ಭಾರತದ ಸಮಾಜ ಮತ ಸುಧಾರಕರು: ಒಂದು ಚಾರಿತ್ರಿಕ ನೋಟ


ಜನತೆಯ ನೈಜ ಪ್ರತಿನಿಧಿಯಾಗಿ ತಮ್ಮ ಅರಿವನ್ನು ತಮ್ಮ ಸುತ್ತಣ ಪ್ರಪಂಚದಲ್ಲಿ ಕಾರ್ಯರೂಪಕ್ಕೆ ತರುವುದು ಅಂಥವರ ಶ್ರೇಯಸ್ಸು. ಹಾಗೆ ಇತಿಹಾಸದಲ್ಲಿ ಕೀರ್ತಿಯನ್ನು ಮೆರೆದ ಹಲವು ಚಿಂತಕರು ಮತ್ತು ಸಾಧಕರ ಸಂಕ್ಷಿಪ್ತ ಪರಿಚಯ ಮಾಡಿಕೊಡುವುದು ಡಾ. ಎ. ಸಿ. ನಾಗೇಶ್ ಮತ್ತು ಎಚ್. ಪರಮೇಶ್ವರ ಅವರ ಪ್ರಸ್ತುತ ಕೃತಿಯ ಉದ್ದೇಶ ಎನ್ನುತ್ತಾರೆ ಡಾ.ಜಿ. ರಾಮಕೃಷ್ಣ. ಅವರು ಎಚ್‌. ಪರಮೇಶ್ವರ ಅವರ ಭಾರತದ ಸಮಾಜ ಮತ ಸುಧಾರಕರು ಪುಸ್ತಕಕ್ಕೆ ಬರೆದ ಮುನ್ನುಡಿ ನಿಮ್ಮ ಓದಿಗಾಗಿ…

ಭಾರತದ ದೀರ್ಘ ಚರಿತ್ರೆಯಲ್ಲಿ ವಿವಿಧ ಕಾಲಘಟ್ಟಗಳನ್ನು ಗುರುತಿಸುತ್ತೇವಾದರೂ ವಿಶ್ವದ ಮಾನವ ಇತಿಹಾಸದಲ್ಲಿದ್ದಂತೆ ಇಲ್ಲಿಯೂ ನಿರಂತರ ಬೆಳವಣಿಗೆಗಳಿವೆ. ಘರ್ಷಣೆಗಳಿವೆ, ಸಾಂತ್ವನ ನೀಡುವ ಶಕ್ತಿಗಳಿವೆ. ಆಂತರಿಕ ವೈರುಧ್ಯಗಳಿವೆ. ಸಿಂಧು ಕಣಿವೆಯ ನಾಗರಿಕತೆಯು ಋಗೈದಾದಿ ಗ್ರಂಥಗಳ ಕರ್ತೃಸಮೂಹದ ಅದ್ಭುತ ಕಾಣಿಕೆಯೆಂಬ ಪೊಳ್ಳುವಾದವು ಕೆಲವು ವಲಯಗಳಲ್ಲಿ ಪ್ರಚಲಿತವಾಗಿದ್ದರೂ ಇತಿಹಾಸದ ಸತ್ಯವು ಅದರಿಂದ ಬದಲಾಗುವುದಿಲ್ಲ. ಅಂದರೆ, ಇತಿಹಾಸದಲ್ಲಿ ವ್ಯಾಮೋಹಕ್ಕೆ ಎಡೆಯಿಲ್ಲ. ಸಾಕ್ಷಾಧಾರಗಳಿಲ್ಲದ ಹೇಳಿಕೆಗಳು ಸರ್ವಥಾ ತಿರಸ್ಕಾರಯೋಗ್ಯವಾಗಿರುತ್ತವೆ.

ಚರಿತ್ರೆಯ ನಿರ್ಮಾಪಕರು ಆಯಾ ಕಾಲಘಟ್ಟಗಳ ಜನತಾ ಸಮೂಹವೇ ಆದ್ದರಿಂದ ಯಾವುದೋ ಒಬ್ಬ ಧೀರೋದಾತ್ತ ವ್ಯಕ್ತಿ ಇಡೀ ಇತಿಹಾಸಕ್ಕೆ ತಿರುವು ನೀಡಬಹುದೆಂಬ ಮಿಥೈಯನ್ನು ಪುರಸ್ಕರಿಸುವಂತಿಲ್ಲ. ಆದಾಗ್ಯೂ ತಮ್ಮ ಚಿಂತನೆ ಮತ್ತು ಕ್ರಿಯೆಗಳಿಂದ ಅನೇಕ ಮಹಾನ್ ವ್ಯಕ್ತಿಗಳು ಸಮುದಾಯದ ಆಶೋತ್ತರಗಳನ್ನು ಪ್ರತಿಫಲಿಸಿರುವುದುಂಟು. ಅಂತಹ ವ್ಯಕ್ತಿಗಳು ಯಾವುದೇ ಒಂದು ಕ್ಷೇತ್ರಕ್ಕೆ ಮತ್ತು ಕಾಲಮಾನಕ್ಕೆ ತಕ್ಕಂತೆ ಸೀಮಿತವಾಗಿರುವುದಿಲ್ಲ. ಮತಧರ್ಮ, ರಾಜಕೀಯ ಜೀವನ, ತತ್ತ್ವಶಾಸ್ತ್ರ, ಸಾಮಾಜಿಕ ಸೇವೆ ಮುಂತಾದ ಕ್ಷೇತ್ರಗಳಲ್ಲಿ ಕೃಷಿ ಮಾಡಿರುವ ಈ ಚಾರಿತ್ರಿಕ ವ್ಯಕ್ತಿಗಳು ಪುರಾಣಪುರುಷರಲ್ಲ. ರಂಜನೀಯ ಮಾತುಗಳನ್ನಾಡುವಂಥವರಲ್ಲ. ಆದರೆ ಉಪಯುಕ್ತ ವೈಚಾರಿಕ ಚಿಂತನೆ ನಡೆಸಿದವರಾಗಿರುತ್ತಾರೆ. ತನ್ಮೂಲಕ ಚರಿತ್ರೆಯಲ್ಲಿ ಶೋಭಿಸಿರುವ ಎಷ್ಟೋ ಚಳುವಳಿಗೆ ಅಂಥವರು ಆದ್ಯ ಪ್ರವರ್ತಕರಾಗಿರುವುದೂ ಉಂಟು. ಒಂದರ್ಥದಲ್ಲಿ ಅವರು ಇತಿಹಾಸದ ಪಥಕ್ಕೆ ನಿರ್ದಿಷ್ಟ ದಿಕ್ಕುಗಳನ್ನು ನಿರ್ಮಿಸುವವರಾಗಿರುತ್ತಾರೆ. ವಿಶ್ವದ ಮನುಕುಲದ ಇತಿಹಾಸದಲ್ಲಿ ಅವರಿಗೆ ಪ್ರಶಸ್ತಿ ಸ್ಥಾನಗಳು ದೊರೆತಿರುವುದು ಅವರ ಪ್ರಗಲ್ಯ ಮತಿಯಿಂದ, ಆಳವಾದ ದಾರ್ಶನಿಕ ದೃಷ್ಟಿಯಿಂದ ಮತ್ತು ಚೇತೋಹಾರಿ ಕಾರ್ಯನಿರ್ವಹಣೆಯಿಂದ, ಮಾನವ ಸಮಾಜದ ಮೌಲಿಕ ಏಳಿಗೆಗೆ ಅಂಥವರ ಕೊಡುಗೆಯು ಅವಿಸ್ಮರಣೀಯ. ಅಂಥವರು ತಮ್ಮ ಅಸಾಧಾರಣ ಪ್ರತಿಭಾನ್ವಿತ ಹೆಗ್ಗಳಿಕೆಯನ್ನು ಎಲ್ಲೋ ಗುಹೆಯಲ್ಲಿ ಕೂತು ಸಂಪಾದಿಸಿದ್ದಲ್ಲ. ಜನರ ನಡುವಿನಿಂದಲೇ ಬಂದ ಈ ಜನ ಅಸಾಮಾನ್ಯರಾಗಿ ನಡೆದುಕೊಂಡಿದ್ದಾರೆ.

ಜನತೆಯ ನೈಜ ಪ್ರತಿನಿಧಿಯಾಗಿ ತಮ್ಮ ಅರಿವನ್ನು ತಮ್ಮ ಸುತ್ತಣ ಪ್ರಪಂಚದಲ್ಲಿ ಕಾರ್ಯರೂಪಕ್ಕೆ ತರುವುದು ಅಂಥವರ ಶ್ರೇಯಸ್ಸು. ಹಾಗೆ ಇತಿಹಾಸದಲ್ಲಿ ಕೀರ್ತಿಯನ್ನು ಮೆರೆದ ಹಲವು ಚಿಂತಕರು ಮತ್ತು ಸಾಧಕರ ಸಂಕ್ಷಿಪ್ತ ಪರಿಚಯ ಮಾಡಿಕೊಡುವುದು ಡಾ. ಎ. ಸಿ. ನಾಗೇಶ್ ಮತ್ತು ಎಚ್. ಪರಮೇಶ್ವರ ಅವರ ಪ್ರಸ್ತುತ ಕೃತಿಯ ಉದ್ದೇಶ. ಸಹಜವಾಗಿಯೇ ಅತಿ ಸಂಕ್ಷಿಪ್ತ ರೂಪದಲ್ಲಿ ಅದನ್ನು ಓದುಗರ ಮುಂದಿರಿಸಿದ್ದಾರೆ. ಇಲ್ಲಿಯ ವ್ಯಕ್ತಿಗಳ ಮತ್ತು ವಿಷಯಗಳ ಬಗೆಗಿನ ಹೆಚ್ಚಿನ ವಿವರಗಳಿಗೆ ಓದುಗರಲ್ಲಿ ಆಸಕ್ತಿ ಮೂಡಿಸಿದರೆ ಅದು ಕೃತಿಯ ಸಾಫಲ್ಯ ಎನಿಸಿಕೊಳ್ಳುತ್ತದೆ. ಅನೇಕ ಇತರ ಸಂಬಂಧಿತ ಗ್ರಂಥಗಳ ಅವಲೋಕನವು ಅಂತಹ ಆಸಕ್ತಿಯನ್ನು ತಣಿಸುತ್ತದೆ.

ಇಂತಹ ಒಂದು ಪುಸ್ತಕದ ಅವಶ್ಯಕತೆಯುಂಟೇ ಎಂದು ಓದುಗರು ಪ್ರಶ್ನೆಯನ್ನು ಹಾಕಿಕೊಳ್ಳಲು ಸಾಧ್ಯ. ಅದರಲ್ಲೇನೂ ಅಚ್ಚರಿಯಿಲ್ಲ. ಆದರೆ ಸಂಕ್ಷಿಪ್ತವಾದ ಮಾರ್ಗಸೂಚಿ ಗ್ರಂಥಗಳು ಸಹ ಉಪಯುಕ್ತವೆಂಬ ನೆಲೆಯಲ್ಲಿ ಅದಕ್ಕೆ ಸಮರ್ಥನೆ ದೊರೆಯುತ್ತದೆ. ಮೂಲಭೂತ ಅಂಶಗಳು ಓದುಗರ ಗಮನ ಹರಿಸಿ ಅವರನ್ನು ವಿಸ್ತ್ರತ ಓದಿಗೆ ಪ್ರೇರೇಪಿಸಲು ಇಲ್ಲಿಯ ಲೇಖಕರಿಬ್ಬರ ಶ್ರಮವು ಫಲಪ್ರದವಾಗುತ್ತದೆಂದು ಆಶಿಸಬಹುದಾಗಿದೆ. ಇಲ್ಲಿಯ ಎಲ್ಲ ಮಾಹಿತಿ ಮತ್ತು ಅಭಿಪ್ರಾಯಗಳನ್ನು ಓದುಗರು ಸಾರಾಸಗಟಾಗಿ ಸ್ವೀಕರಿಸಬೇಕಾದ ಅನಿವಾರ್ಯತೆಯೇನೂ ಇಲ್ಲವೆಂಬ ಮಾದರಿಯಲ್ಲಿ ಗ್ರಂಥವನ್ನು ರಚಿಸಿದ್ದಾರೆ. ಅಂತೆಯೇ ಸರಳ ಶೈಲಿಯಲ್ಲಿ ಪ್ರತಿಪಾದನೆಗಳನ್ನು ಓದುಗರ ಮುಂದಿರಿಸಿದ್ದಾರೆ. ಇತಿಹಾಸದುದ್ದಕ್ಕೂ ತಮ್ಮ ವಿಚಾರಧಾರೆ, ಜನಪರ ಕ್ರಿಯೆಗಳು ಮತ್ತು ಸಂಕಲ್ಪ ಇವುಗಳ ಶಾಶ್ವತವಾದ ಮುದ್ರೆಯನ್ನು ಒತ್ತಿಹೋಗಿರುವ ಅನೇಕರ ಬಗ್ಗೆ ಒಂದೆಡೆ ಸುಲಭ ಟಿಪ್ಪಣಿಗಳನ್ನು ಒದಗಿಸಿಕೊಡುವುದು ಈ ಗ್ರಂಥದ ಮೂಲ ಆಶಯವೆಂದು ಭಾವಿಸಬಹುದಾಗಿದೆ. ಆ ಆಶಯವು ಬಹುಮಟ್ಟಿಗೆ ಪೂರೈಕೆಯಾಗುವಂತೆ ಲೇಖಕರು ವಿಶೇಷವಾಗಿ ಶ್ರಮಿಸಿದ್ದಾರೆ. ಅವರಿಬ್ಬರಿಗೂ ಹಾರ್ದಿಕ ಅಭಿನಂದನೆಗಳು ಮತ್ತು ವಂದನೆ ಸಲ್ಲುತ್ತವೆ. ಅವರಿಂದ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ವ್ಯಾಪಕವಾದ ವಿಮರ್ಶಾತ್ಮಕ ಕೃತಿಗಳು ಹೊರಬರಲೆಂದು ಆಶಿಸುತ್ತೇನೆ.

- ಡಾ. ಜಿ. ರಾಮಕೃಷ್ಣ

ಜಿ. ರಾಮಕೃಷ್ಣ ಅವರ ಲೇಖಕ ಪರಿಚಯ..

MORE FEATURES

'ಹೆಗಲು': ತ್ಯಾಗ, ನಿಸ್ವಾರ್ಥತೆಯ ಅಪರೂಪದ ಜೀವನಗಾಥೆ

14-12-2025 Bengaluru

"ಹೆಗಲು" ಲೇಖಕರು : ಭಾರತಿ ಹೆಗಡೆ ಪ್ರಕಾಶಕರು : ಬೆನಕ ಬುಕ್ಸ ಬ್ಯಾಂಕ್. ಪುಟಗಳು : 142 ಬೆಲೆ: ₹180/-...

ಅನುಕ್ಷಣ ಅನುಭವಿಸಿ: ಸಮಯ ನಿರ್ವಹಣೆಯ ಮಾರ್ಗದರ್ಶಿ

14-12-2025 BENGALURU

ಪುಸ್ತಕದ ಸಾರಾಂಶ "ಬದುಕು ದೀರ್ಘವಾಗಿರುವುದಕ್ಕಿಂತ ಶ್ರೇಷ್ಠವಾಗಿರಬೇಕು" ಎನ್ನುವ ನಿಟ್ಟಿನಲ್ಲಿ ಸಮಯ ನಿರ್ವಹ...

ಮಕ್ಕಳ ಕಥಾಸಾಹಿತ್ಯ ಸಂವೇದನೆಯ ಹೊಸ ಹೆಜ್ಜೆಗಳು.......

13-12-2025 ಬೆಂಗಳೂರು

"ಇಲ್ಲಿನ ಯಾವ ಕತೆಗಳಲ್ಲೂ ಮಾನವ ಪಾತ್ರಗಳು ಇಣುಕುವುದಿಲ್ಲ, ಆದರೆ ಮನುಷ್ಯನ ಗುಣ-ಸ್ವಭಾವ, ನಡತೆ, ನಿಯತ್ತು, ನೀಚತನ...