ಅದೃಶ್ಯ ಸಾಧಕಿಯರ ಕಥನ ‘ಗಡಿ ದಾಟಿದ ಹೆಣ್ಣುಗಳ ಕಥನ’


"ಡಾಕ್ಟರ್ ಎಚ್. ಎಸ್. ಅನುಪಮಾ ಅವರು ಬರೆದಿರುವ ಈ ಪುಸ್ತಕವು 25 ಜನ ಸಾಧಕಿಯರ ಜೀವನ ಸಾಧನೆಗಳನ್ನು ಪರಿಚಯಿಸುತ್ತದೆ. ಕರ್ನಾಟಕದ ಕೆಲವರ ಜೊತೆಗೆ, ಭಾರತದ ಬೇರೆ ರಾಜ್ಯಗಳ ಹಲವರನ್ನು ಇಲ್ಲಿ ಪರಿಚಯಿಸಿದ್ದಾರೆ" ಎನ್ನುತ್ತಾರೆ ಲೇಖಕಿ ಸುಮಿತ್ರಾ ಎಲ್. ಸಿ. ಅವರು ಲೇಖಕಿ ಎಚ್. ಎಸ್. ಅನುಪಮಾ ಅವರ ‘ಗಡಿ ದಾಟಿದ ಹೆಣ್ಣುಗಳ ಕಥನ’ ಕೃತಿಗೆ ಬರೆದ ಮುನ್ನುಡಿ ನಿಮ್ಮ ಓದಿಗಾಗಿ...

ಡಾಕ್ಟರ್ ಎಚ್. ಎಸ್. ಅನುಪಮಾ ಅವರು ಬರೆದಿರುವ ಈ ಪುಸ್ತಕವು 25 ಜನ ಸಾಧಕಿಯರ ಜೀವನ ಸಾಧನೆಗಳನ್ನು ಪರಿಚಯಿಸುತ್ತದೆ. ಕರ್ನಾಟಕದ ಕೆಲವರ ಜೊತೆಗೆ, ಭಾರತದ ಬೇರೆ ರಾಜ್ಯಗಳ ಹಲವರನ್ನು ಇಲ್ಲಿ ಪರಿಚಯಿಸಿದ್ದಾರೆ. ಅನುಪಮಾ ಗ್ರಾಮೀಣ ಪ್ರದೇಶದಲ್ಲಿ ನೆಲೆಸಿ ವೈದ್ಯರಾಗಿ ಜನಾನುರಾಗಿಯಾಗಿದ್ದಾರೆ. ಸಾಮಾಜಿಕ ಕಳಕಳಿಯ ಕೆಲಸಗಳನ್ನು ಮಾಡುತ್ತಿದ್ದಾರೆ. ಮಹಿಳಾಪರ ಹೋರಾಟಗಾತಿಯಾಗಿ ರಾಜ್ಯಾದ್ಯಂತ ಸಂಘಟನೆಗಾಗಿ ಓಡಾಡುತ್ತಿರುತ್ತಾರೆ. ಉತ್ತಮ ಭಾಷಣಕಾರರೂ ಆಗಿದ್ದು ಅಪಾರ ಓದಿನ ಹಿನ್ನೆಲೆ ಹೊಂದಿದ್ದಾರೆ. ಪ್ರಸ್ತುತ ಪುಸ್ತಕ ಅವರ ಅಪಾರ ಓದು, ವಿಚಾರಧಾರೆಗಳ ಫಲ. ಮೂರು ದಶಕಗಳಿಂದ ವೈದ್ಯರಾಗಿರುವ ಅವರು, ವೈದ್ಯಕೀಯ ಕುರಿತಲ್ಲದೆ ಕತೆ, ಕವಿತೆ, ಪ್ರಬಂಧ, ವಿಚಾರ ಸಾಹಿತ್ಯ, ಜೀವನ ಚರಿತ್ರೆ, ಅನುವಾದಗಳ ಪ್ರಕಾರದಲ್ಲಿ ಐವತ್ಮೂರು ಕೃತಿಗಳನ್ನು ಪ್ರಕಟಿಸಿದ್ದಾರೆ.

ಪ್ರಸ್ತುತ ಕೃತಿ ಕನ್ನಡ ಸಾಹಿತ್ಯಕ್ಕೆ ಅದರಲ್ಲೂ ಸ್ತ್ರೀ ವಾದಿ ಚಿಂತನೆಗೆ ಅಮೂಲ್ಯ ಕೊಡುಗೆಯಾಗಿದೆ. ಇಲ್ಲಿರುವ ಸಾಧಕಿಯರಲ್ಲಿ ಹಲವರು ಇತಿಹಾಸಕಾರರಿಗೆ ಮುಖ್ಯವಾಗಿಲ್ಲ. ಹಾಗಾಗಿ ಅನುಪಮಾ ತರಹದ ಲೇಖಕಿಯರು ಕಳೆದ ಶತಮಾನದ ಈ ಸಾಧಕಿಯರನ್ನು ಕುರಿತು ಬರೆದಾಗ ಅದು ಅಪೂರ್ವವೆನಿಸುತ್ತದೆ. ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಬೇರೆಬೇರೆ ಭಾಷೆಯ ಲೇಖಕಿಯರ ಕುರಿತು ಅಧ್ಯಯನಪೂರ್ಣ ಲೇಖನಗಳು ಬಂದಿರುವಷ್ಟು ವೈದ್ಯರ, ಸ್ವಾತಂತ್ರ ಹೋರಾಟಗಾರರ, ಸ್ತ್ರೀ ಮುಕ್ತಿ ಚಳವಳಿಕಾರರ ಕುರಿತು ಬಂದಿಲ್ಲ. ಆ ಕೊರತೆಯನ್ನು ಲೇಖಕಿ ತುಂಬಿಕೊಟ್ಟಿದ್ದಾರೆ.

ಮೊದಲನೇ ಲೇಖನ ಚಿತ್ರಿಸುವ ಡಾಕ್ಟರ್ ರುಕ್ಮಾಬಾಯಿಯವರು 160 ವರ್ಷಗಳ ಹಿಂದೆ ಮರಾಠ ಸಮಾಜದಲ್ಲಿ ಹುಟ್ಟಿ, ಬಾಲ್ಯ ವಿವಾಹವಾಗಿ, ಬುದ್ಧಿ ಬಲಿಯುವ ಮೊದಲೇ ವಿವಾಹವಾದ ಗಂಡನನ್ನು ಗಂಡ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ವಾದ ಹೂಡಿ ಗೆದ್ದು, ಮದುವೆಗೆ ಹುಡುಗಿಯ ಸಮ್ಮತಿಯೂ ಮುಖ್ಯ ಎಂದು ಸಾಧಿಸಿದವರು. ಮುಂದೆ ಇಂಗ್ಲೆಂಡ್‌ಗೆ ಹೋಗಿ ಓದಿ ವೈದ್ಯೆಯೂ ಆದರು. ಭಾರತಕ್ಕೆ ಮರಳಿ ವೈದ್ಯ ವೃತ್ತಿ ಮಾಡಿದ ಎರಡನೇ ಮಹಿಳೆ ಇವರು. `ಹೋರಾಟದ ಸಾಗರಕ್ಕೆ ಹರಿದ ನದಿ’ ಲೇಖನದಲ್ಲಿ ಕಟ್ಟಿಕೊಟ್ಟ ಉಮಾಬಾಯಿ ಕುಂದಾಪುರ ಎಂಬ ಸ್ವಾತಂತ್ಯ್ರ ಹೋರಾಟಗಾರರ ಹೆಸರೂ ಚರಿತ್ರೆಯಲ್ಲಿ ದಾಖಲಾಗಿಲ್ಲ. ಜೊಹ್ರಾ ಸೆಹೆಗಲ್ ಎಂಬ ಶತಾಯುಷಿ ನಟಿಯ ಹೋರಾಟದ ಬದುಕು, ನೂರು ವರ್ಷಗಳ ಹಿಂದೆ ಮುಸ್ಲಿಂ ಹುಡುಗಿಯಾಗಿ ಹುಟ್ಟಿ ಹಿಂದೂ ಹುಡುಗನನ್ನು ಮದುವೆಯಾಗಿ, ಲಾಹೋರ್‌ನಿಂದ ಮುಂಬೈಗೆ ಬಂದು ಯಶಸ್ವಿ ನಟಿಯಾದ ಕಥೆ ಕುತೂಹಲ ಹುಟ್ಟಿಸುತ್ತದೆ. ಬೋಧಪ್ರದವಾಗಿದೆ. ಜೊಹ್ರಾ ಅಭಿನಯದ ಸಿನಿಮಾಗಳನ್ನು ನೋಡಿದ್ದರೂ ಅವರ ಸಾಧನೆಯ ಹಿಂದಿನ ಕಥೆ ನನಗೆ ಗೊತ್ತಿರಲಿಲ್ಲ.

ಕೇರಳದ ಮೊದಲ ದಲಿತ ಪದವೀಧರೆ ದಾಕ್ಷಾಯಿಣಿ ವೇಲಾಯುಧನ್ ಸಹಾ ಹೋರಾಟದ ಮೂಲಕವೇ ಸಾಧನೆ ಮಾಡಿದವರು. ಶಾಸನ ಸಭೆ ಪ್ರವೇಶಿಸಿದ ಅವರು ಒಮ್ಮೆ `ಅಸ್ಪ್ರಶ್ಯತೆಯ ಎನ್ನುವ ಜನರೇ ಇಲ್ಲದ ಒಂದು ಕಾಲ ಬರಲಿ. ಇಂತಹ ಅಮಾನವೀಯ ಪದ್ಧತಿ, ಈ ನೆಲದಲ್ಲಿ ಇದೆ ಎಂದು ನನ್ನ ದೇಶವಾಸಿಗಳು ಹೊರದೇಶದಲ್ಲೂ ತಲೆತಗ್ಗಿಸುವ ಅವಕಾಶ ಬಾರದೇ ಹೋಗಲಿ’ ಎಂದು ಸಂವಿಧಾನ ಸಭೆಯ ಚರ್ಚೆಯಲ್ಲಿ ಉಲ್ಲೇಖಿಸಿದ್ದರು.

ನಿರೀಶ್ವರವಾದಿಯಾದ ಸರಸ್ವತಿ ಗೋರಾ ಅವರದು ಇನ್ನೊಂದು ಬಗೆಯ ಹೋರಾಟ. ಮೂಢನಂಬಿಕೆಗಳ ವಿರುದ್ಧ, ಅಸ್ಪ್ರಶ್ಯತೆಯ ವಿರುದ್ಧ ಹೋರಾಡಿದ ಅವರು ಗಾಂಧೀಜಿಯವರ ಅನುಯಾಯಿ ಆಗಿದ್ದರು. ಬಾಳಸಂಗಾತಿ ಗೋರಾ ಅವರ ಜೊತೆಗೂಡಿನಡೆಸುತ್ತಿದ್ದ ಚಟುವಟಿಕೆಗಳಿಂದ, ತಮ್ಮ ನಾಸ್ತಿಕವಾದದಿಂದ ಸಾಕಷ್ಟು ವಿರೋಧ ಎದುರಿಸಿದರು. ಅಂತರ್ಜಾತಿ, ಅಂತರ್ಧರ್ಮೀಯ ವಿವಾಹಗಳನ್ನು ನಡೆಸಿದರು.

ಇಂತಹ ಸಾಧಕಿಯರನ್ನು ಆಯ್ಕೆ ಮಾಡಿಕೊಳ್ಳುವಾಗಲೂ ಅನುಪಮಾ ವಿವಿಧ ಹಿನ್ನೆಲೆಯವರನ್ನು, ಬೇರೆಬೇರೆ ವೃತ್ತಿಯವರನ್ನು ಆಯ್ಕೆ ಮಾಡಿದ್ದಾರೆ. ಹಾಗೆ ಹೋಮೈ ವ್ಯಾರಾವಾಲ ಎಂಬ ಫೋಟೋಗ್ರಾಫರ್ ಕೂಡ ಒಬ್ಬರು. ಸ್ವಾತಂತ್ರ ಪೂರ್ವದಿಂದಲೂ ಗಾಂಧೀಜಿ, ನೆಹರೂ ಮುಂತಾದವರ ಫೋಟೋ ತೆಗೆದ ಹೋಮೈ ೨೦೧೨ರಲ್ಲಿ ತಮ್ಮ ೯೯ನೆಯ ವಯಸ್ಸಿನಲ್ಲಿ ತೀರಿಹೋದರು. ಆ ಕಾಲದಲ್ಲಿ ಮಹಿಳೆಯರು ಇಲ್ಲದ ಕ್ಷೇತ್ರ ಫೋಟೋಗ್ರಫಿ. ಸಹಜವಾಗಿಯೇ ಹಲವು ಬಗೆಯ ವಿರೋಧ ಎದುರಾಗಿತ್ತು.

`ಹೀರ್ವಿ ಧರ್ತಿ, ಸ್ತ್ರೀ ಶಕ್ತಿ, ಮಾನವ ಮುಕ್ತಿ’ (ಹಚ್ಚನೆ ಭೂಮಿ, ಮಹಿಳಾ ಶಕ್ತಿ, ಮಾನವ ಮುಕ್ತಿ) ಚಳವಳಿ ರೂಪಿಸಿದ ಇಂದುಮತಿ ನಿಕಮ್ ಪಾಠಣಕರ್ ಅವರ ಹೋರಾಟದ ಕುರಿತು ಒಂದು ಲೇಖನವಿದೆ. ತೆಲುಗಿನಲ್ಲಿ 'ರಾಮಾಯಣ ವಿಷವೃಕ್ಷಮ್' ಎಂಬ ಕೃತಿ ಬರೆದ ರಂಗನಾಯಕಮ್ಮ ಅವರ ಕುರಿತ ಲೇಖನವೂ ಮಾಹಿತಿಪೂರ್ಣವಾಗಿದೆ. ರಾಮಾಯಣ ವಿಷವೃಕ್ಷಮ್ ಪುಸ್ತಕದ ಮೂರು ಸಂಪುಟಗಳ ಮುನ್ನುಡಿ ಓದಿಯೇ ನಾವು ಮಾರ್ಕ್ಸ್ವಾದಿಗಳಾದೆವು ಎಂದು ಎಷ್ಟೋ ಓದುಗರು ಹೇಳಿದರು. 1980ರಲ್ಲಿ ಯಂಡಮೂರಿ ವೀರೇಂದ್ರನಾಥ್ ಬರೆದ ತುಳಸೀದಳ ಎಂಬ ಮೂಢನಂಬಿಕೆಯ ಕಥೆಯುಳ್ಳ ಕಾದಂಬರಿಗೆ ವೈದ್ಯರೂ ಲೇಖಕರೂ ಆಗಿದ್ದ ಕೊಮ್ಮುರಿ ವೇಣುಗೋಪಾಲ್ ರಾವ್ ಹೊಗಳಿ ಮುನ್ನುಡಿ ಬರೆದಾಗ ಅದನ್ನು ಖಂಡಿಸಿ ರಂಗನಾಯಕಮ್ಮ ತೀಕ್ಷ್ಣವಾಗಿ ಬರೆದಿದ್ದರು. ಇದೊಂದು ಕಾನೂನು ಸಮರಕ್ಕೆ ನಾಂದಿ ಆಗಿ ಸುಪ್ರೀಂ ಕೋರ್ಟ್ಗೂ ಹೋಯ್ತು. ರಾಮಾಯಣ ವಿಷವೃಕ್ಷಮ್ ಬರೆದ ಲೇಖಕಿ ಇವರೇ ಎಂದು ತಿಳಿದ ತಕ್ಷಣ ತೀರ್ಪು ಇವರ ವಿರುದ್ದ ಇರುತ್ತಿತ್ತು. ಈ ತೀರ್ಪುಗಳನ್ನೇ ಒಂದು ಪುಸ್ತಕವಾಗಿಸಿದ್ದಾರೆ.

ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಅಧ್ಯಾಪಕಿಯಾಗಿದ್ದ ವಿಜಯಾ ದಬ್ಬೆ ಅವರ ಕುರಿತು ಇರುವ ಲೇಖನ ಅವರ ಸ್ತ್ರೀ ಪರ ಹೋರಾಟದ ಸಮಗ್ರ ಪರಿಚಯ ನೀಡುತ್ತದೆ. ನನ್ನ ಅಧ್ಯಾಪಕಿಯೂ ಆಗಿದ್ದ ವಿಜಯಾ ದಬ್ಬೆ ಮೇಡಂ ಕನ್ನಡ ಸಾಹಿತ್ಯಕ್ಕೆ ಸ್ತ್ರೀವಾದಿ ಚಿಂತನೆಯನ್ನು ಪರಿಚಯಿಸಿದವರು. 1979ರಲ್ಲಿಯೇ ಸ್ತ್ರೀ ಯರಿಗೆ ಪ್ರವೇಶವಿಲ್ಲ ಎಂದು ತಾರತಮ್ಯ ಮಾಡುತ್ತಿದ್ದ ಚಾಮರಾಜನಗರ ತಾಲ್ಲೂಕಿನ ಕೊಂಗಳ್ಳಿ ದೇವಸ್ಥಾನ ಪ್ರವೇಶಿಸಿದವರು. ಬರಹಗಾರ್ತಿ, ಸಂಘಟಕಿ, ಅಧ್ಯಾಪಕಿ, ಸಂಶೋಧಕಿ ಹೋರಾಟಗಾರ್ತಿಯಾಗಿ ನಾನಾ ರಂಗಗಳಲ್ಲಿ ಕೆಲಸ ಮಾಡಿದವರು. ನಂಜನಗೂಡು ತಿರುಮಲಾಂಬ ಅವರ ಬರಹಗಳನ್ನು ಹಿತೈಷಿಣಿಯ ಹೆಜ್ಜೆಗಳು ಎಂದು ಪ್ರಕಟಿಸಿ ಮಹಿಳಾ ಸಾಹಿತ್ಯ ಚರಿತ್ರೆಯನ್ನು ಕಟ್ಟಿಕೊಟ್ಟವರು. ಕನ್ನಡಕ್ಕೆ ಪಾಶ್ಚಿಮಾತ್ಯ ಸ್ತ್ರೀ ವಾದಿಗಳನ್ನು ಪರಿಚಯಿಸಿದವರು. ಸ್ತ್ರೀ ಸಂವೇದನೆಯ ಮೂಲಕ ಸ್ತ್ರೀ ವಾದವನ್ನು ಎತ್ತಿ ತೋರಿಸುತ್ತಿದ್ದುದರಿಂದ ಅದು ಬರೀ ತಾತ್ವಿಕ ಪ್ರತಿಪಾದನೆ ಆಗದೆ ಬರಹಗಳಲ್ಲಿ ಅರಳಿಕೊಂಡಿತು ಎಂದು ಸರಿಯಾಗಿಯೇ ಗುರುತಿಸಿದ್ದಾರೆ ಅನುಪಮಾ. ತಮ್ಮ 46ನೆಯ ವಯಸ್ಸಿನಲ್ಲಿ ಅಪಘಾತಕ್ಕೀಡಾಗಿ ಸ್ಮೃತಿ ಕಳೆದುಕೊಂಡು ಕೆಲವು ವರ್ಷಗಳ ನಂತರ ಮರಣ ಹೊಂದಿದ ವಿಜಯಾ ದಬ್ಬೆ ತಾವು ಬರೆದ 25 ಪುಸ್ತಕಗಳು ಮತ್ತು ಸ್ತ್ರೀ ಪರ ಹೋರಾಟಗಳಿಂದ ಜೀವಂತವಾಗಿದ್ದಾರೆ.

ಸ್ತ್ರೀ ವಾದ ಎಂಬ ಪದವನ್ನು ಕನ್ನಡದಲ್ಲಿ ಮೊಟ್ಟಮೊದಲು ಬಳಸಿದ ಪುಸ್ತಕ `ಸ್ತ್ರೀ ವಾದ: ದಕ್ಷಿಣ ಏಷಿಯಾದಲ್ಲಿ ಅದರ ಪ್ರಸಕ್ತತೆ’. ಈ ಪುಸ್ತಕದ ಇಂಗ್ಲಿಷ್ ಮೂಲದ ಲೇಖಕಿ ಕಮಲಾ ಭಸೀನ್. ಸಹ ಲೇಖಕಿ ನಿಘಾತಾ ಸೈಯದ್ ಖಾನ್. ವೆಂ. ವನಜ ಮತ್ತು ಎಚ್. ಆರ್. ರಾಜೇಶ್ವರಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಪುಸ್ತಕದಲ್ಲಿ ಸ್ತ್ರೀ ವಾದ ಎಂದರೇನು ಎಂಬುದನ್ನು, ಭಾರತದಂತಹ ದೇಶಕ್ಕೆ ಸ್ತ್ರೀ ವಾದ ಎಷ್ಟರಮಟ್ಟಿಗೆ ಪ್ರಸ್ತುತವಾಗಿದೆ ಎಂಬುದನ್ನು ಪ್ರಶ್ನೋತ್ತರಗಳ ರೂಪದಲ್ಲಿ ನಿರೂಪಿಸಲಾಗಿದೆ. `ಇತರ ಎಲ್ಲಾ ವಾದಗಳಂತೆ ಸ್ತ್ರೀವಾದಕ್ಕೆ ಯಾವುದೇ ಒಂದು ತಾತ್ವಿಕ ಸೂತ್ರಗಳ ತಳಹದಿಯಿಂದ ಪಡೆದುಕೊಂಡ ತನ್ನದೇ ಆದ ತಾತ್ವಿಕ ಅಥವಾ ಭಾವನಾತ್ಮಕ ತಳಪಾಯ ಇಲ್ಲ. ಆದ್ದರಿಂದಲೇ ಎಲ್ಲಾ ಕಾಲಕ್ಕೂ ಎಲ್ಲಾ ಮಹಿಳೆಯರಿಗೂ ಅನ್ವಯಿಸುವಂತಹ ಯಾವುದೇ ನಿರ್ದಿಷ್ಟವಾದ ಸಂಕ್ಷಿಪ್ತ ಪರಿಭಾಷೆ ಸ್ತ್ರೀ ವಾದಕ್ಕಿಲ್ಲ. ಸ್ತ್ರೀ ವಾದದ ಪರಿಭಾಷೆ ಬದಲಾಗಬಹುದು, ಬದಲಾಗುತ್ತದೆ. ಕಾರಣ ಸ್ತ್ರೀವಾದ ಐತಿಹಾಸಿಕ ಮತ್ತು ಸಾಂಸ್ಕೃತಿಕವಾದ ವಾಸ್ತವ ಅಂಶಗಳನ್ನು ಹಾಗೂ ಪ್ರಜ್ಞೆ, ಗ್ರಹಿಕೆ, ಕ್ರಿಯೆಗಳ ವಿವಿಧ ಹಂತಗಳನ್ನು ಆಧರಿಸಿದೆ’. ಈ ವ್ಯಾಖ್ಯೆಯಲ್ಲಿ ಹೇಳಿರುವಂತೆ ಸ್ತ್ರೀ ವಾದದ ಪರಿಭಾಷೆ ಮುಂದೆ ಬದಲಾದುದನ್ನು ಕಾಣಬಹುದು. ಹೀಗೆ ಬರೆದ ಕಮಲಾ ಭಾಸಿನ್ ಕುರಿತು ಈ ಪುಸ್ತಕದಲ್ಲಿ ವಿವರವಾದ ಲೇಖನ ಇದೆ.

ಗ್ರಾಮೀಣ ಪ್ರದೇಶದಲ್ಲಿ ನೆಲೆಸಿ ವೈದ್ಯವೃತ್ತಿ ಮಾಡುತ್ತಿರುವ ಡಾಕ್ಟರ್ ಕಾವೇರಿ ನಂಬೀಶನ್ ಇಂಗ್ಲಿಷ್ ಕಾದಂಬರಿಕಾರರಾಗಿಯೂ ಪ್ರಸಿದ್ಧರು. ಐವತ್ತು ವರ್ಷಗಳ ಹಿಂದೆ ಇಂಗ್ಲೆಂಡ್‌ಗೆ ಹೋಗಿ ಉನ್ನತ ವಿದ್ಯಾಭ್ಯಾಸ ಮುಗಿಸಿ ಶಸ್ತ್ರಚಿಕಿತ್ಸಾ ತಜ್ಞೆಯಾಗಿ ಬಂದು ಬಿಹಾರದಲ್ಲಿ, ಕೇರಳದಲ್ಲಿ ವೈದ್ಯೆಯಾಗಿ ಕೆಲಸ ಮಾಡಿ ಈಗ ಕೊಡಗಿನ ತಮ್ಮ ಹುಟ್ಟೂರು ಪೊನ್ನಂಪೇಟೆಯಲ್ಲಿ ವೈದ್ಯ ವೃತ್ತಿ ನಡೆಸುತ್ತಾ ಸರಳ ಜೀವನ ನಡೆಸುತ್ತಿರುವ ಕಾವೇರಿ ಕೇಂದ್ರ ಸಚಿವರಾಗಿದ್ದ ಸಿ. ಎಂ. ಪೂಣಚ್ಚ ಅವರ ಮಗಳು. ಶ್ರೀಮಂತ ಕುಟುಂಬದ ಹಿನ್ನೆಲೆಯಿದ್ದರೂ ಗಾಂಧಿವಾದಿ ತಂದೆಯ ಪ್ರಭಾವದಿಂದ ಉದಾತ್ತ ಚಿಂತನೆಗಳನ್ನು ರೂಪಿಸಿಕೊಂಡ ಕಾವೇರಿ ತಮ್ಮ ಆದರ್ಶಗಳಿಗೆ ತಕ್ಕಂತೆ ಹಳ್ಳಿಯ ಜನರ ಸೇವೆ ಮಾಡುವ ಆದರ್ಶ ವೈದ್ಯೆ. ಮೆಚ್ಚಿ ಮದುವೆಯಾದ ಸಹಪಾಠಿ ವೈದ್ಯ ಡಾಕ್ಟರ್ ಭಟ್ ಅವರ ಜತೆ ಹೊಂದಾಣಿಕೆ ಆಗದೆ ತಾವು ಇಷ್ಟಪಟ್ಟ ಕವಿ ನಂಬೀಶನ್ ಅವರನ್ನು ಮದುವೆ ಆದರು. ಅನಾರೋಗ್ಯದಿಂದ ಪತಿ ತೀರಿಕೊಂಡ ಮೇಲೆ ಒಬ್ಬರೇ ಇದ್ದಾರೆ. ಬಹುಶಃ ಕನ್ನಡದಲ್ಲಿ ಕಾವೇರಿಯವರ ಕುರಿತ ಮೊದಲ ಲೇಖನ ಇದು. ವರ್ಗಪ್ರಜ್ಞೆಯನ್ನು ಮೀರಿ ಸಾಮಾನ್ಯ ಜನರ ವೈದ್ಯೆಯಾಗಿ, ಹೋರಾಟಗಾರ್ತಿ, ಲೇಖಕಿಯೂ ಆಗಿ ಯಶಸ್ವಿಯಾಗಿರುವ ಕಾವೇರಿಯವರ ವೈಯಕ್ತಿಕ ಬದುಕು ನೋವಿನಿಂದ ಕೂಡಿದೆ.

ಹೀಗೆ ವೃತ್ತಿಯಲ್ಲಿ ಯಶಸ್ವಿಯಾಗಿ ಕೌಟುಂಬಿಕ ಬದುಕಿನಲ್ಲಿ ನೋವು ಅನುಭವಿಸಿದ ಹಲವರ ಕಥೆಗಳು ಇಲ್ಲಿವೆ. ಇವೆಲ್ಲ ಒಟ್ಟಾಗಿ ಹೇಳುತ್ತಿರುವುದು ಒಂದು ಕಹಿ ಸತ್ಯವನ್ನು. ಹಿರಿಯ ಕವಿ ಸಾಂದರ್ಭಿಕವಾಗಿ "ಹೊಸಿಲಾಚೆಗೆ ನೀ ಹೋದರೆ ಹೊಸಿಲೀಚೆಗೆ ಬೆಳಕಿಲ್ಲ" ಎಂದು ಐದಾರು ದಶಕಗಳ ಹಿಂದೆ ಬರೆದ ಮಾತುಗಳು ಇಂದಿಗೂ ನಿಜವಾಗಿರುವುದು ದುರಂತ. ಈ ಹಿನ್ನೆಲೆಯಲ್ಲಿ ಪುರುಷರ ಸಾಧನೆಗಳು ಅವರ ಕುಟುಂಬ ಸೌಖ್ಯಕ್ಕೆ ಅಡ್ಡಿಯಲ್ಲ ಎಂಬ ತಿಳಿವಳಿಕೆ ಇಂದಿಗೂ ಇರುವುದು ಚಿಂತನೆ ಮಾಡಬೇಕಾದ ವಿಷಯವಾಗಿದೆ.

ಡಾ. ಕಾವೇರಿ ಹೇಳುವಂತೆ ಅನುಪಮಾ ಸಹ ವರ್ಗ ಮತ್ತು ಜಾತಿಪ್ರಜ್ಞೆಯಿಂದ ಹೊರಬಂದರೆ ಮಾತ್ರ ಸಾಮಾಜಿಕ ಹೋರಾಟ ಮಾಡಲು ಸಾಧ್ಯ ಎಂದು ನಂಬಿದವರು. ವೈಚಾರಿಕ ಸ್ಪಷ್ಟತೆ ಹೊಂದಿರುವ ಅಪ್ಪಟ ಮಾನವತಾವಾದಿ ವೈದ್ಯೆ ಮತ್ತು ಲೇಖಕಿ ಅನುಪಮಾ ಅವರ ಈ ಪುಸ್ತಕ ಕನ್ನಡ ಓದುಗರಿಗೆ ಉಪಯುಕ್ತ ಪುಸ್ತಕ ಆಗಲಿದೆ.

ಇಲ್ಲಿ ಮಾದರಿ ವ್ಯಕ್ತಿತ್ವಗಳ ಕುರಿತ ಚಿತ್ರಗಳಿರುವಂತೆ ಹೇಗಿರಬಾರದು ಅನ್ನುವುದನ್ನು ಹೇಳಲು ಮಾ ಶೀಲಾ ತರಹದವರ ಕಥೆಗಳಿವೆ. (ಮಾ ಆಗದ ಆನಂದ ಶೀಲಾ). ಒಂಟಿ ತಾಯಿಯಾಗಿ ಮಗಳನ್ನು ಸಾಕಿದ ನೀನಾ ಗುಪ್ತಾ ಕುರಿತ ಲೇಖನವಿದೆ. ಕನ್ನಡ ಸಾಹಿತ್ಯ ವಲಯದಲ್ಲಿ ಸಂಚಲನ ಮೂಡಿಸಿದ್ದ ನಮ್ಮ ಬಿಜಾಪುರದ ನಜ್ಮಾ ಬಾಂಗಿ ಕುರಿತ ಲೇಖನ, ಸಂದರ್ಶನವಿದೆ. ಸ್ವಾತಂತ್ರದ ತುಡಿತದಲ್ಲಿ ಸಮಾಜದ ಕಟ್ಟುಪಾಡುಗಳನ್ನು ಮೀರಿದ ಸ್ತ್ರೀಯರ ಯಶಸ್ಸಿನ ಕತೆಗಳನ್ನು ನಿರೂಪಿಸುವ ಮೂಲಕ ಲೇಖಕಿ ಇವತ್ತಿನ ಓದುಗರಿಗೆ ಬಹುಮೂಲ್ಯ ಸಂದೇಶವನ್ನು ನೀಡಿದ್ದಾರೆ.

MORE FEATURES

ಮರೆತು ಹೋದ ವಾಸ್ತವಗಳಿಗೆ ಬರಹದ ರೂಪ ಕೊಟ್ಟಿರುವುದು ಆಕಸ್ಮಿಕ: ಶ್ರೀಧರ್ ನಾಯಕ್

21-10-2024 ಬೆಂಗಳೂರು

“ನಾನು ಹತ್ತು ಹಲವು ಹವ್ಯಾಸಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಪುಸ್ತಕಗಳ ಓದು, ಪ್ರವಾಸ, ಛಾಯಾಚಿತ್ರಗ್ರಹಣ, ಇಂಗ್ಲಿ...

'ಸದರಬಜಾ‌ರ್' ಕಾದಂಬರಿಯ ವಸ್ತು ಎಂಬತ್ತನೆಯ ದಶಕದ್ದು

21-10-2024 ಬೆಂಗಳೂರು

“ಬೃಹತ್ ಕಾದಂಬರಿಯ ರಚನೆಯನ್ನು ಕೈಗೆತ್ತಿಕೊಳ್ಳುವ ಮುನ್ನ ಕ್ರಿಕೆಟ್ ಪರಿಭಾಷೆಯಲ್ಲಿ ಹೇಳುವಂತೆ, ಟೆಸ್ಟ್ ಕ್ರಿಕೆಟ...

ಹೂವು-ಹಣ್ಣು-ಹಸಿರು ತರಕಾರಿಗಳಿಲ್ಲದ ಜೀವನ ಬೇಗೆಯ ಬರಡು..

20-10-2024 ಬೆಂಗಳೂರು

“ಕಾಡು ನಾಡಾಗುತ್ತಿದೆ, ಹೊಲಗದ್ದೆಗಳು ನಿವೇಶನಗಳಾಗುತ್ತಿವೆ. ನೆಲದ ಕಸುವು ಇಲ್ಲವಾಗುತ್ತಿದೆ. ಬಗೆಬಗೆಯ ಹಣ್ಣು, ತ...