ಚರ್ಮದ ಚೆಂಡಿನ ಎದುರು: ಪಿ. ಲಂಕೇಶ್


“ಕ್ರಿಕೆಟ್ ಆಡಲು ಪ್ರತಿಭೆ ಬೇಕು. ಮನುಷ್ಯ ಬದುಕಲು ಆರೋಗ್ಯ ಬೇಕಾಗಿರುವಂತೆ ಇಲ್ಲಿ ಪ್ರತಿಭೆ, ಆದರೆ ಆರೋಗ್ಯವಂತನೂ ಆಕಸ್ಮಿಕವಾಗಿ ಸತ್ತು ಹೋಗುವ ಹಾಗೆ ಪ್ರತಿಭಾವಂತನೂ ಸೋತುಹೋಗುವ ಸಣ್ಣ ಸಾಧ್ಯತೆ ಇದೆ. ಆದ್ದರಿಂದಲೇ ಸಾವಿನ ತರಹವೇ ಕ್ರಿಕೆಟ್ ಒಂದು ರೀತಿಯಲ್ಲಿ ಸಮತಾವಾದಿ, ಕ್ರಿಕೆಟ್ ಆಡಲು ತಂತ್ರ ಬೇಕು; ಕುತಂತ್ರ ಕೂಡ,” ಎಂದಿದ್ದಾರೆ ಪತ್ರಕರ್ತ, ಲೇಖಕ ಪಿ. ಲಂಕೇಶ್. ಅವರು 1987ರ ಕ್ರಿಕೆಟ್ ವಿಶ್ವಕಪ್ ಪಾರುಪತ್ಯ ಕುರಿತು ಬರೆದ ಬರಹ, 2023 ನವೆಂಬರ್ 19ರಂದು ನೆಡೆದ ವಿಶ್ವಕಪ್ ಕ್ರಿಕೇಟನ್ನ ಕುರಿತು ಬರೆದಂತೆಯೇ ಇದ್ದು, ಇಂದಿಗೂ ಪ್ರಸ್ತುತವಾಗಿದೆ.

ಇನ್ನೇನು ಬಾಲ್ ಬರಬೇಕು. ಬೌಲರ್ ಹೆಮ್ಮಿಂಗ್ಸ್ ಖಿನ್ನ ಮುಖಮುದ್ರೆ ಹೊತ್ತು ಬಾಲ್ ಎಸೆಯಲು ಬರುತ್ತಿದ್ದಾನೆ. ಒಂದು ಹೆಜ್ಜೆ ಹಾಕಿದ, ಎರಡು ಹೆಜ್ಜೆ ಹಾಕಿದ...

ನಾನೀಗ ಚಚ್ಚಲು ಸಿದ್ಧ, ಮೈ ಬೆಂಕಿಯಾಗಿದೆ; ಕೇವಲ ಅರ್ಧ ನಿಮಿಷದ ಹಿಂದೆ ಹೇಗೆ ಚಚ್ಚಿದೆ! ಚರ್ಮದ ಆ ಬಾಲ್ ಕೇವಲ ಸೇಬಿನ ಹಣ್ಣಿನ ಹಾಗೆ ಠಳಾರ್ ಎಂದು ಬೌಂಡರಿ ದಾಟಿತು. ಆ ಹೊಡೆತಕ್ಕೆ ಕೂತಿದ್ದ ಜನ ಎದ್ದು ನಿಂತು ಚಪ್ಪಾಳೆ ತಟ್ಟಿದರು; ಭಾರತದ ಧ್ವಜ ಎತ್ತಿ ಕುಣಿದಾಡಿದರು. ಹತ್ತಿರ ಹತ್ತಿರ ಒಂದು ಲಕ್ಷ ಜನ; ಇಡೀ ಜಗತ್ತಿನಲ್ಲಿ ಟಿವಿಗಳಲ್ಲಿ ನೋಡುತ್ತಿರುವ ಕೋಟ್ಯಂತರ ಜನ, ನಾನೆಂದರೆ ಜಗದೇಕ ವೀರ, ಅರಿಭಯಂಕರ, ಸಾವಿನ ದವಡೆಯಿಂದ ದಿಗ್ವಿಜಯವನ್ನು ಕಿತ್ತುಕೊಂಡು ಬಂದು ಅಭಿಮಾನಿಗಳೆದುರು ಎತ್ತಿಹಿಡಿಯಬಲ್ಲ ಸಾಹಸಸಿಂಹ. ನಾನೆಂದರೆ ಈ ತರಲೆ ಸ್ಪಿನ್ ಬೌಲರ್ ಹೆಮ್ಮಿಂಗ್ಸ್ ಏನೆಂದು ತಿಳಿದಿದ್ದಾನೆ?

ಹೆಮ್ಮಿಂಗ್ಸ್ ತನ್ನ ನಾಲ್ಕು ಹೆಜ್ಜೆ ಹಾಕಿಯೇಬಿಟ್ಟ. ಬಾಲ್ ಆತನ ಕೈಯಲ್ಲಿ, ಆತನ ತಲೆಯ ಮೇಲೆ ಇದೆ. ಅವನಿಗೆ ಪಾಠ ಕಲಿಸುತ್ತೇನೆ. ಜಿಂಬಾಬ್ವೆಯಲ್ಲಿ ಮಾಡಿ ದಂತೆ ವತ್ತೊಮ್ಮೆ ಬ್ಯಾಟಿಂಗ್ ದಾಖಲೆ ಸ್ಥಾಪಿಸುತ್ತೇನೆ.

ಬಂತು ಬಾಲ್. ಹಿಂದಿನ ಬಾಲ್ ನಂತೆಯೇ. ನಾಲ್ಕಕ್ಕೆ ಇಕ್ಕಿದ ಹಿಂದಿನ ಬಾಲ್ ನಂತೆಯೇ. ಆದರೆ ಈ ಸಲ ಎದುರಾಳಿ ಗ್ಯಾಟಿಂಗ್‌ನ ತಲೆ ಕೆಲಸ ಮಾಡಿದೆ. ನನ್ನ ದೌರ್ಬಲ್ಯವನ್ನು ಬಲ್ಲ ಆತ ಈ ಸಲ ಬೌಂಡರಿಯ ಹತ್ತಿರ ಎಕ್ಸ್‌ಟ್ರಾ ಕವರ್‌ನಲ್ಲಿ ತಾನೇ ನಿಂತಿದ್ದಾನೆ. ಅದು ನನಗೆ ಹೇಗೆ ಗೊತ್ತಾಗಬೇಕು. ದಿಟ್ಟ, ಧೀರ ಆಟಗಾರನಾದ ನಾನು ಹಿಂದಿನ ಬಾಲ್ ಕುಟ್ಟಿದಂತೆಯೇ, ಅದೇ ಶಕ್ತಿಯಿಂದ, ಅದೇ ಹುಮಸ್ಸಿನಿಂದ ಕುಟ್ಟುತ್ತೇನೆ, ಗಿರಗುಟ್ಟಿದ ಬಾಲ್ ಹಿಂದಿನ ಬಾಲ್‌ನಂತೆಯೇ, ಆದರೆ ಅದಕ್ಕಿಂತ ಸ್ವಲ್ಪ ಮೇಲೆ ಹಾರಿ ಸಾಗುತ್ತದೆ. ಇದಕ್ಕಾಗಿ ಕಾಯುತ್ತಿದ್ದ ಗ್ಯಾಟಿಂಗ್ ಅದನ್ನು ಹಿಡಿಯುತ್ತಾನೆ.

ಈ ಸಲ ಬೌಲರ್ ಹೆಮ್ಮಿಂಗ್ಸ್‌ಗೆ ಬದಲು ನಾನು ಖಿನ್ನ. ಕಳೆದ ಬಾಲ್‌ಗೆ ಕೂಗುತ್ತಿದ್ದ ಜನ ಈ ಸಲ ನನ್ನ ಮೂರ್ಖತನಕ್ಕೆ ತಾತ್ಸಾರದಿಂದ ಛೇಡಿಸುತ್ತಿದ್ದಾರೆ. ನನ್ನ ದಿಟ್ಟತನ, ಶೌರ್ಯವೆಲ್ಲ ಗಾಂಪತನವಾಗಿ ಕಾಣತೊಡಗಿದೆ, ಹೆಮ್ಮಿಂಗ್ಸ್‌ನ ಬಾಲ್ ಬರುವಾಗ ತಾನೊಬ್ಬ ಕ್ಯಾಪ್ಟನ್, ತಾನೊಬ್ಬ ಧೀರನಾಗಿರುವಂತೆಯೇ ಕ್ರಿಕೆಟ್ ತಂತ್ರಜ್ಞ, ತಾನೊಬ್ಬ ಅಭಿಮಾನಿಗಳ ಕಣ್ಮಣಿಯಾಗಿರುವಂತೆಯೇ ತಂಡದ ಹನ್ನೊಂದು ಜನರಲ್ಲಿ ಇನ್ನೊಬ್ಬ ಎಂಬುದನ್ನು ಮರೆಯಬಾರದಿತ್ತು.

ಮುಖ ಕಪ್ಪಿಟ್ಟಿದೆ. ನನ್ನ ಮುಖದಂತೆಯೇ ನಮ್ಮ ದೇಶದ ಕೋಟ್ಯಂತರ ಜನರ ಮುಖ ವಿರೂಪಗೊಂಡಿದೆ. ಈ ಬಾಲ್ ಹೊಡೆಯುವ ವೈಭವದಲ್ಲಿಯೇ ಕ್ಷಣಾರ್ಧದಲ್ಲಿ ಹುಳುವಿನಂತೆ ಇಲಮಿಲಗುಟ್ಟುವ ನರಕ ಕೂಡ ಇದೆ. ಬಾಲ್ ಹೊಡೆಯುವ ಆ ಕ್ಷಣದಲ್ಲಿ ನನ್ನ ತಂಡಕ್ಕೆ ಧೈರ್ಯ ನೀಡುವ ಅಥವಾ ಅವರನ್ನು ಅಸಹಾಯಕಗೊಳಿಸುವ, ತನ್ನ ದೇಶದ ಜನರ ಶಿಸ್ತು, ತಂತ್ರ, ಕಲೆ, ಚಾರಿತ್ರ, ತೋರುವ ಅಥವಾ ಅವರೆಲ್ಲರನ್ನು ಕಚಡಾ ಜನರೆಂಬಂತೆ ಪ್ರತಿನಿಧಿಸುವ ಹೊಣೆಗಾರಿಕೆ ಕೂಡ ಇದೆ. ಆ ಕ್ಷಣದಲ್ಲಿ ನಾನು ನನ್ನ ತಂಡವನ್ನು ನಡೆಸಿಕೊಂಡ ರೀತಿ, ಅಲ್ಲಿದ್ದ ಸ್ನೇಹ ಅಥವಾ ಮನಸ್ತಾಪ, ಅವರಿಗೆ ನನಗಿರುವ ಜವಾಬ್ದಾರಿ ಅಥವಾ ಅವರಿಲ್ಲದೇ ನಾನು ಏಕಾಂಗಿಯಾಗಿ ಗೆಲ್ಲುವ ಹುಂಬತನ ಇವೆಲ್ಲವೂ ಇವೆ. ಆ ಕ್ಷಣದಲ್ಲಿ ನಾನು ಪಾಕಿಸ್ತಾನದ ಇಮಾನ್‌ನಂತೆ ಕೇವಲ ಮಾತಿನ ಮಲ್ಲನಲ್ಲ, ಅವನಿಗಿಂತ ಸರ್ವತೋಮುಖ ಆಟಗಾರ, ಅವನಿಗಿಂತ ಒಳ್ಳೆಯ ಕಲಾವಿದ ಎಂದು ತೋರುವ ಕೊಬ್ಬು ಇದೆ. ಇದೆಲ್ಲದರ ಪರಿಣಾಮವಾಗಿ ಗ್ಯಾಟಿಂಗ್ ತನ್ನ ಜಾಣತನ ಉಪಯೋಗಿಸಿ ಇಟ್ಟ ಬೋನಿಗೆ ಸಲೀಸಾಗಿ ಪ್ರವೇಶಿಸುತ್ತೇನೆ. ಹಿಂದಿನ ಬಾಲ್‌ನಂತೆಯೇ ಚಚ್ಚಿದರೂ ಈ ಸಲದ ಬಾಲ್ ಅದರಂತೆಯೇ ವರ್ತಿಸಲಿಲ್ಲ. ಎದು ರಾಳಿಯ ಕೈಗೆ ಸುಲಭವಾಗಿ ಸಿಕ್ಕಿತು. ಒಂದು, ಎರಡು, ಮೂರು ಹೆಜ್ಜೆ ಇಟ್ಟು ಬರುತ್ತಿದ್ದ ಹೆಮ್ಮಿಂಗ್ಸ್‌ನಂತೆಯೇ ಸೋಲು ನನ್ನತ್ತ ಬರತೊಡಗಿತು, ನನ್ನ ತಂಡ, ದೇಶದತ್ತ ಬರತೊಡಗಿತು.

- ಈತ ಕಪಿಲ್.

....ಇದೊಂದು ಮೂರ್ಖತನ, ಕೇವಲ ಮೂರ್ಖತನ. ಈ ಕ್ರಿಕೆಟ್ ಆಡಲು ಸಾವಿರಾರು ಜನ ಹುಡುಗರು; ಅವರಿಂದ ಆಯ್ಕೆಗೊಂಡ ಹನ್ನೊಂದು ಜನ ತಂಡದಲ್ಲಿ ಆಡುತ್ತಾರೆ. ಅವರ ಬಗ್ಗೆ ಚರ್ಚಿಸಿ, ಹಿಂದಿನ ದಾಖಲೆಗಳನ್ನೆಲ್ಲ ನೆನೆದು, ಕತೆಗಳನ್ನೆಲ್ಲ ಮೆಲುಕು ಹಾಕಿ ಲಕ್ಷಾಂತರ ಜನ ಕ್ರಿಕೆಟ್ ಮ್ಯಾಚಿನ ದಿನಕ್ಕಾಗಿ ಕಾಯುತ್ತಿರುತ್ತಾರೆ. ಅನ್ನ, ಬಟ್ಟೆಯ ಬಗ್ಗೆ ಕೂಡ ಲಕ್ಷಿಸದೆ ಟಿಕೆಟ್ ಕೊಂಡವರಿರುತ್ತಾರೆ; ಮುರಿದ ಟಿವಿ ಗಳನ್ನು ರಿಪೇರಿ ಮಾಡಿಸಿಕೊಂಡವರು, ಹಳೆಯ ರೇಡಿಯೋಗಳನ್ನು ಸರಿಮಾಡಿಸಿಕೊಂಡವರು, ಗೆಳೆತನವಿಲ್ಲದಿದ್ದಲ್ಲಿ ಗೆಳೆತನ ಮಾಡಿಕೊಂಡು ಟಿವಿ ನೋಡಲು ಸಜ್ಜಾದವರು, ತಮ್ಮ ಮೆಚ್ಚಿನ ಆಟಗಾರರನ್ನು ಧ್ಯಾನಿಸುತ್ತಲೇ ಇರುವವರು, ಕ್ರಿಕೆಟ್ಟಿನ ಬಗ್ಗೆ ಏನೂ ಗೊತ್ತಿಲ್ಲದವರು, ಬ್ಯಾಟಿಂಗ್‌ ಬೌಲಿಂಗ್‌ ವ್ಯತ್ಯಾಸ ಗೊತ್ತಿಲ್ಲದವರು, ಸಲೀಂ ಯೂಸುಫ್‌ ಸಲೀಂ ಮಲ್ಲಿಕ್‌ಗೂ ವ್ಯತ್ಯಾಸ ಗೊತ್ತಿಲ್ಲದವರು - ತರಹೇವಾರಿ ಜನ

ಕ್ರಿಕೆಟ್ ಜ್ವರಕ್ಕೆ ತುತ್ತಾಗಿರುತ್ತಾರೆ. ಸರ್ಕಾರದ ಹಣ, ಜನರ ಹಣ ಒಟ್ಟಾಗಿಯೇ ಖರ್ಚಾಗುತ್ತದೆ, ಹನ್ನೊಂದು ಜನ ಒಂದೊಂದು ಘಟ್ಟದಲ್ಲಿ ಇಬ್ಬರು ಚೆಂಡು ಹೊಡೆಯುವ ಹುಡುಗರನ್ನು ತಡವುತ್ತ, ಕೆಣಕುತ್ತ ಹೋಗುತ್ತಾರೆ: ಬ್ಯಾಟ್ ಮಾಡುವ ಆ ಇಬ್ಬರು ಹನ್ನೊಂದು ಜನ ಬಾಲ್ ಎಸೆವ, ಹಿಡಿಯುವ ಹುಡುಗರ ವಿರುದ್ಧ, ಹನ್ನೊಂದು ಕೋಟಿ ಅವರ ಬೆಂಬಲಿಗರ ವಿರುದ್ದ ನಿಂತು ಬಾಲ್ ಹೊಡೆಯುತ್ತಾ ವಿಖ್ಯಾತರಾಗುತ್ತ ಅಥವಾ ಮಂಕುದಿಣ್ಣೆಗಳಾಗುತ್ತಾ, ಹೋಗುತ್ತಾರೆ.

ಮೂರ್ಖತನವಲ್ಲ, ಇದು ಆಟ, ಅತ್ಯಂತ ಶ್ರೇಷ್ಠ ಆಟಗಳಲ್ಲೊಂದು. ಅನೇಕರಿಗೆ ಅನೇಕ ಬಗೆಯ ಪಾಠ ಕಲಿಸುವ ಕ್ರೀಡೆ.

ಅವತ್ತು, ಬುಧವಾರ, ಇಡೀ ಪಾಕಿಸ್ತಾನ ಇಮ್ರಾನ್ ಖಾನ್‌ರ ತಂಡದ ಪರಾಕ್ರಮ ನೋಡಲು, ತನ್ನ ಗೆಲುವನ್ನು ತಾನೇ ನೋಡಿಕೊಂಡು ಆನಂದಿಸಲು ಬಂದಿತ್ತು. ಇಮ್ರಾನ್ ಆವತ್ತಿನವರೆಗೆ ವಿಜಯ ತನ್ನ ಜೇಬಲ್ಲಿ ಆಗಲೇ ಇರುವುದಾಗಿ ಹೇಳಿದ್ದ. ತನ್ನ ಶಿಷ್ಯ ಸ್ಪಿನ್ ಬೌಲರ್ ಅಬ್ದುಲ್‌ ಖಾದಿರ್‌ನನ್ನು ಕೊಂಡಾಡಿದ್ದ: ಭಾರತವನ್ನು ಹಂಗಿಸಿ ಮಾತಾಡಿದ್ದ; ಎಲ್ಲ ಎಂಟು ಮ್ಯಾಚ್‌ಗಳನ್ನು ಗೆದ್ದು ದಿಗ್ವಿಜಯದ ಪ್ರಭೆಯಲ್ಲಿ ನಿವೃತ್ತ ನಾಗುವುದಾಗಿ ಹೇಳಿದ್ದ. ಆತನ ತಂಡದಲ್ಲಿನ ಹುಡುಗರೇನೂ ಕಡಿಮೆ ಆಸಾಮಿಗಳಲ್ಲ. ಜಗತ್ತಿನ ಅತ್ಯುತ್ತಮ ಬ್ಯಾಟ್ಸ್‌ ಮನ್‌ಗಳಲ್ಲಿ ಒಬ್ಬನಾದ ಮಿಯಾಂದಾದ್ ಕೆಟ್ಟ ನಾಲಿಗೆ, ಕೆಟ್ಟ ವರ್ತನೆಗೆ ಪ್ರಸಿದ್ಧನಾದವನು, ಅವನು ಒಳ್ಳೆಯ ನಾಲಿಗೆಯಿಂದಲೇ “ನಾವು ಗೆದ್ದು ಪವಿತ್ರ ಸ್ಥಳವಾದ ಮೆಕ್ಕಾ ಯಾತ್ರೆ ಮಾಡಿ ಬರುತ್ತೇವೆ” ಎಂದು ಹೇಳಿದ್ದ. ಪಾಕಿಸ್ತಾನ ವಿಶ್ವ ಕಪ್ ಗೆಲ್ಲುವುದು ಶತಃಸಿದ್ಧ ಅನ್ನಿಸತೊಡಗಿತ್ತು. ಆದರೆ ಪಾಕ್ ಮುಗ್ಗರಿಸಿತು. ರಮೀಜ್‌ರಾಜಾ ಮೊದಲನೆ ಓವರ್‌ನಲ್ಲಿಯೇ ರನೌಟ್ ಆದ‍ ಸೋಲು ಪಾಕಿಸ್ತಾನದ ಬಾಗಿಲು ತಟ್ಟತೊಡಗಿತು.

ಡಿಕಿಬರ್ಡ್ ಮತ್ತು ಶೆಫರ್ಡ್ ಎಂಬ ಅಂಪೈರ್‌ಗಳು. ಅವರು ದೇವರಲ್ಲದಿರಬಹುದು; ಆದರೆ ಕ್ರಿಕೆಟ್‌ನ ನಿಯಮಗಳನ್ನು ಪಾಲಿಸಲು ನೇಮಕವಾದ ಅಂಪೈರ್‌ಗಳು, ಅವತ್ತಿನ ಪಾಕಿಸ್ತಾನದ ಬ್ಯಾಟಿಂಗ್ ನೋಡಲು ಪಾಕಿಸ್ತಾನದ ಅಧ್ಯಕ್ಷ ಜಿಯಾ ಬಂದಿದ್ದರು, ಆತನ ಕಣ್ಣೆದುರಿಗೇ ಪಾಕಿಸ್ತಾನ ಸೋಲಿನತ್ತ ಸಾಗತೊಡಗಿತು, ಸರ್ವಾಧಿಕಾರಿ ಜಿಯಾ; ತನಗೆ ಅನುಕೂಲಕರವಾದ ಕಾನೂನು ಮಾಡಿಕೊಂಡು ರಾಜ್ಯ ಭಾರ ನಡೆಸಬಲ್ಲವನು. ಅಂತೆಯೇ ದೈವಭಕ್ತ, ಮಿಯಾಂದಾದ್, ಅಂತೆಯೇ ಸರ್ವ ಶ್ರೇಷ್ಠ ಕ್ರೀಡಾಪಟು ಇಮ್ರಾನ್‌ ಖಾನ್, 'ಕಿಂಗ್ ಖಾನ್' ಎಂಬ ಭಿತ್ತಿಪತ್ರ ಹಿಡಿದು 'we miss you' ಎಂದು ಕೂಗುತ್ತಿದ್ದ ಹದಿಹರಯದ ಚೂಡಿದಾರ್, ಮ್ಯಾಕ್ಸಿ, ಲಂಗ ದಾವಣಿ, ಸೀರೆಯಲ್ಲಿದ್ದ ಮೋಹಕ ಹುಡುಗಿಯರು. ಯಾರೂ ಏನೂ ಮಾಡಲಾಗಲಿಲ್ಲ. ಸರ್ವಾಧಿಕಾರಿ ಜಿಯಾ, ಇಡೀ ಪಾಕಿಸ್ತಾನ ಅವತ್ತು ವಿಜಯಕ್ಕಾಗಿ ಏನನ್ನ ಬೇಕಾದರೂ ನೀಡುವುದಕ್ಕೂ ಸಿದ್ಧವಿತ್ತು. ಸರ್ವಾಧಿಕಾರಿ ಜಿಯಾನಿಂದ ಸರ್ವಾಧಿಕಾರವನ್ನೇ ಕೊಡಿಸುವ ಮನಸ್ಥಿತಿಯಲ್ಲಿತ್ತು. ಆದರೆ ಕ್ರಿಕೆಟ್ ತನ್ನ ಘೋರ ನಿಷ್ಠುರ ಪ್ರಜಾಸತ್ತಾತ್ಮಕ ನಿಯಮಗಳನ್ನು ಬಿಡದೆ ಸಾಗಿಯೇ ಬಿಟ್ಟಿತು. ಇಮ್ರಾನನ ಸ್ವಪ್ರತಿಷ್ಠೆಗೆ, ಪಾಕಿಸ್ತಾನದ `ಭ್ರಮೆಗೆ, ಜಿಯಾನ ಸರ್ವಾಧಿಕಾರಕ್ಕೆ ಸವಾಲು ಒಡ್ಡಿತು.

ಹಾಗೆಯೇ ಭಾರತದಲ್ಲೂ ಆಯಿತು, ಮೊದಲನೆ ಮಾಚ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ ಒಂದೇ ಒಂದು ರನ್‌ನಿಂದ ಸೋತ ಭಾರತ ಕ್ರಮೇಣ ಚೇತರಿಸಿಕೊಂಡು ಭದ್ರವಾಗಿ ನಿಂತಂತೆ ತೋರುತ್ತಿತ್ತು. ನ್ಯೂಜಿಲೆಂಡ್ ತಂಡವನ್ನು ದನಕ್ಕೆ ಹೊಡೆದಂತೆ ಹೊಡೆದು ಓಡಿಸಿತು, ಭಾರತದ ಆತ್ಮವಿಶ್ವಾಸ ಬೆಳೆಯಿತು. ಯಥಾಪ್ರಕಾರ ಜ್ಯೋತಿಷಿಗಳು ಎಲ್ಲ ತಂಡಗಳ ಹುಡುಗರ ಜಾತಕ ತರಿಸಿಕೊಂಡು ಶಾಸ್ರೋಕ್ತವಾಗಿ ಅಭ್ಯಸಿ ಭಾರತ ಸೆಮಿಫೈನಲ್ಸ್‌ನಲ್ಲಿ ಮಾತ್ರವಲ್ಲ, ಕಲ್ಕತ್ತಾದ ಫೈನಲ್ಸ್‌ನಲ್ಲಿ ಗೆದ್ದೇ ಗೆಲ್ಲುವುದೆಂದು ಹೇಳಿದರು. ಗೆದ್ದ ಮೇಲೆ ಇವರ ಆಟಾಟೋಪ ನೋಡಬೇಕಿತ್ತು; ಈ ಲೋಫರ್‌ಗಳನ್ನು ಇದೊಂದು ಸಲವಾದರೂ ಬಂಧಿಸಿ ಸೀಳಿ ದೀಪದ ಕಂಬಕ್ಕೆ ನೇತುಹಾಕಬೇಕು, ಕ್ರಿಕೆಟ್ ನಿಂದ ಇದಾದರೂ ಸಾಧ್ಯವಾಗಬೇಕು.

ಆದರೆ ಭಾರತ ಗೆಲ್ಲುವುದು ಕಷ್ಟವೆಂದು ಅಲ್ಲಲ್ಲಿ ಕೆಲವರು ಕ್ರಿಕೆಟ್ ಬಲ್ಲವರು ಗೊಣಗಿಕೊಳ್ಳುತ್ತಿದ್ದರು. ಯಾಕೆಂದರೆ ಭಾರತದ್ದು ತಂಡವಲ್ಲ; ಅನೇಕ ಬುದ್ಧಿವಂತರನ್ನು ಕರೆದುತಂದು ನಿಲ್ಲಿಸಿದ ಗುಂಪು, ಗವಾಸ್ಕರ್‌ನನ್ನೇ ನೋಡಿ, ಈತ ಕೇವಲ ಆಟಗಾರನಲ್ಲ; ಸಿನಿಮಾ ಸ್ಟಾರ್ ತರಹದ ಸ್ಟಾರ್, ಬೀಡಿ, ನಶ್ಯದಿಂದ ಹಿಡಿದು ಪ್ರೆಶರ್ ಕುಕ್ಕರ್‌ವರೆಗೆ ಪ್ರಚಾರಸಾಧನವಾಗಿರುವ ಈತ ತನ್ನ 'ಲಿಟಲ್ ಮಾಸ್ತರ್'ಗಿರಿ ಯನ್ನು ಎಷ್ಟು ಗಂಭೀರವಾಗಿ ತೆಗೆದುಕೊಂಡಿದ್ದಾನೆಂದರೆ ಮೊನ್ನೆಯ ಸೆಮಿಫೈನಲ್ಸ್‌ಗೆ ಮುಂಚೆ, “ಭಾರತ ಗೆಲ್ಲಬಹುದೆ ?” ಅಂದಾಗ ಏನನ್ನೂ ಹೇಳಲಿಲ್ಲ. ಇದರ ಹಿಂದೆ ಕತೆಯೇ ಇದೆ, ಭಾರತ ಸೆಮಿಫೈನಲ್ಸ್‌ನಲ್ಲಿ ಗೆದ್ದರೆ ಫೈನಲ್ಸ್‌ಗೆ ಕಲ್ಕತ್ತಾಗೆ ಹೋಗ ಬೇಕು. ಆದರೆ ಈತ ಕಲ್ಕತ್ತಾಕ್ಕೆ ಹೋಗುವುದಿಲ್ಲವೆಂದು ಪ್ರತಿಜ್ಞೆ ಮಾಡಿದ್ದಾನೆ. ಅಲ್ಲಿಯ ಪ್ರೇಕ್ಷಕರೊಂದಿಗೆ ಈತನ ಜಗಳವಿದೆ: ಅದೊಂದು ಬಗೆಹರಿಯದ ಜಗಳ, ಈ ಕತೆಯೇ ಈತ ಮೊನ್ನೆಯ ಪಂದ್ಯದಲ್ಲಿ ಆಡಿದ್ದನ್ನು ಸ್ವಲ್ಪಮಟ್ಟಿಗೆ ನಿಯಂತ್ರಿಸಿದೆ. ಆರಂಭದಲ್ಲಿಯೇ ಅತ್ಯಂತ ಸಾಮಾನ್ಯ ವೇಗದ ಬೌಲರ್ ಆದ ಡೀಫ್ರೈಟಸ್‌ ಬಾಲ್‌ಗೆ ಔಟಾದ, ಹೊಡೆದರೆ ಹೀರೋ ಆಗುತ್ತಿದ್ದ ಗವಾಸ್ಕರ್, ಹೊಡೆಯದಿದ್ದರೆ ಕಲ್ಕತ್ತಾ ದಿಂದ ತಪ್ಪಿಸಿಕೊಳ್ಳುತ್ತಿದ್ದ ಗವಾಸ್ಕರ್-ಈತನಿಗೆ ಗೆಲುವು ಎಷ್ಟು ಮುಖ್ಯವೋ ಸೋಲೂ ಅಷ್ಟೇ ಮುಖ್ಯ. ಅಲ್ಲದೆ ನಾಲ್ಕು ವರ್ಷದ ಹಿಂದೆ ಕಪಿಲ್ ನಾಯಕತ್ವದಲ್ಲಿ ಇದೇ ವಿಶ್ವಕಪ್ ಗೆದ್ದ ಭಾರತ ಮತ್ತೆ ಅದೇ ಕಪಿಲ್‌ಗೆ ವಿಶ್ವಕಪ್ ತಂದುಕೊಡುವುದು ಎಷ್ಟು ಒಳ್ಳೆಯದೋ ಅಷ್ಟೇ ಕೆಟ್ಟದು. ಅಲ್ಲದೆ ಈ ತಂಡ ನೋಡಿ, ಭಾರತ ಆರಿಸಿದ ಈ ತಂಡದಲ್ಲಿ ಒಬ್ಬ ಒಳ್ಳೆಯ ಬ್ಯಾಟ್ಸ್‌ ಮನ್ ಕಾಯಿಲೆ ಬಿದ್ದರೆ ಆತನ ಜಾಗಕ್ಕೆ ಬರುವಂಥ ಇನ್ನೊಬ್ಬನಿಲ್ಲ; ಅಲ್ಲಿರುವ ಹದಿನಾಲ್ಕು ಜನರಲ್ಲಿ ಇಂಥ ಕಾಯಿಲೆ ಛಾನ್ಸ್‌ಗಾಗಿ ಕಾಯುತ್ತಿರುವ ಮೂವರು: ಬೌಲ್ ಮಾಡಲಾರನೆಂದು ತಿರಸ್ಕೃತನಾದ ಶಿವರಾಮಕೃಷ್ಣನ್, ವಿಕೆಟ್ ಕೀಪಿಂಗ್ ಮಾಡಲಾರನೆಂದು ಮೂಲೆಗುಂಪಾದ ಪಂಡಿತ್, ಪಿಂಜರಾಪೋಲು ಆಗುತ್ತಿರುವ ಬಿನ್ನಿ, ಇವರಿಗೆ ರಮಣ್‌ಲಂಬಾ ಕಂಡರಾಗುವುದಿಲ್ಲ; ಅರುಣ್‌ ಲಾಲ್ ಕಂಡರಾಗುವುದಿಲ್ಲ. ನಿರೀಕ್ಷಿಸಿದ್ದಂತೆ ಒಬ್ಬ ಕಾಯಿಲೆ ಬಿದ್ದ ; ಆತ ವೆಂಗ್‌ಸರ್ಕಾರ್, ಆತನ ಜಾಗಕ್ಕೆ ಪಂಡಿತ್‌ ಹಾಜರಾದ. ನಿರೀಕ್ಷಿದ್ದೇ ಆಯಿತು.

ಎಲ್ಲಿ ಹಣ, ಖ್ಯಾತಿ ಇರುತ್ತವೋ ಅಲ್ಲಿ ಕಿತ್ತಾಟ ಇದ್ದೇ ಇರುತ್ತದೆ. ಕಪಿಲ್ ಈಗ ಹೀರೋ. ಆತ ತನ್ನ ತಂಡದ ಹುಡುಗರನ್ನೆಲ್ಲ ಪ್ರೀತಿಸುವವನಂತೆ ತೋರಿಸಿಕೊಳ್ಳುತ್ತಾನೆ. ಆದರೆ ನವಜ್ಯೋತ್ ಸಿದ್ದುನಂಥ ಹುಡುಗ ಬಂದಾಗ ಅವನ ಕಸಿವಿಸಿ ಶುರು ವಾಗುತ್ತದೆ. ಈ ಸಿದ್ದು ಯಾವನ ಪ್ರೋತ್ಸಾಹವಿರಲಿ, ಇಲ್ಲದಿರಲಿ ಬ್ಯಾಟಿಂಗ್ ಮಾಡಲು ಹೋದರೆ ದಿಟ್ಟವಾಗಿ, ಕಲಾತ್ಮಕವಾಗಿ ಹೊಣೆಯರಿತು ಆಡಿಯೇ ಆಡುವ ಪೈಕಿ. ಈ ಸಿದ್ದುವನ್ನು ಕಪಿಲ್ ಆರಿಸಿಕೊಳ್ಳಲಿಲ್ಲ; ಆಯ್ಕೆದಾರರಲ್ಲಿ ಕೆಲವರು ಒತ್ತಾಯಿಸಿ ಕಪಿಲ್‌ನ ತಂಡಕ್ಕೆ ಸೇರಿಸಿದರು. ಮೊನ್ನೆ ಕಾನ್ಸರದಲ್ಲಿ ಭಾರತ ನ್ಯೂಜಿ ಲೆಂಡ್ ವಿರುದ್ಧ ಆಡುವಾಗ ಈ ಸಿದ್ದು ಪ್ಯಾಡ್, ಹೆಲ್ಮಟ್ ಧರಿಸಿ ತನ್ನ ಸರದಿಗಾಗಿ ಕಾಯುತ್ತ ಕೂತಿದ್ದ. ಆದರೆ ಆತನ (ಒನ್‌ಡೌನ್) ಬ್ಯಾಟಿಂಗ್ ಸರದಿ ಬಂದಾಗ ಅಜರುದ್ದೀನ್‌ನನ್ನು ಕಳಿಸಿದರು. ಸಿದ್ದುವಿಗೆ ಜ್ವರವಿತ್ತು, ಗವಾಸ್ಕರ್ ಅವತ್ತು ಸೆಂಚುರಿ ಬಾರಿಸುವುದು ಸಿದ್ದು ಇದಿದ್ದರೆ ಕಷ್ಟವಿತ್ತು, ಆತನೇ ಹೆಚ್ಚು ಆಡುತ್ತಿದ್ದು ಗವಾಸ್ಕರ್‌ಗೆ ಛಾನ್ಸ್ ಸಿಕ್ಕುತ್ತಿರಲಿಲ್ಲ-ಇತ್ಯಾದಿ ಸುದ್ದಿ ಹಬ್ಬಿಸಲಾಯಿತು. ಹಾಗಾದರೆ ಸಿದ್ದುವಿಗೆ ಪ್ಯಾಡ್ ಕಟ್ಟಿಕೊಂಡು ಅಣಿಯಾಗಲು ಹೇಳಿದವರು ಯಾರು ? ಸಿದ್ದು ಚಂದಕ್ಕೆ ಅವನ್ನೆಲ್ಲ ಕಟ್ಟಿಕೊಂಡಿದ್ದನೆ ? ನಮಗೆಲ್ಲ ಅನ್ನಿಸುವಂತೆ, ಸಿದ್ದು ಅವತ್ತು ಕೂಡ ಚೆನ್ನಾಗಿ ಆಡಿ ಮತ್ತೊಂದು ಐವತ್ತು ಬಾರಿಸಿ ತಂಡದ ಅತ್ಯುತ್ತಮ ಆಟಗಾರನೆನ್ನಿಸಿ ಕೊಳ್ಳುವುದು ಕಪಿಲ್, ಗವಾಸ್ಕರ್ ಯಾರಿಗೂ ಬೇಕಿರಲಿಲ್ಲ.

ಇದೆಲ್ಲ ರಾಜಕೀಯ ಇದ್ದೇ ಇರುತ್ತದೆ. ಕೆಲವು ತಂಡಗಳಲ್ಲಿ ತಂಡದ ಒಗ್ಗಟ್ಟು ಕೆಡಿಸದಿರುವಷ್ಟು ಇರುತ್ತದೆ, ಕೆಲವು ಕಡೆ ಅತಿಯಾಗಿರುತ್ತದೆ. ಆದರೆ ಕ್ರಿಕೆಟ್‌ ಎಂಬ ಕ್ರೀಡೆಯನ್ನು ಧ್ಯಾನಿಸುತ್ತ ಹೋದಂತೆ ಅದರ ಬಗ್ಗೆ ವಿಚಿತ್ರ ಸತ್ಯಗಳು ಹೊಳೆಯುತ್ತ ಹೋಗುತ್ತವೆ. ಮೊನ್ನೆ ಪಂಡಿತ್ ಚೆನ್ನಾಗಿಯೇ ಆಡತೊಡಗಿದ. ಆತ ವೆಂಗ್‌ಸರ್ಕಾರ್‌ಗಿಂತ ಚೆನ್ನಾಗಿ ಆಡಿದ್ದರೆ ? ಅವತ್ತು ಸಿದ್ದು ಕೇವಲ ಇಪ್ಪತ್ತೆರಡು ರನ್ ಮಾಡಿದ, ಆತ ಸೊನ್ನೆಗೆ ಔಟಾಗುವುದೂ ಅಸಂಭವವೇನಲ್ಲ. ಆ ದೃಷ್ಟಿಯಿಂದ ಕ್ರಿಕೆಟ್ ತನ್ನ ಮಂಡಿಲಲ್ಲಿ ನಿಗೂಢವನ್ನು, ಅನಿರೀಕ್ಷಿತವನ್ನು ಬಚ್ಚಿಟ್ಟುಕೊಂಡಿರುವ ಆಟ.

ಕ್ರಿಕೆಟ್ ಆಡಲು ಪ್ರತಿಭೆ ಬೇಕು. ಮನುಷ್ಯ ಬದುಕಲು ಆರೋಗ್ಯ ಬೇಕಾಗಿರುವಂತೆ ಇಲ್ಲಿ ಪ್ರತಿಭೆ, ಆದರೆ ಆರೋಗ್ಯವಂತನೂ ಆಕಸ್ಮಿಕವಾಗಿ ಸತ್ತು ಹೋಗುವ ಹಾಗೆ ಪ್ರತಿಭಾವಂತನೂ ಸೋತುಹೋಗುವ ಸಣ್ಣ ಸಾಧ್ಯತೆ ಇದೆ. ಆದ್ದರಿಂದಲೇ ಸಾವಿನ ತರಹವೇ ಕ್ರಿಕೆಟ್ ಒಂದು ರೀತಿಯಲ್ಲಿ ಸಮತಾವಾದಿ, ಕ್ರಿಕೆಟ್ ಆಡಲು ತಂತ್ರ ಬೇಕು; ಕುತಂತ್ರ ಕೂಡ. ಮೊನ್ನೆ ಭಾರತವನ್ನು ಸೋಲಿಸಿದ ಇಂಗ್ಲಿಷ್ ತಂಡದ ಬ್ಯಾಟಿಂಗ್ ಅಸಹ್ಯ ಹುಟ್ಟಿಸುವಷ್ಟು ಶೈಲಿರಹಿತವಾಗಿತ್ತು. ಸೋತ ಭಾರತ ಅವರಿಗಿಂತ ಮೋಹಕವಾಗಿ ಆಡಿತು. ಆ ಅಸಹ್ಯ ಮತ್ತು ಈ ಮೋಹಕತೆಯ ನಡುವೆ ಆರಿಸಿಕೊಳ್ಳುವ ಮನಸ್ಥಿತಿ ಆಟಗಾರನಿಗೆ ಬೇಕು, ಶೈಲಿಯನ್ನು ಬಿಟ್ಟುಕೊಡದೆ, ಹೊಣೆಗಾರಿಕೆಗೆ ತಿಲಾಂಜಲಿ ಕೊಡದೆ, ಕ್ರಿಕೆಟ್‌ನ ರಮ್ಯ ಲೋಕದಲ್ಲಿ ವಿಹರಿಸಬೇಕು.

ಆ ಚೆಂಡು....ಅದು ಗಿಬ್ಸ್ ಅಥವಾ ಚಂದ್ರಶೇಖರ್ ಕೈಯಲ್ಲಿದ್ದ ತಿರುಗುವ ಚೆಂಡಲ್ಲ. ಅದು ಕೇವಲ ಹೆಮ್ಮಿಂಗ್ಸ್‌ನ ಸಾಧಾರಣ ಕೈಯಲ್ಲಿದ್ದ ಚೆಂಡು, ಅದು ಬಂತು. ಅದನ್ನೆದುರಿಸಲು ತಂತ್ರ, ಹೊಣೆಗಾರಿಕೆ, ವಿನಯ ಮತ್ತು ಮಾಂತ್ರಿಕತೆ ಇಲ್ಲದ ಕಪಿಲ್ ಮಣ್ಣುಮುಕ್ಕಿದ, ಕ್ರಿಕೆಟ್ ವಿನಯವಂತರ, ಚಾರಿತ್ರ್ಯವಂತರ, ದಿಟ್ಟತನವಿದ್ದರೂ ಧಿಮಾಕಿಲ್ಲದವರ, ಖ್ಯಾತಿ ಇದ್ದರೂ ಅನಾಮಿಕತೆಯ ಸೊಗಸನ್ನರಿತವರ ಆಟ.

- ಪಿ. ಲಂಕೇಶ್

MORE FEATURES

ಮರೆತು ಹೋದ ವಾಸ್ತವಗಳಿಗೆ ಬರಹದ ರೂಪ ಕೊಟ್ಟಿರುವುದು ಆಕಸ್ಮಿಕ: ಶ್ರೀಧರ್ ನಾಯಕ್

21-10-2024 ಬೆಂಗಳೂರು

“ನಾನು ಹತ್ತು ಹಲವು ಹವ್ಯಾಸಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಪುಸ್ತಕಗಳ ಓದು, ಪ್ರವಾಸ, ಛಾಯಾಚಿತ್ರಗ್ರಹಣ, ಇಂಗ್ಲಿ...

'ಸದರಬಜಾ‌ರ್' ಕಾದಂಬರಿಯ ವಸ್ತು ಎಂಬತ್ತನೆಯ ದಶಕದ್ದು

21-10-2024 ಬೆಂಗಳೂರು

“ಬೃಹತ್ ಕಾದಂಬರಿಯ ರಚನೆಯನ್ನು ಕೈಗೆತ್ತಿಕೊಳ್ಳುವ ಮುನ್ನ ಕ್ರಿಕೆಟ್ ಪರಿಭಾಷೆಯಲ್ಲಿ ಹೇಳುವಂತೆ, ಟೆಸ್ಟ್ ಕ್ರಿಕೆಟ...

ಹೂವು-ಹಣ್ಣು-ಹಸಿರು ತರಕಾರಿಗಳಿಲ್ಲದ ಜೀವನ ಬೇಗೆಯ ಬರಡು..

20-10-2024 ಬೆಂಗಳೂರು

“ಕಾಡು ನಾಡಾಗುತ್ತಿದೆ, ಹೊಲಗದ್ದೆಗಳು ನಿವೇಶನಗಳಾಗುತ್ತಿವೆ. ನೆಲದ ಕಸುವು ಇಲ್ಲವಾಗುತ್ತಿದೆ. ಬಗೆಬಗೆಯ ಹಣ್ಣು, ತ...