ಗೆಲುವು ಸಾಧಿಸಬೇಕಾದರೆ ಬದಲಾವಣೆ ಅಗತ್ಯ ಮತ್ತು ಅನಿವಾರ್ಯ; ರಮೇಶ್ ಅರವಿಂದ್

Date: 01-04-2024

Location: ಬೆಂಗಳೂರು


ಬೆಂಗಳೂರು: ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘದಿಂದ ‘ಸಿನಿಮಾ ಮಾಧ್ಯಮ ಸ್ಥಿತಿ-ಗತಿ’ ಎಂಬ ವಿಚಾರ ಸಂಕಿರಣ ಹಾಗೂ ಸಂಘದ ಸದಸ್ಯರಿಗೆ ಗುರುತಿನ ಚೀಟಿ ವಿತರಣಾ ಸಮಾರಂಭವನ್ನು 2024 ಮಾ.1 ಸೋಮವಾರದಂದು ನಗರದಲ್ಲಿ ಹಮ್ಮಿಕೊಳ್ಳಲಾಗಿತ್ತು.

ವೇದಿಕೆಯಲ್ಲಿ ಉಪಸ್ಥಿತರಿದ್ದ ನಟ ರಮೇಶ್‍ ಅರವಿಂದ್ ಮಾತನಾಡಿ, "ಜೀವನದಲ್ಲಿ ಮುಂದೆ ಬರಬೇಕು ಎನ್ನುವ ಆಸೆ ಮತ್ತು ಗುರಿ ಇರುವವರು ಬದಲಾವಣೆಗೆ ಒಗ್ಗಿಕೊಳ್ಳುವುದು ಅಗತ್ಯ. ಆಗ ಮಾತ್ರ ಫಲಿತಾಂಶದಲ್ಲೂ ಬದಲಾವಣೆ ಬರಲು ಸಾಧ್ಯ. ಹೀಗಾಗಿ ಫಲಿತಾಂಶ ಬೇಕಾದರೆ ಪ್ರಸ್ತುತ ದಿನಮಾನಗಳಲ್ಲಿ ಬದಲಾವಣೆ ಅಗತ್ಯ ಮತ್ತು ಅನಿವಾರ್ಯ," ಎಂದರು.

"ಇತ್ತೀಚಿನ ದಿನಗಳಲ್ಲಿ ಚಿತ್ರಗಳು ಒಟಿಟಿ ಮೂಲಕ ಕೈಗೆಟುಕುತ್ತಿವೆ. ಹೀಗಾಗಿ ಚಿತ್ರಮಂದಿರಕ್ಕೆ ನಿಗದಿತ ಸಮಯಕ್ಕೆ ಹೋಗಿ ಚಿತ್ರ ನೋಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಪ್ರೇಕ್ಷಕನ ಸಮಯಕ್ಕೆ ಗೌರವ ಕೊಡುವ ಕೆಲಸ ಆಗಬೇಕು. ಆಗ ಮಾತ್ರ ಜನರನ್ನ ಚಿತ್ರಮಂದಿರದ ಕಡೆ ಕರೆತರಲು ಸಾಧ್ಯ," ಎಂದು ತಿಳಿಸಿದರು.

"ಪ್ರತಿಯೊಬ್ಬ ನಟನಲ್ಲಿ, ಮಾಧ್ಯಮದವರಲ್ಲಿ ಒಂದೊಂದು ವಿಶೇಷತೆಗಳಿವೆ. ಹಾಗಾಗಿ ಪ್ರತಿಯೊಬ್ಬರು ನಮ್ಮ ಸಾಮರ್ಥ್ಯವನ್ನ ಅರಿತು ವಿಭಿನ್ನ ಮತ್ತು ವಿಶೇಷವಾಗಿ ಕಾಣಿಸಬೇಕು. ಏನೇ ಬದಲಾವಣೆಗೆ ನಾವು ಒಗ್ಗಿಕೊಂಡರೂ, ಆತ್ಮವನ್ನು ಮಾತ್ರ ಮಾರಾಟ ಮಾಡಿಕೊಳ್ಳಬಾರದು. ಅದೊಂದನ್ನು ಜೋಪಾನವಾಗಿ ಇಟ್ಟುಕೊಂಡರೆ ಅಲ್ಲಿ ನಮ್ಮ ಉಳಿಗಾಲ ಇದೆ," ಎಂದು ಕಿವಿಮಾತು ಹೇಳಿದರು.

ಹಿರಿಯ ನಿರ್ದೇಶಕ, ರಾಷ್ಟ್ರ ಪ್ರಶಸ್ತಿ ವಿಜೇತ ಪಿ. ಶೇಷಾದ್ರಿ ಮಾತನಾಡಿ, "ಚಿತ್ರರಂಗವನ್ನು ಹಿರಿಯ ನಿರ್ದೇಶಕ ಪ್ರೊ.ಬರಗೂರು ರಾಮಚಂದ್ರಪ್ಪ ಅವರು ಕಲೋದ್ಯಮ ಎಂದು ಕರೆದಿದ್ದಾರೆ ಅದು ಪ್ರಸ್ತುತವೂ ಕೂಡ. ಯಾಕೆಂದರೆ ಇಂದು ಚಿತ್ರರಂಗ ಅನ್ನುವಂತಹದ್ದು ಒಂದು ಉದ್ಯಮವಾಗಿ ಮಾರ್ಪಟ್ಟಿದೆ. ಒಂಬತ್ತು ದಶಕಗಳ ಅವಧಿಯಲ್ಲಿ ಬರೋಬ್ಬರಿ ಐದೂವರೆ ಸಾವಿರ ಚಿತ್ರಗಳು ತೆರೆಗೆ ಬಂದಿವೆ. ಚಿತ್ರರಂಗ ಸರಿ ಇಲ್ಲ, ನಷ್ಟ ಹೆಚ್ಚು ಎಂದಿದ್ದರೆ ಪ್ರತಿವರ್ಷವೂ ಸುಮಾರು 250ಕ್ಕೂ ಅಧಿಕ ಚಿತ್ರಗಳು ನಿರ್ಮಾಣವಾಗುತ್ತಿರಲಿಲ್ಲ. ಇಂದಿಗೂ ಚಿತ್ರರಂಗದ ಸ್ಥಿತಿ ಚೆನ್ನಾಗಿಯೇ ಇದೆ. ಇದಕ್ಕೆ ಪೂರಕವಾಗಿ ಇದುವರೆಗೂ ನಾನು ನಿರ್ದೇಶಿಸಿದ ಚಿತ್ರಗಳ ಪೈಕಿ ಒಂದನ್ನು ಹೊರತುಪಡಿಸಿದರೆ, ಮಿಕ್ಕಂತೆ ಎಲ್ಲಾ ಚಿತ್ರಗಳು ನಿರ್ಮಾಪಕರಿಗೆ ಹಾಕಿದ ಬಂಡವಾಳವನ್ನು ತಂದುಕೊಟ್ಟಿದೆ," ಎಂದು ಅವರು ಹೇಳಿದರು

ಹಿರಿಯ ಪತ್ರಕರ್ತ, ಸಾಹಿತಿ ಜೋಗಿ ಮಾತನಾಡಿ, "ಪ್ರಸ್ತುತ ದಿನಗಳಲ್ಲಿ ಸಿನಿಮಾ ನೋಡಿ ಹೊರ ಬಂದಾಗ ಕಥೆ ಹೇಗಿದೆ, ಚಿತ್ರ ಹೇಗಿದೆ ಎನ್ನುವುದನ್ನು ಕೇಳುವುದಿಲ್ಲ. ಅದರ ಬದಲಾಗಿ ಚಿತ್ರಕ್ಕೆ ಎಷ್ಟು ಸ್ಟಾರ್ ಕೊಡುತ್ತೀರಿ ಎಂದು ಕೇಳುವ ಪರಿಪಾಠ ಹೆಚ್ಚಾಗಿದೆ. ಕನಿಷ್ಠ ಮೂರು ಸ್ಟಾರ್ ಕೊಡಲೇಬೇಕು. ವಿಮರ್ಶೆ ಮಾಡುವುದನ್ನು ಅರಗಿಸಿಕೊಳ್ಳುವ ಮನಸ್ಥಿತಿಯೇ ಯಾರಿಗೂ ಇಲ್ಲ. ಎಲ್ಲವೂ ಪರವಾಗಿಯೇ ಬರಬೇಕು ಎನ್ನುವ ಉದ್ದೇಶ ಚಿತ್ರ ತಂಡದ್ದು," ಎಂದು ತಿಳಿಸಿದರು.

"ಇನ್ನು ಇಂದಿನ ಡಿಜಿಟಲ್ ಯುಗದಲ್ಲಿ ಪತ್ರಿಕೆಗಳನ್ನು ನೋಡುವ ರೀತಿಯೇ ಬೇರೆಯಾಗಿದೆ. ಚಿತ್ರವೊಂದರ ಟೀಸರ್ ಬಿಡುಗಡೆಯಾದರೆ ಆ ಕ್ಷಣವೇ ಅದರ ಸುದ್ದಿ ಬರಬೇಕು. ಪತ್ರಿಕೆಯಲ್ಲಿ ಮರುದಿನ ಆ ಸುದ್ದಿ ಪ್ರಕಟವಾಗುವಷ್ಟರಲ್ಲಿ ಟೀಸರ್ ಲಕ್ಷ ಲಕ್ಷ ವೀಕ್ಷಣೆ ಕಂಡಿರುತ್ತದೆ. ಆ ಟೀಸರ್‍ ಹೇಗಿದೆ ಎನ್ನುವುದಕ್ಕಿಂತ, ಟೀಸರ್‍ ಎಷ್ಟು ವೀಕ್ಷಣೆ ಕಂಡಿದೆ ಎಂದು ಬರೆಯುವ ಒತ್ತಡವು ನಮ್ಮ ಮೇಲೆ ಇರುತ್ತದೆ .ಇತ್ತೀಚಿನ ದಿನಗಳಲ್ಲಿ ಕನ್ನಡ ಪತ್ರಕರ್ತರನ್ನು ನೋಡುವ ಸ್ಥಿತಿಯೇ ಬೇರೆಯಾಗಿದೆ," ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘದ ಅಧ್ಯಕ್ಷ ಬಾ.ನಾ ಸುಬ್ರಹ್ಮಣ್ಯ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಂಘದ ಸದಸ್ಯರಿಗೆ ಗುರುತಿನ ಚೀಟಿ ವಿತರಿಸಲಾಯಿತು.

ಕೆಲಸದಲ್ಲಿ ಬದಲಾವಣೆ ಇದ್ದಾಗ ಮಾತ್ರ ಉತ್ತಮ ಫಲಿತಾಂಶ: ರಮೇಶ್ ಅರವಿಂದ್

 

MORE NEWS

ಪುಸ್ತಕ ಸಂಸ್ಕೃತಿ ಬೆಳೆಸುವುದು ಸಾಮಾಜಿಕ ನ್ಯಾಯದ ಭಾಗ ಅಂತ ಸರ್ಕಾರಗಳು ಭಾವಿಸಬೇಕು: ಬರಗೂರು

23-04-2024 ಬೆಂಗಳೂರು

ಬೆಂಗಳೂರು: ನಿಜವಾದ ಪುಸ್ತಕ ಪ್ರೀತಿ ಬೆಳೆಯ ಬೇಕಿರುವುದು, ಉಳಿಯ ಬೇಕಿರುವುದು ಮುಂದಿನ ಪೀಳಿಗೆಯಿಂದ, ಆ ಮುಂದಿನ ಪೀ...

ಪ್ರಕಾಶನ ಸಂಸ್ಥೆಯನ್ನು ತೆರೆದಿರುವ ಪ್ರಕಾಶಕರೆಲ್ಲರೂ ಹುಚ್ಚರೇ; ಕೆ.ಎನ್. ಗಣೇಶಯ್ಯ

23-04-2024 ಬೆಂಗಳೂರು

ಪುಸ್ತಕಗಳನ್ನು ಕೊಂಡುಕೊಂಡು ಓದುವವರ ಪ್ರಮಾಣ ಕಡಿಮೆಯೂ ಆಗಿಲ್ಲ ಹೆಚ್ಚು ಕೂಡ ಆಗಿಲ್ಲ. ಬಹುಶಃ ಪುಸ್ತಕವನ್ನು ಓದಬೇಕು ಅನ್...

‘ಕಠಾರಿ ಅಂಚಿನ ನಡಿಗೆ’ ಸಮಕಾಲೀನ ವಿಡಂಬನೆಗಳ ಪುಸ್ತಕ: ಶಿವಸುಂದರ್

22-04-2024 ಬೆಂಗಳೂರು

ಬೆಂಗಳೂರು: ಚಂದ್ರಪ್ರಭ ಕಠಾರಿಯವರು ವಿಡಂಬನೆಗಳನ್ನು ಬರೆದಿದ್ದಾರೆ. ವಿಡಂಬನೆ, ಲೇವಡಿ ಮಾಡುವುದಕ್ಕೆ ಇಂದು ಬಹಳ ಧೈರ್ಯ ಬ...