‘ವಿಪುಲ ರೂಪ ಧಾರಿಣಿ’ ಕವನ ಸಂಕಲನವು ಬಿ.ಆರ್.ಎಲ್ ಅವರ ಕಾವ್ಯ ಪ್ರೌಢಿಮೆ ಮತ್ತು ಜೀವನ ಪ್ರೀತಿಯ ಮತ್ತೊಂದು ಮಜಲನ್ನು ತೆರೆದಿಡುತ್ತದೆ'.ಎನ್ನುತ್ತಾರೆ ಲೇಖಕಿ ಚೇತನ ಭಾರ್ಗವ. ಅವರು ಈ ಕವನ ಸಂಕಲನಕ್ಕೆ ಬರೆದ ಅನಿಸಿಕೆಗೆ ಹೀಗಿದೆ...
ಕನ್ನಡ ಕಾವ್ಯಲೋಕದಲ್ಲಿ ಬಿ.ಆರ್. ಲಕ್ಷ್ಮಣರಾವ್ (ಬಿ.ಆರ್.ಎಲ್) ಅವರದ್ದು ವಿಶಿಷ್ಟ ದನಿ. ನವ್ಯದ ಗಂಭೀರತೆಯಿಂದ ಬಂಡಾಯದ ಆಕ್ರೋಶದವರೆಗಿನ ಕಾಲಘಟ್ಟದಲ್ಲಿ, ಇವೆರಡರ ನಡುವೆ ತಮ್ಮದೇ ಆದ ‘ಭಾವಪೂರ್ಣ’ ಹಾಗೂ ‘ರಸಿಕ’ ಮಾರ್ಗವನ್ನು ಕಂಡುಕೊಂಡವರು ಅವರು. ಯಾವುದೇ ಭಿಡೆಯಿಲ್ಲದೆ, ಸಂಕೋಚವಿಲ್ಲದೆ ಪ್ರೀತಿಯಿಂದ ಹಿಡಿದು ರಾಜಕೀಯದವರೆಗೆ, ದೈವದಿಂದ ಹಿಡಿದು ದೈನಂದಿನದವರೆಗೆ ಎಲ್ಲ ವಿಷಯಗಳ ಬಗ್ಗೆ ಮುಕ್ತ ಮನಸ್ಸಿನಿಂದ ಬರೆಯಬಲ್ಲ, ವಿಷಯದೊಂದಿಗೆ ತಕ್ಷಣಕ್ಕೆ ತಾದಾತ್ಮ್ಯ ಸಾಧಿಸಬಲ್ಲ ಅವರ ಕಾವ್ಯ ಪಯಣ ಸದಾ ಚಲನಶೀಲವಾದದ್ದು. ದೇಹ ಮಾಗಿದರೂ ಮನದ ಯೌವನ ಚಿರ, ಹಾಗೆಯೇ ನಮ್ಮ ಬಿ ಆರ್ ಎಲ್ ಅವರ ಕವಿತೆಗಳು ಎಂದಿಗೂ ಅಮರ.
‘ವಿಪುಲ ರೂಪ ಧಾರಿಣಿ’ ಕವನ ಸಂಕಲನವು ಬಿ.ಆರ್.ಎಲ್ ಅವರ ಕಾವ್ಯ ಪ್ರೌಢಿಮೆ ಮತ್ತು ಜೀವನ ಪ್ರೀತಿಯ ಮತ್ತೊಂದು ಮಜಲನ್ನು ತೆರೆದಿಡುತ್ತದೆ. ಮೇಲ್ನೋಟಕ್ಕೆ ಅತ್ಯಂತ ಸರಳವಾಗಿ, ಆಡುಮಾತಿನ ಧಾಟಿಯಲ್ಲಿರುವಂತೆ ಕಂಡರೂ, ಇಲ್ಲಿನ ಕವಿತೆಗಳ ವಸ್ತು ಮತ್ತು ಒಳಹರಿವು ಅಷ್ಟೇ ಆಳ ಮತ್ತು ಅಗಲವನ್ನು ಹೊಂದಿದೆ. ಸುಮಾರು 33 ಕವನಗಳ ಈ ಪುಸ್ತಕದಲ್ಲಿ ಆಯ್ದ ಹಾಗೂ ನನ್ನ ಪಾಮರ ಕವಿತಾ ಪ್ರಜ್ಞೆಗೆ ನಿಲುಕಿದ ಕೆಲವು ಕವಿತೆಗಳನ್ನು ನಾನು ಇಲ್ಲಿ ಉದಾಹರಿಸಿದ್ದೇನೆ.
ಈ ಸಂಕಲನದ ‘ಘಸ್ನಿ’ ಕವಿತೆಯು ಕೇವಲ ಐತಿಹಾಸಿಕ ಆಕ್ರಮಣಕಾರನ ಕಥೆ ಎನ್ನಿಸಿದರೂ ದೇವರ ಮನೆಗೆ ನುಗ್ಗಿ ಧಾಂಧಲೆ ಎಸಗುವ 4ರ ಪೋರ ಮೊಮ್ಮಗ ಎಂದಾಗ ಓದುಗರ ಮೊಗದಲ್ಲಿ ನಗೆ ಮೂಡುವುದು ಖಚಿತ.
ಇನ್ನು ‘ಲಿಲ್ಲಿಪುಟ್ಟಿಯ ಹಂಬಲ’ ಕವಿತೆಯು ಅಸ್ತಿತ್ವದ ಪ್ರಶ್ನೆಯನ್ನು ಎತ್ತುತ್ತದೆ. ಜಗತ್ತಿನ ಬೃಹತ್ ರೂಪದ ಮುಂದೆ ತಾನು ಅಲ್ಪ ಎಂಬ ಕೀಳರಿಮೆಯೋ ಅಥವಾ ಆ ಬೃಹತ್ತನ್ನು ಮುಟ್ಟಬೇಕೆಂಬ ಹಂಬಲವೋ? ಇಲ್ಲಿನ ರೂಪಕಗಳು ಓದುಗನ ಮನದ ಆಳವನ್ನು ತಟ್ಟುತ್ತವೆ.
ಬಿ.ಆರ್.ಎಲ್ ಅವರ ವಿಶೇಷತೆಯೇ ಬೆರಗು. ‘ಏನಿ ಅದ್ಭುತವೇ’ ಕವಿತೆಯಲ್ಲಿ ಕವಿ ಜಗತ್ತನ್ನು ನೋಡುವ ಕುತೂಹಲ, ನಿಸರ್ಗದ ವಿಸ್ಮಯ ಮತ್ತು ಬದುಕಿನ ವಿಪರ್ಯಾಸಗಳನ್ನು ಕಂಡು ಉದ್ಗರಿಸುವ ರೀತಿ ಅನನ್ಯ. ಇದು ಕೇವಲ ಪ್ರಶಂಸೆಯಲ್ಲ, ಇದರಲ್ಲಿ ಸೂಕ್ಷ್ಮವಾದ ವ್ಯಂಗ್ಯವೂ ಇಣುಕುವಂತಿದೆ.
ಇನ್ನು ‘ನನ್ನ ಗಾಂಧಿ’ ಕವಿತೆಯು ಗಾಂಧಿಯನ್ನು ಪೇಲವ ವಿಗ್ರಹವಾಗಿಸದೆ, ಪ್ರತಿಯೊಬ್ಬರ ಅಂತರಂಗದಲ್ಲಿರುವ, ತಪ್ಪುಗಳ ನಡುವೆಯೂ ಸತ್ಯ ಹುಡುಕುವ ‘ವೈಯಕ್ತಿಕ ಗಾಂಧಿ’ಯನ್ನು ಕಟ್ಟಿಕೊಡುತ್ತದೆ. ದೇಶದ ವಸ್ತು ಸ್ಥಿತಿಯ ನಡುವೆ ನಮ್ಮ ವಾಸ್ತವ ಪ್ರಜ್ಞೆ ಜಾಗೃತ ಗೊಳಿಸುವ ಸ್ನೇಹಿತನಂತೆ ಗಾಂಧಿ ಬಂದು ಹೋಗುವ ಕವಿತೆ ಮನಕ್ಕೆ ಮುದ ನೀಡುತ್ತದೆ.
ಕವಿಯ ರಸಿಕತೆ ಮತ್ತು ಸಂಬಂಧಗಳ ಸೂಕ್ಷ್ಮತೆಯನ್ನು ‘ಗೋಪಿ’ ಮತ್ತು ‘ಗಾಂದಲಿನ’ ಕವಿತೆಗಳಲ್ಲಿ ಕಾಣಬಹುದು. ಗೋಪಿ ಮುಗ್ಧತೆಯ ಪ್ರತೀಕವಾದರೆ, ಗಾಂದಲಿನ ಹೆಣ್ಣು-ಗಂಡಿನ ಆಕರ್ಷಣೆ, ಪ್ರೀತಿ ಮತ್ತು ಸಂಕೀರ್ಣ ಸಂಬಂಧಗಳ ಅನಿವಾರ್ಯತೆಯನ್ನು ಹಗುರ ದಾಟಿಯಲ್ಲಿಯೇ ಗಂಭೀರವಾಗಿ ಚರ್ಚಿಸುತ್ತದೆ. ಈ ಹಾಡು ಭಾವಗೀತೆಯ ಕ್ಯಾಸೆಟ್ ಲೋಕದಲ್ಲಿ ಕ್ಯಾಬರೆಯ ಮಿಂಚು ಹಚ್ಚಿದ ಕವಿತೆ.
‘ಜ್ಞಾನೋದಯ’ ಕವಿತೆಯು ದೊಡ್ಡ ತಪಸ್ಸಿನಿಂದಲ್ಲ, ಬದುಕಿನ ಸಣ್ಣ ಘಟನೆಯಿಂದಲೂ ಮನುಷ್ಯನಿಗೆ ಅರಿವು ಮೂಡಬಹುದು ಎಂಬುದನ್ನು ಸೂಚ್ಯವಾಗಿ ಹೇಳುತ್ತದೆ.
ಅಂತಿಮವಾಗಿ, ‘ಸಣ್ಣ ಸಂಗತಿ’ ಕವಿತೆಯು ಇಡೀ ಸಂಕಲನದ ಆಶಯದಂತೆ ತೋರುತ್ತದೆ. ಬದುಕು ದೊಡ್ಡ ದೊಡ್ಡ ಘಟನೆಗಳಿಂದ ಕೂಡಿಲ್ಲ, ಅದು ಚಿಕ್ಕ ಚಿಕ್ಕ ಸಂಗತಿಗಳ ಮೊತ್ತ. ಅತ್ಯಂತ ಸರಳ ಸಾಲುಗಳಲ್ಲಿ ಜೀವನದ ದೊಡ್ಡ ದರ್ಶನ ಮಾಡಿಸುವುದು ಬಿ.ಆರ್.ಎಲ್ ಅವರ ಹೆಚ್ಚುಗಾರಿಕೆ. ಅದೂ ಒಬ್ಬ ತಮಿಳು ಮನೆಗೆಲಸದ ಹುಡುಗಿಯನ್ನು ವಸ್ತು ವಿಷಯವಾಗಿ ಇಟ್ಟುಕೊಂಡು ರಚಿಸಿದ್ದು ಬೆರಗು ಮೂಡಿಸುತ್ತದೆ.
ಒಟ್ಟಿನಲ್ಲಿ ‘ವಿಪುಲ ರೂಪ ಧಾರಿಣಿ’ಯು ತನ್ನ ಹೆಸರಿನಂತೆಯೇ ಬದುಕಿನ ವಿಪುಲ ಸಾಧ್ಯತೆಗಳನ್ನು, ನಾನಾ ರೂಪಗಳನ್ನು ಹಿಡಿದಿಡುವ ಕನ್ನಡಿ. ಇಲ್ಲಿನ ಭಾಷೆ ಸರಳ, ಆದರೆ ಭಾವ ಸಾಂದ್ರ. ಬಿ.ಆರ್.ಎಲ್ ಅವರು ತಮ್ಮ ಸಹಜ ಶೈಲಿಯಲ್ಲಿಯೇ ಬದುಕಿನ ಗೋಜಲುಗಳನ್ನು ಬಿಡಿಸುತ್ತಾ, ಓದುಗನಿಗೆ "ಇದು ನನ್ನದೇ ಕಥೆ" ಎನ್ನುವ ಭಾವವನ್ನು ಮೂಡಿಸುವಲ್ಲಿ ಗೆದ್ದಿದ್ದಾರೆ.
ಪುಸ್ತಕ: ವಿಪುಲ ರೂಪಧಾರಿಣಿ
ಲೇಖಕರು: ಬಿ .ಆರ್. ಲಕ್ಷ್ಮಣರಾವ್
ಪ್ರಕಾಶಕರು: ಸಪ್ನಾ ಬುಕ್ ಹೌಸ್
ಮುದ್ರಣ: ಸೆಪ್ಟೆಂಬರ್ 2025
ಪುಟಗಳು: 111
ಬೆಲೆ: 110
"ದಲಿತರು ಒಳಪಂಗಡಗಳ ಭಾವನಾತ್ಮಕ ಸೆಳವಿಗೆ ಸಿಕ್ಕು ಮೂಲ ಸಿದ್ದಾಂತದಿಂದ ದೂರವಾಗುತ್ತಿದ್ದಾರೆ. ಇಂದು ಅಂಬೇಡ್ಕರ್ ವಿ...
ಬೆಂಗಳೂರು : ಬೆಂಗಳೂರು ಸಾಹಿತ್ಯ ಉತ್ಸವ (BlrLitFest)ವು ಪ್ರತಿ ವರ್ಷ ನಡೆಯುವ ಅತ್ಯಂತ ನಿರೀಕ್ಷಿತ ಸಾಂಸ್ಕೃತಿಕ ಕಾರ್ಯ...
ಮಗಳ ನೋವನ್ನು ಕಂಡು ಹೆತ್ತವರು ಜರ್ಜರಿತರಾಗುವ ದೃಶ್ಯವನ್ನು ಹಾಗೂ ಅಪ್ಪ ಅಮ್ಮನ ಧಾವಂತದ ಬದುಕಿನಲ್ಲಿ ಮಕ್ಕಳು ಬಡವಾಗುವ ಸ...
©2025 Book Brahma Private Limited.