Date: 26-04-2020
Location: ಬೆಂಗಳೂರು
ಅನುಭವ ಮಂಟಪದ ಹಿನ್ನೆಲೆ ಮತ್ತು ಪರಿಕಲ್ಪನೆ
ವರ್ಣ, ಜಾತಿ, ಅಸ್ಪೃಶ್ಯತೆಯಿಂದ ಕೂಡಿದ ಸಮಾಜದಲ್ಲಿ ಶರಣ ಸಂಕುಲವೆಂಬ ನವಸಮಾಜ ಸ್ಥಾಪಿಸುವುದರ ಮೂಲಕ ಬಸವಣ್ಣನವರು 12ನೇ ಶತಮಾನವನ್ನು ಸಮಾನತೆಯ ಶತಮಾನವಾಗಿ ರೂಪಿಸಿದರು.
ವಿವಿಧ ಸಾಮಾಜಿಕ ಸ್ತರಗಳಿಂದ ಬಂದಂಥ ಕಾಯಕ ಜೀವಿ ಶರಣರ ಪ್ರತಿನಿಧಿಗಳಾದ 770 ಅಮರಗಣಂಗಳು ಅನುಭವ ಮಂಟಪದಲ್ಲಿ ಸೇರಿ ಜೀವನ ದರ್ಶನಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚಿಸುತ್ತಿದ್ದರು. ಬಸವಣ್ಣನವರು ‘ಅನುಭವ ಮಂಟಪ’ದ ಸಂಸ್ಥಾಪಕರು. ಅನುಭವ ಮಂಟಪದ ಮೂಸೆಯಲ್ಲಿ ಹೊರಮೊಮ್ಮಿದ ಶರಣರ ವಚನಗಳಲ್ಲಿ ಪ್ರಜಾ ಪ್ರಭುತ್ವವಿದೆ, ಸಂವಿಧಾನವಿದೆ, ಮಾನವಹಕ್ಕುಗಳಿವೆ, ಅಭಿವ್ಯಕ್ತಿ ಸ್ವಾತಂತ್ರವಿದೆ, ಲಿಂಗಭೇದ, ವರ್ಗಭೇದ ಮತ್ತು ಜಾತಿಬೇರುಗಳನ್ನು ಅಳಿಸಿಹಾಕುವಂಥ ಸಮಾನತೆಯ ತತ್ವಗಳಿಗೆ.
12ನೆಯ ಶತಮಾನದ ವಚನಕಾರರ ಮುಕ್ತವೇದಿಕೆಯಾಗಿದ್ದ ಅನುಭವ ಮಂಟಪವು ವರ್ಗ-ವರ್ಣ-ಲಿಂಗ, ಜಾತಿಗಳಲ್ಲಿ ಸಮಾನತೆಯನ್ನು ಬೆಸೆಯುವ ಕ್ರಿಯೆಯೊಂದಿಗೆ ಮಾನವತೆಯ ಸ್ನೇಹಸೇತುವೆಯಾಗಿ ನಿಂತಿತು.
ಶರಣರ ವಚನಗಳಲ್ಲಿ ‘ಮಹಾಮನೆ’ ಎಂಬ ಪರ‍್ಯಾಯ ಹೆಸರಿನಿಂದ ಅನೇಕ ಶರಣರ ವಚನಗಳಲ್ಲಿ ಅನುಭವ ಮಂಟಪದ ಉಲ್ಲೇಖವಾಗಿದೆ. ವಿಚಾರ ಮಂಟಪ, ವಿಶಾಲ ಮಂಟಪ, ಆಚಾರ ಸಂಪನ್ನರ ಮಂಟಪ, ಪ್ರಕಾಶ ಮಂಟಪ, ಪ್ರಸಾದ ಮಂಟಪ; ಹೀಗೆ ಅನೇಕ ಹೆಸರುಗಳಿಂದ ಕಾಲಜ್ಞಾನ ವಚನಗಳಲ್ಲಿ ಅನುಭವ ಮಂಟಪದ ಉಲ್ಲೇಖಗಳು ಕಾಣಸಿಗುತ್ತದೆ. ‘ಶಿವಾನುಭವ ಮಂಟಪ’ವೆಂದು ಇದರ ಹೆಸರಿದ್ದದ್ದು ವಿಶದವಾಗುತ್ತದೆ ಎಂದಿದ್ದಾರೆ ಉತ್ತಂಗಿ ಚನ್ನಪ್ಪನವರು. ಇಂಥ ಅನುಭವ ಮಂಟಪ ಬಸವಣ್ಣನವರ ಕಾಲದಲ್ಲಿ ಅನನ್ಯವಾಗಿದ್ದು, ಕಲ್ಯಾಣ ಕ್ರಾಂತಿಯ ನಂತರ ಅವಸಾನಗೊಂಡಂತಿದೆ. ‘ಶೂನ್ಯ ಸಂಪಾದನೆಕಾರ’ರಲ್ಲಿ ಕಾಣಸಿಗುವ ಇದನ್ನು 16ನೆಯ ಶತಮಾನದಲ್ಲಿ ತೋಂಟದ ಸಿದ್ಧಲಿಂಗ ಯತಿಗಳು ಮತ್ತೆ ಅಸ್ತಿತ್ವಕ್ಕೆ ತಂದದ್ದು ತಿಳಿದುಬರುತ್ತದೆ. ಆ ಕಾಲದಲ್ಲಿ ಯತಿಗಳು ಸಂಚರಿಸಿದ ಅನೇಕ ಗ್ರಾಮಗಳಲ್ಲಿ ‘ಸಂಚಾರಿ ಅನುಭವ ಮಂಟಪ’ವನ್ನು ರೂಢಿಗೆ ತಂದರು.
ಅನುಭಾವಿಗಳು ಕಂಡAತೆ ಅನುಭವ ಮಂಟಪ ಪರಿಕಲ್ಪನೆ
ಅನುಭವದ ವಿನಿಮಯಕ್ಕಾಗಿ ಶಿವಾನುಭವಿಗಳು ಯಾವ ಸ್ಥಳದಲ್ಲಿ ಸಭೆಯಾಗಿ ಕೂಡಿಬರುವರೋ ಅದೇ ‘ಅನುಭವ ಮಂಟಪ’. ಬಸವಣ್ಣನವರ ಅರಮನೆಯಲ್ಲಿ ಶರಣರು ಚರ್ಚಿಸಲು ಮತ್ತು ತಮ್ಮ ಅನುಭಾವವನ್ನು ಹಂಚಿಕೊಳ್ಳುವುದಕ್ಕಾಗಿ ಸೇರುತ್ತಿದ್ದ ಸ್ಥಳಕ್ಕೆ ‘ಅನುಭವ ಮಂಟಪ’ವೆಂದು ‘ಶೂನ್ಯ ಸಂಪಾದನೆ’ ಗ್ರಂಥಗಳು ಹೇಳುತ್ತವೆ (ಅನುಭವವೆಂಬುದು ಮನಸ್ಸಿನ ಆಳವಾದ ಧ್ಯಾನಶೀಲಸ್ಥಿತಿ). 1162ರಲ್ಲಿ ಅಲ್ಲಮಪ್ರಭು ಅಲಂಕರಿಸಿದ್ದನೆಂದು ಹೇಳುವ ‘ಶೂನ್ಯಸಿಂಹಾಸನ’ವೂ ಅಲ್ಲಿ ಇತ್ತೆಂದು ಅವುಗಳಲ್ಲಿ ಹೇಳಲಾಗಿದೆ. ಬಸವಣ್ಣನವರ ‘ಅರಮನೆ’ ಮತ್ತು ‘ಶೂನ್ಯಸಿಂಹಾಸನ’ಗಳು ಮಾಣಿಕ್ಯ, ರತ್ನ ವಜ್ರಗಳಿಂದ ಅಲಂಕರಿಸಲ್ಪಟ್ಟು ಬಂಗಾರದಿಂದ ಹೊಂದಿಸಲ್ಪಟ್ಟಿದ್ದವೆಂದು ಗುಮ್ಮಳಾಪುರದ ಸಿದ್ಧಲಿಂಗ ಯತಿಯ ಶೂನ್ಯಸಂಪಾದನೆಯಲ್ಲಿ (1580) ಬಣ್ಣಿಸಲಾಗಿದೆ.
12ನೆಯ ಶತಮಾನದ ವಚನಗಳಲ್ಲಿ ‘ಅನುಭವ ಮಂಟಪ’ ಮತ್ತು ‘ಶೂನ್ಯಸಿಂಹಾಸನ’ ಕುರಿತು ಉಲ್ಲೇಖಗಳು ಸಿಗುತ್ತವೆ. ಕಲ್ಯಾಣಕ್ರಾಂತಿಯಾಗಿ ಶಿವಶರಣರು ಬೇರೆ ಬೇರೆ ಪ್ರದೇಶಗಳಿಗೆ ವಚನಗಳ ಗಂಟುಗಳೊಂದಿಗೆ ಹೊರಟುಹೋದ ಸ್ವಲ್ಪೇ ಸಮಯದಲ್ಲಿ ಕಾಲಜ್ಞಾನ ವಚನಗಳು ಬರೆಯಲ್ಪಟ್ಟಿರಬೇಕು ಎನ್ನಲಾಗಿದೆ. ಶಿವಶರಣರು ‘ಅನುಭವ ಮಂಟಪ’ ಕುರಿತು ಕಾಲಜ್ಞಾನ ವಚನಗಳಲ್ಲಿ ಬೇರೆ ಬೇರೆ ಹೆಸರಿನಿಂದ ಕರೆದಿದ್ದಾರೆ. ಡಾ. ಫ.ಗು. ಹಳಕಟ್ಟಿಯವರು ಸಂಪಾದಿಸಿದ ‘ಕಾಲಜ್ಞಾನ ವಚನಗಳು’ ಕೃತಿಯಲ್ಲಿ ವಿಚಾರ ಮಂಟಪ (ಪು.2), ವಿಶಾಲ ಮಂಟಪ, ಆಚಾರ ಸಂಪನ್ನರ ಅನುಭವ ಮಂಟಪ (ಪು.3), ಪ್ರಕಾಶ ಮಂಟಪ, ಜ್ಞಾನಪ್ರಕಾಶ ಮಂಟಪ (ಪು.4), ಪ್ರಸಾದಮಂಟಪ (ಪು.12) ಎಲ್ಲ ದೇವರ ಮಂಟಪ ಎಂಬಿತ್ಯಾದಿ ಹೆಸರುಗಳಿಂದ ಕರೆಯಲಾಗಿದೆ. ಬಸವಣ್ಣನವರ ವಚನಗಳಲ್ಲಿ ಅನುಭವ ಮಂಟಪಕ್ಕೆ ‘ಮಹಾಮನೆ’ (ನಮ್ಮ ಕೂಡಲಸಂಗನ ಮಹಾಮನೆಯಲು ಮಾದಾರ ಚೆನ್ನಯ್ಯ ಹೊಲಬಿಗನಯ್ಯಾ-ವಚನ 135) ಎಂದು ಕರೆದಿದ್ದಾರೆ. ಪ್ರಭುದೇವರ ವಚನಗಳಲ್ಲೂ ಅನುಭವ ಮಂಟಪಕ್ಕೆ ‘ಮಹಾಮನೆ’ ಎಂಬ ಪದವೇ (ಬಟ್ಟಬಯಲ ಮಹಾಮನೆಯೊಳಗೊಂದು ಹುಟ್ಟದ, ಹೊಂದದ ಶಿಶುವ ಕಂಡೆ-ವಚನ 1007) ಉಪಯೋಗವಾಗಿದೆ. ಹರಿಹರ ಮಹಾಕವಿಯು ತನ್ನ ‘ಬಸವರಾಜ ದೇವರ ರಗಳೆ’ಯಲ್ಲಿ ಅನುಭವ ಮಂಟಪಕ್ಕೆ ‘ಮಹಾಮನೆ’ ಎಂಬ ಪದವನ್ನು (ಬಿಜ್ಜಳರಾಯನೊಡನಾಪ್ತವಚನ ರಚಿತ ಮಂತ್ರಾಲೋಚನೆ ಇಂದಿನಿತು ಬೇಗಮಿರ್ದುಪೊರಮಟ್ಟು ತನ್ನ ಮಹಾಮನೆಗೆ ಬಪ್ಪಲ್ಲಿ-ಸ್ಥಳ 6, ವಚನ 30, ಪುಟ 13) ಪ್ರಯೋಗಿಸಿದ್ದಾನೆ. ಹರಿಹರ ಕವಿಯ ಸಮಕಾಲೀನನಾದ ಪಾಲ್ಕುರಿಕೆ ಸೋಮನಾಥ (1230) ತೆಲುಗಿನಲ್ಲಿ ‘ಬಸವ ಪುರಾಣ’ವನ್ನು ಬರೆದಿದ್ದು, ಇದನ್ನು ಭೀಮಕವಿಯು (1369) ಕನ್ನಡಕ್ಕೆ ಅನುವಾದಿಸಿದ್ದಾನೆ. ಇದರಲ್ಲೂ ಸಹ ‘ಅನುಭವ ಮಂಟಪ’ ಶಬ್ದಕ್ಕೆ ಸಂವಾದಿಯಾದ ‘ಮಹಾ ಒಡ್ಡೋಲಗ’ ‘ಓಲಗ’ ‘ಪುರಾತನರ ಸಮಿತಿ’ ‘ಭವನ ಮಂಟಪ’ ಮುಂತಾದ ಪದಗಳು ಉಪಯೋಗಿಸಲ್ಪಟ್ಟಿವೆ.
ಅನುಭವ ಮಂಟಪ ಎಂಬುದೊಂದು ಸಾರ್ವಜನಿಕ ಸಂಸ್ಥೆಯಾಗಿತ್ತು. ಧಾರ್ಮಿಕ, ಸಾಮಾಜಿಕ, ಆರ್ಥಿಕ ಮುಂತಾದ ನಿತ್ಯಜೀವನದ ಸಮಸ್ಯೆಗಳ ತಲಸ್ಪರ್ಶಿ ಚರ್ಚೆ ಇಲ್ಲಿ ನಡೆಯುತ್ತಿತ್ತು. ಭಾಗವಹಿಸಲು ಎಲ್ಲರಿಗೂ ಮುಕ್ತ ಅವಕಾಶವಿತ್ತು. ಜಾತೀಯತೆ, ಮೂಢನಂಬಿಕೆ, ಕಂದಾಚಾರ, ಸ್ತ್ರೀಸ್ವಾತಂತ್ರ ಬಡತನ, ನಿರುದ್ಯೋಗಾದಿಗಳ ಬಗ್ಗೆ ಸುದೀರ್ಘವಾಗಿ ಚಿಂತನ-ಮಂಥನ ನಡೆಸಲಾಗುತ್ತಿತ್ತು. ಕೊನೆಯಲ್ಲಿ ಸತ್ಯನಿಷ್ಟವಾದ ನಿರ್ಣಯವನ್ನು ವಚನ ರೂಪದಲ್ಲಿ ಅಭಿವ್ಯಕ್ತಿಸಲಾಗುತ್ತಿತ್ತು. ಇದನ್ನು ಓಲೆಗರಿಯಲ್ಲಿ ಬರೆದಿಡುವ, ಸಂಗ್ರಹಿಸಿಡುವ ಕೆಲಸವೂ ಅಚ್ಚುಕಟ್ಟಾಗಿತ್ತು. ಇದೇ ಮೊದಲನೆ ಸಾರ್ವಜನಿಕ ಗ್ರಂಥಾಲಯ ಎನ್ನಲಾಗಿದೆ.
ಸಂಸತ್ತಿನ ಮೂಲ ಅನುಭವ ಮಂಟಪ
ಬಸವಣ್ಣನವರು ಸಂಸತ್ತಿನ ಪರಿಕಲ್ಪನೆಯನ್ನು ಮೂಡಿಸಿದ ಮಹಾಜ್ಞಾನಿ. ಮಹಿಳೆಯರೂ ಸೇರಿದಂತೆ ವಿವಿಧ ಸಮಾಜಗಳ ಹಿನ್ನೆಲೆಯಿಂದ ಬಂದ ನಾಯಕರಾದ 770 ಅಮರಗಣಂಗಳ ಮೂಲಕ ಅನುಭವ ಮಂಟಪ ಎಂಬ ಸಮಾಜೋ ಧಾರ್ಮಿಕ ಸಂಸಸ್ತಿನ ಮೂಲಕ ವಿಶ್ವದಲ್ಲಿ ಮೊದಲ ಬಾರಿಗೆ ಸಮೂಹ ನಾಯಕತ್ವದ ಕಲ್ಪನೆ ಮೂಡಿಸಿದರು. ಜಗತ್ತಿನ ಯಾವ ದೇಶಗಳಲ್ಲೂ ಸಂವಿಧಾನದ ಕನಸು ಬೀಳದ ಸಂದರ್ಭದಲ್ಲಿ ಆಧುನಿಕ ಸಂವಿಧಾನಗಳಿಗೆ ಬೀಜಸ್ವರೂಪವಾದಂಥ ಅಂಶಗಳನ್ನು ವಚನಗಳಲ್ಲಿ ಸೃಷ್ಟಿಸಿದರು. ಅನುಭವ ಮಂಟಪದ ಜೊತೆಯಲ್ಲೇ ಒಳಜಗತ್ತಿಗೆ ಸಂಬಂಧಿಸಿದ ‘ಅರಿವಿನ ಮನೆ’ ಮತ್ತು ಹೊರ ಜಗತ್ತಿಗೆ ಸಂಬಂಧಿಸಿದ ‘ಮಹಾಮನೆ’ಗಳ ಸ್ಥಾಪನೆ ಮಾಡಿದರು. ಅರಿವಿನ ಮನೆ ಇಷ್ಟಲಿಂಗಯೋಗಕ್ಕೆ ಸಂಬಂಧಿಸಿದ್ದರೆ ಮಹಾಮನೆ ಸಮಾಜವೆಂಬ ಜಂಗಮಲಿಂಗದ ಯೋಗಕ್ಷೇಮಕ್ಕೆ ಸಂಬಂಧಿಸಿತ್ತು.
ಕಾಯಕಜೀವಿಗಳನ್ನು ಸಂಘಟಿಸುವುದರ ಮೂಲಕ ಬಸವಣ್ಣನವರು ದುಡಿಯುವ ವರ್ಗದ ಮೊದಲ ನಾಯಕರಾದರು. ಆದರೆ, ಅವರು ತಮ್ಮ ನಾಯಕತ್ವವನ್ನು ಸಮೂಹ ನಾಯಕತ್ವವಾಗಿ ಪರಿವರ್ತಿಸಿದರು. ವಿಶ್ವದಲ್ಲಿ ಮೊದಲ ಬಾರಿಗೆ ಸಮೂಹ ನಾಯಕತ್ವದ ಪರಿಕಲ್ಪನೆಯನ್ನು ಸಾಕಾರಗೊಳಿಸಿದರು. ಅಲ್ಲಿಯವರೆಗೆ ಜಗತ್ತಿನ ಯಾವ ದಾರ್ಶನಿಕನಿಗೂ ಸಮೂಹ ನಾಯಕತ್ವದ ಕಲ್ಪನೆ ಮೂಡಿರಲಿಲ್ಲ. ಅನುಭವ ಮಂಟಪದ 770 ಅಮರಗಣಂಗಳೇ ಆ ಸಮೂಹ ನಾಯಕರು. ಇಲ್ಲಿನ ಬಹುಪಾಲು ನಾಯಕರೆಲ್ಲ ವಿವಿಧ ಸಾಮಾಜಿಕ ಸ್ತರಗಳಿಂದ ಬಂದ ಕಾಯಕಜೀವಿಗಳಾದ ಶರಣ-ಶರಣೆಯರಾಗಿದ್ದರು. ಇವರೆಲ್ಲ ಅನುಭವ ಮಂಟಪವೆಂಬ ಸಮಾಜೋ-ಧಾರ್ಮಿಕ ಸಂಸತ್ತಿನ ಸದಸ್ಯರಾಗಿದ್ದರು. ಹೀಗೆ ಜಗತ್ತಿನಲ್ಲಿ ಮೊದಲಬಾರಿಗೆ ಸಂಸತ್ತಿನ ಪರಿಕಲ್ಪನೆ ಮೂಡಿದ್ದು ಕಲ್ಯಾಣ ಕರ್ನಾಟಕದಲ್ಲಿ.
ವಿಶ್ವಸಂಸ್ಥೆ ಘೋಷಿಸಿದ ಮಾವನಹಕ್ಕುಗಳಲ್ಲಿನ ಬಹುತೇಕ ಅಂಶಗಳು ನಮ್ಮ ಶರಣರ ವಚನಗಳಲ್ಲಿವೆ. ಬಸವಣ್ಣನವರು 12ನೆಯ ಶತಮಾನದಲ್ಲೇ ಮಾನವಹಕ್ಕುಗಳ ಪ್ರತಿಪಾದನೆ ಮಾಡುವುದರ ಮೂಲಕ ಸರ್ವೋದಯದ ಪರಿಕಲ್ಪನೆಯನ್ನು ಕೊಟ್ಟಿದ್ದಾರೆ. ವಿಶ್ವಸಂಸ್ಥೆಯ ಮಾನವಹಕ್ಕುಗಳ ಪ್ರಕಾರ ದಾಂಪತ್ಯದಿಂದ ಜನಿಸಿದ ಹಕ್ಕು ಮತ್ತು ಅನೈತಿಕ ಸಂಬಂಧದಿಂದ ಜನಿಸಿದ ಮಗುವಿನ ಹಕ್ಕಿನಲ್ಲಿ ವ್ಯತ್ಯಾಸವಿಲ್ಲ. ಈ ಅಂಶಗಳು ಬಸವಣ್ಣನವರ ವಚನಗಳಲ್ಲಿವೆ. ವರ್ಗರಹಿತ ಪರ‍್ಯಾಯ ಸಮಾಜ ನಿರ್ಮಾಣಕ್ಕೆ ಅನುಭವ ಮಂಟಪ ಸಹಕಾರಿಯಾಗಿದೆ. ‘ರಾಜಾ ಕಾಲಸ್ಯ ಕಾರಣ’ವೆಂಬ ಪಾರಂಪರಿಕ ನಡವಳಿಕೆಯನ್ನು ಕಿತ್ತೊಗೆದು ರಾಜಾ ಪ್ರಜಾಕಲ್ಯಾಣಸ್ಯ ಕಾರಣವೆಂಬ ನೀತಿಯನ್ನು ಅಧಿಕೃತಗೊಳಿಸಿತು. ಅನುಭವ ಮಂಟಪವು ಆಳು-ಅರಸು, ಬಡವ-ಶ್ರೀಮಂತ, ಶ್ರೇಷ್ಠ-ಕನಿಷ್ಠ ಎಂಬಿತ್ಯಾದಿ ಅಂತರಗಳನ್ನು ಖಂಡಿಸಿತು. ‘ಆನೀ ಬಿಜ್ಜಳಂಗೆ ಅಂಜುವೆನೆ ಅಯ್ಯಾ’ ‘ಆಸೆಯೆಂಬುದು ಅರಸಂಗಲ್ಲದೆ ಶಿವಭಕ್ತರಿಗುಂಟೆ ಅಯ್ಯಾ’ ಎಂದೆಲ್ಲ ಹೇಳಿ ರಾಜಶಕ್ತಿಯನ್ನು ಪ್ರಶ್ನಿಸುವ, ವಿಡಂಬಿಸುವ, ವಿಮರ್ಶಿಸುವ ನಿರ್ಭಯ ವಾತಾವರಣಕ್ಕೆ ಭೂಮಿಕೆಯನ್ನೊದಗಿಸಿತು. ಮಡಿವಾಳ ಮಾಚಿದೇವರು ಬಿಜ್ಜಳನ ಪಟ್ಟದಾನೆಯನ್ನು ತುಳಿದು ಹಾಕಿದುದು, ಕೊಂಡಗುಳಿ ಕೇಶಿರಾಜ ತುಂಬಿದ ರಾಜಸಭೆಯಲ್ಲಿ ಸಚಿವ ಪದವಿಯನ್ನು ತ್ಯಜಿಸಿದುದು ನಿರ್ಭೀತ ವಾತಾವರಣಕ್ಕೆ ಹಿಡಿದ ಸಾಕ್ಷಿಗಳಾಗಿವೆ.
ಅಕ್ಷರದಿಂದ ದೃಶ್ಯರೂಪಕ್ಕೆ ಅನುಭವ ಮಂಟಪ
ಇಂಥದೊಂದು ವಿಶಿಷ್ಟ ಪರಿಕಲ್ಪನೆಯ ಅನುಭವ ಮಂಟಪವನ್ನು ಅಕ್ಷರದಿಂದ ದೃಶ್ಯರೂಪಕ್ಕೆ ತಂದವರು ನಮ್ಮ ಕಲಾವಿದರು. ಸುರಪುರ ಆಸ್ಥಾನ ಕಲಾವಿದ ವಂಶಸ್ಥ ಗರುಡಾದ್ರಿ ಬೆನಕಯ್ಯ, ಕಲ್ಯಾಣ ಪಟ್ಟಣ ಸಹಿತ ಬಸವಾದಿ ಪ್ರಮಥರು, ಸೊನ್ನಲಾಪುರದ ಸಿದ್ಧರಾಮರನ್ನು ಒಳಗೊಂಡಂತೆ ಶೂನ್ಯಸಿಂಹಾಸನಾಧೀಶ ಅಲ್ಲಮ ಪ್ರಭುಗಳು ಇರುವ ವರ್ಣಚಿತ್ರವನ್ನು ಬರೆಯುವ ಮೂಲಕ ಅನುಭವ ಮಂಟಪ ಪರಿಕಲ್ಪನೆಯನ್ನು ಮೊದಲ ಬಾರಿಗೆ ದೃಶ್ಯರೂಪಕ್ಕೆ ತಂದಿದ್ದಾರೆ ಎನ್ನಲಾಗಿದೆ. ತದನಂತರ ಮತ್ತೆ ಕೆಲ ಚಿತ್ರಕಾರರು ಅನುಭವ ಮಂಟಪವನ್ನು ದೃಶ್ಯರೂಪಕ್ಕೆ ತರುವ ಪ್ರಯತ್ನ ಮಾಡಿದ್ದಾರೆ. ಖಂಡೇರಾವರು ಚಿತ್ರಿಸಿರುವ ಅನುಭವ ಮಂಟಪ ವರ್ಣಚಿತ್ರವು ಕಲ್ಯಾಣ ನಾಡಿನ ಸಾಂಸ್ಕೃತಿಕ, ಸಮಾಜೋ-ಧಾರ್ಮಿಕ ಪರಿಕಲ್ಪನೆಯನ್ನು ದೃಶ್ಯಪರಿಭಾಷೆಯ ಒಳಾರ್ಥಗಳನ್ನೂ ಒಳಗೊಂಡಂತೆ ಆಕಾರ ನಿರೂಪಣೆಯಲ್ಲಿನ ಅಭಿವ್ಯಕ್ತಿಯಿಂದಾಗಿ ವಿಶೇಷ ಮಹತ್ವ ಪಡೆದುಕೊಳ್ಳುತ್ತದೆ. ಬೆನಕಯ್ಯ ಬರೆದ ಕಲಾಕೃತಿ ಸಾಂಪ್ರದಾಯಿಕ ನೆಲೆಯಲ್ಲಿ ಮೂಡಿಬಂದಿದ್ದರೆ, ಖಂಡೇರಾವರು ಬರೆದ ವರ್ಣಚಿತ್ರ ವಾಸ್ತವ ಚಿತ್ರಣಶೈಲಿಯಲ್ಲಿದೆ.
ಅಕ್ಷರರೂಪದಲ್ಲಿದ್ದ ಅನುಭವ ಮಂಪಟವನ್ನು ದೃಶ್ಯರೂಪಕ್ಕೆ ತರುವ ಆಸೆಯನ್ನು ಖಂಡೇರಾವರ ಮನದಲ್ಲಿ ಬಿತ್ತಿದವರು ಕಲಬುರಗಿಯ ಶ್ರೀ ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿಗಳೂ ಆಗಿರುವ ಪೂಜ್ಯ ಡಾ. ಶರಣಬಸವಪ್ಪ ಅಪ್ಪ ಅವರು. 2002-03ರಲ್ಲಿ ಆಗಿನ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಮತ್ತವರ ಸಂಪುಟ ಸದಸ್ಯರ ಸಮ್ಮುಖದಲ್ಲಿ ರಾಷ್ಟ್ರಪತಿಗಳಾಗಿದ್ದ ದಿವಂಗತ ಡಾ. ಎ.ಪಿ.ಜೆ. ಅಬ್ದುಲ್ ಕಲಾಮ್ ಅವರು ಸಂಸತ್ತು ಆವರಣದಲ್ಲಿ ಮಹಾತ್ಮ ಬಸವೇಶ್ವರರ ಮೂರ್ತಿ ಅನಾವರಣ ಮಾಡಿದ್ದರು. ಈ ವೇಳೆ ಖಂಡೇರಾವರು ಚಿತ್ರಿಸಿರುವ ಅನುಭವ ಮಂಟಪ ವರ್ಣಚಿತ್ರವನ್ನು ಪ್ರದರ್ಶನಕ್ಕೆ ಇಡಲಾಗಿದ್ದು, ಮಾನ್ಯ ರಾಷ್ಟ್ರಪತಿಗಳು ಈ ವರ್ಣಚಿತ್ರವನ್ನು ಮನವಾರೆ ಪ್ರಶಂಶಿಸಿದ್ದಿದೆ. ಇದು ಖಂಡೇರಾವರ ಕಲಾಕೃಷಿಗೆ ಹೊಸ ಚೈತನ್ಯವನ್ನು ನೀಡಿತಲ್ಲದೇ ಇನ್ನೊಂದು ಬೃಹದಾಕಾರದ ವರ್ಣಚಿತ್ರ ರೂಪುಗೊಳ್ಳಲು ಕಾರಣವಾಯಿತು.
ಮಾನ್ಯ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರು ಸಂಸತ್ತಿನ ಅಧಿವೇಶನ ಸೇರಿದಂತೆ ವಿಶ್ವದ ಹಲವೆಡೆ ಭೇಟಿಯಿತ್ತಾಗ ಮಹಾಮಾನವತಾವಾದಿ ಬಸವಣ್ಣನವರು ಮತ್ತು ಅನುಭವ ಮಂಟಪದ ಬಗೆಗೆ ಉಲ್ಲೇಖಿಸುತ್ತಲೇ ಬಂದಿದ್ದಾರೆ. ಅವರ ಮಾತುಗಳೂ ಸಹ ಪ್ರಸ್ತುತ ಕೃತಿರಚನೆಗೆ ಮೂಲಪ್ರೇರಣೆಯಾಗಿದೆ ಎನ್ನುತ್ತಾರೆ ಖಂಡೇರಾವರು.
(ಪ್ರಸ್ತುತ ಬರೆಹ ಸಿದ್ಧಪಡಿಸುವಲ್ಲಿ ಶರಣ ಸಾಹಿತಿಗಳಾದ ಬಸವರಾಜ ಧನ್ನೂರ, ಡಾ. ಸೋಮನಾಥ ಯಾಳವಾರ, ಡಾ. ಎಸ್.ಆರ್. ಗುಂಜಾಳ, ರಂಜಾನ್ ದರ್ಗಾ ಇವರುಗಳ ಬರೆಹದ ನೆರವನ್ನು ಪಡೆಯಲಾಗಿದೆ. ಗರುಡಾದ್ರಿಯವರ ಕಲಾಕೃತಿ ಶೋಧ ಮತ್ತು ಸಂಗ್ರಹ ಲೇಖಕರದ್ದೇ ಆಗಿದೆ.)
ಬೆಂಗಳೂರು : ಕನ್ನಡ ಪುಸ್ತಕ ಪ್ರಾಧಿಕಾರದ (kannada Pustaka Pradhikara) ವತಿಯಿಂದ 2025-26ನೇ ಸಾಲಿನ ಯುವಬರಹಗಾರರ ಚ...
ಮಕ್ಕಳಿಗೆ ದೆವ್ವ, ಭೂತ ಮುಂತಾದ ಸಂಗತಿಗಳನ್ನು ಹೇಳಬಾರದೆಂದು ಹೇಳುತ್ತ ಅವರಲ್ಲಿ ಮತ್ತಷ್ಟು ಹೆದರಿಕೆ ಹುಟ್ಟಿಸಿರುತ್ತೇವೆ...
ಲಂಡನ್: ದಕ್ಷಿಣ ಭಾರತದ ಸಾಹಿತ್ಯ ಲೋಕ, ಅದರಲ್ಲೂ ಕನ್ನಡ ಸಾಹಿತ್ಯದ ಪಾಲಿಗೆ ಮೇ 20, 2025 ಸುವರ್ಣಾಕ್ಷರದಲ್ಲಿ ಬರೆದಿಡಬೇ...
©2025 Book Brahma Private Limited.