ಸತ್ಯವನ್ನು ಅನಾವರಣಗೊಳಿಸುವ ಹಾಸ್ಯ ಚಟಾಕಿ "ಮಾತ್ರೆ ದೇವೋ ಭವ"


ಊಟದಂತೆ ಔಷಧಿಗಳು ಇವತ್ತು ದಿನನಿತ್ಯ ನಮ್ಮೊಂದಿಗೆ ಹೇಗೆ ಬಿಟ್ಟಿರಲಾರದ ನಂಟನ್ನು ಹೊಂದಿವೆ ಎನ್ನುವುದನ್ನು ನಗೆಗಡಲಲ್ಲಿ ತೇಲಿಸುತ್ತಾ ಸತ್ಯವನ್ನು ಅನಾವರಣಗೊಳಿಸುವ ಹಾಸ್ಯ ಚಟಾಕಿ "ಮಾತ್ರೆ ದೇವೋ ಭವ" ಎನ್ನುತ್ತಾರೆ ಲೇಖಕಿ ನಯನ ಬಜಕೂಡ್ಲು. ಅವರು ಆರತಿ ಘಟಿಕಾರ್ ಅವರ ಮಾತ್ರೆ ದೇವೋ ಭವ ಕೃತಿಯ ಬಗ್ಗೆ ಬರೆದ ಟಿಪ್ಪಣಿ ನಿಮ್ಮ ಓದಿಗಾಗಿ...

ಪುಸ್ತಕ :- ಮಾತ್ರೆ ದೇವೋ ಭವ
ಲೇಖಕಿ :- ಆರತಿ ಘಟಿಕಾರ್
ಪುಸ್ತಕದ ಬೆಲೆ :- 100 
ಪ್ರಕಾಶಕರು :- ತೇಜು ಪಬ್ಲಿಕೇಷನ್ಸ್

ಹಾಸ್ಯದ ವಿಚಾರ ಬಂದಾಗ ನೆನಪಾಗುವವರು ದುಂಡಿರಾಜ್, ಭುವನೇಶ್ವರಿ ಹೆಗಡೆ ಮೇಡಂ, ಪ್ರಾಣೇಶ್, ಸುಧಾ ಬರಗೂರು ಹಾಗೂ ಇನ್ನೂ ಕೆಲವರು. ಆದರೆ ಇತ್ತೀಚಿನ ದಿನಗಳಲ್ಲಿ ಪರಿಚಿತರಾದವರಲ್ಲಿ ತಮ್ಮ ಬರಹಗಳ ಮೂಲಕ ನಗೆ ಉಕ್ಕಿಸುವವರು ಆರತಿ ಘಟಿಕಾರ್ ಹಾಗೂ ನಳಿನಿ ಭೀಮಪ್ಪ ಅವರು. ಆರತಿಯವರು ಪುಟ್ಟ ಪುಟ್ಟ ಸಾಲುಗಳಲ್ಲಿ ಹಾಸ್ಯವನ್ನು ಸೆರೆ ಹಿಡಿದಿಟ್ಟರೆ, ನಳಿನಿ ಅವರು ಅವರ ದಿನನಿತ್ಯದ ಬದುಕಿನಲ್ಲಿ ಘಟಿಸಿದ ಘಟನೆಗಳಲ್ಲೇ ಹಾಸ್ಯವನ್ನು ಹುಡುಕುವವರು.

ಹಾಸ್ಯವೆಂದರೆ ನಗು . ನಿರಾಳವಾದ, ಮುಕ್ತವಾದ ನಗು. ಇಂತಹ ನಗು ಹೊಮ್ಮಿದಾಗ ಮನಸ್ಸು ಅದೆಷ್ಟೋ ನಿರಾಳ. ಎಲ್ಲಾ ಚಿಂತೆಗಳು ಮರೆಯಾಗಿ ಮನಸ್ಸಿನಲ್ಲಿ ಹೊಸ ಪ್ರಪಂಚದ ಸೃಷ್ಟಿ. ನಾವು ನಮ್ಮ ಬಿಗುಮಾನ, ಸಿಡುಕುತನ, ಅಹಂಕಾರವನ್ನು ತೊರೆದು ಮುಕ್ತವಾಗಿ ಸಣ್ಣ ಪುಟ್ಟ ವಿಚಾರಗಳಲ್ಲಿ ಹಾಸ್ಯವನ್ನು ಗುರುತಿಸಿ ನಗಲು ಶುರು ಮಾಡಿದಾಗ ನಮ್ಮ ಬದುಕು ನಿಜಕ್ಕೂ ಸುಂದರವಾಗುತ್ತದೆ. 

ಇವತ್ತು ಬದುಕು ಎಷ್ಟು ದುಸ್ತರವಾಗಿದೆ ಎಂದು ಅಲ್ಲಲ್ಲಿ ಕಾಣಸಿಗುವ ನಗುವಿನ ಕ್ಲಬ್ಬುಗಳನ್ನು ನೋಡುವಾಗ ಅರಿವಾಗುತ್ತದೆ. ಅಲ್ಲಾದರೂ ಏನು ಸಹಜತೆ ಇರುತ್ತದಾ .... ಒತ್ತಾಯದಲ್ಲಿ ನಗುವನ್ನು ಭರಿಸಿಕೊಳ್ಳುವ ಕರ್ಮ.

ಆರತಿಯವರ ಹಾಸ್ಯ ಬರಹಗಳಲ್ಲಿ ನಮಗೆ ಕಾಣಸಿಗುವುದು ದಿನನಿತ್ಯ ನಮ್ಮ ಸುತ್ತಮುತ್ತ ನಡೆಯುವ ಘಟನೆಗಳಲ್ಲಿ ತುಂಬಿರುವ ಹಾಸ್ಯ. ಆಟೋದಲ್ಲಿ ಹೋಗುವಾಗ ಆಟೊ ಚಾಲಕನ ಜತೆ ನಡೆಯುವ ಸಂಭಾಷಣೆಯಲ್ಲಿ ಇಣುಕುವ ತಿಳಿಹಾಸ್ಯ, ಬೇರೆ ಮನೆ ಮಾಡುವ ವಿಷಯದಲ್ಲಿ ಕಿತ್ತಾಟ ನಡೆದಾಗ ಇರುವ ಪುಟ್ಟ ಮನೆಯಲ್ಲಿ ನಡೆಯುವ ಕದನದಿಂದ ಊರಿಡೀ ಹೇಗೆ ತಮ್ಮ ಮನೆಯ ಕಡೆ ಕಿವಿ ತೆರೆದು ಕುತೂಹಲದಿಂದ ಗಮನಿಸಿ ಗಂಡ ಹೆಂಡಿರ ನಡುವಿನ ಕಿತ್ತಾಟಕ್ಕೆ ಬ್ರೇಕ್ ಹಾಕುತ್ತದೆ ಅನ್ನುವ ನವಿರಾದ ಹಾಸ್ಯವನ್ನು ಒಳಗೊಂಡ ಬರಹ ಎಲ್ಲವೂ ದಿನನಿತ್ಯದ ಬದುಕಿನ ಭಾಗಗಳೇ.

ಫೇಸ್ ಬುಕ್ ಅನ್ನುವ ಮಾಯಾ ಪ್ರಪಂಚದೊಳಗೆ ಕಳೆದು ಹೋಗುವವರ ಕುರಿತಾಗಿ ಒಂದು ಹಾಸ್ಯ ಬರಹ. ಇಲ್ಲಿ ನಗುವನ್ನು ತುಂಬುತ್ತಲೇ ಲೇಖಕಿ ವಾಸ್ತವದ ಪರಿಸ್ಥಿತಿಯನ್ನು ತೆರೆದಿಟ್ಟಿದ್ದಾರೆ. ಇಲ್ಲಿ ಭವಿಷ್ಯದ ಕುರಿತಾದ, ಜೀವನಕ್ಕೆ ಬೇಕಾದ ಒಂದು ಉತ್ತಮ ಸಂದೇಶವಿದೆ. 

ಊಟದಂತೆ ಔಷಧಿಗಳು ಇವತ್ತು ದಿನನಿತ್ಯ ನಮ್ಮೊಂದಿಗೆ ಹೇಗೆ ಬಿಟ್ಟಿರಲಾರದ ನಂಟನ್ನು ಹೊಂದಿವೆ ಎನ್ನುವುದನ್ನು ನಗೆಗಡಲಲ್ಲಿ ತೇಲಿಸುತ್ತಾ ಸತ್ಯವನ್ನು ಅನಾವರಣಗೊಳಿಸುವ ಹಾಸ್ಯ ಚಟಾಕಿ "ಮಾತ್ರೆ ದೇವೋ ಭವ". ಔಷಧ ದೇಹದ ಕಾಯಿಲೆಯನ್ನು ಗುಣಪಡಿಸಿದರೆ ಆರತಿಯವರ ಮಾತ್ರೆ ದೇವೋಭವ ನಮ್ಮನ್ನು ನಕ್ಕು ಹಗುರಾಗಿಸಿ ಮನಸ್ಸನ್ನು ನಿರಾಳಗೊಳಿಸುವ ಔಷಧ. ಇಲ್ಲಿರುವ ಲೇಖನಗಳಲ್ಲಿ ಸಹಜತೆ ಇದೆ. ನಮ್ಮ ಸುತ್ತ ಘಟಿಸಿರುವ ಘಟನೆಗಳೇ ಇಲ್ಲಿ ಹಾಸ್ಯವಾಗಿ ಅಕ್ಷರ ರೂಪ ಪಡೆದಿವೆ. ಮನಸ್ಸನ್ನು ಖುಷಿ ಗೊಳಿಸುವಲ್ಲಿ ಈ ಪುಸ್ತಕ ದಿವ್ಯ ಔಷಧ. ಇಲ್ಲಿರುವ ಬರಹಗಳನ್ನು ಓದಿ ಸವಿಯುವುದರಲ್ಲೇ ನಿಜವಾದ ಮಜಾ. ಇಲ್ಲಿ ಇರುವ ಲೇಖನಗಳು ಆರತಿಯವರ ಹಾಸ್ಯ ಮನೋಭಾವಕ್ಕೆ ಹಿಡಿದ ಕನ್ನಡಿ. ಇಂತಹ ಮನೋಭಾವ ಹೊಂದಿರುವ ವ್ಯಕ್ತಿಗಳ ಸುತ್ತಮುತ್ತಲೂ ಸದಾ ಹಾಸ್ಯ ನಗು ತುಂಬಿ ತುಳುಕಾಡುತ್ತಿರುತ್ತದೆ ಅನ್ನುವುದು ನನ್ನ ಅನಿಸಿಕೆ. ಇಂತಹವರ ಮನಸ್ಸು ಬಹಳ ವಿಶಾಲವಾಗಿರುತ್ತದೆ. ಲೇಖಕಿ ಆರತಿ ಘಟಿಕಾರ್ ಅವರು ಸಾಹಿತ್ಯ ಕ್ಷೇತ್ರದಲ್ಲಿ ಇನ್ನೂ ಸಾಧನೆಯ ಎತ್ತರಕ್ಕೇರಲಿ ಅನ್ನುವ ಹಾರೈಕೆ. ಹಾಸ್ಯ ಲೇಖನಗಳನ್ನು ಬರೆಯುವುದು ಸುಲಭದ ವಿಚಾರ ಅಲ್ಲ. ವಿಶಾಲ ಮನಸ್ಥಿತಿಯನ್ನು ಹೊಂದಿದ್ದಾಗ ಮಾತ್ರ ಹಾಸ್ಯ ಬರಹಗಳನ್ನು ಬರೆಯಲು ಸಾಧ್ಯ, ಓದುಗರನ್ನು ತಲುಪಲು ಸಾಧ್ಯ. ಈ ಕಲೆ ಆರತಿಯವರಿಗೆ ಸಿದ್ಧಿಸಿದೆ. ನಗು ಇವತ್ತಿನ ದಿನದ ಅಗತ್ಯ ಕೂಡ. ಆರತಿಯವರು ಇನ್ನೂ ಹೆಚ್ಚಿನ ಹಾಸ್ಯ ಲೇಖನಗಳನ್ನು ಬರೆದು ಯಶಸ್ವಿಯಾಗಲಿ ಅನ್ನುವ ಶುಭ ಹಾರೈಕೆಗಳೊಂದಿಗೆ..

- ನಯನ ಬಜಕೂಡ್ಲು

MORE FEATURES

ಧೀರಜ್ ಪೊಯ್ಯೆಕಂಡ ಅವರ ‘ಆತ್ಮ ಕತೆ’ ಕಾದಂಬರಿ ಬಿಡುಗಡೆ

13-05-2024 ಬೆಂಗಳೂರು

ಪತ್ರಕರ್ತ ಧೀರಜ್‌ ಪೊಯ್ಯೆಕಂಡ ಅವರ, ಹಾರರ್‌ ಥ್ರಿಲ್ಲರ್‌ ಕಾದಂಬರಿ ‘ಆತ್ಮ ಕತೆ’ಯನ್ನು...

ಇಲ್ಲಿ ಸ್ವಾನುಭವದ ಕುತೂಹಲಕಾರಿ ಸಂಕಥನಗಳಿವೆ

13-05-2024 ಬೆಂಗಳೂರು

'ಈ ಪುಸ್ತಕದ ಲೇಖನಗಳು ಲಲಿತ ಪ್ರಬಂಧದ ದಾಟಿಯಲ್ಲಿದ್ದರೂ ಪರಿಸರದ ಕುರಿತು ಗಂಭೀರವಾದ ಸಮಸ್ಯೆಗಳ ಪರಿಸರ ನಾಶದ ಕಾರಣಗಳ...

ಉಡುಪಿ ಜಿಲ್ಲೆಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ಭಾವಗೀತೆ ಗಾಯನ ಸ್ಪರ್ಧೆ

13-05-2024 ಬೆಂಗಳೂರು

ಬೆಂಗಳೂರು: ಉಡುಪಿ ಜಿಲ್ಲೆಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ಇಲ್ಲಿದೆ ಸುವರ್ಣಾವಕಾಶ. ಡಾ. ಎಂ ಗೋಪಾಲಕೃಷ್ಣ ಅಡಿಗರ ಯಾವುದಾ...