‘ಹೇಮಾವತಿ ತೀರ’ ಅಕ್ಕಿಹೆಬ್ಬಾಳಿನ ಸಾಂಸ್ಕೃತಿಕ ಪರಿಧಿಯನ್ನು ತಿಳಿಸುವ ಕೃತಿ


"ಸಾಮಾನ್ಯವಾಗಿ ಪ್ರತಿ ಗ್ರಾಮಕ್ಕೂ ಒಂದು ಸ್ಥಳಪುರಾಣ, ಐತಿಹ್ಯ, ಕೊಂಚ ಇತಿಹಾಸಕ್ಕೆ ಶಾಸನದ ಬಲ ಇರುತ್ತದೆ. ಅಕ್ಕಿಹೆಬ್ಬಾಳು ಗ್ರಾಮಕ್ಕೂ ಹಾಗೆಯೇ ಇಂತಹದ್ದನದನೆಲ್ಲಾ ಸಂಗಹಿಸುವುದರ ಜೊತೆಗೆ ಅಕ್ಕಿಹೆಬ್ಬಾಳಿನ ಬಗ್ಗೆ ಇರುವ ವಿವರಣೆ, ಊರಿನ ದೇವಾಲಯದಲ್ಲಿ ನಡೆಯುವ ಉತ್ಸವ, ಊರ ಹಬ್ಬ ಮುಂತಾದ ವಿಷಯಗಳ ಬಗ್ಗೆ ಮೊಹಮ್ಮದ್ ಅಜರುದ್ದೀನ್ ತನ್ನ ಪುಸ್ತಕದಲ್ಲಿ ಸಂಗ್ರಹಿಸಿ ಬರೆದಿದ್ದಾನೆ" ಎನ್ನುತ್ತಾರೆ ರಂಗಕರ್ಮಿ ಶಶಿಧರ್‌ ಭಾರೀಘಾಟ್‌. ಅವರು ಲೇಖಕ ಮೊಹಮ್ಮದ್ ಅಜರುದ್ದೀನ್‌ ಅವರ ‘ಹೇಮಾವತಿ ತೀರ’ ಕೃತಿಗೆ ಬರೆದ ಮುನ್ನುಡಿ ನಿಮ್ಮ ಓದಿಗಾಗಿ...

ಯುವ ಮಿತ್ರ ಹಾಗೂ ಲೋಕಾಯನ ಸಂಸ್ಥೆಯ ವಿದ್ಯಾರ್ಥಿ ಮೊಹಮ್ಮದ್ ಅಜರುದ್ದೀನ್‌ ಸಾಹಿತ್ಯ, ಸಂಸ್ಕೃತಿಯ ಬಗ್ಗೆ ಅಪಾರ ಒಲವು ಬೆಳೆಸಿಕೊಂಡಿರುವ ಉತ್ಸಾಹಿ, ನಾವು ಲೋಕಾಯನ ಸಾಂಸ್ಕೃತಿಕ ಶಿಬಿರವನ್ನು ಪ್ರಾರಂಭಿಸಿದಾಗಿನಿಂದ ಲೋಕಾಯನದ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾ ಬಂದಿದ್ದಾನೆ. ಅವನ ಮೊದಲ ಪ್ರೀತಿ ಕಾವ್ಯದ ಕಡೆಗೆ, ಶಾಲಾ ದಿನಗಳಿಂದಲೂ ಕವನಗನ್ನು ಬರೆಯುವ ಹವ್ಯಾಸ ಬೆಳೆಸಿಕೊಂಡವನು. ಈಗಾಗಲೇ ಎರಡು ಕವನ ಸಂಕಲನಗಳನ್ನು ಪ್ರಕಟಿಸಿರುವ ಮೊಹಮ್ಮದ್‌ ಅಜರುದ್ದೀನ್ ಮಕ್ಕಳ ಕವಿಗೋಷ್ಟಿ, ಮಕ್ಕಳ ಸಾಹಿತ್ಯ ಸಮ್ಮೇಳನ, ಹೋಬಳಿ, ತಾಲ್ಲೂಕು, ಜಿಲ್ಲಾ ಸಾಹಿತ್ಯ ಸಮ್ಮೇಳನಗಳಲ್ಲಿ ಅಕ್ಕಿಹೆಬ್ಬಾಳು ಗ್ರಾಮವನ್ನು ಪ್ರತಿನಿಧಿಸಿ, ಅಕ್ಕಿಹೆಬ್ಬಾಳಿನ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಮುಂದುವರಿಸಿದ್ದಾನೆ. ಅಕ್ಕಿಹೆಬ್ಬಾಳು ಸಾಹಿತ್ಯ, ಸಂಸ್ಕೃತಿಯ ವಿಷಯದಲ್ಲಿ ಕರ್ನಾಟಕದ ಭೂಪಟದಲ್ಲಿ ವಿಶೇಷ ಸ್ಥಾನ ಪಡೆದಿದೆ. ಪ್ರತಿಷ್ಠಿತ ಪಂಪಪ್ರಶಸ್ತಿ ಪುರಸ್ಕೃತ ಪ್ರೊಫೆಸರ್ ಎ.ಎನ್‌. ಮೂರ್ತಿರಾಯರಿಂದ ಮೊದಲ್ಗೊಂಡು ಅ.ರಾ.ಮಿತ್ರ, ಹೆಚ್.ಎಸ್.ಪಾರ್ವತಿ, ಎ.ಎಸ್.ಮೂರ್ತಿ, ಎ.ಎಸ್.ಸುಬ್ಬುಕೃಷ್ಣ, ಎ.ಆರ್.ಪಾರ್ವತಮ್ಮ, ಡಾ.ನಾಗಪ್ಪ, ಅ.ರಾ.ಶೇಷಗಿರಿ, ಅ.ರಾ.ಆನಂದ, ಅ.ರಾ.ಚಂದ್ರ ಮುಂತಾದ ಅನೇಕರು ಕನ್ನಡ ಸಾರಸ್ವತ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ನಮ್ಮೂರಿನ ಜನಪದ ಸಂಸ್ಕೃತಿಯು ವಿಶಿಷ್ಠವಾದದ್ದು. ಮೂಡಾಲಪಾಯ ಯಕ್ಷಗಾನದ ವಿಶಿಷ್ಟವಾದ ಪ್ರಕಾರ ಘಟ್ಟದಕೋರೆ ಇಲ್ಲಿನ ಹೆಗ್ಗಳಿಕೆ, ದಿ.ಲಕ್ಷ್ಮೀಗೌಡರು, ನರಸಿಂಹನಾಯಕರು, ಕಾಳೇಗೌಡರು (ಸಣ್ಣತಮ್ಮಣ್ಣ), ನಂಜಪ್ಪಶೆಟ್ಟರು ಮುಂತಾದ ಪ್ರಸಿದ್ಧ ಕಲಾವಿದರು, ಇವರ ಪರಂಪರೆಯನ್ನು ಮುಂದುವರೆಸಿದ ಎ.ಎಸ್‌.ನಾಗರಾಜ್‌, ಪ್ರಭಾಕರ, ಎ.ಆರ್.ಶಂಕರ ಮುಂತಾದವರು ನಮ್ಮೂರಿಗೆ ಹಿರಿಮೆ ತಂದಿದ್ದಾರೆ.

ಕರ್ನಾಟಕದಲ್ಲಿ ಚಿತ್ರಕಲಾ ಶಿಕ್ಷಣಕ್ಕೆ ಬುನಾದಿ ಹಾಕಿದ ಅ.ನ.ಸುಬ್ಬರಾಯರು, ಭರತನಾಟ್ಯ ಕಲಾವಿದರಾಗಿ ಅಪರ ಹೆಸರು ಮಾಡಿದ ಡಾ.ಎ.ಆರ್.ಶ್ರೀಧರ್ ಹೀಗೆ ಸಾಧಕರ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ರಂಗಕುಣಿತ, ಸೋಬಾನೆ ಪದಗಳು, ಅರ್ಜುನ ಜೋಗಿಹಾಡುಗಳು, ಕೋಲಾಟ, ಸಾಮಾನ್ಯವಾಗಿ ವರ್ಷದಲ್ಲಿ ಎರಡು ಮೂರು ಬಾರಿ ನಡೆಯುವ ಬಯಲಾಟ ಇವೆಲ್ಲವೂ ಅಕ್ಕಿಹೆಬ್ಬಾಳಿನ ಸಾಂಸ್ಕೃತಿಕ ಪರಿಧಿಯನ್ನು ಹೆಚ್ಚಿಸಿದೆ. ಇಂದಿನ ಪೀಳಿಯಲ್ಲೂ ಹೊಸ ಪ್ರತಿಭೆಗಳು ಕಲೆ, ಶಿಕ್ಷಣ, ಸಾಮಾಜಿಕ ಕ್ಷೇತ್ರದಲ್ಲಿ ಬೆಳಕು ಕಾಣತೊಡಗಿವೆ. ಅಂತಹ ಪ್ರತಿಭರಗಳಲ್ಲಿ ಮೊಹಮ್ಮದ್ ಅಜರುದ್ದೀನ್‌ ಒಬ್ಬ ಎಂದು ಹೇಳಲು ಹೆಮ್ಮೆಯಾಗುತ್ತದೆ.

ಸಾಮಾನ್ಯವಾಗಿ ಪ್ರತಿ ಗ್ರಾಮಕ್ಕೂ ಒಂದು ಸ್ಥಳಪುರಾಣ, ಐತಿಹ್ಯ, ಕೊಂಚ ಇತಿಹಾಸಕ್ಕೆ ಶಾಸನದ ಬಲ ಇರುತ್ತದೆ. ಅಕ್ಕಿಹೆಬ್ಬಾಳು ಗ್ರಾಮಕ್ಕೂ ಹಾಗೆಯೇ ಇಂತಹದ್ದನದನೆಲ್ಲಾ ಸಂಗ್ರಹಿಸುವುದರ ಜೊತೆಗೆ ಅಕ್ಕಿಹೆಬ್ಬಾಳಿನ ಬಗ್ಗೆ ಇರುವ ವಿವರಣೆ, ಊರಿನ ದೇವಾಲಯದಲ್ಲಿ ನಡೆಯುವ ಉತ್ಸವ, ಊರ ಹಬ್ಬ ಮುಂತಾದ ವಿಷಯಗಳ ಬಗ್ಗೆ ಮೊಹಮ್ಮದ್ ಅಜರುದ್ದೀನ್ ತನ್ನ ಪುಸ್ತಕದಲ್ಲಿ ಸಂಗ್ರಹಿಸಿ ಬರೆದಿದ್ದಾನೆ. ನಮ್ಮೂರಿಗೆ ಮುಖ್ಯವಾದ ಜಾನಪದ ಕಲಾಪ್ರಕಾರ ಮೂಡಲಪಾಯದ ಬಗ್ಗೆ ಪರಿಚಯಾತ್ಮಕವಾಗಿ ತಿಳಿಸಿಕೊಟ್ಟಿದ್ದಾನೆ. ನಮ್ಮೂರಿನಲ್ಲಿ ಹುಟ್ಟಿ, ವಿಶೇಷ ಸಾಧನೆ ಮಾಡಿದ ಹಿರಿಯರ ಪರಿಚಯವನ್ನು ಈ ಲೇಖನ ಸಂಗ್ರಹದಲ್ಲಿ ಸೇರಿಸಿದ್ದಾನೆ.

ಒಟ್ಟಾರೆ ಜಾನಪದ, ಸಾಹಿತ್ಯ, ಕಲೆ, ಸಂಸ್ಕೃತಿಯ ಸ್ಕೂಲ ಪರಿಚಯದೊಂದಿಗೆ ತಾನೊಬ್ಬ ಉದಯೋನ್ಮುಖ ಬರಹಗಾರನಾಗಿ ಬೆಳೆಯುತ್ತಿರುವ ಸೂಚನೆ ನೀಡಿರುವ ಮೊಹಮ್ಮದ್ ಅಜರುದ್ದೀನ್ ಈಗಾಗಲೆ ಕೆಲವು ಪತ್ರಿಕೆಗಳಲ್ಲಿ ತನ್ನ ಕವನಗಳನ್ನು, ಲೇಖನಗಳನ್ನು ಪ್ರಕಟಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದ್ದಾನೆ. ಇವನ ಪ್ರಯತ್ನಕ್ಕೆ ಒತ್ತಾಸೆಯಾಗಿ, ಪ್ರೋತ್ಸಾಹ ನೀಡುತ್ತಿರುವ ಶ್ರೀ ಕುಮಾರಸ್ವಾಮಿ (ನಿವೃತ ಪಾಂಶುಪಾಲರು), ಶ್ರೀ ಮಾರೇನಹಳ್ಳಿ ಲೋಕೇಶ್, ಶ್ರೀನಿವಾಸ್ ಆರ್ ಸಜ್ಜನ್, ರಂಗನಾಥ್.ಆರ್. ಬಲ್ಲೇನಹಳ್ಳಿ ಮಂಜುನಾಥ್‌, ಬಳ್ಳೇಕೆರೆ ಮಂಜುನಾಥ್, ಸತೀಶ್‌ ಜವರೇಗೌಡರು ಮುಂತಾದವರಿಗೆ ನನ್ನ ವಂದನೆಗಳು, ಮೊಹಮ್ಮದ್ ಅಜರುದ್ದೀನ್ ಕನ್ನಡದ ಶ್ರೇಷ್ಟ ಸಾಹಿತ್ಯ ಕೃತಿಗಳನ್ನು, ಕವನ, ಕಥೆ, ಕಾದಂಬರಿಯಗಳು, ಪ್ರಬಂಧಗಳನ್ನು ನಿರಂತರವಾಗಿ ಅಭ್ಯಾಸ ಮಾಡಬೇಕು. ಸಮಕಾಲೀನ, ಸಾಮಾಜಿಕ, ಸಾಂಸ್ಕೃತಿಕ ವಿದ್ಯಮಾನಗಳ ಪರಿಚಯ ಮಾಡಿಕೊಳ್ಳುತ್ತ ಉತ್ತಮ ಲೇಖಕನಾಗಿ ಬೆಳೆಯಲಿ. ಅಕ್ಕಿಹೆಬ್ಬಾಳು ಗ್ರಾಮದ ಸಾಹಿತ್ಯ ಪರಂಪರೆಯ ಕೊಂಡಿಕಳಚದಂತೆ ಯಶಸ್ಸು ಪಡೆಯಲಿ ಎಂದು ಹಾರೈಸುತ್ತೇನೆ.

MORE FEATURES

ಉದಾತ್ತ ಸತ್ಯ ನಂಬಿರುವ ಭಕ್ತನಿಗೆ ಜಾತಿಭೇದಗಳ ಗೊಡವೆ ಇಲ್ಲ

14-06-2024 ಬೆಂಗಳೂರು

"ವೆಂಕಣ್ಣನ ಹೆಸರು ಹೇಳಿದರೇನೇ ಒಳಲೆಯಲ್ಲಿ ಹಾಲು ಕುಡಿಯುತ್ತಿದ್ದ, ವೆಂಕಟಪತಿಯ ಮೇಲೆ ಲಾಲಿ ಹಾಡಿದರೇನೇ ನಿದ್ರೆ ಮಾ...

ಬೇರೆ ಬೇರೆ ಕಾಲಘಟ್ಟದಲ್ಲಿ ಬರೆದ ಪ್ರಾತಿನಿಧಿಕ ಕತೆಗಳು

14-06-2024 ಬೆಂಗಳೂರು

"ಶೀರ್ಷೇಂದು ಅವರು ಬೇರೆ ಬೇರೆ ಕಾಲಘಟ್ಟದಲ್ಲಿ ಬರೆದ ಪ್ರಾತಿನಿಧಿಕ ಕತೆಗಳು ಇಲ್ಲಿವೆ. ನಿರಾಳ, ಸಾಮೀಪ್ಯ, ಸೈಕಲ್, ...

ಈ ಬದುಕಿನ ಅರ್ಥ ವ್ಯಕ್ತಿವಿಕಸನ ಸಾಹಿತ್ಯದ ಒಂದು ಭಾಗವಾಗಿದೆ: ವೈ.ಜಿ. ಮುರಳೀಧರನ್

14-06-2024 ಬೆಂಗಳೂರು

‘ವ್ಯಕ್ತಿವಿಕಸನದ ಬಹುತೇಕ ಪುಸ್ತಕಗಳು ಆರಂಭವಾಗುವುದೇ ಬದುಕಿನ ಅರ್ಥದ ವಿವರಣೆಯಿಂದ ಎನ್ನುತ್ತಾರೆ’ ವಿಕ್ಟರ...