ಬರಹಗಾರ ವರ್ತಮಾನದ ತಲ್ಲಣಗಳಿಗೆ ಸ್ಪಂದಿಸದೆ ಹೋದರೆ ಅವನು ಬರಹಗಾರನೇ ಅಲ್ಲ


"ಈ ಕಾದಂಬರಿಯಲ್ಲಿ ಪುಟ್ಟ‌ ಸುಂದರವಾದ ಬೊಂಬೆಯ ಪ್ರತೀಕದ ಮೂಲಕ ಈ‌‌ ಭೀಕರ ‌ದುರಂತಕ್ಕೆ ಹೃದಯತುಂಬಿ ಸ್ಪಂದಿಸಲಾಗಿದೆ‌. ಈ ಕಾದಂಬರಿ ಕೇವಲ ಸುನಾನಿಯ ವರದಿಯಲ್ಲ ಕಲಾತ್ಮಕವಾಗಿ ಬೊಂಬೆಯ ಕಣ್ಣುಗಳಲ್ಲಿ ದುರಂತದ ಭೀಕರ ದುರಂತದ ಚಿತ್ರಣವನ್ನು ಕೊಡಲಾಗಿದೆ," ಎನ್ನುತ್ತಾರೆ ಉದಯ ಕುಮಾರ್ ಹಬ್ಬು. ಅವರು ಕೆ.ಜಿ ಮಲ್ಯ ಅವರ ಅನುವಾದಿತ ‘ತ್ಸುನಾಮಿ’ ಕೃತಿ ಕುರಿತು ಬರೆದ ವಿಮರ್ಶೆ.

ತ್ಸುನಾಮಿ ಇದು ಮನುಷ್ಯ ಕಂಡ ಭೀಕರ ದುರಂತ. ಸಮುದ್ರದಲ್ಲಿ ಆದ ಭೂಕಂಪದ ಪರಿಣಾಮವಾಗಿ ಸಮುದ್ರದ ರಾಕ್ಷಸ ತೆರೆಗಳು ಮನುಷ್ಯರನ್ನು ಲಕ್ಷಗಟ್ಟಲೆ ಸಂಖ್ಯೆಯಲ್ಲಿ ನಿರ್ನಾಮಗೊಳಿಸಿತು. ಎಷ್ಟೋ ಲಕ್ಷ ಜನ ಮನೆ ಮಾರುಗಳನ್ನು ಜೀವವನ್ನು ಕಳೆದುಕೊಂಡರು. ಮಕ್ಕಳು ಅನಾಥತರಾದರು. ಈ ಭೀಕರ ಜಲಪ್ರಳಯ ಇಡೀ ಮಾನವ ಸಂತತಿಯನ್ನು ಅಳಿಸಿಬಿಡುವಷ್ಟು ಘೋರ, ಭೀಕರವಾದ ದುರಂತವಾಗಿತ್ತು. ಈ ದುರಂತವನ್ನು ಕೇಳಿದವರ, ಓದಿದವರ ಹೃದಯ ಕರುಣೆಯಿಂದ ವಿಲಿ ವಿಲಿ‌ ಒದ್ದಾಡದ ಮನುಷ್ಯನಿಲ್ಲ. ಬರಹಗಾರರಿಗಂತೂ ಈ ದುರಂತ ತುಂಬ ಕಾಡುತ್ತದೆ. ಅಂತೆಯೇ ಕರುಣಾ ಮೈತ್ರಿ ಸ್ವಭಾವದ ಮಲ್ಯರಿಗೂ ಇದು ತುಂಬ ಕಾಡಿತು. ಈ ದುರಂತವನ್ನು ತಮ್ಮದೇ ಬದುಕಿನ ದುರಂತವೆಂಬಂತೆ ಈ ಪುಟ್ಟ ಕಾದಂಬರಿಯ ಮೂಲಕ ವ್ಯಕ್ತಪಡಿಸಿದ್ದಾರೆ. ಬರಹಗಾರ ವರ್ತಮಾನದ ತಲ್ಲಣಗಳಿಗೆ ಸ್ಪಂದಿಸದೆ ಹೋದರೆ ಅವನು ಬರಹಗಾರನಾಗಲು ನಾಲಾಯಕ್ಕು.

ಈ ಕಾದಂಬರಿಯಲ್ಲಿ ಪುಟ್ಟ‌ ಸುಂದರವಾದ ಬೊಂಬೆಯ ಪ್ರತೀಕದ ಮೂಲಕ ಈ‌‌ ಭೀಕರ ‌ದುರಂತಕ್ಕೆ ಹೃದಯತುಂಬಿ ಸ್ಪಂದಿಸಲಾಗಿದೆ‌. ಈ ಕಾದಂಬರಿ ಕೇವಲ ಸುನಾನಿಯ ವರದಿಯಲ್ಲ ಕಲಾತ್ಮಕವಾಗಿ ಬೊಂಬೆಯ ಕಣ್ಣುಗಳಲ್ಲಿ ದುರಂತದ ಭೀಕರ ದುರಂತದ ಚಿತ್ರಣವನ್ನು ಕೊಡಲಾಗಿದೆ. ಇನ್ನೊಂದು ಸಂಕೇತ ಇಚ್ಛೆ ಪೂರೈಸುವ ವೃಕ್ಷದ ಮೂಲಕ ವ್ಯಕ್ತಪಡಿಸಲಾಗಿದೆ‌. ವಿದೇಶಿ ದಂಪತಿಗಳು ಕ್ರಿಸ್ಮಸ್ ಆಚರಿಸಲು ಒಂದು ಫೈವ್ ಸ್ಟಾರ್ ಹೋಟೆಲಿನಲ್ಲಿ ತಂಗಿದ್ದು ತಮ್ಮ ಮಗಳು ಪಿಂಕಿಗೆ ಬೊಂಬೆ ಅಂಗಡಿಯಿಂದ ಹತ್ತಿಯಿಂದ ತುಂಬಿಸಿದ ಸುಂದರ ಬೊಂಬೆಯನ್ನು ಮಗಳ ಇಚ್ಛೆಯ ಪ್ರಕಾರ ಖರೀದಿಸಿ ಕೊಟ್ಟಿರುತ್ತಾರೆ. ಅವರು ಸಮುದ್ರ ತೀರಕ್ಕೆ ಹೋಗಿ ಬಂಗಾರದ ಬಣ್ಣದ ಸೂರ್ಯನ ಸೌಂದರ್ಯವನ್ನೂ ನೋಡಿ ಬಂದಿರುತ್ತಾರೆ‌.
ಬೊಂಬೆಗೆ ಸ್ವೀಟಿ ಎಂದು ಹೆಸರಿಟ್ಟಿರುತ್ತಾಳೆ ಪಿಂಕಿ.

"ರಾತ್ರಿ ಏಕಾಏಕಿ ಸಾವಿರಾರು‌ ಗುಡುಗುಗಳು ಏಕಕಾಲದಲ್ಲಿ ಗುಡುಗುವಂತಹ ಭೀಕರ ಶಬ್ದ. ಇಡೀ ಹೋಟೆಲು ತೂಗಾಡತೊಡಗಿತು. ಅನೇಕ ಬಾರಿ ಅತ್ತಿತ್ತ ವಾಲಿದ ಕಟ್ಟಡದ ಸುತ್ತ ಬೃಹದಾಕಾರದ ಅಲೆಗಳು ಅಪ್ಪಳಿಸಿದವು‌. ಕೆಲವೇ ಸೆಕೆಂಡುಗಳ ಒಳಗೆ ಕಟ್ಟಡ ನೀರಿನ ರಭಸಕ್ಕೆ ಹಾಗೂ ಶಕ್ತಿಗೆ ಭೂಮಿಗೆ ಉರುಳಿತು‌. ಕಟ್ಟಡದ ಬಹುಭಾಗ ನೀರಿನ ಅಲೆಗಳ ಮೇಲೆ ಬೆಂಕಿಪೆಟ್ಟಿಗೆಯಂತೆ ತೇಲುತ್ತ ಸಾಗಿತು. ನಂತರ ಹಡಗಿನಂತೆ ನೀರಿನಲ್ಲಿ ಮುಳುಗಿತು’ ಹೀಗೆ ಕಾದಂಬರಿಕಾರರು ಸುನಾಮಿ ದುರಂತದ ಚಿತ್ರವತ್ತಾಗಿ ವರ್ಣಿಸಿದ್ದಾರೆ‌.

ಬೊಂಬೆಗೆ ಮನುಷ್ಯನ ಸಂವೇದನೆ ಇರುವಂತೆ ಚಿತ್ರಿಸಿ ಆ ಬೊಂಬೆಯ ಮೂಲಕ ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿ ಅದು ನಡೆಸಿದ ಅವಾಂತರವನ್ನು, ಭೀಕರ ಅನಾಹುತವನ್ನು ದೃಶ್ಯ ಗೋಚರವಾಗುವಂತೆ ಚಿತ್ರಿಸಿದ್ದಾರೆ‌. ಇಚ್ಛೆಯನ್ನು ನೆರವೇರಿಸುವ ಬೃಹತ್ ಮರಕ್ಕೂ ಮನುಷ್ಯ ಸಹಜ ಭಾವನೆಗಳನ್ನೂ ಆರೋಪಿಸಿ ಬರಹಗಾರ ತನ್ನ ನಿರೂಪಣೆಯನ್ನು ಬೊಂಬೆ ಮತ್ತು ಬೃಹತ್ ಮರದ ಮೂಲಕ ಮಾಡಿ ಬರಹಗಾರ ಕಣ್ಣಾರೆ ನೋಡದ ದುರಂತ ದೃಶ್ಯಗಳನ್ನು ಚಿತ್ರಿಸಲು ತಂತ್ರವನ್ನಾಗಿ ಬಳಸಿದ್ದಾರೆ‌
ಬೊಂಬೆ ಸುನಾಮಿಯಲ್ಲಿ ಅಪ್ಪಳಸಿ ಹೋಗಿ ಒಂದು ಬೃಹತ್ ಮರದ ಗೆಲ್ಲಿನಲ್ಲಿ ಸಿಕ್ಕಿಬೀಳುತ್ತಾಳೆ‌.

ಆ ಮರ ಈ ಬೊಂಬೆಯನ್ನು ಮಿತ್ರೆ ಎಂದು ಸಂಬೋಧಿಸಿ ತಾನು ತನ್ನ ಗೆಲ್ಲಿನಲ್ಲಿ ಅಶ್ರಯ ಕೊಟ್ಟೆ ಎಂದು ಹೇಳುತ್ತದೆ‌. ಬೊಂಬೆಗೆ ಮನುಷ್ಯನ ದುರಂತವನ್ನು ಕಣ್ಣಾರೆ ಕಂಡು ದುರಂತಕ್ಕೀಡಾದ ಜನರಿಗೆ ತನ್ನಿಂದಾದ ಸಹಾಯವನ್ನು ನೀಡಲು ಬಯಸುತ್ತದೆ. ಆ ಮರಕ್ಕೆ ಅತೀಂದ್ರಿಯ ಶಕ್ತಿ ಇರುತ್ತದೆ‌. ಆ ಬೊಂಬೆಗೆ ರೆಕ್ಕೆಗಳಂತೆ ಎರಡು ಎಲೆಗಳನ್ನು ಕಟ್ಟಿ ಅದು ಆಕಾಶದ ಮೂಲಕ ಪ್ರಯಾಣ ಮಾಡುವ ಶಕ್ತಿಯನ್ನು ಮತ್ತು ಒಂದು ಎಲೆ ಮುಟ್ಟಿದರೆ ಅದೃಶ್ಯವಾಗುವ ಶಕ್ತಿಯನ್ನು ನೀಡುವ ಬಲವನ್ನು ಮರ ಕೊಡುತ್ತದೆ‌. ಮತ್ತೆ ಆ ಬೊಂಬೆ ಆ ಕಾಡಿನಿಂದ ಹಾರುತ್ತ ಸುನಾಮಿ ಕಾಡಿದ ಪ್ರದೇಶಗಳಾದ ಅಂಡಮಾನ್ ನಿಕೋಬಾರ್, ಮಾಲ್ಡೀವ್ಸ್, ರಾಮೇಶ್ವರ ಮತ್ತು ಶ್ರೀಲಂಕಾ, ಹೈಲ್ಯಾಂಡ್ ಮುಂತಾದ ಪ್ರದೇಶಗಳಿಗೆ ಹೋಗಿ ಅಲ್ಲಿ ಸುನಾಮಿ ಮಾಡಿದ ಮಾರಣ ಹೋಮವನ್ನು ನೋಡುತ್ತದೆ‌. ಮನೆ ಮಠ ಕಳೆದುಕೊಂಡವರಿಗೆ‌ ಎಲಿ ಕಾಪ್ಟರ್ ನಿಂದ ಆಹಾರ ಪೊಟ್ಟಣ ಬಿಸಾಡುವುದನ್ನು, ಸಂತ್ರಸ್ತರಿಗೆ ತಾತ್ಕಾಲಿಕ ಗುಡಾರದ ಬಿಡಾರಗಳ ವ್ಯವಸ್ಥೆ ಮಾಡುವುದು ಮುಂತಾದವುಗಳನ್ನು ಬೊಂಬೆ ಸ್ವೀಟಿ ನೋಡುತ್ತದೆ‌. ರಾಮೇಶ್ವರಕ್ಕೆ‌ ಬೊಂಬೆ ಹೋಗುತ್ತದೆ‌. ಬೊಂಬೆಯ ಮೂಲಕ ರಾಮೇಶ್ವರದ ಈಶ್ವರ ದೇವಸ್ಥಾನದ ವರ್ಣನೆ, ಮಾಡಲಾಗಿದೆ. ಆ ದೇವಸ್ಥಾನ ಬೆಳಿಗ್ಗೆ 3.30 ಕ್ಕೆ ಬಾಗಿಲು ತೆರೆಯುತ್ತದೆ. ಯಾಕೆಂದರೆ ವಿಭೀಷಣ ಚಿರಂಜೀವಿ ಅವನು ಅದೇ ವೇಳೆಗೆ ಅದೃಶ್ಯನಾಗಿ ದೇವರ ಪೂಜೆ ಮಾಡಲು ಬರುತ್ತಾನಂತೆ‌. ಮುಂದೆ ಬೊಂಬೆ ವಿವೇಕಾನಂದ ರಾಕಿಗೆ ಹೋಗುತ್ತದೆ. ಅಲ್ಲಿ ಸುನಾಮಿ ಅಪ್ಪಳಿಸಿದರೂ ಏನೂ ಅನಾಹುತವಾಗಿರಲಿಲ್ಲ. ಥೈಲ್ಯಾಂಡ್ ನಲ್ಲಿ ಬುದ್ಧನ ಮೂರ್ತಿಯೊಂದು ಸುನಾಮಿಯನ್ನು ಅಲುಗಾಡದೆ ನಿಂತಿದೆ‌. ಚರ್ಚ್ ಒಂದರಲ್ಲಿ ಮದರ್ ಮೇರಿಯ ಮೂರ್ತಿ ನಗುತ್ತ ನಿಂತಿದೆ‌‌.‌ ಇಂಡೋನೇಶ್ಯಾದಲ್ಲಿ ಸುನಾಮಿ ಬಂದರೂ ಮಸೀದಿಯೊಂದು ಏನೂ ಹಾಳಾಗದೆ ನಿಂತಿದೆ. ದ್ವಾರಕೆಯಲ್ಲಿ ಕೂಡ ಸುನಾಮಿಯ ದುರಂತ ತಟ್ಟದಿದೆ. ಇದು ಪವಾಡ ಎಂದು ಮರ ಬೊಂಬೆಗೆ ಹೇಳುತ್ತದೆ‌. ಕೇರಳವನ್ನು ದೇವರ ನಾಡು ಎಂದು ಯಾಕೆ‌ ಹೇಳುತ್ತಾರೆ, ಕರಾವಳಿ ನಾಡು‌ ಪರುಶರಾಮನ ಸೃಷ್ಟಿ ಎಂಬ ಕಥೆಯನ್ನೂ ಬೊಂಬೆ ತಿಳಿಯುತ್ತದೆ. ಅಗಸ್ತ್ಯ ಮುನಿ ದೇವತೆಗಳನ್ನು ಮನುಷ್ಯರನ್ನೂ ಕಾಡುತ್ತಿದ್ದ ರಾಕ್ಷಸರನ್ನು ಸಮುದ್ರದಡಿಯಲ್ಲಿ ಕಂಡು, ಅಗಸ್ತ್ಯ ಸಮುದ್ರದ ನೀರು ಕುಡಿದು ರಾಕ್ಷಸರ ಪತ್ತೆ ಮಾಡಲು ದೇವತೆಗಳಿಗೆ ಸಹಾಯ ಮಾಡುವ ಕತೆ ಇಲ್ಲಿ ನಿರೂಪಿಸಲಾಗಿದೆ. ಈ ವಿಷಯಗಳನ್ನು ಕಾದಂಬರಿಕಾರನಿಗೆ ಓದುಗರ ಆಸಕ್ತಿಗಾಗಿ ಹೇಳಬೇಕಿತ್ತು.

ಕಾದಂಬರಿಯ ಕೊನೆಯಲ್ಲಿ ಒಂದು‌‌ ನಿರಾಶ್ರಿತರ ಶಿಬಿರದಲ್ಲಿ. ಈರ್ವರು ವೃದ್ದ ಮಹಿಳೆಯರು ಮತ್ತು ಓರ್ವ ಪುಟ್ಟ ಬಾಲಕಿ. ಬಾಲಕಿಯ ಅಪ್ಪ ಅಮ್ಮ ಸುನಾಮಿಯಲ್ಲಿ ಮೃತಪಟ್ಟಿದ್ದಾರೆ‌. ‌ಮಗು ಅಪ್ಪ ಅಮ್ಮನ ಬಗ್ಗೆ ಕೇಳುವಾಗ ನಾಳೆ ಬರುತ್ತಾರೆ ಎಂದು ಸುಳ್ಳು ಹೇಳುತ್ತಾಳೆ‌. ಕಿರಿಯ ವೃದ್ಧೆ ಹಿರಿಯಳಿಗೆ ಜೋರು ಮಾಡಿ ಆ ಮಗುವುಗೆ ಮೋಸ ಯಾಕೆ ಮಾಡ್ತೀಯಾ? ಸತ್ಯವನ್ನು ಹೇಳು ಎಂದಾಗ, ಆ ಹಿರಿಯ ಅಜ್ಜಿ ಹೊರಗೆ ಮಗುವನ್ನು ಕರೆದುಕೊಂಡು ಹೋಗಿ ನಿನ್ನ ಅಪ್ಪ ಅಮ್ಮ ದೇವರ ಬಳಿ ಹೋಗಿದ್ದಾರೆ. ಆ ದೇವರ ಲೋಕ ನಕ್ಷತ್ರಗಳ ಲೋಕದ ಆಚೆ ಇದೆ ಎನ್ನುತ್ತಾಳೆ.

ಮಗು ಬೊಂಬೆ ಬೇಕು ಎಂದು ಹಠ ಮಾಡುತ್ತದೆ. ಅಜ್ಜಿ ನಾಳೆ ತಂದು ಕೊಡುತ್ತೇನೆ ಎನ್ನುತ್ತಾಳೆ. ತಂಗಿ ಅಕ್ಕನಿಗೆ ಬಯ್ದು ಬೊಂಬೆ ಖರೀದಿಸಲು ಹಣ ನಮ್ಮಲ್ಲಿ ಎಲ್ಲಿದೆ? ಎಂದು ಕೇಳುತ್ತಾಳೆ. ಈ ಮಾತನ್ನು ಬೊಂಬೆ ಆಲಿಸಿ ನಿಧಾನಕ್ಕೆ ನಡೆದುಕೊಂಡು ಶಿಬಿರದೊಳಗೆ ಹೋಗಿ ಅಜ್ಜಿಯ ಪಕ್ಕದಲ್ಲಿ ಮಲಗಿಬಿಡುತ್ತದೆ‌. ಮಾರನೆಯ ದಿನ ಬೊಂಬೆಯನ್ನು ಕಂಡು ಇದು ದೇವರ ಕೃಪೆ‌ ಎನ್ನುತ್ತಾಳೆ. ಬೊಂಬೆಗೆ ತಾನು ಸುನಾಮಿ ಸಂತ್ರಸ್ತ ಹುಡುಗಿಗೆ ಸಹಾಯ ಮಾಡಿದೆ ಎಂದು ಸಂತೋಷವಾಗುತ್ತದೆ. ಆಗ ಬೃಹತ್ ಮರ ಬೊಂಬೆಯ ಬಳಿ ಬಂದು ಹೇಳುತ್ತದೆ: "ಮಿತ್ರೆ ಈ ನಿನ್ನ‌ ಸೇವಾಭಾವ ನಿನ್ನನ್ನು ಇನ್ನಷ್ಟು ಸುಂದರಿಯನ್ನಾಗಿ ಮಾಡಿದೆ‌ ಈ ಸೇವಾಭಾವ ಉಳಿದಿಕೊ. ಸದ್ಯಕ್ಕೆ ಶುಭ ವಿದಾಯ" ಎಂದು‌ ಮಾಯವಾಯಿತು‌.

ಅಜ್ಜಿ ಆ ಬೊಂಬೆಗೆ ಸುನಾಮಿ ಎಂದು ಹೆಸರಿಡಲು ಹೋದಾಗ ಅವಳ ತಂಗಿಗೆ ಸಿಟ್ಟು ನೆತ್ತಿಗೇರುತ್ತದೆ‌. "ಈ ಮುದ್ದಾದ ನಿರಪರಾಧಿ ಗೊಂಬೆಯನ್ನು ನೀನು ಸಾವಿರಾರು ನಿರಪರಾಧಿಗಳ ಪ್ರಾಣ ಬಲಿ‌ ತೆಗೆದುಕೊಂಡ, ನನ್ನ ನಿನ್ನಂತಹ ಸಾವಿರಾರು ಜನರನ್ನು ಆಶ್ರಯಹೀನರನ್ನಾಗಿ ಮಾಡಿ‌ ಪೀಡಿಸಿದ ಸಾವಿರ ತಲೆಯ‌ ರಕ್ಕಸ, ಆ ಕ್ರೂರಿಯ ನೆನಪಿನಲ್ಲಿ ಸುನಾಮಿ ಎಂದೇಕೆ ಕರೆಯುತ್ತಿ? ನನಗೆ ಗೊತ್ತಿದ್ದಂತೆ ತ್ಸುನಾಮಿಯಿಂದ ಕನಿಷ್ಟ ಎರಡು ಲಕ್ಷ ಎಂಬತ್ತು ಸಾವಿರ ಜನ‌ ಸತ್ತಿದ್ದಾರೆ. ಒಂದು ಲಕ್ಷ ಮಕ್ಕಳು ಅನಾಥರಾಗಿದ್ದಾರೆ. ಆ ಯಮನನ್ನು ನೀನೇಕೆ ವೈಭವಿಕರಿಸುತ್ತಿ? ಬೇರೆ ಯಾವ ಹೆಸರೂ ನಿನಗೆ ಸಿಗಲಿಲ್ಲವೆ?".

ಅಕ್ಕ ಶಾಂತ ಚಿತ್ತದಿಂದ ಹೇಳಿದಳು: "ತಂಗೀ, ಸಮುದ್ರವನ್ನು ಅಥವಾ ಭಾರಿ ಅಲೆಗಳನ್ನು ದೂಷಿಸುವುದು ಬೇಡ. ನಾವಿಬ್ಬರೂ ಜೀವಮಾನವಿಡಿ ಈ ಸಮುದ್ರದ ಹಾಗೂ ಅಲೆಗಳ ಸಮೀಪದಲ್ಲೇ ಹುಟ್ಟಿ, ಬೆಳೆದು ಬದುಕು ಸಾಗಿಸಿದ್ದೇವೆ. ನಮ್ಮೆಲ್ಲರಿಗೂ ಶತಶತಮಾನಗಳಿಂದ ಇದೇ ಸಮುದ್ರವು ಅನ್ನದಾತನಾಗಿದ್ದುದಲ್ಲವೆ?ಯಾವುದೋ ಸಂದರ್ಭದಲ್ಲಿ ನಾವು ಮನುಷ್ಯರು ಕೋಪ ಉದ್ರೇಕಗಳಿಗೆ ಸಿಲುಕುವಂತೆಯೇ ಈ ಸಮುದ್ರ ಕೂಡಾ ಕ್ಷಣಿಕವಾಗಿ ಯಾವುದೋ ಅಜ್ಞಾತ ಕಾರಣಕ್ಕಾಗಿ ಕೋಪಗೊಂಡಿರಬೇಕು. ಹಾಗಾಗಿ ಈಗ ಅದನ್ನು ದೂಷಿಸಬೇಡ" ಎಂದಳು. ಈ ಕುಟುಂಬಗಳೆರಡೂ ಮನೆಯ ಯಜಮಾನನ ಸಹಿತವಾಗಿ ಅನೇಕರನ್ನು ಕಳೆದುಕೊಂಡು ಅನಾಥವಾಗಿದ್ದರೂ ತ್ಸುನಾಮಿಯನ್ನು ಕ್ಷಮಿಸಿದ ಈ ವಯೋವೃದ್ಧ ಅಜ್ಜಿಯ ಉದಾರತೆ ಹಾಗೂ ಹೃದಯ ವೈಶಾಲ್ಯ ಅದ್ಭುತವೆ ಸರಿ!. ಖಂಡಿತಕ್ಕೂ ಆಕೆಯು ಈ ಭೂಮಿಯಲ್ಲಿ ಅವತರಿಸಿದ ಸಂತಳು ಬೊಂಬೆಯ ಈ‌ ಉದ್ಘಾರದೊಂದಿಗೆ ಕಾದಂಬರಿ ಅಂತ್ಯಗೊಳ್ಳುತ್ತದೆ‌.

ಕಾದಂಬರಿಕಾರರಿಗೆ ಈ ಕಾದಂಬರಿಯ ಮೂಲಕ ತ್ಸುನಾಮಿ ತಂದೊಡ್ಡಿದ ದುರಂತದ ಚಿತ್ರಣದೊಂದಿಗೆ ಕೆಲವು ಮೌಲ್ಯಾದರ್ಶಗಳನ್ನೂ ಕೂಡ ಹೇಳಲಿಕ್ಕಿದೆ. ಸಮುದ್ರದ ಜೊತೆ ಗಾಢ ಸಂಬಂಧ ಹೊಂದಿದ ಜನಸಾಮಾನ್ಯರ ಕಥೆಗಳನ್ನು ಈ ಕಾದಂಬರಿ ಹೇಳುತ್ತದೆ‌. ಸಂಪತ್ತನ್ನು ಸ್ವಾರ್ಥಕ್ಕಾಗಿ ಉಪಯೋಗಿಸದೆ ಸಮಾಜದ ಹಿತಕ್ಕಾಗಿ ಬಳಸಬೇಕು. ಕಾದಂಬರಿಕಾರನು ಬೊಂಬೆಯ ದೃಷ್ಟಿಯಿಂದ ನೋಡಿದ ಅನುಭವಿಸಿದ. ತ್ಸುನಾಮಿ ದುರಂತದ ಕತೆ ಕೇಳಲು ಸಹಾಯವಾಗುವಂತೆ ಒಂದು ತಂತ್ರವನ್ನಾಗಿ ಬಳಸಲಾಗಿದೆ. ಮಕ್ಕಳೂ ಓದಿ ಈ ಕಾದಂಬರಿಯ ಸ್ವಾರಸ್ಯವನ್ನು ಸವಿಯಬಹುದಾಗಿದೆ‌.

ಒಂದೆಡೆ ಈ ಮಾತು ಬರುತ್ತದೆ: "ಹೀಗೆ ಸಮುದ್ರ ಹಾಗೂ ಮಾನವನ ಸಂಬಂಧವನ್ನು ವಿವರಿಸುವ ಅನೇಕ‌ ಕಥೆಗಳು, ಪುರಾಷಗಳು ಭಾರತೀಯ ಪ್ರಾಚೀನ ಶಾಸ್ತ್ರಗಳಲ್ಲಿವೆ‌. ಈಗ ಕೆಲವು ಸಂಶೋಧಿತ ಸಂಗತಿಗಳನ್ನು ಹೇಳಿ ಮುಗಿಸುತ್ತೇನೆ. ಸಾಗರ ತಳದಲ್ಲಿ ಸಂಭವಿಸಿದ ಭೂಕಂಪ ಒಂದೇ ಬಾರಿಗೆ ಸ್ಫೋಟಿಸಿದ 40,000 ಆಟಂಬಾಂಬ್ ಗಳಿಗೆ ಸಮನಾದ ಅಗಾಧ ಶಕ್ತಿಯನ್ನು ಹೊಂದಿತ್ತು ಎಂದು ಹಿರಿಯ ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ " ಎಂದು ಹೇಳಿ ವೃಕ್ಷರಾಜ ನಿಲ್ಲಿಸಿದ‌. ಈ ತ್ಸುನಾಮಿಯ ಬಗ್ಗೆ ವೃಕ್ಷದ ಮೂಲಕ ಮಾಹಿತಿ ಕೊಡುತ್ತಾರೆ ಕಾದಂಬರಿಕಾರರು‌.

MORE FEATURES

'ಗಿರ್ ಮಿಟ್'; ನಗೆಯ ಹೊಸ ದಾರಿ

05-12-2025 ಬೆಂಗಳೂರು

ಆಟ, ಪ್ರಸಂಗಗಳೆಲ್ಲ ಓದುಗನನ್ನು ನಗಿಸುತ್ತವೆ. ಸಪ್ಪೆ ದೈನಿಕದ ನಡುವೆಯೂ ನಗೆಮಿಂಚು ಸಾಧ್ಯ ಅನ್ನುವುದನ್ನು ತೋರಿಸುತ್ತವೆ....

'ಪುನರ್ನವ': ಸರಳ ಕನ್ನಡದಲ್ಲಿ ಬೆರಗುಗೊಳಿಸುವ ಕಥನ

05-12-2025 ಬೆಂಗಳೂರು

ಸರಳ ಭಾಷೆಯಲ್ಲಿ ಓದುಗರನ್ನು ಮುಟ್ಟುವ ಬಲಂಧರೆಯಂತಹ ಮಹಾಭಾರತ  ನಿತ್ಯ ಓದುಗರಿಗೂ ಅಪರಿಚಿತವೆ ಎನ್ನಬಹುದಾದ ಆಕೆಯ ಪಾ...

'ಕೃಷ್ಣಯ್ಯನ ಕೊಳಲು': ಆಧುನಿಕ ರಾಜಕೀಯದ ಕನ್ನಡಿ!

04-12-2025 ಬೆಂಗಳೂರು

ಪುರಾಣದ ಕೃಷ್ಣನ ಕಥೆಯನ್ನು ನಮ್ಮ ಕಾಲದ ದೈನಂದಿನ ರಾಜಕೀಯದಿಂದ ಬಳಲುವ ಜನರ ಕಥೆಯಾಗಿಸಿ ಹೇಳುವ ಪ್ರಯೋಗವನ್ನು ಹಿರಿಯ ಲೇಖಕ...