ಮಾನವ ಧರ್ಮವೇ ಜಗತ್ತಿನ ಬುನಾದಿ ಮತ್ತು ಅದರ ಸ್ಥಾಪನೆಯೇ ಸರ್ವಧರ್ಮಗಳ ಉದ್ದೇಶ 


“ಬಸವಣ್ಣನವರ ಷಟ್ ಸ್ಥಲ ವಚನಗಳ ಮೂಲ ಆಶಯವೇ ಪ್ರತಿಯೊಬ್ಬ ಮನುಷ್ಯನು ಭೂಮಿಯ ಮೇಲಿರುವ ತನ್ನ ಹುಟ್ಟು - ಸಾವುಗಳೆಂಬ ಭವಚಕ್ರವನ್ನು ಭೇದಿಸಿ, ಭಕ್ತ, ಮಹೇಶ, ಪ್ರಸಾದಿ, ಪ್ರಾಣಲಿಂಗಿ, ಶರಣ ಮತ್ತು ಐಕ್ಯ ಎಂಬ ಆರು ಸ್ಥಲಗಳ ಮೂಲಕ ದೇವರಲ್ಲಿ ಒಂದಾಗುವುದು, ಆ ದೇವನಿಗೆ ಸಂದು ಹೋಗುವದು,” ಎನ್ನುತ್ತಾರೆ ರಾಜಶೇಖರ ಮಠಪತಿ. ಅವರು ಬಸವರಾಜ ಯೆಲಿಗಾರ ಅವರ “ನನ್ನೊಳಗಿನ ನಾನು ನೀನೇ” ಕೃತಿಗೆ ಬರೆದ ಮುನ್ನುಡಿ.

ಭಾಷಾಂತರ ಸುಲಭವಲ್ಲ, ಹೆಗ್ಗಳಿಕೆಯೂ ಅಲ್ಲ, ಆದರೆ, ಈಗಲೂ ಅದು ಸಾಹಸವೇ ಎನ್ನುವದನ್ನು ಅಲ್ಲಗಳೆಯಲಾಗದು. ಭಾಷಾ ಸಾಧ್ಯತೆಗಳಲ್ಲಿ ಇಂಥದೊಂದು ಬೆಳಕಿಂಡಿ ಇಲ್ಲದೆ ಹೋಗಿದ್ದರೆ ನಮ್ಮ ಸಾಹಿತ್ಯ ಹಾಗೂ ಸಾಂಸ್ಕೃತಿಕ ಇತಿಹಾಸ ಏನಾಗಿರುತ್ತಿತ್ತು? ಹೇಗಿರುತ್ತಿತ್ತು? ಎನ್ನುವ ಪ್ರಶ್ನೆಗೆ ಸಿಗುವ ಉತ್ತರ, ಅದು ನಮ್ಮ ಆಲೋಚನೆ ಹಾಗೂ ಅಭಿವ್ಯಕ್ತಿ ಕ್ರಮದ ಸೀಮಿತತೆಗೆ ಒಂದು ಸಾಕ್ಷಿಯಾಗಿರುತ್ತಿತ್ತು ಅಷ್ಟೆ ಎಂದು ಹೇಳಬಹುದು.

ಮಿತ್ರ ಬಸವರಾಜ ಯಲಿಗಾರರ ವಚನ ಭಾಷಾಂತರ ಸಾಹಸದ ಕುರಿತು ಬರೆಯುವ ಮುನ್ನ ಒಂದು ಸಂದರ್ಭವನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು 'ಪ್ರಶ್ನೆ' ಎನ್ನುವುದು ಸೃಜನಶೀಲ, ಚಲನಶೀಲ ಸಮಾಜದ ಲಕ್ಷಣ. ಶೇಕ್ಸಪಿಯರ್ ಮಹಾಶಯನ ೪೦೦ನೇ ಸಂಸ್ಮರಣ ಸಂದರ್ಭದಲ್ಲಿ ಅಂಥ ಪ್ರಶ್ನೆಯೊಂದು ಹುಟ್ಟಿಕೊಂಡಿತು What makes Shakespeare survive? Is this the result of propaganda? Did he survive because of his admirers? ಈ ಪ್ರಶ್ನೆಗೆ ಬಂದ ಪ್ರತಿಕ್ರಿಯೆಗಳು ಅನೇಕ. ಆದರೆ ಅವುಗಳನ್ನೆಲ್ಲ ಬದಿಗಿರಿಸಿ, ಇಂಗ್ಲೀಷ್ ರೋಮ್ಯಾಂಟಿಕ್ ಕಾವ್ಯದ ಮುಂಚೂಣಿಯ ವಿಮರ್ಶಕ ಕೋಬ್ರಿಜ್‌ನ ಒಂದು ಪ್ರತಿಕ್ರಿಯೆಯನ್ನು ಇಲ್ಲಿ ಚರ್ಚಿಸುವುದು ಸೂಕ್ತ ಎಂದುಕೊಳ್ಳುತ್ತೇನೆ. ಮತ್ತೆ ಮತ್ತೆ ಮಹಾಕವಿ ಶೇಕ್ಸಪಿಯರ್‌ನ ಭಾಷಾಂತರ ಹಾಗೂ ಆ ಮೂಲಕ ಅವನ ಸ್ಮರಣೆಗೆ ಕಾರಣವಾಗುವ ಅಂಶ ಅವನ ಬರಹದಲ್ಲಿಯೇ ಇದೆ. His wisdom is deeper than our consciousness ಎನ್ನುತ್ತಾನೆ ಕೋಬ್ರಿಜ್, ಆತ ಮುಂದುವರೆದು ಹೇಳುತ್ತಾನೆ, `he keeps at all times the high road of life'. . ಹೌದು ಬದುಕಿನ ಉನ್ನತೀಕರಣಕ್ಕೆ ಕಾರಣವಾಗುವ ಬರಹ ಹಾಗೂ ಬರಹಗಾರರು ಸದಾಸ್ಕರಣೀಯರು ಹಾಗೂ ನಿತ್ಯವಂದನೀಯರು. ಈ ಮೇಲಿನ ಚರ್ಚೆ ಹಾಗೂ ಚಿಂತನೆಯ ವ್ಯಾಪ್ತಿಯಲ್ಲಿಯೇ ನಮ್ಮ ವಚನಕಾರರು ಹಾಗೂ ವಚನ ಸಾಹಿತ್ಯ ಗೌರವಾನ್ವಿತ ಮತ್ತು ತ್ರಿಕಾಲ ಅನ್ವಿತ.

ನನ್ನ ಓದಿನ ವ್ಯಾಪ್ತಿಯಲ್ಲಿಯೇ ಹೇಳುವುದಾದರೆ Undoubtedly they are devotional writers̤ They had firm faith in a life of purity and devotion̤ It is because of the strength of this faith that they reject all forms of tyranny in the outside world and celebrate freedom.They even regard as banal all kind of benefits such as name, fame, richest etc which would flow from supporting the ruling class. ಹೀಗಾಗಿ ಅವರು 'ಶರಣರು', ಅನುಭಾವಿಗಳು ಹಾಗೂ ಆಚಾರ ಸಂಪನ್ನರು. ಆದ್ಯ ವಚನಕಾರ ಹಾವಿನಾಳ ಕಲ್ಲಯ್ಯ ಹಾಗೂ ಅದ್ಭುತ ವಚನಕಾರ ಅಲ್ಲಮ,

ಇವರಿಬ್ಬರ ವಚನವಾಗ್ನಿಯದ ವ್ಯಾಪ್ತಿಯಲ್ಲಿ ದಾನ ಕೈಂಕರ್ಯ ಕೈಗೊಂಡು ಲೋಕಕ್ಕೆ ಗುಡ್ಡಾಪುರದ ದಾನಮ್ಮ ಎಂದು ಖ್ಯಾತಳಾದ ಲಿಂಗಮ್ಮ, ಇವರೆಲ್ಲರ ನಡೆನುಡಿಯ ನೆರಳಿನಲ್ಲಿ ಕರ್ಮಯೋಗಿಯಾಗಿ, ಶಿವಯೋಗಿಯಾಗಿ ರೂಪಗೊಂಡ ಸೊಲ್ಲಾಪುರದ ಸಿದ್ದರಾಮ – ಹೀಗೆ ಭೀಮಾ ತೀರದ ಭಾವ ಮತ್ತು ಭೌತಿಕ ನೆರಳಲ್ಲಿ, ನೆಲದಲ್ಲಿ ಚಡಚಣದ ನಮ್ಮ ಜೋಳಿಗೆಯಲ್ಲಿ ರೂಪಗೊಂಡದ್ದು ಕವಿ ಗೆಳೆಯ ಬಸವರಾಜ ಯಲಿಗಾರರ My Me Is Thee. ಕಾವ್ಯ ಒಂದು ಗುಣವಾಗಿ, ಧರ್ಮವಾಗಿ ಕಾಲಾತೀತ ಎನ್ನುವುದನ್ನು ಈ ನನ್ನಮಿತ್ರ ಮತ್ತೆ ಪ್ರಚುರಪಡಿಸಿದ್ದಾರೆ.

ಮಾನವ ಧರ್ಮವೇ ಜಗತ್ತಿನ ಬುನಾದಿ ಮತ್ತು ಅದರ ಸ್ಥಾಪನೆಯೇ ಸರ್ವಧರ್ಮಗಳ ಉದ್ದೇಶ ಎಂದು ಒಪ್ಪುವುದಾದರೆ, ಅದು ಒಂದೇ ಅವಧಿಯಲ್ಲಿ ಸಾಧ್ಯವಾಯಿತು ಎಂದುಕೊಳ್ಳಲಾಗದು. ಅದು ಕಾಲ ಕಾಲಕ್ಕೆ ಬೇರೆ ಬೇರೆ ಧರ್ಮ, ದೇಶ, ಸಮಾಜ, ಸಂಸ್ಕೃತಿ ಹಾಗೂ ರಾಜಕಾರಣದ ಸಾಂದರ್ಭಿಕ ಹಿನ್ನೆಲೆಯಲ್ಲಿ ಸಂಗ್ರಹಿತಗೊಳ್ಳುತ್ತಾ ಬಂದಿತು. ಗೊತ್ತಿರಲಿ, ಅದು ಮನುಷ್ಯ ಮಾತ್ರನಿಂದಲೇ ಹುಟ್ಟಿ ಅವನಿಂದಲೇ ಪ್ರವಹಿಸಿ, ಪಸರಿಸಿ, ಅಕ್ಷರದ ಅಭಿವ್ಯಕ್ತಿ ಪಡೆಯಿತು. ಹೀಗೆ ಅಭಿವ್ಯಕ್ತಿಗೊಂಡ ಸಾಹಿತ್ಯ ಪ್ರಪಂಚದ ಬೇರೆ ಬೇರೆ ಭಾಷೆಗಳಲ್ಲಿ ದಾಖಲಾಯಿತು, ಮನುಷ್ಯನ ಭಾಷೆಗಳಲ್ಲಿ ಐಕ್ಯವಾಗಿ ಅಭಿಜಾತವಾಯಿತು.

ಅಭಿಜಾತತೆ ಬರಹದ ಪಾಂಡಿತ್ಯವನ್ನು ಅವಲಂಬಿಸಿದ್ದಲ್ಲ, ಆಲೋಚನೆಯ ಪ್ರಾಮಾಣಿಕತೆಯನ್ನು ಅವಲಂಬಿಸಿದೆ. ನಮ್ಮ ವರ್ತಮಾನದ ಬಸವರಾಜ ಯಲಿಗಾರ ಹಾಗೂ ಸರಿಸುಮಾರು ಸಾವಿರದಾ ಮೂರು ನೂರು ವರ್ಷಗಳಷ್ಟು ಹಿಂದಿನ ಚಿಂತನೆಗಳ ಮಧ್ಯ ಒಂದು ಆನ್ವಯಿಕತೆ ಸಾಧ್ಯವಾದುದರಿಂದ ವಚನಗಳ ಈ ಭಾಷಾಂತರ ಪ್ರಕ್ರಿಯೆ ಅವುಗಳಲ್ಲಿ ಅಡಗಿದ ಅಭಿಜಾತ ಲಕ್ಷಣವನ್ನು ಸ್ಪುಟವಾಗಿಸುತ್ತವೆ. ಮತ್ತೆ ಮತ್ತೆ ಅವುಗಳ ಪುನರ್ ಮುದ್ರಣ, ವ್ಯಾಖ್ಯಾನ ಅವಶ್ಯ ಎನಿಸುವಂತೆ ಮಾಡುತ್ತವೆ. ಹೀಗೆ ದಾಖಲೆಗೊಂಡ ಮನುಷ್ಯ ಚಿಂತನೆ ಅಲ್ಲಿಗೇ ನಿಂತು ಭಾಷಿಕ ಕಾರಣ ಮಾತ್ರದಿಂದ ನಡುಗಡ್ಡೆಯಾಗಬಾರದು ಬದಲಾಗಿ ಜಂಗಮವಾಗಬೇಕು. ಅದು ಪರಸ್ಪರ ಹಂಚಿಕೆಯಾಗಬೇಕು, ಕೊಡು-ಕೊಳ್ಳುವಿಕೆಯಾಗಬೇಕು. ಆ ಮೂಲಕ ಮನುಷ್ಯ ಧರ್ಮದ ಚಿಂತನೆ ಪ್ರಬುದ್ಧತೆಯನ್ನು ಸಾಧಿಸಬೇಕು ಎಂದು ನಾವು ಬಯಸುವುದಾದರೆ, ಅಂಥ ಚಿಂತನೆಗಳನ್ನು ಬೇರೆ ಬೇರೆ ಭಾಷೆಗಳಿಗೆ ಮುಖಾಮುಖಿಗೊಳಿಸುವುದು ಅನಿವಾರ್ಯ ಮತ್ತು ಅವಶ್ಯಕ ಹಾಗೂ ನಮ್ಮೆಲ್ಲರ ಜವಾಬ್ದಾರಿ.

ಇದಕ್ಕಿರುವ ಏಕೈಕ ಸಾಧ್ಯತೆ ಭಾಷಾಂತರ. ಈ ಅರ್ಥದಲ್ಲಿ ಇಂದು ಭಾಷಾಂತರ ಹೆಗ್ಗಳಿಕೆಯಲ್ಲ, ಹೆಬ್ಬಯಕೆಯೂ ಅಲ್ಲ, ಬದಲಾಗಿ ಮನುಷ್ಯ ಚಿಂತನಾ ಚರಿತ್ರೆಯ ಅವಶ್ಯಕತೆ. ಮಿತ್ರ ಬಸವರಾಜ ಯಲಿಗಾರ ಈ ಭಾಷಾಂತರದ ಮೂಲಕ ಮಾಡಿರುವುದು ಕೂಡ ಇದನ್ನೇ. ಮಾನವನ ಭಾವ-ಬುದ್ದಿಯ ವಿಸ್ತಾರ ಪ್ರಕ್ರಿಯೆಯನ್ನು ಅವರು ಭಾಷಾಂತರದಲ್ಲಿ ಬಿಂಬಿಸುವ ಮೂಲಕ ಬದಲಾಗಬೇಕಾದ ಸಾಮಾಜಿಕ ಸ್ವರೂಪಕ್ಕೆ ಅವರು ನಿರ್ದೇಶನಗಳನ್ನು ಜಾಗತಿಕ ಭಾಷೆಯ ಮೂಲಕ ರವಾನಿಸಿದ್ದಾರೆ. ಬಸವಣ್ಣನವರ ಷಟ್ ಸ್ಥಲ ವಚನಗಳನ್ನು ಭಾಷಾಂತರಿಸುವುದರ ಮೂಲಕ ಇನ್ನೂ ಭಾಷಾಂತರಗೊಳ್ಳಬೇಕಾದುದು ಏನೇನಿದೆ? ಎನ್ನುವುದರ ಕಡೆಗೂ ಬಸವರಾಜ ಅವರು ನಮ್ಮೆಲ್ಲರ ಗಮನ ಸೆಳೆದಿದ್ದಾರೆ.

ಈ ಭಾಷಾಂತರ ಅಥವಾ ಷಟ್ ಸ್ಥಲದ ಭೌತಿಕ ವಿಸ್ತಾರ ಎಂಟುನೂರು ಪುಟಗಳು! ಒಂದರ್ಥದಲ್ಲಿ ಗಜಪ್ರಸವ. ಬಸವದ್ವಯರ ಈ ಮೊತ್ತದ ರಚನೆ ಕಾಕತಾಳಿಯವಲ್ಲ, ಬದಲಾಗಿ ಮಹರ್ಷಿ ಅರವಿಂದರ ಭಾಷೆಯಲ್ಲಿ ಹೇಳುವುದಾದರೆ ಇದು ಪೂರ್ವ ನಿರ್ಧಾರಿತ, Pre-destined. ಜೊತೆಗೆ ಇದು ಒಂದು ಪರಾಮರ್ಶೆಯ ಘಟ್ಟವೂ ಹೌದಲ್ಲವೆ? ಆಧುನಿಕ ಭಾರತೀಯ ಸಾಹಿತ್ಯವನ್ನು ಸ್ವಲ್ಪ ಗಮನಿಸಿ. ರಾಜಕೀಯ ಪರಾತಂತ್ರದ ಕಾರಣ ಭಾಷಾಂತರದ ಮೂಲಕ ಭಾರತಕ್ಕೆ ಹೇರಳವಾಗಿ ಬಂದ ಸಾಹಿತ್ಯದಷ್ಟು ಭಾರತದಿಂದ ಅನ್ಯ ಜಾಗತಿಕ ಭಾಷೆಗಳಿಗೆ ಭಾಷಾಂತರಗೊಂಡ ಸಾಹಿತ್ಯ ಈಗಲೂ ಕೂಡ ತೀರ ಕಡಿಮೆ ಎನ್ನಬಹುದು. ಉದಾಹರಣೆಗೆ ಹೇಳುವುದಾದರೆ ಕನ್ನಡಕ್ಕೆ ಮಹಾಶಯ ಶೇಕ್ಸ್‌ಪಿಯ‌ರ್ ಬಂದು ೧೬೦ ವರ್ಷಗಳಾದವು. ಆದರೆ ಇಂಗ್ಲೀಷಗೆ ನಮ್ಮ ವಚನಕಾರರು ಭಾಷಾಂತರಗೊಂಡು ಎಷ್ಟು ವರ್ಷಗಳಾದವು? ಪಶ್ಚಿಮದ ಎಷ್ಟು ವಿಶ್ವವಿದ್ಯಾಲಯಗಳಲ್ಲಿ ಪಠ್ಯವಾದರು? ಈ ನೆಲೆಯಲ್ಲಿ, ಹಿನ್ನಲೆಯಲ್ಲಿಯೂ ಮಿತ್ರ ಬಸವರಾಜ ಯಲಿಗಾರರ My Meis Thee ನಮ್ಮ ವರ್ತಮಾನದ ಜರೂರತ್ತಾಗಿತ್ತು ಪಠ್ಯವಿಲ್ಲದೆ ಪಾಠವೇನು? ಚಿಂತನೆ ಏನು? ಬಸವರಾಜರ ಪ್ರಸ್ತುತ ಈ ಭಾಷಾಂತರ ಪಠ್ಯಕ್ಕೆ ದೊಡ್ಡ ಆಕರ. ಹೀಗಾಗಿ ಇದು ಸ್ತುತ್ಯ ಕಾರ್ಯ.

ನೂರಾರು ವರ್ಷಗಳಷ್ಟು ಪುರಾತನವಾದ, ಆದರೆ ಎಲ್ಲ ಕಾಲಕ್ಕೂ ಔಚಿತ್ಯ ಪೂರ್ಣವಾದ ನಮ್ಮ ಈ ಸಾಹಿತ್ಯ ಅದೆಷ್ಟು ಬಾರಿ? ಅದೆಷ್ಟು ಭಾಷೆಗಳಿಗೆ ಅದರಲ್ಲೂ ಅದೆಷ್ಟು ಜಾಗತಿಕ ಭಾಷೆಗಳಿಗೆ ಭಾಷಾಂತರಗೊಂಡಿದೆ ಎನ್ನುವ ಪ್ರಶ್ನೆಯನ್ನು ನೇರವಾಗಿ ವಚನ ಸಾಹಿತ್ಯಕ್ಕೆ ಅನ್ವಯಿಸುವುದಾದರೆ, ಬರುವ ಉತ್ತರ ಅತ್ಯಂತ ನೀರಸವಾಗಿದೆ. 'ಜಾಗತಿಕ ಭಾಷೆ' ಎಂದರೆ ಕೇವಲ 'ಇಂಗ್ಲೀಷ್' ಎಂಬ ವಸಹಾತು (Colonial) ಪ್ರೇರಿತ ಪಾರಿಭಾಷಿಕಥೆಗೆ ಜೋತು ಬಿದ್ದಿರುವ ನಮಗೆ ನಮ್ಮ ವಚನಗಳನ್ನು ಅನ್ಯಜಾಗತಿಕ ಭಾಷೆಗಳಾದ ರಷ್ಯನ್, ಮ್ಯಾಂಡಲಿನ್, ಟರ್ಕಿಷ್, ಟ್ಯಾಗ್ ಲಾಗ್, ಸ್ಪ್ಯಾನಿಷ್ ಹಾಗೂ ಫ್ರೆಂಚ್ ಭಾಷೆಗಳೊಂದಿಗೆ ಎದುರು ಬದುರಾಗಿಸುವ ಅವಶ್ಯಕತೆ ನಮ್ಮ ಗಮನಕ್ಕೆ ಬರಲೇ ಇಲ್ಲ. ಆರು ಶತಮಾನಗಳ ಅನ್ಯ ಆಳ್ವಿಕೆಯ ಕಾರಣ, ಪಶ್ಚಿಮವೆಂದರೆ ಕೇವಲ ಇಂಗ್ಲೀಷ್ ಎಂಬ ಮೇಕಾಲೆ ಪ್ರೇರಿತ ಶಿಕ್ಷಣ ವ್ಯವಸ್ಥೆಯ ಕಾರಣ ತುಕ್ಕು ಹಿಡಿದ ಭಾರತೀಯ ಬರಹ ಪ್ರಕ್ರಿಯೆ ಬರೆಯಬೇಕಾದುದನ್ನು, ಭಾಷಾಂತರಿಸಬೇಕಾದುದನ್ನು ಬಹುತೇಕ ದೂರವೇ ಇಟ್ಟಿತು. ಆ ಮೂಲಕ ಚಿಂತಿಸಬೇಕಾದ ಬದುಕನ್ನು, ಅದರಿಂದ ಹೊರಹೊಮ್ಮಿದ ಆಲೋಚನೆಗಳನ್ನು ಬದಿಗೆ ಇಟ್ಟಾಯಿತು.

ಫ್ರೆಂಚ್ ಸಾಹಿತ್ಯದ ಮಹತ್ವದ ಲೇಖಕ ಜೀನ್ ಪಾಲ್ ಸಾರ್ಥರ ತನ್ನ ಆತ್ಮಕಥೆಗೆ Word – living is not everything: you have to live in time. ಹಾಗೆ ಬದುಕಿದ ಬದುಕಿಗೆ ಸಾರ್ಥಕತೆಯ ಸೊಗಸೊ, ಸಂಕಟವೊ ಏನೋ ಒಂದು ಪ್ರಾಪ್ತಿಯಾಗುತ್ತದೆ. ಶರಣರ ಬದುಕು ಹೀಗಿರುವುದರಿಂದ ಅವರ ಬರಹಗಳಲ್ಲಿ ಅನುಭವದ ಬೆಳಕು, ಅನುಭಾವದ ಸೆಳಕು ಮೂಡಿತು. ಒಪ್ಪೋಣ, ಶಬ್ದಸೂತಕವಿಲ್ಲದ ಅವರ ಪದಗಳ ಹಿಂದೆ ದೀರ್ಘಾಯುಷ್ಯದ ಶರೀರವಿರಲಿಲ್ಲ, ಬದಲಾಗಿ ದೀರ್ಘಾಲೋಚನೆಯ ಬದುಕು ಇತ್ತು, ಬೆಳಕು ಇತ್ತು. ಅವರು ಬುದ್ಧವಾಣಿಯಂತೆ ನಿಸ್ಸಂಶಯವಾಗಿಯೂ ಕಾಲದೊಂದಿಗೆ ಹೋರಾಡಿದರು. ಕಾಲದಲ್ಲಿ ಬದುಕಿದರು ಮತ್ತು ಕಾಲಾತೀತರಾದರು ಎನ್ನುವ ಕಾರಣವೇ ಈ ಭಾಷಾಂತರ. ಮಿತ್ರ ಬಸವರಾಜ ಯಲಿಗಾರ ಬಸವಣ್ಣನವರ ಷಟ್ ಸ್ಥಲ ವಚನಗಳ ಹಿಂದಿರುವ ಬೆಳಕನ್ನು ಗ್ರಹಿಸಿದ್ದಾರೆ. ಇದು ಕಾರಣ ಇಂಥ ಮಹೋನ್ನತ ವಿಸ್ತಾರದಲ್ಲಿ My Meis Thee.

ಅನುಭಾವಿಯಾದವನು ಎಲ್ಲರಲ್ಲಿಯೂ ಆತ್ಮನನ್ನೇ ಕಾಣಲು ಬಯಸುತ್ತಾನೆ ಎಂದು ಈಶಾವಾಸ್ಯ ಉಪನಿಷತ್ತಿನಲ್ಲಿ ಉಲ್ಲೇಖಿಸಲಾಗಿದೆ. ಅಂತಯೇ ನಡೆದವರು ಬಸವಣ್ಣ. ಆತ್ಮಸಾಕ್ಷಿಯಾಗಿ ನುಡಿದವರು ಬಸವಣ್ಣ. ಹೀಗಾಗಿ ಅವರು ಆಡಿದ ನುಡಿಗಳು ವಚನಗಳಾದವು. ಈ ವಚನಗಳು ವೇದಕ್ಕೆ ಸಮಾನ ಎನ್ನಿಸಿದವು. ಆಧ್ಯಾತ್ಮ ಚಿಂತನೆಯ ಉನ್ನತ ನಿದರ್ಶನಗಳಾಗಿ ಜನಸಾಮಾನ್ಯರ ಜೀವನದ ಆಚಾರ - ವಿಚಾರಗಳನ್ನು ನಿರ್ದೇಶಿಸುವ ಶಕ್ತಿಗಳಾದವು. ಈ ಅರ್ಥದಲ್ಲಿ ಬಸವಣ್ಣ ಶ್ರೀಸಾಮಾನ್ಯನ ಆತ್ಮ ಶ್ರೀಯನ್ನು ಗೌರವಿಸಿದ, ಸಂಸ್ಕೃತಿಯನ್ನು ರೂಪಿಸಿದ ಸಾಂಸ್ಕೃತಿಕ ನಾಯಕರಾದರು. ವಚನಗಳಾದ ಅವರ ಮಾತುಗಳು ಅನುಭಾವದ ನೆಲೆಗಳಾದವು ಮತ್ತು ಈ ಅನುಭಾವ, ನಡೆನುಡಿಯನ್ನು ಶುದ್ಧವಾಗಿಟ್ಟುಕೊಂಡ ಎಲ್ಲರಿಗೂ ದಕ್ಕುವ ಭಾಗ್ಯ ಎನ್ನುವುದನ್ನು ಬಸವಣ್ಣನವರು ರುಜುವಾತು ಪಡಿಸಿದರು. ಅಸಾಧ್ಯವಾದದನ್ನು ಸಾಧಿಸಿಯೂ ಸಾಮಾನ್ಯರ ಮಧ್ಯ ನಿಂತ ಬಸವಣ್ಣ "ಅನುಭಾವ ಎನ್ನುವುದು ಆಗುವ ಪ್ರಕ್ರಿಯೆ. ಅದು ಭೌತ ವಸ್ತು ಅಲ್ಲ. ಅದು ಜೀವಕ್ರಿಯೆ, ಜೀವನ ಕ್ರಿಯೆ. ಪ್ರತಿಯೊಬ್ಬ ಜೀವಿಗೂ ಅನುಭಾವದ ಅನುಭೂತಿಯನ್ನು ಪಡೆಯಲು ಸಾಧ್ಯವಿದೆ. ಪೂರ್ಣದೃಷ್ಟಿ, ಪೂರ್ಣಯೋಗದ ಸಮನ್ವಯ ತತ್ವವೇ ಅನುಭಾವದ ತಳಹದಿ. ತಪ್ಪು ಮಾಡಿದವನು, ಭ್ರಷ್ಟನಾದವನು, ನೈತಿಕತೆ ತಪ್ಪಿದವನಿಗೂ ಈ ದಾರಿಯಲ್ಲಿ ಸಾಗುವ ಹಕ್ಕು ಇದೆ" ಎನ್ನುವುದನ್ನು ತೋರಿಸಿದಾತಾ ಬಸವಣ್ಣ. ಆಧ್ಯಾತ್ಮಿಕ ಸಾಧನೆಯಲ್ಲಿ ಅನುಭಾವವನ್ನು ಅತ್ಯಂತ ಉತ್ಕೃಷ್ಟ ಮಟ್ಟದಲ್ಲಿ ವಚನಗಳ ಮೂಲಕ ಕಟ್ಟಿಕೊಟ್ಟವರು ಅಲ್ಲಮ, ಅಕ್ಕಮಹಾದೇವಿ ಹಾಗೂ ಚೆನ್ನಬಸವಣ್ಣ. ಅನುಭಾವದ ಅಭಿವ್ಯಕ್ತಿಯಲ್ಲಿ ಅವರಿಗೆ ಅವರೇ ಸಾಟಿ. ಆದರೆ ಜನ ನಾಯಕನಾಗುವಲ್ಲಿ ಸಮಾಜೋ - ಧಾರ್ಮಿಕ ಸುಧಾರಣೆಗಳಲ್ಲಿ, ಸಂಘಟನೆಯಲ್ಲಿ ಅನುಭಾವವನ್ನು ಜನಸಾಮಾನ್ಯರ ಅನುಭೂತಿಯಾಗಿಸುವಲ್ಲಿ ಬಸವಣ್ಣನಿಗೆ ಬಸವಣ್ಣನೇ ಸಾಟಿ. ಈ ಕಾಳಜಿ ಮತ್ತು ಕಳಕಳಿಯ ೧೨ನೇ ಶತಮಾನದ ಬಸವಣ್ಣನ ಷಟ್ ಸ್ಥಲ ವಚನಗಳು ಲೋಕದ ಎಲ್ಲಾ ಸಾಮಾನ್ಯರಿಗೂ ಮುಟ್ಟಬೇಕೆನ್ನುವುದು ಮಿತ್ರರಾದ ಬಸವರಾಜ ಯಲಿಗಾರರ ಭಾಷಾಂತರದ ಹಿಂದಿರುವ ಕಾಳಜಿ.

ಕುತೂಹಲಕ್ಕೊಂದು ಕಾರಣ ಎಂದುಕೊಂಡರೂ ಸರಿಯೇ. ಸತ್ಯವಂತೂ ಸತ್ಯವೇ ಅಲ್ಲವೆ?

ಭಾರತೀಯ ಚರಿತ್ರೆಯ ಬಹುದೊಡ್ಡ ಉತ್ಕಾಂತಿಗಳಲ್ಲಿ ಒಂದಾಗಿ ಲಕ್ಷದ ೯೬,೦೦೦ ಶರಣರ ಹೋರಾಟದ ಫಲವಾಗಿ ಹೊರಬಂದ ಈ ವಚನ ಸಾಹಿತ್ಯ, ಜಗತ್ತಿನ ಎಷ್ಟು ಭಾಷೆಗಳಲ್ಲಿ ಈಗ ಲಭ್ಯ ಇರಬಹುದು? ಎಂಬ ಪ್ರಶ್ನೆಗೆ ನಾನೇ ಉತ್ತರ ಹುಡುಕುತ್ತಾ ಹೋದಾಗ, ಸಿಕ್ಕ ಫಲಿತಾಂಶ ಅಷ್ಟೇನೂ ತೃಪ್ತಿಕರವಾಗಿಲ್ಲ. ಭಾರತದ ಅತ್ಯಂತ ಜನಪ್ರಿಯ ಶ್ರದ್ಧಾಗ್ರಂಥಗಳಾದ ರಾಮಾಯಣ ಜಗತ್ತಿನ ೪೮ ಭಾಷೆಗಳಲ್ಲಿ ದೊರೆತರೆ, ಭಗವದ್ಗೀತೆ ಇದುವರೆಗೂ ೮೨ ಭಾಷೆಗಳಿಗೆ ಭಾಷಾಂತರಗೊಂಡಿದೆ. ವ್ಯಕ್ತಿಗತವಾಗಿ ಅನ್ಯ ಭಾಷೆಗಳಿಗೆ ಭಾಷಾಂತರಗೊಂಡ ಲೇಖಕರ ಪಟ್ಟಿಯನ್ನು ಗಮನಿಸುವುದಾದರೆ ಷೇಕ್ಸಪಿಯ‌ರ್ ಜಗತ್ತಿನ ೧೮೦ ಭಾಷೆಗಳಲ್ಲಿ, ಟಾಲ್ ಸ್ಟಾಯ್ ೨೧೦೦ ಭಾಷೆಗಳಲ್ಲಿ, ಅಗಾಥಾ ಕ್ರಿಸಿ ೭೨೩೩ ಭಾಷೆಗಳಲ್ಲಿ ಸಿಗುತ್ತಾರೆ. ಆದರೆ ವಚನ ಸಾಹಿತ್ಯ ನಮ್ಮ ಹೆಮ್ಮೆಯ ಕನ್ನಡದ ಬಸವ ಸಾಹಿತ್ಯ ಭಾರತೀಯ ೨೩ ಭಾಷೆಗಳನ್ನೂ ಸೇರಿಕೊಂಡು ಕೇವಲ ೩೪ ಭಾಷೆಗಳಲ್ಲಿ ಸಿಗುತ್ತವೆ ಎನ್ನುವುದು ಖೇದದ ಸಂಗತಿ, ಅಲ್ಲವೆ? ಆದಾಗ್ಯೂ ಒಂದು ಮಾತು, ಸ್ವತಂತ್ರೋತ್ತರದ ಎಂಟು ದಶಕಗಳ ದಾರಿಯಲ್ಲಿ, ಇಂಥ ವಸಹಾತೋತ್ತರ (Postcolonial) ಮನಃಸ್ಥಿತಿಯಲ್ಲಿ ಇದು ಸಣ್ಣ ಸಾಧನೆ ಎನ್ನಲಾಗದು. ಈ ಕಾರಣ ಯಲಿಗಾರರನ್ನೂ ಒಳಗೊಂಡಂತೆ ಈ ಪೂರ್ವ ವಚನ ಸಾಹಿತ್ಯ ಭಾಷಾಂತರ ಪ್ರಕ್ರಿಯೆಯನ್ನು ಪ್ರಾರಂಭಿಸಿದ ಎಲ್ಲ ಆದ್ಯರಿಗೂ, ಆಚಾರ್ಯರಿಗೂ, ಪ್ರಮಥಂಗರಿಗೂ

ನನ್ನ ಶರಣಾರ್ಥಿಗಳು. ಯಾಕೆಂದರೆ ಈ ಭಾಷಾಂತರ ಎನ್ನುವುದು ಇಂದು ನಿನ್ನೆಯದಲ್ಲ. ಇದು ಹಿಂದಣ ಅನಂತದ, ಅರಿವಿನ ದಾರಿ. ಇದು ಅಲ್ಲಮ ಹಾಗೂ ಜ್ಞಾನಯೋಗಾಶ್ರಮದ ಪೂಜ್ಯರಾದ ಶ್ರೀ ಸಿದ್ದೇಶ್ವರರ ದಾರಿಯೂ ಕೂಡ. ಈ ಕಾರಣ ಇಲ್ಲಿಯ My Me is Thee ಆಗಿರುವುದು.

ಒಟ್ಟಾರೆ ವಚನಗಳ ಭಾಷಾಂತರ ಸಾಹಸ ಪ್ರಾರಂಭವಾಗಿದ್ದು ಕೂಡ ಸ್ವತಂತ್ರ ಭಾರತದ ಇತ್ತೀಚಿನ ಕೆಲವು ದಶಕಗಳಲ್ಲಿ ಅವುಗಳ ಗ್ರಹಿಸುವಿಕೆಯು ಕೂಡ ತೀರ ನೀರಸ ಮತ್ತು ಭಾಷಿಕ. ಈ ಕುರಿತು ಪ್ರವೇಶಿಕೆಯಲ್ಲಿ ಭಾಷಾಂತರಕಾರರಾದ ಮಿತ್ರ ಬಸವರಾಜ ಯಲಿಗಾರರು ವಿವರಿಸಿದ್ದಾರೆ. ವಚನ ಸಾಹಿತ್ಯದ ಈ ಮಿತಿಗಳಿಂದ ಆಚೆ ಬಸವವಾಗ್ನಿಯವನ್ನು ವಿಸ್ತರಿಸುವುದು ಪ್ರಸ್ತುತ ಭಾಷಾಂತರ ಸಾಹಿತ್ಯದ ಹಿಂದಿರುವ ಕಾರಣಿಕ ಅಂಶ. ಭಾಷಾಂತರಕಾರರ ಮುಂದಿರುವ ಜವಾಬ್ದಾರಿ ಕೂಡ.

ಬಸವಣ್ಣನವರ ಷಟ್ ಸ್ಥಲ ವಚನಗಳ ಈ ಭಾಷಾಂತರ, ಎರಡೂ ಭಾಷೆಗಳ ಸೊಗಸು, ಸುಖ ಬಲ್ಲವರ ಹೃದಯಕ್ಕೆ ಹತ್ತಿರವಾಗುತ್ತದೆ. ಕಾರಣ ಇಲ್ಲಿ ಬರೀ ಪದಕ್ಕೆ ಪದವನ್ನು, ಪ್ರಾಸಕ್ಕೆ ಪ್ರಾಸವನ್ನು, ಪಾಂಡಿತ್ಯಕ್ಕೆ ಪಾಂಡಿತ್ಯವನ್ನು, ಹೊಂದಿಸಲಾಗಿಲ್ಲ. ಇದಕ್ಕೂ ಮುಂಚಿನ ಸಾಕಷ್ಟು ಭಾಷಾಂತರಗಳನ್ನು ಮಿತ್ರ ಬಸವರಾಜ ಅವರು ಗಮನಿಸಿದಾಗ್ಯೂ, ಅವುಗಳಿಂದ, ಅವುಗಳ ಪ್ರಭಾವದಿಂದ ಸಂಪೂರ್ಣ ಸ್ವತಂತ್ರವಾಗಿ ಮೂಲತಃ ವಚನಗಳು ಇಂಗ್ಲೀಷನಲ್ಲಿಯೇ ರಚನೆಯಾದ ಸಾಹಿತ್ಯವೇನೊ? ಅನ್ನಿಸುವಷ್ಟು ಸೊಗಸಾಗಿ ಮತ್ತು ಸಮರ್ಥವಾಗಿ ಅವರ ಇಲ್ಲಿಯ ಭಾಷಾಂತರ ಮೂಡಿಬಂದಿದೆ. ಇದಕ್ಕೆ ಕಾರಣ ವಚನಗಳಲ್ಲಿಯ ವಿಚಾರಗಳ ತಾತ್ವಿಕತೆ ಹಾಗೂ ಭಾವನಿಷ್ಠೆಯನ್ನು ಭಾಷಾಂತರಕಾರರು ಗಮನಿಸಿದ್ದು. ಈ ಗಮನಿಸುವಿಕೆಯ ಸೂಕ್ಷ್ಮತೆಗಳನ್ನು ನಮ್ಮ ಜನಪದರಿಂದ, ವೇದ, ಉಪನಿಷತ್ ಮತ್ತು ಪುರಾಣ ರಚನಾಕಾರರಿಂದ ಹಾಗೂ ವೀರಶೈವ ಆಚಾರದ ಪೂರ್ವ ಸೂರಿಗಳಿಂದ ಭಾಷಾಂತರಕಾರ ರೂಡಿಸಿಕೊಳ್ಳಬೇಕಾಗುತ್ತದೆ. ಹಾಗಾದಾಗ ಮಾತ್ರ ಇವೆಲ್ಲವುಗಳಿಂದ ಪ್ರೇರಿತವಾಗಿಯೂ ಒಂದು ಸ್ವತಂತ್ರ ಅಭಿವ್ಯಕ್ತಿ ಕ್ರಮವಾಗಿ ವಿಸ್ತಾರಗೊಂಡ ಬೃಹತ್ ಪ್ರಮಾಣದ ವಚನ ಸಾಹಿತ್ಯದ ಅರ್ಥವಾಗುತ್ತದೆ. ಪಕ್ಷ ಮತ್ತು ಪ್ರಚಾರ ತಂತ್ರಗಾರಿಕೆಗಳಿಂದ ದೂರವಿದ್ದವರಿಗೆ ಮಾತ್ರ ದಕ್ಕುವುದು ಶರಣರ ಅನುಭಾವ. ಇದು ಅನುಭಾವ ಆತ್ಮರತಿಯಲ್ಲ. ಮಿತ್ರ ಬಸವರಾಜ ಇದನ್ನು ಚೆನ್ನಾಗಿ ಬಲ್ಲವರಾದುದರಿಂದ ವಚನ ಸಾಹಿತ್ಯವನ್ನು ಸಮರ್ಥವಾಗಿ ಚಿಂತನೆಯ ಮೂಲ ನಿಷ್ಠೆಯೊಂದಿಗೆ ಇಂಗ್ಲೀಷನಲ್ಲಿ ಪಡಮೂಡಿಸಿದ್ದಾರೆ. ಇವರಿಗೆ ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಗಳ ಮೇಲೆ ಸಮಾನ ಪ್ರಭುತ್ವವಿರುವುದರಿಂದ ಪದ ಕಚ್ಚದೆ, ಎದೆ ಬಿಚ್ಚಿ ಇಟ್ಟಂತೆ ಇಲ್ಲಿಯ ಭಾಷಾಂತರ ಸಾಧ್ಯವಾಗಿದೆ.

ಹೋಗಲಿ, ಮಾತು ಮುಗಿಸುವ ಮುನ್ನ ಇನ್ನೊಂದು ಪ್ರಶ್ನೆಯನ್ನು ಕೇಳಿಕೊಂಡು ಬಿಡೋಣ. ಇದುವರೆಗಿನ ಅಂದರೆ, ಕಳೆದ ಆರು ದಶಕಗಳ ನಮ್ಮ ವಚನ ಭಾಷಾಂತರ ಸಾಹಸ ಒಳಗೊಂಡ ಒಟ್ಟು ನಮ್ಮ ವಚನಕಾರರಾದರು ಎಷ್ಟು? ಬಸವ, ಅಲ್ಲಮ, ಅಕ್ಕಮಹಾದೇವಿಯರನ್ನು ಹೊರತು ಪಡಿಸಿದರೆ ಬಸವ ಪೂರ್ವ ಹಾಗೂ ಬಸವೋತ್ತರ ವಚನಕಾರರು ಇನ್ನೂ ಭಾಷಾಂತರ ಪ್ರಕ್ರಿಯೆಯಿಂದ ದೂರವೇ ಉಳಿದಿದ್ದಾರೆ. ಮತ್ತೆ ಕೆಲವರು ವಿನಾಕಾರಣ ಪುನಃ ಪುನಃ ಭಾಷಾಂತರಗೊಂಡಿದ್ದಾರೆ. ಅರೇಬಿಕ್, ಫ್ರೆಂಚ್, ರಶಿಯನ್, ಜಪನೀಸ್ ಹಾಗೂ ಚೈನಿ ಭಾಷೆಗಳನ್ನು ಒಳಗೊಂಡಂತೆ ಕೇವಲ ಬಸವಣ್ಣ ಹಾಗೂ ಆತನ ಸಮಕಾಲೀನರು ಒಟ್ಟು ೨೩ ಭಾಷೆಗಳಿಗೆ ಭಾಷಾಂತರಗೊಂಡಿದ್ದಾರೆ. ಉಳಿದಂತೆ ಬಸವ ಪೂರ್ವದ ಮಾರುಡಿಗೆ ನಾಚಯ್ಯ, ದಶಗಣದ ಸಿಂಗಿದೇವ, ಮುಸುಟಿ ಚಾವುಂಡರಾಯ, ತೆಲುಗು ಬೊಮ್ಮಯ್ಯ, ಬಾವೂರು ಬ್ರಹ್ಮಯ್ಯ, ದಸರಯ್ಯ ಮತ್ತು ಅವನ ಹೆಂಡತಿ ವೀರಮ್ಮ, ಬಳ್ಳೇಶ ಮಲ್ಲಯ್ಯ ಹೀಗೆ ಇವರ ಪಟ್ಟಿ ತುಂಬಾ ದೊಡ್ಡದಾಗಿದೆ. ಇವರೆಲ್ಲ ಭಾಷಾಂತರಗೊಂಡಿಲ್ಲ ಅಥವಾ ಭಾಷಾಂತರಗೊಳ್ಳಬೇಕು ಎನ್ನುವ ನನ್ನ ವಾದದ ಹಿಂದಿರುವ ತಾತ್ವಿಕತೆ ಭಾಷಾ ಪಾರಮ್ಯ, ಪ್ರಸಿದ್ಧಿ ಅಥವಾ ಶ್ರೇಷ್ಠತೆಯ ಹಿನ್ನೆಲೆಯದ್ದಲ್ಲ, ಬದಲಾಗಿ ಮನುಷ್ಯ ಚಿಂತನೆಯದ್ದು. ಇವರೆಲ್ಲ ಭಾಷಾಂತರದ ಈ ಪ್ರಕ್ರಿಯೆ ಇಂದು ಮುಗಿಯುವುದಲ್ಲ ಎನ್ನುವ ವಿಚಾರದ ಸಂಕೇತದವರು. ಇವರೆಲ್ಲ ಮಿತ್ರ ಬಸವರಾಜರ ಹೆಗಲ ಜವಾಬ್ದಾರಿಯ ನೆಚ್ಚಿಕೊಂಡ ಜೋಳಿಗೆಗಳು. ಇವರೆಲ್ಲ ಇರುವ ಸಮಾಜದಲ್ಲಿ ಮನುಷ್ಯ ಚಿಂತನೆ ಅನಂತವಾಗುವ ಕಾರಣದ ಬೀಜಗಳು. ಒಟ್ಟಾರೆ ಹೇಳುವುದಾದರೆ ವಚನ ಇರುವವರೆಗೂ ಭಾಷೆ, ಭಾಷೆ ಇರುವವರೆಗೂ ಭಾಷಾಂತರ, ಭಾಷಾಂತರ ಇರುವವರೆಗೂ ಬಸವ.

ನಾನು ಮಾತ್ರ 'ನನ್ನ ತಪ್ಪುಗಳು ಅನಂತ ಕೋಟಿ ಬಸವ ನಿನ್ನ ಸೈರಣೆಗೆ ಲೆಕ್ಕವಿಲ್ಲವಯ್ಯ' ಎಂದು ತಲೆಬಾಗಿದ್ದೇನೆ, ನೆಲವಾಗಿದ್ದೇನೆ. ಸಮರ್ಪಣೆಯೇ ಬಸವಾದಿ ಶರಣರ ಭಾಷೆ. ಬಸವರಾಜ ಯಲಿಗಾರರು ಭಾಷಾಂತರಿಸಿದ ಬಸವಣ್ಣನವರ ಷಟ್ ಸ್ಥಲ ವಚನಗಳ ಮೂಲ ಆಶಯವೇ ಪ್ರತಿಯೊಬ್ಬ ಮನುಷ್ಯನು ಭೂಮಿಯ ಮೇಲಿರುವ ತನ್ನ ಹುಟ್ಟು - ಸಾವುಗಳೆಂಬ ಭವಚಕ್ರವನ್ನು ಭೇದಿಸಿ, ಭಕ್ತ, ಮಹೇಶ, ಪ್ರಸಾದಿ, ಪ್ರಾಣಲಿಂಗಿ, ಶರಣ ಮತ್ತು ಐಕ್ಯ ಎಂಬ ಆರು ಸ್ಥಲಗಳ ಮೂಲಕ ದೇವರಲ್ಲಿ ಒಂದಾಗುವುದು, ಆ ದೇವನಿಗೆ ಸಂದು ಹೋಗುವದು. ಇದು ಒಂದು ಜೀವಮಾನದ ಸಾಧನೆಯಂಥ ಯೋಜನೆ - ಯೋಚನೆ. ಇಂಥ ಬಸವ ದಾರಿಯನ್ನು ಕ್ರಮಿಸಲು ಬೇಕಾದ ಎಲ್ಲ ಶಕ್ತಿ ಸಾಮರ್ಥ್ಯ ಆಯುಷ್ಯವನ್ನು ಕೂಡಲಸಂಗಮದೇವ ಕವಿ ಮಿತ್ರ ಬಸವರಾಜ ಯಲಿಗಾರರಿಗೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. ಈ ಯೋಜನೆಯ ಆರ್ಥಿಕ ಬೆಂಬಲಿಗರಾಗಿ ನಿಂತು ಸಹಕರಿಸುತ್ತಿರುವ ಮಿತ್ರರುಗಳಾದ ಶ್ರೀ ವಿಶ್ವನಾಥ ಬಿರಾದಾರ ಹಾಗೂ ಡಾ. ಸುನಿಲ್ ರಾಠೋಡ ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ.

MORE FEATURES

ಪುಸ್ತಕದ ಹೆಸರೇ ಹೇಳುವಂತೆ ಒಳಗಿನ ಹೂರಣ ಶ್ರದ್ಧೆ, ನಂಬಿಕೆಗಳೇ ಎನ್ನುವುದೂ ದಿಟ

24-06-2025 ಬೆಂಗಳೂರು

"ಬ್ಲಾಗುಗಳು ಫೇಸ್ಬುಕ್‌ ಥರದ ವೇದಿಕೆಯಲ್ಲದ ಕಾರಣ ಸಂವಹನ ಸೀಮಿತವಾಗಿತ್ತು. ಆದರೆ ಇಂದಿನ ಹಾಗೆ ಎಲ್ಲವನ್ನೂ ಪ...

ಶತಮಾನಗಳೇ ಕಳೆದರು, ತಲ್ಲಣಗಳು ಮಾತ್ರ ತಪ್ಪುವಂತಿಲ್ಲ

24-06-2025 ಬೆಂಗಳೂರು

"ಬಾಲ್ಯ, ಹದಿಹರೆಯದ, ದುರ್ಬಲ,ದಾಂಪತ್ಯ ಜೀವನದ ಹೆಣ್ಣುಮಕ್ಕಳ ತೊಳಲಾಟವನ್ನು ಅನಾವರಣ ಮಾಡುತ್ತದೆ . ಮುದ್ದಣನ ಮನೋರಮ...

ಜಗತ್ತನ್ನು ನೆಗೆಟಿವ್ ಶಕ್ತಿಗಳು ಸೆಳೆದಷ್ಟು ಪಾಸಿಟಿವ್ ಶಕ್ತಿಗಳು ಸೆಳೆಯಲ್ಲ

24-06-2025 ಬೆಂಗಳೂರು

"ಲೇಖಕರ ಹಸ್ತಾಕ್ಷರದ ಪ್ರತಿಯೊಂದಿಗೆ ಓದಲು ಕುಳಿತ ಪ್ರಥಮ ಪುಸ್ತಕವಿದು.....ಗಮನಿಸಿ ನೋಡಿ, ಜಗತ್ತನ್ನು ನೆಗೆಟಿವ್ ...