ಖೇಡಗಿ ಎಂಬ ಭೀಮಾತೀರದ ರಂಗ ಚಿಂತಕ 

Date: 30-05-2025

Location: ಬೆಂಗಳೂರು


“ಮಜಬೂತಾದ ವೃತ್ತಿರಂಗ ಕಂಪನಿ ಕಟ್ಟಲು ಅನೇಕ ಅನುಭವಗಳ ಮಜಕೂರಗಳು ಎಸ್. ಎಮ್. ಖೇಡಗಿಯವರ ಮನೋರಂಗ ಕಣಜದಲ್ಲಿವೆ. ಫುಲ್ ಕಾಮೆಡಿ ಹೆಸರಿನಲ್ಲಿ ಕೀಳು ಅಭಿರುಚಿಯ 'ಹಾಸ್ಯಗಣಿತ'ದ ಮೇಲೋಗರ; ಅದರ ನಡುವೆ ಕಾಗುಣಿತದ ರಂಗ ಪರಂಪರೆಯ ವ್ಯಾಕರಣವೇ ನೇಪಥ್ಯಕ್ಕೆ ಸರಿಯುವಂತಾಗಿದೆ ಎಂಬುದು ಅವರ ಅಳಲು. ವರ್ತಮಾನದ ಇಂತಹ ಬೆಳವಣಿಗೆ ಕುರಿತು ಖೇಡಗಿ ಅವರಲ್ಲಿ ಅಪಾರ ಖೇದವಿದೆ. ಇದು ಮಲ್ಲಿಕಾರ್ಜುನ ಕಡಕೋಳ ಅವರ ರೊಟ್ಟಿ ಬುತ್ತಿ ಅಂಕಣದ ಸರಣಿಯ " ಖೇಡಗಿ ಎಂಬ ಭೀಮಾತೀರದ ರಂಗ ಚಿಂತಕ" ಲೇಖನದ ಆಯ್ದ ಭಾಗ.. ಓದಿನ ಆರಂಭ ಇಲ್ಲಿಂದ ಶುರುವಾಗಲಿ..

ಅಂದಿನ ಅವಿಭಜಿತ ಬಿಜಾಪುರ ಜಿಲ್ಲೆ, ಕನ್ನಡ ರಂಗಭೂಮಿಗೆ ನೀಡಿದ ಕೊಡುಗೆ ಅಮೋಘವಾದುದು. ಎಂಬತ್ತಕ್ಕೂ ಹೆಚ್ಚು ನಾಟಕ ಕಂಪನಿಗಳಿಗೆ ಮತ್ತು ನೂರಾರು ರಂಗಕರ್ಮಿಗಳಿಗೆ ಜೀವ ಜನುಮ ನೀಡಿದ ಜಿಲ್ಲೆ ಇದು. ಅಂತೆಯೇ ಪರಂಪರೆ ಮತ್ತು ಪ್ರಯೋಗಶೀಲತೆ ಎರಡೂ ರಂಗಗಳಲ್ಲೂ ವಿದ್ವತ್ಪೂರ್ಣ ಮತ್ತು ಲೋಕಮೀಮಾಂಸೆಯ ಗುರುತರ ದಾಖಲೆಗಳನ್ನು ಅಖಂಡ ಜಿಲ್ಲೆಯುದ್ದಕ್ಕೂ ಢಾಳಾಗಿ ಗುರುತಿಸಬಹುದಾಗಿದೆ.

ಅದರಲ್ಲೂ ವೃತ್ತಿ ರಂಗಭೂಮಿಯ ಆಡುಂಬೊಲವೆಂದರೆ ಹಳೆಯ ವಿಜಾಪುರ ಜಿಲ್ಲೆಯೆಂದೇ ಹೇಳಬಹುದಾಗಿದೆ. ಹಳ್ಳಿ ಹಳ್ಳಿಗಳ ಜನಮಾನಸದ ಜಾತ್ರೆಯಲಿ ವೃತ್ತಿರಂಗ ನಾಟಕಗಳ ಬಹುಳ ಪ್ರಜ್ಞೆಯದೇ ಪರಿಮಳ. ಜನರ ಮೈಮನಗಳ ತುಂಬಾ ತುಂಬಿ ಹರಿದ ಇಲ್ಲಿನ ಪಂಚ ನದಿಗಳ ತುಂಬೆಲ್ಲ ಕಂಪನಿ ನಾಟಕಗಳದ್ದೇ ಹರಿಗಡಿಯದ ಘಮ ಘಮ. ಅದರ ರಂಗಭಿತ್ತಿಯ ಎತ್ತರ ಭಿತ್ತರಗಳು ಜಗತ್ಪ್ರಸಿದ್ಧ ಗೋಳಗುಮ್ಮಟದಷ್ಟೇ ಸುಪ್ರಸಿದ್ಧ.

ಅವತ್ತಿನ ನಾಟಕ ಕಂಪನಿಗಳ ರಂಗಸಂಸ್ಕೃತಿಯನ್ನು ಸಶಕ್ತಗೊಳಿಸಿದ ಬಲಾಢ್ಯ ತಂಡವೇ ಇತ್ತು. ಹಂದಿಗನೂರು ಸಿದ್ರಾಮಪ್ಪ, ಉಮರ್ಜಿ ಮಧ್ವರಾಜ, ಮಾನ್ವಿ ಅದೃಶ್ಯಪ್ಪ, ಪ್ರತಿ ಗಂಧರ್ವರೇ ಆಗಿದ್ದ ಅಮೀರಬಾಯಿ ಮತ್ತು ಗೋಹರಬಾಯಿ ಕರ್ನಾಟಕಿ ಸೋದರಿಯರು, ಕಂದಗಲ್ ಹಣಮಂತ್ರಾಯ, ವಾಮನರಾವ ಮಾಸ್ತರ, ಎಲ್. ಎಸ್. ಇನಾಮದಾರ, ಚಿತ್ತರಗಿ ಗಂಗಾಧರ ಶಾಸ್ತ್ರೀ, ಅರಿಷಿಣಗೋಡಿ, ಪುಂಡಲೀಕ ಬಸನಗೌಡ ಧುತ್ತರಗಿ, ಕೆ.ಎನ್. ಸಾಳುಂಕೆ, ಎಚ್. ಆರ್. ಭಸ್ಮೆ, ಮಾರುತೇಶ ಮಾಂಡ್ರೆ, ಎಲ್.ಬಿ.ಕೆ. ಆಲ್ದಾಳ, ಆರ್.ಡಿ. ಕಾಮತ್, ಯಂಕಂಚಿ ಜೆಟ್ಟೆಪ್ಪ, ಟಿ.ಕೆ. ಮಹ್ಮದಲಿ ಹೀಗೆ ಹತ್ತಾರು ಪೂರ್ವಸೂರಿಗಳ ಹೆಸರುಗಳು ರಾರಾಜಿಸುತ್ತವೆ. ಹಾಗೆಯೇ ಪ್ರಯೋಗಶೀಲ ರಂಗಭೂಮಿ ಪ್ರಕಾರದಲ್ಲೂ ಬಿಜಾಪುರ ಜಿಲ್ಲೆ ಹಿಂದೆ ಬಿದ್ದಿಲ್ಲ. ಅದಕ್ಕೆ ಹೊಸಅಲೆ ರಂಗಭೂಮಿಯ ಗಂಡುಗಲಿ 'ಶ್ರೀರಂಗ' ಈ ಹೆಸರೊಂದೇ ಸಾಕು. ಕೆರೂರು ವಾಸುದೇವಾಚಾರ್ಯ, ಶ್ರೀನಿವಾಸ ತಾವರಗಿರಿ, ಅಶೋಕ ಬಾದರದಿನ್ನಿ, ಜಿ. ಎನ್. ದೇಶಪಾಂಡೆ ಅಷ್ಟೇ ಯಾಕೆ ವರ್ತಮಾನದ ಶಕೀಲ ಅಹ್ಮದವರೆಗೆ ಅದರ ರಂಗಕ್ಷಿತಿಜದ ಮಹತ್ತರ ಹೆಜ್ಜೆಗಳು ವಿಜೃಂಭಿಸುತ್ತವೆ.

ವೃತ್ತಿ ರಂಗಭೂಮಿಯ ಪೂರ್ವಸೂರಿಗಳ ಸಾಲಿಗೆ ಸೇರಲೇಬೇಕಾದ ಮತ್ತೊಂದು ಹಿರಿಯ ಹೆಸರೆಂದರೆ ನಮ್ಮ ನಡುವಿನ ಎಸ್. ಎಮ್. ಖೇಡಗಿ. ಇಂಡಿ ತಾಲೂಕಿನ ಖೇಡಗಿಯಲ್ಲಿ ಜನ್ಮತಾಳಿದ ಎಂಬತ್ತರ ಏರುಪ್ರಾಯದ ಶೇಖ್ ಮೊಹಿದ್ದೀನ್ (೧೯.೦೧.೧೯೪೩) ಓರ್ವ ಸೃಜನಶೀಲ ನಾಟಕಕಾರ. ನಟ, ನಿರ್ದೇಶಕನಾಗಿರುವ ಸುಶೀಲ ರಂಗಕರ್ಮಿ. ಭೀಮಾತೀರದ 'ಖೇಡಗಿ' ಎಂಬುದು ಅಜಮಾಸು ನೂರು ಮನೆಗಳ ಪುಟ್ಟ ಊರು. ಸಿದ್ಧಾರೂಢರ ಪರಂಪರೆಯನ್ನು ಸಮರ್ಥವಾಗಿ ಮೆರೆದ ಊರು. ಇಂತಹ ಊರ ಮೇಲಿನ ಅಭಿಮಾನದಿಂದಾಗಿ ತನ್ನ ಮನೆತನದ 'ಶೇಖ್' ಹೆಸರಿಗೆ ಬದಲು 'ಖೇಡಗಿ' ಎಂಬ ಊರ ಹೆಸರನ್ನೇ ಇಟ್ಟುಕೊಂಡು ಕೇಡಿಲ್ಲವಾಗಿ ಊರನ್ನೂ ಪ್ರಸಿದ್ಧಿಗೆ ತಂದಿದ್ದಾರೆ.

ಸಿದ್ಧಾರೂಢರ ಸಮಕಾಲೀನರಾದ ಖೇಡಗಿಯ ರಾಚಾರೂಢರು ಅದ್ವೈತಿಗಳು. ಅಂತಹ ಆರೂಢ ಪರಂಪರೆಯ ಸೆರಗಂಚಿನಲಿ ಬಾಳಿ ಬದುಕಿದವರು ಶೇಖ್ ಮೊಹಿದ್ದೀನ್ ಅವರ ಅಪ್ಪ ಚಾಂದಸಾಹೇಬ ಮತ್ತು ಅವ್ವ ವಜೀರವ್ವ. ಚಾಂದಸಾಹೇಬ, ಸೇನೆಯಲ್ಲಿ ಸೇವೆ ಸಲ್ಲಿಸಿ ಬಂದುದರಿಂದ ಸಹಜವಾಗಿ ಮಿಲ್ಟ್ರಿಯ ಶಿಸ್ತು. ಮೊಹಿದ್ದೀನರ ಸೋದರ ಮಾವ ಮಹಬೂಬ ಸಾಹೇಬ ಆ ಕಾಲದ ಹೆಸರಾಂತ ರಂಗನಟ. ಹೀಗಾಗಿ ಅಪ್ಪನ ಸೇನಾಶಿಸ್ತು ಮತ್ತು ಮಾವನ ರಂಗ ಗರಡಿಯ ಅಭಿನಯದ ಪರಿಪ್ರೇಕ್ಷದಲಿ ಪಳಗಿದ ಅನುಭವ ಮೊಹಿದ್ದೀನ್ ಅವರದಾಯಿತು. ಖೇಡಗಿಯಲ್ಲಿ ಶಾಲೆಗೆ ಹೋಗಿ ಕನ್ನಡ ಕಲಿತು ಮುಲ್ಕಿ ಪರೀಕ್ಷೆ ಪಾಸು ಮಾಡಿದರು. ಆಮೇಲೆ ನೇರ ಪರೀಕ್ಷೆ ಬರೆದು ಮೆಟ್ರಿಕ್ ಉತ್ತೀರ್ಣರಾದರು.

ಅಪ್ಪ ಮಿಲಿಟರಿಯಿಂದ ಬಂದಮೇಲೆ ಪುಣೆಯಲ್ಲಿ ಸಿವಿಲ್ ಸೇರಿದರು. ಹೀಗಾಗಿ ಅಂದು ಯುವಕ ಶೇಖ ಮೊಹಿದ್ದೀನ್ ಆರೇಳು ವರ್ಷಗಳ ಕಾಲ ಪುಣೆಯಲ್ಲಿ ಕಾಲ ಕಳೆಯ ಬೇಕಾಯಿತು. ಆಗ ಇವರಿಗೆ ಮರಾಠಿ ಓದು, ಬರಹ ಸುಲಲಿತವಾಯಿತು. ಅಷ್ಟಲ್ಲದೇ ಅಲ್ಲಿನ ಗ್ರಂಥಾಲಯಗಳಲ್ಲೇ ಹೆಚ್ಚುಕಾಲ ಮೊಹಿದ್ದೀನ್ ಖರ್ಚು ಮಾಡಿದರು. ಫು.ಲ. ದೇಶಪಾಂಡೆ, ಅತ್ರೆ, ರಾಮ ಗಡ್ಕರಿ, ಮುಂತಾದವರನ್ನು ಹಾಳತವಾಗಿ ಓದುವಂತಾಯಿತು. ತನ್ಮೂಲಕ ಮರಾಠಿ ಭಾಷೆ ಮತ್ತು ರಂಗನಾಟಕಗಳ ದಟ್ಟ ಪರಿಚಯವಾಗುತ್ತದೆ. ತತ್ಪರಿಣಾಮ ಮರಾಠಿ ಸಾಹಿತ್ಯ ಮತ್ತು ರಂಗಸಾಹಿತಿಗಳ ಪ್ರಭಾವ.

ಪುಣೆಯ ಆ ಅವಧಿಯಲ್ಲಿ ಅವರು ಕನ್ನಡ ನಾಟಕವೊಂದನ್ನು ಪ್ರದರ್ಶನ ಮಾಡಿಸುತ್ತಾರೆ. ಆದರೆ ತನ್ನ ಕನ್ನಡ ಭಾಷೆಗೆ ಅಲ್ಲಿ ವಿಪುಲ ಅವಕಾಶ ಇಲ್ಲವೆಂಬ ಕಾರಣದಿಂದಾಗಿ ಮರಳಿ ಕರ್ನಾಟಕದ ತನ್ನ ಹುಟ್ಟೂರು ಖೇಡಗಿ ಗ್ರಾಮಕ್ಕೆ ಬರುತ್ತಾರೆ. ಅ.ನ.ಕೃ., ತ.ರಾ.ಸು., ಬೀಚಿ, ಬೇಂದ್ರೆ, ಕಾರಂತ, ಕುವೆಂಪು, ನೆರೆಯ ಮಧರಚೆನ್ನರ ಸಾಹಿತ್ಯದ ಗಂಭೀರ ವಿದ್ಯಾರ್ಥಿಯಂತೆ ಅಧ್ಯಯನ ಮಾಡುತ್ತಾರೆ. ಸಾಹಿತ್ಯದ ವಿವಿಧ ಪ್ರಕಾರಗಳ ಬಗ್ಗೆ ಅನನ್ಯ ಆಸಕ್ತಿ ಬೆಳೆಸಿಕೊಳ್ಳುತ್ತಾರೆ. ಆ ಮೂಲಕ ತನ್ನ ಬರವಣಿಗೆ ಹಾದಿ ಗುರುತಿಸಿಕೊಳ್ಳುತ್ತಾರೆ. ಅವರು ಅಧ್ಯಯನ ಗೈಯ್ದ ನೂರಾರು ಕಾದಂಬರಿ, ನಾಟಕ, ಪ್ರಬಂಧ ಸಂಕಲನಗಳು ಇವತ್ತಿಗೂ ಅವರ 'ರಂಗಚೇತನ'ದ ಅಟ್ಟದಲ್ಲಿವೆ.

ಅಷ್ಟಲ್ಲದೇ ಒಂದು ಸಾವಿರಕ್ಕೂ ಹೆಚ್ಚು ನಾಟಕ ಪುಸ್ತಕಗಳ ಸಂಗ್ರಹ ಅವರ 'ನಟರಾಜ' ಪುಸ್ತಕಾಲಯದಲ್ಲಿವೆ. ಮಳೆಗಾಲಕ್ಕೆ ಮುನ್ನ ಪುಸ್ತಕದ ಅಂಗಡಿ ಪ್ರಸ್ತುತ ದುರಸ್ತಿ ಹಂತದಲ್ಲಿದೆ. ವೃತ್ತಿ ರಂಗಭೂಮಿಯ ಹಳೆಯ ನಾಟಕಗಳ ಒಂದು ಸಾವಿರಕ್ಕೂ ಹೆಚ್ಚು ನಾಟಕಗಳು ಅವರ ಬಳಿ ದೊರಕುತ್ತವೆ. ಮೂರಕ್ಕಿಂತ ಹೆಚ್ಚಿಗಿರುವ ಪ್ರತಿಗಳನ್ನು ಮಾರಾಟ ಮಾಡುತ್ತಾರೆ. ಅದಕ್ಕಿಂತ ಕಡಿಮೆ ಪ್ರತಿಗಳಿರುವ ಪ್ರತಿಗಳನ್ನು ಪುಸ್ತಕ ರೂಪದಲ್ಲೇ ಜೆರಾಕ್ಸ್ ಮಾಡಿ ಕೊಡುತ್ತಾರೆ. ಒಂದುವೇಳೆ ಅವರ ಬಳಿ ಹಳೆಯ ನಾಟಕಗಳ ಪ್ರತಿಗಳು ಸಿಗದೇ ಹೋದರೆ ಕರ್ನಾಟಕದ ಬೇರೆ ಕಡೆ ಹಳೆಯ ವೃತ್ತಿ ರಂಗನಾಟಕಗಳು 'ಸಿಗಲಾರವು' ಎಂಬಷ್ಟು ಪ್ರತೀತಿಯೇ ಸೃಷ್ಟಿಯಾಗಿದೆ. ಅವರ ಸಂಗ್ರಹದಲ್ಲಿರುವ ಅಪರೂಪದ ಮತ್ತು ಆಯ್ದ ನಾಟಕಗಳನ್ನು ಮರು ಮುದ್ರಿಸಲು ದಾವಣಗೆರೆ ವೃತ್ತಿ ರಂಗಾಯಣ ಮುಂದಾಗಿದೆ.

ವಿಜಯಪುರದ ಬೋಡ್ಕಿ ಮಸೂತಿ ಹತ್ತಿರ ಗಚ್ಚಿನ‌ ಮೊಹಲ್ಲಾದ ಅವರ ಮನೆಯ ಹೆಸರು ರಂಗಚೇತನ. ಅದು ಮೊಹಿದ್ದೀನ್ ಕುಟುಂಬದ ಕೇವಲ ವಾಸದ ಮನೆಯಲ್ಲ; ರಂಗಸಂಸ್ಕೃತಿಯ ಪುಟ್ಟ ಮ್ಯುಜಿಯಮ್. ಕನ್ನಡ, ಹಿಂದಿ, ಮರಾಠಿ ರಂಗ ಕಲಾವಿದರು, ಸಾಹಿತಿ, ಕವಿಗಳ ನೂರಾರು ವರ್ಣರಂಜಿತ ಭಾವಚಿತ್ರಗಳು ಮತ್ತು ಗ್ರಂಥಗಳು. ಅವರ ಮುಡಿಗೇರಿದ ನೂರಾರು ಪ್ರಶಸ್ತಿ ಫಲಕಗಳು. ಮುಖ್ಯವಾಗಿ ಪೌರಾಣಿಕ, ಐತಿಹಾಸಿಕ ನಾಟಕಗಳ ಕತ್ತಿ, ಗುರಾಣಿ, ತರಹೇವಾರಿ ಖಡ್ಗ, ಭುಜಕೀರ್ತಿ, ಕಿರೀಟ ಹೀಗೆ ಬಹುಪಾಲು ರಂಗಪರಿಕರ(stage property)ಗಳ ಅಚ್ಚುಕಟ್ಟಾದ ಗ್ಯಾಲರಿಯಂತಿದೆ. ಅವರ ಸಂಗ್ರಹದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಪ್ರಕಟಿತ ಹಳೆಯ ನಾಟಕಗಳ ಸಂಗ್ರಹವಿದೆ.

ಅದಕ್ಕಾಗಿ ಅವರು ಹಳೆಯ ಬಸ್ ನಿಲ್ದಾಣದ ಹತ್ತಿರ ಎಂಟು ಮತ್ತು ಹದಿನಾಲ್ಕು ಫೂಟು ಉದ್ದಗಲದ 'ನಟರಾಜ ಪುಸ್ತಕಾಲಯ' ಎಂಬ ಹಳೆಯ ಕಾಲದ ನಾಟಕಗಳ ಪುಸ್ತಕದ ಅಂಗಡಿ ಇಟ್ಟುಕೊಂಡಿದ್ದಾರೆ. ಯಾರಾದರೂ ರಂಗಪ್ರಾಜ್ಞರು ವಿಜಯಪುರಕ್ಕೆ ಹೋದರೆ ರಂಗ ಸಂಗ್ರಹಾಲಯದಂತಿರುವ ಶೇಖ್ ಮೊಹಿದ್ದೀನ್ ಅವರ ರಂಗಚೇತನದ ಮ್ಯುಜಿಯಮ್ ಸೇರಿದಂತೆ ಈ ಎರಡೂ ಜಾಗೆಗಳಿಗೆ ಭೆಟ್ಟಿಕೊಟ್ಟು ಬರಬೇಕು. ಹಳೆಯ ನಾಟಕಗಳ ಅವರ ಪುಟ್ಟ ಅಂಗಡಿಯ ಒಂದು ಬದಿಗೆ ಈ ಹಿಂದೆ 'ಕಿತ್ತೂರು ಚೆನ್ನಮ್ಮ' ಹೆಸರಿನ ಸಂಚಾರಿ ನಾಟಕ ಕಂಪನಿ ಇತ್ತು. ಅದೀಗ ಖಾಲಿ ಜಾಗವಷ್ಟೆ. ಅದು ಸ್ಥಳೀಯ ಸಾಂಸ್ಕೃತಿಕ ರಾಜಕಾರಣದ ಕತೆ.

ಮಜಬೂತಾದ ವೃತ್ತಿರಂಗ ಕಂಪನಿ ಕಟ್ಟಲು ಅನೇಕ ಅನುಭವಗಳ ಮಜಕೂರಗಳು ಎಸ್. ಎಮ್. ಖೇಡಗಿಯವರ ಮನೋರಂಗ ಕಣಜದಲ್ಲಿವೆ. ಫುಲ್ ಕಾಮೆಡಿ ಹೆಸರಿನಲ್ಲಿ ಕೀಳು ಅಭಿರುಚಿಯ 'ಹಾಸ್ಯಗಣಿತ'ದ ಮೇಲೋಗರ; ಅದರ ನಡುವೆ ಕಾಗುಣಿತದ ರಂಗ ಪರಂಪರೆಯ ವ್ಯಾಕರಣವೇ ನೇಪಥ್ಯಕ್ಕೆ ಸರಿಯುವಂತಾಗಿದೆ ಎಂಬುದು ಅವರ ಅಳಲು. ವರ್ತಮಾನದ ಇಂತಹ ಬೆಳವಣಿಗೆ ಕುರಿತು ಖೇಡಗಿ ಅವರಲ್ಲಿ ಅಪಾರ ಖೇದವಿದೆ. ಅದನ್ನವರು ಅತ್ಯಂತ ನೋವಿನಿಂದಲೇ ನಿವೇದಿಸಿಕೊಳ್ಳುತ್ತಾರೆ. ಇದೆಲ್ಲದರ ನಡುವೆಯೂ ಅವರಲ್ಲಿ ಸಾತ್ವಿಕತೆ ಮತ್ತು ಸಜ್ಜನಿಕೆಯ ರಂಗಶಿಸ್ತು. ಅದು ಅವರ ಸಾರ್ವಕಾಲಿಕ ಪರಿಶುಭ್ರ ಶ್ವೇತವಸ್ತ್ರದ ಉಡುಪಿನಷ್ಟೇ ಪರಿಶುದ್ಧ ಮತ್ತು ಸರಳ.

ಪೌರಾಣಿಕ ಮತ್ತು ಐತಿಹಾಸಿಕ ನಾಟಕಗಳ ನಾಯಕ ನಟನ ಪಾತ್ರಕ್ಕೆ ಹೇಳಿ ಮಾಡಿಸಿದಂತಹ ಆರಡಿ ಎತ್ತರದ ಕಟ್ಟುಮಸ್ತಾದ ಶರೀರ. ಅದಕ್ಕೆ ಒಪ್ಪ ಓರಣದ ಶಾರೀರ. ನೂರೈವತ್ತಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ ದಾಖಲೆಯ ಅನುಭವ ಅವರದು. ಸದಿಚ್ಛೆ ಮತ್ತು ಮಹತ್ವಾಕಾಂಕ್ಷೆಯಿಂದ ಅನೇಕ ನಾಟಕಗಳನ್ನು ರಚಿಸಿದ್ದಾರೆ. ಅವರಿಗೆ ಅಭಿನಯಕ್ಕಿಂತ ನಾಟಕ ರಚನೆ ಮತ್ತು ನಿರ್ದೇಶನವೇ ಹೆಚ್ಚು ಇಷ್ಟ. ಅನುಭವ ಮತ್ತು ವಸ್ತು ಕಥನದ ವಿಷಯ ಸತಾಯಿಸದ ಹೊರತು ನಾಟಕ ರಚನೆಗೆ ಇಳಿಯಲಾರರು. ವೃತ್ತಿ ರಂಗಭೂಮಿಯಲ್ಲಿ ಖೇಡಗಿ ಕವಿಗಳೆಂತಲೇ ಅವರ ಐಡೆಂಟಿಟಿ. ಅರ್ಥಾತ್ ತಮ್ಮನ್ನು ನಾಟಕಕಾರ ಎಂತಲೇ ಗುರುತಿಸಿಕೊಂಡವರು. ವೃತ್ತಿ ರಂಗಭೂಮಿಯ ಪರಿಭಾಷೆಯಲ್ಲಿ ನಾಟಕಕಾರರನ್ನು ಕವಿಗಳೆಂತಲೇ ಕರೆಯಲಾಗುವುದು.

ಅಂದಹಾಗೆ ಖೇಡಗಿಯವರು ಇದುವರೆಗೆ ಐವತ್ನಾಲ್ಕು ನಾಟಕಗಳನ್ನು ರಚಿಸಿದ್ದಾರೆ. ವಿಶೇಷವಾಗಿ ಶರಣರ ಮಹಾತ್ಮೆ ಕುರಿತು ಕೆಲವು ನಾಟಕಗಳನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಬರೆದಿದ್ದಾರೆ. ಇವರು ಬರೆದ 'ಗರಗದ ಮಡಿವಾಳೇಶ್ವರ ಮಹಾತ್ಮೆ' ಎಂಬ ನಾಟಕವನ್ನು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದೆ. ಹಾಗೆಯೇ ಐತಿಹಾಸಿಕ ನಾಟಕಗಳನ್ನು ಸಹಿತ ರಚಿಸಿದ್ದಾರೆ. ಅವುಗಳಲ್ಲಿ ಸಂಗೊಳ್ಳಿ ರಾಯಣ್ಣ, ನರಗುಂದ ಬಾಬಾಸಾಹೇಬ ಪ್ರಮುಖವಾದವು. ದೂರದರ್ಶನ ಮತ್ತು ಆಕಾಶವಾಣಿ ಕೇಂದ್ರಗಳು ಇವರ ಕೆಲವು ನಾಟಕಗಳನ್ನು ಪ್ರಸಾರ ಮಾಡಿವೆ.

ಇನ್ನುಳಿದಂತೆ ಸಾಮಾಜಿಕ ನಾಟಕಗಳದ್ದೇ ಮೇಲುಗೈ. ಅವರ ಬಹುಪಾಲು ನಾಟಕಗಳು ಹತ್ತಾರು ಹೆಸರಾಂತ ನಾಟಕ ಕಂಪನಿಗಳಲ್ಲಿ ನೂರಾರು ಪ್ರದರ್ಶನ ಕಂಡಿವೆ. ನಿಮ್ಮ ಹೆಂಡತಿ ನಾನಲ್ಲ, ಗೌರಿ ಹೋದಳು ಗಂಗೆ ಬಂದಳು, ತಾಯಿಯ ಗುಣ ಹಾಲಿನ ಋಣ ಮುಂತಾದ ಸಂವೇದನಾಶೀಲ ಶೀರ್ಷಿಕೆಗಳು ಇವರ ನಾಟಕಗಳ ವೈಶಿಷ್ಟ್ಯ. ಇನ್ನೊಂದು ಉಲ್ಲೇಖನೀಯ ವೈಶಿಷ್ಟ್ಯವೆಂದರೆ ತಾನು ಬರೆದ ನಾಟಕಗಳನ್ನು ಹೃತ್ಪೂರ್ವಕವಾಗಿ ನಿರ್ದೇಶನ ಮಾಡುವುದು. ತನ್ಮೂಲಕ ವೃತ್ತಿರಂಗದ ಸಮಗ್ರತೆಯ ಅನನ್ಯತನ ಮೆರೆದವರು ಖೇಡಗಿ ಕವಿಗಳು.

ಕರ್ನಾಟಕ ಸರ್ಕಾರದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಮತ್ತು ನಾಟಕ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ಇವರ ಮುಡಿಗೇರಿವೆ. ಆದರೆ ಗುಬ್ಬಿ ವೀರಣ್ಣ ಪ್ರಶಸ್ತಿ ಅದೇಕೋ ತಡಮಾಡಿದಂತಿದೆ. ಆದರೆ ನೂರಕ್ಕೂ ಹೆಚ್ಚು ಸಂಘ ಸಂಸ್ಥೆಗಳು ಇವರ ರಂಗಚೇತನದ ಸೌರಭವನ್ನು ಗೌರವಿಸಿವೆ. ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಂಶೋಧನಾರ್ಥಿಯೊಬ್ಬರು ಇವರ ಬದುಕು ಸಾಧನೆಗಳ ಕುರಿತು ಪಿಎಚ್.ಡಿ. ಮಹಾಪ್ರಬಂಧ ಸಿದ್ಧಗೊಳಿಸಿದ್ದಾರೆ. ನೆಮ್ಮದಿಯ ನೂರು ರಂಗ ವಸಂತಗಳು ಅವರಿಗಿರಲೆಂಬ ಹದುಳ ಹಾರೈಕೆಗಳು.

MORE NEWS

ತೊಂಬತ್ತೈದರ ಶಾಮನೂರು : ಮುಕ್ಕಾಗದ ಮತ್ತು ಮುಪ್ಪಾಗದ ಚೇತನ

12-06-2025 ಬೆಂಗಳೂರು

“ಇದು ಶಾಮನೂರು ಶಿವಶಂಕರಪ್ಪ ಕುರಿತು ಅವರ ಬಹುಮುಖಿ‌ ವ್ಯಕ್ತಿತ್ವ ದರ್ಶನದ ಪುಟ್ಟ ಪರಿಚಯ. ಅವರು ನಡೆದು ಬಂದ...

ಕಲಿಕೆ ಮತ್ತು ಕಲಿಸುವ ಮಾದ್ಯಮ

18-05-2025 ಬೆಂಗಳೂರು

"ಮಗುವಿನ ಬಾಶೆ ಈ ಮೇಲೆ ಮಾತನಾಡಿದಂತೆ ಮಗುವಿನ ಮಾನಸಿಕತೆಯೂ, ಸಾಮಾಜಿಕ ಸ್ತಿತಿಯೂ ಆಗಿರುತ್ತದೆ. ಆದ್ದರಿಂದ ಮಗುವಿಗ...

ಮೊಮ್ಮಕ್ಕಳ ಪೋಷಣೆಗಾಗಿ ಬೆಂಗಳೂರಿಗೆ ಬಂದ ಯಾದಗಿರಿ ಹೆಣ್ಣುಮಗಳ ಕತೆ

16-05-2025 ಬೆಂಗಳೂರು

"ಹೊಟ್ಟೆ ಪಾಡಿಗಾಗಿ ಬೆಂಗಳೂರಿಗೆ ಬಂದ ಉತ್ತರ ಕರ್ನಾಟಕದ ನಿಮಗೆಲ್ಲ " ಬೆಂಗಳೂರು ಹೊಟ್ಟೆಯ ಹಸಿವು ನೀಗಿಸುತ್ತ...