Story

ಇಳಿಗಾಲದ ತುಡಿತ

ಕೆ.ಎಸ್ ಗಂಗಾಧರ ಅವರು ಮೂಲತಃ ಶಿವಮೊಗ್ಗದವರು. ವೃತ್ತಿಯಲ್ಲಿ ಪ್ರಾಧ್ಯಾಪಕರಾಗಿರುವ ಅವರು ಶಿವಮೊಗ್ಗದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಕಾಲೇಜಿನಲ್ಲಿ ಮುಖ್ಯಸ್ಥರಾಗಿರುತ್ತಾರೆ. ಬರವಣಿಗೆ ಅವರ ಆಸಕ್ತಿ ಕ್ಷೇತ್ರವಾಗಿದೆ. ಕೆ.ಎಸ್ ಗಂಗಾಧರ ಅವರ ‘ಇಳಿಗಾಲದ ತುಡಿತ ’ ಕತೆ ನಿಮ್ಮ ಓದಿಗಾಗಿ...

ರಂಜಿತ ಲವಲವಿಕೆಯ ಹುಡುಗಿ. ಅಪ್ಪ ಅಮ್ಮನಿಗೆ ಮುದ್ದಿನ ಏಕೈಕ ಪುತ್ರಿ. ಬಾಲ್ಯದಲ್ಲಿ ಶಾಲೆಯ ರಜಾದಿನಗಳಲ್ಲಿ ಅವಳ ಗೆಳತಿಯರು ಅಜ್ಜ ಅಜ್ಜಿಯರ ಮನೆಗೆ ಹೋಗುವುದನ್ನು ನೋಡಿ ಅವಳಿಗೆ ಅಸೂಯೆಯಾಗುತ್ತಿತ್ತು. ಏಕೆಂದರೆ ಅವಳಿಗೆ ಆ ಭಾಗ್ಯವಿರಲಿಲ್ಲ. ಇವಳು ಹುಟ್ಟುವ ಮೊದಲೇ ಅವಳ ತಂದೆ ಮತ್ತು ತಾಯಿಯ ಎರಡೂ ಕಡೆಯ ಅಜ್ಜ ಅಜ್ಜಿಯರು ಗತಿಸಿದ್ದರು. ಫೋಟೋದಲ್ಲಿ ಮಾತ್ರ ಅವರನ್ನು ನೋಡಿದ್ದ ನೆನಪು.ಗೆಳತಿಯರು ರಜೆ ಕಳೆದು ಬಂದ ಮೇಲೆ ಹೇಳುತ್ತಿದ್ದ ಅಜ್ಜ ಅಜ್ಜಿಯರ ಪ್ರೀತಿಯ ಕತೆಗಳನ್ನು ಕೇಳಿದಾಗ ಮನಸ್ಸಿಗೆ ಕಸಿವಿಯಾಗುತ್ತಿತ್ತು. ಆದರೆ ಅವಳು ಅಸಹಾಯಕಳಾಗಿದ್ದಳು.ಅದಕ್ಕೇ ಏನೋ ಯಾವುದೇ ವಯೋವೃದ್ಧರನ್ನು ನೋಡಿದಾಗ ಅಕ್ಕರೆಯನ್ನು ತೋರಿ ನವಿರಾಗಿ ಮಾತನಾಡಿಸುತ್ತಿದ್ದಳು.

ರಂಜಿತ ಸಮಾಜಶಾಸ್ತ್ರದಲ್ಲಿ ಎಂ.ಎ ಮುಗಿಸಿ ಪಿ ಎಚ್ ಡಿ ಮಾಡಲು ಸಂಶೋಧನಾ ವಿದ್ಯಾರ್ಥಿನಿಯಾಗಿ ಸೇರಿದಳು. ಆಗಲೂ ಅವಳು ತನ್ನ ಸಂಶೋಧನಾ ಪ್ರಬಂಧಕ್ಕಾಗಿ ಆಯ್ಕೆ ಮಾಡಿಕೊಂಡ ವಿಷಯ “ ನಗರ ವ್ಯಾಪ್ತಿಯ ವೃದ್ಧಾಶ್ರಮಗಳ ಹಿರಿಯ ಜೀವಗಳ ಮಾನಸಿಕ ಸ್ಥಿತಿಗತಿಯ ಸಮಗ್ರ ನೋಟ”. ನಗರದಲ್ಲಿರುವ ಹಲವಾರು ವೃದ್ಧಾಶ್ರಮಗಳ ಪಟ್ಟಿ ಮಾಡಿ ಮೊದಲಿಗೆ ತನ್ನ ಸ್ನಾತಕೋತ್ತರ ಕೇಂದ್ರಕ್ಕೆ ಹತ್ತಿರದಲ್ಲಿರುವ “ಊರುಗೋಲು” ವೃದ್ಧಾಶ್ರಮಕ್ಕೆ ಭೇಟಿ ನೀಡಲು ಅನುಮತಿ ಪಡೆದುಕೊಂಡಳು.

ಮೊದಲ ದಿನ ಊರುಗೋಲು ವೃದ್ಧಾಶ್ರಮದ ವ್ಯವಸ್ಥಾಪಕರನ್ನು ಭೇಟಿ ಮಾಡಿ ಸ್ಥೂಲವಾಗಿ ವೃದ್ಧಾಶ್ರಮದ ಪರಿಚಯ ಮಾಡಿಕೊಂಡು ಒಂದು ಸುತ್ತು ಹಾಕಿದಳು.ಬಹಳ ಹುರುಪಿನಿಂದ ಹೊಸತನದ ಹುಮ್ಮಸ್ಸಿನಿಂದ ಅಲ್ಲಿರುವ ವೃದ್ಧರಲ್ಲಿ ತನ್ನ ಅಜ್ಜ ಅಜ್ಜಿಯರನ್ನು ಹುಡುಕುತ್ತಿದ್ದಾಳೇನೋ ಎನ್ನುವ ಆಸ್ಥೆಯಿಂದ ಎಲ್ಲರನ್ನೂ ಸೂಕ್ಷ್ಮವಾಗಿ ಗಮನಿಸಿದಳು. ಅನೇಕರು ಪರಸ್ಪರ ಮಾತನಾಡಿಕೊಳ್ಳುತ್ತಾ ದುಗುಡ ತುಂಬಿದ ಮುಖಗಳಲ್ಲಿ ದುಃಖವನ್ನು ವ್ಯಕ್ತಪಡಿಸುತ್ತಿದ್ದಾರೇನೋ ಎಂಬಂತೆ ಭಾಸವಾಯಿತು. ಮೂಲೆಯಲ್ಲಿ ಕುಳಿತಿದ್ದ ಎರಡು ಜೋಡಿ ವೃದ್ಧ ದಂಪತಿಗಳು ಮಾತ್ರ ಖುಷಿಯಿಂದ ಮಾತನಾಡಿಕೊಳ್ಳುತ್ತಿರುವುದು ಅವರ ಮುಖಭಾವದಲ್ಲೇ ಗೋಚರವಾಗುತ್ತಿತ್ತು.

ಮರುದಿನ ರಂಜಿತ ತಾನು ಸಿದ್ಧಪಡಿಸಿಕೊಂಡಿದ್ದ ಪ್ರಶ್ನೋತ್ತರ ಮಾಲಿಕೆಯ ಮೂಲಕ ಅಲ್ಲಿದ್ದ ವೃದ್ಧರೊಡನೆ ಸಂವಹನ ಮಾಡಿದಳು. ಯಾರಾದರೂ ಹೊಸಬರು ತಮ್ಮ ಮಾತುಗಳನ್ನು ಕೇಳಿಸಿಕೊಂಡರೆ ಸಾಕು ಎನ್ನುವಂತೆ ಕಾಯುತ್ತಿದ್ದ ವಯೋವೃದ್ಧರು ರಂಜಿತಾಳೊಡನೆ ಸರಾಗವಾಗಿ ಮಾತನಾಡಿದರು. ಅವರ ಮಾತುಗಳೆಲ್ಲವೂ ದೂರಿನ ರೂಪದಲ್ಲೇ ಇದ್ದು ಬೇಸರದ ನುಡಿಗಳಿಂದ ಅವುಗಳನ್ನು ವಿಷದವಾಗಿ ದಾಖಲಿಸಲು ತೊಡಗಿದರು.”ತನ್ನ ಮಗ ಸರಿಯಾಗಿ ಮಾತನಾಡಿಸುವುದಿಲ್ಲ”, “ಸೊಸೆ ಸರಿಯಾಗಿ ನೋಡಿಕೊಳ್ಳುವುದಿಲ್ಲ”, “ಮೊಮ್ಮಕ್ಕಳೊಂದಿಗೆ ಆಟವಾಡಲು ಬಿಡುವುದಿಲ್ಲ”, “ವಿದೇಶಕ್ಕೆ ಹೋಗಿರುವ ಮಕ್ಕಳು ಕಷ್ಟಕಾಲದಲ್ಲೂ ಬಂದು ನೋಡುವುದಿಲ್ಲ”, “ಖಾಯಿಲೆಗೆ ಔಷಧ ತೆಗೆದುಕೊಳ್ಳಲು ಹಣ ನೀಡುವುದಿಲ್ಲ”- ಇವೇ ಮುಂತಾದ ಕಷ್ಟ ಕಾರ್ಪಣ್ಯಗಳನ್ನು ತಮ್ಮ ಬೇಸರದ ನುಡಿಗಳ ಮೂಲಕ ಹೊರಹಾಕಿದರು. ಕೆಲವರು ತಮ್ಮ ಮಕ್ಕಳು ಖರ್ಚಿಗೆ ಹಣವನ್ನೇ ನೀಡುವುದಿಲ್ಲವೆಂದು ಆರೋಪಿಸಿದರೆ ಮತ್ತೆ ಕೆಲವರು ಹಣಕ್ಕೇನೂ ಕೊರತೆ ಮಾಡಿಲ್ಲವಾದರೂ ಸರಿಯಾಗಿ ಮಾತನಾಡಿಸದೆ ಸಂಬಂಧಗಳೇ ಶಿಥಿಲವಾಗದೆಯೆಂದು ಅಸಮಾಧಾನ ವ್ಯಕ್ತಪಡಿಸಿದರು. ಎಲ್ಲವನ್ನೂ ಸಂಕ್ಷಿಪ್ತವಾಗಿ ದಾಖಲಿಸಿಕೊಂಡ ರಂಜಿತ ವೃದ್ಧಾಶ್ರಮದ ಮೂಲೆಯ ಕಲ್ಲುಬೆಂಚಿನ ಮೇಲೆ ಖುಷಿಯಿಂದ ಇರುವಂತೆ ಕುಳಿತಿದ್ದ ಎರಡು ಜೋಡಿ ವೃದ್ಧ ದಂಪತಿಗಳತ್ತ ನಡೆದಳು. ಉಳಿದ ವಯೋವೃದ್ಧರಿಗೆ ವ್ಯತಿರಿಕ್ತವಾಗಿದ್ದು ಮಂದಹಾಸ ತುಂಬಿದ ಮುಖಭಾವದಿಂದ ಮಾತನಾಡಿಸಿದ ಆ ವೃದ್ಧರಿಗೂ ತನ್ನ ಪ್ರಶ್ನೆಗಳ ಸರಮಾಲೆಯನ್ನು ಒಡ್ಡಿದಳು.ಅವರ ಖುಷಿಗೆ ಕಾರಣವನ್ನು ಕೇಳಿದಳು.ಅವರು ಹೇಳಿದ ಮಾತಿನಿಂದ ಆಶ್ಚರ್ಯಚಕಿತಳಾದಳು.

“ನಮಗೆ ನೋವುಗಳಿಲ್ಲವೆಂದೇನಿಲ್ಲ.ನಮಗೂ ಸಹ ಕೆಲವು ಆರೋಗ್ಯದ ಸಮಸ್ಯೆಗಳಿವೆ.ಅವು ವಯೋಸಹಜವಾದ ಸಮಸ್ಯೆಗಳಿರಬಹುದು. ನಮ್ಮ ಕೋಟಲೆಗಳನ್ನು ಹಗುರವಾದ ಮಾತುಗಳಿಂದ ಮರೆತು ಹರ್ಷದಿಂದಿರಲು ಪ್ರಯತ್ನಿಸುತ್ತಿದ್ದೇವೆ.ನಾವು ಯಾರನ್ನೂ ದೂರುವಂತಿಲ್ಲ. ಯಾರ ಮೇಲೂ ತಪ್ಪು ಹೊರಿಸುವಂತಿಲ್ಲ. ಏಕೆಂದರೆ ನಮಗೆ ಮಕ್ಕಳೇ ಇಲ್ಲ. ಇಷ್ಟು ವರ್ಷಗಳ ಕಾಲ ಮಕ್ಕಳಿಲ್ಲವೆಂಬ ಚಿಂತೆ ಕಾಡುತ್ತಿತ್ತು. ಇಳಿವಯಸ್ಸಿನಲ್ಲಿ ಆಸರೆಗಾಗಿ ಈ ವೃದ್ಧಾಶ್ರಮವನ್ನು ಸೇರಿದ ಮೇಲೆ ಇಲ್ಲಿರುವವರ ದುಗುಡ ದುಮ್ಮಾನದ ಕತೆಗಳನ್ನು ಕೇಳಿದ ಮೇಲೆ ಅವರು ಅನುಭವಿಸುತ್ತಿರುವ ವ್ಯಥೆಯನ್ನು ನೋಡಿದ ಮೇಲೆ ಮಕ್ಕಳಿಲ್ಲವೆಂಬುದೇ ಒಂದು ವರದಾನದಂತೆ ಅನಿಸಿದೆ” ಎಂದು ಸಂತಸದಿಂದಲೇ ನುಡಿದರು.

ಅತೀವ ಹುರುಪು ಹುಮ್ಮಸ್ಸಿನಿಂದ ವೃದ್ಧಾಶ್ರಮಕ್ಕೆ ಬಂದಿದ್ದ ರಂಜಿತಳ ಮನಸ್ಸು ಭಾರವಾದಂತನಿಸಿತು. ಅಲ್ಲಿನ ಹಿರಿಯ ಜೀವಗಳ ಮಿಶ್ರ ಅನುಭವಗಳನ್ನು ಕೇಳಿದ ಮೇಲೆ ಘಾಸಿಗೊಂಡಳು. ತಾನು ಇಲ್ಲಾರಿಗಾದರೂ ಮೊಮ್ಮಗಳಾಗಿ ಹುಟ್ಟಬಾರದಿತ್ತೇ ಎನ್ನುವ ಭಾವ ಅವಳನ್ನು ಆವರಿಸಿತು.

ಕೆ.ಎಸ್ ಗಂಗಾಧರ

ಡಾ. ಕೆ.ಎಸ್ ಗಂಗಾಧರ ಅವರು ಮೂಲತಃ ಶಿವಮೊಗ್ಗದವರು. ವೃತ್ತಿಯಲ್ಲಿ ಪ್ರಾಧ್ಯಾಪಕರಾಗಿರುವ ಅವರು ಶಿವಮೊಗ್ಗದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಕಾಲೇಜಿನಲ್ಲಿ ಮುಖ್ಯಸ್ಥರಾಗಿರುತ್ತಾರೆ. ಬರವಣಿಗೆ ಅವರ ಆಸಕ್ತಿ ಕ್ಷೇತ್ರವಾಗಿದೆ.

More About Author