Date: 02-04-2024
Location: ಬೆಂಗಳೂರು
ಸಾಹಿತ್ಯದಲ್ಲಿನ ಅತ್ಯುತ್ತಮ ಸಾಧನೆಗಾಗಿ ಕೊಡುವ ಜಾಗತಿಕ ಪ್ರಶಸ್ತಿಯ ಅಂತಿಮ ಸುತ್ತಿಗೆ ಕನ್ನಡದ ಖ್ಯಾತ ಲೇಖಕಿ ಮಮತಾ ಜಿ. ಸಾಗರ ಅವರನ್ನು ಭಾರತದಿಂದ ಆಯ್ಕೆ ಮಾಡಲಾಗಿದೆ.
ಸಾಹಿತಿಗಳ ಜಾಗತಿಕ ಸಂಘಟನೆ- ವರ್ಲ್ಡ್ ಆರ್ಗನೈಜೇಷನ್ ಆಫ್ ರೈಟರ್ಸ್ (WOW) ಸ್ಥಾಪಿಸಿರುವ ಈ ಪ್ರಶಸ್ತಿಯನ್ನು 2024 ಏಪ್ರಿಲ್ 6ರಂದು ನೈಜೀರಿಯಾದ ಅಬುಜಾದಲ್ಲಿ ಪ್ರದಾನ ಮಾಡಲಾಗುತ್ತಿದೆ.
ಮುಂಬರುವ ದಿನಗಳಲ್ಲಿ ಸಂಸ್ಕೃತಿ, ಸಾಹಿತ್ಯ ಹಾಗೂ ಆಧ್ಯಾತ್ಮಿಕ ಮೌಲ್ಯಗಳನ್ನು ಮಾನವೀಯತೆಯ ಬುನಾದಿಯ ಮೇಲೆ ಸ್ಥಾಪಿಸಿ ಶಾಂತಿ ಹಾಗೂ ಸೌಹಾರ್ದತೆಯನ್ನು ಬಯಸುವ ಜಗತ್ತಿನ ಬರಹಗಾರರ ಕ್ರಿಯಾಶೀಲ ಪ್ರಯತ್ನಗಳನ್ನು ಕಲೆ ಹಾಕುವುದು ಈ ಪ್ರಶಸ್ತಿಯ ಉದ್ದೇಶ. ಇದೆ ಹಿನ್ನೆಲೆಯಲ್ಲಿ ಸಾಹಿತಿಗಳ ಜಾಗತಿಕ ಸಂಘಟನೆಯೂ ಶ್ರಮಿಸುತ್ತಿದ್ದು, ಇದೇ ಮೊದಲ ಬಾರಿಗೆ ಸಾಹಿತ್ಯ ಕ್ಷೇತ್ರದಲ್ಲಿನ ಸಾಧನೆಯನ್ನು ಗುರುತಿಸಿ ಗೌರವಿಸಲು 'ಡಬ್ಲ್ಯು.ಒ.ಡಬ್ಲ್ಯು- ಜಾಗತಿಕ ಸಾಹಿತ್ಯ ಪ್ರಶಸ್ತಿಯನ್ನು ಸ್ಥಾಪಿಸಿದೆ.
ಈ ಪ್ರಶಸ್ತಿ ಸಮಾರಂಭವನ್ನು ಪ್ಯಾನ್ ಆಫ್ರಿಕನ್ ಕಂಟ್ರೀಸ್ ಅಸೋಸಿಯೇಶನ್ ಆಫ್ ರೈಟರ್ಸ್, ಅಸೆಂಬ್ಲಿ ಆಫ್ ಯುರೇಷಿಯನ್ ಪೀಪಲ್ಸ್, ರಷ್ಯನ್ ಅಕಾಡೆಮಿ ಆಫ್ ಆರ್ಟ್ಸ್ ಜಂಟಿಯಾಗಿ ಹಮ್ಮಿಕೊಂಡಿವೆ.
ಮಮತಾ ಜಿ. ಸಾಗರ
ಮಮತಾ ಸಾಗರ ಕನ್ನಡದ ಕವಿ, ಭಾಷಾಂತರಕಾರರು, ನಾಟಕಕಾರರಾಗಿದ್ದು, ಶೈಕ್ಷಣಿಕ ಕ್ಷೇತ್ರದಲ್ಲಿ ಮಹತ್ತರವಾದ ಕೊಡುಗೆಯನ್ನು ನೀಡಿದ್ದಾರೆ. ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದಿಂದ ಪಿಎಚ್ ಡಿ ಪದವಿಯನ್ನು ಪಡೆದು, ಬೆಂಗಳೂರು ವಿ.ವಿಯ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಅಧ್ಯಾಪಕರಾಗಿ ಒಂಬತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿರುತ್ತಾರೆ. ಪ್ರಸ್ತುತ ಮಣಿಪಾಲ್ ವಿ.ವಿಯ ಸೃಷ್ಟಿ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ, ಸೃಜನಾತ್ಮಕ ಬರವಣಿಗೆ ಅಧ್ಯಯನದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರ ಪ್ರಕಟಿತ ಬರಹಗಳು:
ಕವಿತಾ ಸಂಕಲನ: ಕಾಡ ನವಿಲಿನ ಹೆಜ್ಜೆ, ನದಿಯ ನೀರಿನ ತೇವ, ಹೀಗೆ ಹಳೆಯ ಮೇಲೆ ಹಾಡು, ಮತ್ತು ಹೈಡ್ ಅಂಡ್ ಸೀಕ್ ಎಂಬ ಇಂಗ್ಲಿಷ್ ಭಾಷಾಂತರವನ್ನೊಳಗೊಂಡ ಕನ್ನಡ ಕವಿತಾ ಸಂಕಲನ.
ನಾಟಕ: ಚುಕ್ಕಿ ಚುಕ್ಕಿ ಚಂದಕ್ಕಿ, ಮೈಯ್ಯೇ ಭಾರ ಮನವೇ ಭಾರ. ನಾಟಕದ ಭಾಷಾಂತರ - Swing of Desire, ರಾಜಕುಮಾರಿ ಕಥೆ, ಆ ಒಂದು ರಾತ್ರಿ
ಅಂಕಣ ಬರಹ: ಇಲ್ಲಿ ಸಲ್ಲುವ ಮಾತು
ವಿಮರ್ಶಾ ಬರಹ: ಮಹಿಳಾ ವಿಷಯ. ಲಿಂಗ, ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿ ಕುರಿತ ಕನ್ನಡ ಮತ್ತು ಇಂಗ್ಲೀಷ್ ಬರಹಗಳ ಸಂಕಲನ.
ಪ್ರಬಂಧ: ಕಲಾವಿದ ಎಸ್.ಎಸ್. ಮುನೋಳಿ, ಲಲಿತಕಲಾ ಅಕಾಡೆಮಿಯಿಂದ ಪ್ರಕಟಿತವಾಗಿದೆ.
ಹಾಡು: ಗೌರಿ ಲಂಕೇಶರನ್ನು ನೆನೆದು ಬರೆದ ‘ಗೌರಿಗೆ’ ಹಾಡು ಜನಪ್ರಿಯವಾಗಿದೆ.
ಫಯಾಜ್ ಅಹಮದ್ ಫಯಾಜರ ‘ಹ್ಯಾಮ್ ದೇಖೇ೦ಗೆ’ ಕವಿತೆಯ ತರ್ಜುಮೆ, 'ನಾವು ನೋಡೋಣ' - CAA ಪ್ರತಿಭಟನೆಯ ಸಮಯದಲ್ಲಿ ವೈರಲ್ ಆಗಿತ್ತು. ಇವರು ಬರೆದ ನ್ಯಾಯ ಹಾಡುಗಳನ್ನು ಪಲ್ಲವಿ ಎಂ.ಡಿ ಹಾಡಿರುತ್ತಾರೆ.
ತರ್ಜುಮೆ: ಎಲಿಫ್ ಶಫಾಕ್ ಅವರ ಕಾದಂಬರಿ Forty Rules of love ನ ಕನ್ನಡಾನುವಾದ ‘ಪ್ರೀತಿಯ ನಲವತ್ತು ನಿಯಮಗಳು’ ಗೆ ಕುವೆಂಪು ಭಾಷಾ ಭಾರತಿ ಪ್ರಶಸ್ತಿ ದೊರಕಿದೆ.
ತರ್ಜುಮೆ ಮಾಡಲಾದ ಸ್ಲೊವೇನಿಯನ್ ಕವಿತೆ ಮತ್ತು ಕಥೆಗಳ ಸಂಕಲನವನ್ನು ಸಂಪಾದಿಸಿ ಪ್ರಕಟಿಸಿದ್ದಾರೆ.
ಡಾಂಟೆಯ ಡಿವೈನ್ ಕಾಮಿಡಿಯ ಕ್ಯಾಂಟೋಸ್ ೧೫ರ ಕನ್ನಡಾನುವಾದವನ್ನು ಇಟಲಿಯ ಲಿಟಲ್ ಮ್ಯೂಜಿಯಂನಲ್ಲಿ ಪ್ರಸ್ತುತ ಪಡಿಸಿದ್ದಾರೆ.
ಕನ್ನಡದ ಕೆಲಸಕ್ಕಾಗಿ ಚಾರ್ಲ್ಸ್ ವಾಲೇಸ್ ಫೆಲೋಶಿಪ್ ಸಿಕ್ಕಿರುವ ಮೊದಲ ಅಭ್ಯರ್ಥಿ ಇವರು. ಈ ಫೆಲೋಶಿಪ್ ನಲ್ಲಿ ನೂರು ಪ್ರತಿರೋಧ ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
ಇಟಲಿಯ ಪಿಕೋಲೋ ಮ್ಯೂಸಿಯೋ ದೆಲಾ ಪೋಯೆಸೀಯಯೆಂಬ ಪೊಯೆಟ್ರಿ ಮ್ಯೂಸಿಂನಲ್ಲಿ ಇವರು ಆಯೋಜಿಸಿರುವ ಕವಿತಾ ಇನ್ಸ್ಟಾಲೇಷನ್ನುಗಳು ೨೦೨೦ಯಲ್ಲಿ ಪ್ರದರ್ಶನಗೊಂಡಿವೆ.
ಮಲೇಷಿಯಾದಲ್ಲಿ ಕಾಮನ್ ವೆಲ್ತ್ ಫೌಂಡೇಶನ್ನಿಗೆ ಕಾವ್ಯಾಗಾರವನ್ನು ಆಯೋಜಿಸಿದ್ದಾರೆ.
ಮ್ಯಾಂಚೆಸ್ಟರ್, ಹೆಲ್ಸಿಂಕಿ, ಕೊಲಂಬೋ, ಲಂಡನ್, ನಾರಿಚ್, ವೇಲ್ಸ್ ಮುಂತಾದ ಕಡೆಗಳಲ್ಲಿ ಇವರು ಕಾವ್ಯಾಗಾರವನ್ನು ನಡೆಸಿಕೊಟ್ಟದ್ದಾರೆ.
ಇವರ ಕವಿತೆಗಳು ಭಾರತೀಯ ಭಾಷೆಗಳಿಗೆ ತರ್ಜುಮೆಯಾಗಿರುವುದಲ್ಲದೆ, ಅಂತರರಾಷ್ಟ್ರೀಯ ಮಟ್ಟದಲ್ಲಿ ವೆಲ್ಷ್, ಸ್ಪಾನಿಷ್, ಜರ್ಮನ್, ಇಟಾಲಿಯನ್, ಸ್ಲೊವೇನಿಯನ್, ಅರಾಬಿಕ್, ಫ್ರೆಂಚ್, ಗ್ಯಾಲೀಷಿಯನ್, ರುಮೇನಿಯನ್, ರಷ್ಯನ್, ಮಾಲ್ಟೀಸ್, ಸಿನ್ಹಳ, ಸ್ವೀಡಿಷ್, ಇಂಗ್ಲೀಷ್, ಜಪನೀಸ್ , ಚೈನೀಸ್, ವಿಯೆಟ್ನಾಮೀಸ್ ಹೀಗೆ ಹಲವಾರು ಭಾಷೆಗಳಿಗೆ ತರ್ಜುಮೆಯಾಗಿದೆ.
ಸದಸ್ಯತ್ವ : ಕಾಮನ್ವೆಲ್ತ್ ರೈಟರ್ಸ್ ಟ್ರಾನ್ಸ್ಲೇಟರ್ಸ್ ನೆಟ್ವರ್ಕ್, ಭಾಷಾಂತರಕ್ಕೆ ಸಂಬಂಧಿಸಿದಂತೆ - ಲಿಟರೇಚರ್ ಅಕ್ರಾಸ್ ಫ್ರಾಂಟಿಯರ್ಸ್ (UK), ಪೊಯೆಟ್ಸ್ ಟ್ರಾನ್ಸ್ಲೇಟಿಂಗ್ ಪೊಯೆಟ್ಸ್ (Germany), ಮೆಲ್ಡಿಂಗ್ ವಾಯ್ಸಸ್ (UK), ಕಾಮನ್ವೆಲ್ತ್ ಫೌಂಡೇಶನ್ (UK) ಕಾವ್ಯ ಸಂಜೆ ಎಂಬ ಸಾಮುದಾಯಿಕ ಕಾವ್ಯ ಗುಂಪನ್ನು ಹುಟ್ಟುಹಾಕಿ ಕನ್ನಡ ಕವಿತೆಗಳನ್ನು ಪ್ರಸ್ತುತ ಪಡಿಸುತ್ತಿದ್ದಾರೆ. ಮ್ಯೂಜ್ ಇಂಡಿಯಾ ಅನ್ಲೈನ್ ಪತ್ರಿಕೆಗೆ ಕನ್ನಡ ಸಂಪಾದಕರಾಗಿ ಹಲವಾರು ವರುಷಗಳಿಂದ ಕನ್ನಡ ಸಾಹಿತ್ಯ ಸಂಸ್ಕೃತಿಯ ಕುರಿತು ಇಂಗ್ಲಿಷಿನಲ್ಲಿ ಬರೆಯುತ್ತ, ಬರೆಸುತ್ತಾ ಬಂದಿದ್ದಾರೆ.
ಮಮತಾ ಅವರು ಆಮಂತ್ರಣದ ಮೇಲೆ ಕಾವ್ಯ ಹಬ್ಬಗಳಿಗೆ ಹಾಗು ಕಾವ್ಯಾಗಾರಗಳಿಗೆ ವಿದೇಶಗಳಲ್ಲಿ ಭಾರತವನ್ನು ಪ್ರತಿನಿಧಿಸಿ ಕನ್ನಡ ಕವಿತೆಗಳನ್ನು ಪ್ರಸ್ತುತ ಪಡಿಸಿದ್ದಾರೆ. ಸೌತ್ ಆಫ್ರಿಕಾ, ಕೊಲಂಬಿಯಾ, ನಿಕರಾಗ್ವ, ಮೊದಲಾದ ದೇಶಗಳಿಗೆ ಭೇಟಿ ನೀಡಿ ಕನ್ನಡದ ಸೊಗಡನ್ನು ಅಲ್ಲಿ ಕವಿತೆ, ಭಾಷಣ, ಮಾತುಕತೆಗಳ ಮೂಲಕ ಹಂಚಿಕೊಂಡಿದ್ದಾರೆ.
ಕವಿ ಮಮತಾ ಸಾಗರ ಅವರು ಬೆಂಗಳೂರಿನಲ್ಲಿ ನೆಲಸಿ, ವಿಶ್ವದಾದ್ಯಂತ ಕನ್ನಡದ ಸೇವೆ ಸಲ್ಲಿಸುತ್ತಿದ್ದಾರೆ.
ಕಲಬುರಗಿ: ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ಕೊಡಮಾಡುವ 23ನೇ ವರ್ಷದ `ಅಮ್ಮ ಪ್ರಶಸ್ತಿ&...
ಬೆಂಗಳೂರು: ಪವಿತ್ರಾ ಇಂಟರ್‌ನ್ಯಾಷನಲ್ ಮೂವೀಮೇಕರ್ಸ್ ಅಡಿಯಲ್ಲಿ ಛಲವಾದಿ ಕುಮಾರ್ ಅವರು ನಿರ್ಮಿಸಿರುವ ಕನ್ನಡದ ಬ...
ಬೆಂಗಳೂರು: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹಾಗೂ ರಮಣಶ್ರೀ ಪ್ರತಿಷ್ಠಾನದಿಂದ ಕೊಡಮಾಡಲಾಗುವ 2024ನೇ ಸಾಲಿನ 'ರ...
©2024 Book Brahma Private Limited.