VFX ಯುಗದಲ್ಲಿ ಒಂದು ರೋಚಕ ಚಲನಚಿತ್ರವಾಗಬಲ್ಲ ಕಥೆ 'ಪಂಚಮ ಲಿಂಗ'


ರೋಚಕತೆಯಿಂದ ದೈವಿಕತೆಗೆ ಸಾಗುವ ಪಂಚಮಲಿಂಗ ಹೊತ್ತಗೆ ಓದುಗರಲ್ಲಿ ಒಂದು ಅನಿರ್ವಚನೀಯ ಅನುಭವ ಸೃಷ್ಟಿಸುವುದು ಸುಳ್ಳಲ್ಲ. ಕಾದಂಬರಿ ಓದಿ ಮುಗಿಸಿದರೂ ಓದುಗರ ಮನ ನೀಲಿ ಬೆಟ್ಟದಲ್ಲಿ ಅಲೆದಾಡುತ್ತದೆ. ಪಾತ್ರಗಳನ್ನು ತಾನಾಗಿ ಅನುಭವಿಸುತ್ತದೆ ಹಾಗೆಯೇ ಪಂಚಭೂತಕ್ಕೆ ನಮಿಸಿ ನೀರಜ ಲಿಂಗಕ್ಕೆ ಶರಣಾಗುತ್ತದೆ. ಓದಿದ ಎಲ್ಲಾ ಹೃನ್ಮನಕ್ಕೂ ಸಾರ್ಥಕತೆ, ಆನಂದ ಲಭಿಸುತ್ತದೆ'. ಎನ್ನುತ್ತಾರೆ ಲೇಖಕಿ ಚೇತನ ಭಾರ್ಗವ. ಅವರು ಲೇಖಕಿ ಅಪರ್ಣಾ ಲಹರಿ ಬರೆದ 'ಪಂಚಮ ಲಿಂಗ' ಕೃತಿಯ ಬರೆದ ಅನಿಸಿಕೆ....

ಮೊನ್ನೆ ವೀರಲೋಕದ ಪುಸ್ತಕ ಸಂತೆಯಲ್ಲಿ ಕೊಂಡು ತಂದ. ಅಪರ್ಣ ಲಹರಿಯುವರ "ಪಂಚಮಲಿಂಗ - ನೀರಜ ಲಿಂಗದ ಅನ್ವೇಷಣೆಯಲ್ಲಿ" ಹೆಸರಿಗೆ ತಕ್ಕಂತೆ ಒಂದು ಅಪರೂಪದ ರೋಚಕ ಕಾದಂಬರಿಯೇ ಸರಿ. ಖ್ಯಾತ ಸಿನಿಮಾ ಹಾಗೂ ಸಂಗೀತ ನಿರ್ದೇಶಕ ವಿ ಮನೋಹರ್ ಅವರ ಮುನ್ನುಡಿಯೊಂದಿಗೆ ಆರಂಭವಾಗುವ ಪುಸ್ತಕ ಮೊದಲ ಪುಟದಲ್ಲೇ ಕುತೂಹಲ ಕೆರೆಳಿಸುತ್ತದೆ.

ದಟ್ಟ ಕಾನನದ ನಡುವೆ ಶಿವನ ಸಾಕ್ಷಾತ್ಕಾರಕ್ಕೆ ತಪಸ್ಸಿಗೆ ಕುಳಿತ ಅನಲ ಎಂಬ ಯಕ್ಷ ಲೋಕಕಲ್ಯಾಣಕ್ಕೆ ಶಿವನನ್ನು ಒಲಿಸಿ ನೀಲಿ ಕಲ್ಲನ್ನು ಪಡೆಯುವ ಆತನ ಧೃಡ ನಿರ್ಧಾರ ಹಾಗೂ ಆತನಿಗೆ ದರ್ಶನ ನೀಡಿ ಮನದಿಂಗಿತ ಪೂರೈಸುವ ಮಹಾದೇವನ ವರ್ಣನೆ ನಮಗೆ ಆತನ ಸನ್ನಿಧಿಯಲ್ಲಿದ್ದಷ್ಟು ಸಂತೋಷ ನೀಡುತ್ತದೆ. ಇಲ್ಲಿ ಲೇಖಕಿಯವರ ಶಿವ ಭಕ್ತಿ ತಾದಾತ್ಮ್ಯ ಎದ್ದು ಕಾಣಬಹುದು

ನೀಲಿ ಕಲ್ಲನ್ನು ಪಡೆದ ಅನಲ ಬರಬರುತ್ತ ಅದನ್ನು ತನ್ನ ಸ್ವಾರ್ಥಕ್ಕೆ ಬಳಸಿ ಪುರಾಣದ ರಾಕ್ಷಸೀ ಪ್ರವೃತ್ತಿ ತೋರಲು ಶುರುವಾದಾಗ ಕನಿಷ್ಕ ಮಹರ್ಷಿಗಳು ಆತನನ್ನು ಶಿಕ್ಷಿಸಿ ಅದನ್ನು ನಾಲ್ಕು ದಿಕ್ಕುಗಲ್ಲಿ ಪಂಚಭೂತ ಸಿದ್ಧಾಂತದಡಿ ನಾಲ್ಕು ಲಿಂಗಗಳನ್ನು ಪ್ರತಿಷ್ಠಾಪಿಸಿ ಮಧ್ಯದಲ್ಲಿ ಐದನೇ ಲಿಂಗವನ್ನಿಟ್ಟು ನೀಲಿ ಕಲ್ಲಿನ ಸುಪರ್ದಿಯನ್ನು ಅಲ್ಲಿಗೆ ಆಗಮಿಸುವ ಯವನಿಕೆ , ಅಭಿಸಾರಿಕೆ ಅತೀತ ಎಂಬ ಗಂಧರ್ವ ರಿಗೆ ಹಲವು ಪರೀಕ್ಷೆಗಳನ್ನಿಟ್ಟು ಕೊನೆಗೆ ಶಿವನ ಅಪರಿಮಿತ ಭಕ್ತೆಯಾದ ಅಭಿಸಾರಿಕೆ ಪರೀಕ್ಷೆಯಲ್ಲಿ ಗೆದ್ದು ರತ್ನವನ್ನು ಪಡೆದು ಪಂಚಮಲಿಂಗವನ್ನು ಕಾಯುವ ಜವಾಬ್ದಾರಿ ಪಡೆಯುತ್ತಾಳೆ. ನೀಲಿ ಕಲ್ಲಿನ ಮಹಿಮೆ ಅರಿತಿದ್ದ ಅನಲ ಮತ್ತೆ ಮತ್ತೆ ಜನ್ಮವೆತ್ತಿ ಇದನ್ನು ಪಡೆಯುವ ಪ್ರಯತ್ನದಲ್ಲಿ ಇರುತ್ತಾನೆ ಅಭಿಸಾರಿಕೆಯ ಶಿವ ಭಕ್ತಿ ಅದನ್ನು ಕಾಯುತ್ತಿರುತ್ತದೆ ಇದಿಷ್ಟೂ ಪುರಾಣದ ರೋಮಾಂಚಕ ಕಥೆಯಂತೆ ಕಂಡರೂ ಕಥೆಯ ಹಂದರ ನಿಧಾನವಾಗಿ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ.

ಯವನಿಕೆಗೆ ಅತೀತನ ಮೇಲೆ ಪ್ರೀತಿ, ಆತನಿಗೋ ಅಭಿಸಾರಿಕೆಯೇ ಜೀವ.ಆದ್ದರಿಂದ ಅಭಿಸಾರಿಕೆಯನ್ನು ಅತೀತನಿಂದ ದೂರ ಮಾಡಲು ಯವನಿಕೆಯ ತಂತ್ರ, ಅತೀತನಿಂದ ಮಾಯವಾಗುವ ನೀರಜಲಿಂಗ ,ಅಭಿಸಾರಿಕೆಗೆ ಕನಿಷ್ಕ ಮುನಿಗಳ ಶಾಪ ಹಾಗೂ 7 ಮಾನವ ಜನ್ಮಗಳಲ್ಲಿ ಹುಟ್ಟಿ ಬರುವ ಪ್ರಕ್ರಿಯೆ, ಯವನಿಕೆಯ ಹಠ ಹಾಗೂ ಪಂಚಮ ಲಿಂಗವಿರುವ ಕಾಡಿಗೆ ಹಾಕಿದ ದಿಗ್ಬಂಧನ ಹೀಗೆ ಕಥೆ  ಫ್ಲಾಶ್ ಬ್ಯಾಕ್ ರೀತಿಯಲ್ಲಿ ಬಿಚ್ಚಿ ಕೊಳ್ಳುತ್ತಾ ಹೋಗುತ್ತದೆ.

ಇಲ್ಲಿಂದಲೇ ಕಥೆಯ ಪಾತ್ರ ಪ್ರಪಂಚ ವಿಸ್ತರಿಸುತ್ತ ಹೋಗುತ್ತದೆ.  ಲಿಂಗವನ್ನು ಕಾಪಿಡಲು ಅಭಿಸಾರಿಕೆಯ ಯೋಜನೆ. 4 ರತ್ನಗಳು  ಹಾಗೂ ನಾಲ್ಕು ನಕಾಶೆ ಚೂರು. ಈ ಎಂಟೂ ಪರಿಮಾಣಗಳು ಮಾನವ ಪ್ರಯತ್ನದಿಂದ ಒಟ್ಟುಗೂಡಬೇಕು. ಪ್ರಾಚ್ಯ ಸಂಶೋಧನೆ ಪ್ರೊಫೆಸರ್ ಪಂಚನಿಧಿ, ಅವರ ಶಿಷ್ಯರಾದ ಅಮರ್ತ್ಯ, ನೀಲಿಮಾ  ಪೃಥ್ವಿ ಶಿವೆ ಹಾಗೂ  ನೀಲ ಬ್ರಹ್ಮ ವನಮಾಲಿ ಕೊನೆಗೆ ಅಗ್ನಿ, ವಿಲಕ್ಷಣ ಹುಡುಗಿ  ಮಳೆ ಜೊತೆಗೆ ತಮ್ಮ ಸಾಕು ಆನೆ ಹುಡುಕಿ ಬರುವ ಮುಗಿಲನ್  ಹಾಗೂ ಸೆಲ್ವಿ ಇವರೆಲ್ಲರೂ ನೀಲಿ ಬೆಟ್ಟದ ರಹಸ್ಯ ಭೇದಿಸುವರೇ ? ನೀಲಿಕಲ್ಲನ್ನು ಹುಡುಕಿ ಲೋಕಾರ್ಪಣೆಗೈಯಲು ನೆರವಾಗುವರೇ? . ಅಭಿಸಾರಿಕೆಯ ಶಾಪ ವಿಮೋಚನೆ ಹೇಗಾಯಿತು , ಕಾಡನ್ನು ಕಾಯುವ ಯವನಿಕೆ ನೀಲಿ ಕಲ್ಲನ್ನು ಹುಡುಕಿ ಬರುವ ಎಲ್ಲರಿಗೂ ಹೇಗೆ ತಡೆಯುವಳು ? . ಇನ್ನೂ  ಕಳೆದ ತನ್ನ ನೀಲಿ ಕಲ್ಲನ್ನು ಪಡೆಯಲೇ ಜನ್ಮವೆತ್ತುವ ಅನಲನ ಕಥೆಯೇನು ?ಇವೆಲ್ಲಾ ತಿರುವುಗಳು ಪಂಚಮ ಲಿಂಗದಲ್ಲಿಯೇ ಅಡಕವಾಗಿವೆ.

ಇಲ್ಲಿ ಲೇಖಕಿಯ ಕಲ್ಪನಾ ಪ್ರಾಗಲ್ಭ ಅದ್ಭುತ. ಈ ಪರಿಯ ನಿರೂಪಣೆ ಹಲವು ಪಾತ್ರಗಳ ನಿರ್ವಹಣೆ ಜೊತೆಗೆ ಪ್ರತೀ ಪುಟದಲ್ಲೂ ಕುತೂಹಲ ಕಾಯುವ ಪರಿ ಶ್ಲಾಘನೀಯ. ಈಗಿನ vfx ಯುಗದಲ್ಲಿ ಒಂದು ರೋಚಕ ಚಲನಚಿತ್ರವಾಗಬಲ್ಲ ಅರ್ಹತೆ ಈ ಕಥೆಗಿದೆ. ಇದರಲ್ಲಿ ಲೇಖಕಿಯವರಿಗೆ ಅವರ ಬಾಲ್ಯದಲ್ಲಿ ಚಂದಮಾಮ ಕಥೆಗಳು ಮಾಡಿದ ಮೋಡಿ ಹಾಗೂ ಅವರ ಬರಹಕ್ಕೆ ಪ್ರೇರಣೆ ಎರಡೂ ಇಲ್ಲಿ ಕಾಣಬಹುದು.

ಒಟ್ಟಿನಲ್ಲಿ ರೋಚಕತೆಯಿಂದ ದೈವಿಕತೆಗೆ ಸಾಗುವ ಪಂಚಮಲಿಂಗ ಹೊತ್ತಗೆ ಓದುಗರಲ್ಲಿ ಒಂದು ಅನಿರ್ವಚನೀಯ ಅನುಭವ ಸೃಷ್ಟಿಸುವುದು ಸುಳ್ಳಲ್ಲ. ಕಾದಂಬರಿ ಓದಿ ಮುಗಿಸಿದರೂ ಓದುಗರ ಮನ ನೀಲಿ ಬೆಟ್ಟದಲ್ಲಿ ಅಲೆದಾಡುತ್ತದೆ. ಪಾತ್ರಗಳನ್ನು ತಾನಾಗಿ ಅನುಭವಿಸುತ್ತದೆ ಹಾಗೆಯೇ ಪಂಚಭೂತಕ್ಕೆ ನಮಿಸಿ ನೀರಜ ಲಿಂಗಕ್ಕೆ ಶರಣಾಗುತ್ತದೆ. ಓದಿದ ಎಲ್ಲಾ ಹೃನ್ಮನಕ್ಕೂ ಸಾರ್ಥಕತೆ, ಆನಂದ ಲಭಿಸುತ್ತದೆ . ಇಂತಹ ಸುಂದರ ಕೃತಿಯನ್ನು ನಮಗೆ ಕೊಟ್ಟಿರುವ ಅಪರ್ಣ ಅವರಿಗೆ ಓದುಗನಾಗಿ ನಾನು ಶರಣು ಹಾಗೂ ಪ್ರಕಾಶರಿಗೂ ನಮ್ಮ ತುಂಬು ಹೃದಯದ ಧನ್ಯವಾದಗಳು.

ಪುಸ್ತಕ: ಪಂಚಮ ಲಿಂಗ
ಲೇಖಕರು: ಅಪರ್ಣಾ ಲಹರಿ
ಪ್ರಕಾಶಕರು: ಸಾಹಿತ್ಯ ಲೋಕ ಪಬ್ಲಿಕೇಶನ್ಸ್
ಪುಟಗಳು: 232
ಬೆಲೆ : 325
ಮುದ್ರಣ: 2025

 

MORE FEATURES

ಅಂಬೇಡ್ಕರ್ ವಿದ್ಯಾವಂತ ಜನರ ಕೈಯಲ್ಲಿ ಮೋಜಿನ ವಸ್ತುವಾಗಿ ಕಾಣಿಸಿಕೊಳ್ಳುತ್ತಿದ್ದಾರೆ..

07-12-2025 ಬೆಂಗಳೂರು

"ದಲಿತರು ಒಳಪಂಗಡಗಳ ಭಾವನಾತ್ಮಕ ಸೆಳವಿಗೆ ಸಿಕ್ಕು ಮೂಲ ಸಿದ್ದಾಂತದಿಂದ ದೂರವಾಗುತ್ತಿದ್ದಾರೆ. ಇಂದು ಅಂಬೇಡ್ಕರ್ ವಿ...

BlrLitFest 2025: ಸಾಹಿತ್ಯಾಸಕ್ತರ ಮಹಾಸಂಗಮ!

06-12-2025 ಬೆಂಗಳೂರು

ಬೆಂಗಳೂರು : ಬೆಂಗಳೂರು ಸಾಹಿತ್ಯ ಉತ್ಸವ (BlrLitFest)ವು ಪ್ರತಿ ವರ್ಷ ನಡೆಯುವ ಅತ್ಯಂತ ನಿರೀಕ್ಷಿತ ಸಾಂಸ್ಕೃತಿಕ ಕಾರ್ಯ...

ಮತ್ತೆ ಮತ್ತೆ ಕಾಡುವ ಕಥೆಗಳು

06-12-2025 ಬೆಂಗಳೂರು

ಮಗಳ ನೋವನ್ನು ಕಂಡು ಹೆತ್ತವರು ಜರ್ಜರಿತರಾಗುವ ದೃಶ್ಯವನ್ನು ಹಾಗೂ ಅಪ್ಪ ಅಮ್ಮನ ಧಾವಂತದ ಬದುಕಿನಲ್ಲಿ ಮಕ್ಕಳು ಬಡವಾಗುವ ಸ...