“ಬೃಹತ್ ಆಕರ ಗ್ರಂಥಗಳನ್ನು ಅಧ್ಯಯನ ಮಾಡಿ ಅವುಗಳಲ್ಲಿ ಇರುವ ಸಾರವನ್ನು ಹೀರಿ ತಮ್ಮದೇ ದಾಟಿಯಲ್ಲಿ ಓದುಗರಿಗೆ ಉಣಬಡಿಸುವ ಪ್ರಯತ್ನವನ್ನು ಮಾಡಿದ್ದಾರೆ,” ಎನ್ನುತ್ತಾರೆ ತಲಕಾಡು ಚಿಕ್ಕರಂಗೇಗೌಡ. ಅವರು ಶ್ರೇಯಸ್ ಹೆಚ್ ಸಿ ಅವರ “ನವಾಬ್” ಕೃತಿಗೆ ಬರೆದ ಮುನ್ನುಡಿ.
ಸಿವಿಲ್ ಇಂಜಿನಿಯರಿಂಗ್ ನಲ್ಲಿ ಬಿ.ಇ., ಓದಿ ಜಿಲಚಲನ ಶಾಸ್ತ್ರದಲ್ಲಿ ಎಂ.ಟೆಕ್., ಮಾಡಿ ಪ್ರಸ್ತುತ ಇಂಜಿನಿಯರಿಂಗ್ ಕಾಲೇಜು ಒಂದರಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ಶ್ರೀ ಎಚ್ ಸಿ ಶ್ರೇಯಸ್ ರವರು ಜಲವಿಜ್ಞಾನ, ಇತಿಹಾಸ, ಕನ್ನಡ ಸಾಹಿತ್ಯ, ಅರಣ್ಯ, ಪರಿಸರ ಮತ್ತು ನೀರಾವರಿ ವಿಷಯಗಳ ಬಗ್ಗೆ ಅಪಾರವಾದ ಆಸಕ್ತಿಯನ್ನು ಹೊಂದುವ ಮೂಲಕ ತಾವು ಒಬ್ಬ ಜೀವಪರ ಹಾಗೂ ಜನಪರ ವ್ಯಕ್ತಿ ಎಂಬುದನ್ನು ಜಗತ್ತಿಗೆ ಸಾರಿದ್ದಾರೆ.
ಇವರು ಕನ್ನಡದಲ್ಲಿ ಜಲವಿಜ್ಞಾನ ಆಧಾರಿತ 'ನಿಸರ್ಗದ ರಾಯಭಾರಿ' ಎಂಬ ಕೃತಿಯನ್ನು ರಚಿಸಿ ನಾಡಿಗೆ ಅರ್ಪಿಸಿದ್ದಾರೆ. ಜೊತೆಗೆ ಹಲವು ನಿಯತಕಾಲಿಕಗಳಿಗೆ ಮಳೆಯ ಕುರಿತು, ಒಳಚರಂಡಿ ನಿರ್ಮಾಣದಲ್ಲಿ ಸಮರ್ಪಕವಾಗಿ ಬಳಸಬಹುದಾದ ಸಿಮೆಂಟ್ ಸ್ಲಾಬ್ ಬಗ್ಗೆ, ಪ್ರವಾಹ ನಿರ್ವಹಣೆ ಕುರಿತಾಗಿ ಅಧಿಕಾರಯುತವಾದ ಹಲವಾರು ಲೇಖನಗಳನ್ನೂ ಬರೆದಿದ್ದಾರೆ. ಪ್ರಸ್ತುತ ಇವರು ಮೈಸೂರು ನವಾಬ್ ಹೈದರಾಲಿಖಾನ್ ಬಹದ್ದೂರ್ ಕುರಿತಂತೆ 'ಒಂದು ದಂತಕಥೆ' ಎಂಬ ಕೃತಿಯನ್ನು ರಚಿಸಿ ನಾಡಿನ ಜನತೆಗೆ ಅರ್ಪಿಸಲು ಮುಂದಾಗಿದ್ದಾರೆ. ಈ ಕೃತಿಯ ರಚನೆಗೆ ಸರಿಸುಮಾರು 22 ಸಣ್ಣ, ದೊಡ್ಡ, ಬೃಹತ್ ಆಕರ ಗ್ರಂಥಗಳನ್ನು ಅಧ್ಯಯನ ಮಾಡಿ ಅವುಗಳಲ್ಲಿ ಇರುವ ಸಾರವನ್ನು ಹೀರಿ ತಮ್ಮದೇ ದಾಟಿಯಲ್ಲಿ ಓದುಗರಿಗೆ ಉಣಬಡಿಸುವ ಪ್ರಯತ್ನವನ್ನು ಮಾಡಿದ್ದಾರೆ.
ಕ್ರಿ.ಶ.1498 ರಲ್ಲಿ ಪೋರ್ಚುಗೀಸರ ವಾಸ್ಕೋಡಿಗಾಮ ಭಾರತಕ್ಕೆ ಕಾಲಿಟ್ಟ ಗಳಿಗೆಯಿಂದ ಹಿಡಿದು ಕ್ರಿ.ಶ. 1782 ರ ಡಿಸೆಂಬರ್ 7ರಂದು ಹೈದರಾಲಿಯು ತನ್ನ ಕೊನೆಯ ಉಸಿರನ್ನು ಎಳೆಯುವವರೆಗಿನ ಕಾಲಘಟ್ಟದ ಭಾರತದ ಅದರಲ್ಲೂ ವಿಶೇಷವಾಗಿ ದಕ್ಷಿಣ ಭಾರತದ ಇತಿಹಾಸವನ್ನು ಮೈಸೂರು ಸಂಸ್ಥಾನಕ್ಕೆ ಹೆಚ್ಚಿನ ಒತ್ತುಕೊಟ್ಟು ರಚಿಸುವಲ್ಲಿ ತಮ್ಮ ಜಾಳ್ಮೆಯನ್ನು ತೋರಿಸಿದ್ದಾರೆ.
ಉತ್ತರ ಭಾರತದಲ್ಲಿ ಪ್ರಬಲರಾಗಿದ್ದ ಮೊಘಲರು ಅವನತಿ ಹೊಂದುತ್ತಿದ್ದಂತೆಯೇ ವಿದೇಶಿಯರಾದ ಬ್ರಿಟಿಷರು ಭಾರತದಲ್ಲಿ ಭದ್ರವಾಗಿ ಕಾಲೂರತೊಡಗಿದರು. ದಕ್ಷಿಣ ಭಾಗದಲ್ಲಿ ವಿಜಯನಗರ ಸಾಮ್ರಾಜ್ಯವು ಕ್ಷೀಣಗತಿಗೆ ಇಳಿದು ನೂರಾರು ಪಾಳೆಗಾರರ ಹಿಡಿತಕ್ಕೆ ಸಿಲುಕಿ ಪರಸ್ಪರ ಅಂತರ್ ಯುದ್ಧದಲ್ಲಿ ತಲ್ಲೀನವಾಗಿತ್ತು. ಈ ಸಂದರ್ಭದಲ್ಲಿ ಬ್ರಿಟಿಷರು ದಕ್ಷಿಣ ಭಾರತದಲ್ಲೂ ತಮ್ಮ ಹೆಜ್ಜೆಯೂರಿ ನಡೆಯಲು ಪ್ರಾರಂಭಿಸಿದರು. ಇಂತಹ ಕಾಲಘಟ್ಟದಲ್ಲಿ ಕೇವಲ 33 ಹಳ್ಳಿಗಳ ಪುಟ್ಟ ಸಂಸ್ಥಾನವಾಗಿದ್ದ ಮೈಸೂರು ತನ್ನ ದಳವಾಯಿಗಳ ಭುಜಬಲ ಪರಾಕ್ರಮದಿಂದಾಗಿ ತಮಿಳುನಾಡಿನ ಹಲವು ಭಾಗಗಳನ್ನು ವಿಶೇಷವಾಗಿ ತಿರುಚಿರಾಪಳ್ಳಿ ಮುಂತಾದವುಗಳನ್ನು ಜಯಿಸಿ ಒಂದು ಸಣ್ಣ ರಾಜ್ಯವಾಗಿ ರೂಪುಗೊಳ್ಳುತ್ತ ಹೋಯಿತು. ಇಂತಹ ಪುಟ್ಟ ರಾಜ್ಯದ ರಾಜನಾಗಿದ್ದ ಇಮ್ಮಡಿ ಕೃಷ್ಣರಾಜ ಒಡೆಯನು ತನ್ನ ಸೋದರ ಮಾವಂದಿರೆ ಆದ ದಳವಾಯಿ ದೇವರಾಜಯ್ಯ, ನಂಜರಾಜಯ್ಯ ಮತ್ತು ಕರಚೂರಿ ನಂಜರಾಜರ ಕೈಗೊಂಬೆಯಂತಾಗಿ
ಆಡಳಿತದ ಮೇಲೆ ಹಿಡಿತವನ್ನು ಕಳೆದುಕೊಂಡು ಅರಮನೆಯಲ್ಲಿಯೇ ಬಂಧಿಯಾಗಿದ್ದ. ಇದರ ಪರಿಣಾಮ ಆಡಳಿತದಲ್ಲಿ ಆರ್ಥಿಕ ಶಿಸ್ತು ಕ್ಷೀಣಿಸಿ ರಾಜ್ಯದ ಬೊಕ್ಕಸವು ಬರಿದಾಗುತ್ತಾ ಬಂದಿತು. ಆ ಸಂದರ್ಭದಲ್ಲಿ ಉದಯವಾಗಿದ್ದ ಹೈದರಾಲಿ ಎಂಬ ಶಕ್ತಿ. ಬರಿದಾಗಿದ್ದ ರಾಜ್ಯದ ಬೊಕ್ಕಸವನ್ನು ತುಂಬಿಸುವ ಜವಾಬ್ದಾರಿಯನ್ನು ಹೊತ್ತ ಹೈದರಾಲಿಯು ಆ ಕಾರ್ಯದಲ್ಲಿ ಸಫಲನಾದರೂ ಕೂಡ ಅಷ್ಟಕ್ಕೆ ತೃಪ್ತನಾಗದೆ ದಳವಾಯಿಗಳ ಸರ್ವಾಧಿಕಾರದ ಸ್ಥಾನವನ್ನು ತಾನೇ ಅಕ್ರಮಿಸಿಕೊಂಡು ಮೈಸೂರಿನ ಅಘೋಷಿತ ನವಾಬನಾದ. ಪ್ರಾರಂಭದಲ್ಲಿ ಪಕ್ಕದ ಹೈದರಾಬಾದ್ ಸಂಸ್ಥಾನದ ನಿಜಾಮರ ಖಜಾನೆಯನ್ನು ಚಾಕಚಕ್ಯತೆಯಿಂದ ತನ್ನ ವಶಕ್ಕೆ ಪಡೆದ ಈತ ಅದನ್ನು ಮೈಸೂರು ಖಜಾನೆಗೆ ವರ್ಗಾಯಿಸಿದ. ನಂತರ ಪದೇ ಪದೇ ಮೈಸೂರಿನ ಮೇಲೆ ದಾಳಿ ಮಾಡುತ್ತಿದ್ದ ಮರಾಠರ ಹಾವಳಿಯನ್ನು ತಡೆಗಟ್ಟಿದ. ತದನಂತರ ಮೈಸೂರಿನ ಉತ್ತರದಿಕ್ಕಿನ ಕಡೆಯ ಬಹುತೇಕ ಎಲ್ಲಾ ಪಾಳೇಗಾರರನ್ನು ಅದರಲ್ಲೂ ವಿಶೇಷವಾಗಿ ಕೆಳದಿ, ಬಿದನೂರು, ಚಿತ್ರದುರ್ಗ, ಯಲಹಂಕ, ಅನೇಕಲ್, ಮಧುಗಿರಿ, ಮಡಕಶಿರ, ಗುತ್ತಿ ಮುಂತಾದ ಪಾಳೇಗಾರರ ಮೇಲೆ ಯುದ್ಧವನ್ನು ಸಾರಿ ಅವರನ್ನು ಸೋಲಿಸಿ ಅವರ ಎಲ್ಲ ಪ್ರದೇಶಗಳು ಮೈಸೂರಿನ ವ್ಯಾಪ್ತಿಗೆ ಸೇರುವಂತೆ ಮಾಡುವ ಮೂಲಕ ತಾನು ಆಧುನಿಕ ಮೈಸೂರು ರಾಜ್ಯದ ರೂವಾರಿ ಎಂಬುದನ್ನು ನಿರೂಪಿಸಿದ. ಇಂತಹ ಹೈದರಾಲಿಯು ಬೆಳೆದು ಬಂದ ಬಗೆಯನ್ನು ಸುಮಾರು 21 ಅಧ್ಯಾಯಗಳಲ್ಲಿ ಕಟ್ಟಿಕೊಡುವ ಮೂಲಕ ಪ್ರೊ. ಶ್ರೇಯಸ್ ರವರು ಪ್ರಾಮಾಣಿಕ ಪ್ರಯತ್ನವನ್ನು ಮಾಡಿದ್ದಾರೆ.
ಹೈದರಾಲಿಯ ಸರ್ವಾಧಿಕಾರದ ಆಡಳಿತಾವಧಿಯಲ್ಲಿ ಮೈಸೂರು ಸೈನ್ಯ ಫ್ರೆಂಚರ ನೆರವಿನಿಂದ ಜಾಗತಿಕ ಮಟ್ಟದ ಶಸ್ತ್ರ ಸಜ್ಜಿತ ಸೈನ್ಯವಾಗಿ ರೂಪಗೊಂಡ ವಿವರವನ್ನು ಅಧ್ಯಾಯ 12 ರಲ್ಲಿ ಹೀಗೆ ವಿವರಿಸಿದ್ದಾರೆ; "ಹೈದರಾಲಿಯು ಖಜಾನೆಗೆ ಸೇರಿದ ಹಣವನ್ನು ಅನಾವಶ್ಯಕವಾಗಿ ದುಂದು ವೆಚ್ಚಮಾಡಲಿಲ್ಲ. ಕೋಟೆ ಕೊತ್ತಲಗಳನ್ನು ಹೊಸದಾಗಿ ರಿಪೇರಿ ಮಾಡಿಸಿದನು. ಸೈನ್ಯಕ್ಕೆ ಹೆಚ್ಚು ಹೆಚ್ಚು ನೇಮಕಾತಿಗಳನ್ನು ಮಾಡಿದನು. ಅವರೆಲ್ಲರಿಗೂ ಫ್ರೆಂಚ್ ಅಧಿಕಾರಿ ಡಿ ಬುಸ್ಟಿಯಿಂದ ಪಾಶ್ಚಿಮಾತ್ಯ ಸೈನ್ಯ ತರಬೇತಿಗಳನ್ನು ಕೊಡಿಸಿ ಪ್ರಬಲ ಸದೃಢ ಪಡೆಯೊಂದನ್ನು ಕಟ್ಟಿದನು. ಅವನ ಸೈನಿಕರು ವಿವಿಧ ಬಂದೂಕುಗಳನ್ನೂ, ಫಿರಂಗಿಗಳನ್ನೂ ಬಳಸುವುದರಲ್ಲಿ ಪರಿಣಿತಿ ಹೊಂದಿದರು. ಅದಲ್ಲದೆ ಫ್ರೆಂಚರಿಂದ ಅಪಾರವಾದ ಆಧುನಿಕ ಶಸ್ತ್ರಾಸ್ತ್ರಗಳನ್ನು ಕೊಂಡುಕೊಂಡು ಅವನ ಸೈನ್ಯವನ್ನು ಬಲಪಡಿಸಿದನು. ಡಿ ಬುಸ್ಸಿಯು ಹೈದರನ ಸೈನಿಕರಿಗೆ ಕೇವಲ ಶಸ್ತ್ರಾಸ್ತ್ರಗಳ ತರಬೇತಿಯನ್ನು ಮಾತ್ರ ನೀಡಲಿಲ್ಲ, ಮಾನಸಿಕ ಹಾಗೂ ದೈಹಿಕ ವ್ಯಾಯಾಮಗಳನ್ನು ಮಾಡಿಸಿ, ಧೈರ್ಯ ಧೈರ್ಯಗಳನ್ನು ತುಂಬುತ್ತಿದ್ದನು. ಇದರಿಂದ ಸೈನಿಕರು ದೈಹಿಕವಾಗಿ ಅಲ್ಲದೆ ಮಾನಸಿಕವಾಗಿಯೂ ಸದೃಢರಾದರು."
ಮೈಸೂರಿಗೆ ಪದೇ ಪದೇ ಕಿರುಕುಳ ನೀಡಿ ಇಲ್ಲಿನ ಸಂಪತ್ತನ್ನು ಸೂರೆಗೈಯುತ್ತಿದ್ದ ಮರಾಠಿಗರಿಗೆ ಹೈದರಾಲಿಯು ಹೇಗೆ ಪಾಠವನ್ನು ಕಲಿಸಿದ ಎಂಬ ವಿವರವನ್ನು ಅಧ್ಯಾಯ 12 ರಲ್ಲಿ ಸೊಗಸಾಗಿ ನೀಡಿದ್ದಾರೆ. ಹೈದರಾಲಿಯ ರಕ್ಷಣೆಯಲ್ಲಿ ಸದೃಢ ಹಾಗೂ ಸುಭಿಕ್ಷವಾಗಿದ್ದ ಮೈಸೂರು ರಾಜ್ಯದಲ್ಲಿ ಅದರ ವೈಭವದ ದಸರಾ ಆಚರಣೆಯು ಯಾವುದೇ ರೀತಿಯ ಅಡೆತಡೆಗಳು ಇಲ್ಲದೆ ಸಂಪ್ರದಾಯ ಬದ್ಧವಾಗಿ ನಡೆಯುತ್ತಿದ್ದವು ಎಂಬುದನ್ನು ಅಧ್ಯಾಯ 13 ರಲ್ಲಿ ನಿರೂಪಿಸಿದ್ದಾರೆ.
ಮೈಸೂರಿನ ರಾಜರ ಸೇವೆಯಲ್ಲಿ ಊಳಿಗದಲ್ಲಿದ್ದ ಖಂಡೇರಾಯನೆಂಬ ಮರಾಠಿ ಮೂಲದ ವ್ಯಕ್ತಿಯು ಪೇಶ್ವ ಬಾಲಾಜಿರಾಯನ ಆಮಿಷಕ್ಕೆ ಬಲಿಯಾಗಿ ತಾನು ನೆಲೆಸಿದ್ದ ಮೈಸೂರು ದೇಶಕ್ಕೆ ದ್ರೋಹ ಬಗೆಯಲು ಮುಂದಾದಾಗ ದಲಿತ ಜನಾಂಗಕ್ಕೆ ಸೇರಿದ್ದ ಮಾದಯ್ಯ, ಮುಸಲ್ಮಾನರಾದ ಘಾಜಿಖಾನ್, ಮಹಮದ್ ಅಲಿ, ಸೈಯದ್ ಮಕ್ಖುಂ, ಮೀರ್ ಅಲಿ ರಝಾ ಖಾನ್ ಮುಂತಾದವರ ಸಹಕಾರದಿಂದ ಹೇಗೆ ತಡೆದ ಮತ್ತು ಆ ದ್ರೋಹಿಯನ್ನು ಕಬ್ಬಿಣದ ಪಂಜರದಲ್ಲಿ ಬಂಧಿಸಿ ಶಿಕ್ಷಿಸಿದ್ದನ್ನು ಅಧ್ಯಾಯ 14 ರಲ್ಲಿ ನಾವು ಕಾಣಬಹುದು.
ಮೈಸೂರು ಸೀಮೆಯ ಹೆಮ್ಮೆಯ ದೇಶಿ ತಳಿಯಾದ ಹಳ್ಳಿಕಾರ್ ಎತ್ತುಗಳ ನೆರವಿನಿಂದ ಹೈದರಾಲಿಯು ಬ್ರಿಟಿಷರನ್ನು ಹೇಗೆ ಬಗ್ಗು ಬಡಿದು ಅವರನ್ನು ತನ್ನ ಅಧೀನಕ್ಕೆ ತೆಗೆದುಕೊಂಡ ಎಂಬ ಅಂಶವು ಅಧ್ಯಾಯ 15 ರಿಂದ ತಿಳಿದು ಬರುತ್ತದೆ.
ಚಾಮುಂಡಿ ಬೆಟ್ಟದಲ್ಲಿ ಅನಾದಿ ಕಾಲದಿಂದಲೂ ನಡೆದು ಬಂದಿದ್ದ ನರಬಲಿ ಎಂಬ ಅಮಾನುಷ ಕೃತ್ಯವನ್ನು ಮೊದಲ ಬಾರಿಗೆ ತಡೆದ ಹೈದರಾಲಿಯು ಮಹಾ ಮಾನವತಾವಾದಿಯಾಗಿದ್ದ ಎಂಬುದನ್ನು ಸಾಕ್ಷಿಯ ರೂಪದಲ್ಲಿ ಅಧ್ಯಾಯ 16 ರಲ್ಲಿ ರೂಪಿಸಿದ್ದಾರೆ.
ಹೀಗೆ ಹೈದರಾಲಿಯ ಬಗೆಗಿನ ಹಲವಾರು ವಿಷಯಗಳನ್ನು ಒಳಗೊಂಡ ಪ್ರೊ. ಶ್ರೇಯಸ್ ರವರ ನವಾಬ್ ಹೈದರಾಲಿಖಾನ್ ಬಹದ್ದೂರ್ 'ಒಂದು ದಂತಕಥೆ' ಕೃತಿಯು ಹೈದರಾಲಿ ಬಗ್ಗೆ ಇರಬಹುದಾದ ವಾಸ್ತವ ಅಂಶಗಳನ್ನು ಹೆಕ್ಕಿ ತೆಗೆದು ಓದುಗರ ಮುಂದೆ ಮಂಡಿಸಿದ್ದಾರೆ. ಅವರ ಈ ಶ್ರಮವು ಶ್ಲಾಘನೀಯ. ಓದುಗ ಮಹಾಶಯರು ಇಂತಹ ಕೃತಿಗಳನ್ನು ಓದುವುದರ ಜೊತೆಗೆ ಇದರಲ್ಲಿ ಅಡಗಿರುವ ಸತ್ಯಾಂಶಗಳ ಬಗ್ಗೆ ಹೆಚ್ಚಿನ ಪ್ರಚಾರವನ್ನು ನೀಡಿದರೆ ಇತಿಹಾಸವನ್ನು ಓದದೆ ಇಲ್ಲಸಲ್ಲದ ಕಪೋಲಕಲ್ಪಿತ ಕಥೆಗಳನ್ನು ಹರಿಬಿಡುವ ಸಮಾಜ ದ್ರೋಹಿಗಳ ಕುಕೃತ್ಯವನ್ನು ತಡೆಯಬಹುದು.
"ಇಲ್ಲಿನ ಯಾವ ಕತೆಗಳಲ್ಲೂ ಮಾನವ ಪಾತ್ರಗಳು ಇಣುಕುವುದಿಲ್ಲ, ಆದರೆ ಮನುಷ್ಯನ ಗುಣ-ಸ್ವಭಾವ, ನಡತೆ, ನಿಯತ್ತು, ನೀಚತನ...
" ಸದಾ ಅಚ್ಚುಕಟ್ಟುತನ ಶಿಸ್ತು ಸೌಂದರ್ಯ ಪ್ರಜ್ಞೆಗೆ ಹೆಸರುವಾಸಿಯಾಗಿದ್ದ ಕಲ್ಪನಾ ವಿಲಾಸಿ ಜೀವನದಿಂದ ವಿಮುಖವಾಗಿ ಒ...
"'ಗೆರೆಗೆ ಸಿಗದ ನದಿ' ಯಲ್ಲಿನ ತಾರಾನಾಥನ ಚಿತ್ರ ಮತ್ತು ಬದುಕಿನ ಚಿತ್ರಣ, ಕೇರೆ ಹಾವಿನಲ್ಲಿ ಊರನ್ನು ಸುಡ...
©2025 Book Brahma Private Limited.