‘ಭಗತ್ ಸಿಂಗ್‍ನಂತಹವರು ತೀವ್ರಗಾಮಿ ಸಶಸ್ತ್ರ ಹೋರಾಟಗಾರರಿಂದ ಪ್ರೇರಣೆಯನ್ನು ಪಡೆದವರು. ಆದರೆ ಅವರು ನಂತರ ವೇಗವಾಗಿ ಬದಲಾಗುತ್ತಿದ್ದರು’ ಎನ್ನುತ್ತಾರೆ ಡಾ. ಬಿ.ಆರ್. ಮಂಜುನಾಥ್. ಅವರು ಎಚ್.ಎಸ್. ಅನುಪಮಾ ಅವರ ಜನ ಸಂಗಾತಿ ಭಗತ್ ಕೃತಿಗೆ ಬರೆದ ಅರ್ಥಪೂರ್ಣ ಮುನ್ನುಡಿ ಇಲ್ಲಿದೆ.
ಸೆಪ್ಟೆಂಬರ್ ಹಾಗೂ ಮಾರ್ಚ್ ತಿಂಗಳುಗಳು ಹುತಾತ್ಮ ಭಗತ್ ಸಿಂಗರ ನೆನಪುಗಳನ್ನು ಹೊತ್ತು ತರುತ್ತವೆ. ಆಗ ಗಿಡಮರಗಳಲ್ಲಿ ಹೂವರಳುವ ವಸಂತ ಕಾಲವೂ ಹೌದು. ನೆಲಕ್ಕೆ ಹಸಿರಿನ ಹೊದಿಕೆಯನ್ನು ಹೊದಿಸುವ ವರ್ಷ ಋತುವೂ ಹೌದು. ಈ ವರ್ಷ ಈ ತರುಣ ವೀರನನ್ನು ನೆನಪಿಸಿಕೊಳ್ಳಲು ಯಥೇಚ್ಛ ಕಾರಣಗಳಿವೆ. ಒಂಭತ್ತು ತಿಂಗಳುಗಳಿಂದಲೂ ಪ್ರತಿಭಟನೆಯಲ್ಲಿ ನಿರತರಾಗಿರುವ ಉತ್ತರ ಭಾರತದ ರೈತರು ಭಗತ್ ಭಾವಚಿತ್ರವನ್ನು ಹಿಡಿದು ಚಳಿ, ಮಳೆ, ಸೆಕೆಯ ನಡುವೆ ಘೋಷಣೆ ಕೂಗುತ್ತಿದ್ದಾರೆ. ಇನ್ನೊಂದು ಕಡೆ ಯಾವ ಕರಾಳ ಶಾಸನಗಳನ್ನು ಬ್ರಿಟಿಷರು ಜಾರಿ ಮಾಡಿದಾಗ ಭಗತನಂತಹ ತರುಣರು ಚರಿತ್ರೆಯಲ್ಲಿ ತ್ಯಾಗ ಬಲಿದಾನಗಳೊಂದಿಗೆ ಹೋರಾಡಿದ್ದರೋ, ಅಂಥವೇ ಶಾಸನಗಳು ಈಗ ಜಾರಿಯಾಗಿವೆ. ಜನರ ಒಗ್ಗಟ್ಟನ್ನು ಮುರಿಯುವ ಯಾವ ಕೋಮುವ್ಯಾಧಿಯ ವಿರುದ್ಧ ಭಗತ್ ಮತ್ತು ಗೆಳೆಯರು ಸೆಣಸಿದ್ದರೋ, ಅದು ಮತ್ತೊಮ್ಮೆ ವಿಕಾರವಾಗಿ ತಲೆಯೆತ್ತಿದೆ. ಹಾಗೆಯೇ ಹಿಂದೆ ಭಾರತವನ್ನು ಕಾಡಿದ್ದ ನಿರಾಶೆ, ಸಿನಿಕತನ, ಅವಕಾಶವಾದಗಳು ಇಂದು ನಾಡಿನುದ್ದಕ್ಕೂ ವಿಜೃಂಭಿಸುತ್ತಿವೆ. ಭಗತನ ನೆನಪು ಇಂತಹ ಋಣಾತ್ಮಕ ಬೆಳವಣ ಗೆಗಳ ವಿರುದ್ಧ ಯಾವ ಅಂಜಿಕೆಯೂ ಇಲ್ಲದೆ ಹೋರಾಡಲು ನಮಗೆ ಪ್ರೇರಣೆ ನೀಡುತ್ತದೆ. ಈ ದಿಶೆಯಲ್ಲಿ ಡಾ. ಎಚ್. ಎಸ್. ಅನುಪಮಾ ಅವರು ಬರೆದಿರುವ ಈ ಹೊತ್ತಿಗೆ ಬಹಳ ಸಕಾಲಿಕವಾದದ್ದು. ಅವರದು ಮೊದಲೇ ಸುಲಲಿತವಾದ ಶೈಲಿ. ಹಾಗಾಗಿಯೇ ಅವರಿಗೆ ದೊಡ್ಡ ಸಂಖ್ಯೆಯ ಓದುಗರಿದ್ದಾರೆ. ಈ ಪುಸ್ತಕದಲ್ಲಂತೂ ಅವರು ಅನೇಕ ದಾಖಲೆಗಳನ್ನು, ಅಪರೂಪದ ಮಾಹಿತಿಗಳನ್ನು ನೀಡಿದ್ದಾರೆ. ಭಗತನನ್ನು ಅವನ ಆದರ್ಶ ಮತ್ತು ಚಿಂತನೆಗಳನ್ನು ಬಚ್ಚಿಟ್ಟು ತಮ್ಮ ದುರುದ್ದೇಶಗಳಿಗೆ ಬಳಸಿಕೊಳ್ಳಲೆತ್ನಿಸುವ ಪ್ರತಿಗಾಮಿಗಳ ಪ್ರಯತ್ನ ತಡೆಯಿಲ್ಲದೆ ನಡೆಯುತ್ತಿರುವಾಗ ಇಂತಹ ಹೊತ್ತಗೆಗಳು ಬಹಳ ಅವಶ್ಯವಾಗಿವೆ. ಇದನ್ನು ಪೂರೈಸಲು ಯತ್ನಿಸುತ್ತಿರುವ ಲಡಾಯಿ ಪ್ರಕಾಶನಕ್ಕೂ ಹಾರ್ದಿಕ ಅಭಿನಂದನೆಗಳು.
ಭಗತ್ ಸಿಂಗ್ ಬಗೆಗೆ ಚರ್ಚಿಸುವ ನಾವು ಒಂದೆರೆಡು ಅಂಶಗಳ ಬಗೆಗೆ ಒತ್ತು ಕೊಡುವುದು ಅಗತ್ಯ. ಅದರಲ್ಲಿ ಒಂದೆಂದರೆ ಯಾವ ಐತಿಹಾಸಿಕ ಅಗತ್ಯವನ್ನು ಅವನು ಪೂರೈಸಿದ ಎಂಬುದು. ಎರಡನೆಯದಾಗಿ ಸೈದ್ಧಾಂತಿಕವಾಗಿ ಅವನು ಯಾವ ನಿಲುವುಗಳನ್ನು ತಳೆದ ಮತ್ತು ಅದರ ಪ್ರಾಮುಖ್ಯತೆಯೇನು? ಮೂರನೆಯದಾಗಿ ಯಾವ ವಿಶಿಷ್ಟ ಗುಣಗಳು ಆತನನ್ನು ಅನನ್ಯ ಕ್ರಾಂತಿಕಾರಿಯಾಗಿಸಿದವು ಎಂಬುದು. ಇತಿಹಾಸದಲ್ಲಿ ಭಗತ್ ಪಾತ್ರವನ್ನು ಗುರುತಿಸಬೇಕೆಂದರೆ ಮೊದಲಿಗೆ ನಾವು ಅವರಿದ್ದ ಕಾಲವನ್ನು, ಅಂದಿನ ಪರಿಸ್ಥಿತಿಯನ್ನು ವಿಶ್ಲೇಷಿಸಬೇಕು.
1857ರ ಮಹಾಬಂಡಾಯದ ನಂತರ ಭಾರತದಲ್ಲಿ ಬ್ರಿಟಿಷ್ ವಿರೋಧಿ ಭಾವನೆಗಳು ಒಂದು ಸಣ್ಣ ಪ್ರಮಾಣದಲ್ಲಾದರೂ ಆರಂಭವಾದವು. ಅದಕ್ಕೆ ಮುಂಚೆ ಅನೇಕ ರಾಜರು ಬ್ರಿಟಿಷರ ವಿರುದ್ಧ ಹೂಡಿದ್ದ ಯುದ್ಧಗಳಲ್ಲಿ ಇದ್ದ ಮುಖ್ಯ ಪ್ರೇರಣೆಯೆಂದರೆ ಬ್ರಿಟಿಷರಿಂದ ರಾಜ್ಯವನ್ನು ಕಾಪಾಡಿಕೊಳ್ಳಬೇಕು ಎಂಬುದು. ಇದರಲ್ಲಿ ಕೆಲವು ರಾಜರಲ್ಲಿ ಜನಪರ ಅಂಶಗಳು ಇದ್ದಿರಬಹುದಾದರೂ ಆಧುನಿಕ ಪರಿಕಲ್ಪನೆಯ ರಾಷ್ಟ್ರಾಭಿಮಾನ ಇನ್ನೂ ಸ್ಪಷ್ಟವಾಗಿ ಕಂಡುಬಂದಿರಲಿಲ್ಲ. ಇಡಿಯ ದೇಶದಲ್ಲಿ ಊಳಿಗಮಾನ್ಯ ವ್ಯವಸ್ಥೆಯ ನಂಬಿಕೆಗಳು, ಮೌಲ್ಯಗಳು ಜಡವಾಗಿ ಹೆಪ್ಪುಗಟ್ಟಿದ್ದವು. ಆದರೆ ಬ್ರಿಟಿಷರು ತಮ್ಮ ಲಾಭೋದ್ದೇಶದ ಕಾರಣದಿಂದಲೇ ಪರಿಚಯಿಸಿದ ರೈಲ್ವೇ ಮತ್ತು ಅದಕ್ಕೆ ಸಂಬಂಧಿಸಿದ ಕಾರ್ಖಾನೆಗಳು ದೀರ್ಘಕಾಲ ನಿದ್ರಾವಸ್ಥೆಯಲ್ಲಿದ್ದ ಭಾರತೀಯ ಸಮಾಜದಲ್ಲಿ ಸಂಚಲನವನ್ನು ಮೂಡಿಸಿದವು ಎಂಬುದನ್ನು ಕಾರ್ಲ್ ಮಾಕ್ರ್ಸ್ ಗುರುತಿಸಿದ್ದಾರೆ. ಹಾಗೆಯೇ ಇಂತಹ ಕಾರ್ಖಾನೆಗಳಲ್ಲಿ ದುಡಿಯಲು, ಅವುಗಳನ್ನು ನಿರ್ವಹಿಸಲು ವಿದ್ಯಾವಂತ ತರುಣರು ಅಗತ್ಯವಾಗಿದ್ದರು. ಅವರನ್ನು ತಯಾರು ಮಾಡಲು ಬ್ರಿಟಿಷರು ಆಧುನಿಕ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಬೇಕಾಯಿತು. ಆ ಶಿಕ್ಷಣವನ್ನು ಮೆಕಾಲೆ ನಿರ್ಮಿಸಿದ `ವಿಧೇಯ ಗುಮಾಸ್ತರನ್ನು ತಯಾರು ಮಾಡುವ ಪ್ರಕ್ರಿಯೆ’ ಎಂದು ಹೀಗಳೆಯುವುದು ಪೂರ್ತಿಯಾಗಿ ಸರಿ ಹೋಗುವುದಿಲ್ಲ. ಏಕೆಂದರೆ ಬ್ರಿಟಿಷರು ಇಲ್ಲಿ ಪರಿಚಯಿಸಿದ ಸಾಹಿತ್ಯ, ಭಾಷೆ, ಗಣ ತ, ವಿಜ್ಞಾನ ಮತ್ತು ಮಾನವಿಕ ಶಾಸ್ತ್ರಗಳು ವಿಶಿಷ್ಟವಾಗಿ ಭಾರತಕ್ಕೆ ತಯಾರಿಸಿದವಲ್ಲ. ಅದನ್ನೇ ಅವರು ತಮ್ಮ ದೇಶದಲ್ಲೂ ಜಾರಿಗೊಳಿಸಿದ್ದರು ಎನ್ನುವುದನ್ನು ಮರೆಯಬಾರದು. ಅದು ಧರ್ಮ ನಿರಪೇಕ್ಷತೆ, ವೈಜ್ಞಾನಿಕ ಮನೋಭಾವ, ಉದಾರವಾದಿ ದೃಷ್ಟಿಕೋನಗಳನ್ನು ಪ್ರತಿಬಿಂಬಿಸಿತ್ತು. ಅದರಲ್ಲಿ ಕೆಲವು ಇತಿಮಿತಿಗಳು ಇದ್ದವು ನಿಜ. ಯಾವುದೇ ಶೋಷಕ ವ್ಯವಸ್ಥೆಯಲ್ಲಿ ರೂಪುಗೊಂಡ ವಿದ್ಯಾಭ್ಯಾಸ ವ್ಯವಸ್ಥೆಯಲ್ಲಿ ಅಂತಹ ದೋಷಗಳು ಇರುತ್ತವೆ. ಆದರೆ ಅದಕ್ಕೆ ಮುನ್ನ ನಮ್ಮ ದೇಶದಲ್ಲಿ ಶಿಕ್ಷಣವು ತೀರಾ ಉಚ್ಚ ವರ್ಗಕ್ಕೆ ಸೀಮಿತವಾಗಿತ್ತು ಎಂಬುದನ್ನು ನಾವು ಮರೆಯಬಾರದು. ಅಲ್ಲದೆ ನಮ್ಮ ಆ ಪಠ್ಯಕ್ರಮದಲ್ಲಿ ಆಧುನಿಕ ಬದುಕಿಗೆ ಬೇಕಾದ ವಿಷಯಗಳಿರಲಿಲ್ಲ. ಮೌಢ್ಯತೆ ಹೆಪ್ಪುಗಟ್ಟಿತ್ತು.
ಹೊಸ ವಿದ್ಯಾಭ್ಯಾಸ ಕ್ರಮವು ಸಮಾನತೆ, ಸ್ವಾತಂತ್ರ್ಯ, ಮಹಿಳೆಯರ ಬಿಡುಗಡೆಯ ಕನಸುಗಳನ್ನು ನಮ್ಮ ನೆಲದಲ್ಲಿ ಬಿತ್ತಿತು. ಹತ್ತೊಂಭತ್ತನೆಯ ಶತಮಾನದ ಉತ್ತರಾರ್ಧದಲ್ಲಿ ಬಂಗಾಳ, ಮಹಾರಾಷ್ಟ್ರ ಮತ್ತಿತರ ಕಡೆಗಳಲ್ಲಿ ಬಂದ ಸುಧಾರಣೆಯ ಪ್ರಯತ್ನಗಳು, ಅದರ ಹಿಂದಿದ್ದ ಮಹಾನ್ ವ್ಯಕ್ತಿಗಳು ಈ ಶಿಕ್ಷಣದಿಂದಲೇ ಸ್ಫೂರ್ತಿಯನ್ನೂ, ವಿಚಾರಗಳನ್ನೂ ಪಡೆದಿದ್ದರು. ರಾಜಾರಾಂ ಮೋಹನ ರಾಯ್, ಈಶ್ವರಚಂದ್ರ ವಿದ್ಯಾಸಾಗರ್, ಜೋತಿಬಾ ಫುಲೆ, ಸಾವಿತ್ರಿಬಾಯಿ ಫುಲೆ ಇವರನ್ನೆಲ್ಲಾ ಇಲ್ಲಿ ಸ್ಮರಿಸಬಹುದು. ಮುಂದೆ ಕಾಣ ಸಿಕೊಂಡ ಸ್ವಾತಂತ್ರ್ಯ ಸಂಗ್ರಾಮಕ್ಕೆ ಇದುವೇ ಐತಿಹಾಸಿಕ ಸಿದ್ಧತೆ. ಇದರ ಮುಂದುವರಿಕೆಯಾಗಿಯೇ ಇಡೀ ಭಾರತವು ಒಂದು ರಾಷ್ಟ್ರ; ನಮ್ಮ ನಿಷ್ಠೆ ನಮ್ಮ ಸಂಸ್ಥಾನಕ್ಕಲ್ಲ, ರಾಜನಿಗಲ್ಲ ಎಂಬ ರಾಷ್ಟ್ರವಾದದ ಕಲ್ಪನೆ ಮೂಡಿಬಂತು. ಹತ್ತೊಂಭತ್ತನೆಯ ಶತಮಾನದ ಕಟ್ಟಕಡೆಯ ವರ್ಷಗಳಲ್ಲಿ ಹಾಗೂ ಇಪ್ಪತ್ತನೆಯ ಶತಮಾನದ ಮೊದಲ ವರ್ಷಗಳಲ್ಲಿ ನಾವು ಹೊಸ ರಾಷ್ಟ್ರಪ್ರೇಮದ ಆಧಾರದಲ್ಲಿ ಮೂಡಿಬಂದ ಹೋರಾಟಗಾರರನ್ನು ಕಾಣುತ್ತೇವೆ.
ಮೊದಲಿಗೆ ಬಂದಂಥ ಅನೇಕ ಪ್ರತಿಭಟನೆಗಳು ಸಶಸ್ತ್ರ ಹೋರಾಟಗಳೇ ಎನ್ನುವುದನ್ನು ನಾವು ನೆನಪಿಸಿಕೊಳ್ಳಬಹುದು. ಮಹಾರಾಷ್ಟ್ರದ ಚಾಂದೇಕರ್ ಸೋದರರು, ಬಂಗಾಳದ ಖುದಿರಾಂ ಬೋಸ್, ಪ್ರಫುಲ್ಲ ಟಾಕಿ ಸೇರಿದಂತೆ ಅನೇಕ ತರುಣರು ಈ ಮಾದರಿಯ ಹೋರಾಟದಲ್ಲಿ ಕಾಣ ಸಿಕೊಂಡರು. ಇನ್ನೊಂದೆಡೆ ಅನೇಕ ಶ್ರೀಮಂತ, ವಿದ್ಯಾವಂತ ಉಚ್ಚವರ್ಗದ ಜನರಿಂದ ಆರಂಭವಾದ ಭಾರತ ರಾಷ್ಟ್ರೀಯ ಕಾಂಗ್ರೆಸ್ ಭಾರತೀಯ ಬಂಡವಾಳಗಾರರ ಪರವಾಗಿ ಬ್ರಿಟಿಷ್ ಸರ್ಕಾರದೊಂದಿಗೆ ಚೌಕಾಸಿ ನಡೆಸಲಿಕ್ಕಾಗಿ ಹುಟ್ಟಿಕೊಂಡ ವೇದಿಕೆ. ಲೋಕಮಾನ್ಯ ತಿಲಕರ ಕಾಲದಲ್ಲಿ ಸ್ವಾತಂತ್ರ್ಯದ ಹಂಬಲ ಸ್ಫುಟವಾಗಿ, ಗಟ್ಟಿಯಾಗಿ ಕೇಳಿಬಂದದ್ದು ಬಿಟ್ಟರೆ ಅದರದ್ದು ಸುಧಾರಣಾವಾದದ ಧೋರಣೆಯೇ. ಗಾಂಧೀಜಿಯವರು 1915ರಲ್ಲಿ ದಕ್ಷಿಣ ಆಫ್ರಿಕಾದಿಂದ ಬಂದಮೇಲೆ ಕಾಂಗ್ರೆಸ್ ಹೋರಾಟಗಳಿಗೆ ಸಮೂಹ ಆಂದೋಲನದ ಸ್ವರೂಪ ಬಂತು. ಅದೂ ಭಗತ್ ಸಿಂಗ್ ಮತ್ತು ಇತರ ಕ್ರಾಂತಿಕಾರಿಗಳಿಂದ ಸಾಂಡರ್ಸ್ ಕೊಲೆ, ಅಸೆಂಬ್ಲಿ ಬಾಂಬ್ ಸ್ಫೋಟ ಘಟನೆಗಳು ನಡೆದ ಮೇಲಷ್ಟೇ ಅಂದರೆ 1930ರ ಜನವರಿ 26ರಂದು ಕಾಂಗ್ರೆಸ್ ಪೂರ್ಣ ಸ್ವರಾಜ್ ಘೋಷಣೆಯನ್ನು ಮಾಡಿದ್ದು ಎನ್ನುವುದು ಗಮನಾರ್ಹ.
ಇದರಿಂದ ನಾವು ಕೆಲವು ಮುಖ್ಯ ತೀರ್ಮಾನಗಳನ್ನು ಮಾಡಬಹುದು. ಒಂದು: ಸ್ವಾತಂತ್ರ್ಯ ಸಂಗ್ರಾಮದ ಆರಂಭದಿಂದಲೂ ಸಶಸ್ತ್ರ ಹೋರಾಟದ ಧಾರೆಯು ಕಾಂಗ್ರೆಸ್‍ನ ಸುಧಾರಣಾವಾದಿ ಹೋರಾಟದ ಧಾರೆಗೆ ಪರ್ಯಾಯವಾಗಿ ಇದ್ದೇ ಇತ್ತು. ಎರಡು: ಈ ಹೋರಾಟಗಾರರ ಸಾಹಸಗಳು ಜನಬೆಂಬಲವನ್ನು ಗಳಿಸಿಕೊಳ್ಳುತ್ತಿದ್ದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಲ್ಲಿಯವರೆಗೂ ತಾನು ಧ್ವನಿಸುತ್ತಿದ್ದ ಡೊಮಿನಿಯನ್ ಸ್ಟೇಟಸ್ (ಅಧೀನ ರಾಷ್ಟ್ರದ ಸ್ಥಾನಮಾನ)ದ ಬೇಡಿಕೆಯನ್ನು ಕೈಬಿಟ್ಟು ಪೂರ್ಣ ಸ್ವರಾಜ್ಯದ ಘೋಷಣೆಯನ್ನು ಕೈಗೆತ್ತಿಕೊಳ್ಳಬೇಕಾಯಿತು.
ಯಾವುದೇ ದೇಶದಲ್ಲಿ, ಯಾವುದೇ ಕಾಲದಲ್ಲಿ ಬಹಿರಂಗ ಸಾಮೂಹಿಕ ಆಂದೋಲನಗಳನ್ನು ಹತ್ತಿಕ್ಕಿದಾಗ ಅದು ಅಲ್ಲೊಂದು ಇಲ್ಲೊಂದು ಹಿಂಸಾತ್ಮಕ ಪ್ರತಿಭಟನೆಗಳಲ್ಲಿ, ಆಳುವ ದರ್ಪಿಷ್ಟರ ಕೊಲೆ ಮುಂತಾದ ಪ್ರಕರಣಗಳಲ್ಲಿ ಸ್ಫೋಟಗೊಳ್ಳುತ್ತದೆ. ಇದನ್ನು ಅಪೇಕ್ಷಣೀಯ ಎನ್ನದಿದ್ದರೂ ಚಾರಿತ್ರಿಕವಾಗಿ ಅನಿವಾರ್ಯ ಹಂತ ಎಂದೇ ಗುರುತಿಸಬೇಕಾಗುತ್ತದೆ. ಇಡೀ ಜನತೆ ಶಸ್ತ್ರಾಸ್ತ್ರಗಳನ್ನು ಹಿಡಿದು ರಾಷ್ಟ್ರೀಯ ವಿಮೋಚನೆಗಾಗಿ, ಸ್ವಾತಂತ್ರ್ಯಕ್ಕಾಗಿ ಸಂಘಟಿತರಾಗುವುದಕ್ಕೆ ಕಾರಣವಾಗುತ್ತದೆ. ಜಾಗತಿಕ ಇತಿಹಾಸದಲ್ಲಿ ಅನೇಕ ರಾಷ್ಟ್ರಗಳಲ್ಲಿ ಈ ಪ್ರಕ್ರಿಯೆಯನ್ನು ಕಾಣುತ್ತೇವೆ.
ಭಗತ್ ಸಿಂಗ್‍ನಂತಹವರು ಇಂತಹ ತೀವ್ರಗಾಮಿ ಸಶಸ್ತ್ರ ಹೋರಾಟಗಾರರಿಂದ ಪ್ರೇರಣೆಯನ್ನು ಪಡೆದವರು. ಆದರೆ ಅವರು ನಂತರ ವೇಗವಾಗಿ ಬದಲಾಗುತ್ತಿದ್ದರು. ಲಾಲಾ ಲಜಪತರಾಯ್ ಅವರ ಸಾವಿಗೆ ಪ್ರತೀಕಾರವಾಗಿ ಭಗತ್ ಮತ್ತು ಸಂಗಾತಿಗಳು ಸಾಂಡರ್ಸ್‍ನನ್ನು ಕೊಂದಾಗ ಅವರಿಗೆ ಕೇವಲ 21 ವರ್ಷ ವಯಸ್ಸು. ಆ ಘಟನೆಯ ನಂತರ ಅವರ ಅಧ್ಯಯನ, ವಿಶ್ಲೇಷಣೆ ಎಲ್ಲವೂ ತೀವ್ರವಾದ ವೇಗವನ್ನು ಪಡೆದುಕೊಂಡವು. 1929ರಲ್ಲಿ ಅವರು ಕೇಂದ್ರ ಶಾಸನಸಭೆಯಲ್ಲಿ ಪಟಾಕಿಯಂತಹ ಬಾಂಬ್ ಸಿಡಿಸುವ ವೇಳೆಗೆ ಬದಲಾಗತೊಡಗಿದ್ದರು. `ಮಲಗಿರುವ’ ಭಾರತೀಯರನ್ನು ಎಚ್ಚರಿಸಲು ಈ ಕೃತ್ಯ ಅವಶ್ಯಕ ಎಂದವರು ಭಾವಿಸಿದ್ದರು. ಇಂತಹ ಆಲೋಚನಾ ಕ್ರಮ ಮತ್ತು ಕಾರ್ಯಶೈಲಿಯ ಮೇಲೆ ಅವರು ಅದಕ್ಕೆ ಮೊದಲು ಹೊಂದಿದ್ದ ಚಿಂತನೆಯ ಪ್ರಭಾವ ಉಳಿದಿದೆ. ಆದರೆ ಅವರು ಆ ಹೊತ್ತಿಗೆ ಜನತೆಯ ಸಾಮೂಹಿಕ ಹೋರಾಟದ ಅಗತ್ಯತೆಯ್ನು ಸಹ ಗ್ರಹಿಸಲಾರಂಭಿಸಿದ್ದರು. ಬಂಧನದ ನಂತರ ಆಕಸ್ಮಿಕವಾಗಿ ಸಾಂಡರ್ಸ್ ಹತ್ಯೆ ಪ್ರಕರಣವು ಅವರಿಗೆ ತಗುಲಿ ಹಾಕಿಕೊಳ್ಳದೇ ಇದ್ದರೆ ಭಗತ್ ಸಿಂಗ್ ಬೇರೆ ಮಾದರಿಯಲ್ಲಿ ಹೋರಾಟವನ್ನು ಮುಂದುವರೆಸುತ್ತಿದ್ದದ್ದು ಖಚಿತ. ಮುಂದೆ ಸುಭಾಸ್ ಚಂದ್ರ ಬೋಸರು ಸಾಮೂಹಿಕ ಹೋರಾಟ ಮತ್ತು ಸಶಸ್ತ್ರ ಹೋರಾಟವನ್ನು ಒಟ್ಟಿಗೇ ಬೆಸೆಯಲು ಪ್ರಯತ್ನಿಸಿದರು. ಹಾಗಾಗಿ ಭಗತ್ ಸಿಂಗ್ ವೈಯಕ್ತಿಕ ತೀವ್ರಗಾಮಿ ಹೋರಾಟ ಹಾಗೂ ಸಾಮೂಹಿಕ ಸಶಸ್ತ್ರ ಹೋರಾಟದ ಕೊಂಡಿಯಾಗಿ ಕಾಣುತ್ತಾನೆ.
ಇನ್ನೊಂದು ದೃಷ್ಟಿಯಿಂದಲೂ ಭಗತ್ ಸಿಂಗ್ ಪಾತ್ರವು ಸ್ವಾತಂತ್ರ್ಯ ಹೋರಾಟದಲ್ಲಿ ಬಹಳ ಮುಖ್ಯವಾದದ್ದು. ಅದೆಂದರೆ ಸಶಸ್ತ್ರ ಹೋರಾಟವನ್ನು ತುಳಿದ ಎಲ್ಲಾ ಕ್ರಾಂತಿಕಾರಿಗಳ ನಡುವೆ ಅತ್ಯಂತ ನಿಖರವಾಗಿ ಭೌತವಾದಿ ಚಿಂತನೆಯನ್ನು, ವ್ಶೆಜ್ಞಾನಿಕ ಮನೋಭಾವವನ್ನು ಎತ್ತಿ ಹಿಡಿದವ ಭಗತ್ ಸಿಂಗ್. ಅವನು ಬಹಳ ವೇಗವಾಗಿ ಮಾಕ್ರ್ಸ್‍ವಾದಿ ದೃಷ್ಟಿಕೋನವನ್ನು, ಸಿದ್ಧಾಂತವನ್ನು ಗ್ರಹಿಸಲು ಆರಂಭಿಸಿದ್ದ. ಅಲ್ಲಿಯವರೆಗಿನ ಕ್ರಾಂತಿಕಾರಿಗಳಲ್ಲಿ ಅನೇಕರು ಕಾಳಿಯ ಭಕ್ತರಾಗಿದ್ದರು. ಭಾರತ ಮಾತೆಯನ್ನು ಒಬ್ಬ ದೇವತೆಯಂತೆ ಗ್ರಹಿಸುತ್ತಿದ್ದರು. ಅವರಲ್ಲಿ ಬಹುತೇಕ ಎಲ್ಲರೂ ಹಿಂದೂ ಮುಸ್ಲಿಂ ಸಾಮರಸ್ಯವನ್ನು ಬಯಸುತ್ತಿದ್ದರೂ ಸಹ ಸ್ಪಷ್ಟವಾಗಿ ಧರ್ಮನಿರಪೇಕ್ಷತೆಯ ತಿಳುವಳಿಕೆಯನ್ನು ಹೊಂದಿರಲಿಲ್ಲ. ಬಹುತೇಕ ಕ್ರಾಂತಿಕಾರಿಗಳು ಭಾವಾವೇಶದಿಂದ ಹೋರಾಟಕ್ಕೆ ಧುಮುಕಿದ್ದರು. ಧೈರ್ಯ, ಸಾಹಸ, ಮುಂದೊಡಗು ಇವೆಲ್ಲ ಬೇಕಾದಷ್ಟಿದ್ದವು. ಆದರೆ ಗಾಢವಾದ ಅಧ್ಯಯನಶೀಲತೆ, ವಿಚಾರಪರತೆ, ತಾರ್ಕಿಕ ಮನೋಭಾವ ಇವೆಲ್ಲ ಭಗತನಲ್ಲಿ ಕಂಡಂತೆ ಯಾರಲ್ಲಿಯೂ ಕಾಣಲಿಲ್ಲ. ಅದೇ ಆತನನ್ನು ಜಾಗತಿಕ ಇತಿಹಾಸ, ತತ್ತ್ವಶಾಸ್ತ್ರ, ಸಾಹಿತ್ಯ, ರಾಜಕೀಯ ಅರ್ಥಶಾಸ್ತ್ರಗಳನ್ನು ಕಲಿಯುವಂತೆ ಮಾಡಿತ್ತು. ಅವನ ಬೌದ್ಧಿಕ ಬೆಳವಣ ಗೆಗೆ ಪೂರ್ಣವಿರಾಮ ಇರಲೇ ಇಲ್ಲ. ಆತ ಸದಾ ಸೈದ್ಧಾಂತಿಕ ಹುಡುಕಾಟದಲ್ಲಿ ಮುಳುಗಿದ್ದವನು. `ಏನೋ ಅಂತೂ ಒಂದು ಸಂಘಟನೆಗೆ ಸೇರಿದ್ದೇವೆ. ಅದು ತಪ್ಪಾದರೂ ಸರಿ, ಇಲ್ಲಿಯೇ ಸಾಯುತ್ತೇನೆ’ ಎನ್ನುವುದು ಅವನ ನಿಲುವಲ್ಲ. ಅಂತಹ ಸತತ ಸತ್ಯಾನ್ವೇಷಣೆಯ ಸಂಕಲ್ಪವೇ ಅವನನ್ನು ಮಾಕ್ರ್ಸ್‍ವಾದದ ಹೊಸ್ತಿಲಿಗೆ ತಂದು ನಿಲ್ಲಿಸಿತು. ಹೀಗಾಗಿ ಭಗತ್ ಸಿಂಗ್ ಕ್ರಾಂತಿಕಾರಿ ತೀವ್ರವಾದ ಮತ್ತು ಮಾಕ್ರ್ಸ್‍ವಾದದ ನಡುವಿನ ಕೊಂಡಿಯೂ ಹೌದು.
ಇನ್ನು ವ್ಯಕ್ತಿಗತ ಮಟ್ಟದಲ್ಲಿ ಅವನ ಗುಣಗಳು ವಿರಳಾತಿ ವಿರಳವಾಗಿದ್ದವು. ಅವನಲ್ಲಿ ಉರಿವ ಬೆಂಕಿಯ ಪ್ರಖರತೆಯೂ, ಹೂವಿನ ಕೋಮಲತೆಯೂ ಬೆಸೆದುಕೊಂಡಿದ್ದವು. ತೀರಾ ಚಿಕ್ಕವನಿದ್ದಾಗಲೇ ಅವನು ನಿರ್ಗತಿಕರಿಗೆ, ದರಿದ್ರರಿಗೆ, ಮುದುಕರಿಗೆ ಗಾಢವಾಗಿ ಸ್ಪಂದಿಸುತ್ತಿದ್ದ. ಕ್ರಾಂತಿಕಾರಿ ಗಂಡಂದಿರಿಂದ ದೂರವಾಗಿರಬೇಕಾಗಿದ್ದ ತನ್ನ ಚಿಕ್ಕಮ್ಮಂದಿರ ಕಷ್ಟಕಾರ್ಪಣ್ಯಗಳನ್ನು ಅರಿತು ಸಮಾಧಾನ ಹೇಳುತ್ತಿದ್ದ. ಜಲಿಯನ್‍ವಾಲಾ ಬಾಗ್ ಹತ್ಯಾಕಾಂಡವಾದಾಗ ಶಾಲೆಯಿಂದಲೇ ಅಲ್ಲಿಗೆ ಹೋಗಿ ಅಲ್ಲಿಯ ರಕ್ತಸಿಕ್ತ ಮಣ್ಣನ್ನು ಅದೊಂದು ಸ್ಮರಣ ಕೆ ಎಂಬಂತೆ ಕಾಪಿಟ್ಟುಕೊಂಡಿದ್ದ. ಆದರೆ ಇಂಥ ಭಾವತೀವ್ರತೆ ಅವನಲ್ಲಿ ಕುರುಡುತನವನ್ನು ಎಂದೂ ಸೃಷ್ಟಿಸಲಿಲ್ಲ.
ತನ್ನ ಪ್ರೀತಿಪಾತ್ರರು ಎಷ್ಟೇ ಜುಲುಮೆ ಮಾಡಲಿ, ತನ್ನ ಮನಸ್ಸು ಒಪ್ಪದ ಕೆಲಸವನ್ನು ಮಾಡುತ್ತಿರಲಿಲ್ಲ. ಬಹಳ ಮುಖ್ಯವಾಗಿ ಅವನೆಂದೂ ಅನ್ಯಾಯದ ಎದುರು ತಲೆ ಬಾಗಲಿಲ್ಲ. ಕ್ರಾಂತಿಕಾರಿ ಹೋರಾಟದಿಂದ ಅವನನ್ನು ದೂರಕ್ಕೆ ಸೆಳೆಯಬೇಕೆಂದು ಮನೆಯವರು ಅವನಿಗೆ ಮದುವೆ ಗೊತ್ತು ಮಾಡಿದಾಗ ಅವನು ಹೋರಾಟದÀ ಸೆಳೆತಕ್ಕೆ ಮನೆಬಿಟ್ಟು ಹೊರಟವನು. ಜೈಲಿನ ಅಸಹನೀಯ ಹಿಂಸೆಯ ನಡುವೆ ಕೊಂಚವೂ ಬಾಗದೇ ಉಳಿದವನು. ತಂದೆ ಸುಪ್ರಸಿದ್ಧ ಹೋರಾಟಗಾರರೇ. ಆದರೆ ಭಗತನಿಗೆ ಗಲ್ಲು ಶಿಕ್ಷೆಯಾದಾಗ ಅವರು ವಿಚಲಿತರಾದರು. ಭಗತನು ಹತ್ಯೆ ನಡೆದ ಸ್ಥಳದಲ್ಲೇ ಇರಲಿಲ್ಲ ಇತ್ಯಾದಿ ಹೇಳಿಕೆ ನೀಡಿ ಮಗನ ಸಾವನ್ನು ತಪ್ಪಿಸಲು ನೋಡಿದರು. ಆದರೆ ಭಗತನಿಗೆ ತನ್ನ ರಾಜಕೀಯ ಮಾರ್ಗ, ಧ್ಯೇಯನಿಷ್ಠೆ ಸ್ಪಷ್ಟವಾಗಿತ್ತು. ಅವನು ಸೆಟೆದು ನಿಂತು, ತಂದೆಯ ನಡೆಯನ್ನು ಖಂಡಿಸಿ ಸಾರ್ವಜನಿಕ ಹೇಳಿಕೆಯನ್ನೇ ನೀಡಿಬಿಟ್ಟ.
ಭಗತ್ ಒಬ್ಬ ಅಸಾಧಾರಣ ಸಂಘಟನಾಕಾರ ಮತ್ತು ಬೌದ್ಧಿಕವಾಗಿ ಬಹಳ ಪ್ರಬುದ್ಧ ವ್ಯಕ್ತಿ. ಅವನು ತನ್ನ ಕ್ರಿಯಾಶೀಲ ರಾಜಕೀಯ ಬದುಕಿನುದ್ದಕ್ಕೂ ತನ್ನ ಸುತ್ತಲಿನ ಸಂಘಟನಾಕಾರರ ಬಗೆಗೆ ಬಹಳ ಕಾಳಜಿಯನ್ನು ಹೊಂದಿದ್ದ. ಅದನ್ನು ವ್ಯಕ್ತಪಡಿಸುತ್ತಿದ್ದ. ಅದರಲ್ಲೂ ತನಗಿಂತ ಕಿರಿಯರ ಬಗ್ಗೆ, ಸಂಘಟನೆಯಲ್ಲಿ ಕೆಳಗಿನ ಶ್ರೇಣ ಗಳಲ್ಲಿ ಇದ್ದವರ ಬಗ್ಗೆ ಅವನು ತುಂಬಾ ಗಮನ ನೀಡುತ್ತಿದ್ದ. ಅಲ್ಲಿ ಅವನ ತಾಯಿ ಹೃದಯ ವ್ಯಕ್ತವಾಗುತ್ತಿತ್ತು. ಇದಕ್ಕೆ ಅನೇಕ ದೃಷ್ಟಾಂತಗಳಿವೆ. ಅದರಲ್ಲಿ ಒಂದೆರೆಡನ್ನು ಉಲ್ಲೇಖಿಸುತ್ತೇನೆ.
ಅವನ ಸಂಗಡಿಗರನ್ನು ಸರ್ಕಾರ ಬೇರೆಬೇರೆ ಜೈಲಿನಲ್ಲಿರಿಸಿತ್ತು. ತನ್ನಿಂದ ದೂರವಾಗಿದ್ದ ಸಂಗಾತಿಗಳ ಮಾನಸಿಕ ಪರಿಸ್ಥಿತಿಯ ಬಗ್ಗೆ ಭಗತನಿಗೆ ವಿಶೇಷ ಕಾಳಜಿ. ತಾನೇ ಸ್ವತಃ ಸಾವನ್ನು ಎದುರು ನೋಡುತ್ತಿದ್ದ. ಈ ಎಳೆಯ ವಯಸ್ಸಿನ ಕ್ರಾಂತಿಕಾರಿಯು ಒಬ್ಬ ಕುಟುಂಬದ ಹಿರಿಯನಂತೆ ಜೈಲಿನ ಅಧಿಕಾರಿಗಳ ಅನುಮತಿ ಪಡೆದು ತನ್ನ ಗೆಳೆಯರಿದ್ದ ಜೈಲಿಗೆ ತೆರಳಿ ಅವರನ್ನು ಉನ್ನತ ಸೈದ್ಧಾಂತಿಕ ಚರ್ಚೆಗಳಲ್ಲಿ ತೊಡಗಿಸಿಕೊಂಡು ಅವರಲ್ಲಿ ಸ್ಫೂರ್ತಿ ತುಂಬಿ ಬರುತ್ತಿದ್ದ. ಭಗತನನ್ನು ನೋಡಲು ಬೇಕಾದಷ್ಟು ಜನ, ಅದರಲ್ಲೂ ಕುಟುಂಬದವರು ಬರುತ್ತಿದ್ದರು. ಆದರೆ ಸುಖದೇವ್ ಮತ್ತು ವಿಶೇಷವಾಗಿ ರಾಜಗುರುವನ್ನು ನೋಡಲು ಯಾರೂ ಬರುತ್ತಿರಲಿಲ್ಲ. ಆದ್ದರಿಂದ ಭಗತ್ ತನ್ನ ಮನೆಯವರನ್ನು ಅವರಿಬ್ಬರನ್ನೂ ನೋಡಿಬನ್ನಿರೆಂದು ತಪ್ಪದೆ ಕಳಿಸುತ್ತಿದ್ದ. ಅವನ ತಾಯಿ ವಿದ್ಯಾವತಿ ಅವರು ಬಹಳ ಅಂತಃಕರಣದ ಹೃದಯವಂತ ಹೆಣ್ಣು. ಆಕೆ ಎಲ್ಲಾ ಕ್ರಾಂತಿಕಾರಿಗಳನ್ನು ತನ್ನ ಮಕ್ಕಳಂತೆ ನೋಡುತ್ತಿದ್ದವರು. ಆಕೆ ಮತ್ತು ಭಗತನ ಸಂಬಂಧದ ಬಗೆಗೆ ಬರೆದರೆ ಅದೊಂದು ಸುಂದರ ಕ್ರಾಂತಿಕಾರಿ ವಾತ್ಸಲ್ಯಗೀತೆಯಾಗುತ್ತದೆ.
ಪ್ರೀತಿ ಪ್ರೇಮದ ಬಗೆಗೆ ಅವನದು ಮೊದಲಿನಿಂದಲೂ ಪ್ರಬುದ್ಧ ದೃಷ್ಟಿಕೋನ. ಕಾಲೇಜಿನಲ್ಲಿ ಅಭ್ಯಾಸ ಮಾಡುತ್ತಿದ್ದಾಗ ಅವನ ನೆಚ್ಚಿನ ಅಧ್ಯಾಪಕರೊಬ್ಬರು ಮದುವೆ ಎಂಬುದು ಕ್ರಾಂತಿಕಾರಿಯೊಬ್ಬನ ಕಾಲಿಗೆ ಬೇಡಿಯಾಗುತ್ತದೆ ಎಂದು ಪ್ರತಿಪಾದಿಸಿದರು. ಭಗತ ಅದನ್ನು ವಿರೋಧಿಸಿದ. `ರಷ್ಯನ್ ಕ್ರಾಂತಿಕಾರಿ ನಾಯಕ ಲೆನಿನ್‍ರನ್ನು, ಅವರ ಮಡದಿ ಕ್ರುಪ್‍ಸ್ಕಾಯಾರನ್ನು ನೋಡಿ. ಇಬ್ಬರ ಧ್ಯೇಯವೂ ಬದುಕಿನಲ್ಲಿ ಒಂದೇ ಆಗಿದ್ದರೆ ಮದುವೆ ಅಡ್ಡಬರದು’ ಎಂದು ವಾದಿಸಿದ. ಅಧ್ಯಾಪಕರು ನಕ್ಕು ತಮ್ಮ ಮಾತನ್ನು ಹಿಂತೆಗೆದುಕೊಂಡರು.
ಜೈಲಿನಲ್ಲಿದ್ದಾಗ ಪ್ರೀತಿಪ್ರೇಮದ ಬಗ್ಗೆ ಅನೇಕ ಮಹತ್ವದ ಅಂಶಗಳನ್ನೊಂಗೊಂಡ ಪತ್ರವನ್ನು ಭಗತ್ ಸುಖದೇವನಿಗೆ ಬರೆದ. ಹಾಗೆಯೇ ಗೆಳೆಯನು ತೀವ್ರ ಹತಾಶೆಯಿಂದ ಆತ್ಮಹತ್ಯೆಯ ಬಗೆಗೆ ಮಾತನಾಡಿದಾಗ ಸಹಾ. ಇದೆಲ್ಲವೂ ಹೇಗೆ ಭಗತ್ ಅನೇಕ ವಿಚಾರಗಳನ್ನು ಅನೇಕ ದಿಕ್ಕಿನಿಂದ ಬೆಳೆಸಿಕೊಳ್ಳುತ್ತಿದ್ದ ಚಿಂತಕ ಎಂಬುದನ್ನು ತೋರಿಸುತ್ತವೆ.
ಭಾರತದ ಇಂದಿನ ಐತಿಹಾಸಿಕ ಸಂದರ್ಭದಲ್ಲಿ ಭಗತನಿಗೆ ಕೋಮು ಹಾಗೂ ಜಾತಿವಾದದ ಬಗ್ಗೆ ಇದ್ದ ನಿಲುವನ್ನು ವಿವರಿಸಿ ನನ್ನ ನಾಲ್ಕು ಮಾತುಗಳನ್ನು ಮುಗಿಸುತ್ತೇನೆ. ಅವನು ಕಾಲೇಜಿನ ದಿನಗಳಲ್ಲೇ ಕೋಮುವಾದದ ವಿರುದ್ಧ ಸಕ್ರಿಯನಾಗಿದ್ದ. ಅದಕ್ಕಾಗಿ ನಾಟಕಗಳನ್ನು ಆಡಿಸಿದ. ಅನೇಕ ಕರಪತ್ರಗಳನ್ನು, ಲೇಖನಗಳನ್ನು ಬರೆದಿದ್ದ. ಒಂದು ಕಾಲದಲ್ಲಿ ತನ್ನ ಗುರು ಎಂದೇ ಸ್ವೀಕರಿಸಿದ್ದ ಲಾಲಾ ಲಜಪತರಾಯ್ ಅವರು ಹಿಂದೂ ವೇದಿಕೆಯೊಂದಿಗೆ ಗುರುತಿಸಿಕೊಂಡರು ಎಂಬ ಕಾರಣಕ್ಕೆ ಅವರನ್ನು ಖಂಡಿಸಿದ. ಇಂಗ್ಲಿಷ್ ಕ್ರಾಂತಿಕಾರಿ ಕವಿ ಶೆಲ್ಲಿಯು ಇನ್ನೊಬ್ಬ ಕವಿ ವಡ್ರ್ಸ್‍ವರ್ತನು ಮೊದಲು ಫ್ರೆಂಚ್ ಕ್ರಾಂತಿಯನ್ನು ಬೆಂಬಲಿಸಿ ನಂತರ ಅದನ್ನು ಖಂಡಿಸಿದ ಎಂಬ ಕಾರಣಕ್ಕೆ ಅವನನ್ನು ವಿರೋಧಿಸಿದ್ದ. ಇದನ್ನು ಭಗತ್ ಆಗ ನೆನಪಿಸಿಕೊಂಡು ಲಾಲಾಜಿ ಕುರಿತಾದ ತನ್ನ ನಿಲುವನ್ನು ಸಮರ್ಥಿಸಿಕೊಂಡ.
ಭಗತ್ ಚಿಕ್ಕ ವಯಸ್ಸಿನಿಂದಲೂ ಅಸ್ಪøಶ್ಯತೆಯನ್ನು ಖಂಡಿಸುತ್ತ ಬೆಳೆದವನು. ಆ ಜನಾಂಗದವರನ್ನು ಗಾಢವಾಗಿ ಪ್ರೀತಿಸಿದವನು. ಅದರಲ್ಲಿದ್ದದ್ದು ಕೇವಲ ಕರುಣೆಯಲ್ಲ. ಆತ ಅವರನ್ನು ತನ್ನ ಸಮಾನರು, ಬಂಧುಗಳು ಎಂದೇ ಸ್ವೀಕರಿಸಿದ್ದ. ಜೈಲಿನಲ್ಲಿ ಶೌಚಾಲಯವನ್ನು ತೊಳೆಯುತ್ತಿದ್ದವರಿಗೂ, ಭಗತನಿಗೂ ಗಾಢವಾದ ಸಂಬಂಧ ಬೆಳೆದಿತ್ತು. ಅವರನ್ನು ಭಗತ್ `ಬೆಬೆ’ ಎಂದು ಕರೆಯುತ್ತಿದ್ದರು. ಬೆಬೆ ಎಂದರೆ ಸಾಕುತಾಯಿ ಎಂದು. ಜೈಲಿನವರು ಭಗತನನ್ನು ನಿಮ್ಮ ಕಡೆಯ ಆಸೆ ಏನು ಎಂದು ಕೇಳಿದಾಗ ಭಗತ್, `ನನ್ನ ಕಡೆಯ ಊಟವನ್ನು ನನ್ನ ಬೆಬೆಯೇ ತಯಾರಿಸಿಕೊಡಬೇಕು’ ಎಂದು ಹೇಳಿದ. ಇದನ್ನು ಕೇಳಿದ ಮೋಘ, `ಇದು ಹೇಗೆ ಸಾಧ್ಯ?’ ಎಂದು ಅತ್ತುಬಿಟ್ಟರು. ಭಗತ್ ಬಿಡಲಿಲ್ಲ. 24ರಂದು ಭಗತನನ್ನು ಗಲ್ಲಿಗೇರಿಸಬೇಕಿತ್ತು. 23ರ ರಾತ್ರಿ ಅವರ ಒತ್ತಾಯಕ್ಕೆ ಮಣ ದು ಬೆಬೆ ಊಟವನ್ನು ತಂದರು. ಆದರೆ ಆತನನ್ನು 23ರ ಸಂಜೆಯೇ ಅಧಿಕಾರಿಗಳು ಗಲ್ಲಿಗೆ ಹಾಕಿದ್ದರಿಂದ ಭಗತನ ಕೊನೆಯಾಸೆ ನೆರವೇರಲಿಲ್ಲ.
ಡಾ. ಅನುಪಮಾ ಅವರ ಈ ಕೃತಿಯು ವೈಯಕ್ತಿಕವಾಗಿ ನನಗೆ ನೆರವಾಗಿದೆ. ಅನೇಕ ಗೊತ್ತಿಲ್ಲದ ಮಾಹಿತಿಗಳನ್ನು ಅದು ಹೊರಗೆಡವಿದೆ. ಅಂದವಾಗಿ ಮುದ್ರಿಸಲ್ಪಟ್ಟ ಈ ಪುಸ್ತಕ ಅತಿ ಹೆಚ್ಚು ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು, ಯುವಜನರನ್ನು ತಲುಪಲಿ ಎಂದು ಹಾರೈಸುತ್ತೇನೆ.
"ಹೆಗಲು" ಲೇಖಕರು : ಭಾರತಿ ಹೆಗಡೆ ಪ್ರಕಾಶಕರು : ಬೆನಕ ಬುಕ್ಸ ಬ್ಯಾಂಕ್. ಪುಟಗಳು : 142 ಬೆಲೆ: ₹180/-...
ಪುಸ್ತಕದ ಸಾರಾಂಶ "ಬದುಕು ದೀರ್ಘವಾಗಿರುವುದಕ್ಕಿಂತ ಶ್ರೇಷ್ಠವಾಗಿರಬೇಕು" ಎನ್ನುವ ನಿಟ್ಟಿನಲ್ಲಿ ಸಮಯ ನಿರ್ವಹ...
"ಇಲ್ಲಿನ ಯಾವ ಕತೆಗಳಲ್ಲೂ ಮಾನವ ಪಾತ್ರಗಳು ಇಣುಕುವುದಿಲ್ಲ, ಆದರೆ ಮನುಷ್ಯನ ಗುಣ-ಸ್ವಭಾವ, ನಡತೆ, ನಿಯತ್ತು, ನೀಚತನ...
©2025 Book Brahma Private Limited.