‘ಎರಡನೇ ದೇವರು’ ಒಂದು ರೋಚಕ ಹಾಗೂ ಸೊಗಸಿನ ಓದಿನ ಸುಖವನ್ನು ನೀಡಿತು


ಓದುಗರನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳುವ ರೀತಿಯಲ್ಲಿ ಈ ಬರೆವಣಿಗೆ ಇದೆ. ಕಾದಂಬರಿಯು ಒಂದು ರೋಚಕ ಹಾಗೂ ಸೊಗಸಿನ ಓದಿನ ಸುಖವನ್ನು ನೀಡಿತು ಎಂದಿದ್ದಾರೆ ಹಿರಿಯ ಸಾಹಿತಿ ಸುಬ್ರಾಯ ಚೊಕ್ಕಾಡಿ ಅವರು  ರಮೇಶ್ ಶೆಟ್ಟಿಗಾರ್ ಮಂಜೇಶ್ವರ ಅವರ ಎರಡನೇ ದೇವರು ಕಾದಂಬರಿಯ ಕುರಿತು ಬರೆದ ಆಪ್ತ ಮಾತು ಇಲ್ಲಿವೆ. 

ರಮೇಶರೇ,
ನಮಸ್ಕಾರ.

ನಿಮ್ಮ "ಎರಡನೇ ದೇವರು" ಕಾದಂಬರಿಯನ್ನು ಉಸಿರು ಬಿಗಿ ಹಿಡಿದು ಓದಿದ ಹಾಗೆ ಓದಿದೆ! ಅದು ಸಾಮಾಜಿಕ ವಸ್ತುವನ್ನು ಒಳಗೊಂಡಿದ್ದರೂ ಅದರ ನಡೆ ಸಸ್ಪೆನ್ಸ್ ಥ್ರಿಲ್ಲರ್ ಕಾದಂಬರಿಯದ್ದೇ. ಇಷ್ಟಕ್ಕೂ ಅದು ನಿಮಗೆ ಒಗ್ಗಿದ ಬರೆವಣಿಗೆಯ ರೀತಿಯೇ ಅಲ್ಲವೇ?

ವ್ಯಾಸಭಾರತದಲ್ಲಿ (ವಾಲ್ಮೀಕಿ ರಾಮಾಯಣದಲ್ಲಿ ಕೂಡಾ!) ಒಂದು ಶ್ಲೋಕ ಬರುತ್ತದೆ: ಯಥಾ ಕಾಷ್ಠಂಚ ಕಾಷ್ಠಂಚ...ಅಂತ! ಅಂದರೆ ಮಹಾ ಪ್ರವಾಹದಲ್ಲಿ ಎಲ್ಲಿಂದಲೋ ಬೇರೆ ಬೇರೆಯಾಗಿ ಬಂದ ಎರಡು ಮರದ ತುಂಡುಗಳು ಒಂದೆಡೆ ಜತೆಯಾಗುತ್ತಾ, ಮತ್ತೆ ಬೇರ್ಪಡುತ್ತಾ, ಜತೆಯಾಗುತ್ತಾ...ಸಾಗುತ್ತವೆ ಅಂತ! ನಮ್ಮ ಗಂಡು ಹೆಣ್ಣುಗಳ ಕಥೆಯೂ ಅದೇ ಅಲ್ಲವೇ?

ನಿಮ್ಮ ಕಾದಂಬರಿಯಲ್ಲಿ ಬರುವ ಪೂರ್ಣ ಹಾಗೂ ನೇತ್ರಾರ ಪಾತ್ರಗಳೂ ಇದೇ ರೀತಿ ಎಲ್ಲಿಂದಲೋ ಬಂದು ಜತೆಯಾಗುತ್ತಾ ಬೇರ್ಪಡುತ್ತಾ ಸಾಗಿದವರು. ನಡುವೆ ಅನೇಕ ತಿರುವುಗಳಲ್ಲಿ ನಡೆಯುವ ಅಘಟಿತ ಘಟನಾವಳಿಗಳಿಗೆ ತಮ್ಮನ್ನು ಒಡ್ಡಿಕೊಳ್ಳುತ್ತಾ, ತಪ್ಪುಗಳನ್ನು ಮಾಡುತ್ತಲೇ, ಅದರಿಂದ ಪಾಠ ಕಲಿತು ತಮ್ಮನ್ನು ತಿದ್ದಿಕೊಳ್ಳುತ್ತಾ...ಆ ಪ್ರಕ್ರಿಯೆಯಲ್ಲೇ ಹದಗೊಂಡು ಮಾಗುತ್ತಾ ಹೋಗುವ ರೀತಿ ತುಂಬಾ ಕುತೂಹಲಕಾರಿಯೂ ಸೊಗಸಾದುದೂ ಆಗಿದೆ.

ನಿಮ್ಮ ನಿರೂಪಣಾ ವಿಧಾನ, ಬಳಸಿದ ನಮ್ಮ ಕಡೆಯ ಮಾತಿನ ಧಾಟಿ, ಚಕಚಕನೆ ಘಟನೆಗಳು ಸಂಭವಿಸುತ್ತಾ ಹೋಗುವ ರೀತಿಯು ನಿಮಗೇ ವಿಶಿಷ್ಟವಾದುದು. ಓದುಗರನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳುವ ರೀತಿಯಲ್ಲಿ ಈ ಬರೆವಣಿಗೆ ಇದೆ. ಕಾದಂಬರಿಯು ಒಂದು ರೋಚಕ ಹಾಗೂ ಸೊಗಸಿನ ಓದಿನ ಸುಖವನ್ನು ನೀಡಿತು. ಅಭಿನಂದನೆಗಳು.

ನೀವು ಸಿಬಿಐ ಆಫೀಸಿನಲ್ಲಿ ಇರಬೇಕಾದವರು ತಪ್ಪಿ ಬೇರೆಡೆ ಉಳಿದು ಬಿಟ್ಟಿರಿ ಅಂತ ನನಗನ್ನಿಸುತ್ತದೆ! ಇಂಥದೇ ಇನ್ನಷ್ಟು ಕೃತಿಗಳನ್ನು ನನ್ನಂಥ ಬಡಪಾಯಿಯ ಓದಿಗೆ ಆಹಾರವಾಗಿ ನೀಡುತ್ತಾ ಇರಿ!

ನಮಸ್ಕಾರ,
ನಿಮ್ಮ,
ಸುಬ್ರಾಯ ಚೊಕ್ಕಾಡಿ

MORE FEATURES

ಏನೂ ಇಲ್ಲದಿದ್ದರೂ ಎಲ್ಲವನ್ನೂ ಗೆಲ್ಲಲು ಸಾಧ್ಯವಿದೆ

27-03-2025 ಬೆಂಗಳೂರು

“ಸೋಲುಗಳು ನಮ್ಮೊಳಗಿನ ಶಕ್ತಿಯನ್ನು ಪ್ರದರ್ಶಿಸಲು ಬರುವ ಒಂದು ಸುವರ್ಣಾವಕಾಶ ಮತ್ತು ಯಾವುದೇ ಕ್ಷೇತ್ರವಿರಲಿ ಯಶಸ್...

ಕೆಲವು ಕಡೆ ಇದು ನನ್ನದೇ ಕಥೆ ಅಂತಲೂ ಭಾಸವಾಗುತ್ತಿತ್ತು

27-03-2025 ಬೆಂಗಳೂರು

"ಇಲ್ಲಿಯ ಕಥಾನಾಯಕನಿಗೆ ಮತ್ತು ನಾಯಕಿಗೆ ಯಾವುದೇ ಹೆಸರಿಲ್ಲ. ನಾನು ಮತ್ತು ಅವಳು ಈ ಎರಡು ವ್ಯಕ್ತಿಗಳ ಸುತ್ತಲೇ ಸ್ಟ...

ಹದಿಹರೆಯಕ್ಕೆ ಪೂರಕ ಎಂಬಂತೆ ಪ್ರೀತಿ-ಪ್ರೇಮದ ಸ್ಪರ್ಶವಿದೆ

27-03-2025 ಬೆಂಗಳೂರು

“ಕಾದಂಬರಿಯ ಪ್ರತೀ ಅಧ್ಯಾಯದ ಆರಂಭ ಮತ್ತು ಅಂತ್ಯವು ಸಾಮಾನ್ಯ ಓದುಗನನ್ನು ಸೆಳೆಯುವಂತೆ ಮಾಡಲಾಗಿದೆ. ಇದು ತ್ವಬ್&z...