ಕಾಲುದಾರಿಯ ಕವಿಯ ಅ_ರಾಜಕೀಯ ಕಾವ್ಯ

Date: 03-10-2020

Location: ಬೆಂಗಳೂರು


ಗಹನಾತಿಗಹನ ಸಂಗತಿಗಳನ್ನು ತುಂಬ ಸರಳವೆಂಬಂತೆ ಹೇಳುವುದು ಹಾಗೂ ನಮ್ಮ ದೈನಂದಿನ ಅನುಭವಗಳ ಅತಿ ಸಾಮಾನ್ಯ ಲೌಕಿಕ ವಿವರಗಳಲ್ಲೇ ಛಕ್ಕನೆ ಏನೋ ಮಿಂಚಿದಂತೆ ಬೆರಗುಗೊಳಿಸುವುದು ಕೆ.ವಿ. ತಿರುಮಲೇಶ್ ಅವರ ಕಾವ್ಯದ ವಿಶೇಷ ಎನ್ನುವ ಲೇಖಕಿ-ವಿಮರ್ಶಕಿ ಡಾ.ಗೀತಾ ವಸಂತ ಅವರು ಯಾವುದನ್ನೂ ನೇರವಾಗಿ ಘೋಷಿಸದೇ ಅತಿಸೂಕ್ಷ್ಮ ವಿವರಗಳುಳ್ಳ ಕಾವ್ಯಚಿತ್ರಗಳ ಮೂಲಕ ತಂತಾನೇ ಹೊಳೆಯುವಂತೆ ಮಾಡುವುದು ಎನ್ನುತ್ತಾರೆ.

ಮನುಷ್ಯ ಜಗತ್ತಿನಾಚೆ ಜಿಗಿಯುವ ಕಾವ್ಯದ ನೋಟ ನಿಜಕ್ಕೂ ಕುತೂಹಲ ಮೂಡಿಸುತ್ತದೆ. ಮನುಷ್ಯರಾಗಿ ಲೋಕವನ್ನು ನೋಡುವುದಕ್ಕೆ ಎಷ್ಟೊಂದು ಮಿತಿಗಳಿವೆಯೆಂದು ಗೊತ್ತಾದ ಕ್ಷಣದಿಂದಲೇ ನಮ್ಮ ಜ್ಞಾನಮೀಮಾಂಸೆಯೂ ಬದಲಾಗಿ ಬಿಡುತ್ತದೆ. ನಾವು ಕಟ್ಟಿಕೊಂಡ ಪೂರ್ವಗ್ರಹಗಳೆಲ್ಲ ಕಳಚಿಬಿದ್ದು ಹೊಸದರ್ಶನ ನಮ್ಮದಾಗುತ್ತದೆ. ಮನುಷ್ಯನ ಅಹಂ ತನ್ನನ್ನು ಪ್ರಕೃತಿಯಿಂದ ಪ್ರತ್ಯೇಕಿಸಿ ನೋಡುವುದನ್ನು ಕಲಿತಾಗ ನಮ್ಮ ಜಗತ್ತು ಕುಬ್ಜವಾಗುತ್ತ ಹೋಯಿತು. ಸಹಜವಾಗಿಯೇ ನಮ್ಮ ಭಾಷೆಯೂ ಅದನ್ನೇ ಪ್ರತಿಫಲಿಸುತ್ತ ಹೋಯಿತು. ಸಿದ್ದ ನೋಟದ ಕ್ರಮಕ್ಕೆ ಹೊರತಾಗಿರುವ ಅರಿವನ್ನು ಸಿದ್ದ ಭಾಷೆಯಲ್ಲಿ ಹೇಳಲಾಗದ ತಳಮಳವನ್ನು ಅಲ್ಲಮನಂಥ ಅನುಭಾವಿಗಳು ಚರಿತ್ರೆಯುದ್ದಕ್ಕೂ ಎದುರಿಸುತ್ತಲೇ ಹೋಗಿದ್ದಾರೆ. ಭಾಷೆಯೆಂಬುದು ಪ್ರಾಣ ಘಾತಕ ಎನ್ನುತ್ತಾನೆ ಅಲ್ಲಮ. ಅದಕ್ಕೆಂದೇ ತನ್ನ ಅಭಿವ್ಯಕ್ತಿಗೆ ಬೆಡಗಿನ ನುಡಿಯನ್ನು ಆತ ಕಟ್ಟಿಕೊಳ್ಳುತ್ತಾನೆ. ಅರ್ಥದ ಚೌಕಟ್ಟುಗಳನ್ನು ಛಿದ್ರಗೊಳಿಸುವ ಈ ಪರಿ ನಮಗೆ ಕ್ರಾಂತಿಕಾರಕವೆನಿಸುತ್ತದೆ. ಹಿಂದಣ ಅನಂತವನು ಮುಂದಣ ಅನಂತವನು ಈ ಒಂದು ದಿನ ಒಳಕೊಂಡಿತ್ತು ಎಂಬುದಾಗಲೀ, ಕತ್ತಲೂ ಅದೇ ಬೆಳಕೂ ಅದೇ ಎಂಬ ಅವನ ಉಕ್ತಿಯಾಗಲೀ ನಮ್ಮನ್ನು ಒಂದುಕ್ಷಣ ದಿಗ್ಭ್ರಮೆಗೆ ದೂಡುವುದು ಸುಳ್ಳಲ್ಲ. ವೈರುಧ್ಯಗಳ ಮೂಲಕ ಅರಿಯುವುದು ನಮಗೆ ರೂಢಿಯಾಗಿದೆ. ಹಿಂದೆ-ಮುಂದೆ, ಕತ್ತಲು-ಬೆಳಕು ನಮಗೆ ವಿರುದ್ಧ ಪದಗಳು. ವೈರುಧ್ಯಗಳನ್ನು ಜೀರ್ಣಿಸಿಕೊಂಡ ಪ್ರಜ್ಞೆಗೆ ಮೂಲದಲ್ಲಿ ಒಂದೇ ಆಗಿರುವ ನೋಟ ಅತ್ಯಂತ ಸಹಜವಾದುದು. ಎಲ್ಲ ವಸ್ತುಗಳು ಮೂಲದಲ್ಲಿ ಒಂದೇ ವ್ಯತ್ಯಾಸವೆಂದರೆ ಶಬ್ದ ಎನ್ನುತ್ತಾರೆ ತಿರುಮಲೇಶರು. ಶಬ್ಧಾರ್ಥಗಳಲ್ಲಿ ಫಿಕ್ಸ್ ಆದ ನಮ್ಮ ಲೋಕಗ್ರಹಿಕೆಯ ಮಿತಿಯನ್ನು ಮೀರುವ ಮಾತುಗಳಿವು. ಕಾಲವೆಂಬುದು ಮನುಷ್ಯನ ಅಸ್ತಿತ್ವಕ್ಕೆ ಸಂಬಂಧಿಸಿದ್ದು. ನಾನು ಎಂಬುದು ಇರದಿದ್ದರೆ ಭೂತ ವರ್ತಮಾನ ಭವಿಷ್ಯತ್ತುಗಳೂ ಇಲ್ಲ. ಬದುಕಿನ ಕೊನೆಯಿಲ್ಲದ ಹರಿವಿನಲ್ಲಿ ನಮ್ಮ ಅರಿವು ತನಗೆ ದಕ್ಕಿದ್ದನ್ನು ಮಾತ್ರ ಬೊಗಸೆಯಲ್ಲಿ ತುಂಬಿಕೊಳ್ಳುತ್ತದೆ ಅಷ್ಟೇ. ಕಾವ್ಯವು ಈ ಸತ್ಯವನ್ನು ತಿಳದಿದ್ದರಿಂಲೇ ಅದು ವಿಶೇಷವೆನಿಸುವುದು. ತಾನು ತುಂಬಿಕೊಂಡಿದ್ದನ್ನು ಕಾಣಿಸಲು ಭಾಷೆಯನ್ನು ಕಸುವುಗೊಳಿಸಕೊಳ್ಳುತ್ತ ಹೋಗುವ ಕವಿಪ್ರತಿಭೆಯು ಕಾಣುವ ಹಾಗೂ ಕಟ್ಟುವ ಎರಡೂ ಸ್ತರಗಳಲ್ಲಿ ಸೂಕ್ಷ್ಮಗೊಳ್ಳಬೇಕಾಗುತ್ತದೆ. ಋಷಿಯಾಗದವ ಕವಿಯಾಗಲಾರ ಎಂದು ಹೇಳುವ ಹಿಂದೆ ಈ ಎಲ್ಲ ಸಂಗತಿಗಳಿವೆ. ಕವಿ ಬೇಂದ್ರೆ ಇದು ಮಂತ್ರ ಅರ್ಥಕೊಗ್ಗದ ಶಬ್ದಗಳ ಪವಣಿಸುವ ತಂತ್ರ ಎನ್ನುವಲ್ಲಿಯೂ ಇದೇ ಧ್ವನಿಯಿದೆ. ಮಾತು ಮಂತ್ರವಾಗಲು ನಮ್ಮ ನೋಟ ಸ್ವತಂತ್ರವಾಗುವ ಅವಷ್ಯಕತೆಯಿದೆ.

ಇತ್ತೀಚೆಗೆ ತಿರುಮಲೇಶರ ಕವಿತೆಗಳನ್ನು ಓದುತ್ತಿರುವಾಗ ಭಾಷೆ ಹಾಗೂ ನೋಟದ ಈ ಅಂತಃಸಂಬಂಧ ಮತ್ತಷ್ಟು ಸೃಜನಶೀಲವಾಗಿ ಗೋಚರಿಸಿತು. ಅವರ ಪ್ರಸಿದ್ದ ಕವಿತೆ ಮುಖಾಮುಖಿಯಲ್ಲೇ ಈ ಅನುಭವವನ್ನು ಕಾಣಬಹುದು. ಮೇಲೆ ತೋರದ ಮನುಷ್ಯನ ಅಸ್ತಿತ್ವದ ಸಿಕ್ಕುಗಳನ್ನು ಕವಿತೆ ರೂಪಕದಲ್ಲಿ ಸೆರೆಹಿಡಿಯುತ್ತದೆ. ಕವಿತೆಯಲ್ಲಿ ಕವಿಗೆ ಮುಖಾಮುಖಿಯಾಗುವ ಬೆಕ್ಕು ಅವನದೇ ಅಸ್ತಿತ್ವ. ಇದುವರೆಗೂ ಕವಿ ಮುಖಾಮುಖಿಯಾಗಿರದ ಆತನ ಮೂಲ ಅಹಂ ಅಚಾನಕ್ಕಾಗಿ ಎದುರಾಗುತ್ತದೆ. ತನ್ನನ್ನೇ ಗುರಾಯಿಸತೊಡಗಿದಾಗ ಅದು ಕೆರಳುತ್ತದೆ. ಸೆಟೆದ ಬಾಲ, ನಿಮಿರಿದ ಕೂದಲು, ಊರಿದ ಕಾಲುಗುರು.. ಒಟ್ಟಾರೆ ಹೂಡಿದ ಬಿಲ್ಲಿನಂತಿರುವ ಬೆಕ್ಕು ಕವಿಯ ಇಡೀ ದೃಷ್ಟಿಪರಿಧಿಯನ್ನೇ ಆಕ್ರಮಿಸಿಕೊಳ್ಳುತ್ತದೆ. ಆಗ ಕವಿಯು ಬೆಕ್ಕು ಬೇರೆಯಲ್ಲ ತಾನು ಬೇರೆಯಲ್ಲ ಹಾಗೂ ತಾವಿಬ್ಬರೂ ಇರುವ ಕಾಲ ಬೇರೆಯಲ್ಲ ಎಂಬ ಸ್ಥಿತಿಯನ್ನು ಕಾಣುತ್ತಾನೆ. ಏನನ್ನಾದರೂ ಕಾಣಬೇಕಾದರೆ ತನ್ನ ಹೊರತಾದ ಇನ್ನೊಂದು ಇರಬೇಕಲ್ಲ! ಇಲ್ಲಿಂದಲೇ ಆರಂಭವಾಗುವುದು ದ್ವಂದ್ವ. ತನ್ನೊಳಗಿನ ಇನ್ನೊಂದು ಮುಖವೇ ಆದ ಬೆಕ್ಕು ಹೀಗೆ ಪ್ರತ್ಯಕ್ಷವಾದಾಗ ಆಗುವ ಅಲ್ಲೋಲಕಲ್ಲೋಲವನ್ನು ಕವಿತೆ ಹೀಗೆ ಪ್ರತಿಮಿಸುತ್ತದೆ. ಬೇರೆಬೇರೆಯಾಗಿ ಕಾಣುವ ಬೆಕ್ಕು ಹಾಗೂ ಕವಿ ಮೂಲದಲ್ಲೆಲ್ಲೋ ಒಂದೇ ಆಗಿ ಕಾಣುವ ಚೋದ್ಯವಿಲ್ಲಿ ಸಂಭವಿಸಿದೆ.

ದಾರಿತಪ್ಪಿದಂತೆ ನಾನು ಚರಿತ್ರಪೂರ್ವ ಭೂಖಂಡಗಳಲ್ಲಿ
ಬಿದಂತೆ ಅಪರಿಚಿತ ಸಮುದ್ರಗಳಲ್ಲಿ. ಆದರೂ
ಎವೆಯಿಕ್ಕಿರಲಿಲ್ಲ ನಾನು. ಎವೆಯಿಕ್ಕಿರಲಿಲ್ಲ ಬೆಕ್ಕು
ಮನುಷ್ಯ ಮತ್ತು ಮೃಗಕ್ಕೆ ಮೂಲಭೂತವಾದ
ಯಾವುದೋ ಸ್ಥಿತಿವಿಶೇಷದಲ್ಲಿ ನಿಂತಿತ್ತು ನನ್ನೆದುರು
ಬೆಕ್ಕಿಗೆ ಬೆಕ್ಕೇ ಛಲವಾಗಿ (ಮುಖಾಮುಖಿ)

ಕಾಲದೇಶಗಳ ಆಚೆ ವಿಸ್ಮೃತಿಗೆ ಸಂದ ಯಾವುದೋ ಸ್ಥಿತಿಯನ್ನು ಈ ಗಳಿಗೆಯು ಉಂಟುಮಾಡುತ್ತದೆ. ಅದು ಮನುಷ್ಯ ಮತ್ತು ಮೃಗಕ್ಕೆ ಮೂಲಭೂತವಾದ ಸ್ಥಿತಿ. ಅವರಿಬ್ಬರೂ ಒಂದೇ ಆಗಿದ್ದ ಸ್ಥಿತಿ. ಇನ್ನೊಂದನ್ನು ಮಣಿಸುವ ಮೃಗೀಯ ಆನಂದ ಮನುಷ್ಯನನ್ನು ಕಾಲಾತೀತವಾಗಿ ಕಾಡಿದೆ. ಯುದ್ಧಗಳನ್ನು ಹೂಡಿದೆ. ಹಿಂಸೆಯಲ್ಲಿ ಗೆಲುವಿನ ನಗೆ ಬೀರಿದೆ. ಆದರೆ ನಿಜಕ್ಕೂ ಗೆಲ್ಲುವುದೆಂದರೇನು?. ನಮ್ಮ ಅಹಮ್ಮಿನ ಜೊತೆ ಸೆಣಸಿ ಗೆಲ್ಲಬಹುದೇ? ನಮ್ಮೊಳಗಿನ ಕ್ರೌರ್ಯವನ್ನು ಮೀರಬಹುದೆ?. ದೃಷ್ಟಿಯುದ್ದಕ್ಕೆ ನಿಂತ ಬೆಕ್ಕೇನೋ ಹೊರಟುಹೋಯಿತು. ಅದರ ಸೆಟೆದ ಮೈ ಸಡಿಲಾಯಿತು. ಬೆಕ್ಕಿನ ಗತಿಯಲ್ಲಿ ಹೊರಟೂಹೋಯಿತು. ಆದರೆ ಆದರೆ ನಮ್ಮೊಳಗೆ ನಮ್ಮನ್ನೇ ಮೀರಿ ಇರುವ ಈ ಬೆಕ್ಕನ್ನು ಮಣಿಸಿ ತನಗೆ ಸಿಕ್ಕಿದ್ದಾದರೂ ಏನೆಂದು ಯೋಚಿಸುವ ಕವಿ ಬೆಕ್ಕು ಹೊರಟುಹೋದಾಗ ತಾನೂ ಖಾಲಿಯಗುತ್ತಾನೆ. ಈ ಶೂನ್ಯ ಸ್ಥಿತಿಯಲ್ಲೇ ಅವನಿಗನಿಸುವುದು

ಗೆದ್ದರೆ ಗೆಲ್ಲಬೇಕು ಬಾಹುಬಲಿಯಂತೆ
ಬಿಟ್ಟುಕೊಡುವುದರಿಂದ.
ಒಂದು ಬೆಕ್ಕಿನ ಕಣ್ಣುಗಳಲ್ಲಿ ಇಷ್ಟೊಂದು ವಿಷಾದವಿರುತ್ತದೆ
ಎಂದು ನನಗೆ ಗೊತ್ತಿರಲಿಲ್ಲ.

ಗೆದ್ದಮೇಲೂ ಉಳಿಯುವ ವಿಷಾದಕ್ಕೆ ಏನೆನ್ನುವುದು?. ಇಡೀ ಕವಿತೆ ಇಲ್ಲಿ ಭರತ ಬಾಹುಬಲಿಯ ದೃಷ್ಟಿಯುದ್ದಕ್ಕೆ ಸಂಕೇತವಾಗುತ್ತದೆ. ದೃಷ್ಟಿ ಪಲ್ಲಟಕ್ಕೂ ಸಂಕೇತವಾಗುತ್ತದೆ. ಸತ್ಯದ ಅನುಭವವಾದ ಮೇಲೆ ಸೋಲುಗೆಲುವುಗಳು ವಿರುದ್ಧ ಸಂಗತಿಗಳಾಗಿ ಉಳಿಯುವುದಿಲ್ಲ. ತನ್ನ ಅಸ್ತಿತ್ವವು ಸೋಲು ಗೆಲುವು ಎರಡರಲ್ಲೂ ಇಲ್ಲವೆಂಬ ನಿರಾಳತೆಗೆ ತಲುಪುವುದು ಮನುಷ್ಯಮಾತ್ರರಿಗೆ ಸುಲಭವಲ್ಲ.

ತಿರುಮಲೇಶರ ಕವಿತೆಗಳ ಮಜಕೂರೆಂದರೆ ಇಂಥ ಗಹನಾತಿಗಹನ ಸಂಗತಿಗಳನ್ನು ತುಂಬ ಸರಳವೆಂಬಂತೆ ಹೇಳುವುದು. ನಮ್ಮ ದೈನಂದಿನ ಅನುಭವಗಳ ಅತಿ ಸಾಮಾನ್ಯ ಲೌಕಿಕ ವಿವರಗಳಲ್ಲೇ ಛಕ್ಕನೆ ಏನೋ ಮಿಂಚಿದಂತೆ ಬೆರಗುಗೊಳಿಸುವುದು. ಯಾವುದನ್ನೂ ನೇರವಾಗಿ ಘೋಷಿಸದೇ ಅತಿಸೂಕ್ಷ್ಮ ವಿವರಗಳುಳ್ಳ ಕಾವ್ಯಚಿತ್ರಗಳ ಮೂಲಕ ತಂತಾನೇ ಹೊಳೆಯುವಂತೆ ಮಾಡುವುದು. ಉದಾಹರಣೆಗೆ ಅವರ ಪೆಂಟಯ್ಯನ ಅಂಗಿ, ಬೆಲೂನು, ಒಂದು ಕಲ್ಲಂಗಡಿ ಹಣ್ಣನ್ನು ಕತ್ತರಿಸುವುದು ಮುಂತಾದ ಕವಿತೆಗಳು ನಮ್ಮನ್ನು ಈ ಬೆರಗಿಗೆ ದೂಡಿ ತಾವು ಮಜಾ ತೆಗೆದುಕೊಳ್ಳುತ್ತಿರುವಂತೆ ಅನಿಸುತ್ತದೆ. ಕಲ್ಲಂಗಡಿ ಹಣ್ಣನ್ನು ಹೆಚ್ಚುವ ಅನೇಕ ವಿಧಾನಗಳನ್ನು ಅತ್ಯಂತ ತತ್ಪರತೆಯಿಂದ ವಿವರಿಸುವ ಕವಿತೆ ಎಲ್ಲಕ್ಕಿಂತ ಮುಖ್ಯವಾದುದು ಯಾವುದೆಂದು ತಾನೇಕೆ ಹೇಳಲಿ? ಎಂಬ ಪ್ರಶ್ನೆಯಲ್ಲಿ ನಮ್ಮನ್ನು ಬಿಟ್ಟುಹೋಗುತ್ತದೆ. ಕವಿತೆ ಮುಗಿಯಿತೆಂದರೆ ಅದೇ ಆರಂಭವಿರಬಹುದೇ ಅನಿಸುವಂತೆ!. ಸೃಷ್ಟಿಸಹಜ ಅನೇಕವನ್ನು ಏಕಾಕೃತಿಗಿಳಿಸುವ ನಮ್ಮ ಹುನ್ನಾರಗಳಿಗೆ ಒಂದು ಏಟು ಬೀಳುತ್ತದೆ. ನೋಟಪಲ್ಲಟಗೊಳಿಸುವ ಈ ಮಾದರಿಯನ್ನು ಅವರ ಅನೇಕ ಕವಿತೆಗಳಲ್ಲಿ ಕಾಣುತ್ತಹೋಗುತ್ತೇವೆ. ಆಮೆ ಎಂಬ ಕವಿತೆಯಲ್ಲೂ ಇಂಥದೇ ನೋಟವಿದೆ. ಆಮೆ ಮೊಲದಂತಲ್ಲ, ಆನೆಯಂಥಲ್ಲ, ಏಡಿಯಂಥಲ್ಲ, ಮನುಷ್ಯನಂಥಲ್ಲ ಎನ್ನುತ್ತಲೇ ಯಾವುದನ್ನೂ ಹೋಲಿಸದೇ, ತುಲನೆಮಾಡದೇ ನೋಡುವ ದ್ವಂದ್ವ ರಹಿತ ಸ್ಥಿಯನ್ನು ಸುಮ್ಮನೇ ನಮ್ಮ ಮುಂದೆ ಹರವಿಬಿಡುತ್ತಾರೆ. ಮುಖ್ಯ ಅಮುಖ್ಯ ಎನ್ನುವುದೇ ಸಾಪೇಕ್ಷ. ಭಾಷೆಯನ್ನು ರಾಜಕಾರಣದ ಹತಾರವಾಗಿ ಬಳಸುವಾಗ ಅರ್ಥವು ಅಧಿಕೃತಗೊಳ್ಳುತ್ತದೆ. ನೋಟದ ಸ್ವಾತಂತ್ಯ್ರ ಅಳಿಯುತ್ತದೆ. ತಿರುಮಲೇಶರ ಕಾವ್ಯವನ್ನು ಅರಾಜಕವೆಂದಿದ್ದು ಈ ನೆಲೆಯಲ್ಲಿ.

ಮನುಷ್ಯನ ಅರಿವಿಗೊಂದು ಮಿತಿಯಿದೆ. ಜಗತ್ತನ್ನು ನೋಡುವ ಕ್ರಮದಿಂದ ಅದು ನಮ್ಮದಾಗುತ್ತದೆಯೇ ಹೊರತೂ ಅದು ಇರುವ ಕ್ರಮದಲ್ಲೇ ನಾವು ಕಾಣಲಾರೆವು. ಹಾಗೆ ಕಾಣಲು ಸಕಲ ಚರಾಚರಗಳ ಸಂವೇದನೆಗೆ ನೋಟವನ್ನು ತೆರೆದಿಡಬೇಕಾಗುತ್ತದೆ. ಆಗಲೇ ನಮ್ಮಿಂದ ನಮ್ಮನ್ನು ಬಿಡಿಸಿಕೊಳ್ಳುವುದು ಸಾಧ್ಯ. ಉದಾಹರಣೆಗೆ ಅವರ ಮರಗಳು ಎಂಬ ಕವಿತೆಯನ್ನು ನೋಡಬಹುದು.

ಪಾಪ ಮರಗಳು ಎಲ್ಲಿಗೂ ಹೋಗುವುದಿಲ್ಲ
ಅವು ಹುಟ್ಟಿದಲ್ಲೇ ಬೆಳೆಯುತ್ತವೆ.
ಯಾವದೇಶವನ್ನೂ ಸುತ್ತುವುದಿಲ್ಲ
ಯಾವ ನದಿಗಳನ್ನೂ ದಾಟುವುದಿಲ್ಲ
ಅವು ಇದ್ದಲ್ಲೇ ಇರುತ್ತವೆ ಮೌನವಾಗಿರುತ್ತವೆ.
ಅವಕ್ಕೆ ಸುದ್ದಿಗಳು ತಿಳಿಯುವ ಬಗೆ ಹೇಗೆ?

ಭಾಷೆಗೆ ಅತೀತವಾದ ಸ್ಥಿತಿಯನ್ನು ಈ ಮರಗಳು ಅರುಹುತ್ತಿವೆ. ಅವು ಸುದ್ದಿಯಾಗುವದೂ ಇಲ್ಲ. ಸುದ್ದಿಗಳನ್ನು ತಿಳಿಯುವುದೂ ಇಲ್ಲ. ಅವು ಇದ್ದಲ್ಲಿ ಇರುತ್ತವೆ ಅಷ್ಟೇ. ಬರೀ ಇರುವಿಕೆಯೆಂಬುದು ವಿಚಾರಗಳು ಮೂಡುವುದಕ್ಕೂ ಮುಂಚಿನ ಸ್ಥಿತಿ. ನಾನೆಂಬ ಎಚ್ಚರ ಜಾಗೃತವಾಗಿರದ ಸ್ಥಿತಿ. ಈ ಮಹಾಮೌನವನ್ನು ಚಲಿಸುತ್ತಲೇ ಇರುವ ಜಗತ್ತು ಕದಡುವುದೂ ಉಂಟು. ಯಾವುದೋ ಊರಿನ ಯಾತ್ರಿಕರು ಮರದ ನೆರಳಲ್ಲಿ ತಂಗುವುದು, ಚಳಿಗಾಲದಲ್ಲಿ ಹಾರಿಹೋದ ಹಕ್ಕಿಗಳು ವಸಂತದಲ್ಲಿ ಮರಳುವುದು ಇವೆಲ್ಲವೂ ಪ್ರಾಕೃತಿಕ ಕ್ರಿಯೆಗಳೇ. ಸ್ಥಾವರ ಜಂಗಮಗಳೆರಡೂ ಆ ಪರಿಸರದಲ್ಲಿ ಬೆರೆತಿವೆ. ಬೇರೆಬೇರೆ ಕಾಲದೇಶಗಳನ್ನು ಅವು ಮರದೊಂದಿಗೆ ಹಂಚಿಕೊಳ್ಳುವುದೊಂದು ಸೋಜಿಗ. ಸಮುದ್ರದ ಗಾಳಿಯನ್ನು ರೆಕ್ಕೆಯಲ್ಲಿ ಹೊತ್ತುತಂದ ಈ ಹಕ್ಕಿಗಳಿಂದ ಮರಕ್ಕೆ ಸಮುದ್ರದ ಸ್ಪರ್ಷವೂ ಆಗುವುದು!. ಮರಗಳ ಮೌನ ಈ ಎಲ್ಲ ಕ್ರಿಯೆಗಳಿಂದಾಗಿ ಮುರಿಯುವುದು. ಅಥವಾ ನಮಗೇನಾದರೂ ಮರಗಳ ಮೂಲಕವೇ ಜಗತ್ತನ್ನು ನೋಡುವುದು ಸಾಧ್ಯವಾದರೆ ನಮ್ಮೆಲ್ಲ ಗ್ರಹಿಕೆಗಳೂ ಅರ್ಥಹೀನವಾಗಬಹುದು.

ಮರ ಹಾಗೂ ಮನುಷ್ಯ ಹೇಗೆ ಭಿನ್ನ ಎಂಬುದನ್ನು ಅವರ ಕವಿತೆ ಹೇಳದೆಯೂ ಹೇಳುತ್ತದೆ. ಮರಕ್ಕೆ ಐಡೆಂಟಿಟಿ ಕ್ರೈಸಿಸ್ ಇಲ್ಲ. ಮನುಷ್ಯನಿಗೆ ಐಡೆಂಟಿಟಿಯೇ ಬದುಕಿನ ಚಾಲಕ ಶಕ್ತಿ. ವಿಶ್ವದ ಎಲ್ಲ ವಸ್ತುಗಳಿಗೂ ಹೆಸರಿಡುತ್ತಾ ಅದರ ಗುರುತನ್ನು ನಿರ್ಧರಿಸುವ ನಾವು ಹೆಸರಿನ ಮೂಲಕವೇ ಅದನ್ನು ನಮ್ಮ ಜಗತ್ತಿವ ಭಾಗವನ್ನಾಗಿಸಿಕೊಳ್ಳುತ್ತೇವೆ. ಹೆಸರಿಲ್ಲದ್ದನ್ನು ಗುರುತಿಸುವುದೇ ನಮಗೆ ಅಸಾಧ್ಯ. ನಮ್ಮ ಗ್ರಹಿಕೆಗಳಲ್ಲಿ ಎಲ್ಲವನ್ನೂ ಹಿಡಿದಿಡುವ ನಮ್ಮ ಮಹತ್ವಾಕಾಂಕ್ಷೆಗೆ, ನಿಸರ್ಗದಲ್ಲಿ ಹೆಸರಿಲ್ಲದೇ ಕ್ಷಣಹೊತ್ತು ಮಾತ್ರ ಇದ್ದು ತಮ್ಮ ಇರುವಿಕೆಯನ್ನು ದಾಖಲಿಸದೇ ಹೋಗುವ ವಸ್ತುಗಳು ಅರ್ಥವಾಗುವುದೇ ಇಲ್ಲ. ಅರ್ಥದ ಅಧೀನವಾಗಿರದ ಅರಿವು ಸಿಗುವವರೆಗೆ ಈ ದ್ವಂಧ್ವ ನಿಲ್ಲದು. ಬೇಲಿಯಾಚೆ ಬೆಳೆದು ಹೆಸರಿಲ್ಲದೇ ಉದುರಿಹೋಗುವ ಹೂಗಳು ನಮ್ಮ ಜಗತ್ತಿನ ಭಾಗವಾಗುವುದೇ ಇಲ್ಲ. ಹೆಸರು ತಿಳಿಯದ ವಸ್ತುಗಳು ಎಂಬ ಕವಿತೆ ಈ ಚೋದ್ಯವನ್ನೇ ಕಟ್ಟಿಕೊಟ್ಟಿದೆ. ದೃಶ್ಯ-ದೃಷ್ಟಿ-ದೃಷ್ಟಾರರ ನಡುವಿನ ಸಂಬಂಧಗಳಲ್ಲಿ ನಿಜವಾಗುವ ವಸ್ತು ಪ್ರಪಂಚವು ನಮ್ಮ ಕವಿಗಳನ್ನೂ ತತ್ವಜ್ಞಾನಿಗಳನ್ನೂ ಸೆಳೆಯುತ್ತಲೇ ಇದೆ. ತಿರುಮಲೇಶರ ಕವಿತೆಗಳಲ್ಲಿ ಸದ್ದಿಲ್ಲದೇ ಇರುವ ತತ್ವಜ್ಞಾನದ ಪರಿ ನಮ್ಮನ್ನು ಬೆರಗುಗೊಳಿಸುತ್ತದೆ. ಹೊಸ ದರ್ಶನಕ್ಕೆ ಕಣ್ತೆರೆಸುತ್ತದೆ.
ಸಾರ್ತೃ ತನ್ನ ಆತ್ಮಕಥೆಯಲ್ಲಿಹೀಗನ್ನುತ್ತಾನೆ.

ವಿಶ್ವದ ವಸ್ತುಗಳೆಲ್ಲ ಹೆಸರುಬೇಡುತ್ತ
ನನ್ನಬಳಿ ಬಂದಂತಾಯಿತು.
ಹೆಸರಿಡುವಮೂಲಕ ಅವನ್ನೆಲ್ಲ
ನನ್ನದಾಗಿಸಿದೆ ಅಂದುಕೊಂಡಿದ್ದೇನೆ;
ಈ ಭ್ರಮೆಯೊಂದು ಇಲ್ಲದಿರುತ್ತಿದ್ದರೆ
ನಾನು ಬರೆಯುತ್ತಿರಲಿಲ್ಲ.

ಭಾಷೆಯ ಮೂಲಕ ಕಟ್ಟಿಕೊಂಡ ನಮ್ಮ ಲೋಕವು ಎಷ್ಟು ಭ್ರಮೆಯದು ಎಂಬುದನ್ನು ಸಾರ್ತೃ ಹೇಳುತ್ತಾನೆ. ಆದರೆ ಈ ಭ್ರಮೆಗಳಿಲ್ಲದಿದ್ದರೆ ಇರುವುದಾದರೂ ಏನು? ಎಂಬುದೇ ಅಭಿವ್ಯಕ್ತಿಯ ಸವಾಲು. ಭ್ರಮೆಯ ಗುಳ್ಳೆಗಳು ಒಡೆಯಲು ಅಡಿಗರು ಹೇಳುವಂತೆ ನಿಜದ ಸೂಜಿಮೊನೆ ಬೇಕು. ಸ್ವತಃ ತಿರುಮಲೇಶರೇ ಹೇಳುವಂತೆ ಬೆಳಕಿನತ್ತ ಧಾವಿಸಿ ಭಗ್ಗನುರಿಯುತ್ತಲೇ ಬದುಕು ಕಾವ್ಯವಾಗುವುದು. ನೋಟಕ್ಕಂಟಿದ ಪೊರೆ ಕಳಚಿದಾಗ ಮಾತ್ರ ಹೊಸದು ಕಾಣುವುದು. ಈ ಕಾರಣಕ್ಕಾಗಿಯೇ ತಿರುಮಲೇಶರು ಕಾಲುದಾರಿಯ ಕವಿ. ಅದು ಒಳದಾರಿ. ಅವರು ಮಾತ್ರ ಕಾಣಬಹುದಾದ ಲೋಕದಲ್ಲಿ ನಮ್ಮನ್ನೂ ಕ್ಷಣಕಾಲ ನಡೆಸುವ ಕಿರುದಾರಿ.

ರಾಜಮಾರ್ಗ ಮತ್ತು ಒಳಮಾರ್ಗ ಎಂಬ ಅವರ ಕವಿತೆಯಲ್ಲಿ ತಿರುಮಲೇಶರ ಕಾವ್ಯದ ಫಿಲಾಸಫಿ ಹರಳುಗಟ್ಟಿದೆ. ವೇಗವಾದ ವಾಹನಗಳಲ್ಲಿ ರಾಜಮಾರ್ಗದ ಮೂಲಕ ಹೋಗುವವರಿಗೆ ಕಾಣಿಸದ ಎಲ್ಲ ಸೂಕ್ಷ್ಮಗಳು ಒಳಮಾರ್ಗಗಳಲ್ಲಿ ಹೋಗುವಾಗ ಕಾಣಿಸುತ್ತದೆ. ನಗ್ನಪಾದಗಳಲ್ಲಿ ನಿಧಾನವಾಗಿ ನಡೆಯುವವರಿಗಷ್ಟೇ ಲೋಕದ ಒಳಗುಟ್ಟುಗಳು ತೆರೆದುಕೊಳ್ಳುತ್ತವೆ. ಸೂಕ್ಷ್ಮಗೊಂಡಷ್ಟೂ ನಮ್ಮ ಅಹಂಗಳು ಕರಗಿ ನಾವು ಪ್ರಕೃತಿಯ ಭಾಗವಾಗುತ್ತೇವೆ. ವೇಗ ಹಾಗೂ ಮಹತ್ವಾಕಾಂಕ್ಷೆಗಳಲ್ಲಿ ನಮಗೆ ಬೇಕಾದುದನ್ನು ಮಾತ್ರ ಕಾಣುವ ನಾವು ನಿಧಾನ ಶ್ರುತಿಯ ನಿರುಮ್ಮಳತೆಯಲ್ಲಿ ಎಲ್ಲವನ್ನೂ ಕಾಣುತ್ತೇವೆ. ನಿರುದ್ದಿಶ್ಯವಾಗಿ ವಿಕಾಸವಾಗುವ ಲೋಕವು ಅಷ್ಟೇ ನಿರುದ್ದಿಶ್ಯವಾಗಿ ನಮ್ಮನ್ನೂ ಒಳಗೊಂಡಿದೆ. ಈ ಒಳಮಾರ್ಗವು ಅ-ರಾಜಕೀಯವಾದದ್ದು. ಗುರಿಯ ಹಂಗಿಲ್ಲದೇ ಪೊದೆ ಗಿಡಗಳ ನಡುವೆ ಮರೆಯಾಗುವಂಥದು. ಕಾವ್ಯದ ಮೂಲಕ ರಾಜಕೀಯ ಸರಿತನವನ್ನು, ಸೈದ್ದಾಂತಿಕ ಹತಾರುಗಳನ್ನು ಮಸೆಯಬಯಸುವವರಿಗೆ ತಿರುಮಲೇಶರ ಕಾವ್ಯವು ದಕ್ಕುವುದಿಲ್ಲ. ಏಕೆಂದರೆ ಅದು ಅ-ರಾಜಕೀಯವಾದುದು. ಆದ್ದರಿಂದಲೇ ಚಿಟ್ಟೆಯಂತೆ ಕೈಗೆಟುಕದ್ದು.

ರಾಜಮಾರ್ಗಗಳು ರಾಜಕೀಯ ಕೆಲಸಗಾರರಿಗೆ
ಒಳಮಾರ್ಗಗಳು ಅ-ರಾಜಕೀಯರಾದ ಜನಗಳಿಗೆ
ಬಹು ಉದ್ದೇಶಪೂರ್ಣವಾದವು ರಾಜಮಾರ್ಗಗಳು
ಉದ್ದೇಶರಹಿತವಾಗಿ ಬಿದ್ದಿರುವುವು ಒಳಮಾರ್ಗಗಳು

ತಿರುಮಲೇಶರ ಕವಿತೆಗಳ ಲೋಕವು ಕಾಣಿಸುವ ನಿರುದ್ದಿಶ್ಯ ಇರವು ರಾಜಕೀಯ ಕೆಲಸಗಾರರಾಗಿ ಮಾರ್ಪಾಡಾಗಿರುವರಿಗೆ ಕಾಣಿಸದೇ ಹೋಗಬಹುದು. ಅದನ್ನು ಕಾಣಲು ಭಾಷೆಯ ರಾಜಕಾರಣವನ್ನೂ ಮೀರಬೇಕಾಗುತ್ತದೆ. ಒಳದಾರಿಯಲ್ಲಿ ಸಂಚರಿಸಿ ಸೂಕ್ಷ್ಮಗೊಂಡ ಪ್ರಜ್ಞೆಯ ಮೂಲಕ ನೋಡಬೇಕಾಗುತ್ತದೆ. ಆಗ ಜಗತ್ತು ನಿಜಕ್ಕೂ ಪ್ರಿಯವಾಗುತ್ತದೆ. ನೋಟದ ಪೂರ್ವಗ್ರಹಗಳಳಿದು ಇರುವಿಕೆಯಷ್ಟೆ ಕವಿತೆಯಾಗುತ್ತದೆ.

ಪ್ರೀತಿಸುವ ಹೂವುಗಳನ್ನು
ಅವು ಕ್ಷಣಿಕವಾಗಿರುತ್ತವೆ
ನೋಡಬೇಕೆನ್ನುವಷ್ಟರಲ್ಲೇ
ಬಾಡಿಹೋಗಿರುತ್ತವೆ
.

ಕಾಲವನ್ನು ಮೀರುವ ಕಾವ್ಯದ ಸ್ವಚ್ಛಂದ ಛಂದವನ್ನು ತಿರುಮಲೇಶರ ಕವಿತೆಗಳು ಉಸಿರಾಡುತ್ತಿರುವುದರಿಂದಲೇ ಅವು ಪ್ರಿಯವಾಗುತ್ತದೆ. ನೋಟದ ಗಂಟುಗಳನ್ನು ಬಿಡಿಸಿ ಸ್ವತಂತ್ರಗೊಳಿಸುವುದು ಆ ಕಾವ್ಯದ ವಿಶಿಷ್ಟತೆ. ತೀವ್ರ ಧ್ಯಾನಶೀಲತೆಯಿಂದ ಮಾತ್ರ ದಕ್ಕುವ ಅವುಗಳ ಭಾವಜಗತ್ತು ಚಿಟ್ಟೆಯನ್ನು ಹಿಡಿಯಲು ಸದ್ದಿಲ್ಲದೆ ಹೊರಡುವ ಪೋರನ ಏಕಾಗ್ರತೆಯಲ್ಲಿ ಕಣ್ಬಿಡುವಂಥದು. ಕವಿತೆ ಹಾಗೂ ಚಿಟ್ಟೆ ಎರಡೂ ಒರಟು ಕೈಗಳಲ್ಲಿ ಹಿಡಿಯುವ ಅಧಿಕಾರದ ಧೋರಣೆಗೆ ಸಿಕ್ಕವು. ಕಾವ್ಯಕ್ಕೆ ಮನಸ್ಸನ್ನು ಸನ್ನದ್ಧಗೊಳಿಸುವುದೆಂದರೆ ಸುಮ್ಮನೆ ಆಲಿಸುವುದನ್ನು ಸುಮ್ಮನೇ ಗಮನಿಸುವುದನ್ನು ಕಲಿಯಬೇಕು. ಆಗ ಧ್ಯಾನಿಸಬೇಕೆಂದು ನಿಶ್ಚಯಿಸದೆಯೇ ಧ್ಯಾನವು ಸಂಭವಿಸುತ್ತದೆ. ನಮ್ಮ ಪ್ರಜ್ಞೆ ಅರ್ಥಗಳಿಂದ ಬಿಡುಗಡೆ ಹೊಂದಿ ಬರೀ ಇರುವಿಕೆಯ ಚೆಲುವನ್ನು ಕಾಣತೊಡಗುತ್ತದೆ. ತಿರುಮಲೇಶರ ಚಿಟ್ಟೆಗಳನ್ನು ಹಿಡಿಯುವುದು ಎಂಬ ಕವಿತೆ ಇದನ್ನೇ ಸೂಚಿಸುತ್ತಿರುವಂತೆ ಅನಿಸಿತು. ಕವಿ ಹೇಳುತ್ತಾರೆ ಚಿಟ್ಟೆ ಹಿಡಿಯುವುದಕ್ಕೂ ಮೊದಲು ಹೂದೋಟವಿರಬೇಕು, ಅಲ್ಲಿ ಹೂಗಳಿರಬೇಕು, ಅದರ ಮೇಲೆ ಚಿಟ್ಟೆ ಕುಳಿತುಕೊಳ್ಳಬೇಕು. ನೀವು ಅದನ್ನೇ ಗಮನಿಸುವುದು ಚಿಟ್ಟೆಗೆ ಗೊತ್ತಾದರೆ ಅದು ಅಲ್ಲಿಂದ ಜಾಗ ಖಾಲಿಮಾಡುತ್ತದೆ. ಆದ್ದರಿಂದ ನೀವು ಒಣಗಿದ ಸೊಪ್ಪಿನ ಮೇಲೆ ಬೆಕ್ಕು ನಡೆದಂತೆ ನಡೆಯಬೇಕು. ಚಿಟ್ಟೆಯನ್ನು ಬಿಟ್ಟರೆ ಈ ಜಗತ್ತಿನಲ್ಲಿ ಇನ್ನೇನೂ ಇಲ್ಲವೆಂಬಂತೆ ಮನಸ್ಸು ಏಕಾಗ್ರಗೊಳ್ಳಬೇಕು. ನಿಮ್ಮ ಕಣ್ಣು, ನಿಮ್ಮ ಕೈ, ನಿಮ್ಮ ಮನಸ್ಸು ಎಲ್ಲ ಒಂದೇ ಆಗಬೇಕು!.

ಶುದ್ದಹಳದಿಯ ಚಿಟ್ಟೆಯುಂಟು, ಆಚೀಚೆ
ನೋಡಬಾರದು, ಕೈಗಳು ನಡುಗಬಾರದು.
ಈಗ ಚಿಟ್ಟೆಯಲ್ಲದೆ ಬೇರೇನೂ ಇಲ್ಲ
ಈ ಜಗತ್ತಿನಲ್ಲಿ, ನಿಮ್ಮ ಮನಸ್ಸಿನಲ್ಲಿ

ಕೊನೆಗೂ ಚಿಟ್ಟೆಯನ್ನು ಹಿಡಿದೇಬಿಟ್ಟೆವೆಂಬ ಭ್ರಮೆಗೆ ದಕ್ಕುವುದಾದರೂ ಏನು? ಎರಡು ಬೆರಳುಗಳ ಮಧ್ಯೆ ಸಿಕ್ಕಿ ಒದ್ದಾಡುವ ಅದರ ರೆಕ್ಕೆಗಳು ಹರಿದು ಹೋಗುತ್ತವೆ ಅಷ್ಟೇ. ಕವಿತೆಯೆಂಬುದೂ ಚಿಟ್ಟೆಯಂತೆ. ಹಾರಲು ಬಿಟ್ಟರೆ ಮಾತ್ರ ಉಳಿಯುತ್ತದೆ. ಒರಟಾಗಿ ಸ್ಪರ್ಷಿಸಿದರೆ ಹರಿದುಹೋಗುತ್ತದೆ. ಹಾರುವಾಗ ಅದು ಎಲ್ಲಿ ದಾಟಬಹುದೆಂದು, ಎಲ್ಲಿ ಕೂರಬಹುದೆಂದು ಅದರ ಚಲನೆಯನ್ನು ಊಹಿಸಲಾರೆವು. ನಮ್ಮ ಜ್ಞಾನವೆಂಬುದು ಕೊನೆಗೂ ಅರೆಬರೆಯೇ. ಪೂರ್ಣವೆಂಬುದು ನಮ್ಮ ಕನವರಿಕೆ ಮಾತ್ರ. ಜಂಗಮವಾದುದನ್ನು ಹಿಡಿಯುವುದೆಷ್ಟು ಕಷ್ಟ!. ಅಥವಾ ಹಿಡಿಯಬೇಕೆಂಬ ಹಠವಾದರೂ ಏಕೆ?. ಚಿಟ್ಟೆಯನ್ನು ಬಿಟ್ಟುಬಿಟ್ಟಮೇಲೆ ಉಳಿವುದದರೂ ಏನು? ಬೆರಳಿಗಂಟಿದ ಬಣ್ಣ ಹಾಗೂ ರೆಕ್ಕೆಯ ಚೂರು. ಅದು ಚಿಟ್ಟೆಯೇ ಹೌದು ಹಾಗೂ ಅಲ್ಲ!... ಅಧಿಕಾರಕ್ಕಂಟದ ಅರಾಜಕ ಕಾವ್ಯದ ಶಕ್ತಿ ಹಾಗೂ ಸಾಧ್ಯತೆಗಳೆರಡನ್ನೂ ಹೀಗೆ ಧ್ಯಾನಿಸುವಂತೆ ಮಾಡಿದ ತಿರುಮಲೇಶರ ಅಕ್ಷಯ ಕಾವ್ಯಕ್ಕೆ ಶರಣಾಗದೇ ವಿಧಿಯಿಲ್ಲ.

ಈ ಅಂಕಣದ ಹಿಂದಿನ ಬರೆಹಗಳು

ಹರಿವ ನದಿಯಂಥ ಅರಿವು : ಚಂದ್ರಿಕಾರ ಚಿಟ್ಟಿ

ಕಾರ್ನಾಡರ ಯಯಾತಿ- ಕಾಲನದಿಯ ತಳದಲ್ಲಿ ಅಸ್ತಿತ್ವದ ಬಿಂಬಗಳ ಹುಡುಕಾಟ

*

MORE NEWS

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...