ಅಂತರರಾಷ್ಟ್ರೀಯ ಖ್ಯಾತಿಯ ಸರೋದ್ ವಾದಕ ಪಂ.ರಾಜೀವ ತಾರಾನಾಥರು ಇನ್ನಿಲ್ಲ

Date: 11-06-2024

Location: ಬೆಂಗಳೂರು


ಮೈಸೂರು: ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತರಾಗಿದ್ದ ‌ಸರೋದ್ ವಾದಕ ಪಂ.ರಾಜೀವ ತಾರಾನಾಥರು 2024 ಜೂನ್ 11ರ ಮಂಗಳವಾರ ಸಂಜೆ 6.30ಕ್ಕೆ ಮೈಸೂರಿನ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಏಪ್ರಿಲ್‌ 26 ರಂದು ಮೈಸೂರಿನ ತಮ್ಮ ಮನೆಯಲ್ಲಿಯೇ ಬಿದ್ದು‌‌ ಸೊಂಟದ ಹತ್ತಿರದ ಮೂಳೆ ಮುರಿದ ಕಾರಣ ಆಸ್ಪತ್ರೆಗೆ ‌ಸೇರಿದ್ದ ಅವರು ಗುಣಮುಖರಾಗದೆ ಇಂದು ನಿಧನರಾಗಿದ್ದು, ಜೂನ್ 12ರ ಬುಧವಾರ ಬೆಳಿಗ್ಗೆ 9ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಮೈಸೂರಿನ ಕುವೆಂಪುನಗರದ ಜ್ಞಾನ ಗಂಗಾ ಶಾಲೆ ಹತ್ತಿರದ ಅವರ ಮನೆಯ ಎದುರು ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ, ಮಧ್ಯಾಹ್ನ 2 ಗಂಟೆಗೆ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ರಾಜೀವ ತಾರಾನಾಥರ ಕಿರುಪರಿಚಯ

ಸಂಗೀತ ಲೋಕದ ಧ್ರುವತಾರೆಗಳಲ್ಲೊಬ್ಬರಾಗಿದ್ದ ವಿಶ್ವದ ಶ್ರೇಷ್ಠ ಸರೋದ್ ವಾದಕರಲ್ಲಿ ಒಬ್ಬರೆನಿಸಿದ್ದ ರಾಜೀವ್ ತಾರಾನಾಥರು 1932 ಅಕ್ಟೋಬರ್ 17ರಂದು ರಾಯಚೂರು ಜಿಲ್ಲೆಯ ತುಂಗಭದ್ರಾ ಗ್ರಾಮದಲ್ಲಿರುವ "ಪ್ರೇಮಾಯತನ" ಆಶ್ರಮದಲ್ಲಿ ಜನಿಸಿದರು.

ರಾಜೀವ್ ತಾರಾನಾಥರು ತಮ್ಮ ಪ್ರಾರಂಭಿಕ ಪಾಠಗಳನ್ನು ತಮ್ಮ ತಂದೆ ಪಂಡಿತ ತಾರಾನಾಥರ ಬಳಿ ಪಡೆದರು. ಕೇವಲ ಒಂಭತ್ತು ವರ್ಷದವರಿದ್ದಾಗ ಅವರು ಪ್ರಥಮ ಸಂಗೀತ ಕಛೇರಿಯನ್ನು ನಡೆಸಿದರು. ಇಪ್ಪತ್ತರ ತಾರುಣ್ಯದಲ್ಲಿ ಆಕಾಶವಾಣಿಯಲ್ಲಿ ಸಂಗೀತಗಾರರಾಗಿ ಹಾಡುತ್ತಿದ್ದರು.

ರಾಜೀವ್ ತಾರಾನಾಥರು ಸಾಹಿತ್ಯದಲ್ಲಿ ಪಿ.ಎಚ್.ಡಿ ಪದವಿ ಪಡೆದವರಾದರೂ, ತಮಗಿದ್ದ ಇಂಗ್ಲಿಷ್ ಪ್ರಾಧ್ಯಾಪಕತನವನ್ನು ತ್ಯಜಿಸಿ, ಸಂಗೀತವನ್ನು ಅಭ್ಯಸಿಸಲು ಕಲ್ಕತ್ತಾಗೆ ತೆರಳಿ ಅಲ್ಲಿ ಉಸ್ತಾದ್ ಅಲಿ ಅಕ್ಬರ್ ಖಾನರ ಬಳಿ ಶಿಷ್ಯರಾಗಿ ಅಭ್ಯಾಸದಲ್ಲಿ ತೊಡಗಿದರು. 2009ರ ವರ್ಷದಲ್ಲಿ ಅಲಿ ಅಕ್ಬರ್ ಖಾನರು ನಿಧನರಾಗುವವರೆಗೆ ರಾಜೀವ್ ತಾರಾನಾಥರು ಅವರ ಶಿಷ್ಯರಾಗಿಯೇ ಮುಂದುವರೆದಿದ್ದರು. ಅಕ್ಬರ್ ಅಲಿ ಖಾನ್ ಅವರಲ್ಲದೆ ಪಂಡಿತ ರವಿಶಂಕರ್, ಶ್ರೀಮತಿ ಅನ್ನಪೂರ್ಣಾದೇವಿ, ಪಂಡಿತ ನಿಖಿಲ್ ಬ್ಯಾನರ್ಜಿ ಮತ್ತು ಉಸ್ತಾದ್ ಆಶಿಶ್ ಖಾನರ ಮಾರ್ಗದರ್ಶನವನ್ನು ಸಹಾ ರಾಜೀವ್ ತಾರಾನಾಥರು ತಮ್ಮದಾಗಿಸಿಕೊಂಡವರು.

ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲದಲ್ಲಿ ಕಲಾವಿಭಾಗದ ಮುಖ್ಯಸ್ಥರಾಗಿ 1995 ರಿಂದ 2005ರ ಅವಧಿಯಲ್ಲಿ ಕಾರ್ಯನಿರ್ವಹಿಸಿದ್ದ ರಾಜೀವ ತಾರಾನಾಥರು ಇತ್ತೀಚೆಗೆ ಮೈಸೂರಿನ ನಿವಾಸಿಯಾಗಿದ್ದರು. ಇಲ್ಲೇ ತಮ್ಮ ಶಿಷ್ಯರಿಗೆ ಸಂಗೀತವನ್ನು ಧಾರೆ ಎರೆಯುತ್ತಿದ್ದರು.

ಅವರು ತಾವು ಹೊರಹೊಮ್ಮಿಸುವ ರಾಗಗಳ ಕುರಿತಾಗಿ ಹೊಂದಿದ್ದ ಆಳವಾದ ಜ್ಞಾನ, ಸ್ವರ ಮಾಧುರ್ಯ, ಮತ್ತು ಸಂಗೀತ ಸಾಮರ್ಥ್ಯಕ್ಕೆ ಎಲ್ಲೆಡೆ ಗೌರವಿಸಲ್ಪಡುತ್ತಿದ್ದವರು. ತಾಂತ್ರಿಕ ಕೌಶಲ್ಯ, ಕಲ್ಪನಾ ಸಾಮರ್ಥ್ಯ, ಅನುಭೂತಿಯ ಸೌಂದರ್ಯ ಇವೆಲ್ಲಾ ಅವರ ಸೃಜನೆಗಳಲ್ಲಿ ಮೇಳೈಸಿ ಸೆಳೆಯುತ್ತಿದ್ದವು.

ಭಾರತ ಮಾತ್ರವಲ್ಲದೇ ವಿದೇಶಗಳಲ್ಲೆಡೆಗಳಲ್ಲಿಯೂ ರಾಜೀವ್ ತಾರಾನಾಥರ ಸಂಗೀತ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯುತ್ತಿದ್ದವು. ಆಸ್ಟ್ರೇಲಿಯಾ, ಯೂರೋಪ್, ಯೆಮೆನ್, ಅಮೆರಿಕ, ಕೆನಡಾ ಮುಂತಾದ ದೇಶಗಳಲ್ಲೆಲ್ಲಾ ಅವರ ಸಂಗೀತ ಕಾರ್ಯಕ್ರಮಗಳು ನಡೆದು ಅಪಾರ ಅಭಿಮಾನೀ ಬಳಗವನ್ನು ಹೊಂದಿದ್ದರು. ಇದೀಗ ಅನಾರೋಗ್ಯದ ಕಾರಣ ಅವರು ಇಹಲೋಕ ತ್ಯಜಿಸಿದ್ದಾರೆ.

 

MORE NEWS

ಜೀವನದಲ್ಲಿ ಅಧ್ಯಾತ್ಮ ಅನ್ನುವಂತಹದ್ದು ಬಹುಮುಖ್ಯ; ಪ್ರಭಾನಂಜನಾಚಾರ್‍ಯ

13-10-2024 ಬೆಂಗಳೂರು

ಬೆಂಗಳೂರು: ಭಾರ್ಗವಿ ಪ್ರಕಾಶನದಿಂದ ಹಮ್ಮಿಕೊಂಡಿದ್ದ ವೈದ್ಯೆ ಡಾ. ಶೋಭಾ ವೆಂಕಟ್ ಅವರ ‘ಸ್ತೋತ್ರ ಸಂಗಮ’ ಕೃ...

ಸಿನಿಮಾದ ಮೂಲ ಧ್ಯೇಯ ಮೂಢನಂಬಿಕೆಗಳಿಂದ ದೂರವಾಗಿ ಎನ್ನುವುದು; ವೆಂಕಟೇಶ್ ರಾವ್

11-10-2024 ಬೆಂಗಳೂರು

ಬೆಂಗಳೂರು: ಕೃಷ್ಣ ಸಂಕುಲ ಬ್ರಾಂಡಿಂಗ್ ಪಿಕ್ಚರ್ಸ್ ಪ್ರಸ್ತುತಪಡಿಸುತ್ತಿರುವ ಹೆಚ್.ವೆಂಕಟೇಶ್ ರಾವ್ ನಿರ್ಮಾಣದ, ವ್ಯಾನ ವ...

ಕನ್ನಡವನ್ನು ಕರುಳಿನ ಭಾಷೆಯಾನ್ನಾಗಿಸಿ ಬದುಕಿದ ವ್ಯಕ್ತಿ ಬಿಳಿಮಲೆ; ಹಂಪನಾ

10-10-2024 ಬೆಂಗಳೂರು

ಬೆಂಗಳೂರು: ಚಿರಂತ್ ಪ್ರಕಾಶನ ವತಿಯಿಂದ ಡಾ. ಪುರುಷೋತ್ತಮ ಬಿಳಿಮಲೆಯವರ ‘ಹುಡುಕಾಟ’ ಸಂಶೋಧನಾ ಗ್ರಂಥ ಬಿಡುಗ...