"ನನಗೆ ಪುಸ್ತಕದಲ್ಲಿ ಕುತೂಹಲಕರ ಎನ್ನಿಸಿದ್ದು, 70-80ರ ದಶಕದಲ್ಲಿ ಮಳವೂರಿನ ಕೋರ್ದಬ್ಬು ಸಾನ ದಲಿತ ಹೋರಾಟಗಳಿಗೆ ಕೇಂದ್ರಸ್ಥಾನ ಆದ ಸಂಗತಿ. ಈ ಇತಿಹಾಸ, ಸುರತ್ಕಲ್‌ನಲ್ಲೇ ಆ ಅವಧಿಯಲ್ಲಿ ಮತ್ತು 90ರ ದಶಕದ ಮಧ್ಯದ ತನಕ ಇದ್ದ ನನಗೂ ಗೊತ್ತಿರಲಿಲ್ಲ. 40ರ ದಶಕದಲ್ಲಿ ಈ ಸಾನ ಸ್ಥಾಪನೆಗೊಂಡ ಕಥೆಯೂ ಐತಿಹಾಸಿಕ ಮಹತ್ವದ್ದು," ಎನ್ನುತ್ತಾರೆ ರಾಜಾರಾಂ ತಲ್ಲೂರು. ಅವರು ನವೀನ್ ಸೂರಿಂಜೆಯವರ ʻಸತ್ಯೊಲುʼ ಕೃತಿ ಕುರಿತು ಬರೆದ ವಿಮರ್ಶೆ.
“ಜನಪದ” ಎಂದಾಕ್ಷಣ, ಅದು ಯೂನಿವರ್ಸಿಟಿಗಳ ನಾಲ್ಕು ಗೋಡೆಗಳ ಒಳಗೆ ತಲುಪಿ ಬಹಳ ಕಾಲ ಆಗಿದೆ ಎಂದೇ ಅನ್ನಿಸುತ್ತದೆ. ಹೀಗೆ ಗೋಡೆಗಳ ನಡುವೆ ಕಪಾಟುಗಳ ಒಳಗೆ ಇರುವುದು, ಅಕಾಡೆಮಿಕ್ ಆಸಕ್ತಿ ಇಲ್ಲದ ನಮ್ಮಂತಹ ಜನಸಾಮಾನ್ಯರ ಕೈಯೆಟುಕಿಗೆ ಸಿಗುವುದು ಕಡಿಮೆ. ನಮ್ಮ ಸಮಕಾಲೀನ ಜನಪದವಂತೂ “ಐಟಿ-ಬಿಟಿ, ಕಡಿ, ಕೊಚ್ಚು, ಕೊಲ್ಲು” ಜಗತ್ತಿನಲ್ಲೇ ಲೀನವಾಗಿದೆ. ಇಂತಿಪ್ಪ ನಮಗೆ, ಭೂಮಂಡಲದ ಇತಿಹಾಸವನ್ನೆಲ್ಲ ಜೀರ್ಣಿಸಿಕೊಂಡು ನೀರು ಕುಡಿಯುವುದು ಸಾಧ್ಯವಾಗಿದೆ. ನಮಗೆ ಅದೆಲ್ಲ ಗೊತ್ತಿದೆ ಎಂಬುದಕ್ಕೆ ಅಧಿಕೃತ ಯೂನಿವರ್ಸಿಟಿ ಸರ್ಟಿಫಿಕೇಟುಗಳೂ ನಮ್ಮ ಬಳಿ ಇರಬಹುದು. ಆದರೆ ನಮ್ಮೂರಿನ, ನಮ್ಮ ಕೇರಿಯ, ನಮ್ಮ ಓಣಿಯ, ನಮ್ಮ ಸಮುದಾಯದ, ನಮ್ಮ ಕುಟುಂಬದ ಇತಿಹಾಸ-ಸಂಸ್ಕೃತಿಯ ಕುರಿತು ಕೇಳಿದರೆ, ನಮ್ಮ ಬಗ್ಗೆ ನಮ್ಮಷ್ಟು ಅಪರಿಚಿತರು ಬೇರೆ ಯಾರಿಲ್ಲ.
ಇಂತಹದೊಂದು ಸನ್ನಿವೇಶದಲ್ಲಿ “ಸತ್ಯೊಲು” ತರಹದ, ನಾನ್ ಅಕಾಡೆಮಿಕ್ ಬರೆವಣಿಗೆಗಳು ಕುತೂಹಲದ ಹಾದಿಗಳನ್ನು ತೆರೆದುಕೊಡುತ್ತವೆ. ನವೀನ್ ಸೂರಿಂಜೆಯವರ ಈ ಪುಸ್ತಕ ಅಹರ್ನಿಶಿ ಮೂಲಕ ಹೊರಬಂದಿದೆ. ಇದು ಸಂಶೋಧನೆ ಅಲ್ಲ, ಆದರೆ ಸಾಕಷ್ಟು ಕ್ಷೇತ್ರಕಾರ್ಯ ಇದೆ; ತೀರ್ಮಾನಗಳಿವೆ, ಆದರೆ ಅದು ಲೌಡ್ ಥಿಂಕಿಂಗ್ ಎಂಬುದೂ ತಕ್ಷಣ ಹೊಳೆಯುತ್ತದೆ. ಪುಸ್ತಕದ ಅಂತ್ಯದಲ್ಲಿ ಅದು ಮೂಡಿಸುವ ಒಟ್ಟು ಚಿತ್ರ, ನಮ್ಮ ಸುತ್ತಮುತ್ತಲಿನ ಜನಪದ ಬದುಕಿನ ಬಗ್ಗೆ ಆಸಕ್ತಿ ಮೂಡಿಸಿದರೆ ಪುಸ್ತಕ ಸಾರ್ಥಕ.
ನನಗೆ ಪುಸ್ತಕದಲ್ಲಿ ಕುತೂಹಲಕರ ಎನ್ನಿಸಿದ್ದು, 70-80ರ ದಶಕದಲ್ಲಿ ಮಳವೂರಿನ ಕೋರ್ದಬ್ಬು ಸಾನ ದಲಿತ ಹೋರಾಟಗಳಿಗೆ ಕೇಂದ್ರಸ್ಥಾನ ಆದ ಸಂಗತಿ. ಈ ಇತಿಹಾಸ, ಸುರತ್ಕಲ್‌ನಲ್ಲೇ ಆ ಅವಧಿಯಲ್ಲಿ ಮತ್ತು 90ರ ದಶಕದ ಮಧ್ಯದ ತನಕ ಇದ್ದ ನನಗೂ ಗೊತ್ತಿರಲಿಲ್ಲ. 40ರ ದಶಕದಲ್ಲಿ ಈ ಸಾನ ಸ್ಥಾಪನೆಗೊಂಡ ಕಥೆಯೂ ಐತಿಹಾಸಿಕ ಮಹತ್ವದ್ದು.
ದೈವಸ್ಥಾನಗಳೆಲ್ಲ ವೈದಿಕೀಕರಣಗೊಂಡಿರುವ ಈ ಸಂದರ್ಭದಲ್ಲಿ, ಚರಿತ್ರೆಗಳೆಲ್ಲ ಯಾರ್ಯಾರದೋ ಮೂಗಿನ ನೇರಕ್ಕೆ ಮರುಹೊಂದಿಕೆ ಆಗುತ್ತಿರುವ ಈ ಹೊತ್ತಿನಲ್ಲಿ ಇಂತಹ ಸಂಗತಿಗಳು, ಅಕಾಡೆಮಿಕ್ ಸಂಶೋಧನೆಯ ಲೈಬ್ರರಿ ಪುಸ್ತಕಗಳಿಂದ ಹೊರಗೆ ಜನರ ನಡುವೆ, ಆಡು ಮಾತಿನಲ್ಲಿ ಚಾಲ್ತಿಗೆ ಬರುವ ಅಗತ್ಯ ಇದೆ. ಇನ್ನೊಂದು ತಲೆಮಾರು ಕಳೆದರೆ ಇದೆಲ್ಲ ಗೊತ್ತಿರುವವರೂ ಇರಲಾರರು. ಆಗ ಹೇಳಿದ್ದೆಲ್ಲ ಇತಿಹಾಸ ಆಗುವ ಅಪಾಯ ಇನ್ನಷ್ಟು ಹೆಚ್ಚಲಿದೆ. ಈ ದೃಷ್ಟಿಯಿಂದ “ಸತ್ಯೊಲು” ಮುಖ್ಯ ಓದು.
ಈ ಪುಸ್ತಕ ಓದುವ ಮುನ್ನ, ರಿಯಾಜ್ ಅವರ “ತುಳುನಾಡಿನ ಕೋಮು ಸಾಮರಸ್ಯ ಪರಂಪರೆ” ಪುಸ್ತಕ ಓದಿದ್ದರಿಂದಾಗಿ, ಅದರ ಸಹಜವಾದ ಮತ್ತು ಸ್ವಲ್ಪ ಹೆಚ್ಚು ಆಳದ ಪದರದ ಮುಂದುವರಿಕೆ ಇದು ಅನ್ನಿಸಿತು.
ಜೈನ, ಬೌದ್ಧ, ನಾಥ ಪಂಥಗಳು, ಶಂಕರರು, ಮಧ್ವರು – ಇವೆಲ್ಲ ಓದುಗಳು ಕರಾವಳಿಯ ಚರಿತ್ರೆಯ ಬಗ್ಗೆ ನಮ್ಮ ಅರಿವನ್ನು ಹೆಚ್ಚಿಸುವ ಮತ್ತು ಆ ಮೂಲಕ ಕರಾವಳಿಯ ಬದುಕನ್ನು ಸತ್ವಯುತಗೊಳಿಸುವ ಬದಲು, ಏನು ಹೇಳಿದರೆ ಏನಾದೀತೋ ಎಂಬ ಆತಂಕಗಳಿಗೆ ಕಾರಣ ಆಗುವುದೇ ಈವತ್ತಿನ ದುರಂತ. ಚರಿತ್ರೆಯ ಸುಡು ಸತ್ಯಗಳನ್ನು ಅರಿಯಲು, ಒಪ್ಪಿಕೊಂಡು ಮುಂದುವರಿಯಲು ನಮ್ಮದೇ ಜನಪದವು ಯೂನಿವರ್ಸಿಟಿಗಳ, ಲೈಬ್ರರಿಗಳ ಗೋಡೆ ದಾಟಿ ಮನೆಮನೆಗೆ ತಲುಪಬೇಕು. ಅದಕ್ಕೆ ಇಂತಹ “ಸತ್ಯೊಲು” ಜನರನ್ನು ಸುಲಭವಾಗಿ ತಟ್ಟಬೇಕು. ಸತ್ಯ ಒಂದು ಸುತ್ತು ಬರುವಾಗ ಸುಳ್ಳು ಭೂಮಂಡಲಕ್ಕೆ ಹತ್ತು ಸುತ್ತು ತಿರುಗಿ ಬರುತ್ತಿರುವ “ಪೋಸ್ಟ್ ಟ್ರುತ್” ಕಾಲ ಇದು ಎಂಬುದನ್ನು ಅರ್ಥ ಮಾಡಿಕೊಂಡರೆ, ನವೀನ್ ಸೂರಿಂಜೆ ಅವರ ಈ ಪುಸ್ತಕದ ಮಹತ್ವ ತಿಳಿದೀತು.
"ಹೆಗಲು" ಲೇಖಕರು : ಭಾರತಿ ಹೆಗಡೆ ಪ್ರಕಾಶಕರು : ಬೆನಕ ಬುಕ್ಸ ಬ್ಯಾಂಕ್. ಪುಟಗಳು : 142 ಬೆಲೆ: ₹180/-...
ಪುಸ್ತಕದ ಸಾರಾಂಶ "ಬದುಕು ದೀರ್ಘವಾಗಿರುವುದಕ್ಕಿಂತ ಶ್ರೇಷ್ಠವಾಗಿರಬೇಕು" ಎನ್ನುವ ನಿಟ್ಟಿನಲ್ಲಿ ಸಮಯ ನಿರ್ವಹ...
"ಇಲ್ಲಿನ ಯಾವ ಕತೆಗಳಲ್ಲೂ ಮಾನವ ಪಾತ್ರಗಳು ಇಣುಕುವುದಿಲ್ಲ, ಆದರೆ ಮನುಷ್ಯನ ಗುಣ-ಸ್ವಭಾವ, ನಡತೆ, ನಿಯತ್ತು, ನೀಚತನ...
©2025 Book Brahma Private Limited.