ನೇ ನೋಡುತ್ತಿದ್ದೆ. ಹಾಗೆಯೇ ತಲೆ ಅಲ್ಲಾಡಿಸಿ, ಅವರ ಗೇಟ್‌ ಹೊರಗೆ ನಿಲ್ಲಿಸಿದ್ದ ಕಾರಿನ ಕಡೆಗೆ ಕತ್ತಲಲ್ಲೇ ಕಾಲು ಹಾಕಿದ್ದೆ.

ಆ ಘಟನೆಗೆ ಸ್ವಾರಸ್ಯಕರವಾದ ತಿರುವು ಸಿಕ್ಕಿದ್ದೇ ಇಂದು (ಭಾನುವಾರ) ಬೆಳಗ್ಗೆ. ಎರಡು ದಶಕಗಳ ಹಿಂದೆ ತೇಜಸ್ವಿಯವರು ಹೇಳಿದ ಮಾತನ್ನು ಕೃಷ್ಣ ಮಹಾಯುದ್ದ ನಿಲ್ಲಿಸಲು ಸಂಧಾನಕ್ಕಾಗಿ ಹಸ್ತಿನಾವತಿಗೆ ಬಂದಾಗಲೇ ಹೇಳಿದ್ದ. ನಾವು ಯಾವುದಾದರೂ ಒಂದು ಪ್ರಯತ್ನ ಮಾಡುವುದು, ಮುಂದೆ ಪಾಪ ಪ್ರಜ್ಞೆ ಕಾಡದಂತೆ ತೆಗೆದುಕೊಳ್ಳುವ ಒಂದು ಮುಂಜಾಗರೂಕತೆಯ ಕ್ರಮ ಅಷ್ಟೆ. ಉಳಿದದ್ದನ್ನು ಕಾಲ ನಿರ್ಣಯಿಸುತ್ತದೆ.

ಪ್ರಪಂಚದ ಆರಾಧ್ಯ ದೈವವಾದ ಕೃಷ್ಣನೆಲ್ಲಿ? ದೇವರ ಅಸ್ಥಿತ್ವವನ್ನೇ ಪ್ರಶ್ನಿಸುತ್ತಿದ್ದ ತೇಜಸ್ವಿ ಎಲ್ಲಿ? ಆದರೆ ಇಬ್ಬರ ತತ್ವಜ್ಞಾನದ ಅಡಿಪಾಯ ಒಂದೇ ಅಂತ ಒಂದು ಕ್ಷಣ ಅನ್ನಿಸಿದ್ದು ಸುಳ್ಳಲ್ಲ.

ಈ ಮಹಾಭಾರತದಲ್ಲಿ ಏನುಂಟು, ಏನಿಲ್ಲ ಎನ್ನುವುದನ್ನು ತಿಳಿಯುವುದಕ್ಕೆ ಬಹಳಷ್ಟು ತಾಲೀಮು ನಡೆಸಬೇಕಾಗುತ್ತದೆ. ಪ್ರಾಸಂಗಿಕವಾಗಿ ಓದುತ್ತಾ ಹೋದರೆ ಕಥೆಯಂತೆ ಮುಗಿದು ಹೋಗುವ ಮಹಾಭಾರತ, ಪ್ರಸಂಗಗಳ ಒಳ ಸುಳಿಗಳನ್ನು ಹಿಡಿಯುತ್ತಾ ಹೋದಂತೆ ಹೊಸ ಅರ್ಥಗಳನ್ನು ಕೊಡಲು ಆರಂಭಿಸುತ್ತವೆ. ವ್ಯಾಸರ ದೃಷ್ಟಿಯಲ್ಲಿ ಮಹಾಭಾರತವನ್ನು ನಿರ್ಭಾವುಕರಾಗಿ ನೋಡುವ ಕುಂಟಿನಿಯವರ ಪರಿ ನನ್ನನ್ನು ಬಹಳಷ್ಟು ಬಾರಿ ಕಾಡಿದೆ.

ಎಲ್‌ಇಡಿ ಯಲ್ಲಿ ಇನ್ನೂ ಕುಂಟಿನಿಯವರ ಮಾತು ಮುಂದುವರೆಯುತ್ತಿತ್ತು. ಪುಸ್ತಕದ ಒಂದು ಪ್ರಸಂಗದಿಂದ, ದುರ್ಯೋಧನನು ತನ್ನ ತಂದೆಗೆ ಮನವರಿಕೆ ಮಾಡಿಕೊಡುತ್ತಾ ಹೇಳುತ್ತಾನೆ: ʻಹಣ ಮತ್ತು ಅನುಕೂಲಗಳನ್ನು ಕೊಟ್ಟರೆ ಜನರು ತಮ್ಮ ನಿಷ್ಠೆಯನ್ನು ಖಂಡಿತವಾಗಿಯೂ ನಮ್ಮತ್ತ ಬದಲಿಸುತ್ತಾರೆʼ.

ಆದ್ಭುತ… ಇಂದಿನ ರಾಜಕಾರಣವನ್ನು ವಿಶ್ಲೇಷಿಸಲು ಇದಕ್ಕಿಂತ ಒಳ್ಳೆಯ ಉಪಮೇಯ ಬೇಕಾಗಿಲ್ಲ ಅಂತ ಅನ್ನಿಸಿತು. ಆ ಪ್ರಸಂಗವನ್ನು ಓದುತ್ತಾ ಹೋದಂತೆ ಇನ್ನೇನೋ ಒಂದು ಹೊಳೆಯಿತು. ದುರ್ಯೋಧನನು ಮೇಲಿನ ಮಾತನ್ನು ಹೇಳುವುದು, ಪಾಂಡವರನ್ನು ವಾರಣಾವತಕ್ಕೆ ಕಳುಹಿಸಬೇಕು ಎನ್ನುವ ಮಾತುಕಥೆ ಮುನ್ನೆಲೆಗೆ ಬಂದಾಗ. ತಾನು ಹೇಳಿದಂತೆ, ಪ್ರಜೆಗಳ ನಿಷ್ಠೆಯನ್ನೂ ಗೆಲ್ಲುತ್ತಾನೆ. ಅದರ ಮುಂದೇನಾಯಿತು ಎಂಬುದನ್ನು ಕುಂಟಿನಿಯವರು ಬರೆದಿದ್ದನ್ನು ಓದಿ ನನಗೆ ಇನ್ನಷ್ಟು ಗಡಿಬಿಡಿಯಾಯಿತು.

ʻಯಾವಾಗ ಹಣ ಕೈಗೆ ಬರಲು ಆರಂಭವಾಯಿತೋ, ಜನಗಳು ತಿರುಗಿ ಬಿದ್ದರು. ಪಾಂಡವರಿಗೇ ರಾಜ್ಯ ಸಿಗಬೇಕು, ಅವರು ಧರ್ಮಕೋವಿದರು ಎನ್ನುತ್ತಿದ್ದ ಜನರು ವರಾತ ಬದಲಿಸಿದರು. ಧೃತರಾಷ್ಟ್ರನ ಮಂತ್ರಿಗಳು ವಾರಣಾವತ ನಗರವನ್ನು ಹೊಗಳಲು ಶುರುಮಾಡಿದ ಪ್ರಚಾರಾಂದೋಲನ ಫಲ ಕೊಟ್ಟಿತು. ಜನರೆಲ್ಲಾ ವಾರಣಾವತ ನಗರವನ್ನು ಕೊಂಡಾಡುತ್ತಿರುವ ರೀತಿಗೆ ಪಾಂಡವರೂ ತಲೆದೂಗಿದರುʼ

ಅಂದರೆ, ನಾವೀಗ ಮಾಡುತ್ತಿರುವ ಸಾಮಾಜಿಕ ಜಾಲತಾಣಗಳ ಮೂಲಕ ಮಾಡುತ್ತಿರುವ ಪ್ರಚಾರ ಮತ್ತು ಪ್ರಭಾವ ಬೀರುವಿಕೆಯ ಜನಕ ಮಹಾಭಾರತವೇ ಹೊರತು, ಈಗಿನ ಕಂಪ್ಯೂಟರ್‌ ಕ್ರಾಂತಿಯಲ್ಲ.

ಈ ಪುಸ್ತಕದ ಆದಿಯಲ್ಲಿಯೇ ಕುಂಟಿನಿಯವರು ಬರೆದ ಒಂದು ವಾಕ್ಯ ನನ್ನನ್ನು ಯೋಚನೆಗೀಡು ಮಾಡಿತ್ತು. ʻಕೃಷ್ಣನ ಅವತಾರ ಶುರುವಾಗುವುದು ಭಾಗವತದಲ್ಲಿ ಮತ್ತು ಅಂತ್ಯವಾಗುವುದು ಭಾರತದಲ್ಲಿʼ ಎಂದು. ಇಷ್ಟು ವರ್ಷಗಳ ಕಾಲ ನಾನು ಇದನ್ನು ಯೋಚಿಸಿಯೇ ಇರಲಿಲ್ಲ. ಹೌದಲ್ಲಾ… ದ್ರೌಪದಿ ಸ್ವಯಂವರದ ವರೆಗೆ ಕೃಷ್ಣ ಪಾಂಡವರನ್ನು ಭೇಟಿಯಾಗಿಯೇ ಇರುವುದಿಲ್ಲ. ಅಲ್ಲಿಗೆ, ಮಹಾಭಾರತ ನಿಜವಾಗಲೂ ಆರಂಭವಾಗುವುದು ಅಲ್ಲಿಂದಲೇ ಹೊರತು, ಅದರ ಮುಂಚಿನದೆಲ್ಲ ಪೀಠಿಕೆ ಅಷ್ಟೆ.

ಈ ಪುಸ್ತಕದ ಬಗ್ಗೆ ಹೇಳುತ್ತಾ ಹೋದರೆ, ಇನ್ನೊಂದು ಪುಸ್ತಕ ಬರೆಯಬಹುದು. ಮಹಾಭಾರತದಲ್ಲಿ ಕೃಷ್ಣನು ತೆಗೆದುಕೊಳ್ಳುವ ಪ್ರತೀ ಹೆಜ್ಜೆಯಲ್ಲೀಯೂ ದ್ವಂದ್ವ ನೀತಿಯನ್ನು ಪಾಲಿಸುತ್ತಾ, ಯಾವುದೇ ನಿರ್ಧಾರದ ದೂಷಣೆ ತನ್ನ ಮೇಲೆ ಬಾರದಂತೆ ನಿರ್ವಹಿಸುವ ರೀತಿ ಅದ್ಭುತವಾಗಿದೆ.

ಈ ಪುಸ್ತಕದಲ್ಲಿ ಕರ್ಣನ ವಿಷಯದ ನಾಲ್ಕೈದು ಪ್ರಸಂಗಗಳಿವೆ. ಅವುಗಳಲ್ಲಿ ಕುಮಾರವ್ಯಾಸನ ಉಲ್ಲೇಖವೂ ಇದೆ. ಜನ್ಮ ರಹಸ್ಯವನ್ನು ಕೃಷ್ಣ ಬಹಿರಂಗ ಪಡಿಸಿದಾಗ ಕರ್ಣ ಪ್ರತಿಕ್ರಿಯಿಸಿದ ರೀತಿಯನ್ನು ಕುಮಾರವ್ಯಾಸಗಿಂತ ಸೊಗಸಾಗಿ ವಿವರಿಸಲು ಯಾರಿಗೂ ಸಾಧ್ಯವಿಲ್ಲ. ಆದರೂ ಕುಂಟಿನಿಯವರು ಅದನ್ನು ಏಕೆ ಉಪೇಕ್ಷಿಸಿದರು ಎನ್ನುವುದು ನನಗೆ ಒಗಟಾಗಿಯೇ ಉಳಿಯಿತು…

ಮರುಳು ಮಾಧವ ಮಹಿಯ ರಾಜ್ಯದ
ಸಿರಿಗೆ ಸೋಲುವನಲ್ಲ ಕೌಂತೇಯರು
ಸುಯೋಧನರೆನಗೆ ಬೆಸಕೈವಲ್ಲಿ ಮನವಿಲ್ಲ
ಹೊರೆದ ದಾತಾರಂಗೆ ಹಗೆವರ
ಶಿರವನರಿದೊಪ್ಪಿಸುವೆನೆಂಬೀ
ಭರದೊಳಿರ್ದೆನು ಕೌರವೇಂದ್ರನ ಕೊಂದೆ ನೀನೆಂದ

ಕುರುಕ್ಷೇತ್ರ ಯುದ್ದವನ್ನು ಗೆಲ್ಲಬೇಕಾದರೆ, ಕರ್ಣನನ್ನು ಮೊದಲು ಮಾನಸಿಕವಾಗಿ ಕೊಲ್ಲಲೇಬೇಕಾದ ಅನಿವಾರ್ಯತೆ ಕೃಷ್ಣನಿಗೆ ಯಾವಾಗಲೋ ತಿಳಿದಿತ್ತು. ಆ ಸಂದರ್ಭವನ್ನು ವ್ಯಾಸ, ರನ್ನ, ಪಂಪ ಎಲ್ಲರೂ ತಮಗೆ ಅನಿಸಿದಂತೆ ವಿವರಿಸಿದರೂ, ಕುಮಾರವ್ಯಾಸನು ಬರೆದ ಈ ಪ್ರಸಂಗ ನನಗೆ ಬಹಳವಾಗಿ ಕಾಡುತ್ತದೆ.

ಕುಂಟಿನಿಯವರ ಕೃಷ್ಣ ಭಾರತ, ಅವರು ವಿಶ್ಲೇಷಿಸುವ ವ್ಯಾಸ ಭಾರತದ ಒಂದು ನೀರಿನ ಬಿಂದು ಮಾತ್ರ. ಪ್ರತೀ ಸಂದರ್ಭಕ್ಕೂ, ಪ್ರತೀ ಪಾತ್ರಕ್ಕೂ ಒಂದೊಂದು ಗ್ರಂಥಗಳಿಗಾಗುವಷ್ಟು ವಿವರ ನೀಡಬಲ್ಲರು. ಒಮ್ಮೆ ಈ ಪುಸ್ತಕ ಕೈಗೆತ್ತಿಕೊಂಡರೆ, ಕೆಳಗಿಡುವ ಪ್ರಮೇಯವೇ ಇರುವುದಿಲ್ಲ. ಏಕೆಂದರೆ, ಅದು ಅಷ್ಟು ಸರಳವಾಗಿಯೂ ಓದಿಸಿಕೊಂಡು ಹೋಗುತ್ತದೆ.

 

MORE FEATURES

ಅಂಬೇಡ್ಕರ್ ವಿದ್ಯಾವಂತ ಜನರ ಕೈಯಲ್ಲಿ ಮೋಜಿನ ವಸ್ತುವಾಗಿ ಕಾಣಿಸಿಕೊಳ್ಳುತ್ತಿದ್ದಾರೆ..

07-12-2025 ಬೆಂಗಳೂರು

"ದಲಿತರು ಒಳಪಂಗಡಗಳ ಭಾವನಾತ್ಮಕ ಸೆಳವಿಗೆ ಸಿಕ್ಕು ಮೂಲ ಸಿದ್ದಾಂತದಿಂದ ದೂರವಾಗುತ್ತಿದ್ದಾರೆ. ಇಂದು ಅಂಬೇಡ್ಕರ್ ವಿ...

BlrLitFest 2025: ಸಾಹಿತ್ಯಾಸಕ್ತರ ಮಹಾಸಂಗಮ!

06-12-2025 ಬೆಂಗಳೂರು

ಬೆಂಗಳೂರು : ಬೆಂಗಳೂರು ಸಾಹಿತ್ಯ ಉತ್ಸವ (BlrLitFest)ವು ಪ್ರತಿ ವರ್ಷ ನಡೆಯುವ ಅತ್ಯಂತ ನಿರೀಕ್ಷಿತ ಸಾಂಸ್ಕೃತಿಕ ಕಾರ್ಯ...

ಮತ್ತೆ ಮತ್ತೆ ಕಾಡುವ ಕಥೆಗಳು

06-12-2025 ಬೆಂಗಳೂರು

ಮಗಳ ನೋವನ್ನು ಕಂಡು ಹೆತ್ತವರು ಜರ್ಜರಿತರಾಗುವ ದೃಶ್ಯವನ್ನು ಹಾಗೂ ಅಪ್ಪ ಅಮ್ಮನ ಧಾವಂತದ ಬದುಕಿನಲ್ಲಿ ಮಕ್ಕಳು ಬಡವಾಗುವ ಸ...