ಧಾರವಾಡದಲ್ಲಿರುವಷ್ಟು ಓದುಗರು, ಓದುವ ಅಭಿರುಚಿ ಬೇರೆಲ್ಲೂ ಇಲ್ಲ: ರಮೇಶ ಉಡುಪ


'ಧಾರವಾಡದಲ್ಲಿರುವಷ್ಟು ಓದುಗರು, ಓದುವ ಅಭಿರುಚಿ ಬೇರೆಲ್ಲೂ ಇಲ್ಲ. ಮುಂಚಿನಿಂದಲೂ ಅಲ್ಲಿ ಮಳಿಗೆ ಮಾಡಬೇಕೆಂಬ ಆಸೆ ಇತ್ತು. ಬೇರೆ ಕಾರಣಗಳಿಂದಾಗಿ ಮುಂದಕ್ಕೆ ಹೋಗುತ್ತಿತ್ತು' ಎನ್ನುತ್ತಾರೆ ನವಕರ್ನಾಟಕದ ರಮೇಶ ಉಡುಪ. ಅವರು ಧಾರವಾಡದಲ್ಲಿ ನೂತನವಾಗಿ ಆರಂಭವಾಗುತ್ತಿರುವ ನವಕರ್ನಾಟಕ ಪ್ರಕಾಶನ ಮಳಿಗೆ ಮತ್ತು ನವಕರ್ನಾಟಕ ಸಾಗಿ ಬಂದ ಹಾದಿಯ ಕುರಿತು ಬುಕ್ ಬ್ರಹ್ಮದೊಂದಿಗೆ ಹಂಚಿಕೊಂಡ ಮಾತಿನ ಬರಹರೂಪ ಇಲ್ಲಿದೆ.

ಕನ್ನಡದ ಪ್ರಸಿದ್ಧ ಪ್ರಕಾಶನ ಸಂಸ್ಥೆಯಾದ ನವಕರ್ನಾಟಕ ಇದೀಗ ವಿದ್ಯಾಕಾಶಿ ಧಾರವಾಡದಲ್ಲಿ ತನ್ನ ಮಳಿಗೆಯನ್ನು ಆರಂಭಿಸುತ್ತಿದೆ. ಕನ್ನಡ ಓದುಗ ಸಂಸ್ಕೃತಿ ಬೆಳೆಸುವಲ್ಲಿ ಮಹತ್ವದ ಪಾತ್ರವಹಿಸಿರುವ ಈ ಸಂಸ್ಥೆ ಕನ್ನಡ ಪುಸ್ತಕಲೋಕದ ಮಟ್ಟಿಗೂ ಮಹತ್ವದ ಸಂಸ್ಥೆಯಾಗಿದ್ದು, ವೈಜ್ಞಾನಿಕ, ವೈಚಾರಿಕ ಸ್ಪಷ್ಟತೆಗಳಿಂದಲೂ ಹೆಸರುವಾಸಿಯಾಗಿದೆ. 2024 ಏಪ್ರಿಲ್ 13ರಂದು ಧಾರವಾಡದಲ್ಲಿ ನವಕರ್ನಾಟಕ ಪುಸ್ತಕ ಮಳಿಗೆ ಉದ್ಘಾಟನೆಗೊಳ್ಳುತ್ತಿದ್ದು, ಈ ಅಪೂರ್ವ ಸಂದರ್ಭದಲ್ಲಿ ಸಂಸ್ಥೆಯ ಹುಟ್ಟು-ಬೆಳವಣಿಗೆ, ಸಾಗಿಬಂದ ಹಾದಿಯ ಮೇಲೆ ಬೆಳಕು ಚೆಲ್ಲುವ ಕಾರ್ಯವನ್ನು ಸಂಸ್ಥೆಯ ಮುಖ್ಯಸ್ಥರಾದ ರಮೇಶ ಉಡುಪ ಮಾಡಿದ್ದಾರೆ. ಬುಕ್ ಬ್ರಹ್ಮದೊಂದಿಗೆ ನವಕರ್ನಾಟಕ ಸಂಸ್ಥೆಯ ಪಯಣವನ್ನು ಹಂಚಿಕೊಂಡಿರುವ ಅವರು ಸಂಸ್ಥೆಯ ಕಾರ್ಯಗಳ ಬಗ್ಗೆ ವಿವರಿಸಿದ್ದಾರೆ.

ಸಂಸ್ಥೆಯ ಆರಂಭ ಮತ್ತು ಸಾಗಿಬಂದ ಹಾದಿಯ ಬಗ್ಗೆ ರಮೇಶ ಉಡುಪ ಅವರ ಮಾತು:

‘ನವಕರ್ನಾಟಕ ಸಂಸ್ಥೆ ಆರಂಭವಾದದ್ದು 1960ರಲ್ಲಿ, 60ರಿಂದ ಸುಮಾರು 1980ರ ವರೆಗೆ ಮೊದಲನೇ 20 ವರ್ಷ ದೊಡ್ಡ, ಮಹತ್ವದ ಪುಸ್ತಕಗಳನ್ನ ಪ್ರಕಟಿಸಲಿಲ್ಲ. ಕೆಲವು ಸಣ್ಣ ಪುಟ್ಟ ಪುಸ್ತಕಗಳನ್ನು ಪ್ರಕಟಿಸಿದ್ದೆವು. ಆದ್ದರಿಂದ ನಮಗೆ ಬ್ರಾಂಚ್ ಗಳು ಬೇಕು ಅಂತಾ ಅನ್ನಿಸಿರಲಿಲ್ಲ. 1980ರಲ್ಲಿ ನಿರಂಜನ ಅವರ ವಿಶ್ವಕಥಾಕೋಶವನ್ನ ಪ್ರಕಟಿಸಿದ ನಂತರ ದೊಡ್ಡ ಮಟ್ಟದ ಪ್ರಚಾರ ಸಿಕ್ಕಿತು. ಸಾಕಷ್ಟು ಜನ ವಿಶ್ವಕಥಾಕೋಶವನ್ನ ಮುಂಗಡ ಹಣ ಪಾವತಿಸಿ ಕೊಂಡುಕೊಂಡರು. ಆಗ ಇಂಥದ್ದೊಂದು ಪ್ರಕಾಶನ ಇದೆ ಅಂತಾ ಎಲ್ಲರಿಗೂ ಗೊತ್ತಾಯಿತು. ಅದರ ಬೆನ್ನಲ್ಲೇ ಸೋವಿಯತ್ ಯೂನಿಯನ್ನಿಂದ (ಸೋವಿಯತ್ ಒಕ್ಕೂಟ) ಸುಮಾರು 80ರ ದಶಕದಲ್ಲಿ ದೊಡ್ಡ ದೊಡ್ಡ ಕನ್ನಡ ಪುಸ್ತಕಗಳು ಬರುವುದಕ್ಕೆ ಶುರುವಾಯಿತು. ಅಲ್ಲಿಯವರೆಗೆ ಇಂಗ್ಲಿಷ್ ಪುಸ್ತಕಗಳು ಬರುತ್ತಿದ್ದವು. 80ರ ದಶಕದಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ಕನ್ನಡ ಪುಸ್ತಕಗಳು ಬರೋದಕ್ಕೆ ಶುರುವಾದವು.

ಆ ಸಮಯದಲ್ಲಿ ನಮ್ಮ ಸಂಸ್ಥೆ ಅದಕ್ಕೆ ಏಕೈಕ ಆಮದುದಾರರು, ವಿತರಕರು ಆಗಿದ್ದ ಕಾರಣಕ್ಕೆ ಆ ಪುಸ್ತಕಗಳನ್ನು ಮಾರಾಟ ಮಾಡುವ ಸಲುವಾಗಿ ರಾಜ್ಯಾಧ್ಯಂತ ಸೋವಿಯತ್ ಪುಸ್ತಕ ಪ್ರದರ್ಶನಗಳನ್ನು ಆಯೋಜಿಸುತ್ತಿದ್ದೆವು. 1970ರಲ್ಲಿ ಅದು ಆರಂಭವಾಯಿತು 80 ದಶಕದಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಟಾಲ್ ಸ್ಟಾಯ್, ದಸ್ಕೋವಸ್ಕಿ, ಮಕ್ಕಳ ಪುಸ್ತಕಗಳು ಈ ರೀತಿಯ ನಾನಾ ತರದ ಪುಸ್ತಕಗಳು ಸೋವಿಯತ್ ಒಕ್ಕೂಟಗಳಿಂದ ಬಂದವು. ಇವುಗಳ ಮಾರಾಟಕ್ಕೆ ರಾಜ್ಯಾಧ್ಯಂತ ಜಿಲ್ಲಾಕೇಂದ್ರ ಮಾತ್ರವಲ್ಲ, ತಾಲ್ಲೂಕು ಕೇಂದ್ರಗಳಲ್ಲೂ, ಇನ್ನೂ ಸಣ್ಣ ಊರುಗಳಿಗೂ ಹೋಗಿ ಈ ಪುಸ್ತಕಗಳನ್ನು ಮಾರಾಟ ಮಾಡಿದೆವು.

1990ರಲ್ಲಿ ಇದ್ದಕ್ಕಿದ್ದಂತೆ ಸೋವಿಯತ್ ಯೂನಿಯನ್ನಿನ ವಿಭಜನೆಯಾಯಿತು. ಬೇರೆ ಬೇರೆ ರಿಪಬ್ಲಿಕ್ಸ್ ಆಗಿ ಮಾಡಿದ್ದರಿಂದ, ಅಲ್ಲಿಂದ ಪುಸ್ತಕ ಬರೋದು ನಿಂತುಹೋಯಿತು. ಪ್ರಿಂಟಾದ ಪುಸ್ತಕಗಳು ಸಹ ಅಲ್ಲೇ ಉಳಿದುಕೊಂಡವು. 1990ರ ನಂತರ ನಮಗೆ ಪುಸ್ತಕ ಬರೋದು ನಿಂತುಹೋಯಿತು.

ನಮ್ಮ ವರ್ಷದ ವ್ಯವಹಾರದಲ್ಲಿ ಅರ್ಧದಷ್ಟು ವ್ಯವಹಾರ ಸೋವಿಯತ್ ಪುಸ್ತಕಗಳ ಮಾರಾಟದ್ದೇ ಆಗಿದ್ದವು. ಇದ್ದಕಿದ್ದಾಗೆ ನಿಂತಾಗ ಅಲ್ಲೊಂದು ಖಾಲಿತನ ಸೃಷ್ಠಿಯಾಯಿತು. ನಮ್ಮಲ್ಲಿದ್ದ ರಷ್ಯನ್ ಪುಸ್ತಕಗಳು ಖಾಲಿಯಾದವು. ನಮ್ಮಿಂದ ಪ್ರಕಟವಾದ ಪುಸ್ತಕಗಳು ಪ್ರದರ್ಶನ ಮಾಡಿ ಮಾರಾಟ ಮಾಡುವಷ್ಟು ದೊಡ್ಡವಿರಲಿಲ್ಲ. ನಮ್ಮಲ್ಲಿದ್ದ ಮೂಲಸೌಕರ್ಯ ಸುಮಾರು 10 ಪ್ರದರ್ಶನ ತಂಡಗಳಿಗೆ ಪೂರೈಸೋಕೆ ಬೇಕಾದ ಪುಸ್ತಕಗಳನ್ನು ನಾವು ಹೊಸದಾಗಿ ಬೇರೆ ಬೇರೆ ಯೋಜನೆಗಳ ಮೂಲಕ ತಯಾರಿಸಿ, ಪ್ರಕಟಿಸುವ ದೊಡ್ಡ ಜವಾಬ್ದಾರಿ ನಮ್ಮ ತಲೆಯ ಮೇಲೆ ಬಿತ್ತು.

ಯಾವಾಗ ಸೋವಿಯತ್ ನಿಂತೋಯಿತೋ ಆಗ ನವಕರ್ನಾಟಕ ಎಂದು ಹೆಸರನ್ನು ಬದಲಿಸಿ. ರಾಜ್ಯಾದ್ಯಂತ ಪ್ರದರ್ಶನ ತಂಡಗಳನ್ನು ಮುಂದುವರೆಸಿದೋ. 1990ರಿಂದ ಸುಮಾರು 10-15 ವರ್ಷ ಈ ಪ್ರದರ್ಶನ ನಡೆಸಿಕೊಂಡು ಬಂದೆವು.

ಹೊಸ ಪಬ್ಲಿಕೇಷನ್ ಮಾಡುವ ದೊಡ್ಡ ಜವಾಬ್ದಾರಿ ನಮ್ಮ ತಲೆಯ ಮೇಲೆ ಬಿದ್ದಿದ್ದರಿಂದ ನಾವು ಬೇರೆ ಕೆಲಸದ ಬಗ್ಗೆ ಹೆಚ್ಚು ಗಮನಕೊಡೋಕೆ ಸಾಧ್ಯವಾಗಲಿಲ್ಲ.

ಬ್ರಾಂಚ್ ಅಂತಾ ಮಾಡಿದ್ದು 1989ರಲ್ಲಿ. ಮೊದಲಿಗೆ ಮೈಸೂರು ಬ್ರಾಂಚ್, 1991ರಲ್ಲಿ ಗುಲ್ಬರ್ಗಾ ಬ್ರಾಂಚ್ ಅಲ್ಲಿಗೆ ಮುಗಿದಿತ್ತು, ಆನಂತರ ಈವರೆಗೆ ಹೊಸ ಬ್ರಾಂಚ್ ಮಾಡಲು ಸಾಧ್ಯವಾಗಲಿಲ್ಲ. 1991ರಿಂದ ಈಗ 2024ರಲ್ಲಿ ಧಾರವಾಡದಲ್ಲಿ ಒಂದು ಬ್ರಾಂಚ್ ಮಾಡುತ್ತಿದ್ದೇವೆ. 33-34ವರ್ಷ ಬೇರೆ ಊರುಗಳಲ್ಲಿ ಬ್ರಾಂಚ್ ಮಾಡೋಕೆ ಆಗಲಿಲ್ಲ, ಇದ್ದ ಬ್ರಾಂಚ್ ಗಳನ್ನ ವಿಸ್ತರಿಸುವ, ಬದಲಿಸುವ ಕೆಲಸ ಮಾಡಲು ಮಾತ್ರ ಸಾಧ್ಯವಾಗಿತ್ತು. ಮಂಗಳೂರಿನಲ್ಲಿ ನಮ್ಮ ಬ್ರಾಂಚು 1960ರಿಂದಲೇ ಇತ್ತು ಅದನ್ನ ನವೀಕರಿಸಿ, ಸ್ಥಳಾಂತರ ಮಾಡಬೇಕಾಯಿತು. ಸುಮಾರು 15ವರ್ಷಗಳ ಹಿಂದೆ ಇನ್ನೊಂದು ಬ್ರಾಂಚ್ ಮಾಡಿದ್ದೆವು, ಈಗ ಮಂಗಳೂರಿನಲ್ಲಿ ನಮ್ಮ ಸಂಸ್ಥೆಯ ಎರಡು ಬ್ರಾಂಚ್ ಗಳಿವೆ. ಮೈಸೂರಿನ ಬ್ರಾಂಚ್ ಕೂಡ ನಾವು ನಂತರದಲ್ಲಿ ವಿಸ್ತರಿಸಿದೆವು.

ಬೆಂಗಳೂರಿನ ಬ್ರಾಂಚ್ ಕೂಡಾ ಆರಂಭದಲ್ಲಿದ್ದದ್ದು ಕೆಂಪೇಗೌಡ ವೃತ್ತದಲ್ಲಿ, ಅದು ಗಾಂಧಿನಗರಕ್ಕೆ ಶಿಫ್ಟ್ ಆಯ್ತು, ಈಗ ಕೆಂಪೇಗೌಡ ರಸ್ತೆಗೆ ಶಿಪ್ಟ್ ಆಯ್ತು. ನವೀಕರಣ ಆಗುತ್ತಿತ್ತು, ವಿಸ್ತರಿಸೋದು ಈತರದ ಕಾರ್ಯಕ್ರಮಗಳು ಆಗ್ತಿತ್ತೇ ಹೊರತು 1991 ಗುಲ್ಬರ್ಗಾ ಬ್ರಾಂಚ್ ಓಪನ್ ಮಾಡಿದ ನಂತರ ಬೇರೆ ಊರಿನಲ್ಲಿ ಬ್ರಾಂಚ್ ಮಾಡ್ತಿರೋದು ಇದೇ ಧಾರವಾಡದಲ್ಲಿ. ಕಾರಣಗಳು ನಮಗೆ ಪಬ್ಲಿಕೇಷನ್ ಜವಾಬ್ದಾರಿಗಳಿದ್ದವು.

ಧಾರವಾಡದಲ್ಲಿ ಪ್ರಕಾಶನ ಮಳಿಗೆ ಮಾಡಲು ಕಾರಣ:

ಈ ಪುಸ್ತಕ ಪ್ರದರ್ಶನವನ್ನು ಸುಮಾರು 30-40 ವರ್ಷಗಳಿಂದ ಕರ್ನಾಟಕದಾಧ್ಯಂತ ಮಾಡುತ್ತಾ ಬಂದೆವು. ಅದರಲ್ಲಿ ನಮಗೆ ಬಹಳ ದೊಡ್ಡ ಪ್ರಮಾಣದಲ್ಲಿ ನಮ್ಮ ಪುಸ್ತಕಗಳು ನಿರಂತರವಾಗಿ ಮಾರಾಟವಾಗುತ್ತಿದ್ದದ್ದು ಧಾರವಾಡದಲ್ಲಿ. ಧಾರವಾಡದಲ್ಲಿ ಕಡಪ ಮೈದಾನವಿದೆ ಈ ಮೈದಾನದಲ್ಲಿ ಸುಮಾರು 30-35 ನಿರಂತರವಾಗಿ ಪುಸ್ತಕಗಳನ್ನು ಮಾರಾಟ ಮಾಡುತ್ತಾ ಬಂದೆವು. ಅಲ್ಲಿ ಮಾರಾಟವಾದಷ್ಟು ಪುಸ್ತಕ ಇನ್ನೆಲ್ಲೂ ಮಾರಾಟವಾಗಲಿಲ್ಲ. ಆಮೇಲೆ ಬೇರೆ ಕಡೆ ಒಂದು ಟೆಂಟ್ ಹಾಕಿದರೆ ಎರಡು ತಿಂಗಳು ಮೂರು ತಿಂಗಳಿಗೆ ಮುಗಿಸುತ್ತಿದ್ದೆವು, ಧಾರವಾಡದಲ್ಲಿ ವರ್ಷಪೂರ್ತಿ ಪುಸ್ತಕಗಳು ಮಾರಾಟವಾಗುತ್ತಿದ್ದವು.

ಧಾರವಾಡದಲ್ಲಿರುವಷ್ಟು ಓದುಗರು, ಓದುವ ಅಭಿರುಚಿ ಬೇರೆಲ್ಲೂ ಇಲ್ಲ. ಮುಂಚಿನಿಂದಲೂ ಅಲ್ಲಿ ಮಳಿಗೆ ಮಾಡಬೇಕೆಂಬ ಆಸೆ ಇತ್ತು. ಬೇರೆ ಕಾರಣಗಳಿಂದಾಗಿ ಮುಂದಕ್ಕೆ ಹೋಗುತ್ತಿತ್ತು. ಇತ್ತೀಚೆಗೆ 2016ರಲ್ಲಿ ನಮ್ಮ ಹಿಂದಿನ ವ್ಯವಸ್ಥಾಪಕ ನಿರ್ದೇಶಕ ಆರ್.ಎಸ್. ರಾಜಾರಾಂ ಅವರು ನಿವೃತ್ತಿ ಹೊಂದಿದ ನಂತರ, ಧಾರವಾಡದವರೇ ಆದ ಡಾ. ಸಿದ್ಧನಗೌಡ ಪಾಟೀಲರು ಆ ಜವಾಬ್ದಾರಿಯನ್ನು ತೆಗೆದುಕೊಂಡರು. ಅವರು ಧಾರವಾಡದವರೇ ಆದ್ದರಿಂದ ಅಲ್ಲೇ ಏನಾದ್ರು ಮಾಡ್ಬೇಕನ್ನೋ ಒತ್ತಾಸೆ ಇತ್ತು, ಈಗ ಜಾಗ ಹುಡುಕಿ ಒತ್ತಡ ಹಾಕಿದ ಕಾರಣ ಧಾರವಾಡದಲ್ಲಿ ನಮ್ಮ ಮಳಿಗೆ ಆಗುತ್ತಿದೆ. ಅಲ್ಲಿನ ಜನರ ಕನ್ನಡ ಪ್ರೀತಿ, ಪುಸ್ತಕ ಪ್ರೀತಿ ಮೊದಲೇ ನಮಗೆ ಗೊತ್ತಿತ್ತು. ಒಂದಲ್ಲಾ ಒಂದು ದಿನ ಧಾರವಾಡದಲ್ಲಿ ನವಕರ್ನಾಟಕ ಮಳಿಗೆ ಮಾಡಲೇಬೇಕಂತ ನಿರ್ಧರಿಸಿದ್ದೆವು ಆದರೆ ಅದು ಇಷ್ಟು ಕಾಲ ತೆಗೆದುಕೊಳ್ಳುತ್ತದೆ ಎಂದು ತಿಳಿದಿರಲಿಲ್ಲ. ಈ ಕ್ಷಣಕ್ಕೆ ಅದು ಆಗಿದೆ ಅನ್ನೋದಕ್ಕೆ ಮುಖ್ಯಕಾರಣ ಸಿದ್ಧನಗೌಡ ಪಾಟೀಲರು. ತಡವಾದರೂ ಈಗ ಆ ಕನಸ್ಸು ನೆರವೇರುತ್ತಿದೆ.

ಏಪ್ರಿಲ್ 13 ಕ್ಕೆ ಶನಿವಾರ ಉದ್ಘಾಟನೆ ಇದೆ. ಡಾ. ಮಾಲತಿ ಪಟ್ಟಣಶೆಟ್ಟಿ ಅಧ್ಯಕ್ಷತೆಯನ್ನು ವಹಿಸುತ್ತಿದ್ದಾರೆ. ಡಾ.ಜಿ. ರಾಮಕೃಷ್ಣ ಅದನ್ನ ಉದ್ಘಾಟಿಸುತ್ತಿದ್ದಾರೆ. ಅಲ್ಲಿ 5 ಕೃತಿಗಳನ್ನು ರಂಜಾನ್ ದರ್ಗಾ ಅವರು ಲೋಕಾರ್ಪಣೆ ಮಾಡುತ್ತಾರೆ.

MORE FEATURES

ಉಪರಿ ಗಾತ್ರದಲ್ಲಿ ಹಿತಕರ, ಗುಣದಲ್ಲಿ ಹಿರಿದು...

26-07-2024 ಬೆಂಗಳೂರು

"ಅಜಿತ್ ಅವರ ಅರಿವಿನ ವ್ಯಾಪ್ತಿ ದೊಡ್ಡದು. ಆದರೆ ಅದನ್ನು ಬೊಗಸೆಯಲ್ಲಿಟ್ಟು ಓದುಗನಿಗೆ ಉಣಿಸುವುದು ಅವರ ವಿಶೇಷ ಶಕ್...

ಮಲೆನಾಡ ಪರಿಸರದ ಸುಂದರ ಜೀವನವನ್ನು ಹೇಳುವ ಕೃತಿಗಳಲ್ಲಿ ಇದು ಒಂದು 

26-07-2024 ಬೆಂಗಳೂರು

‘ಜೀವನದಲ್ಲಿ ಮರೆಯಾಗುತ್ತಿರುವ, ಮುಂದೆದುರಿಸಲು ಸಿದ್ಧವಾಗುತ್ತಿರುವ ಸಂದರ್ಭಗಳೇ ಈ ಕಥಾಸಂಕಲನದ ಕಥೆಗಳು’ ಎ...

ಈ ಕಾದಂಬರಿ ಓದುವುದಕ್ಕಿಂತ ಸ್ವತಃ ನೋಡುವಂತೆ ಪ್ರೇರೇಪಿಸುತ್ತದೆ; ಉಪೇಂದ್ರ ಕೆ. ಆರ್

25-07-2024 ಬೆಂಗಳೂರು

‘ಈ ಕಾದಂಬರಿಯಲ್ಲಿ ನಮ್ಮ ಜೀವನದ ಅನುಭವದಿಂದ ಕಟ್ಟಿಕೊಂಡ ಪ್ರಪಂಚಕ್ಕಿಂತ ಮಿಗಿಲಾದ, ಹೊಸದಾದ ಹಾಗೂ ರೋಚಕವಾದ ಒಂದು ...