ಇವತ್ತಿನ ಸಮಸ್ಯೆ‌ ಇರುವುದು ಅನೇಕವನ್ನು ಏಕವಾಗಿಸುವ ಪ್ರವೃತ್ತಿ; ನಾಗರಾಜ ಹೆಗಡೆ


"ಅಲೆಮಾರಿ ಜೀವನದ ಬೇಟೆಗಾರಿಕೆಯಿಂದ ಒಂದೆಡೆ ನೆಲೆ ನಿಲ್ಲಲು ಸಾಧ್ಯವಾದ ಕೃಷಿಜೀವನ, ಮನೆ, ಕುಟುಂಬ, ಸಮಾಜ ಹಾಗೂ ಅದರ ವಿವಿಧ ಘಟಕಗಳ ವಿಕಾಸಕ್ಕೆ ನಾಂದಿ ಹಾಡಿದ್ದು ಸಮಾಜ ಹಾಗೂ ಸಂಸ್ಕೃತಿ ಚರಿತ್ರೆಯ ಮಹತ್ವದ ಹಂತವಾಗಿದೆ. ಮುಂದೆ ಕೈಗಾರಿಕೀಕರಣ, ನಗರೀಕರಣ, ಆಧುನಿಕತೆಯ ಕಲ್ಪನೆಗೆ ಹೊಸ ಆಯಾಮವನ್ನು ನೀಡಿತು," ಎನ್ನುತ್ತಾರೆ ನಾಗರಾಜ ಹೆಗಡೆ, ಅಪಗಾಲ. ಅವರ ‘ಸಮಾಜ ಸಂಸ್ಕೃತಿ: ಸಮಕಾಲೀನ ಸಂಸ್ಕೃತಿ’ ಕೃತಿಯ ಆಯ್ದಭಾಗ ನಿಮ್ಮ ಓದಿಗಾಗಿ.

ಪ್ರಕೃತಿ ಜೀವಿಗಳ ಎಲ್ಲ ಚಟುವಟಿಕೆಗಳಿಗೂ ಮೂಲನೆಲೆ. ಮನುಷ್ಯನ ಸಮಾಜ- ಸಂಸ್ಕೃತಿಯ ಚಿಂತನೆಗಳಿಗೂ ಮೂಲ ಪ್ರಕೃತಿಯೇ. ಪ್ರಕೃತಿಯನ್ನು ಪರಿಷ್ಕರಿಸುತ್ತ ತನ್ನ ಹಾಗೂ ಸುತ್ತಲಿನ ಸಮುದಾಯದ ಆರೋಗ್ಯ-ಆನಂದಕ್ಕಾಗಿ ಮನುಷ್ಯ ನಡೆಸುವ ಎಲ್ಲ ಚಟುವಟಿಕೆಗಳ ಮೊತ್ತವೇ ಸಂಸ್ಕೃತಿ, ಮನುಷ್ಯ ಜೀವಿಯ ಜೀವಪರವಾದ ಚಿಂತನೆ, ನಂಬಿಕೆ, ಕ್ರಿಯೆ ಹಾಗೂ ಒಟ್ಟಾರೆಯಾದ ಜೀವನ ವಿಧಾನವೇ ಸಂಸ್ಕೃತಿ. ಇಂಥ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಆಚರಣೆ, ನಂಬಿಕೆಗಳಲ್ಲಿ ಸಾಮ್ಯತೆಗಳಿರುವ ಕ್ರಿಯೆ-ಪ್ರತಿಕ್ರಿಯೆಯಲ್ಲಿ ತೊಡಗಿಕೊಂಡು, ಒಂದೆಡೆ ನೆಲೆ ನಿಂತಿರುವ ಒಂದು ಸಮುದಾಯವನ್ನೇ 'ಸಮಾಜ' ಎಂದು ಗುರುತಿಸುತ್ತೇವೆ. ಪ್ರಾಕೃತಿಕ ರೂಪದಿಂದ ಸಂಸ್ಕೃತಿಯೆಡೆಗೆ- ಗುಂಪು ಜೀವನದಿಂದ ವ್ಯವಸ್ಥಿತ ಸಮಾಜ ಜೀವನದೆಡೆಗೆ ಮನುಷ್ಯ ಹೊರಳಿದ ಕಾಲವನ್ನು ಖಚಿತಪಡಿಸುವ ಯಾವ ಮಾನದಂಡವೂ 'ಆಧುನಿಕತೆ'ಯ ಬಳಿ ಇಲ್ಲ. ನಿರಂತರ ಪರಿವರ್ತನಾಶೀಲವಾದ ಪ್ರಕೃತಿಯೊಂದಿಗೆ ತಾನೂ ಹೆಚ್ಚೆಚ್ಚು ಅನುಕೂಲವಾಗುವಂತೆ, ಪ್ರಸ್ತುತವಾಗುವಂತೆ ಪರಿವರ್ತನೆಗೆ ಒಳಗಾಗುವ ಮನುಷ್ಯ ಸಮುದಾಯದ ಹೊಸತನದ ಜೀವನವಿಧಾನವೇ 'ಆಧುನಿಕತೆ'. ಪ್ರಕೃತಿ ಹಾಗೂ ಜೀವಿಗಳ 'ಪ್ರಸ್ತುತ'ವಾಗುತ್ತ ಹೋಗುವುದೇ ಆಧುನಿಕತೆಯ ಮೂಲ ಗುಣ.

ಹೊಟ್ಟೆಪಾಡಿನ ಉಪಜೀವನದಾಚೆಗೂ ಕ್ರಿಯಾಶೀಲವಾಗಿ ಆಲೋಚಿಸುವ ಶಕ್ತಿಯ ಮಾನವ ಮೆದುಳು ಹಾಗೂ ಅದರ ಆಲೋಚನೆಗೆ ಸಷತೆ ನೀಡಿ ಇತರರೊಂದಿಗೆ ಅದನ್ನು ಹಂಚಿಕೊಳ್ಳುವ, ಪರಸ್ಪರ ಪರಿಷ್ಕರಿಸಿಕೊಳ್ಳುವ, ಒಟ್ಟಾಗಿ ಚಿಂತಿಸುವ, ಅದ್ಭುತ ಶಕ್ತಿಯನ್ನು ಮಾವನ ಸಮುದಾಯಕ್ಕೆ ನೀಡಿದ ಭಾಷೆಯೇ ಅವನ ಎಲ್ಲ ಸಾಧನೆಗಳ ಹಿಂದಿನ ಪ್ರೇರಕ ಶಕ್ತಿಯಾಗಿರುವಂತೆ, ಸಮಾಜ-ಸಂಸ್ಕೃತಿಯ ನಿರ್ಮಾಣದಲ್ಲಿ ಪ್ರಧಾನ ಪಾತ್ರವನ್ನು ವಹಿಸಿದೆ. ಸಶಕ ಸಂವಹನ ಗುಣದ ಭಾಷೆಯಿಂದಲೇ ಸಮಾಜ-ಸಂಸ್ಕೃತಿಯ ನಿರ್ಮಾಣ ಹಾಗೂ ವ್ಯವಸ್ಥಿತ ವಿಕಾಸ ಮನುಷ್ಯನಿಗೆ ಸಾಧ್ಯವಾಯಿತು. ಭಾಷೆಗಿರುವ ಸಂಸ್ಕೃತಿವಾಹಕ ಶಕ್ತಿ, ಸಮಾಜ-ಸಂಸ್ಕೃತಿಯ ಸಂವರ್ಧನೆಯನ್ನು ಸಾಧಿಸಿದ್ದಲ್ಲದೆ ಕಾಲಾತೀತ ಪರಂಪರೆಯ ನಿರ್ಮಾಣಕ್ಕೂ ಕಾರಣವಾಯಿತು.

ಅಲೆಮಾರಿ ಜೀವನದ ಬೇಟೆಗಾರಿಕೆಯಿಂದ ಒಂದೆಡೆ ನೆಲೆ ನಿಲ್ಲಲು ಸಾಧ್ಯವಾದ ಕೃಷಿಜೀವನ, ಮನೆ, ಕುಟುಂಬ, ಸಮಾಜ ಹಾಗೂ ಅದರ ವಿವಿಧ ಘಟಕಗಳ ವಿಕಾಸಕ್ಕೆ ನಾಂದಿ ಹಾಡಿದ್ದು ಸಮಾಜ ಹಾಗೂ ಸಂಸ್ಕೃತಿ ಚರಿತ್ರೆಯ ಮಹತ್ವದ ಹಂತವಾಗಿದೆ. ಮುಂದೆ ಕೈಗಾರಿಕೀಕರಣ, ನಗರೀಕರಣ, ಆಧುನಿಕತೆಯ ಕಲ್ಪನೆಗೆ ಹೊಸ ಆಯಾಮವನ್ನು ನೀಡಿತು. ಈ ನಡುವೆ ನಾಗರಿಕತೆ ಕೇವಲ ಬಾಹ್ಯಸ್ವರೂಪಿ, ಅದು ತಂದ ಆಧುನಿಕತೆಯಿಂದಲೇ 'ಸಮಾಜ'-ಸಂಸ್ಕೃತಿಗಳೆಲ್ಲ ಹಾಳಾಗುತ್ತಿವೆ ಎಂಬ ಕೂಗನ್ನೂ ಕೇಳುತ್ತ ಬಂದಿದ್ದೇವೆ. ಈ ಕೂಗಿನಲ್ಲಿ ಸಂಪ್ರದಾಯವಾದಿಗಳ ಕಿರುಚಾಟವೇ ಜಾಸ್ತಿ. ಜೀವಂತವಾದ, ಚಲನಶೀಲವಾದ ಎಲ್ಲವೂ ಕಾಲ-ಕಾಲದ ಪರಿವರ್ತನೆಯೊಂದಿಗೆ ಅನುಸಂಧಾನ ನಡೆಸಬೇಕಾದದ್ದು ಅಗತ್ಯ ಮಾತ್ರವಲ್ಲ, ಅನಿವಾರ ಕೂಡ.

ಸಂಸ್ಕೃತಿ, ಸಮಾಜ ಎನ್ನುವುದು ಮನೆಯಂಗಳದ ನಿತ್ಯಪುಷ್ಪದ ಗಿಡವಿದ್ದಂತೆ. ಈ ಗಿಡ ಎಂದೂ 'ನಾನು ಇಂದು ಒಂದು ಹೂವನ್ನು ಅರಳಿಸಿಕೊಂಡಿದ್ದೇನೆ, ಓ ಕೃತಿಯೇ ನೀನು ನಾಳೆಗಳನ್ನು ತಾರದಿರು, ನಾಳೆ ಎಂದರೆ ಈ ಹೂವು ಬಾಡಿಹೋಗುತ್ತದೆ, ತೊಟ್ಟು ಕಳಚಿ ಬಿದ್ದುಬಿಡುತ್ತದೆ' ಎಂದು ಗೊಣಗುವುದಿಲ್ಲ. ಏಕೆಂದರೆ ಅದು ನಂಬಿಕೊಂಡಿದ್ದು ಅರಳಿಸಿಕೊಂಡ ಕೇವಲ ಒಂದು ದಿನದ ಒಂದೇ ಹೂವನಲ್ಲ; ಬದಲಿಗೆ ತನ್ನ ಬೇರು-ಕಾಂಡ-ಎಲೆಗಳಿಗೂ, ಈ ಪ್ರಕೃತಿಯ ನೆಲ-ನೀರು-ಗಾಳಿ- ಬೆಳಕಿಗೂ ಇರುವ ಅಂತಃಸಂಬಂಧವನ್ನು. ಅಲ್ಲದೆ, ಈ ಸಂಬಂಧದಿಂದಲೇ ಹುಟ್ಟಿಕೊಂಡ ತನ್ನೊಳಗಿನ ಫಲವಂತಿಕೆಯ ಶಕ್ತಿಯು ನಿತ್ಯವೂ ಹೊಸ ಹೂವನ್ನು ಅರಳಿಸುತ್ತದೆಂಬ ಆತ್ಮವಿಶ್ವಾಸ ಆ ಪುಟ್ಟ ಗಿಡಕ್ಕಿದೆ. ನೆಲದೊಂದಿಗೆ ಬೇರುಕಚ್ಚಿ ನಿಂತ ಪ್ರತಿ ಸಮಾಜ ಸಂಸ್ಕೃತಿಗೂ ಈ ಆತ್ಮವಿಶ್ವಾಸವಿದ್ದರೆ ಯಾವ ಬೊಬ್ಬೆಯೂ ಬೇಕಾಗುವುದಿಲ್ಲ.

ಹಾಗೆ ನೋಡಿದರೆ, ಸಮಾಜ-ಸಂಸ್ಕೃತಿಯನ್ನು ಸದಾ ಜೀವಂತವಾಗಿಡುವುದೇ ಇಂಥ ಆಧುನಿಕತೆ, ಪ್ರಕೃತಿಯಂತೆ ಪರಿವರ್ತನೆಯನ್ನು ಧೈಯವಾಗಿಸಿಕೊಂಡ ಆಧುನಿಕತೆ, ಭೂತವನ್ನು ಸಮಾಧಿಯಾಗಿಸುತ್ತಲೇ ಆ ಸಮಾಧಿ ಮಣ್ಣಿನಲ್ಲೇ ವರ್ತಮಾನವನ್ನು ಚಿಗುರಿಸುತ್ತಿರುತ್ತದೆ. ಮುಂದೆ ಇದೇ ವರ್ತಮಾನವನ್ನು ಭವಿಷ್ಯದ ಭವಿತವ್ಯಕ್ಕಾಗಿ ಬಲಿಯಾಗಿ ಪಡೆಯುವ ಹೊಣೆಗಾರಿಕೆಯನ್ನೂ ಹೊತ್ತಿರುತ್ತದೆ!

ಈ ತೆರನಾದ ಸಾಪೇಕ್ಷ ಸಂಬಂಧಗಳು ಸಮಾಜ-ಸಂಸ್ಕೃತಿ-ಆಧುನಿಕತೆಯ ನಡುವೆ ತನಗೆ ತಾನೇ ಕುರುಡಾಗಿ ನಡೆಯುತ್ತಿರುತ್ತದೆಯೆಂದು ನಾವು ಭಾವಿಸುವಂತಿಲ್ಲ. ಇವುಗಳ ನಡುವೆ ರಿಲೇ ಕೋಲನ್ನು ಹೊತ್ತೋಡುವ ಕ್ರೀಡಾಪಟುವಿನ ಜೀವಂತಿಕೆ, ಕ್ರಿಯಾಶೀಲತೆ, ಉತ್ಸಾಹದ ದುಡಿಮೆ ಸದಾ ದುಡಿಯುತ್ತಲೇ ಇರಬೇಕಷ್ಟೆ. ಅಂದರೆ, ಮುಖ್ಯವಾಗಿ ಆಧುನಿಕತೆಯನ್ನಾಗಲಿ ಅಥವಾ ಇನ್ಯಾವುದೇ ಬಾಹ್ಯ ಒತ್ತಡಗಳನ್ನಾಗಲಿ ಯಾವುದೇ ಸಮಾಜ ಅಥವಾ ಸಂಸ್ಕೃತಿ ತನ್ನ ಆಂತರಿಕ ಅಗತ್ಯತೆಗೆ ತಕ್ಕಷ್ಟನ್ನು ಮಾತ್ರ ನ್ನ ಒಳಗೊಳ್ಳುವ ಜಾಣೆಯನ್ನು ಹೊಂದಿರಬೇಕು. ಇದರ ಹೊರತಾಗಿ ಮ್ಯೂಸಿಯಂನಲ್ಲಿ ಸಂಗ್ರಹಿಸಿಟ್ಟ ಸರಕಿನಂತೆ ಯಾವ ಸಮಾಜ-ಸಂಸ್ಕೃತಿಯನ್ನೂ ಸಂರಕ್ಷಿಸಲು ಬರುವುದಿಲ್ಲ.

ಇಷ್ಟಾಗಿಯೂ ಮಾವನ ಚರಿತ್ರೆಯಲ್ಲಿ ಸಶಕ್ತವಾಗಿ ತಲೆ ಎತ್ತಿದ್ದ ಸಮಾಜ- ಸಂಸ್ಕೃತಿಗಳಲ್ಲಿ ಕೆಲವು ಏಕೆ ಅಳಿದುಹೋದವು? ಆಂತರಿಕ ದುರ್ಬಲತೆಯೊಂದೇ ಅವುಗಳ ಅಳಿವಿಗೆ ಕಾರಣವೆ? ಬಾಹ್ಯದ ಯಾವ ದೈತ್ಯಶಕ್ತಿಯೂ ಪ್ರಬಲವಾದ ಸಮಾಜ ಸಂಸ್ಕೃತಿಯನ್ನು ನಾಶಮಾಡಲು ಸಾಧ್ಯವೇ ಇಲ್ಲವೇ? ನಾಶಕ್ಕಾಗಿಯೇ ನಡೆವ ದಾಳಿಗಳು ಚರಿತ್ರೆಯಲ್ಲಿ ಆಗಲಿಲ್ಲವೇ ಎಂಬೆಲ್ಲ ಪ್ರಶ್ನೆಗಳೂ ಇವೆ. ಮನುಷ್ಯನ ಉದ್ಧಟತನದಿಂದ ಹುಟ್ಟಿಕೊಳ್ಳುವ ಕೆಲವು ಪ್ರಶ್ನೆಗಳಿಗೆ ಆ ಉದ್ಧಟತನಕ್ಕಾಗಿನ ವಿಷಾದದಲ್ಲೇ ಉತ್ತರ ಇರಬಹುದೇನೋ!

ನಿಜ, ಸಮಾಜ-ಸಂಸ್ಕೃತಿಯಂತೆಯೇ ವಿಘಟನೆ, ವಿಕೃತಿಯೂ ನಮ್ಮದೇ ಬದುಕಿನ ಭಾಗ, ಮನುಷ್ಯನಿಗೆ ತನ್ನನ್ನು ಹಾಗೂ ಪ್ರಕೃತಿಯನ್ನು ಪರಿಷ್ಕರಿಸಿಕೊಳ್ಳುತ್ತ, ತನ್ನನ್ನು ತಾನೇ ಹಾಕಿಕೊಂಡ ನಿಯಮಗಳನ್ನು ಪಾಲಿಸುತ್ತ, ಸುಸಂಸ್ಕೃತ ಸಮಾಜವನ್ನು ಕಟ್ಟಿಕೊಳ್ಳುವ ಪ್ರಜ್ಞಾವಂತಿಕೆ ಇರುವಂತೆಯೇ ಜೀವಸಹಜವಾದ ಸ್ವಾರ್ಥ, ದುರಾಸೆಗಳೂ ಇವೆ. ಸಾಮಾಜಿಕ ನಿಯಮಗಳನ್ನು ತಾನೇ ಉಲ್ಲಂಘಿಸಿ ಇತರರ ಮೇಲೆ ಹೇರುವ, ತನ್ನ ಅನುಕೂಲಕ್ಕೆ ತಕ್ಕಂತೆ ಮತ, ಧರ್ಮ, ಸಮಾಜ, ಸಂಸ್ಕೃತಿಯನ್ನು ಬಳಸಿಕೊಳ್ಳುವ ಸಂಕುಚಿತತೆಯೂ ಇದೆ. ಸಭ್ಯತೆ ಹೋಗಿ, ಸಂಭಾವಿತತನದ ಮುಖವಾಡಗಳೇ ನಮ್ಮ ಉಳಿಯುವುದಿಲ್ಲ. 'ಅತ್ಯಾಧುನಿಕ ನಾಗರಿಕ ಸಮಾಜ' ಅಂದುಕೊಂಡ ದೇಶ, ಸಮುದಾಯ ಎಲ್ಲವೂ ಕೆಡತೊಡಗುತ್ತದೆ. ಸುಶಿಕ್ಷಿತ ಸಮಾಜವೂ 'ಸುಸಂಸ್ಕೃತ ಸಮಾಜವಾಗಿ ಕೂಡ ಪಪ್ಪಾಯಿ ಗಿಡದಂತೆ ಅಥವಾ ಹರಿದಾಸರು ಹೇಳುವ 'ಉತ್ತಮ ಪ್ರಭುತ್ವ ಲೊಳಲೊಟ್ಟೆ' ಎಂಬ ಮಾತಿನಂತೆ ತನ್ನ ನಾಜೂಕಿನ ಭಾರಕ್ಕೆ ತಾನೇ ಕುಸಿದುಬೀಳುತ್ತದೆ. ಇನ್ನು ಪಾವಿತ್ರ್ಯತೆಯ ಅಹಂಕಾರ ಕೂಡ ಸಮಾಜ-ಸಂಸ್ಕೃತಿಯ ನಾಶಕ್ಕೆ ಕಾರಣವಾಗಬಲ್ಲದು. ಅದು ಸುತ್ತಲಿನ ಅಥವಾ ಕಾಲ-ಕಾಲದ ಗಾಳಿ-ಬೆಳಕು-ನೀರನ್ನೂ ಸೇವಿಸದೆ 'ಮಡಿ'ಯಲ್ಲೇ ಮರಗಟ್ಟಿಹೋಗಿ ಮಡಿಯುತ್ತದೆ ಹಾಗು ಕೀಳರಿಮೆಯೂ ಆತ್ಮಹತ್ಯೆಯ ದಾರಿಯಲ್ಲಿ ಸಮಾಜ-ಸಂಸ್ಕೃತಿಯನ್ನು ಒಯ್ಯುತ್ತಿರುತ್ತದೆ.

ಆಧುನಿಕ ಪ್ರಜಾಪ್ರಭುತ್ವ ಯುಗದಲ್ಲೂ 'ಪ್ರಭುತ್ವವು' ಸಮಾಜ-ಸಂಸ್ಕೃತಿಯನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಒಡೆಯುವ, ಆಡಿಸುವ ಎಂದಿನ ಚಾಳಿಯನ್ನು ಬಿಟ್ಟಿಲ್ಲ. ಬದಲಾಗಿ ಇನ್ನಷ್ಟು ಸೂಕ್ಷ್ಮವಾಗಿಸಿಕೊಂಡಿದೆ. ಪ್ರಜಾಪ್ರಭುತ್ವ, ಪ್ರಜ್ಞಾವಂತರ ಪ್ರಭುತ್ವವಾಗುತ್ತಲೇ 'ಪ್ರಭುತ್ವ'ದ ಹಿಡಿತದಿಂದ ಸಡಿಲಗೊಂಡ ಸಮಾಜವಾಗಿ, ಸಂಸ್ಕೃತಿಯಾಗಿ ರೂಪುಗೊಳ್ಳಬೇಕು. ಪ್ರಭುತ್ವವನ್ನು 'ಲೊಳಲೊಟ್ಟೆ' ಎಂದು ಕರೆದ ಹರಿದಾಸರು ಕಟ್ಟಬಯಸಿದ್ದೂ, ಇಂಥ ನೈತಿಕ ಸಮಾಜ-ಸಂಸ್ಕೃತಿಯ 'ವಿಜಯನಗರ'ವನ್ನಾಗಿತ್ತು. ಅದಕ್ಕೆ 'ದಾಸ'ತನದ 'ವಿನಯ' ಸಾಕಾಗಿತ್ತೆ ಹೊರತು, ಪ್ರಭುತ್ವದ ಅಹಂಕಾರ ಬೇಕಿರಲಿಲ್ಲ. ಕರ್ನಾಟಕದಲ್ಲಾದ 'ಶರಣ'ರ ಚಳವಳಿಯಂತೂ 'ಪ್ರಭುತ್ವ'ದಿಂದ ಉತ್ತಮ 'ಸಮಾಜ'- 'ಸಂಸ್ಕೃತಿ' ಸಾಧ್ಯವಿಲ್ಲ ಎಂಬುದನ್ನು ತೋರಿತು. ಕೊಂಡಗುಳಿ ಕೇಶಿರಾಜ, ಬಸವಣ್ಣ, ಕನಕ, ಲೋಹಿಯಾ, ಗಾಂಧಿ... ಹೀಗೆ ಪ್ರಭುತ್ವ ಧಿಕ್ಕರಿಸಿ ಅದರ ಹಂಗಿಲ್ಲದೆ ಸಮಾಜ- ಸಂಸ್ಕೃತಿಯನ್ನು ಚೆನ್ನಾಗಿ ಕಟ್ಟಲು ಹೊರಟು ಯಶಸ್ವಿಯಾದವರ ಪರಂಪರೆಯೇ ನಮ್ಮ ಮುಂದಿದೆ. ಬುದ್ಧನ ಕಥೆ, ಆದಿಪುರಾಣದ ಭರತ-ಬಾಹುಬಲಿಯರ ಕಥೆಗಳಂತೂ ಪ್ರಭುತ್ವ ಮತ್ತು ಸಂಸ್ಕೃತಿ ಚಿಂತನೆಯ ಮೇಲೆ ಎಂದೆಂದಿಗೂ ಹೊಸ ಬೆಳಕನ್ನು ಬೀರಬಹುದಾಷ್ಟು ಪ್ರಖರವಾಗಿವೆ.

ಸಮಾಜ-ಸಂಸ್ಕೃತಿ-ಆಧುನಿಕತೆ-ಇವೆಲ್ಲವುಗಳ ಗೊಡವೆ ಮನುಷ್ಯನಿಗೆ ಬೇಕಾಗಿರುವುದೇ 'ಬಾಳುವ' ಮೌಲ್ಯಗಳ ಪ್ರತಿಪಾದನೆಗೆ, ಈ ಮೌಲ್ಯಗಳ ಶೋಧನೆ ಬೇರೆ ಬೇರೆ ವಿಧಾನಗಳಲ್ಲಿ ನಡೆದಾಗ ಒಂದೇ ಕಾಲಕ್ಕೆ ಭಿನ್ನ-ಭಿನ್ನ ಸಮಾಜ-ಸಂಸ್ಕೃತಿ ಹುಟ್ಟಿಕೊಂಡಿತು. ಅಲ್ಲದೆ ಒಂದೇ ಸಮಾಜ-ಸಂಸ್ಕೃತಿ ಕೂಡ ಬೇರೆ-ಬೇರೆ ಕಾಲಕ್ಕೆ ಪರಿಷ್ಕರಣೆಗೊಂಡು 'ಆಧುನಿಕ' ಅಥವಾ 'ಪ್ರಸ್ತುತ'ಗೊಳ್ಳುತ್ತ ಹೋಯಿತು.

ಮನುಷ್ಯನ ಜೀವನಕ್ರಮದಲ್ಲಿ ಆಂತರಿಕ-ಬಾಹ್ಯ, ಖಾಸಗಿ-ಸಾರ್ವಜನಿಕ, ನಗರ- ಗ್ರಾಮೀಣ, ಪ್ರಾಚೀನ-ಆಧುನಿಕ... ಈ ತೆರನಾದ ವಿಭಜನೆ... ಅಧ್ಯಯನದ ಅನುಕೂಲಕ್ಕೆ ವಿನಹ, ಇವೆಲ್ಲ ನೂರಕ್ಕೆ ನೂರು ಒಂದನ್ನು ಬಿಟ್ಟು ಇನ್ನೊಂದಿಲ್ಲ. ಎಲ್ಲರಲ್ಲೂ ಎಲ್ಲವುಗಳಲ್ಲೂ ಇರಬಹುದಾದ ವೈರುಧ್ಯಗಳನ್ನು ನಿತ್ಯ ಸಂಭಾಳಿಸಬೇಕಾದದ್ದು, ಇವೆಲ್ಲವುಗಳ ಒಟ್ಟೂ ಮೊತ್ತವಾದ ಸಮಾಜ ಹಾಗೂ ಸಂಸ್ಕೃತಿಯದ್ದು ಹಾಗೂ ಅಖಂಡವಾದ ಕಾಲದ್ದು, ನಿತ್ಯದ ಅನುಕೂಲಕ್ಕಾಗಿ ಕಾಲ-ದೇಶಗಳನ್ನು ಒಂದಾಗಿಸ ಹೊರಟ ಮನುಷ್ಯ ಇಂದು ಸಮಾಜ-ಸಂಸ್ಕೃತಿಯನ್ನು ನೋಡುವ ದೃಷ್ಟಿಕೋನವನ್ನೂ ಸಹಜವಾಗಿಯೇ ಪನರ್ರೂಢಿಸಿಕೊಳ್ಳಬೇಕಾದ ಅಗತ್ಯವಿದೆ.

ಸಾರಿಗೆ-ಸಂಪರ್ಕಗಳ ವಿಕಾಸದ ಕಾಲದಿಂದ ಹಿಡಿದು, ಇಂದಿನ ಜಾಗತೀಕರಣದ 'ಗ್ಲೋಬಲ್ ವಿಲೇಜ್'ನ ಕಾಲದವರೆಗಿನ ಸಮಾಜ-ಸಂಸ್ಕೃತಿ ಹಾಗೂ ಆಧುನಿಕತೆಯ ನಡುವಿನ ಸಂಬಂಧದಲ್ಲಾದ ಸ್ಥಿತ್ಯಂತರ, ರೂಪಾಂತರಗಳೇ ಇಂದಿನ ಅಧ್ಯಯನದ ಅನಂತ ದಾರಿಗಳಿಗೆ ದಿಕ್ಕೂಚಿಯಾಗಬಲ್ಲವು. ಈ ಕಾರಣಕ್ಕಾಗಿಯೇ ಇಂದು ಸಮಾಜ- ಸಂಸ್ಕೃತಿ ಮತ್ತು ಆಧುನಿಕತೆ ಎಂಬ ಈ ಮೂರು ಪರಿಕಲ್ಪನೆಗಳು ವ್ಯಾಪಕವಾದ ಅರ್ಥ ಸಾಧ್ಯತೆಗಳನ್ನು ಹೊತ್ತು ಬಳಲುತ್ತಿವೆ.

ಸಮಾಜ-ಸಂಸ್ಕೃತಿಗಳಲ್ಲಿ ವ್ಯಾಪಕವಾದದ್ದು ಯಾವುದು? ಒಂದೇ ಸಮಾಜದಲ್ಲಿ ಭಿನ್ನ ಸಂಸ್ಕೃತಿಗಳು ರೂಪುಗೊಂಡಂತೆ, ಹಲವಾರು ಸಮಾಜಗಳು ಏಕ ಸಂಸ್ಕೃತಿಯ ಪ್ರತಿರೂಪವಾಗಿಯೂ ಇರಬಲ್ಲವು. ಆಧುನಿಕತೆಯ ಪರಿಕಲ್ಪನೆಯೂ ಈ ಮೊದಲು ಹೇಳಿದಂತೆ, ಕಾಲ-ದೇಶಗಳ ಹಂಗಿಲ್ಲದೆ ರೂಪುಗೊಳ್ಳಬಹುದು. ಸಮಾಜ ಸಂಸ್ಕೃತಿಯೊಂದರ ಆಂತರಿಕ ಅಗತ್ಯತೆಯಾಗಿ ಬಾರದ ಆಧುನಿಕತೆಯು ಕೇವಲ ಭ್ರಮಾತ್ಮಕವಾದ ಬಾಹ್ಯರೂಪಿ, ಥಳುಕಿನದ್ದಾಗಿರಬಹುದು. ಇಂದು ಜಾಗತಿಕವಾಗಿ ಪೂರ್ವ-ಪಶ್ಚಿಮಗಳ ಸಂಪರ್ಕವು ತಂದ ಆಧುನಿಕತೆಯ ಸ್ವರೂಪವು ಇದೇ ತೆರನಾದದ್ದು. ಈ ಆಧುನಿಕತೆ ನಮ್ಮ ಆಯಾ ಪ್ರದೇಶದಲ್ಲಿನ ಸಮಾಜ-ಸಂಸ್ಕೃತಿಯೊಂದಿಗಿನ ರಕ್ತಗತ ಸಂಬಂಧಗಳಿಂದ ಬೇರ್ಪಟ್ಟಿರುವುದನ್ನು ಕಾಣುತ್ತಿದ್ದೇವೆ. ಪಶ್ಚಿಮದ ಕುರುಡು ಅನುಕರಣೆ ಯೊಂದೇ ಆಧುನಿಕತೆ ಎಂಬ ಸಮುದಾಯದ ಸಂಸ್ಕೃತಿಯು ತನ್ನ ಪ್ರಜ್ಞಾವಂತಿಕೆಯನ್ನು ಕಳೆದುಕೊಳ್ಳುತ್ತ ಹೋಗಬೇಕಾಗುತ್ತದೆ. ಇದನ್ನೇ ಅಡಿಗರು-

'ಪಡುವಣದ ಗಾಳಿ ಬೀಸಿದರೆ ತೂಗುವುದು ಅಟ್ಟೆ;
ಎಂಥ ಮಾರ್ದನಿ, ನಕಲು ಕುಣಿತ!
ಎಂದು ವಿಷಾದದಿಂದ ಹೇಳಿದರು. ಹಾಗೆಯೇ ಕಾಲದ ದೃಷ್ಟಿಯಿಂದಲೂ ಅವರು-
'ಇತ್ತು'ಗಳ ಧ್ವಜವ ಹಿಡಿದೆತ್ತಿ ನಿಲ್ಲಿಸೋ ಮಗು,
ಇದೆ ಎಂಬ ಹೃದಯವಿದ್ರಾವದ ಕೂಗು ನಿನಗೆ ಬೇಡ” ಎಂದು ಹೇಳುತ್ತ, ಹೊಸ ಪೀಳಿಗೆಯನ್ನು ಎಚ್ಚರಿಸುತ್ತ 'ಕಟ್ಟುವೆವು ನಾವು ಹೊಸ
ನಾಡೊಂದನ್ನು' ಎಂಬ ಉತ್ಸಾಹವನ್ನು ಜಿಡ್ಡುಗಟ್ಟಿದ ಕಾಲಕ್ಕೆ ತುಂಬಿದರು.

ಮತ, ಧರ್ಮ, ಜಾತಿ, ದೇಶ, ಪ್ರದೇಶ, ಕಾಲ, ದಿಕ್ಕು-ದೆಸೆಗಳ್ಯಾವವೂ ಸಮಾಜ ಸಂಸ್ಕೃತಿ-ಆಧುನಿಕತೆಯನ್ನು ತನಗೆ ತಾನೇ ರೂಪಿಸಲಾರವು. ಎಲ್ಲ ಕಾಲ-ಪ್ರದೇಶಗಳ ಜೀವ ಚೈತನ್ಯಗಳ ಕ್ರಿಯಾಶೀಲ, ಸಂವೇದನಾಶೀಲ ತುಡಿತ ಮಾತ್ರ ತನಗರಿವಿಲ್ಲದೆ ಈ ಮೂರೂ ಪರಿಕಲ್ಪನೆಗಳ ಬೀಜವಾಗಬಲ್ಲುದು. ತನ್ನ ತನ್ನ ಕಾಲದ ನೆಲ-ನೀರು- ಗಾಳಿಯ ಸಂಪರ್ಕವನ್ನುಂಡು ಮೊಳೆತು ಹಸನಾಗಿ ಫಲಿಸಬಲ್ಲವು.

ಇಂದಿನ ಸಮಸ್ಯೆಯಿರುವುದು, 'ಅನೇಕ'ವನ್ನು 'ಏಕ'ವಾಗಿಸುವ ಮತ್ತು ವೈವಿಧ್ಯ `ಸಮಾಜ'ವನ್ನು 'ಅಸಮಾನವಾಗಿಸುವ ಹಟದಲ್ಲಿ. ಬಾಹ್ಯವಾಗಿ ಕಾಣುತ್ತಿರುವ ಸಮಾಜ, ಸಂಸ್ಕೃತಿ, ಆಧುನಿಕತೆಯ ರೂಪಗಳನ್ನು ಪ್ರಕೃತಿಯಂತೆ ಅದರ ವೈವಿಧ್ಯದ, ಅನೇಕತೆಯ ಭಾಗವಾಗಿಯೇ ನೋಡುವ 'ಸಮಾನ ಮನಸ್ಸು ಎಲ್ಲರಿಗೂ ಬೇಕು. ಅದಿಲ್ಲದಿದ್ದರೆ ಶ್ರೇಷ್ಠ ಕನಿಷ್ಠಗಳ ಅಸಮಾನ ಮನಸ್ಸು ಮನುಷ್ಯನೇ ಕಟ್ಟಿದ ಸಮಾಜವನ್ನೂ ಸಂಸ್ಕೃತಿಯನ್ನೂ ಆಧುನಿಕತೆಯನ್ನೂ ಛಿದ್ರಗೊಳಿಸುತ್ತದೆ. ಈ ಕಾರಣಕ್ಕಾಗಿಯೇ ಸಮಾಜ-ಸಂಸ್ಕೃತಿ-ಆಧುನಿಕತೆಗಳ ನಡುವಿನ ಅಂತಃಸಂಬಂಧಗಳನ್ನು, ಮನುಷ್ಯ ಸ್ವಾರ್ಥ ವಿಕಾರಗಳನ್ನು ಬದಿಗಿಟ್ಟು ಮರುಚಿಂತನೆಗೆ ಒಳಪಡಿಸಬೇಕಾದ ತುರ್ತು ಹಿಂದೆಂದಿಗಿಂತ | ಹೆಚ್ಚಿಗೆ ಇದೆ. ಏಕೆಂದರೆ, ಇದು ಒಟ್ಟಾರೆಯಾಗಿ ಪ್ರಕೃತಿ ಮತ್ತು ಮನುಷ್ಯ ಸಂಬಂಧಗಳು ಹದಗೆಡುತ್ತಿರುವ 'ಆಧುನಿಕ ಕಾಲವಾಗಿದೆ. ಜೊತೆಗೆ ದೈಹಿಕವಾಗಿ 'ವಿರಾಮ'ವಿದ್ದರೂ ಮಾನಸಿಕವಾಗಿ ಒಂದಿಷ್ಟು ಬಿಡುವು ಅಥವಾ 'ಬಿಡುಗಡೆ' ಏಕಿಲ್ಲ ಎಂದು ನಾವೆಲ್ಲರೂ ಪ್ರಶ್ನಿಸಿಕೊಳ್ಳುತ್ತಿರುವ ಕಾಲವಾಗಿದೆ.

 

MORE FEATURES

ಮರೆತು ಹೋದ ವಾಸ್ತವಗಳಿಗೆ ಬರಹದ ರೂಪ ಕೊಟ್ಟಿರುವುದು ಆಕಸ್ಮಿಕ: ಶ್ರೀಧರ್ ನಾಯಕ್

21-10-2024 ಬೆಂಗಳೂರು

“ನಾನು ಹತ್ತು ಹಲವು ಹವ್ಯಾಸಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಪುಸ್ತಕಗಳ ಓದು, ಪ್ರವಾಸ, ಛಾಯಾಚಿತ್ರಗ್ರಹಣ, ಇಂಗ್ಲಿ...

'ಸದರಬಜಾ‌ರ್' ಕಾದಂಬರಿಯ ವಸ್ತು ಎಂಬತ್ತನೆಯ ದಶಕದ್ದು

21-10-2024 ಬೆಂಗಳೂರು

“ಬೃಹತ್ ಕಾದಂಬರಿಯ ರಚನೆಯನ್ನು ಕೈಗೆತ್ತಿಕೊಳ್ಳುವ ಮುನ್ನ ಕ್ರಿಕೆಟ್ ಪರಿಭಾಷೆಯಲ್ಲಿ ಹೇಳುವಂತೆ, ಟೆಸ್ಟ್ ಕ್ರಿಕೆಟ...

ಹೂವು-ಹಣ್ಣು-ಹಸಿರು ತರಕಾರಿಗಳಿಲ್ಲದ ಜೀವನ ಬೇಗೆಯ ಬರಡು..

20-10-2024 ಬೆಂಗಳೂರು

“ಕಾಡು ನಾಡಾಗುತ್ತಿದೆ, ಹೊಲಗದ್ದೆಗಳು ನಿವೇಶನಗಳಾಗುತ್ತಿವೆ. ನೆಲದ ಕಸುವು ಇಲ್ಲವಾಗುತ್ತಿದೆ. ಬಗೆಬಗೆಯ ಹಣ್ಣು, ತ...