‘ಗಂಗಪಾಣಿ’ ಇದು ಒಂದು ಕಾಲದ ಬದುಕು ಮತ್ತು ಅದರ ಚಿತ್ರಣ


‘ಗಂಗಪಾಣಿ’ ಇದು ಒಂದು ಕಾಲದ ಬದುಕು ಮತ್ತು ಅದರ ಚಿತ್ರಣ

gangapani-idu-ondu-kalada-baduku-mattu-adara-chitrana

ಗಂಗಪಾಣಿ ಹಲವು ಕಾರಣಗಳಿಂದಾಗಿ ಕನ್ನಡದಲ್ಲಿ ಇತ್ತೀಚಿನ ದಿನಗಳಲ್ಲಿ ಬಂದಂತಹ ಬಹು ಮುಖ್ಯವಾದಂತಹ ಕಾದಂಬರಿಗಳಲ್ಲಿ ಒಂದು. ಇದು ಒಂದು ಲೀನಿಯರ್ ಆದಂತಹ ಕ್ರಮದಲ್ಲಿ ಸಾಗದೆ ಘಟನೆ ಮತ್ತು ಸನ್ನಿವೇಶ ಸಂದರ್ಭಗಳ ಮೂಲಕ ಗತವನ್ನು ಮತ್ತು ಸದ್ಯವನ್ನು ಬೆರೆಸಿಕೊಂಡು ಹೋದ ಬಗೆಯ ಕಥನ ಕ್ರಮವನ್ನು ಕಟ್ಟಲು ತನ್ನ ಆಸ್ಥೆಯನ್ನು ತೋರುತ್ತದೆ. ಒಂದು ಪ್ರದೇಶದ ಕತೆಯಾಗಿ ಹೊಮ್ಮಿ ದೇಶದ ಹಾಗೂ ಕಾಲದ ಚರಿತ್ರೆಯನ್ನು, ಇತಿಹಾಸ ಎಲ್ಲೆಲ್ಲಿ ಬೆಳಕನ್ನು ಚೆಲ್ಲದೆ, ಕೇವಲ ಮುಖ್ಯ ಧಾರೆಯನ್ನಷ್ಟೇ ಗಮನಿಸಿಕೊಂಡು, ಯಾವುದನ್ನೆಲ್ಲ ನಿರ್ಲಕ್ಷಿಸಿ ಸಾಗುತ್ತದೆಯೋ ಅಂತಹ ಸಂದು ಗೊಂದುಗಳಲ್ಲಿ ಕಾದಂಬರಿಯು ತನ್ನ ಬೆಳಕನ್ನು ಹರಿಸಿ ಸತ್ಯದ ವಿವಿಧ ಆಯಾಮಗಳಿಗೆ ಎದುರಾಗುತ್ತದೆ. ಈ ಕೆಲಸವನ್ನು ಈ ಕಾದಂಬರಿ ತುಂಬ ಗಂಭೀರವಾಗಿ ಮಾಡಿದಂತಿದೆ.

ಗಂಗಪಾಣಿಯ ಕಥಾನಾಯಕ ಗದ್ದಿಗಪ್ಪ ಇಲ್ಲಿ ನೆಪ ಮಾತ್ರ ಅವನ ಮೂಲಕ ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ಮತ್ತು ಸಾಂಸ್ಕೃತಿಕ ಪಲ್ಲಟಗಳು ಮನುಷ್ಯರ ಬದುಕನ್ನು ರೂಪಿಸುತ್ತವೆ ಎಂಬುದನ್ನು ಪರಿಣಾಮಕಾರಿಯಾಗಿ ಚಿತ್ರಿಸುವುವು. ಈ ಹಿನ್ನಲೆಯಲ್ಲಿ ವ್ಯಕ್ತಿಗಿಂತ ಘಟನೆಗಳು, ನಿರೂಪಣೆಗಳೇ ಈ ಕಾದಂಬರಿಯ ನಿಜವಾದ ಕಥಾನಾಯಕರು ಅಥವಾ ಕಥಾನಾಯಕಿಯರು, ಮನುಷ್ಯರ ಬದುಕನ್ನು ಪ್ರೀತಿ, ಮನುಷ್ಯತ್ವ, ಅಂತಃಕರಣ ಹಾಗೂ ಆದರ್ಶದಂತಹ ಮೌಲ್ಯಗಳು ರೂಪಿಸುವಲ್ಲಿ ಬಹುಮುಖ್ಯವಾಗಿ ಪಾತ್ರವನ್ನು ವಹಿಸುವುವು. ಈ ಕಾದಂಬರಿಯ ಗದ್ದಿಗಪ್ಪ, ಒಬ್ಬ ಮನುಷ್ಯ ತನ್ನ ಬದುಕಿನಲ್ಲಿ ಜರುಗುವ ಅನುಭವಗಳಿಗೆ ಮೈಯಿ ಮತ್ತು ಮನಸ್ಸುಗಳನ್ನು ಒಡ್ಡಿ, ಬದುಕಿನ ಸತ್ಯವನ್ನು ಕಾಣುತ್ತ, ಸಮಾಜದ ವಿಕಾರಗಳನ್ನು ಹಾಗೂ ಮನುಷ್ಯರ ಕ್ರೌರ್ಯಗಳನ್ನು ಕಂಡು ತುಮುಲ, ಸಂಕಟ, ಜಿಗುಪ್ಸೆಗಳನ್ನು ಅನುಭವಿಸುತ್ತಲೇ ನಿರುಮ್ಮಳತೆಯನ್ನು ಕಾಪಾಡಿಕೊಂಡು ಬದುಕನ್ನು ಸಾಗಿಸುವ ಪರಿಗೆ ಸಾಕ್ಷಿಯಂತೆ ಚಿತ್ರಿತವಾಗಿದ್ದಾನೆ. ಅವನು ಸಾಗಿ ಬರುವ ಜೀವನದ ರೀತಿ ಮತ್ತು ಕ್ರಮ ಓದುಗರಲ್ಲಿ ಬೆರಗನ್ನು ಮೂಡಿಸದೆ ಇರದು.

ಇವನು ಎದುರಾಗುವ ಎಲ್ಲ ಬಗೆಯ ಅನುಭವಗಳು, ಘಟನೆಗಳು ಯಾರ ಬದುಕಲ್ಲಾದರೂ ಸಹ ಸಹಜವಾಗಿ ಮತ್ತು ಸಾಮಾನ್ಯವಾಗಿ ನಡೆಯುವಂತಹವುಗಳೇ. ಆದರೆ ಅವು ಇಲ್ಲಿ ಉದ್ದೇಶ ಪೂರ್ವಕವಾಗಿಯೇ ಅವನ ವ್ಯಕ್ತಿತ್ವವು ಪಡೆಯುವ ಆಳ ಮತ್ತು ಅಗಲಗಳಿಗೆ ಒಂದು ಚೈತನ್ಯವಾಗಿ ಮೂಡಿ ಬಂದಂತೆ ಇವೆ. ಸಮಾಜದ ದುರಂತಕ್ಕೆ ಹಾಗು ನೈತಿಕ ಅಧಃಪತನಕ್ಕೆ ಯಾರು ಹೊಣೆ ಎಂದರೆ ಮನುಷ್ಯನೇ ಎನ್ನುವುದನ್ನು ಇಲ್ಲಿಯ ಕೆಲವು ಪ್ರಸಂಗಗಳು ತುಂಬಾ ಮನೋವಿಶ್ಲೇಷಣಾತ್ಮಕ ಧೋರಣೆಯಲ್ಲಿ ಕಾದಂಬರಿಕಾರ ಎಸ್.ಗಂಗಾಧರಯ್ಯ ಅವರು ಚಿತ್ರಿಸಿದ್ದಾರೆ. ಮತ್ತೂ, ಮತ್ತೊಂದು ಮಗ್ಗಲಿನಲ್ಲಿ ಬದುಕಿನ ಸೊಬಗನ್ನು ಹಿಡಿದಿಡುವಲ್ಲಿ ತಮ್ಮ ಕಾವ್ಯಾತ್ಮಕ ಶೈಲಿ ಮತ್ತು ಜನಪದ ನುಡಿಗಟ್ಟುಗಳನ್ನು ಬಳಸಿಕೊಂಡು, ಎಲ್ಲಿಯೂ ಉದ್ದೇಶಪೂರ್ವಕವಾಗಿ ಯಾವ ತತ್ವ ಸಿದ್ಧಾಂತಗಳಿಗೆ ಪಕ್ಕಾಗದೆ, ಕೇವಲ ಜೀವನ ಪ್ರೀತಿಯನ್ನಷ್ಟೇ ಇಟ್ಟುಕೊಂಡು ಕಾದಂಬರಿಕಾರರು ನಿರೂಪಿಸಿರುವ ಕ್ರಮ ಈ ಕಾದಂಬರಿಯ ಒಂದು ಹೆಗ್ಗಳಿಕೆ ಎಂದು ಹೇಳಬಹುದು.

ಈ ಕಾದಂಬರಿಯಲ್ಲಿ ಸಂದರ್ಭದಲ್ಲಿ ಗಮನಿಸಬೇಕಾದ ಅಂಶವೆಂದರೆ, ಗ್ರಾಮೀಣ ಭಾರತದ ಆಚರಣೆ, ಅಲ್ಲಿನ ಜನಪದರ ನಂಬಿಕೆಗಳನ್ನು ನಿರೂಪಿಸಿರುವ ಕ್ರಮಕ್ಕೆ ಒಂದು ಚಿತ್ರಕ ಶಕ್ತಿ ಒದಗಿಬಂದಿದೆ. ಇಲ್ಲಿಯ ಪ್ರತಿ ಘಟನೆಗಳ ನಿರೂಪಣೆಯೂ ಭೂತಕ್ಕೂ ಮತ್ತು ವರ್ತಮಾನಕ್ಕೂ ಇಂಟರ್ ಸೆಕ್ಷನ್ ರೀತಿಯಾಗಿ ಕಂಡು ಬಂದು, ಕಾದಂಬರಿಯ ಚಂದವನ್ನು ಹೆಚ್ಚಿಸಿವೆ. ಕಾದಂಬರಿಯ ಕೊನೆಯಲ್ಲಿ ಗದ್ದಿಗಪ್ಪ ತನ್ನ ಮನೆಗೆ ಮರಳಿ, ತನ್ನ ಶಿಥಿಲಗೊಂಡ ಮನೆಯಲ್ಲಿ ಹೆಜ್ಜೆಗಳನ್ನು ಇಡುವಾಗ, ಅವನ ಪ್ರತಿ ಸ್ಪರ್ಶ ಮತ್ತು ಹೆಜ್ಜೆ ನಾವು ಇತಿಹಾಸದಲ್ಲಿ ಹೇಗೆಲ್ಲ ನಿಷ್ಕರುಣೆಯಾಗಿ ನಡೆದುಕೊಂಡಿರುವೆವು, ಸಮಾಜದ ಅಂಚಿನಲ್ಲಿರುವ, ತುಳಿತಕ್ಕೆ ಒಳಗಾದ ಸಮುದಾಯಕ್ಕಾಗಿ ಮಿಡಿದ ಮನಸ್ಸುಗಳನ್ನು ಹೇಗೆಲ್ಲ ಘಾಸಿಗೊಳಿಸಿ, 'ಹುಸಿ'ಯನ್ನೇ ದಿಟ'ವೆಂದು ನಂಬಿಸುವವರನ್ನು ಆರಾಧಿಸುತ್ತ ನಮ್ಮ ಸಮಾಜದ ಅವನತಿಗೆ ನಾವೇ ಕಾರಣರಾಗುತ್ತಿರುವುದನ್ನು ತುಂಬಾ ಮಾರ್ಮಿಕವಾಗಿ ಅಭಿವ್ಯಕ್ತಗೊಂಡಿರುವ ಚಿತ್ರಣಗಳು ಕನ್ನಡದ ಕಾದಂಬರಿಯ ಅವಿಸ್ಮರಣೀಯ ಚಿತ್ರಣಗಳ ಸಾಲಿಗೆ ಗಂಗಪಾಣಿಯನ್ನು ಸೇರಿಸುತ್ತವೆ.

ಗಾಂಧಿ ಮುಟ್ಟಿದ ಗಂಗಪಾಣಿ ಕಾದಂಬರಿಗೂ ಮತ್ತು ಅದರಾಚೆಯ ವಾಸ್ತವ ಬದುಕಿಗೂ ಒಂದು ಮಹತ್ತರವಾದ ರೂಪಕವಾಗಿ ನಿಲ್ಲುತ್ತದೆ. ಮೇಲ್ನೋಟಕ್ಕೆ ತೆಂಗಿನ ಸೀಮೆಯೊಂದರ ಪ್ರದೇಶದ ಕತೆಯನ್ನು ಹೇಳುತ್ತ 'ಭಾರತ'ದ ಕತೆಯನ್ನು ಹೇಳುತ್ತದೆ.

ಒಂದು ಕಾಲದ ನೆನಪು ಉತ್ಕೃಷ್ಟವಾದ ಕಲ್ಪನೆಯಲ್ಲಿ ವಾಸ್ತವದ ಕತೆಯಂತೆ ಸೋಜಿಗದ ಹಾಗೆ ಚಿತ್ರಿತವಾಗಿದೆ. ಗದ್ದಿಗಪ್ಪ ಕನ್ನಡದ ಕಾದಂಬರಿ ಪರಂಪರೆಯಲ್ಲಿ ಈಗಾಗಲೇ ಚುಕ್ಕಿ ಚಂದ್ರಾಮರಂತೆ ಮಿನುಗುತ್ತಿರುವ ಪಾತ್ರಗಳ ನಡವೆ ತನಗೂ ಒಂದು ಸಣ್ಣ ತಾವನ್ನು ಪಡೆಯುವ ಪ್ರಯತ್ನ ಮಾಡಿದಂತಿದೆ. ಒಮ್ಮೊಮ್ಮೆ ಕಾದಂಬರಿ ಯಾವ ಥರ ಅನ್ನಿಸುತ್ತೆ ಎಂದರೆ, ಇಲ್ಲಿ ಕತೆಯು ನಿರೂಪಣೆಯಾಗುತ್ತಿರುವುದಕ್ಕಿಂತಲೂ ಮಿಗಿಲಾಗಿ ಬದುಕೇ ಬರೆಯಲ್ಪಡುತ್ತಿದೆಯೆನೋ ಎಂದು. ವಚನಗಳು ಸಮಂಜಸವಾಗಿ ಇದ್ದು ಅವು ಕತೆಯ ಭಿತ್ತಿಗೆ ಒಂದು ಬ್ಯೂಟಿಯನ್ನು, ಅಲೌಕಿಕ ಪ್ರಭೆಯನ್ನು ಕೊಡುತ್ತವೆ.

ಈ ಕಾದಂಬರಿಯು ಕಾದಂಬರಿಕಾರ ಪ್ರಜ್ಞೆ ರೂಪಗೊಂಡ ಬಗೆ, ಗ್ರಹಿಕೆಗಳನ್ನು ತೋರಿಸುತ್ತದೆ. ಏಕೆಂದರೆ ಇಲ್ಲಿ ಬರಹಗಾರನ ಸೃಜನಶೀಲ ಬನಿ ಮತ್ತು ಸೆಲೆಗಳನ್ನು ಕಾಣಬಹುದು. ಈ ಬಗೆಯ ಕಾದಂಬರಿಯನ್ನು ಕಾದಂಬರಿಕಾರರು ಮುಂದೆ ಬರೆಯಲಾರರೆನೋ, ಅವರ ಫಸ್ಟ್ ಇಂಪ್ರಷನ್ಸ್ ಗಳು ಇಲ್ಲಿ ಪರಿಣಾಮಕಾರಿಯಾಗಿ ಮೂಡಿಬಂದಿವೆ. ನಾಸ್ಟಾಲ್ವಿಕ್ ಆಗಿ ಕಂಡರೂ ಒಮ್ಮೊಮ್ಮೆ, ಇದು ಒಂದು ಕಾಲದ ಬದುಕು ಮತ್ತು ಅದರ ಚಿತ್ರಣ.

  • ಎಚ್. ಆರ್. ರಮೇಶ

 

MORE FEATURES

ಉಪನಿಷತ್ತುಗಳನ್ನು ವಿಮರ್ಶಾತ್ಮಕ ನೆಲೆಯಲ್ಲಿ ಕಾಣುವ ಪ್ರಯತ್ನವೇ ಈ ಕೃತಿ

23-04-2024 ಬೆಂಗಳೂರು

‘ಉಪನಿಷತ್ತುಗಳನ್ನು ಪರಿಚಯಿಸುವ ಪುಸ್ತಕವೇ ಆದರೂ ವಿಮರ್ಶಾತ್ಮಕ ನೆಲೆಯಲ್ಲಿ ಅವನ್ನು ಕಾಣುವ ಪ್ರಯತ್ನವಾಗಿದೆ. ನಿಗ...

ನೀ ಹಿಂಗ ನೋಡಬ್ಯಾಡ ನನ್ನ: ರವಿ ಬೆಳಗೆರೆ 

23-04-2024 ಬೆಂಗಳೂರು

"ಪ್ರೀತಿ ಬದುಕಿನ ಅಸ್ಮಿತೆಯಾ? ಪ್ರೀತಿ ಕೇವಲ ನೆಪವಾ? ಗರ್ವ? ಅಥವಾ ಸಿಗಲೇಬೇಕು ಎನ್ನುವ ಅಂಶವಾ? ಪ್ರೀತಿ ಸಮುದ್ರವಾ...

ಓದುಗ ಬಳಗ ಹೆಚ್ಚಿಸಲು ಬೇಕು ನೆಟ್‌ವರ್ಕ್‌ ಮಾರ್ಕೆಟಿಂಗ್‌ ತಂತ್ರ

23-04-2024 ಬೆಂಗಳೂರು

'ವಿಶ್ವ ಪುಸ್ತಕ ದಿನದ ಸಂದರ್ಭದಲ್ಲಿ ನಾವು ಒಂದು ನಿರ್ಧಾರವನ್ನು ಮಾಡಬೇಕಿದೆ. ಇದಕ್ಕೆ ಈಗಿನ ನೆಟ್‌ವರ್ಕ್&zwn...