ಸರ್ವಜ್ಞಾನದ ಕವಿ 'ಮೋಹನ್ ಹೀರಾಸಾ ಮಿಸ್ಕಿನ್'


"ರವಿ ಕಾಣದನ್ನು ಕವಿ ಕಾಣುತ್ತಾನೆ" ಅಂತಾ ಗಾದೆ ಇದೆ. ಏಕೆಂದರೆ ರವಿ ಬಾಹ್ಯವಾಗಿ ಎಲ್ಲದರ ಮೇಲೆ ಗೋಚರಿಸಿ ಬೆಳಕು ಚಲ್ಲಿದರೆ. ಕವಿ ಬಾಹ್ಯ ಮತ್ತು ಅಂತರಂಗ ಅರಿತು ಪದಗಳ ಮೂಲಕ ಜ್ಞಾನದ ಬೆಳಕು ಚಲ್ಲುತ್ತಾನೆ. ಆದ್ದರಿಂದ ಕವಿ ರವಿಕ್ಕಿಂತ ಮುನ್ನಲೆಗೆ ಬರುತ್ತಾನೆ. ಅಂತಹ ಕವಿಗಳಲ್ಲಿ ಹುಬ್ಬಳ್ಳಿ ತಾಲೂಕು ವರೂರ ಗ್ರಾಮದ ಅನುಭವಿ ಸರ್ವಜ್ಞಾನದ ಕವಿ ಮೋಹನ ಹೀರಾಸಾ ಮಿಸ್ಕಿನ್ ಒಬ್ಬರಾಗಿದ್ದಾರೆ. ಇವರು ಸರ್ವ ವಿಷಯದ ಮೇಲೆ ಕವಿತೆಗಳನ್ನು ಬರೆದಿದ್ದಾರೆ. ತಮ್ಮದೇ ಶೈಲಿಯಲ್ಲಿ ಕವಿತೆ ಬರೆದು ಖ್ಯಾತರಾಗಿದ್ದಾರೆ. ಸುಮಾರು 5 ಸಾವಿರ ಕ್ಕಿಂತ ಹೆಚ್ಚು ಕವಿತೆ ಬರೆದು 20 ಕ್ಕೂ ಹೆಚ್ಚು ಪುಸ್ತಕಗಳನ್ನು ರಚಿಸಿ ಪ್ರಕಟಿಸಿದ್ದಾರೆ. ಹಳೆಯ ನಾಣ್ಯ, ಅಂಚೆ ಚೀಟಿ ಸಂಗ್ರಹ, ಪರಿಸರದಲ್ಲಿ ಸಿಗುವ ವಿವಿಧ ಜಾತಿಯ ಸಸ್ಯ ಪ್ರಭೇದಗಳ ಸಂರಕ್ಷಣೆ ಮತ್ತು ಮುಂದಿನ ಪೀಳಿಗೆಗೆ ಪರಿಚಯಿಸುವದು, ಸಂಶೋಧನೆ, ಹೋಟೆಲ್ ಉದ್ಯಮ ಇತ್ಯಾದಿ ವಿಷಯಗಳಲ್ಲಿ ಹವ್ಯಾಸ ಬೆಳೆಸಿಕೊಂಡು ಮೋಹನ್ ಮಿಸ್ಕಿನ್ ಇವರು ಸರ್ವಜ್ಞಾನದ ಕವಿ ಸಾಹಿತಿಯಾಗಿದ್ದಾರೆ.

ಜೀವನ 

ಧಾರವಾಡ ಜಿಲ್ಲೆಯ ಹುಬ್ಬಳ್ಳಿಯಲ್ಲಿ ತಂದೆ ಹೀರಾಸಾ ಗಣಪತಿಸಾ ತಾಯಿ ಶಾಂತಾಬಾಯಿ ಮೋಹನ್ ಮಿಸ್ಕಿನ್ ಇವರ ಉದರದಲ್ಲಿ ಜನಿಸಿದರು. ಇವರು ಹುಬ್ಬಳ್ಳಿ ತಾಲೂಕು ವರೂರನಲ್ಲಿ ಸುಮಾರು 65 ವರ್ಷದಿಂದ ವಾಸವಾಗಿದ್ದಾರೆ. ಇವರಿಗೆ 75 ವರ್ಷ ಇಳಿವಯಸ್ಸಾಗಿದ್ದರು ಇನ್ನೂ ಕಾವ್ಯ ಬರೆಯುವ ಹುಚ್ಚು ಬಿಟ್ಟಿಲ್ಲಾ ಅನ್ನುವುದು ಸೋಜಿಗ ಅನಿಸುತ್ತದೆ. 2011 ರಲ್ಲಿ ಪಾರ್ಶ್ವವಾಯುಗೆ ತುತ್ತಾಗಿ ಬಲಗೈ ಸ್ವಾದಿನ ಕಳೆದುಕೊಂಡರು. ಅವರು ಸುಮ್ಮನೆ ಕುಳಿತು ಕೊಳ್ಳದೆ.‌ ಎಡಗೈಯಲ್ಲಿ ಬರಹ ಕಲಿತು ಮತ್ತೆ ಅನೇಕ ಕವಿತೆಗಳನ್ನು ಬರೆದು ತಮ್ಮನ್ನು ಒಬ್ಬ ಸಾಧಕ ಬರಹಗಾರ ಕವಿ ಅಂತಾ ಸಾಭೀತು ಪಡಿಸಿದ್ದಾರೆ. ಇವರ ಈ ಪ್ರಯತ್ನ ರಾಜ್ಯದ ಯಾವ ಸಾಹಿತಿಯು ಮಾಡಿರುವದಿಲ್ಲಾ ಇವರು ಮಾಡಿ ತೋರಿಸಿದ್ದಾರೆ.‌ ಇವರು ಬರೆದ ಬರಹಗಳಿಗೆ ಅನೇಕ ಪ್ರಶಸ್ತಿಗಳು ಬರಬೇಕಾಗಿತ್ತು. ಆದರೆ ಇವರು ಪ್ರಶಸ್ತಿಯ ಹಿಂದೆ ಬೀಳಲಿಲ್ಲ. "ಬರೆಯುವದು ನಮ್ಮ ವೃತ್ತಿ, ಜನರು ಓದಿದರೆ ಅದೆ ನಮಗೆ ಕೊಡುವ ಪ್ರಶಸ್ತಿ" ಎಂದು ಪುಸ್ತಕ ಪ್ರಕಟಣೆ ಮಾಡಿ ಜನರಿಗೆ ಹಂಚಿ ಸಾಹಿತ್ಯ ಸೇವೆ ಉಣ್ಣಬಡಿಸಿದ್ದಾರೆ. ಎಲ್ಲರಿಗೂ ಸಹಾಯ ಸಹಕಾರ ನೀಡುತ್ತಾ ಅತ್ಯುತ್ತಮ ವ್ಯಕ್ತಿತ್ವ ಬೆಳೆಸಿಕೊಂಡು ಎಲ್ಲರನ್ನು ಬೆಳೆಸಿದ್ದಾರೆ.‌

ಪರಿಸರ ಪ್ರಜ್ಞೆ

ಮೋಹನ್ ಮಿಸ್ಕಿನ್ ಇವರು ಒಬ್ಬ ಅತ್ಯುತ್ತಮ ಪರಿಸರವಾದಿಯಾಗಿದ್ದಾರೆ.‌ ಮರ ಕಡೆಯುವುದನ್ನು ಪ್ರತಿ ಸಾರಿ ವಿರೋಧಿಸಿದ್ದಾರೆ.‌ ಕಡೆಯುವವರನ್ನು ಅರಣ್ಯ ಇಲಾಖೆಗೆ ಕರೆ ಮಾಡಿ ತಡೆದಿದ್ದಾರೆ. ದೇಶದ ಪರಿಸರ ಬೆಳವಣಿಗೆಗೆ ಇವರು ಕೊಡುಗೆಯನ್ನು ನೀಡಿದ್ದಾರೆ. ಜೂನ್ 5 ಪರಿಸರ ದಿನ ಮತ್ತು ಇತರೆ ಕಾರ್ಯಕ್ರಮದಲ್ಲಿ ಜನರಿಗೆ ಸಸ್ಯಗಳನ್ನು ತರಿಸಿ ಉಚಿತವಾಗಿ ವಿತರಣೆ ಮಾಡಿ ಪರಿಸರ ಜಾಗೃತಿ ಮಾಡಿದ್ದಾರೆ. ವರೂರ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಹತ್ತಿರ ಇರುವ ತಮ್ಮದೆ ಜಗದೀಶ್ ಡಾಬಾದ ಹಿಂದಿನ ಜಾಗದಲ್ಲಿ ಸುಮಾರು 150 ಕ್ಕೂ ಹೆಚ್ಚು ವಿವಿಧ ಮುಳ್ಳಿನ ಜಾತಿಯ ಕಳ್ಳಿಯ ಸಸ್ಯ ಬೆಳೆಸಿ ಆರೈಕೆ ಮಾಡಿದ್ದಾರೆ. ಈ ಪ್ರಭೇದ ಸಸ್ಯ ವೀಕ್ಷಣೆ ಮಾಡಿ ಅಧ್ಯಾಯನ ಮಾಡಲು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಬಂದು ನೋಡಿ ಈ ಸಸ್ಯಗಳ ಮಹತ್ವ ಮತ್ತು ಉಪಯೋಗ ತಿಳಿದುಕೊಂಡಿದ್ದಾರೆ. ಅವನತಿಯ ಅಂಚಿನಲ್ಲಿರುವ ಕೆಲವು ಕಳ್ಳಿ ಸಸ್ಯ ಪ್ರಭೇದಗಳು ಇದರಲ್ಲಿ ಇರುವದು ಸಮಾಧಾನ ತಂದಿತು. ಇವರ ಪರಿಸರ ಪ್ರಜ್ಞೆಗೆ ಧನ್ಯವಾದ ಹೇಳಲೇಬೇಕಾಗಿದೆ. 

ಮೋಹನಸಾ ಮಿಸ್ಕಿನ್ ರವರು ಬಾಲ್ಯದಿಂದಲೇ ಪರಿಸರದ ಬಗ್ಗೆ ಹೆಚ್ಚಿನ ಆಸಕ್ತಿ ಗ್ರಾಮದಲ್ಲಿ ರೈತರಿಗೆ ಹಾಗೂ ತಮ್ಮೆಲ್ಲ ಸ್ನೇಹಿತರಿಗೆ ಅರಣ್ಯ ಇಲಾಖೆಯಿಂದ  ಮರ-ಗಿಡಗಳನ್ನು ಕೊಟ್ಟು ಪೋಷಿಸುವಂತೆ ಮತ್ತು ಅದರ ಉಪಯೋಗಗಳನ್ನು ಇವರು ತಿಳಿಸಿದ್ದರು. ಗ್ರಾಮದ ಬೀದಿಗಳಲ್ಲಿ ಕೆರೆ ಸುತ್ತಮುತ್ತಲಿನ ಪರಿಸರದಲ್ಲಿ ಸಾಕಷ್ಟು ಮರ ಗಿಡಗಳನ್ನು ಇವರು ಬೆಳೆಸಿದ್ದಾರೆ. ಇದಲ್ಲದೆ ಸುತ್ತಮುತ್ತಲಿನ ಗ್ರಾಮದಲ್ಲಿ ಶಾಲಾ ಕಾಲೇಜುಗಳಿಗೆ ಹೋಗಿ ವನಮೋತ್ಸವವನ್ನು ಆಚರಣೆ ಮಾಡುತ್ತಿದ್ದರು ಮಕ್ಕಳಲ್ಲಿ ಪರಿಸರ ಆಸಕ್ತಿ ಮತ್ತು ಕುತೂಹಲ ಹೆಚ್ಚಿಸುವಂತೆ ಪ್ರೇರೇಪಿಸುತ್ತಿದ್ದರು. ನಿತ್ಯ ಹರಿದ್ವರ್ಣದ ಕಾಡುಗಳಲ್ಲಿ ಬೆಳೆಯುವ ಸಸಿಗಳನ್ನು ಸಹ ಇವರು ಪೋಷಿಸಿದಿದ್ದರು ಅಲ್ಲದೆ ತೋಟಗಾರಿಕೆ ಇಲಾಖೆ ಮತ್ತು ಅರಣ್ಯ ಇಲಾಖೆ ವತಿಯಿಂದ ನಡೆಯುವ ಫಲ ಪುಷ್ಪ ಪ್ರದರ್ಶನದಲ್ಲಿ ಇವರು ಬೆಳೆಸಿದ ಸಸಿಗಳನ್ನು ತೆಗೆದುಕೊಂಡು ಹೋಗಿ ಪ್ರದರ್ಶಿಸುತ್ತಿದ್ದರು, ಪ್ರದರ್ಶಿಸಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದರು. ಇವರು ಪೋಷಿಸಿದ ಮರ-ಗಿಡಗಳನ್ನು  ನೋಡಲು ಹಲವರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಿರಿಯರು ಇವರ ಮನೆಗೆ ಬರುತ್ತಿದ್ದರು.

ಅಂಚೆ ಮತ್ತು ಹಳೆಯ ನಾಣ್ಯ ಸಂಗ್ರಹ

ಐತಿಹಾಸಿಕ ಪ್ರಜ್ಞೆ ಹೊಂದಿರುವ ಮೋಹನ್ ಮಿಸ್ಕಿನ್ ಇವರು ಹಳೆಯ ಕಾಲದ ಅಂಚೆ ಚೀಟಿಗಳು, ಹಳೆಯ ನಾಣ್ಯಗಳನ್ನು ಸಂಗ್ರಹಿಸಿ ಅವುಗಳ ಬಗ್ಗೆ ಅಧ್ಯಯನ ಮಾಡಿ ಪುಸ್ತಕದಲ್ಲಿ ಪ್ರಕಟಿಸಿದ್ದಾರೆ. ಕವಿತೆಗಳನ್ನು ಬರೆದು ಇತಿಹಾಸವನ್ನು ಪದಗಳಿಗೆ ಇಳಿಸಿದ್ದಾರೆ.‌ ಪ್ರಾಚೀನ, ಮದ್ಯೆ, ಮತ್ತು ಬ್ರಿಟಿಷ್ ಕಾಲದ ನಾಣ್ಯಗಳನ್ನು ಸಂಗ್ರಹಿಸಿ ಒಬ್ಬ ಉತ್ತಮ ನಾಣ್ಯ ಸಂಗ್ರಹಕಾರ ಅಂತಾ ಹೆಸರಾಗಿದ್ದಾರೆ.‌ ಹುಬ್ಬಳ್ಳಿ ತಾಲೂಕು ಚಾಲುಕ್ಯ ಅಂಚೆ ಚೀಟಿ ಮತ್ತು ಹಳೆಯ ನಾಣ್ಯಗಳ ಸಂಗ್ರಹಕಾರರ ಸಂಘದ ಅಧ್ಯಕ್ಷರಾಗಿದ್ದಾರೆ. ಮತ್ತು ರಾಜ್ಯ ಸಂಘದ ಸದಸ್ಯರಾಗಿದ್ದಾರೆ. 

ಇವರು ಬಾಲ್ಯದಿಂದಲೇ ಅಂಚೆ ಚೀಟಿ ಸಂಗ್ರಹ ಮತ್ತು ನಾಣ್ಯ ಸಂಗ್ರಹಗಳ ಬಗ್ಗೆ ಹೆಚ್ಚು ಆಸಕ್ತಿ ಉಳ್ಳವರಾಗಿದ್ದರು. ಊರಿಗೆ ಪಾತ್ರೆ ಮಾರೋರು ಬಂದರೆ ಇವರು ಹಳೆಯ ವಸ್ತು ಹಾಗೂ ನಾಣ್ಯಗಳನ್ನು ತೆಗೆದುಕೊಂಡು ತಮ್ಮ ಬಳಿ ಇರುವ ಹೊಸ ಪಾತ್ರೆ ಹಾಗೂ ಬಳಸಿದ ಪಾತ್ರೆಗಳನ್ನು ನೀಡುತ್ತಿದ್ದರು. ಅವೆಲ್ಲ ವಸ್ತುಗಳು ಮತ್ತು ನಾಣ್ಯಗಳನ್ನು ಸಂಗ್ರಹಿಸುತ್ತಿದ್ದರು. ಸುಮಾರು ಹೀಗೆ ನಿರಂತರ 40 ವರ್ಷಗಳ ಕಾಲ ಇವರು ಸಂಗ್ರಹಿಸುತ್ತಾ ಬಂದರು. ಮುಂದೆ ಇವರು ಈ ನಾಣ್ಯಗಳನ್ನು ಯಾವ ರಾಜರ ಕಾಲದ್ದು ಯಾವ ಕಾಲದ್ದು ಯಾವ ರಾಜ್ಯದ ಆಡಳಿತದಲ್ಲಿ ಒಡಪಟ್ಟಿರುವುದನ್ನು, ಕಾಲಂತರದಲ್ಲಿ ಪುಸ್ತಕಗಳಲ್ಲಿ ತಿಳಿದುಕೊಳ್ಳುತ್ತಾ ಅವುಗಳನ್ನು ವಿಂಗಡಿಸ ತೊಡಗಿದರು. ಇಂದು ಈ ಸಂಗ್ರಹವು ಅತ್ಯಂತ ಅಚ್ಚುಕಟ್ಟಾಗಿ ಎಲ್ಲರಿಗೂ ನೋಡಲು ಸಿಗುತ್ತದೆ. 300ಕ್ಕೂ ಹೆಚ್ಚು ಶಾಲಾ-ಕಾಲೇಜುಗಳಿಗೆ ಹೋಗಿ ಇವರು ಅಂಚೆ ಚೀಟಿ ಹಾಗೂ ನಾಣ್ಯ ಸಂಗ್ರಹಗಳನ್ನು ಪ್ರದರ್ಶನ ಮಾಡಿದ್ದಾರೆ. ಅಲ್ಲದೆ ಜಿಲ್ಲಾ ಹಾಗೂ ತಾಲೂಕು ರಾಜ್ಯಮಟ್ಟಗಳಲ್ಲಿ ಪ್ರಶಸ್ತಿಯನ್ನು ತೆಗೆದುಕೊಂಡಿದ್ದಾರೆ. ಇವರು ಸುಮಾರು ಹದಿನೈದು ವರ್ಷಗಳ ಕಾಲ ಹೀಗೆ ಸಂಗ್ರಹಿಸಿದರು. ಅಂಚೆ ಚೀಟಿ ಹಾಗೂ ನಾಣ್ಯ ಸಂಗ್ರಹಕಾರರ ಸಂಘವನ್ನು ಹುಬ್ಬಳ್ಳಿಯಲ್ಲಿ 2010ರಲ್ಲಿ ಸ್ಥಾಪಿಸಿದರು. ಈ ಸಂಘದಲ್ಲಿ ಇಂದು ಸುಮಾರು 60ಕ್ಕೂ ಹೆಚ್ಚು ಉತ್ತರ ಕರ್ನಾಟಕದ ಸಂಗ್ರಹಕಾರರಿದ್ದಾರೆ.
             
ರಾಜಕೀಯ ಮತ್ತು ಆಡಳಿತ

ಇವರು ಮಂಡಳ ಪಂಚಾಯತ್ ಸದಸ್ಯರಾಗಿ ಸ್ಥಳೀಯ ಆಡಳಿತದಲ್ಲಿ ಗುರುತಿಸಿಕೊಂಡು ಉತ್ತಮ ಜನಸೇವೆ ಮಾಡಿದ್ದಾರೆ. ಗುತ್ತಿಗೆದಾರರಾಗಿ ಉತ್ತಮ ನಿರ್ಮಾಣ ಕಾರ್ಯ ಮಾಡಿದ್ದಾರೆ. ಹೋಟೆಲ್ ಉದ್ಯಮದ ಕೆಲಸದಲ್ಲಿ ಅತ್ಯುತ್ತಮ ಖಾದ್ಯ ತಯಾರಿಸಿ ಉಣ್ಣಬಡಿಸಿದ್ದಾರೆ. ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳಾಗಿ ಸಕ್ರೀಯ ಸೇವೆಯನ್ನು ಗೈದಿದ್ದಾರೆ. 

ನಿಕಟ ಸಂಪರ್ಕ

"ಈಶ್ವರ ಅಲ್ಲಾ ನೀನೇ ಎಲ್ಲಾ " ಧಾರಾವಾಹಿ ಖ್ಯಾತಿಯ ಶ್ರೀಹರಿ ಖೋಡೆಯವರ ಜೊತೆಗೆ ಉತ್ತಮ ಸ್ನೇಹ ಸಂಬಂಧ ಹೊಂದಿದ ಇವರು ಅವರ ಪರಮಾಪ್ತ ವಲಯದಲ್ಲಿ ಗುರುತಿಸಿಕೊಂಡವರು.ಶಾಸಕರು, ಮಂತ್ರಿಗಳು, ಸ್ಥಳೀಯ ಧುರೀಣರ ಜೊತೆಗೆ ಅನ್ಯೋನ್ಯ ಸಂಬಂಧ ಹೊಂದಿದ್ದಾರೆ.

ಸಾಹಿತ್ಯ ಸೇವೆ

ಮೋಹನ್ ಮಿಸ್ಕಿನ್ ಇವರು ಪರಿಸರ, ಆಧ್ಯಾತ್ಮಿಕತೆ, ವೈಜ್ಞಾನಿಕತೆ, ಕೃಷಿ, ರಾಜಕೀಯ, ಖಗೋಳ ಶಾಸ್ತ್ರ, ಭೂಮಿ, ಪ್ರೀತಿ, ಸ್ನೇಹ, ಅಂತರಾತ್ಮ, ಪರಮಾರ್ಥ, ಭಕ್ತಿ, ಸಾಮಾಜಿಕ ಕಳಕಳಿ, ಅಂತರಾಷ್ಟ್ರೀಯ ಸ್ಥಿತಿ ಗತಿ, ಯುದ್ಧ ಇತ್ಯಾದಿ ಕುರಿತು ಕವಿತೆಗಳನ್ನು ಬರೆದಿದ್ದಾರೆ. 8 ಭಾಷೆಯನ್ನು ಬಲ್ಲರಾಗಿದ್ದು ಅನ್ಯ ಭಾಷೆಯಲ್ಲು ಕವಿತೆ ರಚಸಿದ್ದಾರೆ. "ಶಾಂತಾತನಯ" ಇವರ ಕಾವ್ಯನಾಮವಾಗಿದೆ. ಇವರ ಹಲವಾರು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಅವುಗಳಲ್ಲಿ ಶ್ರೀವೀರಭದ್ರೇಶ್ವರ ವಚನಗಳು, ಶ್ರಿಪಾರ್ಶ್ವನಾಥ ದೇವರ ವಚನಗಳು, ಕನ್ನಡಿಗನ ಕಾವ್ಯಗಳು, ಉದಯಿಸಿದನು ವೇಣುಗೋಪಾಲ, ಕರ್ನಾಟಕ ಮತ್ತು ಮಹಾರಾಷ್ಟ್ರದ ನಾಣ್ಯಗಳು, ನಿಸರ್ಗ ಕಾವ್ಯಗಳು, ಶ್ರೀಅಂಕೇಗೌಡರ ಪುಸ್ತಕ ರಾಶಿ, ಸೂರ್ಯ, ಬಾಲಚಂದ್ರ, ಗಿಗಿ ಪದಗಳು ಮತ್ತು ಭಜನೆಗಳು, ಆಧುನಿಕ ಬಸವೇಶ್ವರ, ಕನ್ನಡ ನಾಡು, ಕನ್ನಡ ನಾರಿ, ಹ್ಯೂಯನ್ ತ್ಸಾಂಗ್, ಸಹ್ಯಾದ್ರಿ ಸಿರಿ ಪಂಪನಿಗೆ ಸ್ಪೂರ್ತಿ, ರತ್ನ, ಕಥನ ಕವನ, ಹಿಂದಿ ಕಾವ್ಯಗಳು ಇತ್ಯಾದಿ ಪುಸ್ತಕ ಬರದಿದ್ದಾರೆ.

ಮೋಹನ್ ಮಿಸ್ಕಿನ್ ಅವರ ವಿಶ್ರಾಂತಿ ಜೀವನದಲ್ಲಿ ಇನ್ನೂ ಹೆಚ್ಚು ಪುಸ್ತಕಗಳು ಹೊರಬರಲಿ ಸಾಹಿತ್ಯ ಸೇವೆ ಮುಂದುವರಿಯಲಿ. ಇವರ ಉತ್ತಮ ಸಾಹಿತ್ಯ ಸೇವೆ ಮತ್ತು ಪರಿಸರ ಪ್ರಜ್ಞೆ, ಐತಿಹಾಸಿಕ ನಾಣ್ಯಗಳ  ಸೇವೆಗೆ ಪ್ರಶಸ್ತಿಗಳು ಒಲಿದು ಬರಲಿ ಅಂತಾ ಅಸಂಖ್ಯಾತ ಅಭಿಮಾನಿಗಳ ಆಶಯವಾಗಿದೆ. 

ಲೇಖನ :  ಶರೀಫ ಗಂ ಚಿಗಳ್ಳಿ

MORE FEATURES

ಅಂಬೇಡ್ಕರ್ ವಿದ್ಯಾವಂತ ಜನರ ಕೈಯಲ್ಲಿ ಮೋಜಿನ ವಸ್ತುವಾಗಿ ಕಾಣಿಸಿಕೊಳ್ಳುತ್ತಿದ್ದಾರೆ..

07-12-2025 ಬೆಂಗಳೂರು

"ದಲಿತರು ಒಳಪಂಗಡಗಳ ಭಾವನಾತ್ಮಕ ಸೆಳವಿಗೆ ಸಿಕ್ಕು ಮೂಲ ಸಿದ್ದಾಂತದಿಂದ ದೂರವಾಗುತ್ತಿದ್ದಾರೆ. ಇಂದು ಅಂಬೇಡ್ಕರ್ ವಿ...

BlrLitFest 2025: ಸಾಹಿತ್ಯಾಸಕ್ತರ ಮಹಾಸಂಗಮ!

06-12-2025 ಬೆಂಗಳೂರು

ಬೆಂಗಳೂರು : ಬೆಂಗಳೂರು ಸಾಹಿತ್ಯ ಉತ್ಸವ (BlrLitFest)ವು ಪ್ರತಿ ವರ್ಷ ನಡೆಯುವ ಅತ್ಯಂತ ನಿರೀಕ್ಷಿತ ಸಾಂಸ್ಕೃತಿಕ ಕಾರ್ಯ...

ಮತ್ತೆ ಮತ್ತೆ ಕಾಡುವ ಕಥೆಗಳು

06-12-2025 ಬೆಂಗಳೂರು

ಮಗಳ ನೋವನ್ನು ಕಂಡು ಹೆತ್ತವರು ಜರ್ಜರಿತರಾಗುವ ದೃಶ್ಯವನ್ನು ಹಾಗೂ ಅಪ್ಪ ಅಮ್ಮನ ಧಾವಂತದ ಬದುಕಿನಲ್ಲಿ ಮಕ್ಕಳು ಬಡವಾಗುವ ಸ...