ಈಗ ಹೆಚ್ಚು ಬೇಡಿಕೆಯ ಲೇಖಕರು ಯಾರು?; ನರೇಂದ್ರ ರೈ ದೇರ್ಲ


"ತೇಜಸ್ವಿಯವರು ಬರಹ- ಬದುಕು ನಿಲ್ಲಿಸಿದ ಮೇಲೂ ಅವರ ಕೃತಿಗಳನ್ನು ಜನ ಇನ್ನೂ ಸಾಲುಗಟ್ಟಿ ಓದುತ್ತಿದ್ದಾರೆ; ಅಥವಾ ನೀವು ಓದುವುದಿಲ್ಲ ಎಂದು ಯಾವ ಹೊಸ ತಲೆಮಾರಿನ ಮೇಲೆ ನನ್ನಂತಹ ಮೇಷ್ಟ್ರುಗಳು ಬೆರಳಿಟ್ಟು ಆರೋಪ ಮಾಡುತ್ತೇವೆಯೋ ಅಂತಹ ಯುವಕರು ಕೂಡ ತೇಜಸ್ವಿಯವರನ್ನು ಮತ್ತೆ ಮತ್ತೆ ಓದುವುದು, ಅವರ ಒಂದಷ್ಟು ಕೃತಿಗಳನ್ನು ತಮ್ಮ ಖಾಸಗಿ ಸಂಗ್ರಹದಲ್ಲಿ ಇಟ್ಟುಕೊಳ್ಳುವುದು ತೇಜಸ್ವಿಯೊಬ್ಬ ಎಂಥ ಮಾಂತ್ರಿಕ ಬರಹಗಾರ ಎನ್ನುವುದನ್ನು ತೋರಿಸುತ್ತದೆ," ಎನ್ನುತ್ತಾರೆ ನರೇಂದ್ರ ರೈ ದೇರ್ಲ, ಪುತ್ತೂರು. ಅವರು ಡಾ.ಎಚ್.ಎಸ್. ಸತ್ಯನಾರಾಯಣ ಅವರ ‘ತೇಜಸ್ವಿ ಪ್ರಸಂಗಗಳು’ ಕೃತಿಗೆ ಬರೆದ ಮುನ್ನುಡಿ.

ಈ ರಾಜ್ಯದ ಪುಸ್ತಕದ ಮಳಿಗೆಗೆ ಭೇಟಿ ಕೊಡುವಾಗಲೆಲ್ಲ ಮಾರಾಟಗಾರರಿಗೆ ನಾನು ಕೇಳುವ ಒಂದು ಪ್ರಶ್ನೆ, "ಈಗ ಹೆಚ್ಚು ಬೇಡಿಕೆಯ ಲೇಖಕರು ಯಾರು?" ಎಂದು. ಆವಾಗಲೆಲ್ಲ ಅವರು ಹೇಳುವ ನಾಲ್ಕು- ಐದು ಹೆಸರುಗಳ ಪೈಕಿ ಪೂರ್ಣಚಂದ್ರ ತೇಜಸ್ವಿ ಅವರ ಹೆಸರು ಭಾಗಶಃ ಮೊದಲ ಹೆಸರೇ ಆಗಿರುತ್ತಿತ್ತು.

ತೇಜಸ್ವಿಯವರು ಬರಹ- ಬದುಕು ನಿಲ್ಲಿಸಿದ ಮೇಲೂ ಅವರ ಕೃತಿಗಳನ್ನು ಜನ ಇನ್ನೂ ಸಾಲುಗಟ್ಟಿ ಓದುತ್ತಿದ್ದಾರೆ; ಅಥವಾ ನೀವು ಓದುವುದಿಲ್ಲ ಎಂದು ಯಾವ ಹೊಸ ತಲೆಮಾರಿನ ಮೇಲೆ ನನ್ನಂತಹ ಮೇಷ್ಟ್ರುಗಳು ಬೆರಳಿಟ್ಟು ಆರೋಪ ಮಾಡುತ್ತೇವೆಯೋ ಅಂತಹ ಯುವಕರು ಕೂಡ ತೇಜಸ್ವಿಯವರನ್ನು ಮತ್ತೆ ಮತ್ತೆ ಓದುವುದು, ಅವರ ಒಂದಷ್ಟು ಕೃತಿಗಳನ್ನು ತಮ್ಮ ಖಾಸಗಿ ಸಂಗ್ರಹದಲ್ಲಿ ಇಟ್ಟುಕೊಳ್ಳುವುದು ತೇಜಸ್ವಿಯೊಬ್ಬ ಎಂಥ ಮಾಂತ್ರಿಕ ಬರಹಗಾರ ಎನ್ನುವುದನ್ನು ತೋರಿಸುತ್ತದೆ.

ನವಮಾಧ್ಯಮ ಸಾರ್ವತ್ರಿಕಗೊಳ್ಳುವ ಕಾಲಘಟ್ಟದಲ್ಲಿ, ಪುಸ್ತಕೋದ್ಯಮ ಬಿದ್ದು ಹೋಗಬಹುದೇ, ಮುಂದೆ ಕನ್ನಡಕ್ಕೆ ಓದುಗರಿರಿವುದಿಲ್ಲ ಎಂದು ಪರಿತಪಿಸುವ ಸಂದರ್ಭದಲ್ಲಿ ತೇಜಸ್ವಿ ಈ ರೀತಿಯ ದಾಖಲೆ ಮಾಡುತ್ತಿರುವುದಕ್ಕೆ ಕಾರಣವೇ ಅವರ ಬರಹದ ವಸ್ತು ವೈವಿಧ್ಯತೆಯ ಜೊತೆಗೆ ಭಾಷಾ ಸರಳತೆ, ನಿರೂಪಣಾ ಶಕ್ತಿ ಎಂಬುದು ಸರ್ವವಿಧಿತ.

ಅವರೇ ಹೇಳಿರುವಂತೆ ಕಾವ್ಯ ಕಥೆ ಕಾದಂಬರಿಗಳಂಥ ಕಲ್ಪಿತ ಸಾಹಿತ್ಯಕ್ಕಿಂತ ಮನುಷ್ಯನನ್ನು ಉಳಿಸುವ ಈ ಮಣ್ಣು ನೆಲ ಗಾಳಿ ಸಂಬಂಧೀ ವಾಸ್ತವ ಪರಿಸರದ ಬಗ್ಗೆ ಬರೆಯುವುದು ಇವತ್ತಿನ ತುರ್ತು. ಅದನ್ನು ತಪಸ್ಸಿನಂತೆ ತೇಜಸ್ವಿಯವರು ಸುಧೀರ್ಘಕಾಲ ನಿರ್ವಹಿಸಿದವರು. ಈ ಕಾರಣಕ್ಕಾಗಿ ತೇಜಸ್ವಿ ಮತ್ತೆ ಮತ್ತೆ ಕನ್ನಡದ ಅಸ್ಮಿತೆಯಾಗಿ ಉಳಿಯುತ್ತಾರೆ.

ನಿಮಗೆಲ್ಲ ಗೊತ್ತಿರುವ ಹಾಗೆ ಕನ್ನಡ ಸಾಹಿತ್ಯದ ನವೋದಯ ಪ್ರಗತಿಶೀಲ ನವ್ಯ ಬಂಡಾಯ ದಲಿತ ಪ್ರವೃತ್ತಿಯ ಸರಣಿಯಲ್ಲಿ ಈಗ ಯಾರಾದರೂ ಸಾಹಿತ್ಯ ಯಾವ ವಸ್ತು ಆಶಯವನ್ನು ಆಧರಿಸಿಕೊಂಡಿದೆ ಎಂದು ನನ್ನನ್ನು ಕೇಳಿದರೆ ಅದು ಕೇವಲ ಪರಿಸರ ಸಾಹಿತ್ಯವನ್ನು ಮಾತ್ರ ಎಂದು ಧೈರ್ಯದಿಂದ ಕೆಳಬಲ್ಲೆ. ಮತ್ತು ಇದು ಕೇವಲ ಕನ್ನಡದ ಸಂದರ್ಭದಕ್ಕಷ್ಟೇ ಅಲ್ಲ ಇಡೀ ಜಗತ್ತಿನ ಸಾಹಿತ್ಯ ಚಿಂತನದ ವರ್ತಮಾನ ಆಶಯವೂ ಆಗಿದೆ.

ಕಳೆದ 40 ಸಾವಿರ ವರ್ಷಗಳಲ್ಲಿ ಆಗದಷ್ಟು ಬದಲಾವಣೆಗಳು, ಅಭಿವೃದ್ಧಿಯ ಒತ್ತಡಗಳು ಕಳೆದ 40 ವರ್ಷಗಳಲ್ಲಿ ಈ ಪರಿಸರದ ಮೇಲಾಗಿದೆ. ಈ ಕಾರಣಕ್ಕೇ ಈ ಅವಧಿಯಲ್ಲಿ ಬದುಕಿದ್ದ ತೇಜಸ್ವಿ ಆ ಹಾನಿ ಮನುಷ್ಯಕೃತ ಅಪರಾಧ ಅವಸರಗಳನ್ನು ಸಾಧ್ಯಂತವಾಗಿ ತಮ್ಮ ಕೃತಿಗಳಲ್ಲಿ ವಿವರಿಸಿದ್ದಾರೆ.

ಕನ್ನಡದಲ್ಲಿ ಪರಿಸರ ಸಾಹಿತ್ಯದ ಬಗ್ಗೆ ಪ್ರಾಚೀನ ಸಾಹಿತ್ಯದಲ್ಲಿ ವಿವರಗಳಿವೆ. ಪೂರ್ಣ ಪ್ರಮಾಣದಲ್ಲಿ ಪರಿಸರ ಪ್ರಕೃತಿ ಕಾಣಿಸಿಕೊಂಡದ್ದು ಕುವೆಂಪು ಅವರ ಕಾವ್ಯ ಕಾದಂಬರಿ ಕೃತಿಗಳಲ್ಲಿ. ಅಲ್ಲಿ ಅದು ಒಂದು ರೀತಿಯ ಆಧ್ಯಾತ್ಮದ ಅನುಸಂಧಾನ. ಶಿವರಾಮ ಕಾರಂತರು ಪ್ರಕೃತಿಯನ್ನು ವಿಜ್ಞಾನದ ನೆಲೆಯಲ್ಲಿ ಶೋಧಿಸಿದರೆ ತೇಜಸ್ವಿ ಅವರದು ವಿಸ್ಮಯದ ದಾರಿ. ಈಗಿನ ನಮ್ಮ ಕಾಲದ ನಾಗೇಶ್ ಹೆಗಡೆಯವರದು ಮನುಷ್ಯನೂ ಪ್ರಕೃತಿಯೂ ಎರಡು ಉಳಿಯಬೇಕೆನ್ನುವ ಹೊಂದಾಣಿಕೆಯ ದಾರಿ. ಪೂರ್ಣಚಂದ್ರ ತೇಜಸ್ವಿ ಪರಿಸರವನ್ನು ಅಷ್ಟೇ ಸರಳವಾಗಿ ನಮಗೆ ತೆರೆದಿಟ್ಟು ಅದರೊಳಗೆ ನಾವು ಬದುಕುವ ಹಕ್ಕುಗಳಿಗಿಂತ ಅಗತ್ಯಗಳನ್ನು ಮನದಟ್ಟು ಮಾಡುತ್ತಾರೆ. ಭೂಮಿ ಇರುವುದು ನಮ್ಮ ದುರಾಸೆಯನ್ನು ಪೂರೈಸುವುದಕ್ಕೆ ಅಲ್ಲ ಅಗತ್ಯಗಳನಷ್ಟೇ ಅನುಭವಿಸುವುದಕ್ಕೆ ಎನ್ನುವುದನ್ನು ಸರಳವಾಗಿ ಬರೆಯುತ್ತಾರೆ.

ಈ ಕಾರಣಕ್ಕಾಗಿ ಪೂರ್ಣಚಂದ್ರ ತೇಜಸ್ವಿ ಮತ್ತೆ ಮತ್ತೆ ಉಲ್ಲೇಖಕ್ಕೆ ಒಳಗಾಗುತ್ತಾರೆ. ನಾನೇ ಎಷ್ಟೋ ಬಾರಿ ಬೇರೆಯವರ ಸಾಮಾನ್ಯ ಮಾತುಕತೆಗಳಲ್ಲಿ, ವೇದಿಕೆಯ ಉಪನ್ಯಾಸಗಳಲ್ಲಿ, ಬರವಣಿಗೆಗಳಲ್ಲಿ ತೇಜಸ್ವಿ ಹೇಳಿಕೆಗಳು, ತೇಜಸ್ವಿ ಬದುಕಿನ ಘಟನೆಗಳು, ಅವರು ಹಾಗೆ ಹೇಳಿದ್ರಂತೆ ಹೀಗೆ ಹೇಳಿದ್ರಂತೆ ಎನ್ನುವ ಸ್ಟೇಟ್ಮೆಂಟ್ ಗಳು ಅಲ್ಲಲ್ಲಿ ಉಲ್ಲೇಖ ಗೊಳ್ಳುವುದನ್ನು ಕಂಡಿದ್ದೇನೆ. ಪ್ರಜ್ಞಾವಂತ ನಾಗರಿಕರು ಸಾಹಿತಿಗಳು ಓದುಗ ಜನಸಾಮಾನ್ಯರು ಕೂಡ ತೇಜಸ್ವಿಯವರ ಹೇಳಿಕೆಗಳನ್ನು ಅಥವಾ ಅವರ ಬದುಕಿನ, ಅವರು ಬರೆದ ಅನುಭವ ಕಥನದ ಒಳಗಡೆಯ ದೃಷ್ಟಾಂತಗಳನ್ನು ಉಲ್ಲೇಖಿಸುವುದನ್ನು ಹಂಚಿಕೊಳ್ಳುವುದನ್ನು ಕಂಡಿದ್ದೇನೆ. ಅವರು ತೀರಿ ಹೋದ ನಂತರದ ಅನೇಕ ಉಪನ್ಯಾಸಗಳ ಪೈಕಿ ಕೆಲವೊಂದು ಗೋಷ್ಠಿಗಳು ತೇಜಸ್ವಿ ಅವರ ಬರೀ ಇಂಥ ಉಲ್ಲೇಖ ಹೇಳಿಕೆ ದೃಷ್ಟಾಂತಗಳಲ್ಲಿ ಪೂರ್ತಿ ಮುಗಿದು ಹೋದದ್ದನ್ನು; ಅಲ್ಲಿ ಸೇರಿದ್ದ ಜನ ಅವುಗಳನ್ನು ಕೇಳಿ ನಕ್ಕು ಹಗುರವಾದದ್ದನ್ನು ನಾನು ಕಂಡಿದ್ದೇನೆ. ಅನುಭವಿಸಿದ್ದೇನೆ. ತೇಜಸ್ವಿ ಅವರು ಹಾಗಂತ ಹೀಗಂತೆ ಎಂದು ಜನ ಪರಸ್ಪರ ಹಂಚಿಕೊಂಡಷ್ಟು ಕನ್ನಡದಲ್ಲಿ ಬೇರೆ ಯಾವುದೇ ಲೇಖಕನನ್ನೂ ಈ ಪ್ರಮಾಣದಲ್ಲಿ ಬಳಸಿಕೊಂಡದ್ದನ್ನು ನಾನು ಕಂಡಿಲ್ಲ.

ನನ್ನ ಆತ್ಮೀಯ ಗೆಳೆಯ ಲೇಖಕ ಸರಳ ಮೃದು ಮಧುರ ಭಾವದ ಡಾ.ಎಚ್.ಎಸ್. ಸತ್ಯನಾರಾಯಣ ಅವರು ತೇಜಸ್ವಿ ಅವರ ಆ ರೀತಿಯ ಹೇಳಿಕೆ ದೃಷ್ಟಾಂತ ಕಥೆ ಸ್ವಾರಸ್ಯಕರ ಘಟನೆಗಳನ್ನು ಆಯ್ಕೆ ಮಾಡಿ ಒಂದು ಪುಸ್ತಕ ಮಾಡಿದ್ದಾರೆ. ಸುಲಭವಾಗಿ ಓದಿಸಿಕೊಂಡು ಹೋಗುವ ನಕ್ಕು ಹಗುರವಾಗಬಹುದಾದ; ಹೌದಲ್ಲ ಎಷ್ಟು ಸತ್ಯ ವಾಸ್ತವ ಎಂದು ಈ ಜಗತ್ತನ್ನು ಬೇರೆ ದೃಷ್ಟಿಯಲ್ಲಿ ನೋಡಬಹುದಾದ ತೇಜಸ್ವಿ ಚಿಂತನೆಗಳನ್ನು ಇಲ್ಲಿ ಸಂಗ್ರಹಿಸಿದ್ದಾರೆ .ಇಂಥದ್ದೊಂದು ಐಡಿಯಾ ತೇಜಸ್ವಿ ಅವರ ಒಳನಾಡಿಯಾಗಿದ್ದ ನನ್ನಲ್ಲೂ ಇತ್ತು. ಅದಕ್ಕಾಗಿ ನಾನು ತೊಡಗಿಯೂ ಇದ್ದೆ. ನನಗಿಂತ ಮುಂಚೆ ಗೆಳೆಯ ಡಾ.ಎಚ್.ಎಸ್. ಸತ್ಯನಾರಾಯಣ ಅವರು ನಮ್ಮೆಲ್ಲರ ಆಸೆಯನ್ನು ಈಡೇರಿಸಿದ್ದಾರೆ. ಸಂಗ್ರಹ ಯೋಗ್ಯ ಅಂತ ಹತ್ತಾರು ಘಟನೆಗಳು ಈ ಕೃತಿಯಲ್ಲಿ ಒಟ್ಟಾಗಿವೆ. ಓದಿ ಹಗುರವಾಗಿ. ಗೆಳೆಯ ಲೇಖಕ ಮಾತುಗಾರ ಎಚ್.ಎಸ್. ಸತ್ಯನಾರಾಯಣ ಅವರಿಗೆ ವಿಶೇಷ ಅಭಿನಂದನೆಗಳು.

- ನರೇಂದ್ರ ರೈ ದೇರ್ಲ, ಪುತ್ತೂರು

MORE FEATURES

'ಪಾಟಿಚೀಲ' ಕವನವು ಕಾನ್ವೆಂಟ್ ಶಾಲೆಗೆ ಕಳುಹಿಸುವ ಪಾಲಕರ ಮನ ಕುಟುಕುವಂತಿದೆ

21-07-2024 ಬೆಂಗಳೂರು

‘ನನಗೆ ತಿಳಿದಂತೆ, ಮಕ್ಕಳ ಕವಿತೆಗಳನ್ನಾಗಲಿ, ಮಕ್ಕಳ ಕಥೆ- ಕಾದಂಬರಿಗಳಾಗಲಿ ಬರೆಯುವುದು ಒಬ್ಬ ಲೇಖಕನಿಗೆ ಎಲ್ಲ ಅರ...

ಪ್ರಕರಣವೊಂದನ್ನು ಹಂತ ಹಂತವಾಗಿ ವಿವರಿಸುವ ರೀತಿ ವಿಶೇಷವಾಗಿದೆ

21-07-2024 ಬೆಂಗಳೂರು

"ಅವಳೊಬ್ಬಳು ಊರಿನ ಸಿರಿವಂತರ ಮಗಳು, ಯಾವುದಕ್ಕೂ ಕೊರತೆಯಿಲ್ಲದ ಐಷಾರಾಮಿ ಜೀವನ, ಮನಸನ್ನು ಅರ್ಥ ಮಾಡಿಕೊಂಡಿರುವ ಅವ...

ವಾರದ ಲೇಖಕ ವಿಶೇಷದಲ್ಲಿ ಕನ್ನಡ ಸಾಹಿತ್ಯ ಲೋಕದ ರಸಿಕರಂಗ ರಂ.ಶ್ರೀ. ಮುಗಳಿ

21-07-2024 ಬೆಂಗಳೂರು

"ಬುಕ್ ಬ್ರಹ್ಮದ ವಾರದ ಲೇಖಕ ಸರಣಿಯಲ್ಲಿ ಮೂಡಿಬಂದ ಕನ್ನಡ ಸಾಹಿತ್ಯ ಲೋಕದಲ್ಲಿ `ರಸಿಕರಂಗ' ಎಂಬ ಕಾವ್ಯ ನಾಮದಿಂ...