‘ಬೆರಗು’ ಪ್ರಾಯೋಗಿಕ ವಿಮರ್ಶೆಗಳ ದಾಖಲಾಗಿವೆ: ಮಹಾದೇವ ಹಡಪದ


"ರಂಗಪ್ರದರ್ಶನಗಳ ವಿಮರ್ಶೆ ಎನ್ನುವುದು ನಾಟಕದ ಸರಿ-ತಪ್ಪುಗಳನ್ನ ತಿದ್ದುವ ಅಥವಾ ನಾಟಕದ ಪರಿಣಾಮವನ್ನು ಹೊಗಳುವ ಇಲ್ಲವೇ ವಸ್ತುವಿನ ಮೇಲ್ಪದರಿನ ಗ್ರಹಿಕೆಯನ್ನು ಅವಲಂಬಿಸಿ ರೂಪುಗೊಳ್ಳುವ ಒಂದು ಫಾರ್ಮ್ಯಾಟ್ ಆಗಿದೆ" ಎನ್ನುತ್ತಾರೆ ಲೇಖಕ ಮಹಾದೇವ ಹಡಪದ. ಅವರು ಲೇಖಕಿ ಮಲ್ಲಮ್ಮ ಯಾಟಗಲ್‌ ಅವರ ‘ಬೆರಗು’ ಕೃತಿಗೆ ಬರೆದ ಮುನ್ನುಡಿ ನಿಮ್ಮ ಓದಿಗಾಗಿ...

ರಂಗಪ್ರದರ್ಶನಗಳ ವಿಮರ್ಶೆ ಎನ್ನುವುದು ನಾಟಕದ ಸರಿ-ತಪ್ಪುಗಳನ್ನ ತಿದ್ದುವ ಅಥವಾ ನಾಟಕದ ಪರಿಣಾಮವನ್ನು ಹೊಗಳುವ ಇಲ್ಲವೇ ವಸ್ತುವಿನ ಮೇಲ್ಪದರಿನ ಗ್ರಹಿಕೆಯನ್ನು ಅವಲಂಬಿಸಿ ರೂಪುಗೊಳ್ಳುವ ಒಂದು ಫಾರ್ಮ್ಯಾಟ್ ಆಗಿದೆ.

ಆ ಫಾರ್ಮ್ಯಾಟ್‌ನಲ್ಲಿ ನಾಟಕದ ಹೆಸರು, ತಂಡದ ಹೆಸರು, ನಿರ್ದೇಶಕ ನಟರ ಹೆಸರನ್ನು ಬದಲಿಸಿದರೆ ಸಾಕು ಮತ್ತೊಂದು ಲೇಖನವಾಗುವಷ್ಟು ತೆಳುವಾಗಿದೆ. ಅಂಥ ವಿಮರ್ಶಾ ಲೇಖನಗಳು ರಂಗಭೂಮಿಯ ಸಾಧ್ಯತೆಗಳನ್ನು ಅರಿಯುವಲ್ಲಿ ಸಹಕಾರಿಯಾಗಲಾರವು. ಅದರಲ್ಲೂ ನಾಟಕದ ವಿಮರ್ಶೆಗಳು ಕೇವಲ ಬೆಂಗಳೂರು ಮೈಸೂರಿನಲ್ಲಿ ನಡೆಯುವ ನಾಟಕ ಪ್ರದರ್ಶನಗಳಿಗೆ ಮಾತ್ರವೇ ಸೀಮಿತವಾಗಿರುವ ಹೊತ್ತಿನಲ್ಲಿ ಮಲ್ಲಮ್ಮ ಉತ್ತರ ಕರ್ನಾಟಕದಲ್ಲಿ ನಡೆಯುವ ನಾಟಕ ಪ್ರದರ್ಶನಗಳ ಬಗ್ಗೆ ದಾಖಲೀಕರಣ ಆರಂಭಿಸಿದರು. ಹಾಗಾಗಿ ಇಲ್ಲಿ ದಾಖಲಾಗಿರುವ ಪ್ರಾಯೋಗಿಕ ವಿಮರ್ಶೆಗಳು ವಿಶಾಲ ಕರ್ನಾಟಕದ ರಂಗಭೂಮಿಯ ಚಲನೆಯ ಸೊಗಸಿನವು ಆಗಿದ್ದಾವೆ. ಅಲ್ಲದೆ ಇಲ್ಲಿನ ಲೇಖನಗಳು ಬರೀ ನಾಟಕಗಳ ಕತೆಯನ್ನಷ್ಟೇ ವಿಮರ್ಶಿಸುವ ಗೋಜಿಗೊಳಪಟ್ಟಿಲ್ಲ. ಸ್ವತಃ ರಂಗಭೂಮಿ ನಟಿಯಾಗಿರುವ ಮಲ್ಲಮ್ಮ ತನ್ನದೇ ಆದ ಒಂದು ಹೊಸ ಮಾದರಿಯ ವಿಮರ್ಶಾ ಮಾದರಿಯನ್ನು ರೂಪಿಸಿಕೊಂಡು ನಾಟಕಗಳ ವಸ್ತು, ಕಾಣೆ, ಪ್ರಸ್ತುತಿ ಮತ್ತು ಪರಿಣಾಮಗಳನ್ನು ದಾಖಲಿಸಿದ್ದಾರೆ.

ಇಲ್ಲಿನ ಪ್ರತಿ ಲೇಖನದ ವಸ್ತುವಿನ ನಿರೂಪಣೆಯಲ್ಲಿ ಚುಟುಕತನವಿದ್ದೂ ಆ ಪ್ರದರ್ಶನದ ಕಾಣೆ ಮತ್ತು ಪ್ರಸ್ತುತಿ ಪರಿಣಾಮದ ಬಗ್ಗೆ ಹೆಚ್ಚು ಚರ್ಚಿಸಲ್ಪಟ್ಟಿದೆ. ಅದರಲ್ಲೂ ನಾಟಕಗಳ ಪರಿಣಾಮಗಳು ಇಂದಿನ ತಲೆಮಾರನ್ನು ರೂಪಿಸುವ ದಿಕ್ಕಿನ ಕಡೆಗೆ ಚಲಿಸುತ್ತವೆ. ಆದ್ದರಿಂದ ಅದರ ಸಾಧ್ಯತೆಗಳು ಹೆಚ್ಚು ಚರ್ಚೆಗೊಳಪಡಬೇಕೆಂಬ ಆಶಯ ವಿಮರ್ಶಕಿಯ ಉದ್ದೇಶವಾಗಿದೆ. ಯಾಟಗಲ್ ಎಂಬ ಪುಟ್ಟ ಹಳ್ಳಿಯ ಸಾಮಾಜಿಕ ಹಿನ್ನೆಲೆಯಲ್ಲಿ ಏನೆಲ್ಲಾ ಘಟಿಸಿದ್ದರೂ ಕೂಡ ಜಮುರಾ ತಂಡದ ನಾಟಕ ಪ್ರದರ್ಶನಗಳಿಂದಾಗಿ ಬುದ್ಧ-ಬಸವ- ಬಾಬಾಸಾಹೇಬ ಎಂಬ ತ್ರಿ-ಬಿ ಮಹಾತ್ಮರ ಬದುಕಿನ ಬೆರಗನ್ನು ನಾಟಕದ ಮೂಲಕ ಕಾಣುವ ಹಳ್ಳಿಗರ ಮನಸ್ಸುಗಳ ಮೇಲೆ ಆಗು ಮಾಡಿರಬಹುದಾದ ಪರಿಣಾಮ ನನಗೂ ಬೆರಗುಗೊಳಿಸುವ ಹಾಗೆ ದಾಖಲಿಸಿದ್ದಾರೆ.

ಮಹಾರಾಷ್ಟ್ರದ ತಮಾಶ, ತಮಿಳುನಾಡಿನ ತೆರಕೂತ್ತು, ಕತೆ, ಆತ್ಮಕತೆ, ಮಹಾಕಾವ್ಯಗಳನ್ನಾಧರಿಸಿದ ಪ್ರಯೋಗಗಳ ಕಾಣೆಯನ್ನೂ ಸೂಕ್ಷ್ಮವಾಗಿ ಗ್ರಹಿಸಿ ದಾಖಲಿಸಿರುವುದು ಇಲ್ಲಿನ ಬಹಳಷ್ಟು ಲೇಖನಗಳ ವಿಶೇಷವಾಗಿದೆ.

ಉತ್ತರ ಕರ್ನಾಟಕದ ಸಾಂಸ್ಕೃತಿಕ ಬದುಕೆಂದರೆ ಇಲ್ಲಿನ ಶರಣರು, ಸಂತರು, ದಾಸರು, ತತ್ತ್ವಪದಕಾರರು, ಕಾಲಜ್ಞಾನಿಗಳು ಮೊತ್ತಮೊದಲಿಗೆ ನೆನಪಿಗೆ ಬರುತ್ತಾರೆ. ಸಮಾಜವನ್ನು ಇರುವ ಹಾಗೆಯೇ ಸ್ವೀಕರಿಸದೆ ಸೌಹಾರ್ದ ಮತ್ತು ಮಾನವೀಯ ನೆಲೆಯಲ್ಲಿ ಸಮಾಜ ರೂಪಿಸುವ ಕಡೆಗೆ ಹೆಚ್ಚಿನ ಒಲವುಳ್ಳ ಧೋರಣೆ ಶರಣರು, ಸಂತರು ತತ್ತ್ವಪದಕಾರರದ್ದಾಗಿತ್ತು. ಹಾಗಾಗಿಯೇ ನಮ್ಮ ನೆಲದಲ್ಲಿ ಅಂಥ ಪ್ರಯೋಗಗಳ ಬಗ್ಗೆಯೇ ಜನ ಹೆಚ್ಚು ಆಕರ್ಷಿತರು. ಅಂತೆಯೇ ಜನಪದ ಕಲಾವಿದರೂ ಈ ಮಹಾತ್ಮರ ಆದರ್ಶವನ್ನೇ ರೂಢಿಸಿಕೊಂಡಿದ್ದಾರೆ. ಆ ಎಲ್ಲ ಹಿನ್ನೆಲೆಯಲ್ಲಿ ನಾವು ನಮ್ಮ ಉತ್ತರ ಕರ್ನಾಟಕದ ಪ್ರಯೋಗಗಳನ್ನು ದಕ್ಷಿಣ ಕರ್ನಾಟಕದ ನಾಟಕಗಳಿಗಿಂತ ಭಿನ್ನವಾದ ರೀತಿಯಲ್ಲಿ ಕಟ್ಟಲು ಪ್ರಯತ್ನಿಸುತ್ತೇವೆ ಎಂಬ ಅರಿವು ಮಲ್ಲಮ್ಮ ಯಾಟಗಲ್ ಅವರ ಪ್ರತಿ ಲೇಖನದಲ್ಲೂ ಕಾಣುತ್ತದೆ. ತೀನ್ ಕಂದೀಲ ನಾಟಕವಾಗಲಿ, ನುಲಿಯ ಚಂದಯ್ಯ, ಜಾಳ್ ಪೋಳ, ಶ್ರದ್ಧಾ, ಪಾರಿಜಾತ ಪುಷ್ಪದ ಮನಸ್ಸಿನ ಕಕ್ಕುಲಾತಿಯ ವಿವರಣೆಗಳು ಅಂಥ ವಿಶಾಲವಾದ ಹಂದರವನ್ನು ನೆನಪಿಸುತ್ತವೆ.

ಕೇವಲ ದಾಖಲೀಕರಣದ ಕಾರಣಕ್ಕಾಗಿ ಬರೆದ ಲೇಖನಗಳು ಎಂಬ ಹಾಗೆ ನಾಟಕ ವಿಮರ್ಶೆಗಳನ್ನು ಓದಿಕೊಳ್ಳುವುದು ರೂಢಿಗತವಾಗಿದೆ. ಅದು ಅಷ್ಟು ಮಾತ್ರವಾಗಿ ಉಳಿಯದಂತೆ ಒಂದು ಪರಂಪರೆಯ ನೆನಪಿನ ಸಿಹಿ ಉಂಡೆಯ ಹಾಗೆ ಇಲ್ಲಿನ ಪ್ರಾಯೋಗಿಕ ವಿಮರ್ಶೆಗಳು ದಾಖಲಾಗಿದ್ದಾವೆ. ಮಲ್ಲಮ್ಮ ಯಾಟಗಲ್ ಅವರ ರಂಗಭೂಮಿ, ಸಾಹಿತ್ಯದ ಅನುಭವದ ಜೊತೆಜೊತೆಗೆ ಸಾಮಾಜಿಕ, ಧಾರ್ಮಿಕ ಗ್ರಹಿಕೆಗಳು ಈ ಲೇಖನಗಳ ಸಮೃದ್ಧಿಯನ್ನು ಹೆಚ್ಚಿಸಿವೆ. ಈ ಬೆರಗು ಕೃತಿಯು ಓದುಗರಿಗೆ ಬೆರಗುಗೊಳಿಸುವಂತೆ ಮಾಡಲಿ.

MORE FEATURES

ಲಲಿತ ಪ್ರಬಂಧಗಳ ಸ್ವರೂಪ ಕಟ್ಟಿಹಾಕದ ದನದ ಹಾಗೆ

04-05-2024 ಬೆಂಗಳೂರು

'ಲಲಿತ ಪ್ರಬಂಧಗಳಲ್ಲಿ ನಾವು ಹೀಗೆ ಬಾಲ್ಯಕ್ಕೆ ಮರಳುವುದು ಹೆಚ್ಚು. ಯಾಕೆಂದರೆ ಲಲಿತ ಪ್ರಬಂಧಗಳ ಸ್ವರೂಪ ಕಟ್ಟಿಹಾಕದ ...

ಮಹಾಭಾರತ ಎಲ್ಲೆಲ್ಲೋ ಹರಿಯುತ್ತ, ಎಲ್ಲವನ್ನೂ ಒಳಗೊಳ್ಳುತ್ತ ಸಾಗಿ ನಿಂತ ಸಾಗರದಂತಹ ಕಾವ್ಯ

04-05-2024 ಬೆಂಗಳೂರು

‘ಮಹಾಭಾರತವನ್ನು ಸಮೀಕ್ಷಿಸಲು ಹೊರಟರೆ ಅದರ ವಿಶಾಲ ಹರವು ಮೊದಲನೆಯದಾಗಿ ನಮ್ಮನ್ನು ದಂಗುಬಡಿಸುತ್ತದೆ. ಅಲ್ಲದೇ ಅದರ...

ಕಾವ್ಯ ರಚನೆಯೆಂಬುದೊಂದು ಗುಣವಾಗದ ಜಾಡ್ಯ!

04-05-2024 ಬೆಂಗಳೂರು

"ಹದಿನೇಳು ಅಕ್ಷರಗಳಲ್ಲಿ ಇಪ್ಪತ್ತೆಂಟು ವಿಚಾರಗಳನ್ನು ಕುರಿತು ಬರೆಯುವುದೇ ಒಂದು ಸೋಜಿಗ. ಅಕ್ಷರಗಳ ಲೆಕ್ಕಾಚಾರದಲ್ಲ...