ಕಲೆಯೊಂದೇ ಉಳಿಯವುದು ಕಾಲಾತೀ

Date: 18-10-2024

Location: ಬೆಂಗಳೂರು




೨೦೨೪ರ ಸಾಲಿನ ಬುಕ್‌ಬ್ರಹ್ಮ ಕಥಾಸ್ಪರ್ಧೆಯ ತೀರ್ಪಿಗಾಗಿ ಅಂತಿಮ ಸುತ್ತಿಗೆ ಆಯ್ಕೆಯಾದ ೫೦ ಕಥೆಗಳನ್ನು ಓದುವ ಅವಕಾಶವಾಯಿತು. ಬಹುಮಾನಗಳ ವಿಷಯ ಅಂತಿರಲಿ, ಒಟ್ಟಾರೆಯಾಗಿ ಕನ್ನಡದ ಸಮಕಾಲೀನ ಕಥಾಲೋಕದಲ್ಲಿ ತಮ್ಮನ್ನು ಗಂಭೀರವಾಗಿ ತೊಡಗಿಸಿಕೊಂಡು ಬರೆಯುತ್ತಿರುವ ನಗರ-ಗ್ರಾಮೀಣ, ಗಂಡು-ಹೆಣ್ಣು, ದಕ್ಷಿಣ ಕರ್ನಾಟಕ-ಉತ್ತರ ಕರ್ನಾಟಕ, ಎಡ-ಬಲ ಹೀಗೆ ಎಲ್ಲ ದೃಷ್ಟಿಕೋನಗಳ ಹಲವು ಜೀವನ ವಿಧಾನಗಳಿಗೆ ಮುಖಾಮುಖಿಯಾಗುವ ಅವಕಾಶವನ್ನು ಈ ಕಥೆಗಳು ಕಲ್ಪಿಸಿಕೊಟ್ಟವು. 
ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದ ೫೦ ಕಥೆಗಳಿಂದ, ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳಲ್ಲದೆ ಐದು ಸಮಾಧಾನಕರ ಬಹುಮಾನಗಳು ಹೀಗೆ ಎಂಟು ಬಹುಮಾನಗಳನ್ನು ಅಂತಿಮಗೊಳಿಸಲು ತಿಳಿಸಲಾಗಿತ್ತು. ಇವುಗಳ ಜೊತೆಗೆ ಬುಕ್ ಬ್ರಹ್ಮ ಸಂಸ್ಥೆಯು ಪ್ರಕಟಿಸಲಿರುವ ವಾರ್ಷಿಕ ಕಥಾಸಂಕಲನದಲ್ಲಿ  ಈ ಎಂಟರ ಜೊತೆಗೆ ಪ್ರಕಟಣೆಗೆ ಅರ್ಹವಾಗಿರುವಂಥ ಇನ್ನೂ ಹದಿನೇಳು ಕಥೆಗಳನ್ನು ಗುರುತಿಸಿ ಒಟ್ಟಾಗಿ ೨೫ ಕಥೆಗಳನ್ನು ಆರಿಸಿಕೊಡುವ ಜವಾಬ್ದಾರಿ ನಮ್ಮದಾಗಿತ್ತು.
ಅದರಂತೆ `ಅಂತ್ಯವಾಗದು ಕಥೆ’ ಕಥೆಯು ಪ್ರಥಮ, `ಪ್ಯಾಸೆಂಜರ್ ನೇಮ್ ನವರೋಜಿ’ ಕಥೆಯು ದ್ವಿತೀಯ ಹಾಗೂ `ಒಂದು ಕಹಿ ಸುದ್ದಿಯ ನಿರೀಕ್ಷೆಯಲ್ಲಿ’ ಕಥೆಯು ತೃತೀಯ ಬಹುಮಾನಗಳಿಗೆ ಪಾತ್ರವಾದವು. ಮಾಂತ್ ಮಲ್ಲಯ್ಯ ಘೇ.., ಟವರ್ ಆಫ್ ಸೈಲೆನ್ಸ್, ಅಚ್ಯುತನ ಧ್ಯಾನ, ಸೆಕ್ಸ್ ಆನ್ ದಿ ಬೀಚ್ ಹಾಗೂ ಆ ಎರಡು ಪುಟಗಳು ಕಥೆಗಳು ಐದು ಸಮಾಧಾನಕರ ಬಹುಮಾನಗಳಿಗೆ ಪಾತ್ರವಾದವು. 
ಮೊದಲ ಬಹುಮಾನ ಪಡೆದ ಕಥೆ `ಅಂತ್ಯವಾಗದು ಕಥೆ’ಯಲ್ಲಿ ಪ್ರಕಟವಾಗಿರುವ ಮಕ್ಕಳ ಮನೋಲೋಕ ವಿಶಿಷ್ಟ ಬಗೆಯದಾಗಿದೆ. ಮಕ್ಕಳೆಲ್ಲ ಒಳ್ಳೆಯವರೇ ಎಂಬ ರೋಮ್ಯಾಂಟಿಸೈಜ್ಡ್ ಸ್ಟೀರಿಯೋಟೈಪ್‌ಗಳಿಗಿಂತ ಭಿನ್ನವಾದ ಸಹಜ ಚಿತ್ರಣವು ಇದರಲ್ಲಿದ್ದು ಅದು ಸಜೀವವಾಗಿದೆ. ಆದರೆ ಹಲವಾರು ಕಡೆಗಳಲ್ಲಿ ಮಕ್ಕಳ ಕಣ್ಣಿಂದ ಕಾಣಿಸಬೇಕಾದ ಲೋಕದ ಬದಲಿಗೆ ಕಥೆಗಾರನ ಕಣ್ಣಿಂದ ಕಾಣಿಸಿದ ಲೋಕವೇ ಹೆಚ್ಚಾಗಿ ಅಧಿವ್ಯಾಪಿಸಿಕೊಂಡಿದೆ. ಮೂಗಿಗೆ ತೆಂಗಿನೆಣ್ಣೆ ಬಿಟ್ಟು, ತೆರೆದ ಬಾಯೊಳಗೆ ಟಾಯ್ಲೆಟ್ ಕ್ಲೀನರ್ ಹಾಕಿ ಮುಚ್ಚಿಬಿಟ್ಟು, ದಿಂಬು ಹಾಕಿ ಅದುಮಿಬಿಟ್ಟು ಹೇಗೆಲ್ಲ ಸಾಯಿಸಬಹುದೆಂಬ ಆಲೋಚನೆಗಳು ಪವ್ವಿಗೂ, ಅವಳ ಅಣ್ಣನಿಗೂ ಬರುವುದು ಮಕ್ಕಳಲ್ಲಿ ಸುಪ್ತವಾಗಿ ಅಡಗಿರುವ ಕ್ರೌರ್ಯದ ದರ್ಶನವನ್ನು ಮಾಡಿಸುತ್ತಿವೆ. 
ಇಡೀ ಕಥೆಯಲ್ಲಿ ಆಕರ್ಷಕವಾಗಿರುವುದು ಅದರ ಭಾಷೆ ಮತ್ತು ಕಥೆಯ ನಿರ್ವಹಣೆಯಲ್ಲಿ ತೋರಿರುವ ಅಪರೂಪದ ಸಂಯಮ. ಬದುಕಿನ ಕರಾಳ ಮುಖವನ್ನು ಮಕ್ಕಳ ಅರೆಬರೆ ತಿಳಿವಳಿಕೆಯ ಕಣ್ಣಿಂದ ಕಂಡರಿಸುತ್ತಲೇ, ಈ ಕಥೆಯು ತೆರೆದಿಡುವ ನಿಗೂಢವಾದ ಸಾಂಸಾರಿಕ ಲೋಕವು ಬೆಚ್ಚಿಬೀಳಿಸುವಂತಿದೆ. `ಸುಳ್ಳಿಗೆ ಸುಖವಿತ್ತು. ಸುಖಪಟ್ಟೆವು ಸಿಕ್ಕಾಪಟ್ಟೆ’, `ಅತ್ತಂತೆ ನಕ್ಕಳು’, `ಅಮ್ಮ, ನಮ್ಮ ಹಡೆದ ಗುಮ್ಮ’, `ಅಳುತ್ತಲೇ ಜೀವಂತವಾಗಿರುತ್ತಿದ್ದ ಅವಳು’ ಎಂಬ ವಾಕ್ಯಗಳು ಮತ್ತೆ ಮತ್ತೆ ಆಲೋಚನೆಗೆ ಹಚ್ಚುವಂತಿವೆ. ರಾಧಾ ಆಂಟಿಯ ಸಾವಿನೊಂದಿಗೆ ಅವಳು ಹೇಳುತ್ತಿದ್ದ ರೋಚಕ ಕಥೆಗಳು ಮುಗಿಯಲಿಲ್ಲ ಎಂಬುದನ್ನೂ; ರಾಧಾ ಆಂಟಿ ತರದವರ ಕಥೆಗಳಿಗೆ ಕೊನೆಯಿಲ್ಲ ಎಂಬುದನ್ನೂ `ಅಂತ್ಯವಾಗದು ಕಥೆ’ ಶೀರ್ಷಿಕೆ ಧ್ವನಿಸುತ್ತಿದ್ದು, ಎಷ್ಟು ಹೇಳಿದರೂ ಉಳಿದೇ ಇರುವ ಕಥೆಗಳಿಗೂ ಈ ತಲೆಬರೆಹ ಅನ್ವಯವಾಗುವಂತಿದೆ.
ಎರಡನೇ ಬಹುಮಾನಕ್ಕೆ ಪಾತ್ರವಾದ ಕಥೆ `ಪ್ಯಾಸೆಂಜರ್ ನೇಮ್ ನವರೋಜಿ’. ನವರೋಜಿ (ನಾರಾಯಣರಾವ್) ಮತ್ತು ಬೃಂದಕ್ಕ ಸಾಗರದಿಂದ ಬೆಂಗಳೂರಿಗೆ, ಮಗ ನೃಪತುಂಗ-ಸೊಸೆ ವೈಭವಿ ಹಾಗೂ ಮೊಮ್ಮಗು ಚಿನ್ನುಳನ್ನು ಕಾಣಲು ಹೊರಡುವ ದೃಶ್ಯದಿಂದ ಕಥೆಯು ಆರಂಭವಾಗುತ್ತದೆ. ಅವರು ಬೆಂಗಳೂರಿನಲ್ಲಿ ಎರಡು ದಿನ ಕಳೆದು ಮತ್ತೆ ವಾಪಸಾಗಲು ಸ್ಟೇಷನಿಗೆ ಬಂದಾಗ ಮೂತ್ರಕ್ಕೆ ಹೋದವರು ದಾರಿ ತಪ್ಪಿಬಿಡುತ್ತಾರೆ. ಆಗ ಮಗ ಅನೌನ್ಸ್ಮೆಂಟ್ ಕೊಡಿಸುತ್ತಾರೆ. ರಿಟೈರ್ಡ್ ಬ್ಯಾಂಕ್ ಎಂಪ್ಲಾಯಿಯಾದ ದಿನಕರ್ ಮತ್ತು ಅವರ ಗೆಳತಿ ಡಾ. ಸರ್ವಮಂಗಳಾ ಅವರು ನವರೋಜಿಯವರನ್ನು ಮತ್ತೆ ಅವರ ಮಕ್ಕಳೊಂದಿಗೆ ಸೇರಿಸುತ್ತಾರೆ.
ಇಷ್ಟರ ನಡುವೆಯೇ ಹಳ್ಳಿಯ ಕೃಷಿಕನ ಕಣ್ಣಲ್ಲಿ ಕಾಣಿಸಿದ ಬೆಂಗಳೂರಿನ ದರ್ಶನ ಮಾಡಿಸುವ ಕಥೆಗಾರರು, ನಿರೂಪಣೆಯಲ್ಲಿ ಮಾತ್ರ ಗ್ರಾಮೀಣ ಕೃಷಿಕರಾದ ಆ ವಯೋವೃದ್ಧರ ಪಾತ್ರಕ್ಕೆ ಸಹಜವೆನಿಸದ ಭಾರವಾದ ಆಲೋಚನೆಗಳನ್ನೆಲ್ಲ ಹೇಳುತ್ತಾ ಸಾಗುತ್ತಾರೆ. ಕಥೆಯಲ್ಲಿನ ಜೀವನಪ್ರೀತಿ ಮತ್ತು ಬದುಕಿನ ಕುರಿತಾದ ಧನಾತ್ಮಕ ದೃಷ್ಟಿಕೋನಗಳು ಗಮನ ಸೆಳೆಯುವಂತಿವೆ. ಒಳನೋಟಪೂರ್ಣವಾದ, ರೂಪಕಾತ್ಮಕವಾದ ಭಾಷೆಯಲ್ಲಿ ಈ ಕಥೆಯು ಆಕರ್ಷಕವಾಗಿ ಮೂಡಿಬಂದಿದೆ.
`ಒAದು ಕಹಿ ಸುದ್ದಿಯ ನಿರೀಕ್ಷೆಯಲ್ಲಿ’ ಕಥೆಯಲ್ಲಿ ಚರಣ್ ಮತ್ತು ಅಶೋಕ್ ಸ್ನೇಹಿತರಾಗಿದ್ದು ಇಬ್ಬರ ಕುಟುಂಬಗಳೂ ಒಂದೊAದು ಸಮಸ್ಯೆಯಲ್ಲಿ ಮಿಂದು ಮುಳುಗೇಳುತ್ತಿವೆ. ಚರಣ್ ಮತ್ತವನ ಪತ್ನಿ ಪಂಕಜ ಇಂಗ್ಲೆAಡಿನಲ್ಲಿ ಮಗ ಪ್ರದ್ಯುಮ್ನನೊಂದಿಗಿದ್ದಾರೆ. ಡ್ರಗ್ ಅಡಿಕ್ಷನ್‌ಗೆ ಒಳಗಾಗಿರುವ ಪ್ರದ್ಯುಮ್ನ ಅದರಿಂದಾಗಿ ದೃಷ್ಟಿದೋಷದ ಸಮಸ್ಯೆ ಅನುಭವಿಸುತ್ತಿದ್ದಾನೆ. ಇತ್ತ ಅಶೋಕ ಮತ್ತು ವತ್ಸಲಾರಿಗೂ ಇಶಾಂತ್ ಎಂಬ ಒಬ್ಬನೇ ಮಗನಿದ್ದಾನೆ. ಅವನು ಈಗಾಗಲೇ ಒಂದು ಮಗುವಿರುವ ೩೦ ವರ್ಷದ ವಿಧವೆ ಹೈಸ್ಕೂಲ್ ಟೀಚರ್ ಒಬ್ಬಳನ್ನು ಮದುವೆಯಾಗಲು ಸಿದ್ಧನಾಗಿದ್ದು, ಇದರಿಂದಾಗಿ ಮನೆಯಲ್ಲಿ ಕೌಟುಂಬಿಕ ವಾತಾವರಣ ಹದಗೆಟ್ಟಿದೆ.
ಈ ರೀತಿಯಾದ ಎರಡು ಭಿನ್ನ ಬಗೆಯ ಸಮಸ್ಯೆಗಳಿಂದ ನರಳುತ್ತಿರುವ ಈ ಕುಟುಂಬಗಳು ಊಟಿಗೆ ಪ್ರವಾಸ ಹೋದಾಗ ಪ್ರದ್ಯುಮ್ನನ ಸಮಸ್ಯೆ ಆಕಸ್ಮಿಕವಾಗಿ ಹೊರಬೀಳುತ್ತದೆ. ಚರಣ್‌ನಿಗೆ ಸಂತೈಸುವ ಭರದಲ್ಲಿ ತನ್ನ ಮಗ ಇಶಾಂತನ ಸಮಸ್ಯೆಯನ್ನು ಅಶೋಕನು ಗೆಳೆಯನಿಗೆ ಬಹಿರಂಗಗೊಳಿಸಲು ಹೋದಾಗ ಚರಣ್ ತಡೆಯುತ್ತಾನೆ. ಮಗ ಇಶಾಂತ್ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊ ಎಂದು ತುಂಬಾ ಪ್ರೌಢವಾದ ಸಲಹೆಯನ್ನು ನೀಡುತ್ತಾನೆ. ಹಾಗೆ ನೋಡಿದರೆ ಮೂರನೇ ಬಹುಮಾನಕ್ಕೆ ಪಾತ್ರವಾಗಿರುವ `ಒಂದು ಕಹಿ ಸುದ್ದಿಯ ನಿರೀಕ್ಷೆಯಲ್ಲಿ’ ಕಥೆಯ ನಿರ್ವಹಣೆಯು ಅತ್ಯಂತ ಸೂಕ್ಷö್ಮವಾಗಿದೆ. ಹದಿವಯದ ಮಕ್ಕಳ ಮನೋಲೋಕವನ್ನು ಇದು ಕಂಡರಿಸಿರುವ ರೀತಿ, ಅದನ್ನು ನಿರುದ್ವಿಗ್ನವಾದ ಶೈಲಿಯಲ್ಲಿ ಕಟ್ಟಿಕೊಟ್ಟಿರುವ ವಿಧಾನಗಳು ಬಹಳ ಚೆನ್ನಾಗಿವೆ. ಹೆಚ್ಚು ವಿವರಣಾತ್ಮಕ ಧಾಟಿಯ ಇದರ ನಿರ್ವಹಣೆಯ ರೀತಿಯು ಅಪರೂಪದ ವ್ಯವಧಾನದಿಂದ ಕೂಡಿದೆ. ಎಲ್ಲೂ ಭಾವಾವೇಶಕ್ಕೊಳಗಾಗದ ಸಂವೇಗಾತ್ಮಕ ಸಂತುಲನೆ ಇದರ ಮುಖ್ಯ ಶಕ್ತಿಯಾಗಿದೆ.
ಮಾಂತ್ ಮಲ್ಲಯ್ಯ ಘೇ.. ಕಥೆಯ ವೈಶಿಷ್ಟö್ಯತೆ ಅಡಗಿರುವುದು ಅದು ನರಲೋಕಕ್ಕಿಂತ ಪ್ರಾಣಿಲೋಕವನ್ನು ಮಹತ್ವದ್ದೆಂದು ಬಗೆದಿರುವ ಬಗೆಯಲ್ಲಿ. ದಟ್ಟ ಗ್ರಾಮೀಣ ಕೃಷಿ ಕುಟುಂಬದ ವಿವರ, ಕಥೆಯುದ್ದಕ್ಕೂ ಹರಡಿರುವ ಸಶಕ್ತವಾದ ಮತ್ತು ಅಷ್ಟೇ ಚಿತ್ರಕವಾದ ಬೆಳಗಾವಿ ಭಾಷೆಗಳು ಕಥೆಗೆ ಹೆಚ್ಚಿನ ಕಸುವನ್ನು ನೀಡಿವೆ. ದಿನಾ ಮನೆಯ ಹೊಸ್ತಿಲ ಮೇಲೆ ಹೇಸಿಗೆ ಮಾಡುವ ಚಂಪಿ ಎಂಬ ಸಾಕು ನಾಯಿಯನ್ನು ರಾಯಭಾಗದವರೆಗೆ ಬಿಟ್ಟು ಬಂದರೂ ಅದು ಮತ್ತೆ ವಾಪಸು ಬರುತ್ತದೆ. ಕರಡಿ ಆಡಿಸುವ ಮೈಬೂಬನಿಗೆ ಅದನ್ನು ಕೊಟ್ಟು, ಅದರ ಕುಶಲ ಸಮಾಚಾರ ತಿಳಿಸಲು ಅವನು ನಾಸಿಕದಿಂದ ಮೋಳೆಗೆ ಪತ್ರ ಬರೆದ ಮೇಲೆ, ಹೆಂಡತಿ ಮತ್ತು ಮಗ ಇಬ್ಬರೂ ಹೇಳುವ ಅದರೊಂದಿಗಿನ ಒಡನಾಟದ ಸ್ವರೂಪ ಕೇಳಿ ಅದನ್ನು ನಾಸಿಕಕ್ಕೆ ಹೋಗಿ ವಾಪಸ್ ತರಬೇಕೆಂದು ಪರಸಪ್ಪ ಆಶೆಪಡುತ್ತಾನೆ. ನಾಸಿಕದಂಥ ಶಹರದಲ್ಲಿ ಅದನ್ನು ಹುಡುಕುವುದು ಒಂದು ಬಗೆಯ ಮನುಷ್ಯ ಲೋಕದ ಅವಾಸ್ತವವಾದಿ ಚಿಂತನೆಯಾದರೆ, ಚಂಪಿ ಅಲ್ಲಿಂದ ಓಡೋಡಿಕೊಂಡೇ ಬಂದು ಇವರ ಮಡಿಲಲ್ಲಿ ಪ್ರಾಣ ಬಿಡುವುದು ಪ್ರಾಣಿಲೋಕದ ವಾಸ್ತವ ಚಲನೆಯಾಗಿದೆ. ಕರುಣಾರ್ದ್ರವಾದ ಕೊನೆಯೇ ಈ ಕತೆಯ ಶಕ್ತಿ ಮತ್ತು ಮಿತಿ ಎರಡೂ ಆಗಿದೆ. ಕಣ್ತುಂಬಿ ಬಂದಿರಬೇಕು, ಕಂಬನಿ ಅಲ್ಲೇ ಉಳಿದಿರಬೇಕು. ಆಗಲೇ ಕಥೆಯು ಕಲೆಯ ಎತ್ತರಕ್ಕೇರುವುದು.
`ಟವರ್ ಆಫ್ ಸೈಲೆನ್ಸ್’ ಕಥೆಯಲ್ಲಿ ಗಂಡು ಮತ್ತು ಹೆಣ್ಣು ಲೋಕದೃಷ್ಟಿಗಳಲ್ಲಿ ಹಣ ಮತ್ತು ಮಾನವೀಯ ಸಂಬAಧಗಳಿಗಿರವ ಸ್ಥಾನಮಾನಗಳನ್ನು ಆಳ ತಿಳಿವಳಿಕೆಯಲ್ಲಿ ನಿರೂಪಿಸಲಾಗಿದೆ. ಯಾವ ಸುಳಿವನ್ನೂ ಬಿಟ್ಟುಕೊಡದ, ಹಲವು ಸಾಧ್ಯತೆಗಳನ್ನು ತನ್ನೊಳಗೆ ಅಡಗಿಸಿಕೊಂಡಿರುವ ಅಂತ್ಯವAತೂ ತುಂಬಾ ಧ್ವನಿಪೂರ್ಣವಾಗಿದೆ. 
`ಸೆಕ್ಸ್ ಆನ್ ದಿ ಬೀಚ್’ ಕಥೆಯ ಶೀರ್ಷಿಕೆಯೇ ಓದುಗನನ್ನು ದಾರಿ ತಪ್ಪಿಸುವಂತಿದೆ. ಆದರೆ ಅದರ ಕಥೆಯ ಕೌಶಲಪೂರ್ಣ ನಿರ್ವಹಣೆ ಮತ್ತು ಕಥಾನಾಯಕನ ತೀವ್ರವಾದ ಆತ್ಮವಿಮರ್ಶೆಗಳು- `ಲೋಕರೂಢಿಯ ಅರ್ಥಹೀನ ದಾರಿಗಳಲ್ಲಿ ತಪ್ಪಿಸಿಕೊಂಡಿದ್ದೂ, ತಾವೇ ಸರಿ ಎಂಬ ಭ್ರಮೆಯಲ್ಲಿರುವ’ ಜನರನ್ನು ಸರಿದಾರಿಗೆ ತರುವಷ್ಟು ಶಕ್ತವಾಗಿವೆ. ಕಾವ್ಯಾತ್ಮಕವೂ, ಒಳನೋಟಪೂರ್ಣವೂ ಆದ ಭಾಷೆ ಮತ್ತು ಅಚ್ಚುಕಟ್ಟಾದ ನಿರ್ವಹಣೆಗಳು ಇದರ ಮುಖ್ಯ ಶಕ್ತಿಗಳಾಗಿವೆ. ಪ್ರಜ್ಞಾಪ್ರವಾಹ ತಂತ್ರವನ್ನು ಹದದಲ್ಲಿ ಬಳಸಿರುವ ಕ್ರಮ, ಕಿರಿದರಲ್ಲಿ ಹಿರಿದರ್ಥ ಸೂಚಿಸುವ ವಿಶಿಷ್ಟ ವಾಕ್ಯಗಳು, ಮನೋವಿಶ್ಲೇಷಣಾತ್ಮಕವಾದ ಶೈಲಿಗಳೆಲ್ಲ ಸೇರಿ ಇದನ್ನು ಉಳಿದೆಲ್ಲ ಕಥೆಗಳಿಗಿಂತ ಭಿನ್ನವಾಗಿಸಿವೆ.
`ಅಚ್ಯುತನ ಧ್ಯಾನ’ ಕಥೆಯಲ್ಲಿ ಅಂತಕ್ಕನಿಗೆ ಮದುವೆ ಸಮಾರಂಭದಲ್ಲಿ ಅಚ್ಯುತ ಎಂಬ ಪುಟ್ಟ ಬಾಲಕನು ಸೂಜಿಗಲ್ಲಿನಂತೆ ಸೆಳೆಯುತ್ತಾನೆ. `ಶನಿವಾರ ಸಂಜೆ ನಾನು ನಿಮ್ಮಲ್ಲಿಗೆ ಬರುವೆ. ಸೋಮವಾರ ಸಂಜೆ ನೀವು ನಮ್ಮ ಮನೆಗೆ ಬನ್ನಿ’ ಅಂತಾನೆ. ಅದರಂತೆ ಶನಿವಾರ ಅವನು ತೀರಿದ ಸುದ್ದಿ ಕೇಳಿ, ಸೋಮವಾರ ಅವಳಿಗೆ ಅಚ್ಯುತನೇ ಕರೆದಂತೆ ಆಗಿ ಅವಳು ಸತ್ತಳೆಂಬ ಸೂಚನೆಯನ್ನು ವಾಚ್ಯವಾಗಿಯೇ ಕೊಡುವುದರೊಂದಿಗೆ ಕಥೆ ಮುಗಿಯುತ್ತದೆ. ಹೊಸದೇನನ್ನೂ ಹೇಳಲಾಗದ, ಓದುಗನಿಗೇನೂ ಕೆಲಸ ಕೊಡದ ಜನಪ್ರಿಯ ಮಾದರಿಯ ಈ ಕಥೆಯ ಮುಖ್ಯ ಶಕ್ತಿಯಿರುವುದು ಇದರ ನಿರುದ್ವಿಗ್ನ ಶೈಲಿಯಲ್ಲಿ ಮತ್ತು ಇದು ಕಟ್ಟಿಕೊಡುವ ಹೆಣ್ಣೋಟದ ಭಾವಲೋಕದಲ್ಲಿ.
`ಆ ಎರಡು ಪುಟಗಳು’ ಕಥೆಯು ಕೂಡ ಒಂದು ಹೆಣ್ಣಿನ ಮನೋವ್ಯಾಪಾರಕ್ಕೆ ಕನ್ನಡಿ ಹಿಡಿಯುವಂಥದ್ದೇ. ಇಲ್ಲಿ ಚಿತ್ರಿತವಾಗಿರುವ ಲೈಂಗಿಕ ದೌರ್ಜನ್ಯದ ಚಿತ್ರಣವು ತುಸು ಭಿನ್ನ ಸ್ವರೂಪದ್ದು. ಹೆಣ್ಣು ಎಷ್ಟೇ ಆರ್ಥಿಕವಾಗಿ ಸ್ವಾವಲಂಬಿಯಾದರೂ, ಔದ್ಯೋಗಿಕ ಸ್ಥಳಗಳಲ್ಲಿ ಅವಳ ಮೇಲಾಗುವ ಲೈಂಗಿಕ ಶೋಷಣೆಗಳಿಂದ ತಪ್ಪಿಸಿಕೊಳ್ಳಲಾಗದು. ಅದು ಜೀವಮಾನ ಪೂರ್ತಿ ಕಾಡುವ ಬಗೆಯನ್ನು ಈ ಕಥೆಯಲ್ಲಿ ತುಂಬಾ ಸೂಚ್ಯವಾಗಿ ಹಿಡಿಯಲಾಗಿದೆ. ಇನ್ನಷ್ಟು ವಿವರಗಳು ಅಗತ್ಯವಿದ್ದವು ಮತ್ತು ಆಧುನಿಕ ಕಾಲದ ಉದ್ಯೋಗಸ್ಥ ಮಹಿಳೆಯ ಈ ಚಿತ್ರ ಇನ್ನೂ ಹೆಚ್ಚಿನ ಆತ್ಮಬಲದಿಂದ ಕೂಡಿರಬೇಕಾದ ಅಗತ್ಯವಿತ್ತು. 
ಒಟ್ಟಾರೆಯಾಗಿ ನೋಡಿದಾಗ ಈ ಕಥೆಗಳು ಹಾರದ ಚೆಲುವಿಗೆ ದುಡಿಯುವ ಹೂಗಳಂತೆ ಇಲ್ಲಿ ಸ್ಥಾನ ಪಡೆದಿವೆ. ಆದರೆ ಕೆಲವಕ್ಕೆ ಮಾತ್ರ ಹಾರದಿಂದ ಹೊರತೆಗೆದು ನೋಡಿದಾಗಲೂ ತನಗೆ ತನ್ನದೇ ಆದ ಒಂದು ಸ್ವಂತದ ಚೆಲುವು ಮತ್ತು ಪರಿಮಳ ಇರಬೇಕೆಂಬ ಎಚ್ಚರವಿದೆ. ಇಂಥ ಎಚ್ಚರದ ಕೆಲವು ಕಥೆಗಳು ಸಹಜವಾಗಿ ಗಮನ ಸೆಳೆಯುವಂತಿವೆ. ಆದರೆ ಉಳಿದವುಗಳಲ್ಲಿ ಕೆಲವು ಕಥೆಗಳು ಆಶಯದ ಹಿಂದೆ ಹೋಗಿ ಬಡಕಲಾದರೆ; ಇನ್ನೂ ಕೆಲವು ವಸ್ತುವಿನ ಗ್ರಾö್ಯವಿಟಿ ಮಾತ್ರವೇ ಬೇಕಾದಷ್ಟಾಯಿತೆಂದು ಅತಿನಂಬಿಕೆಯಲ್ಲಿ ಸೊರಗಿವೆ. 
ಈ ಸಂಕಲನದಲ್ಲಿ ನವೋದಯದ ರಮ್ಯತೆ, ಪ್ರಗತಿಶೀಲರ ಆಶಯ, ನವ್ಯದ ಆಕೃತಿನಿಷ್ಠೆ, ಬಂಡಾಯದ ರೋಷ, ದಲಿತರ ಅಧೋಲೋಕಗಳೆಲ್ಲವೂ ಇವೆ. ಈಗಿನ ಈ ಪಂಥರಾಹಿತ್ಯ ಕಾಲವು ಹಿಂದಿನ ಎಲ್ಲ ಪಂಥಗಳನ್ನು ಬಿಡಿಬಿಡಿಯಾಗಿ ತನ್ನಲ್ಲಿ ಹಿಡಿದುಕೊಂಡಿದೆ ಎಂಬುದನ್ನಿದು ಸೂಚಿಸುತ್ತಿರಬಹುದು. ಎಲ್ಲ ಭಾಗದ, ಎಲ್ಲ ಸ್ಥರದ, ಎಲ್ಲ ವಯೋಮಾನದ ಕಥೆಗಾರರಿರುವ ಈ ಸಂಕಲನ ಈ ಕಾಲದ ಒಟ್ಟು ಕಥನಕ್ರಿಯೆಗೆ ಹಿಡಿದ ಪುಟ್ಟ ಕನ್ನಡಿಯಂತಿದೆ. ಒಬ್ಬ ಕಥೆಗಾರನಾಗಿ ಇದರಲ್ಲಿ ಕೆಲವಾದರೂ ಕಥೆಗಳು `ಹೀಗೆ ನಾನೂ ಬರೆಯಬೇಕಲ್ಲ’ ಎಂಬ ಆಶೆ ಹುಟ್ಟಿಸಿ ಕೆರಳಿಸಿವೆ. 
ಕನ್ನಡದ ಕಥಾಲೋಕ ಭಾರತೀಯ ಭಾಷೆಗಳ ಕಥಾಲೋಕಗಳಲ್ಲೆಲ್ಲ ವಿಶಿಷ್ಟವಾದ ಗುರುತನ್ನು ಹೊಂದಿದೆ. ಹಲವಾರು ಮಹಾನ್ ಲೇಖಕರು ಈ ಪ್ರಕಾರವನ್ನು ತಮ್ಮ ಪ್ರತಿಭಾಶಕ್ತಿಯ ಬಲದಿಂದ ಮತ್ತಷ್ಟು ಎತ್ತರಕ್ಕೆ ಏರಿಸಿ ನಿಲ್ಲಿಸಿದ್ದಾರೆ ಮತ್ತು ಹೊಸಕಾಲದ ಕಥೆಗಾರರ ಮೇಲೆ ಪರೋಕ್ಷ ಒತ್ತಡವನ್ನೂ ಹೇರಿದ್ದಾರೆ. ಈ ಆರೋಗ್ಯಕರ ಒತ್ತಡದ ಅರಿವಾಗುವುದು ಅವರ ಬರೆಹಗಳಿಗೆ ಮುಖಾಮುಖಿಯಾದಾಗಲೇ. ಪೂರ್ವಸೂರಿಗಳ ಸಾದ್ಯಂತವಾದ ಓದು ನಮಗೆ ಯಾವುದು ಕಥೆ ಅಂತ ತಿಳಿಸುವುದರ ಜೊತೆಜೊತೆಗೇ; ಯಾವುದು ಕಥೆಯಲ್ಲ ಎಂಬುದನ್ನೂ ಮೌನದಲ್ಲೇ ಬಿಡಿಸಿ ಹೇಳುತ್ತಿರುತ್ತದೆ. ಇಂತಿರಲಾಗಿ ಪ್ರದೇಶ ವಿಶಿಷ್ಟವಾದ ವಸ್ತುವಿನ ಅಥವಾ ಭಾಷೆಯ ಅಥವಾ ಕೇವಲ ಅವೆರಡರ ಬಲದಿಂದಲೇ ಕಥೆಯನ್ನು ಎತ್ತಿ ನಿಲ್ಲಿಸಬಹುದೆಂಬುದು ಒಂದು ಅತಿನಿರೀಕ್ಷೆಯ ಮಾತಾಗುತ್ತದೆ. 
ಕಥೆಗೆ ವಸ್ತು, ಭಾಷೆ ಮತ್ತು ತಂತ್ರಗಳು ಎಷ್ಟು ಮುಖ್ಯವೋ ಅವೆಲ್ಲವುಗಳಿಗಿಂತ ಮುಖ್ಯವಾದುದು ಕಥೆಗಾರರ ಪ್ರತಿಭಾಶಕ್ತಿ. ಕಥೆಗಾರರ ಪ್ರತಿಭೆಯಲ್ಲಿ ಇವೆಲ್ಲವೂ ಹದವಾಗಿ ಅರಗಿ, ಮರುಹುಟ್ಟು ಪಡೆಯಬೇಕು. ಆಗಷ್ಟೇ ಅವು ಹೊಸ ಪ್ರಭೆಯಲ್ಲಿ ಹೊಳೆಯುವುದು.
ಹಾಗೆ ಕಲೆಯಾಗದ ಯಾವುದೂ ಇಲ್ಲಿ ಕಾಲಾತೀತವಾಗಿ ಉಳಿಯದು.
ಡಾ. ಚಿದಾನಂದ ಸಾಲಿ

 

MORE NEWS

ಬರಹವೆಂದರೆ ಭಾಷೆ, ಭಾಷೆ ಎಂದರೆ ಬರಹ: ಪೂರ್ಣಿಮಾ ಮಾಳಗಿಮನಿ

22-10-2024 ಬೆಂಗಳೂರು

“ನಿಯುಕ್ತಿ ಪುರಾಣ ಅಸಲಿಗೆ, ಹದಿನೈದನೇ ಶತಮಾನದ (1576 ರಿಂದ 1617) ಕಾಲಘಟ್ಟದಲ್ಲಿ ನಡೆಯುವ ಮಹಿಷೂರು ಅರಸರ ಕತೆ&...

ಈ ಕೃತಿಯಲ್ಲಿ ಭಾವನೆಗಳ ಸ್ವಚ್ಛವಾದ ನಿವೇದನೆಯಿದೆ….

22-10-2024 ಬೆಂಗಳೂರು

“ಒಂದು ಮಠ ದೊಡ್ಡ ಧಾರ್ಮಿಕ ಶ್ರದ್ಧಾಕೇಂದ್ರವಾದರೂ, ಆರ್ಥಿಕವಾಗಿ ಮಠವನ್ನು ನಡೆಸುವುದು ಎಷ್ಟು ಸವಾಲಿನ ಕೆಲಸ ಎಂಬು...

ಈ ಕಥಾ ಸಂಕಲನದಲ್ಲಿ ದಟ್ಟ ಕಾಡಿನ ರೌದ್ರ ವರ್ಣನೆ ಓದುಗರನ್ನು ಮೋಹಗೊಳಿಸುತ್ತದೆ‌

22-10-2024 ಬೆಂಗಳೂರು

“ಈ ಸಂಕಲನ ಮಲೆಯ ಮಹದೇಶ್ವರದ ತಪ್ಪಲಿನ ಗುಡ್ಡಗಾಡು ಜನರ ಬದುಕುಗಳ ಚಿತ್ರಣಗಳನ್ನು ಬಲು ನಿಖರವಾಗಿ ಕೊಡುತ್ತದೆ&rdqu...