ಸಂವೇದನಾ ಶೀಲ ಕೃತಿ - ಬರಿಯ ನೆನಪಲ್ಲ! 


ಪ್ಯಾಲೆಸ್ಟೈನ್ ಲೇಖಕರಿಂದ  ನಾವು ಕಲಿಯಬೇಕಾದ ಪಾಠಗಳು ಹಲವು. ನಾವು ಪ್ರೀತಿಸಬೇಕಾದದ್ದು ಬರಿಯ ನೆಲವನ್ನಲ್ಲ, ಅಲ್ಲಿಯ ಜನರನ್ನು . ಹೋರಾಟ ಮಾಡಬೇಕಾದ್ದು ಹಿಂಸೆಯ ವಿರುದ್ಧ. ಸರ್ವಾಧಿಕಾರಿ ಪ್ರವೃತ್ತಿಯನ್ನು. ಅದರ ಕ್ರೌರ್ಯವನ್ನು. ಆಗಮಾತ್ರ ನಮ್ಮ ಅಸ್ಮಿತೆಯನ್ನು ಉಳಿಸಿಕೊಳ್ಳಲು, ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ ಎನ್ನುತ್ತಾರೆ ಲೇಖಕ ಕೆ.ರಘುನಾಥ್. ಅವರು ಲೇಖಕ ಆಕರ್ಷ ರಮೇಶ್ ಕಮಲ ಅವರ ‘ಬರಿಯ ನೆನಪಲ್ಲ!’ ಕೃತಿಯ ಬಗ್ಗೆ ಬರೆದ ಲೇಖನ ನಿಮ್ಮ ಓದಿಗಾಗಿ..

ಕೃತಿ: ಬರಿಯ ನೆನಪಲ್ಲ!
ಲೇಖಕ: ಆಕರ್ಷ ರಮೇಶ್ ಕಮಲ
ಬೆಲೆ: 220
ಮುದ್ರಣ: 2021
ಪ್ರಕಾಶನ: ಕಥನ ಪ್ರಕಾಶನ 

ನಮ್ಮ ಗೆಳತಿ ಎಂ.ಆರ್.ಕಮಲಾ ಮತ್ತು ಅವರ ಮಗ ಆಕರ್ಷ ಕಮಲಾ,ಇಬ್ಬರೂ ಸಮಾನ ಧರ್ಮಿಗಳು ಎಂದರೆ ಉತ್ಪ್ರೇಕ್ಷೆಯಲ್ಲ. ಬಹುಶಃ ಕನ್ನಡ ಸಾಹಿತ್ಯದಲ್ಲೆ ಇಂತಹ ಅಮ್ಮ ಮಗ ಅಪೂರ್ವ .ಏಕೆಂದರೆ ಇಬ್ಬರೂ ಕವಿಗಳು( ಆಕಾಶದಲ್ಲಿ ಹಾರಾಡುವಾಗಲೂ ನೆಲದ ಮೇಲೆ ತೆವಳುವ ಜೀವಿಗಳ ಕುರಿತು ತಲ್ಲಣಿಸುವ - ಗ್ರಾಫಿಟಿಯ ಹೂವಿನ) ಮಾತ್ರವಲ್ಲ ಇಬ್ಬರು ಸಮರ್ಥ ಅನುವಾದಕರು ಕೂಡ. ಅದನ್ನು ಆಕರ್ಷ ಕಮಲಾ ಅವರ ಮೇಲಿನ ಕೃತಿ ಸಾಬೀತು ಪಡಿಸುತ್ತದೆ.  ಇಬ್ಬರಲ್ಲಿ ಇರುವುದು ಗಾಢವಾದ ಅನುಭೂತಿ. ಅವರನ್ನು ಅನ್ಯಾನ್ಯ ಸಾಹಿತ್ಯಗಳಿಗೆ ತಮ್ಮನ್ನು ತೆರೆದು ಕೊಳ್ಳುವಂತೆ ಮಾಡುತ್ತದೆ. ಅಷ್ಟೇ ಅಲ್ಲ ಅವುಗಳ ಪರಕಾಯ ಪ್ರವೇಶ ಮಾಡಿ ಅವನ್ನು ಕನ್ನಡಕ್ಕೆ ತರುವಂತೆ ಪ್ರೇರೇಪಿಸುತ್ತದೆ. ಈ ಪ್ರೇರಣೆ ಅವರ ಈ ಕೃತಿಯ ಹಿಂದೆ ಕೂಡ ಇದೆ.

ಪ್ಯಾಲೆಸ್ಟೈನ್ ಜನರ ದುರಂತ ಈ ಆಧುನಿಕ ನಾಗರಿಕತೆಯ ಮಾಯದ ಗಾಯ. ಅದನ್ನು ಕೆರೆದಷ್ಟು ನಮ್ಮ ನಾಗರಿಕ ಜಗತ್ತಿನ ( ಇಸ್ರೇಲ್,) ಕ್ರೌರ್ಯ ನಮ್ಮನ್ನು ಬೆಚ್ಚಿಬೀಳಿಸುತ್ತದೆ. ತಮ್ಮ ನೆಲದಲ್ಲೆ ಅವರನ್ನು ನಿರಾಶ್ರಿತರನ್ನಾಗಿ ಮಾಡಿದ ಅದರ ರಾಜ್ಯದಾಹಕ್ಕೆ ಎಣೆಯಿಲ್ಲ.ಅಂದಿನಿಂದ ಅಲ್ಲಿನ ಲೇಖಕರು ಕೇವಲ ಲೇಖಕರಾಗಿ ಉಳಿಯದೆ ಸಕ್ರಿಯ ಹೋರಾಟಗಾರರೂ ಆಗಿ  ಪ್ಯಾಲೆಸ್ಟೈನ್ ನೆಲದ ಬಿಡುಗಡೆಗಾಗಿ ನಿರಂತರವಾಗಿ ಹೋರಾಟ ನಡೆಸಿದ ಕಥನವೆ  ಆಕರ್ಷ ಕಮಲಾ ಅವರ ’ಬರಿಯ ನೆನಪಲ್ಲ'. (ಮಾರ್ಸೆಲೊ ಡಿ ಸಿಂಟಿಯೋ ಅವರ  ಪೇ ನೋ ಹೀಡ್ಸ  ಟು ರಾಕೆಟ್ಸ್  ಕೃತಿಯ ಅನುವಾದ) ‌ಇದರೊಂದಿಗೆ  ವಿವಿಧ ಲೇಖಕರ ಕೃತಿಗಳನ್ನು ಇದಕ್ಕಾಗಿ ಅವರು ಅಧ್ಯಯನ ಮಾಡಿ ಅವುಗಳನ್ನು ಕನ್ನಡಕ್ಕೆ ತಂದ ಶ್ರೇಯಸ್ಸು  ಅವರಿಗೆ ಸಲ್ಲಬೇಕು. ಪ್ಯಾಲೆಸ್ಟೈನ್ ಲೇಖಕರ ಪಾಲಿಗೆ ಅದು ಬರಿಯ ನೆಲವಲ್ಲ.ಅಲ್ಲಿನ ಜನ. ತಾವು ಕಳೆದುಕೊಂಡದ್ದು ಬರಿಯ ಬೆಟ್ಟ ಬಯಲುಗಳಿಂದ ಕೂಡಿದ ಪ್ರದೇಶ ಮಾತ್ರ ವಲ್ಲ.ಅದರ ಬಿಡುಗಡೆಗಾಗಿ ಹೋರಾಟ ನಡೆಸಿದ ‌ಜನರು ಕೂಡ (ಪ್ರತಿಭಟನಾ ಮೆರವಣಿಗೆಗಳಲ್ಲಿ ಭಾಗವಹಿಸುವ). ಅವರು ಕೇವಲ ಹೋರಾಟಗಾರರು ಮಾತ್ರವಲ್ಲ.ಸಾಮಾನ್ಯ ಜನರು ಕೂಡ. ಅವರ ಹಾಗೆ ಇವರಿಗೆ ಕೂಡ ಕನಸುಗಳು ಇವೆ. ದೈನಿಕಗಳ ಶಾಂತ ಬದುಕಿಗಾಗಿ ಇವರು ಹಾತೊರೆಯುತ್ತಾರೆ.ರಾಕೆಟ್ ಗಳ ಬದಲಿಗೆ ಅವರು ಟೀ ಕಾಯಿಸಲು ,ಕುದಿಸಿ , ಬಿಸಿಯಾದ ಚಹ ಸೇವಿಸಲು ಇಷ್ಟ ಪಡುತ್ತಾರೆ. ಬಂದೂಕಿನ ಗುಂಡುಗಳ ಬದಲಿಗೆ ಕವಿತೆಗಳ ಬರೆಯಲು, ಎನ್ ಎಲೆಕ್ಷನ್ ಡೇಟ್ ಮಕ್ಕಳ ಪುಸ್ತಕಗಳನ್ನು ಓದಲು  ಗ್ರಂಥಾಲಯಗಳನ್ನು ,  ಬಾಂಬು ಸ್ಪೋಟಗಳಿಗು ಹೆದರದ ಜನರು ಕಲೆಯಲು ಬಯಸುವ ಗ್ಯಾಲರಿ( ಗಾಜಾ) ಗಳನ್ನು ನಿರ್ಮಿಸಲು ಇಷ್ಟ ಪಡುತ್ತಾರೆ . ಶಾಂತಿ ಮತ್ತು ಮುಗ್ಧತೆಯ ಸಂಕೇತವಾದ ಹಸಿರು ಉಡುಗೆಯನ್ನು ತೊಟ್ಟ ಹುಡುಗಿಯ ಹುಡುಕಾಟ..

ಏಕೆಂದರೆ ಇದೆಲ್ಲಾ ಅವರ ಅಸ್ಮಿತೆಯನ್ನು ಸ್ಥಾಪಿಸುವ , ಕಾಪಾಡುವ ವಿಧಾನಗಳು. ಆದ್ದರಿಂದಲೇ "ಹಿಂಸೆಯನ್ನು ಪ್ರಚೋದಿಸುವವರು ಲೇಖಕರೆ ಅಲ್ಲ" ಎಂದು ಘೋಷಿಸಲು ಇವರಿಗೆ ಸಾಧ್ಯವಾಗುತ್ತದೆ. ಇದನ್ನು 'ದರ್ವಿಶ್' ರಿಂದ ಹಿಡಿದು ರಾಣಾ,  'ಅಸ್ಮಾ' ರ ವರೆಗೆ. ಅವರು ಹೋರಾಟಕ್ಕೆ ಹಿಂಜರಿಯುವುದಿಲ್ಲ. ಆದರೆ ಅದು ಬಿಡುಗಡೆ ಮತ್ತು ಶಾಂತಿಗಳಿಗಾಗಿಯೆ ಹೊರತು  ಯುದ್ಧ ಮತ್ತು ಹಿಂಸೆಗಳಿಗಾಗಿ ಅಲ್ಲ.  

ಆದ್ದರಿಂದ ಈ ಪ್ಯಾಲೆಸ್ಟೈನ್ ಲೇಖಕರಿಂದ  ನಮ್ಮ ಎಲ್ಲಾ ಲೇಖಕರು ಕಲಿಯಬೇಕಾದ ಪಾಠವಿದೆ. ‌ನಾವು ಪ್ರೀತಿಸಬೇಕಾದದ್ದು ಬರಿಯ ನೆಲವನ್ನಲ್ಲ, ಅಲ್ಲಿಯ ಜನರನ್ನು. ಹೋರಾಟ ಮಾಡಬೇಕಾದ್ದು ಹಿಂಸೆಯ ವಿರುದ್ಧ. ಸರ್ವಾಧಿಕಾರಿ ಪ್ರವೃತ್ತಿಯನ್ನು. ಅದರ ಕ್ರೌರ್ಯವನ್ನು. ಆಗಮಾತ್ರ ನಮ್ಮ ಅಸ್ಮಿತೆಯನ್ನು ಉಳಿಸಿಕೊಳ್ಳಲು, ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ.   ನಮ್ಮ ಗುರುಗಳಾದ ಡಾ.ಡಿ.ಆರ್ ಎನ್. ಮೂರು ದಶಕಗಳಷ್ಟು ಹಿಂದೆಯೆ ಬರೆದಿರುವ ' ಪ್ಯಾಲೆಸ್ಟೈನಿಯನ್ನರ ಆತ್ಮ ಕಥನ ' ಎನ್ನುವ ಬರಹ ಅವರ ಗಮನಕ್ಕೆ ಬಾರದಿರುವುದು ಆಶ್ಚರ್ಯಕರ. 

 ಈ ಕಿರಿಯ ವಯಸ್ಸಿನಲ್ಲೇ  ಈ ಬಗೆಯ ಸಂವೇದನಾ ಶೀಲ ಕೃತಿಯನ್ನು ಕನ್ನಡಕ್ಕೆ ತಂದ ಆಕರ್ಷ ಕಮಲ ಅವರಿಗೆ ಅಭಿನಂದನೆ. ಪುಸ್ತಕ ಕಳಿಸಿದ ಗೆಳತಿ ಕಮಲಾರಿಗೆ ಕೃತಜ್ಞತೆ.

ಆಕರ್ಷ ರಮೇಶ್ ಕಮಲ ಅವರ ಪರಿಚಯ ನಿಮ್ಮ ಓದಿಗಾಗಿ..

‘ಬರಿಯ ನೆನಪಲ್ಲ!’ ಕೃತಿಯ ಪರಿಚಯಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ..

ಕೆ.ರಘುನಾಥ್ ಅವರ ಪರಿಚಯಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ..

 

MORE FEATURES

ನಿತ್ಯ ಜೀವನದ‌ ಮಾರ್ಗದರ್ಶನಕ್ಕಾಗಿ ಓದಬೇಕಾದ ಕೃತಿ ‘ಇರುವುದೆಲ್ಲವ ಬಿಟ್ಟು’

19-04-2024 ಬೆಂಗಳೂರು

'ಗೆಲುವಿಗಿಂತ ಸೋಲನ್ನೆ ಹೆಚ್ಚು ಪ್ರೀತಿಸುವ ರೈಗಳು ಸೋಲು ನಮ್ಮನ್ನು ನಮ್ರರನ್ನಾಗಿ ಮಾಡಿದರೆ ಗೆಲುವು ನಮ್ಮನ್ನು ಅಹಂ...

ಎತ್ತಿಕೊಂಡವರ ಕೂಸು 'ದೇವರಿಗೆ ಜ್ವರ ಬಂದಾಗ' ಕಥಾಸಂಕಲನ

18-04-2024 ಬೆಂಗಳೂರು

'ಮಕ್ಕಳ ಕಥೆಯನ್ನು ಹೆಣೆಯುವುದೆಂದರೆ ಅದೊಂದು ತಪಸ್ಸು ಮತ್ತು ಗಿಜುಗನ ನೇಯ್ಗೆ ಕಾರ್ಯದಂತಹ ಕ್ಷಮತೆ ಅವಶ್ಯಕತೆ ಇದ್ದು...

ಇತ್ತೀಚೆಗೆ ಮನುಷ್ಯನು ಬಹಳಷ್ಟು ಸ್ವಾರ್ಥಿಯಾಗುತ್ತಿದ್ದಾನೆ: ಜಿ.ಎಸ್. ಗೋನಾಳ

18-04-2024 ಬೆಂಗಳೂರು

'ಭೂಮಿ, ಆಕಾಶ, ಸೂರ್ಯ, ಚಂದ್ರ, ಗಾಳಿ, ಬೆಳಕು, ನೀರು, ಗಿಡಮರಗಳು, ಪ್ರಾಣಿ, ಪಕ್ಷಿಗಳ ನಿಸ್ವಾರ್ಥದ ಸೇವೆಯನ್ನು ಮರೆ...