ಬದುಕಿನ ಎಲ್ಲಾ ಆಯಾಮಗಳನ್ನು ಈ ಕೃತಿಯು ಪ್ರತಿನಿಧಿಸುತ್ತದೆ


"ಚಿಂತನ ಕ್ರಮವು ವಿಭಿನ್ನವಾಗಿದ್ದು ಕಥಾವಸ್ತುಗಳಲ್ಲಿ ಹೊಸತನದ ಹುಡುಕಾಟ ಎದ್ದು ಕಾಣುತ್ತದೆ. ಸಕಾರಾತ್ಮಕ ಬದಲಾವಣೆಗೆ ಕಥೆಗಳು ಪ್ರೇರೇಪಿಸುತ್ತವೆ,’ ಎನ್ನುತ್ತಾರೆ ಅನುಸೂಯ ಯತೀಶ್. ಅವರು ಶಂಕರ್ ಸಿಹಿಮೊಗ್ಗೆ ಅವರ `ಬೆನ್ನೇರಿದ ಬಯಲು' ಕೃತಿ ಕುರಿತು ಬರೆದ ವಿಮರ್ಶೆ.

‘ಇರುವೆ ಮತ್ತು ಗೋಡೆ’ ಕೃತಿಗೆ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಉಡುಪಿ ಇವರು ಕೊಡಮಾಡುವ 2023ನೇ ಸಾಲಿನ ಕಡೆಂಗೋಡ್ಲು ಕಾವ್ಯ ಪುರಸ್ಕಾರ ಪಡೆದ ಮಲೆನಾಡಿನ ಕವಿ ಶಂಕರ್ ಸಿಹಿಮೊಗ್ಗೆ ಅವರು ಇದೀಗ ‘ಬೆನ್ನೇರಿದ ಬಯಲು’ ಕಥಾ ಸಂಕಲನದ ಮೂಲಕ ಕಥೆಗಾರರಾಗಿ ಕಥೆಗಳನ್ನು ಹೇಳ ಹೊರಟಿದ್ದಾರೆ. ಕಥೆ ಅಂದಾಗ ಇವು ಕಲ್ಪನೆಯ ಕಥೆಗಳಲ್ಲ. ಶಂಕರ್ ಅವರ ಸುತ್ತ ಮುತ್ತಲಿನ ಬದುಕಿನ ವ್ಯಥೆಗಳು. ಇವರು ನೋಡಿದ ಮಲೆನಾಡಿನ ಜನಸಾಮಾನ್ಯರ ಬದುಕಿನ ನೈಜ ಸಂಗತಿಗಳನ್ನು ಒಳಗೊಂಡ ಅನುಭವಗಳ ಹಾರವಾಗಿವೆ. ಅಲ್ಲಿನ ನಿತ್ಯ ಜೀವನದ ಆಗುಹೋಗುಗಳನ್ನು ಕಥೆಗಾರರು ಕಥನವಾಗಿಸಿದ್ದಾರೆ. ತನ್ನನ್ನು ರೂಪಿಸಿದ ಮಲೆನಾಡಿನ ಪರಿಸರದಲ್ಲಿನ ಬಾಲ್ಯದ ನೆನಪಿನ ಸುರುಳಿಗಳನ್ನು ಬಿಚ್ಚುತ್ತಾ ಹೋದಂತೆ ಅವುಗಳೆಲ್ಲ ಕಥೆಗಳಾಗಿವೆ. ಶಂಕರ್ ಅವರ ಹಾಸ್ಟೆಲ್ ಗೆಳೆಯರು, ಅಕ್ಕಪಕ್ಕದ ಮನೆಯವರು, ಅವರ ಊರನ್ನು ಕಥೆಗಳಲ್ಲಿ ಬಳಸಿಕೊಂಡಿದ್ದಾರೆ. ಅವರೆಲ್ಲರ ಕಥೆಗಳು ಈಗ ನಮ್ಮೆಲ್ಲರ ಕಥೆಗಳಾಗಿವೆ. ಇಲ್ಲಿರುವ ಕಥೆಗಳು ಲೇಖಕರ ಸ್ವ-ಅನುಭವವೇ ಆಗಿದ್ದರೂ ಓದುಗರಿಗೂ ಅವರದಾಗಿಯೇ ದಕ್ಕುತ್ತವೆ.

‘ಬೆನ್ನೇರಿದ ಬಯಲು’ ಶೀರ್ಷಿಕೆ ಈ ಕಥೆಗಳ ಸಂಕಲನದಲ್ಲಿರುವ ಒಂಬತ್ತು ಕಥೆಗಳಿಗೂ ಒಟ್ಟಾರೆಯಾಗಿ ಹಿಡಿದ ರೂಪಕದಂತಿದೆ. ಬಯಲು ರೂಪಕ ಪ್ರೇಮ, ರಾಜಕಾರಣ, ಬಾಂಧವ್ಯ, ಗೆಳೆತನ, ದ್ವೇಷ, ವಿಭಿನ್ನತೆ, ಸಂಬಂಧ, ಕಾಮ, ಉದ್ಯೋಗ, ತಾರತಮ್ಯ ಮತ್ತು ವಲಸೆ ಹೀಗೆ ಬದುಕಿನ ಎಲ್ಲಾ ಆಯಾಮಗಳನ್ನು ಇಲ್ಲಿ ಪ್ರತಿನಿಧಿಸುತ್ತದೆ.

ಇಲ್ಲಿರುವ ಕಥೆಗಳು ಪ್ರಜಾವಾಣಿ ಸೇರಿದಂತೆ ಪ್ರಮುಖ ಪತ್ರಿಕೆಗಳಲ್ಲಿ ಮುದ್ರಣವಾಗಿ ಜನಮನ್ನಣೆ ಗಳಿಸಿವೆ. ಕೆಲವು ಕಥೆಗಳು ಪದವಿ ತರಗತಿಗಳಿಗೆ ಪಠ್ಯಗಳಾಗಿಯೂ ಬೋಧಿಸಲ್ಪಡುತ್ತಿವೆ. ಈ ಹೊತ್ತಿಗೆಯಲ್ಲಿ 9 ಕಥೆಗಳಿದ್ದು ವಿಭಿನ್ನ ಕಥಾ ಆಕರಗಳನ್ನು ಬಳಸಿಕೊಂಡಿವೆ. ಶಂಕರ್ ಅವರು ಸ್ತ್ರೀ ಪಾತ್ರಗಳನ್ನು ಕಥೆಯ ಮುಖ್ಯ ಭೂಮಿಕೆಗಳಲ್ಲಿ ಸಶಕ್ತವಾಗಿ ಬಳಸಿಕೊಂಡಿದ್ದಾರೆ.

ಶಂಕರ್ ಸಿಹಿಮೊಗ್ಗೆ ಕಥೆಗಳ ವಿಶೇಷವೆಂದರೆ ವೈಚಾರಿಕತೆ ಮತ್ತು ಚಿಂತನಾಶೀಲ ಅಭಿವ್ಯಕ್ತಿ. ಇವರು ವಿಜ್ಞಾನ ವಿದ್ಯಾರ್ಥಿಯಾಗಿದ್ದರ ಫಲವಾಗಿ ಇವರ ಬರಹಗಳಲ್ಲಿ ವೈಜ್ಞಾನಿಕ ಅಂಶಗಳು ಹಾಸು ಹೊಕ್ಕಾಗಿರುತ್ತವೆ. ಯುವ ಲೇಖಕರಾಗಿರುವುದರಿಂದ ಚಿಂತನ ಕ್ರಮವು ವಿಭಿನ್ನವಾಗಿದ್ದು ಕಥಾವಸ್ತುಗಳಲ್ಲಿ ಹೊಸತನದ ಹುಡುಕಾಟ ಎದ್ದು ಕಾಣುತ್ತದೆ. ಸಕಾರಾತ್ಮಕ ಬದಲಾವಣೆಗೆ ಕಥೆಗಳು ಪ್ರೇರೇಪಿಸುತ್ತವೆ. ಕೆಲವು ಕಥೆಗಳು ಗ್ರಾಮ್ಯ ಸೊಗಡನ್ನು ಹೊಂದಿದ್ದರೂ ಸಂವಹನಕ್ಕೆ ತೊಡಕಾಗದಂತೆ ಸರಳಿಕರಿಸಿದ್ದಾರೆ. ಇಲ್ಲಿನ ಕಥೆಗಳಲ್ಲಿ ಬರುವ ಪಾತ್ರಗಳು ಸಮಾಜದಲ್ಲಿ ಸಕಾರಾತ್ಮಕವಾದ ಚಿಂತನೆಗಳನ್ನ ಹುಟ್ಟು ಹಾಕುತ್ತವೆ.

‘ಬೆನ್ನೇರಿದ ಬಯಲು’ ಕಥಾ ಸಂಕಲನ ವರ್ತಮಾನದ ಅನೇಕ ಸಮಸ್ಯೆಗಳಿಗೆ ಪರಿಹಾರ ಹುಡುಕ ಹೊರಟಿದೆ. ‘ಚೈಲ್ಡ್ ಫ್ರೀ ಮೂವ್ಮೆಂಟ್’ ನಂತಹ ಸಂಕೀರ್ಣ ವಿಚಾರವನ್ನು ಚರ್ಚಿಸುತ್ತದೆ. ವಿವಿಧ ಮತ ಮತ್ತು ಧರ್ಮಗಳ ನಡುವೆ ಸಾಮರಸ್ಯವನ್ನು ಬಿತ್ತಲು ಹಂಬಲಿಸುತ್ತದೆ. ಬರಹಗಾರರ ಜವಾಬ್ದಾರಿ ಕೇವಲ ತನ್ನ ಖುಷಿಯನ್ನ ಅಕ್ಷರ ರೂಪಕ್ಕೆ ಇಳಿಸುವುದು ಮಾತ್ರ ಅಲ್ಲ. ಸಮಾಜದ, ದೇಶದ ಜ್ವಲಂತ ಸಮಸ್ಯೆಗಳಿಗೆ ಪರಿಹಾರವನ್ನು ಬರಹದಲ್ಲಿ ಸೂಚಿಸುವುದು ಕೂಡ ಬಹಳ ಮುಖ್ಯವಾಗಿದೆ.

ಅಂತರ್ಜಾತಿ ವಿವಾಹ ಮತ್ತು ಹುಟ್ಟಿನ ಜಾತಿ ದೃಢೀಕರಣ ಸೇರಿದಂತೆ ಹಲವು ಸಾಮಾಜಿಕ ಹಾಗೂ ಕೌಟುಂಬಿಕ ವಿಚಾರಗಳ ಕುರಿತು ಸಾಧಕ ಬಾಧಕಗಳನ್ನು ಚರ್ಚಿಸಿದ್ದಾರೆ. ಈ ಚರ್ಚೆ ಅವರ ವೈಯಕ್ತಿಕ ವಿಚಾರಧಾರೆಗಳಲ್ಲ. ವಿವಿಧ ಸನ್ನಿವೇಶಗಳಲ್ಲಿ ವಿವಿಧ ವ್ಯಕ್ತಿಗಳಿಂದ ಚಿಂತನ ಮಂಥನ ನಡೆಸಿದ್ದರ ಫಲಶೃತಿಗಳು. ಇಲ್ಲಿನ ಕಥೆಗಳಲ್ಲಿ ವಿವಿಧ ಪಾತ್ರಗಳ ಮೂಲಕ ನವೀನ ರೂಪಕಗಳನ್ನು ಪ್ರಯೋಗಿಸಿದ್ದಾರೆ. ಜೀವಪರ ಭರವಸೆಗಳನ್ನು ಹುಟ್ಟುಹಾಕುವ ಲವಲವಿಕೆಯ ನಿರೂಪಣೆಯು ತನ್ಮಯತೆಯ ಓದಿಗೆ ಎಡತಾಕುತ್ತದೆ. ಲೇಖಕರ ಅನುಭವಗಳ ಗಾಢತೆ ಎದ್ದು ಕಾಣುತ್ತದೆ. ಭಾವಲೋಕದ ಜೊತೆಗೆ ಪ್ರಜ್ಞಾಪೂರ್ವಕವಾಗಿಯು ಕಥೆಗಳು ಗಮನ ಸೆಳೆಯುತ್ತವೆ.

ಗ್ರಾಮೀಣ ಜನರ ಬದುಕನ್ನು ಚಿತ್ರಿಸುವಲ್ಲಿ ಲೇಖಕರ ಲೇಖನಿಯ ಕರಾಮತ್ತು ಕಾಣುತ್ತದೆ. ಅಗತ್ಯ ಇರುವಾಗ ಸಣ್ಣಪುಟ್ಟ ವಿಷಯಗಳನ್ನು ಹಿಗ್ಗಿಸುತ್ತಾ, ವಿಸ್ತಾರವಾದ ಸಂಗತಿಗಳನ್ನು ಕುಗ್ಗಿಸುತ್ತಾ ಸಂದರ್ಭೋಚಿತವಾಗಿ ಬಳಸುವ ಕುಶಲತೆ‌ ಮೆರೆದಿದ್ದಾರೆ. ‘ಬೆನ್ನೇರಿದ ಬಯಲು’, ‘ಬೆವರದ ತೊಗಲು’, ‘ದೇವರ ಕಾಡು’ ಕಥೆಗಳು ದೀರ್ಘವಾಗಿದ್ದರೂ ನೀರಸವೆನಿಸದಂತೆ ಸರಾಗ ಓದಿಗೆ ಕರೆದೊಯ್ಯುವಂತೆ ಕಥೆ ಹೆಣೆಯುವಲ್ಲಿ ಜಾಣ್ಮೆ ತೋರಿದ್ದಾರೆ. “ಪ್ರಯತ್ನ ಮಾಡದೇ ಹೋದರೇ ಬದುಕು ಕೂಡ ಕರುಣಿಸುವುದಿಲ್ಲ. ನಮ್ಮ ಪ್ರಯತ್ನವನ್ನು ನಾವು ಮಾಡೋಣ, ನೀನು ಯಾವುದಕ್ಕೂ ಹೆದರಬೇಡ” ಎಂಬ ಸಂದೇಶ ಇವರದೇ ಕಥೆಯ ತುಣುಕಾಗಿದ್ದು ಈ ಹಂಬಲ ಇವರ ಆಶಯವೂ ಆಗಿದೆ.

‘ಮಕ್ಕಳಿರಲ್ಲವ್ವ ಮನೆ ತುಂಬಾ’, ‘ಮಕ್ಕಳಿದ್ದ ಮನೆಗೆ ಬೀಸಣಿಗೆಯಾತಕ’ ಅಂದರು ನಮ್ಮ ಜನಪದರು. ಮಗುವನ್ನು ಪಡೆಯುವುದು ನಮ್ಮ ಭಾರತದ ಕೌಟುಂಬಿಕ ಬದುಕಿನಲ್ಲಿ ಅತಿ ಮುಖ್ಯವಾದುದೆಂಬ ಭಾವ ಹಾಸು ಹೊಕ್ಕಾಗಿದೆ. ಬೀದಿಯಲ್ಲಿ ಚಿಂದಿ ಆಯುವವರಿಂದ ಹಿಡಿದು ಕಾರ್ಪೊರೇಟ್ ಜಗತ್ತಿನಲ್ಲಿ ವೈಭವೋಪೇತ ಬದುಕು ಸಾಗಿಸುವವರಿಗೂ ಪ್ರತಿಯೊಬ್ಬರಿಗೂ ತನ್ನದೇ ರಕ್ತ ಹಂಚಿಕೊಂಡು‌ ಹುಟ್ಟಿದ, ತನ್ನ ವಂಶವನ್ನು ಮುಂದುವರಿಸುವ, ತನ್ನ ವಾರಸುದಾರಿಕೆಯನ್ನು ಪ್ರತಿನಿಧಿಸುವ ಮಗುವಿನ ನಿರೀಕ್ಷೆ ಇದ್ದೇ ಇದೆ ಎನ್ನುವುದನ್ನು ಗಮನಿಸಬೇಕು.

ಇಂತಹ ಸಾಂಪ್ರದಾಯಿಕ ಬದುಕಿನಲ್ಲಿ ‘ಪ್ರೀ ಚೈಲ್ಡ್ ಮೂವ್ಮೆಂಟ್’ ಎಂಬ ಸಂಕೀರ್ಣ ವಿಚಾರವನ್ನು ಮುನ್ನಲೆಗೆ ತಂದಿದ್ದಾರೆ. ಅದನ್ನು ಸಮಾಜದ ವಿವಿಧ ಸ್ತರಗಳಲ್ಲಿರುವ ಜನರ ಮನಸ್ಥಿತಿಯ ಮೂಲಕ ಕಥೆಗಾರ ಚರ್ಚಿಸ ಹೊರಟಿದ್ದಾರೆ. ಜನಸಂಖ್ಯಾ ಸ್ಪೋಟ ಎದುರಿಸುತ್ತಿರುವ ಭಾರತದಂತ ದೇಶಗಳಲ್ಲಿ ‘ಚೈಲ್ಡ್ ಫ್ರೀ ಮೂವ್ಮೆಂಟ್’ ಒಂದು ಪರಿಹಾರವಾಗಬಲ್ಲದು ಎಂಬ ಧೋರಣೆ ಲೇಖಕರದು. ಅಂತಃಕರಣ ಮತ್ತು ಸಾಕ್ಷಿಯ ವಿವಾಹದ ಸನ್ನಿವೇಶಗಳ ಮೂಲಕ ಇಡೀ ಕಥೆಯನ್ನ ಕೊಂಡೊಯ್ದಿದ್ದಾರೆ. ಮದುವೆಯಾದ ಮೇಲೆ ಮಕ್ಕಳು ಮಾಡಿಕೊಳ್ಳುವುದು ಕಡ್ಡಾಯಾನ? ಎಂಬ ಪ್ರಶ್ನೆ ಒಂದನ್ನ ಎತ್ತುವ ಲೇಖಕರ ಗೆಳೆಯನ ಉತ್ತರ ಯೋಚನೆಗೆ ಹಚ್ಚುತ್ತದೆ. ಅವನು ಎರಡು ಸ್ಥಾನಗಳಲ್ಲಿ ನಿಂತಾಗ ವಿಭಿನ್ನ ಉತ್ತರಗಳನ್ನ ನೀಡುತ್ತಾನೆ. ಮುಖ್ಯವಾಗಿ ಜನಸಂಖ್ಯಾ ಸ್ಪೋಟ ಮತ್ತು ಸಂಪನ್ಮೂಲಗಳ ಕೊರತೆಯ ಸವಾಲುಗಳನ್ನು ಎದುರಿಸಲು ‘ಚೈಲ್ಡ್ ಫ್ರೀ ಮೂವ್ಮೆಂಟ್’ ಮುಖ್ಯ ಅನ್ನುತ್ತಾನೆ. ಕೌಟುಂಬಿಕವಾಗಿ ಒಬ್ಬ ಮಗನಾಗಿ ತಂದೆಯಾಗಿ ಇದನ್ನ ವಿರೋಧಿಸುತ್ತಾನೆ. ಒಬ್ಬನೇ ವ್ಯಕ್ತಿ ಒಂದು ವಿಷಯದ ಬಗ್ಗೆ ತಾಳುವ ವಿಭಿನ್ನ ನಿರ್ಧಾರಗಳು ನಮಗಿಲ್ಲಿ ಕಾಣುತ್ತವೆ.

ಮದುವೆ ಮಕ್ಕಳು ಎಂಬ ಬಂಧನಕ್ಕೆ ಸಿಲುಕದೆ ಸಮಾಜದಲ್ಲಿ ಒಬ್ಬಂಟಿಯಾಗಿ ಬದುಕುವ ಬೆಟ್ಟವ್ವ, ವಿಚ್ಛೇದಿತ ಮನೋವೈದ್ಯ ಗೆಳೆಯ ಚಿದಂಬರ, ಫ್ಯಾಮಿಲಿ ಪ್ಲಾನಿಂಗ್ ಮಾಡಿಸಿಕೊಂಡ ರಾಮವ್ವನ ಸೊಸೆ, ಕುಟುಂಬದ ಪಾತ್ರಗಳ ಮೂಲಕ ಕೌಟುಂಬಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಧಾರ್ಮಿಕವಾಗಿಯೂ ಜನಸಮುದಾಯದ ಭಾವನೆಗಳನ್ನ, ಸೂಕ್ಷ್ಮವಾದ ತೀಕ್ಷ್ಣ ಪ್ರಶ್ನೆಗಳ ಮೂಲಕ ಹೃದಯ ಮುಟ್ಟುವಂತೆ ತೆರೆದಿಟ್ಟಿದ್ದಾರೆ.

ಈ ಚರ್ಚೆಯಲ್ಲಿ ಮಕ್ಕಳು ಏಕೆ ಬೇಕು? ಏಕೆ ಬೇಡ ? ಅನ್ನುವ ವಿಚಾರಗಳು ಸುಳಿಯುತ್ತವೆ. ಒಂದಿಷ್ಟು ವೈಚಾರಿಕ ಅಂಶಗಳು ಕಥೆಗೆ ಪೂರಕವಾಗಿ ಸೇರಿಕೊಂಡಿವೆ. ಮಗುವಿನ ಲಿಂಗದಲ್ಲಿ ಗಂಡಿನ ತಂತುಗಳೇ ಮುಖ್ಯ ಪಾತ್ರವಾದರೂ ನೂರಾರು ವೀರ್ಯಾಣುಗಳಲ್ಲಿ ತನಗೆ ಇಷ್ಟವಾದ ವೀರ್ಯಾಣುವನ್ನೇ ಆಯ್ಕೆ ಮಾಡಿಕೊಳ್ಳುವುದು ಅಂಡಾಣುವೆ ಆಗಿದೆ ಎನ್ನುವ ಮೂಲಕ ಹೆಣ್ಣಿಗೆ ಪ್ರಕೃತಿ ಕೊಟ್ಟಿರುವ ಮಹತ್ವವಿದು, ಅಲ್ಲಿಯೂ ಅವಳದೇ ಆಯ್ಕೆ. ಜಗತ್ತು ವಿಸ್ಮಯವಲ್ಲವೇ ಎನ್ನುತ್ತಾರೆ. ಇಲ್ಲಿ ಸ್ತ್ರೀ ಸ್ವಾತಂತ್ರ್ಯವು ಪ್ರಕೃತಿಯಿಂದಲೇ ಬಂದಿರುವುದನ್ನ ಬೆಂಬಲಿಸುತ್ತಾ ಸಮಾಜ ಅವಳನ್ನು ಸಮಾನವಾಗಿ ಕಾಣುವುದಿಲ್ಲ ಏಕೆ ?ಎಂದು ಕತೆಗಾರ ಪ್ರಶ್ನಿಸುತ್ತಾರೆ.

‘ಬೆವರದ ತೊಗಲು’ ಕಥೆ ಎರಡು ಕೋಮುಗಳಿಗೆ ಸೇರಿದ ಕುಟುಂಬಗಳ ನಡುವಿನ ಅಸಹನೆಯನ್ನು ಅಳಿಸಿ ಸಾಮರಸ್ಯದ ಗೂಡಿನಲ್ಲಿ ಬಂಧಿಸುವ ಪ್ರಯತ್ನ ಮಾಡಿದೆ. ಕೋಮುವಾದಗಳು ತಾಂಡವವಾಡುತ್ತಿರುವ ಈ ದಿನಮಾನಗಳಲ್ಲಿ ರಕ್ತದ ಕಲೆಯನ್ನು ಅಳಿಸಿ ಶಾಂತಿಯ ಪಾರಿವಾಳ ಹಾರಿಸಲು ಲೇಖಕರ ಮನಸ್ಸು ತುಡಿದಿದೆ, ಹಾಲಮ್ಮ ರಾಮಣ್ಣ ದಂಪತಿಗಳು ಮತ್ತು ಖಾಸಿಂ ಫಾತಿಮಾ ಕುಟುಂಬಗಳು ಈ ಕಥೆಯ ಪ್ರಮುಖ ಪಾತ್ರಗಳಾಗಿವೆ. ಇವರಿಬ್ಬರೂ ಅಕ್ಕ ಪಕ್ಕದ ಮನೆಯವರಾದರೂ ಹೊಂದಾಣಿಕೆಗೆ ಗಂಡಸರ ಅಸಹಕಾರವಿರುತ್ತದೆ. ಇದಕ್ಕೆ ವೃತ್ತಿ ದ್ವೇಷವು ಕಾರಣವಾಗುತ್ತದೆ. ಗಹನವಾದ ವಿಚಾರವನ್ನು ಇಟ್ಟುಕೊಂಡು ಶಂಕರ್ ಅವರು ವಿಭಿನ್ನ ಆಯಾಮಗಳಲ್ಲಿ ಇದನ್ನ ಬಿತ್ತರಿಸಿದ್ದಾರೆ. ಸಂಭಾಷಣೆಗಳ ನೇಯ್ಗೆ ದೃಷ್ಟಿಯಿಂದ ಈ ಕಥೆ ಅತ್ಯಂತ ಹೆಚ್ಚು ಮಹತ್ವ ಪಡೆದುಕೊಳ್ಳುತ್ತದೆ. ಹೆಣ್ಣು ವಿಚಾರವಂತೆ. ಅಗತ್ಯ ಬಂದಾಗ ತೋರುವ ಚಾಕಚಕ್ಯತೆ ಸಮಸ್ಯೆಗಳ ಗಂಟು ಸುಲಭವಾಗಿ ಬಿಡಿಸಿಕೊಳ್ಳುವ ಕುಶಲತೆ ಹಾಲಮ್ಮ ಪಾತ್ರ ಕಟ್ಟಿಕೊಡುತ್ತದೆ. ಹುಣಸೆ ವ್ಯಾಪಾರದಲ್ಲಿ ಪೈಪೋಟಿ ನೀಡುತ್ತಾನೆ ಎಂಬ ಕಾರಣಕ್ಕೆ ಖಾಸೀಮನನ್ನು ರಾಮಣ್ಣ ದ್ವೇಷಿಸುತ್ತನಾದರೂ ಅವನ ಹೆಂಡತಿ ಮಾತ್ರ ಫಾತಿಮಾಳೊಂದಿಗೆ ಸ್ನೇಹ ಹಸ್ತ ಚಾಚುತ್ತಿರುತ್ತಾಳೆ. “ಫಾತೀಮಾಳೊಂದಿಗೆ ಮಾತನಾಡಬೇಡ, ನಿನ್ನ ಗ್ರಹಚಾರ ಬಿಡಿಸಿ ಬಿಟ್ಟೇನೂ ಎಚ್ಚರದಿಂದಿರು” ಎಂಬ ಗಂಡನ ಆಜ್ಞೆ ಮೀರಿ ಫಾತಿಮಾ ಜೊತೆಗೆ ಸಾಮರಸ್ಯದಿಂದ ಇರುವ ಹಾಲಮ್ಮ ಪಾತ್ರ ಮೆಚ್ಚುಗೆಯಾಗುತ್ತದೆ.

ಇಲ್ಲಿ ಕೋಪವನ್ನು ತೋರಿಸಲು ಬಳಸಿರುವ ರೂಪಕ “ಕೆಂಡದ ಮೇಲೆ ಹಾಕಿದ ಸಾಸಿವೆಯಂತೆ ಚಟಪಟ ಚಟಪಟ ಹುರಿದು ಸಿಡಿಯುತ್ತಾನೆ” ಎನ್ನುವ ಉಪಮೆ ವಿಷಯಕ್ಕೆ ಹೆಚ್ಚು ತೀವ್ರತೆಯನ್ನು ನೀಡುತ್ತದೆ. “ನಿಮ್ಮನೆಯವ್ರು ನಮ್ ಜೊತೆ ಸೇರ್ಬೇಡ ಅಂತ ಬೈದ್ರು ನಿಂಗೆ ಒಂಚೂರು ಭಯ ಇಲ್ಲ ನೋಡು, ನಾಳೆ ಸಿಟ್ ನಲ್ಲಿ ಏನಾದ್ರು ಮಾಡಿದ್ರೆ ಯಾರು ಹೊಣೆ” ಎನ್ನುವ ಸಾಲು ಹೆಣ್ಣು ಮಕ್ಕಳಿಗೆ ತಮ್ಮ ನಿರ್ಧಾರದ ಬಗ್ಗೆ ಇರುವ ದೃಢತೆಯನ್ನು ಹಾಗೂ ಇತರ ಜೀವಗಳ ಮೇಲೆ ಇರುವ ಕಾಳಜಿಯನ್ನು ಸಂಕೇತಿಸುತ್ತದೆ.

ಹುರುಳಿ ಕಟ್ಟೊಂದು ಎರಡು ಕುಟುಂಬಗಳ ನಡುವಿನ ವೈ ಮನಸ್ಸು ನಿವಾರಿಸಲು ಕಥೆಯುದ್ಧಕ್ಕೂ ತಣ್ಣನೆ ಪ್ರಯತ್ನ ಮಾಡುತ್ತಲೇ ಸಾಗುತ್ತದೆ. “ಹುಣಸೆಯಿಂದ ಬಂದ ದ್ವೇಷ ಹುರುಳಿಯಿಂದ ಹೋಯ್ತು” ಎಂಬ ಸಾಲು ನುಡಿಗಟ್ಟಿನ ಸ್ವರೂಪದಲ್ಲಿ ರಚಿತವಾಗಿದೆ. “ನಮ್ಮನೆ ಅಂಗಳದಾಗಿನ ಗಿಡಕ್ಕೆ ಗೊಬ್ಬರ ಹಾಕಿದ್ರು ಅದು ನಮಗ ಮಾತ್ರ ಗಾಳಿ ಕೊಡುತ್ತಾ? ಎಲ್ಲರಿಗೂ ಸಮನಾಗಿ ನೀಡುತ್ತೆ, ಯಾವ ಜಾತಿ, ಯಾವ ಮತ ನಾಲ್ಕ್ ದಿನದ ಬಾಳು ನೆಮ್ಮದಿಯಾಗಿ ಬದುಕಬೇಕು” ಎಂಬ ಹಾಲಮ್ಮನ ಸಂಭಾಷಣೆ ಇಡೀ ಕಥೆಯ ಒಟ್ಟಾಶಯವನ್ನು ಕಟ್ಟಿಕೊಡುತ್ತದೆ. ಅಂದರೆ ಮನುಷ್ಯನ ಬದುಕು ಪ್ರಾಣಿಗಳಿಗಿಂತ ನೀಚ ಸ್ಥಾನಕ್ಕೆ ಇಳಿದಿದೆ ಎಂಬ ಅಸಹನೆ ಲೇಖಕರದು. ಜಾತ್ರೆಯ ಸಮಯದಲ್ಲಿ ರಾಮಣ್ಣನಿಗೆ ಎದುರಾದ ಚಿರತೆ ದಾಳಿ ಎರಡು ಕುಟುಂಬಗಳನ್ನು ಬೆಸೆಯುವಲ್ಲಿ ಪ್ರಮುಖ ಪಾತ್ರ ವಹಿಸುವಲ್ಲಿಗೆ ಕಥೆ ಅಂತ್ಯ ಕಾಣುತ್ತದೆ.

ದೇವರ ಹೆಸರಿನಲ್ಲಿ ರಕ್ಷಿತವಾಗಿದ್ದ ಕಾಡನ್ನು ಕೂಗುಮಾರಿಯ ಕಥೆ ಕಟ್ಟಿ ಜನರನ್ನು ಹೆದರಿಸಿ ಹೊರಗೆ ಬರದಂತೆ ಭಯದ ವಾತಾವರಣ ನಿರ್ಮಿಸಿ ರಾತ್ರೋರಾತ್ರಿ ಕಾಡಿನ ಸಂಪತ್ತನ್ನು ಕೊಳ್ಳೆ ಹೊಡೆಯುವ ಘಟನೆ ‘ದೇವರ ಕಾಡು’ ಕಥೆ. ಈ ಕಥೆಯ ಪ್ರಮುಖ ಆಶಯ ದೇವರ ಹೆಸರಿನಲ್ಲಿ ತೆರೆಮರೆಯಲ್ಲಿ ನಡೆಯುವ ಕತ್ತಲ ಲೋಕದ ಕರಾಳ ಸಂಗತಿಗಳ ಅರಿವನ್ನ ಮೂಡಿಸುವ ಮೂಲಕ ಮೌಢ್ಯದ ನೆರಳಿನಿಂದ ಜನಸಮುದಾಯವನ್ನ ಹೊರ ತರುವುದೇ ಆಗಿದೆ. ಜನರ ಮುಗ್ಧತೆಯನ್ನು ಬಂಡವಾಳ ಮಾಡಿಕೊಂಡು ಸಮಾಜವನ್ನು ವಂಚಿಸುವ ಗೋಮುಖ ವ್ಯಾಘ್ರಗಳ ಮುಖವಾಡ ಕಳಚುತ್ತ ಸಾಮಾಜಿಕ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತವೆ. ಮಾನವ ಕುಲದ ಅಳಿವಿನ ಪ್ರಶ್ನೆಯನ್ನು ಎತ್ತುತ್ತಾ ಉಳಿವಿಗಾಗಿ ಮಾಡಲೇಬೇಕಾದ ಕಾರ್ಯಗಳೆಡೆಗೆ ಗಮನ ಹರಿಸುತ್ತದೆ.

ದೇವರ ಕಾಡು ಹಳ್ಳಿ ಮತ್ತು ಕಾಡಿನ ವಾತಾವರಣದಲ್ಲಿ ಅನಾವರಣಗೊಳ್ಳುತ್ತದೆ. ಪ್ರಕೃತಿಯಲ್ಲಿನ ರಮಣೀಯ ದೃಶ್ಯಗಳು, ಗೋಧೂಳಿಯ ವರ್ಣನೆ ಸೊಗಸಾಗಿ ಮೂಡಿಬಂದಿದೆ. ಈ ಕಥೆಯಲ್ಲಿ ಲೇಖಕರು ಮಲೆನಾಡು ಪ್ರದೇಶದಲ್ಲಿ ಕಂಡುಬರುವ ವಿಶಿಷ್ಟ ಬಗೆಯ ಹಾರುವ ಹಾವುಗಳನ್ನು ಬಳಸಿಕೊಳ್ಳುವ ಮೂಲಕ ಪ್ರಾಣಿ ಪ್ರಪಂಚದ ವಿಸ್ಮಯದ ಬಗ್ಗೆ ಕುತೂಹಲ ಮೂಡಿಸಿದ್ದಾರೆ. ಈ ಕಥೆಯ ಮತ್ತೊಂದು ವಿಶಿಷ್ಟತೆ ಎಂದರೆ ಅಲ್ಲಲ್ಲಿ ಕವಿತೆಗಳನ್ನು ಬಳಸಿಕೊಳ್ಳುವ ಮೂಲಕ ಕಥಾ ವಸ್ತುವಿಗೆ ಗಟ್ಟಿತನ ತುಂಬಿದ್ದಾರೆ. ದೇವರ ಕಾಡು ಹಳ್ಳಿ ಮತ್ತು ಕಾಡಿನ ನಿಕಟತೆಯೊಂದಿಗೆ ಅನಾವರಣಗೊಳ್ಳುತ್ತದೆ. ಪ್ರಕೃತಿಯಲ್ಲಿ ರಮಣೀಯ ದೃಶ್ಯಗಳು, ಗೋಧೂಳಿಯ ವರ್ಣನೆ ಸೊಗಸಾಗಿ ಮೂಡಿಬಂದಿದೆ.

ಪ್ರಜಾವಾಣಿಯಲ್ಲಿ ಪ್ರಕಟವಾಗಿದ್ದ ‘ಹೊಳಲೂರಿನ ಹಾಸ್ಟೆಲ್ ಹುಡುಗರು’ ಈ ಕಥೆ ಹಾಸ್ಟೆಲ್ ಜೀವನದ ಅನುಭವ ಇರುವವರಿಗೆ ತನ್ನೆಲ್ಲ ಸವಿ ನೆನಪುಗಳನ್ನು ಮರು ಸೃಷ್ಟಿಸುತ್ತದೆ. ಹಾಸ್ಟೆಲ್ ವಾಸ ಮಾಡದೇ ಇರುವವರಿಗೆ ಓದುವಿಕೆಯ ಮೂಲಕ ಅನುಭವಗಳ ಅನುಸಂಧಾನ ಮಾಡುತ್ತದೆ. ಈ ಕಥೆಯಲ್ಲಿ ಹಾಸ್ಟೆಲ್ ವಾರ್ಡನ್ ಹುರಿ ಮೀಸೆ ದೊಡ್ಡಪ್ಪ, ಅಡುಗೆ ಭಟ್ಟರಾಗಿ ಬಸವರಾಜಪ್ಪ ಮತ್ತು ದುರ್ಗೇಶಪ್ಪ ಪ್ರಧಾನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ವಾರ್ಡನ್ ದೊಡ್ಡಪ್ಪ ನೋಡಲು ದೊಡ್ಡದಾಗಿ ಮೀಸೆ ಬಿಟ್ಟುಕೊಂಡು ಕೈಯಲ್ಲಿ ಒಂದು ಕೋಲು ಹಿಡಿದು ಮಕ್ಕಳ ಕಣ್ಣಿಗೆ ಭಯಂಕರವಾಗಿ ಕಂಡರೂ ಅವನ ಕಣ್ಣುಗಳಲ್ಲಿ ಇದ್ದದ್ದು ಮಾತ್ರ ಕೆಂಡದ ಉಂಡೆಗಳಲ್ಲ, ಅಂತಃಕರಣದ ಭಾವಗಳು, ಪ್ರೀತಿ ಮಮತೆಯ ನೋಟಗಳು. ಇವುಗಳನ್ನೆಲ್ಲ ತುಂಬಾ ಆಪ್ತವಾಗಿ ಚಿತ್ರಿಸಿದ್ದಾರೆ.

ಬಹಳ ಮುಖ್ಯವಾಗಿ ಈ ಕಥೆ ಅನ್ನ ಹಸಿವು ಬಡತನದ ಕರಾಳತೆಯ ಸ್ವರೂಪವನ್ನು ಬಹಳ ಸೂಚ್ಯವಾಗಿ ಹೇಳುತ್ತದೆ. ಮನೆಯಲ್ಲಿನ ಬಡತನದ ಕಾರಣದಿಂದ ಹಾಸ್ಟೆಲ್ ಊಟವನ್ನೇ ನಂಬಿಕೊಂಡು ಬಂದ ಹುಡುಗರು ಈರುಳ್ಳಿ, ಟೊಮೇಟೊ, ಅಕ್ಕಿ, ಸಕ್ಕರೆ, ಮೊಟ್ಟೆಗಳ ಕಳ್ಳತನ ಮಾಡುತ್ತಿದ್ದ ಸಂಗತಿಗಳನ್ನು ಮನಮಿಡಿಯುವಂತೆ ದಾಖಲಿಸಿದ್ದಾರೆ. ಗೆಳೆಯರ ನಡುವಿನ ತುಂಟಾಟಗಳು ಇಲ್ಲಿ ಗಮನ ಸೆಳೆಯುತ್ತವೆ. ಆಗಾಗ ನಡೆಯುವ ಕಳ್ಳತನದ ಪ್ರಹಸನಗಳು ಕಳ್ಳರನ್ನು ಹಿಡಿಯಲು ವಾರ್ಡನ್ ಮತ್ತು ಅಡುಗೆ ಭಟ್ಟರ ಪರದಾಟಗಳು ನಗೆ ತರಿಸುತ್ತವೆ. ಸರ್ವಾಧಿಕಾರಿಗಳಂತೆ ವರ್ತಿಸುತ್ತಾ ದರ್ಪ ತೋರಿ ಬಡ ಮಕ್ಕಳನ್ನ ಶೋಷಿಸುವ ವಾರ್ಡನ್ಗಳ ನಡುವೆ ಹುರಿ ಮೀಸೆಯ ದೊಡ್ಡಪ್ಪ ಮಾನವೀಯತೆಯ ಸಾಕಾರ ಮೂರ್ತಿಯಂತೆ ಕಾಣುತ್ತಾರೆ. ಅವರ ಸಿಟ್ಟು, ನಿಷ್ಟುರತೆಯ ಮಾತುಗಳು, ಬುದ್ಧಿವಾದ ಮಕ್ಕಳ ಮೇಲಿನ ಕಾಳಜಿಯ ಪ್ರತೀಕವಾಗಿವೆ. ಹಾಸ್ಟೆಲ್ಗೆ ಸೇರಿದ ಅಡಿಕೆ ತೋಟದ ಕಳ್ಳತನದ ರಹಸ್ಯವನ್ನು ಭೇದಿಸಿ ಕಳ್ಳರನ್ನು ಹಿಡಿದು ಕೊಡುವ ಮೂಲಕ ಹಾಸ್ಟೆಲ್ಗೆ ಒದಗಿದ್ದ ಆರ್ಥಿಕ ಸಂಕಷ್ಟವನ್ನು ಎದುರಿಸುವಲ್ಲಿ ಹೊಳಲೂರಿನ ಹಾಸ್ಟೆಲ್ ಹುಡುಗರ ಪ್ರಯತ್ನ ಯಶಸ್ವಿಯಾಗುತ್ತದೆ. ಆಗ ರಾಜ್ಯಮಟ್ಟದಲ್ಲಿ ಸುದ್ದಿ ಆಗುವ ಕಥನವಿದು.

ಜಾತಿಯ ಅಧಿಪತಿ ತಂದೆಯೋ ಅಥವಾ ತಾಯಿಯೋ ಎಂದು ಸಾಗುವ ಪುಟ್ಟ ಕಥೆ ಇದು ಸಮಾಜದ ಎಲ್ಲ ನಿರ್ಬಂಧಗಳನ್ನು ದಿಟ್ಟತನದಿಂದ ಎದುರಿಸಿ ಬದುಕು ಕಟ್ಟಿಕೊಂಡ ಹೆಣ್ಣು ಮಗಳಾಗಿ ಸಿದ್ದವ್ವ ಕಾಣಿಸಿಕೊಂಡಿದ್ದಾಳೆ. ಅವಳು ತನ್ನ ಮಗಳನ್ನು ಜಾತಿ ಮೆಟ್ಟಿನಿಂತು ಅನ್ಯ ಜಾತಿಯವರೊಂದಿಗೆ ವಿವಾಹ ಮಾಡಿಸುತ್ತಾಳೆ. ವಿಮುಖ ಎಂಬ ಮಗು ಹುಟ್ಟಿದ ನಂತರ ತಂದೆ ಅವರನ್ನು ತೊರೆದು ಹೊರಟು ಹೋಗುತ್ತಾನೆ. ನಂತರ ತಾಯಿ ಆಶ್ರಯದಲ್ಲಿಯೆ ಬೆಳೆದ ವಿಮುಖನಿಗೆ ತನ್ನ ತಾಯಿಯ ಜಾತಿಯೇ ಬೇಕೆಂದು ಕಾನೂನು ಹೋರಾಟ ಮಾಡುವ ಕಥನವೇ ವಿಜಾತಿ. ಇಲ್ಲಿ ನ್ಯಾಯಾಧೀಶರು ಹೇಳುವ ಮಾತು ಮತ್ತು ಅವರ ಆತಂಕ ಗಮನಿಸಬಹುದು. “ನನ್ನ ಪಾಲಿಗೆ ಇದೊಂದು ವಿಶೇಷ ಪ್ರಕರಣ. ಹುಡುಗನೊಬ್ಬ ತನ್ನ ತಾಯಿಯ ಜಾತಿಯನ್ನು ಬಳಸಲು ಅರ್ಜಿ ಸಲ್ಲಿಸಿದ್ದಾನೆಂದರೆ ಜಾತಿ ವ್ಯವಸ್ಥೆ ಇನ್ನೂ ಈ ಸಮಾಜದಲ್ಲಿ ಹೇಗೆ ತನ್ನ ಪ್ರಭಾವವನ್ನು ಬೀರುತ್ತಿದೆ ಎಂದು ತಿಳಿಯಬಹುದು, ಅದಕ್ಕೆ ವಿಷಾದವಿದೆ” ಎಂಬ ಮಾತು ನಮ್ಮ ಸಮಾಜದ ಅತಿ ದೊಡ್ಡ ಕ್ರೌರ್ಯವನ್ನು ಸೂಚ್ಯವಾಗಿ ಹೇಳುತ್ತದೆ. ಅಂತಿಮವಾಗಿ ತೀರ್ಪು ವಿಮುಖನ ಕಡೆಗೆ ಆಗಿ ಸಮಾಜದ ಪ್ರಶ್ನೆ ಒಂದಕ್ಕೆ ಸ್ಪಷ್ಟ ಉತ್ತರ ದೊರೆಯುವಲ್ಲಿಗೆ ಕಥೆ ಮುಕ್ತಾಯ ಕಾಣುತ್ತದೆ. ಇದು ಇಂದಿನ ಅಂತರ ಜಾತಿ ವಿವಾಹಿತರ ಮಕ್ಕಳ ಬದುಕಿಗೆ ಸಂಬಂಧಿಸಿದ ಕಥನವಾಗಿದೆ.

ಹೊಸತನದ ಕಥಾ ವಸ್ತುವಿನಿಂದ ರಚಿತವಾದ ಕಥೆ ‘ಕೆಂಪು ಷರಾಬು’. ಈ ಷರಾಬು ಪದವೇ ನಶೆ. ಓದುಗರಿಗೆ ಓದಿನ ನಶೆ ಏರಿಸುತ್ತದೆ. ಗ್ರಾಮೀಣ ಪ್ರದೇಶದ ಬೈಗುಳಗಳ ಸುರಿಮಳೆಯೊಂದಿಗೆ ಪ್ರಾರಂಭವಾದ ಕಥೆ ಬಡತನದ ಕರಾಳ ರೂಪದೆಡೆಗೆ ಹೊರಡುತ್ತದೆ. ಗಂಡನಿಲ್ಲದ ಸಣ್ಣವ್ವ ತನ್ನ ಐದು ಜನ ಮಕ್ಕಳಿಗೆ ನೆಲೆ ಕಾಣಿಸಲು ಪಡುವ ಪಡಿಪಾಟಲು ಕಥೆಗೆ ನೈಜ ನೆಲೆ ಒದಗಿಸುತ್ತದೆ. ತನ್ನ ಮೂರನೇ ಮಗಳ ಮದುವೆ ವಿಷಯದಲ್ಲಿ ತೆಗೆದುಕೊಳ್ಳುವ ನಿರ್ಧಾರ ಜಾತಿ ವ್ಯವಸ್ಥೆಯಿಂದ ತುಸುವಾದರೂ ಹೊರಬರುವ ಮಾರ್ಗವನ್ನು ಸೂಚಿಸುತ್ತದೆ. “ಜಾತಿ ಕುಲ ಅಂತ ನೋಡ್ಕೊಂಡು ಕುಂತ್ರೆ ಅವಳ ಬದುಕು ಮೂರಾಬಟ್ಟೆ ಆಗೋದಂತೂ ಗ್ಯಾರೆಂಟಿ. ಯಾವ ಜಾತಿನೋ? ಯಾವ ಕುಲಾನೋ? ಅದೆಲ್ಲ ನನಗೆ ಬೇಡ ರಾಮಣ್ಣ. ಒಳ್ಳೆ ಹುಡುಗ ಆಗಿದ್ರೆ ಸಾಕು” ಅನ್ನುವ ಮಾತು ಮದುವೆಗೆ ಏನನ್ನು ನೋಡಬೇಕು ಎಂಬ ಅಂಶಕ್ಕೆ ಪ್ರಾಧಾನ್ಯತೆ ನೀಡಬೇಕೆಂಬ ಅಂಶವಿಲ್ಲಿ ವ್ಯಕ್ತವಾಗುತ್ತದೆ. ಜಾತಿ ವ್ಯವಸ್ಥೆಯಿಂದ ಸಮಾಜ ಹೊರ ಬರಲು ಇಂತಹ ಆಲೋಚನೆಗಳು ಬಹು ಅಗತ್ಯ. ನಂತರ ಸಣ್ಣವನ ಮಗ ತಿಪ್ಪೇಶಿಯನ್ನ ಸಾಕಿಕೊಳ್ಳುವ ರಾಮಣ್ಣ, ಅವನ ಮರಣ ನಂತರ ಅವನ ಎರಡನೇ ಹೆಂಡತಿ ಮತ್ತು ತಿಪ್ಪೇಶ್ ನಡುವೆ ಉಂಟಾಗುವ ಸಂಬಂಧ, ಅದರಿಂದ ಅವಳು ಗರ್ಭಿಣಿಯಾಗುವುದು ಇವೆಲ್ಲ ದೃಶ್ಯ ಕಾವ್ಯದಂತೆ ಮನದಲ್ಲಿ ಸುಳಿದು ಹೋಗುತ್ತವೆ. ಈ ಕಥೆಯಲ್ಲಿ ಹಳ್ಳಿಯಿಂದ‌ ನಗರಕ್ಕೆ ಬಂದು ಆ ಪ್ರದೇಶದ ವಾತಾವರಣಕ್ಕೆ, ಇಂಗ್ಲಿಷ್ ಶಾಲೆಗೆ ಒಗ್ಗಿಕೊಳ್ಳಲು ಪರದಾಡುವ ಸನ್ನಿವೇಶಗಳು ಸೊಗಸಾಗಿ ಚಿತ್ರಿತವಾಗಿವೆ. ಹೆಣ್ಣೊಬ್ಬಳು ಅನ್ಯ ಪುರುಷನಿಂದ ಗರ್ಭವತಿಯಾದಾಗ ಸಮಾಜ ಅವಳನ್ನು ಹೇಗೆಲ್ಲ ನೋಡುತ್ತದೆ? ಪ್ರತಿಕ್ರಿಸುತ್ತದೆ ಎಂಬ ಕಥನವಾಗಿದೆ. ಗ್ರಾಮ ಸರ್ಕಾರಗಳಂತಿದ್ದ ಪಂಚಾಯಿತಿಗಳ ಮುಖ್ಯಸ್ಥೆಯಾಗಿ ಬರುವ ಚೆನ್ನಮ್ಮ ಪಾತ್ರ ಸ್ತ್ರಿ ಸಮಾನತೆ ಹಾಗೂ ಸ್ತ್ರಿ ಹಕ್ಕುಗಳನ್ನು ಪ್ರತಿನಿಧಿಸುತ್ತದೆ. ಜೊತೆಗೆ ಗಿರಿಜವ್ವ ಮಗುವನ್ನು ಉಳಿಸಿಕೊಂಡು ಸಾಕಬಹುದು ಎಂಬ ತೀರ್ಮಾನ ಸ್ತ್ರೀಗೆ ತನ್ನ ತಾಯ್ತನವನ್ನು ಅನುಭವಿಸುವ ಅವಕಾಶಗಳನ್ನು ಒದಗಿಸುವ ನಿರ್ಧಾರವನ್ನು ಬೆಂಬಲಿಸುತ್ತದೆ. ತಿಪ್ಪೇಶಿ ಪ್ರೇಮ ವಿವಾಹವಾದ ರೂಪಾಳ ಷರಾಬಿನ ಕಥೆ ವಿಶೇಷವಾಗಿ ಗಮನ ಸೆಳೆಯುತ್ತದೆ. ತನ್ನ ಸೌಂದರ್ಯ ರಕ್ಷಣೆಗಾಗಿ ಗೆಳತಿಯ ಸಲಹೆಯಂತೆ ಚರ್ಮ ಕಾಂತಿಯುತವಾಗಿಡಲು ರೂಪ ಮಾಡುವ ಪ್ರಯತ್ನಗಳು ದೊಡ್ಡ ಅವಾಂತರಗಳನ್ನು ಸೃಷ್ಟಿಸುತ್ತವೆ. ಷರಾಬು ತಂದುಕೊಡುತ್ತಿದ್ದ ಕಾಂಪೌಂಡರ್ಗೂ ರೂಪಾಳಿಗೂ ಸಂಬಂಧ ಕಟ್ಟುವ ಮಾತುಗಳು, ಡಾಕ್ಟರ್ ಹೆಂಡತಿ ಷರಾಬು ಕುಡಿತಾಳಂತೆ ಎನ್ನುವ ಸುದ್ದಿ ಊರು ತುಂಬಾ ಹಬ್ಬಿ ಅಂತಿಮವಾಗಿ ಇದು ಸೌಂದರ್ಯವರ್ಧನೆಗಾಗಿ ತರುತ್ತಿದ್ದ ಷರಾಬು ಎಂದು ಪಂಚಾಯಿತಿಯಲ್ಲಿ ಸಮಜಾಯಿಸಿ ಕೊಡುವಲ್ಲಿಗೆ ಕಥೆ ಮುಕ್ತಾಯವಾಗುತ್ತದೆ.

‘ಕಳೆದುಕೊಂಡವರು’ ಈ ಕಥೆ ವಿಭಿನ್ನ ಹೊಳಹುಗಳಲ್ಲಿ ತೆರೆದುಕೊಳ್ಳುತ್ತದೆ. ಇಡೀ ಕಥೆಯುದ್ಧಕ್ಕೂ ಓದುಗರೊಳಗೆ ಯಾರ್ಯಾರು ಏನೇನು ಕಳೆದುಕೊಂಡರೆಂಬ ಹುಡುಕಾಟ ನಡೆಯುತ್ತದೆ. ಎಲ್ಲವನ್ನು ಪಡೆದುಕೊಳ್ಳುತ್ತಿದ್ದೇವೆ ಎಂಬ ಭ್ರಮೆಯಲ್ಲಿ ಸಾಗುವ ಕಥೆ ಅಂತಿಮವಾಗಿ ವಾಸ್ತವಿಕತೆಯ ದರ್ಶನ ಮಾಡಿಸುತ್ತದೆ. ಕವಿಯಾಗಿದ್ದ ಪ್ರಾಚೀನ ತನ್ನ ಬರಹಗಳಲ್ಲಿ ಮೂಡಿಸುತ್ತಿದ್ದ ಆದರ್ಶಗಳನ್ನ ನಿತ್ಯ ಬದುಕಿನಲ್ಲಿ ಪಾಲಿಸಲು ಪ್ರಯತ್ನಿಸುವ ಕಥನವಿದು. ಈ ಎಲ್ಲಾ ಆದರ್ಶಗಳು ಇವನ ಹುಚ್ಚಾಟಗಳಂತೆ ಜನರಿಗೆ ಕಾಣುತ್ತವೆ. ನಾವು ನಮ್ಮ ಸಮಾಜ ಯಾವ ಹಂತಕ್ಕೆ ತಲುಪುತ್ತಿದ್ದೇವೆ ಎಂಬ ಕುರುಹು ನೀಡುತ್ತದೆ. ಜನರ ಬದುಕಿನಲ್ಲಿ ಇರಬೇಕಾದ ಮೌಲ್ಯಗಳು, ಆದರ್ಶಗಳು, ಜೀವನ ತತ್ವಗಳು ಸಮಾಜದ ಮುಂದೆ ಅಪಹಾಸ್ಯಕ್ಕಿಡಾಗುವ ವಿಷಾದದ ಕಥೆಯಿದು.

ಈ ಕಥೆ ಮರಳು ಮಾಫಿಯಾ, ರೈತ ಹಿತಾಸಕ್ತಿಯ ಕೊರತೆ, ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲಿನ ಅಕ್ರಮಗಳ ಸುತ್ತ ಬೆಳಕು ಚೆಲ್ಲುತ್ತದೆ. ಈ ಎಲ್ಲಾ ಘಟನೆಗಳ ಸಂದರ್ಭದಲ್ಲಿ ರಾಜಕಾರಣಿಗಳ ಹುಸಿ ಭರವಸೆಯ ನಾಟಕ ಈ ಕಥೆಯಲ್ಲಿ ಜರುಗುತ್ತದೆ. ಪ್ರಾಚೀನನ ಹೋರಾಟಕ್ಕೆ ಜೊತೆಯಾದವಳು ಕಥಾನಾಯಕಿ ಹಿಮಾನಿ. ಈ ಸಮಸ್ಯೆಗಳಿಗೆ ಪರಿಹಾರ ಸಿಗದಿದ್ದಾಗ ಅಧಿಕಾರದಿಂದ ಬಗೆಹರಿಸಲು ಪ್ರಾಚೀನ ರಾಜಕೀಯ ಪಕ್ಷ ಸೇರುತ್ತಾನೆ. ಆದರೆ ಅಲ್ಲಿ ಇವನನ್ನು ಬಳಸಿಕೊಂಡು ಇವನಿಗೆ ಅರಿವಿಲ್ಲದಂತೆ ಅಪ್ರಮಾಣಿಕವಾಗಿ ಮೋಸ ವಂಚನೆ ಸುಳ್ಳಿನ ದಾರಿಯಲಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತಾರೆ. ಭ್ರಷ್ಟಾಚಾರದಲ್ಲಿ ತೊಡಗುತ್ತಾರೆ. ಇದರಿಂದ ಮನನೊಂದ ಪ್ರಾಚೀನ ಮತ್ತೆ ಹಳ್ಳಿಗೆ ವಾಪಸ್ ಬಂದು ರೈತನಾಗುವ ಕಥೆ ಇದಾಗಿದೆ.

ರಾಜಕಾರಣದ ಬೆನ್ನತ್ತಿದ ಪ್ರಾಚೀನ ಕರ್ನಾಟಕದಿಂದ ರೈಲಿನಲ್ಲಿ ಪ್ರಯಾಣ ಮಾಡಿ ದೆಹಲಿ ತಲುಪುತ್ತಾನೆ. ಅಲ್ಲಿ ನಡೆಯುವ ರಾಜಕೀಯ ಘಟನೆಗಳನ್ನು ವಾಸ್ತವದ ಪರಿಧಿಯೊಂದಿಗೆ ಕಥೆಗಾರರು ಚಿತ್ರಿಸಿದ್ದಾರೆ. ವಿಶೇಷವಾಗಿ ರೈಲಿನಲ್ಲಿ ಒಂದೊಂದು ರಾಜ್ಯದ ಗಡಿಗಳನ್ನು ದಾಟುವಾಗ ಬದಲಾಗುವ ಭಾಷೆಗಳ ಅನುಭವವನ್ನು ಕಣ್ಣಿಗೆ ಕಟ್ಟುವಂತೆ ಕಟ್ಟಿಕೊಟ್ಟಿದ್ದಾರೆ. ಕಾಶ್ಮೀರದ ಹುಡುಗರನ್ನು ದೆಹಲಿಯಲ್ಲಿ ನಡೆಸಿಕೊಂಡ ಬಗ್ಗೆಯೂ ಲೇಖಕರು ವಿಷಾದದ ದನಿಯಲ್ಲಿ ಇದೆ ಕಥೆಯಲ್ಲಿ ವ್ಯಕ್ತಪಡಿಸುತ್ತಾರೆ. ಒಟ್ಟಾರೆಯಾಗಿ ಈ ಕಥೆ ಇಂದಿನ ಭಾರತದ ರಾಜಕೀಯ ಚಿತ್ರಣವನ್ನು ದಕ್ಷಿಣದಿಂದ ಹಿಡಿದು ಭಾರತದ ರಾಜಧಾನಿ ದೆಹಲಿ ಉತ್ತರದವರೆಗೂ ಕಟ್ಟಿಕೊಟ್ಟಿದ್ದಾರೆ.

‘ನೀರಿನಂಚಿನ ಸೆರಗು’ ಕಥೆ ಅಂತರ್ ಧರ್ಮಿಯ ವಿವಾಹದ ಸಾಧಕ ಬಾಧಕಗಳ ಕುರಿತು ಚರ್ಚಿಸುತ್ತದೆ. ಲೇಖಕರು ಕಾರ್ಪೊರೇಟ್ ಜಗತ್ತಿನ ತನ್ನೆಲ್ಲ ಅನುಭವಗಳನ್ನೆಲ್ಲ ಕಥಿಸಿದ್ದಾರೆ. ರೈಲು ಪಯಣ ಮನಸ್ಸಿಗೆ ಮುದ ನೀಡುತ್ತದೆ. ಮಧ್ಯಮ ವರ್ಗದ ಹೆಣ್ಣು ಮಕ್ಕಳ ಪೋಷಕರ ಪರದಾಟಗಳು ನ್ಯಾಂಸಿ ಕುಟುಂಬದ ಮೂಲಕ ಬಿತ್ತರಗೊಂಡಿದೆ. ಅವಳು ಚಂದನ್-ನನ್ನು ಪ್ರೀತಿಸುವುದು ಗೊತ್ತಾಗಿ ಅವರಿಬ್ಬರನ್ನು ಒಂದು ಮಾಡಲು ಬಯಸುವ ನ್ಯಾಂಸಿ ಗೆಳೆಯ ಇಮ್ರಾನ್ ಓದುಗರಿಗೆ ಹೆಚ್ಚು ಅರ್ಥವಾಗುತ್ತಾನೆ. ಈ ಕಥೆಯಲ್ಲಿ ಅಂತರ್ ಧರ್ಮಿಯ ವಿವಾಹವಾದರೆ ಎರಡು ಕುಟುಂಬಗಳು ಎದುರಿಸುವ ಸವಾಲುಗಳ ಚರ್ಚೆ ಮುನ್ನಲೆಗೆ ಬರುತ್ತದೆ. ಹಾಗಾಗಿ ತನ್ನ ಕುಟುಂಬಕ್ಕಾಗಿ ಸಮಾಜಕ್ಕಾಗಿ ಇವಳನ್ನು ತ್ಯಾಗ ಮಾಡುವ ಕಥಾನಾಯಕ ಆದರ್ಶದ ಕುದುರೆ ಏರಿ ಅಪಾಯದಲ್ಲಿ ಸಿಲುಕುವ ಬದಲು ವಾಸ್ತವವನ್ನು ಅರಿತು ಬಾಳಬೇಕೆಂದು ನಿರ್ಧರಿಸುವ ಕಥನವೇ ಇದು.

‘ಬೆನ್ನೇರಿದ ಬಯಲು’ ಕಥಾ ಸಂಕಲನದ ಶಿರೋನಾಮೆಯನ್ನು ಹೊತ್ತ ಕಥೆಯಾಗಿದೆ. “ಬದುಕಿನಲ್ಲಿ ಆದರ್ಶಗಳು ಹುಟ್ಟಿಸುವಷ್ಟು ಭ್ರಮೆಯನ್ನು ಮತ್ತೊಂದು ಹುಟ್ಟಿಸುವುದಿಲ್ಲ” ಎಂಬ ಲೇಖಕರ ಮಾತು ಬದುಕು ನಾವು ಬಯಸಿದಂತಿಲ್ಲ ಬಂದಂತೆ ಅದನ್ನು ಎದುರಿಸಿ ನಿಲ್ಲಬೇಕು ಎಂದು ಹೇಳುತ್ತದೆ. ಈ ಕಥಾನಾಯಕ ಮಧ್ಯಮ ವರ್ಗದ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ ಬದುಕು ಕಟ್ಟಿಕೊಂಡ ಹೆಜ್ಜೆ ಗುರುತುಗಳನ್ನ ಈ ಕಥೆ ಗರ್ಭೀಕರಿಸಿಕೊಂಡಿದೆ. ಇಲ್ಲಿ ವಿದ್ಯಾರ್ಥಿಗಳ ಬದುಕು ಭವಣೆ, ಉದ್ಯೋಗಗಳನ್ನ ಅರಸಿ ಹೋಗುವ ಅನುಭವಗಳು, ಹಾಸ್ಟೆಲ್ ನಲ್ಲಿನ ಪರದಾಟಗಳು, ಪರೀಕ್ಷೆ ಶುಲ್ಕಕ್ಕಾಗಿ ವಿದ್ಯಾರ್ಥಿ ವೇತನ ಪಡೆಯುವ ತಾಕಲಾಟಗಳು, ಸಂಶೋಧನೆಗಳು ಇವೆ ಮುಂತಾದ ವಿಷಯಗಳ ಮೇಲೆ ಕಥೆ ಬೆಳಕು ಚೆಲ್ಲುತ್ತದೆ.

ಒಟ್ಟಿನಲ್ಲಿ ಶಂಕರ್ ಸಿಹಿಮೊಗ್ಗೆ ಅವರ ಕಥೆಗಳು ಮಾನವೀಯತೆಯ ತುಡಿತ ಮತ್ತು ಭೂತವನ್ನು ಸಮಕಾಲಿನಗೊಳಿಸುವ ನೆಲೆಯಲ್ಲಿ ವಿಶೇಷವಾಗಿ ಮೂಡಿಬಂದಿವೆ. ಬಹುಮುಖಿ ಸಂವೇದನೆಗಳನ್ನು ಓದುಗರಿಗೆ ಉಣಪಡಿಸುತ್ತವೆ. ಸಾಂಕೇತಿಕವಾಗಿ ಬಳಸಿಕೊಂಡಿರುವ ಗಾದೆ ಮಾತುಗಳು ಮತ್ತು ಇವರೇ ರಚಿಸಿದ ನುಡಿಗಟ್ಟುಗಳಂತಹ ವಾಕ್ಯಗಳು ವಿಶೇಷವಾಗಿ ಗಮನ ಸೆಳೆಯುತ್ತವೆ. ಇಲ್ಲಿನ ಕಥಾ ವಸ್ತು ವಿಷಯಗಳು ನವ ನವೀನ ಎನಿಸುತ್ತವೆ. ಅಭಿವ್ಯಕ್ತಿ ಪ್ರಾಮಾಣಿಕತೆ ಎದ್ದು ಕಾಣುತ್ತದೆ. ಒಟ್ಟಿನಲ್ಲಿ ಶಂಕರ್ ಸಿಹಿಮೊಗ್ಗೆ ಯುವ ತಲೆಮಾರಿನ ಕಥೆಗಾರರಾಗಿದ್ದು ಅವರ ಚಿಂತನೆಗಳು, ಆಲೋಚನೆಗಳು, ಸೃಜನಶೀಲ ಅಭಿವ್ಯಕ್ತಿ, ವಿಭಿನ್ನ ರೂಪದ ಮುಖಾಮುಖಿ, ಹೊಸತನದ ಹುಡುಕಾಟ ಇವರೊಬ್ಬ ಭರವಸೆಯ ಕಥೆಗಾರ ಎಂಬ ಸುಳಿವು ನೀಡುತ್ತವೆ.

-ಅನುಸೂಯ ಯತೀಶ್

MORE FEATURES

ಉಪರಿ ಗಾತ್ರದಲ್ಲಿ ಹಿತಕರ, ಗುಣದಲ್ಲಿ ಹಿರಿದು...

26-07-2024 ಬೆಂಗಳೂರು

"ಅಜಿತ್ ಅವರ ಅರಿವಿನ ವ್ಯಾಪ್ತಿ ದೊಡ್ಡದು. ಆದರೆ ಅದನ್ನು ಬೊಗಸೆಯಲ್ಲಿಟ್ಟು ಓದುಗನಿಗೆ ಉಣಿಸುವುದು ಅವರ ವಿಶೇಷ ಶಕ್...

ಮಲೆನಾಡ ಪರಿಸರದ ಸುಂದರ ಜೀವನವನ್ನು ಹೇಳುವ ಕೃತಿಗಳಲ್ಲಿ ಇದು ಒಂದು 

26-07-2024 ಬೆಂಗಳೂರು

‘ಜೀವನದಲ್ಲಿ ಮರೆಯಾಗುತ್ತಿರುವ, ಮುಂದೆದುರಿಸಲು ಸಿದ್ಧವಾಗುತ್ತಿರುವ ಸಂದರ್ಭಗಳೇ ಈ ಕಥಾಸಂಕಲನದ ಕಥೆಗಳು’ ಎ...

ಈ ಕಾದಂಬರಿ ಓದುವುದಕ್ಕಿಂತ ಸ್ವತಃ ನೋಡುವಂತೆ ಪ್ರೇರೇಪಿಸುತ್ತದೆ; ಉಪೇಂದ್ರ ಕೆ. ಆರ್

25-07-2024 ಬೆಂಗಳೂರು

‘ಈ ಕಾದಂಬರಿಯಲ್ಲಿ ನಮ್ಮ ಜೀವನದ ಅನುಭವದಿಂದ ಕಟ್ಟಿಕೊಂಡ ಪ್ರಪಂಚಕ್ಕಿಂತ ಮಿಗಿಲಾದ, ಹೊಸದಾದ ಹಾಗೂ ರೋಚಕವಾದ ಒಂದು ...