ಕಲ್ಯಾಣ ಕರ್ನಾಟಕ ಸಾಹಿತ್ಯ ಮೀಮಾಂಸೆ

Date: 07-02-2024

Location: ಬೆಂಗಳೂರು


"ಕಲ್ಯಾಣ ಕರ್ನಾಟಕದ ಚರಿತ್ರೆ ನಾಡಿನಲ್ಲಿ ವಿಭಿನ್ನವಾದ ಸಾಂಸ್ಕೃತಿಕ ಸಂಘರ್ಷದಿಂದ ಕೂಡಿದೆ. ಇಲ್ಲಿಯ ಜನ ಸಮುದಾಯಗಳು ನಿರಂತರ ಬಡತನ, ಬರಗಾಲ, ಪ್ರವಾಹ, ಭೂ ಮಾಲೀಕರ ಭೀಕರ ಹೊಡೆತಗಳಿಗೆ ಸಿಲುಕಿ ದಯನೀಯ ಸ್ಥಿತಿಯನ್ನು ಅನುಭವಿಸಿವೆ," ಎನ್ನುತ್ತಾರೆ ಅಂಕಣಕಾರ ಹಳೆಮನೆ ರಾಜಶೇಖರ. ಅವರು ತಮ್ಮ ‘ಓದಿನ ಹಂಗು’ ಅಂಕಣದಲ್ಲಿ ‘ಕಲ್ಯಾಣ ಕರ್ನಾಟಕ ಸಾಹಿತ್ಯ ಮೀಮಾಂಸೆ’ ಕುರಿತು ಬರೆದಿರುವ ಲೇಖನ.

ಸಾಹಿತ್ಯ ಮೀಮಾಂಸೆ ಕುರಿತು ಕನ್ನಡದಲ್ಲಿ ಚರ್ಚೆ ನಡೆಯುತ್ತಿವೆ. ಭಾರತೀಯ ಕಾವ್ಯ ಮೀಮಾಂಸೆಯ ಚೌಕಟ್ಟಿನಲ್ಲಿ ಸಾಹಿತ್ಯವನ್ನು ನೋಡದೆ, ಅದರ ಜೊತೆಗೆ ಇತರ ಮಾನವಿಕ ಸಿದ್ದಾಂತಗಳನ್ನು ಗಮನದಲ್ಲಿಕೊಂಡು ಸಾಹಿತ್ಯ ಮೀಮಾಂಸೆಯನ್ನು ಕಟ್ಟಬೇಕಿದೆ ಎಂಬ ವಾದಗಳು ಬೆಳೆಯುತ್ತಿವೆ. ಕನ್ನಡ ನಾಡಿನ ಚರಿತ್ರೆಯನ್ನು ಗಮನಿಸಿದರೆ ಕಲ್ಯಾಣ ಕರ್ನಾಟಕದ ಚರಿತ್ರೆ ವಿಭಿನ್ನವಾಗಿದೆ. ಆದ್ದರಿಂದ ಇಲ್ಲಿಯ ಸಾಹಿತ್ಯವನ್ನು ಭಿನ್ನವಾಗಿಯೇ ನೋಡಬೇಕಿದೆ. ಕಲ್ಯಾಣ ಕರ್ನಾಟಕದ ಆರಂಭದ ಸಾಹಿತ್ಯ ರಚನೆಯನ್ನು ಗಮನಿಸಿದರೆ ಅವು ನಾಡಿನ ಚರಿತ್ರೆಯಲ್ಲಿ ಗಂಭೀರವಾದುವು ಅನಿಸುವುದಿಲ್ಲ. ಆದರೆ ಆ ಪ್ರಯತ್ನವೇ ಮುಖ್ಯವಾದುದು.

ಕಲ್ಯಾಣ ಕರ್ನಾಟಕದ ಚರಿತ್ರೆ ನಾಡಿನಲ್ಲಿ ವಿಭಿನ್ನವಾದ ಸಾಂಸ್ಕೃತಿಕ ಸಂಘರ್ಷದಿಂದ ಕೂಡಿದೆ. ಇಲ್ಲಿಯ ಜನ ಸಮುದಾಯಗಳು ನಿರಂತರ ಬಡತನ, ಬರಗಾಲ, ಪ್ರವಾಹ, ಭೂ ಮಾಲೀಕರ ಭೀಕರ ಹೊಡೆತಗಳಿಗೆ ಸಿಲುಕಿ ದಯನೀಯ ಸ್ಥಿತಿಯನ್ನು ಅನುಭವಿಸಿವೆ. ಸಾವಿರಾರು ಎಕರೆಯ ಜಮೀನ್ದಾರರು ಪ್ರಭುತ್ವದ ಜೊತೆಗಿದ್ದು, ಸಾಮನ್ಯರಿಗೆ ಯಾವುದೇ ಸವಲತ್ತುಗಳನ್ನು ನೀಡಿದೆ ತಮ್ಮ ಅಧೀನದಲ್ಲಿಟ್ಟುಕೊಳ್ಳುವ ಚಾರಿತ್ರಿಕ ಸನ್ನಿವೇಶಗಳನ್ನು ಈ ಭಾಗದಲ್ಲಿ ಕಾಣುತ್ತೇವೆ. ಈಗಲೂ ಈ ಧೋರಣೆ ನಿಂತಿಲ್ಲ. ಉದ್ಯೋಗವನ್ನು ಸೃಷ್ಟಿಸುವಂತ ಬಹುದೊಡ್ಡ ಯೋಜನೆಗಳು ಇಲ್ಲಿ ನಿರ್‍ಮಾಣ ಆಗಿಲ್ಲ. ಹೀಗಾಗಿ ಇಲ್ಲಿಯ ಜನಗಳು ಶಿಕ್ಷಣ, ಉದ್ಯೋಗಕ್ಕಾಗಿ ಗುಳೆ ಹೋಗುತ್ತಾರೆ. ಈ ಪ್ರದೇಶ ಬೆಳವಣಿಗೆಗೆ ಇದು ದೊಡ್ಡ ತೊಡಕಾಗಿರುವಂತದ್ದು. ವಚನಕಾರರು, ಕೀರ್ತನಕಾರರು, ಸೂಫಿಗಳು, ವಿರಕ್ತರು, ತತ್ವಪದಕಾರರು ತಮ್ಮ ನಡೆ ನುಡಿ ಶುದ್ಧತೆ, ಹೊಸ ಅರಿವಿನ ಆಂದೋಲನದಿಂದ ಪ್ರಭಾವಿಸುತ್ತಲೇ ಬಂದಿದ್ದಾರೆ. ತಮ್ಮ ಕಾವ್ಯದ ಅಭಿವ್ಯಕ್ತಿಗೆ ನವ ನುಡಿಗಟ್ಟನ್ನು ಸೃಷ್ಟಿಸಿಕೊಂಡಿದ್ದಾರೆ. ಇವರ ಹೋರಾಟದ ಚಿಂತನೆಗಳು ಈ ಭಾಗದ ಬರಹಗಳ ಮೇಲೆ ದಟ್ಟವಾದ ಪ್ರಭಾವ ಬೀರಿದೆ. ಇವರು ಪ್ರಭುತ್ವ ಸೃಷ್ಟಿಸುವ ಅಪನಂಬಿಕೆಗಳನ್ನು ಭೇದಿಸಿ ಹೊಸ ನಂಬಿಕೆ, ಭರವಸೆಯನ್ನು ಬದುಕಿನಲ್ಲಿ ಮೂಡಿಸುವ ನಿರಂತರ ಪ್ರಯತ್ನವನ್ನು ಮಾಡುತ್ತಲೇ ಬಂದಿದ್ದಾರೆ.

ಸ್ವಾತಂತ್ರ ಪೂರ್ವದಲ್ಲಿ ಮೈಸೂರು ಸಂಸ್ಥಾನ, ಮುಂಬಯಿ ಕರ್ನಾಟಕ, ಮದರಾಸು ಕರ್ನಾಟಕ ಮತ್ತು ಕೊಡಗು ಈ ಪ್ರಾಂತ್ಯಗಳ ಸ್ಥಿತಿಗಿಂತ ಕಲ್ಯಾಣ ಕರ್ನಾಟಕ ಸ್ಥಿತಿ ಬಿನ್ನವಾಗಿತ್ತು. ಕರ್ನಾಟಕದ ಈ ಪ್ರಾಂತಗಳಲ್ಲಿ ಬ್ರಿಟಿಷರ ಮತ್ತು ಸ್ಥಳೀಯ ಅರಸರ ಆಳ್ವಿಕೆಯಿತ್ತು. ಪರಂಪರಾಗತ ಸಂಸ್ಕೃತಿಯ ಮುಂದುವರಿಕೆಗೆ ಯಾವ ಅಡ್ಡಿಗಳಿರಲಿಲ್ಲ. ಬ್ರಿಟಿಷರ ವಸಾಹತು ವ್ಯವಸ್ಥೆಯಿಂದ ಅಧುನಿಕತೆ ಸಮಾಜದಲ್ಲಿ ಮೂಡುತ್ತಿದ್ದರಿಂದ ಬದಲಾವಣೆಯ ಪ್ರಕ್ರಿಯೆಗೂ ಜನರು ಸ್ಪಂಧಿಸತೊಡಗಿದರು. ಆದರೆ ಕಲ್ಯಾಣ ಕರ್ನಾಟಕ ಪ್ರಾಂತ್ಯ ನಿಜಾಂ ಅಧೀನದಲ್ಲಿದ್ದರಿಂದ ಪರ ಭಾಷೆ ಮತ್ತು ಸಂಸ್ಕೃತಿಯೇ ಅರಸರದ್ದಾಗಿರುವಾಗ ಕನ್ನಡಿಗರ ಭಾಷೆ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಅನೇಕ ಅಡ್ಡಿ ಆತಂಕಗಳು ಇದ್ದವು. ಮೈಸೂರು ಸಂಸ್ಥಾನದಲ್ಲಿ ಭಾಷೆ ಸಾಹಿತ್ಯ, ಕಲೆ ಸಂಸ್ಕೃತಿಯ ಬೆಳವಣಿಗೆಗೆ ಆಳರಸರ ಪ್ರೋತ್ಸಾಹವಿತ್ತು. ಅಂತ ವಾತಾವರಣವು ಈ ಪ್ರಾಂತ್ಯದಲ್ಲಿ ಎಂದೋ ಮಾಯವಾಗಿ ಹೋಗಿತ್ತು. ಪರಂಪರಾಗತ ಜ್ಞಾನ, ಹೊಸ ಜ್ಞಾನ ಪಡೆಯುವುದಕ್ಕೆ ಅವಕಾಶಗಳು ಬೇರೆ ಪ್ರಾಂತ್ಯಗಳಲ್ಲಿದ್ದರೆ ಕಲ್ಯಾಣ ಕರ್ನಾಟಕ ಪ್ರಾಂತ್ಯಕ್ಕೆ ಇರಲಿಲ್ಲ. ಈ ಶತಮಾನದ ಆದಿಯಲ್ಲಿ ಬ್ರಿಟಿಷ್ ವಸಾಹತುಶಾಹಿ ಆಡಳಿತದಿಂದ ಪಶ್ಚಿಮ ದೇಶಗಳಿಗೆ ಸಂಪರ್ಕ ಸಾಧ್ಯವಾಗಿ ಹೊಸ ಚಿಂತನ ಕ್ರಮಗಳು ಲಭ್ಯವಾಗತೊಡಗಿದವು. ರಾಜಕೀಯ, ಸಾಮಾಜಿಕ, ಆರ್ಥಿಕ, ಧಾರ್ಮಿಕ, ಶೈಕ್ಷಣಿಕ ಚಿಂತಕರಿಗೆ ಹೊಸ ಜ್ಞಾನ ಚಿಂತನೆಗಳು ದಕ್ಕತೊಡಗಿದವು. ಇದರಿಂದಾಗಿ ಅನೇಕ ಕ್ಷೇತ್ರಗಳಲ್ಲಿ ಹೊಸ ವಾತಾವರಣ ಮೂಡಿ ಹೊಸ ಹಾದಿ ಹಿಡಿದವು. ಸಾಹಿತ್ಯ ಕಲೆಗಳಿಗೂ ಇದು ಪ್ರೇರಕವಾಯಿತು. ಇಂಥ ಹೊಸಗಾಳಿ ಕಲ್ಯಾಣ ಕರ್ನಾಟಕ ಪ್ರಾಂತ್ಯದೊಳಗೆ ಬೀಸಲು ಸಾದ್ಯವಾಗಲಿಲ್ಲ. ಈ ಪ್ರಾಂತ್ಯದ ಒಡಲೊಳಗೇ ಅನೇಕ ಸಮಸ್ಯೆಗಳು, ಆತಂಕ, ತಲ್ಲಣಗಳು ಇದ್ದವು. ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ ತೀವ್ರವಾದಾಗ ಈ ಪ್ರಾಂತ್ಯದಲ್ಲಿ ನಿಜಾಂಶಾಹಿ ವಿರುದ್ಧ ಹೋರಾಟ ತೀವ್ರವಾಗತೊಡಗಿತು. ಕನ್ನಡ ಕಲಿಕೆ ಅಧಿಕೃತವಾಗಿ ನಡೆಯಲು ಅವಕಾಶಗಳೇ ಇರಲಿಲ್ಲ. ನೆರೆಯ ಮುಂಬೈ ಕರ್ನಾಟಕದಲ್ಲಿ ಕನ್ನಡ ಮಾಧ್ಯಮ ಶಾಲೆಗಳು ಪ್ರಾರಂಭವಾಗಿ ಒಂದು ಶತಮಾನ ಕಳೆದರೂ ಈ ಪ್ರಾಂತ್ಯದಲ್ಲಿ ಅದು ಸಾಧ್ಯವಾಗಿರಲಿಲ್ಲ. ಕನ್ನಡ ಕಲಿಕೆ ಬಗ್ಗೆ ಹೋರಾಟ ನಡೆಸಬೇಕಾಗಿತ್ತು. ಮಠಗಳಲ್ಲಿ ಬಿಟ್ಟರೆ ಕನ್ನಡ ಅಕ್ಷರ ಕಲಿಕೆ ಬಹಿರಂಗವಾಗಿ ನಡೆಸಲಾಗುತ್ತಿರಲಿಲ್ಲ. ಭಾಲ್ಕಿಯಂಥ ಮರಾಠಿಮಯ ಪ್ರದೇಶದಲ್ಲಿ ಚನ್ನಬಸವ ಪಟ್ಟದೇವರು ಕನ್ನಡದ ಮೇಲಿನ ಅಭಿಮಾನದಿಂದ ಹೊರಗೆ ಉರ್ದು ಮಾಧ್ಯಮ ಶಾಲೆಯ ಬೋರ್ಡು ಹಾಕಿ ಒಳಗೆ ಕನ್ನಡ ಅಕ್ಷರಗಳನ್ನು ಮಕ್ಕಳಿಗೆ - ತೀಡಿಸುವ ಕೆಲಸ ಮಾಡುತ್ತಿದ್ದರು. ಕನ್ನಡ ಕಲಿಕೆ ಕೇವಲ ಅಭಿಮಾನದ ಪ್ರಶ್ನೆಯಾಗಿರಲಿಲ್ಲ. 'ಕನ್ನಡತನ'ವನ್ನು ಪುನಃ ಸೃಷ್ಟಿಸುವ ಜವಾಬ್ದಾರಿಯು ಇಂಥ ಪ್ರಯತ್ನಗಳಲ್ಲಿ ಕಾಣುತ್ತದೆ. ಸ್ವಾತಂತ್ರ್ಯ ಪೂರ್ವದಲ್ಲಿ ಈ ಪ್ರಾಂತ್ಯದಲ್ಲಿ ಶಿಕ್ಷಣ ಸಂಸ್ಥೆಗಳು ಪ್ರಾರಂಭವಾದರೂ ಅವುಗಳಲ್ಲಿ ಅಧಿಕೃತ ಭಾಷೆ ಉರ್ದು ಮತ್ತು ಸ್ಥಳೀಯ ಭಾಷೆ' ಮರಾಠಿಯಲ್ಲಿ ಕಲಿಕೆ ನಡೆಸುತ್ತಿದ್ದರು. ಕಲ್ಬುರ್ಗಿಯಲ್ಲಿ ಪ್ರಾರಂಭವಾದ 'ನೂತನ ವಿದ್ಯಾಲಯ'ದಂಥ ಶಿಕ್ಷಣ ಸಂಸ್ಥೆಯಲ್ಲಿ ಮರಾಠಿ ಮಾಧ್ಯಮದಲ್ಲಿ ಶಿಕ್ಷಣ ಸುರುವಾಯಿತು. ಬೀದರ್‌, ಕಲ್ಬುರ್ಗಿ ಭಾಗಗಳಲ್ಲಿ, ಅಕ್ಷರ ಕಲಿಯುವ ಕುಟುಂಬಗಳಲ್ಲಿ ಮರಾಠಿ, ಉರ್ದು ಭಾಷೆಗಳಿಗೆ ಒಲಿದುಬಿಟ್ಟಿದ್ದರು. ವೈದಿಕರು ಪೇಶ್ವೆಯರ ಕಾಲದಲ್ಲಿ ಮರಾಠಿ ಸಂಸ್ಕೃತಿಗೆ ಒಲಿದು ನಂತರ ಅದನ್ನೇ ಮುಂದುವರಿಸಿದ್ದರಿಂದ 20ನೆಯ ಶತಮಾನದ ಆರಂಭದ ದಶಕಗಳಲ್ಲಿ ಕಲ್ಬುರ್ಗಿ ಭಾಗದಲ್ಲಿ ಕನ್ನಡ ವಾತಾವರಣಕ್ಕೆ ಅಡ್ಡಿಯನ್ನುಂಟು ಮಾಡಿದವರೇ ಇಂಥ ಕನ್ನಡಿಗರಾದ ಮರಾಠಿ ಅಭಿಮಾನಿಗಳು. ಅಷ್ಟೇ ಅಲ್ಲ ಕಲ್ಬುರ್ಗಿ ಜಿಲ್ಲಾ ಪ್ರದೇಶ ಮಹಾರಾಷ್ಟ್ರಕ್ಕೆ ಸೇರಬೇಕೆಂದು ಅದಕ್ಕೆ ಸಂಬಂಧಿಸಿದ ಪೂರಕ ಇತಿಹಾಸವನ್ನು ಮುಂಚೂಣಿಗೆ ತಂದು ಪ್ರದರ್ಶಿಸಲಾಯಿತು. ಅತ್ತ ಅದೇ ಸಮಯದಲ್ಲಿ ಬೀದ‌ರ ಜಿಲ್ಲಾ ಪ್ರದೇಶ ಆಂಧ್ರಕ್ಕೆ ಸೇರುತ್ತದೆಂಬ ಕೂಗು ಕೇಳಿಸಲಾರಂಭಿಸಿತು. ಈ ಎರಡು ಸಂಗತಿಗಳಿಗಿಂತ ಭಯಾನಕವಾದ ಸಂಗತಿಯೆಂದರೆ 'ಹೈದರಾಬಾದ್ ಸಂಸ್ಥಾನ'ವೇ ಪ್ರತ್ಯೇಕವಾಗಿ 'ಮುಸ್ಲಿಂ ಸಂಸ್ಥಾನ'ವಾಗಿ ನಿಲ್ಲುತ್ತದೆಂಬ ಘೋಷಣೆ. ಪ್ರಾಂತ್ಯ ವಿಭಜನೆಯ ಕೂಗು ಈ ಪ್ರದೇಶದ ಜನ ಸಮುದಾಯಗಳನ್ನು ತಲ್ಲಣಗೊಳಿಸಿದೆ. ಆಧುನಿಕ ಕನ್ನಡ ಸಾಹಿತ್ಯ ಚಿಗುರುವ ಸಂದರ್ಭದಲ್ಲಿ ಈ ಪ್ರಾಂತ್ಯದಲ್ಲಿ ಇಂಥ ಸಮಸ್ಯೆಗಳ ಸುಳಿಯಲ್ಲಿ ಪ್ರಜ್ಞಾವಂತರು ಸಿಕ್ಕುಬಿದ್ದಿದ್ದರು. ಆದರೂ ಕನ್ನಡ ಭಾಷೆ-ಸಾಹಿತ್ಯಭಿಮಾನಿ ವಿದ್ಯಾರ್ಥಿಗಳೂ ಇಂಥ ಆತಂಕಗಳ ನಡುವೆಯೂ ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿದ್ದರು. ರಾಯಚೂರು, ಕೊಪ್ಪಳ ಪ್ರದೇಶದ ವಿದ್ಯಾರ್ಥಿಗಳು ಮುಂಚೂಣಿಯಲ್ಲಿದ್ದವರೆಂದು ಕಾಣುತ್ತದೆ.

ಈ ಪ್ರಾಂತ್ಯದ ವಿದ್ಯಾರ್ಥಿಗಳೆಲ್ಲ ಹೆಚ್ಚಿನ ಶಿಕ್ಷಣಕ್ಕಾಗಿ ಹೈದರಾಬಾದ್ ನಗರಕ್ಕೆ ಹೋಗಬೇಕಾಗಿತ್ತು. ಬೀದರ್, ಕಲ್ಬುರ್ಗಿ, ರಾಯಚೂರು ಜಿಲ್ಲಾ ಪ್ರದೇಶಗಳ ವಿದ್ಯಾರ್ಥಿಗಳು ಉನ್ನತ ಪದವಿ ಶಿಕ್ಷಣಕ್ಕೆ ಹೋಗುವ ಮುನ್ನವೆ ಉರ್ದು, ಮರಾಠಿ, ಹಿಂದಿ, ಇಂಗ್ಲೀಷ್, ತೆಲುಗು, ಕನ್ನಡ ಮುಂತಾದ ಬಹುಭಾಷಾ ಜ್ಞಾನವನ್ನು ಹೊಂದಿದವರಾಗಿರುತ್ತಿದ್ದರು. ಈ ಭಾಷೆಗಳ ಜ್ಞಾನ ಬಹುತೇಕ ಪಠ್ಯ ಪುಸ್ತಕಗಳಿಗೆ ಸೀಮಿತವಾಗಿತ್ತು. ಇದರಿಂದ ಸಾಹಿತ್ಯ ಚಟುವಟಿಕೆಗಳಾಗಲಿ, ಸಾಹಿತ್ಯಿಕ ಬರವಣಿಗೆಗಳಾಗಲಿ, ತೀವ್ರ ಸ್ವರೂಪದಲ್ಲಿ ಕಾಣಿಸಲಿಲ್ಲ. ಸಾಹಿತ್ಯದ ಅಧ್ಯಯನವೂ ಶಿಕ್ಷಣದಿಂದ ಹೊರಗುಳಿದಿತ್ತು, ಡಿ.ಕೆ. ಭೀಮಸೇನರಾವ್‌ ಅವರಂಥವರು ಎಂ. ಎ. ಪದವಿಯನ್ನು ಮೈಸೂರು ವಿಶ್ವವಿದ್ಯಾಲಯದಿಂದ ಪಡೆಯಬೇಕಾಯಿತು. ಸಿದ್ಧಯ್ಯ ಪುರಾಣಿಕರು, ಜಯತೀರ್ಥ ರಾಜಪುರೋಹಿತರು ಕನ್ನಡ ಸಾಹಿತ್ಯವನ್ನು ಶಿಕ್ಷಣದ ಮೂಲಕ ಪಡೆದವರಲ್ಲ. ಸಾಹಿತ್ಯಾಸಕ್ತಿಯಿಂದ ಪಡೆದವರು. ಈ ಮಾತನ್ನು ಯಾಕೆ ಹೇಳಬೇಕಾಯಿತೆಂದರೆ, ಸಾಹಿತ್ಯಧ್ಯಯನವು ಹೈದರಾಬಾದ್ ನಗರದಲ್ಲಿ ಅವಕಾಶಗಳಿರಲಿಲ್ಲ. ಇದರಿಂದ ಸಾಹಿತ್ಯ ಕೃಷಿ ತೀವ್ರಗತಿಯಲ್ಲಿ ಕಾಣಿಸಿಕೊಳ್ಳಲಾಗಲಿಲ್ಲ. ಮೈಸೂರು, ಮಂಗಳೂರು, ಧಾರವಾಡ ಜಿಲ್ಲಾ ಪ್ರದೇಶಗಳಿಗೆ ಹೋಲಿಸಿದರೆ ಈ ಪ್ರದೇಶದಲ್ಲಿ ಅನೇಕ ಕಾರಣಗಳಿಂದ ಸಾಹಿತ್ಯ ಸೃಷ್ಟಿ ಕುಂಠಿತವಾಗಿತ್ತು. 'ಕನ್ನಡದಲ್ಲಿ ನವೋದಯ ಕವಿಗಳು ಕಾವ್ಯ ರಚಿಸುತ್ತಿರುವಾಗ ಬೀದರ್ ಜಿಲ್ಲೆಯಲ್ಲಿ ಕನ್ನಡ 'ಅ' 'ಆ' ತೀಡುವ ಕೆಲಸ ಪ್ರಾರಂಭವಾಗುತ್ತದೆ ಎಂಬ ಮಾತು ಉತ್ಪ್ರೇಕ್ಷೆಯದ್ದಲ್ಲ. ಈ ಮಾತು ಬೀದರ, ಕಲ್ಬುರ್ಗಿ, ಜಿಲ್ಲಾ ಪ್ರದೇಶಗಳಿಗೆ ಹೆಚ್ಚು ಅನ್ವಯಿಸುತ್ತದೆ. ಈ ಜಿಲ್ಲೆಗಳಿಗೆ ಹೋಲಿಸಿದರೆ ರಾಯಚೂರು ಜಿಲ್ಲಾ ಪ್ರದೇಶದಲ್ಲಿ ಸಾಹಿತ್ಯ ಚಟುವಟಿಕೆಗಳು, ಸಾಹಿತ್ಯ ವಾತಾವರಣ ಉತ್ತಮವಾಗಿತ್ತು. ಇದಕ್ಕೆ ಕಾರಣವೆಂದರೆ ಈ ಮೊದಲೇ ಪ್ರಸ್ತಾಪಿಸಿದಂತೆ ಕೃಷ್ಣ ನದಿಯ ಪ್ರದೇಶದಲ್ಲಿ ವಿಜಯನಗರ ಸಾಮ್ರಾಜ್ಯದ ಆಡಳಿತವಿದ್ದರಿಂದ ಕನ್ನಡ ಭಾಷೆ, ಸಾಹಿತ್ಯ-ಸಂಸ್ಕೃತಿಗೆ ಅವಸಾನ ಬಂದಿರಲಿಲ್ಲ. ದಾಸರು, ತತ್ವಪದಕಾರರು ಸಾಹಿತ್ಯವನ್ನು ಪೋಷಿಸಿಕೊಂಡಿದ್ದರು. ಆಧುನಿಕ ಕನ್ನಡ ಸಹಿತ್ಯ ಸಂದರ್ಭದಲ್ಲಿ ಕೂಡ ರಾಯಚೂರು ಜಿಲ್ಲಾ ಪ್ರದೇಶದ ಸಾಹಿತಿಗಳ ಕೊಡುಗೆ ಹೆಚ್ಚಿದೆ. (ಹೆಸರಿಸುವುದಾದರೆ, ಡಿ.ಕೆ. ಭೀಮಸೇನರಾವ್, ಸಿದ್ಧಯ್ಯ ಪುರಾಣಿಕ, ಶಾಂತರಸ, ಜಯತೀರ್ಥ ರಾಜಪುರೋಹಿತ ದೇವೇಂದ್ರ ಕುಮಾರ ಹಕಾರಿ, ಪಂಚಾಕ್ಷರಿ ಹಿರೇಮಠ, ಶೈಲಜ ಉಡುಚಣ, ಜಂಬಣ್ಣ ಅಮರಚಿಂತ) ಬೀದರ, ಕಲ್ಬುರ್ಗಿ ಜಿಲ್ಲಾ ಪ್ರದೇಶದಲ್ಲಿ ಈ ಶತಮಾನದ ಮೊದಲ ಕಾಲುಭಾಗ ಕಳೆದರೂ ಕನ್ನಡ ವಾತಾವರಣವಿರಲಿಲ್ಲ ಎಂಬುದಕ್ಕೆ 1926 ಕಲ್ಬುರ್ಗಿದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಿ. ಎಂ. ಶ್ರೀ ಹೇಳಿದ ಮಾತುಗಳೇ ಸಾಕ್ಷಿ. ಅಧ್ಯಕ್ಷರಾಗಿದ್ದ ಅವರು 'ಕನ್ನಡ ನುಡಿಗೆ ಲಿಪಿಯುಂಟೆಂದೂ, ಒಳ್ಳೇ ಸಾಹಿತ್ಯವು ಸಾಹಿತಿಗಳುಂಟೆಂದು ಹೇಳಿದರು. ಈ ಮಾತನ್ನು ಗಮನಿಸದ ಕಪಟರಾಳ ಕೃಷ್ಣರಾವ್‌ ಅವರು ಬಿ.ಎಂ.ಶ್ರೀ. ಅವರ ಭಾಷಣದಿಂದ ಕನ್ನಡ ಜನರ ಕಣ್ಣಿಗೆ ಅಂಜನ ಹಚ್ಚಿದಂತಾಯಿತು ಎಂದು ಅಭಿಪ್ರಾಯಪಡುತ್ತಾರೆ.

ಶಿಕ್ಷಣಕ್ಕಾಗಿ ಹೈದರಾಬಾದ್ ನಗರ ಸೇರಿದ ಸಾಹಿತ್ಯಾಸಕ್ತ ವಿದ್ಯಾರ್ಥಿಗಳು ಅನೇಕ ಬಿಕ್ಕಟ್ಟುಗಳನ್ನು ಎದುರಿಸಬೇಕಾಗಿತ್ತು. ನಿಜಾಂ ನಗರ ಹೈದರಾಬಾದಿನಲ್ಲಿ ಉರ್ದು ಭಾಷೆ ಮತ್ತು ಆ ಭಾಷೆಯ ಜನಾಂಗದವರ ಮಧ್ಯ ಬದುಕಬೇಕಾಗಿತ್ತು. ಬ್ರಿಟಿಷರ ಪ್ರಭುತ್ವವನ್ನು ನಿರಾಕರಿಸುದು ಎಂದರೆ ನಿಜಾಂ ಪ್ರಭುತ್ವನ್ನು ತಿರಸ್ಕರಿಸಿದಂತೆ. ಸ್ವಾತಂತ್ರ ಹೋರಾಟದಲ್ಲಿ ಮಾಲ್ಗೊಳ್ಳುವ ಉತ್ಸಾಹ ಒಂದು ಕಡೆ, ಶಿಕ್ಷಣವನ್ನು ಸುಗಮವಾಗಿ ಮುಗಿಸುವ ಆತಂಕ ಇನ್ನೊಂದು ಕಡೆ. ಕನ್ನಡ ಸಾಹಿತ್ಯ ಚಟುವಟಿಕೆಗಳನ್ನು ನಡೆಸುವುದಕ್ಕೆ ಈ ವಿದ್ಯಾರ್ಥಿಗಳಿಗೆ ಅಷ್ಟು ಸ್ವತಂತ್ರ ಇರಲಿಲ್ಲ. ಇಂಗ್ಲಿಷ್ ಶಿಕ್ಷಣದಿಂದ ಪಶ್ಚಿಮದ ಜ್ಞಾನವನ್ನು ಪಡೆದುಕೊಳ್ಳುವುದಕ್ಕೆ ಅವಕಾಶಗಳು ಸುಲಭವಾಗಿ ದಕ್ಕಲಿಲ್ಲ. ಮೈಸೂರು, ಧಾರವಾಡ ಪ್ರದೇಶಗಳಲ್ಲಿ ಉತ್ಸಾಹದಿಂದ ಪ್ರಾರಂಭವಾದ ಸಾಹಿತ್ಯ ಚಿಂತನೆಗಳ ಸಂಪರ್ಕ ಮಾಧ್ಯಮದ ಕೊರತೆಯಿಂದ ಇವರಿಗೆ ದೊರೆಯಲಿಲ್ಲ. ಇವೆಲ್ಲಕ್ಕಿಂತ ಹೆಚ್ಚಾಗಿ ಈ ಪ್ರಾಂತ್ಯದ ಒಡಲೊಳಗೆ ಹುಟ್ಟಿಕೊಂಡ ಅನೇಕ ಬಿಕ್ಕಟ್ಟುಗಳನ್ನು ಎದುರಿಸುವುದರಲ್ಲೇ ಸಮಯ ವ್ಯಯವಾಗಿ ಹೋಯಿತು. ನಿಜಾಂ ಅಡಳಿತದ ಬೆಂಬಲಿಗರಾಗಿ ಹುಟ್ಟಿಕೊಂಡ ಮತೀಯ ಮನೋಧರ್ಮದರಜಾಕಾರರ: ಹಾವಳಿಯಿಂದ ಈ ಪ್ರಾಂತ್ಯವು ಭಯದ ನೆರಳಿನಲ್ಲಿ ಮುದುಡಿ ಹೋಯಿತು. ಇಂಥ ವಾತಾವರಣದ ನಡುವೆಯೂ ಹೈದರಾಬಾದ್‌ ಕರ್ನಾಟಕದ ಸಾಹಿತ್ಯದ ವಿದ್ಯಾರ್ಥಿಗಳು ಬಿ. ಎಂ.ಶ್ರೀ, ಅವರ ಸಂಪರ್ಕದಿಂದ ನವೋದಯ ಮಾರ್ಗದಲ್ಲಿ ನಡೆಯಲು ಪ್ರಯತ್ನಿಸಿದ್ದಾರೆ. ಅರವತ್ತರ ದಶಕದಲ್ಲಿ ಅನಕೃ. ಅವರ ಸಂಪರ್ಕದಿಂದ ಪ್ರಗತಿಶೀಲ ಸಾಹಿತ್ಯ ಚಳುವಳಿ ಪಾಲ್ಗೊಳ್ಳಲು ಪ್ರಯತ್ನಿಸಿದ್ದಾರೆ. ವಿನಾಯಕರ ಸಂಪರ್ಕದಿಂದ ನವ್ಯ ಸಾಹಿತ್ಯ ರಚನೆಗೆ ಒಲಿದಿದ್ದಾರೆ. ಆದರೆ ಇವರ ನಡಿಗೆಯಲ್ಲ ಬಾಲ ನಡಿಗೆಯಾಯಿತು. ಅದು ಸಹಜ ಎಂಬುದನ್ನು ಎಲ್ಲರೂ ಬಲ್ಲರು.

ಈ ಪ್ರಾಂತ್ಯದಲ್ಲಿ ಸಾಹಿತ್ಯ ಚಟುವಟಿಕೆಗಳು ಸಂಘಟನಾತ್ಮಕವಾಗಿ ಅಷ್ಟಾಗಿ ನಡೆಯಲಿಲ್ಲ. ಹೈದರಾಬಾದ್ ನಗರದಲ್ಲಿ ಅನೇಕ ಆತಂಕಗಳ ನಡುವೆ ಕಲಿತ ಸಾಹಿತ್ಯಾಸಕ್ತ ವಿದ್ಯಾರ್ಥಿಗಳು ನಂತರ ಬೇರೆ ಬೇರೆ ಭಾಗಗಳಿಗೆ ಉದ್ಯೋಗಾವಕಾಶ ಪಡೆದು ಹೋದರು. ಹೋದವರಲ್ಲಿ ಅನೇಕರು ಬೇರೆ ಬೇರೆ ಸಮಸ್ಯೆಗಳಲ್ಲಿ ಮುಳುಗಿದರು. ಸಿದ್ದಯ್ಯ ಪುರಾಣಿಕರು, ಜಯತೀರ್ಥ ರಾಜಪುರೋಹಿತರು ಅಧ್ಯಾಪಕರಾಗದೆ ಆಡಳಿತಾತ್ಮಕ ಉನ್ನತ ಹುದ್ದೆಗಳಿಗೆ ಸೇರಿಕೊಂಡದ್ದರಿಂದ ಇಂಥವರಿಗೆ ಸಾಹಿತ್ಯ ಚಟುವಟಿಕೆಗಳನ್ನು ಸಂಘಟನಾತ್ಮಕವಾಗಿ ನಡೆಸಲು ಅವಕಾಶ, ಅನುಕೂಲಗಳಿರಲಿಲ್ಲ. ಇವರೆಲ್ಲ ವ್ಯಕ್ತಿಗತ ಅಧ್ಯಯನದಿಂದ, ಅವಕಾಶ ಮಾಡಿಕೊಂಡು ಸಂಘಟನಾತ್ಮಕವಾಗಿ ಸಾಹಿತ್ಯ ಕೃಷಿ ಮಾಡಿದರು. ಅಧ್ಯಾಪಕರಾಗಿ ಡಿ.ಕೆ. ಭೀಮಸೇನರಾವ್, ಶಾಂತರಸರು ಸಂಘಟನಾತ್ಮಕವಾಗಿ ದುಡಿದು ಈ ಪ್ರಾಂತ್ಯದಲ್ಲಿ ಸಾಹಿತ್ಯ ವಾತಾವರಣವನ್ನು ಮೂಡಿಸಲು ಪ್ರಯತ್ನಿಸಿದರು. ಸ್ವಾತಂತ್ರ ಪೂರ್ವ, ಸ್ವಾತಂತ್ರೋತ್ತರ ಕಾಲದಲ್ಲಿ ಶಾಂತರಸರು `ಮುಸುಕು ತೆರೆ’, `ಬೆನ್ನ ಹಿಂದಿನ ಬೆಳಕು' ಕೃತಿಗಳ ಸಂಗ್ರಹಗಳೇ ಅವರ ಸಂಘಟನಾತ್ಮಕ ಪ್ರಯತ್ನಗಳಿಗೆ ನಿದರ್ಶನಗಳಾಗಿವೆ. 'ಸತ್ಯ ಸ್ನೇಹ ಪ್ರಕಾಶನ’ ದಿಂದ ಅನೇಕ ಕವಿಗಳನ್ನು ಸಾಹಿತ್ಯ ಲೋಕಕ್ಕೆ ಪರಿಚಯಿಸಿದರು. ಇಂಥ ಪ್ರಯತ್ನಗಳು ಕಿರು ಧಾರೆಯಂತೆ ಕಾಣಿಸಬಹುದು. ಆದರೆ ಈ ಪ್ರಾಂತ್ಯದ ಚರಿತ್ರೆಯಲ್ಲಿ ಈ ಪ್ರಯತ್ನಗಳ ಸಾಧನೆ ದೊಡ್ಡದೇ.

ಈ ಪ್ರಾಂತದಲ್ಲಿ ಆಧುನಿಕ ಕನ್ನಡ ಸಾಹಿತ್ಯವು ಮುಖ್ಯವಾಗಿ ಕಾವ್ಯ, ಕಥೆ, ಕಾದಂಬರಿ ಪ್ರಕಾರಗಳಲ್ಲಿ ಕಾಣಿಸಿಕೊಂಡಿತು. ಈ ಸಾಹಿತ್ಯ ಪ್ರಕಾರಗಳಲ್ಲಿ ಕಥೆ, ಕಾದಂಬರಿ, ನಾಟಕ ಮುಂತಾದವೂ ಪಶ್ಚಿಮದ ಕೊಡುಗೆಗಳೇ. 'ಕಾವ್ಯ ಪ್ರಕಾರ' ನಮ್ಮದಾದರೂ ಆಧುನಿಕ ಕಾವ್ಯ ಹೊಸ ರೂಪದಲ್ಲಿ ಬೆಳೆಯಿತು. ನಮ್ಮ ಕಾವ್ಯ ಪ್ರಕಾರದಲ್ಲಿ ಆಧುನಿಕ ಮಹಾಕಾವ್ಯಗಳು ರೂಪಗೊಂಡವು. ಆದರೆ ನವೋದಯ ಕಾವ್ಯ ಮಾತ್ರ ಪಶ್ಚಿಮದ ಕಾವ್ಯ ರೂಪದಲ್ಲಿಯೇ ಹುಟ್ಟಿವೆ.

ಈ ಸಾಹಿತ್ಯ ರೂಪಗಳ ಪ್ರಸ್ತಾಪ ಯಾಕೆ ಬಂದಿತೆಂದರೆ, ಆಧುನಿಕ ಕನ್ನಡ ಸಾಹಿತ್ಯವು ಈ ಸಾಹಿತ್ಯ `ರೂಪ’ಗಳಲ್ಲಿಯೇ ಬೆಳೆಯಿತು. ಆಧುನಿಕ ಸಾಹಿತಿಗಳು ತಮ್ಮ ಪ್ರತಿಭೆಯನ್ನು ಕಥೆ, ಕಾದಂಬರಿ, ಕಾವ್ಯ, ನಾಟಕ, ಲಲಿತ ಪ್ರಬಂಧ ಮುಂತಾದ ಸಾಹಿತ್ಯ ಪ್ರಕಾರಗಳ ಮೂಲಕ ಪ್ರಾರಂಭಿಸಿ, ತಮ್ಮ ತಮ್ಮ ಪ್ರತಿಭೆಯ ಅನನ್ಯತೆಗೆ ಈ ಸಾಹಿತ್ಯ ಪ್ರಕಾರಗಳನ್ನು ದುಡಿಸಿಕೊಂಡರು. ಈ ಪ್ರಾಂತದ ಆಧುನಿಕ ಕನ್ನಡ ಸಾಹಿತ್ಯಕ ಸಂದರ್ಭದಲ್ಲಿ ಕೂಡ ಅನೇಕ ಸಾಹಿತಿಗಳು ಈ ಸಾಹಿತ್ಯ ಪ್ರಕಾರದಲ್ಲಿ ಬರೆಯತೊಡಗಿದರು. ಆದರೆ ಸಿದ್ದಯ್ಯ ಪುರಾಣಿಕ ಮತ್ತು ಚನ್ನಣ್ಣ ವಾಲಿಕಾರರ ಅವರ ಬೆಳವಣಿಗೆಯನ್ನು ಈ ಹೊತ್ತಿನಲ್ಲಿ ನಿಂತು ನೋಡಿದರೆ ಆಶ್ಚರ್ಯವೆನಿಸುತ್ತದೆ. ಇಬ್ಬರದು ಒಂದೊಂದು ತುದಿ. ಸಿದ್ದಯ್ಯ ಪುರಾಣಿಕರು ವಚನ ಪರಂಪರೆಯ ಮುಂದುವರಿಕೆ ಆಗಲಿಲ್ಲ. ಬದಲಾಗಿ ವಚನ ಸಂಪ್ರದಾಯದಲ್ಲಿ ಸಾಗಿದರು.

ಅದೇ ರೀತಿ ಚೆನ್ನಣ್ಣ ವಾಲೀಕಾರರು ಜನಪದ ಸಾಹಿತ್ಯ ರೂಪಗಳಲ್ಲಿ ಕಾವ್ಯ ರಚಿಸುತ್ತಾ ಜನಪದ ಸಾಹಿತ್ಯ ಸಂಪ್ರದಾಯದಲ್ಲಿ ಸಾಗಿದರು. ಪ್ರಧಾನವಾಗಿ ಈ ಇಬ್ಬರ ಸಾಹಿತ್ಯ ಆಧುನಿಕ ಸಾಹಿತ್ಯ ಪ್ರಕಾರಗಳಲ್ಲಿ ಬೆಳೆಯದೆ 'ವಚನ' ಮತ್ತು 'ಜಾನಪದ ಪ್ರಕಾರದಲ್ಲಿ ಬೆಳದಿದೆ. ಇದರಿಂದ ಒಂದು ಬಗೆಯ 'ಸಂಪ್ರದಾಯ'ದಲ್ಲಿ ನಿಂತರೆ ಹೊರತು 'ಪರಂಪರೆ'ಯಲ್ಲಿ ಸೇರಿಕೊಳ್ಳಲಿಲ್ಲ ಅನಿಸುತ್ತದೆ. 'ಸಂಪ್ರದಾಯ'ದಲ್ಲಿ ಅನನ್ಯತೆಯನ್ನು ಪ್ರಕಟಿಸಿರುವರೆ ಎಂಬ ಪ್ರಶ್ನೆ ಬೇರೆ. ವಚನ ಪರಂಪರೆಯು ಸಂಕ್ರಾತಿ (ಲಂಕೇಶ್‌), 'ಮಹಾಚೈತ್ರ' (ಶಿವಪ್ರಕಾಶ), 'ಕುಸುಮ ಬಾಲೆ' ಯಲ್ಲಿ (ದೇವನೂರು ಮಹಾದೇವ) ಕಾಣಿಸಿದೆ. ಜಾನಪದ ಪರಂಪರೆಯು ಬೇಂದ್ರೆಯವರ ಕಾವ್ಯ, ಕಂಬಾರರ ಕಾವ್ಯದ, ಕಾಣಿಸಿದೆ ಎಂಬ ಚರ್ಚೆಗಳು ಕನ್ನಡ ಸಹಿತ್ಯ ವಿಮರ್ಶೆಯಲ್ಲಿ ನಡೆಯುತ್ತಿವೆ. ಶಾಂತರಸ, ಜಯತೀರ್ಥ ರಾಜಪುರೋಹಿತ, ಗೀತಾ ನಾಗಭೂಷಣ, ಚಂದ್ರಕಾಂತ ಕುಸನೂರ ವೀರೇಂದ್ರ ಸಿಂಪಿ, ಜಂಬಣ್ಣ ಅಮರಚಿಂತ, ಶಿವಶರಣ ಜಾವಳಿ, ಶೈಲಜಾ ಉಡಚಣ ಮುಂತಾದವರು ಆಧುನಿಕ ಸಾಹಿತ್ಯವನ್ನು ಆಧುನಿಕ ಪ್ರಕಾರಗಳಲ್ಲಿ ರಚಿಸಿರುವುದು ಉಚಿತವೆನಿಸುತ್ತದೆ. ಈ ದೃಷ್ಟಿಯಿಂದ ಈ ಪ್ರಾಂತ್ಯದಲ್ಲಿ ಆಧುನಿಕ ಸಾಹಿತ್ಯವು ಅನೇಕ ಸಾಂಸ್ಕೃತಿಕ ತೊಡಕುಗಳ ನಡುವೆಯೂ ನಿಧಾನವಾಗಿ ಹೆಜ್ಜೆಯಿಡುತ್ತಾ ನಡೆದಿದೆ.

ಸ್ವಾತಂತ್ರಪೂರ್ವದ ಈ ಪ್ರಾಂತ್ಯದಲ್ಲಿ ಕನ್ನಡವೂ ಮಠಗಳಲ್ಲಿ ಜೀವ ಹಿಡಿದು ನಿಂತಿತ್ತು. ಇದೇ ಕನ್ನಡವೂ ಪುರಾಣ, ಶಾಸ್ತ್ರ, ತತ್ವಪದ, ವಚನ ಮುಂತಾದ ಸಾಹಿತ್ಯ ಸೃಷ್ಟಿಗೆ ಕಾರಣವಾಯಿತು. ಈ ಪ್ರಾಂತ್ಯದಲ್ಲಿ ತತ್ವಪದ ಸಾಹಿತ್ಯಕ್ಕೆ, ಪುರಾಣ ಸಾಹಿತ್ಯಕ್ಕೆ, ವಚನ ಸಾಹಿತ್ಯಕ್ಕೆ ಮಠಮಾನ್ಯಗಳಲ್ಲಿ ಉಳಿದ ಕನ್ನಡ ಭಾಷೆಯೇ ಪ್ರೇರಣೆಯಾಯಿತು. ಜನಸಾಮನ್ಯರಲ್ಲಿ, ಓಣಿ ಸಂತೆಯಲ್ಲಿ ಉಳಿದ ಕನ್ನಡ ಭಾಷೆಯೂ ಪುನಃ ಈ ಹೊತ್ತಿನ ಕಥೆ ಕಾದಂಬರಿಗಳಲ್ಲಿ ಕಾಣಿಸಿಕೊಂಡಿದೆ. ಬೀದರಿನ ಶಿಕುಮಾರ ನಾಗವಾರ, ಶ್ರೀಕಾಂತ ಪಾಟೀಲ, ಕಲ್ಬುರ್ಗಿಯ ರಾಜಶೇಖರ ಹತಗುಂದಿ, ಚಿತ್ರಶೇಖರ ಕಂಠಿ, ರಾಯಚೂರಿನ ಅಮರೇಶ ನುಗಡೋಣಿ, ಕಲಿಗಣನಾಥ ಗುಡುದೂರು, ರಾಜಶೇಖರ ನೀರಮಾನವಿ, ಮಹಾಂತೇಶ ನವಲಕಲ್, ಅಮರೇಶ ಗಿಣಿವಾರ, ಶರಣಬಸವ ಗುಡದಿನ್ನಿ, ಚಿದಾನಂದ ಸಾಲಿ, ಅಬ್ದುಲ್ ರಹಿಮಾನ್ ಗೋನಾಳ್ ಮುಂತಾದ ಲೇಖಕರು ಜನರಾಡುವ ಭಾಷೆಯನ್ನು ತಮ್ಮ ಸಾಹಿತ್ಯದಲ್ಲಿ ತರುವ ಪ್ರಯತ್ನ ಮಾಡಿದ್ದಾರೆ.

ಈ ಪ್ರದೇಶದ ಸಾಹಿತಿಗಳ ಮೇಲೆ ಪ್ರಾರಂಭದಲ್ಲಿ ಪ್ರತಿಶೀಲ ಸಾಹಿತ್ಯ ಚಳುವಳಿ ಪ್ರಭಾವ ಬೀರಿದೆ. `ಒರೆಗಲ್ಲು' (1953) ಹಾಗೂ 'ಸನ್ಮಾನ' (1968) ಎಂಬ ಆಂಥ್ಯಾಲಜಿಗಳು ಇದಕ್ಕೆ ಸಾಕ್ಷಿಯಾಗಿವೆ. ನರಸಿಂಹ ಕಠಾವಿ, ಕುಮಾರಿ ಸುಶೀಲಾ ಬಾಡಗಂಡಿ, ವಾಗೀಶ್ವರಿ ನಾರಾಯಣ, ಎಚ್. ಜಿ. ಕುಲಕರ್ಣಿ, ಶ್ಯಾಮಪ್ರಸಾದ ಮುದ್ದಲ್, ಶಾಂತಾ ಚಿಂಚೋಳಿ, ಗುರುನಾಥ ರೆಡ್ಡಿ ಪರ್ವತಾಬಾದ, ವಸುಂಧರಾ ಕಲಬುರ್ಗಿ, ಅನಂತ ಹರಸೂರು, ಬೆಳಿಗೆರೆ ಪಾರ್ವತಮ್ಮ ಮುಂತಾದವರು ಬರೆದ ಒಂದೊಂದು ಕಥೆಗಳು ಓರೆಗಲ್ಲು' (1951) ಕಥಾ ಸಂಕಲನದಲ್ಲಿ ಸೇರಿವೆ. ಆದರೆ ಇವರ ಬರವಣಿಗೆ ಮುಂದುವರೆದ ಬಗ್ಗೆ ದಾಖಲೆಗಳಿಲ್ಲ. ಇವರೆಲ್ಲ ಸ್ವಾತಂತ್ರ್ಯ ಪೂರ್ವದಲ್ಲಿ ಈ ಪ್ರದೇಶದವರಿಗೆ ಕನ್ನಡ ಸಾಹಿತ್ಯ-ಸಂಸ್ಕೃತಿಯ ಕೇಂದ್ರವಾದಂತಿದ್ದ ಹೈದರಾಬಾದ್ ನಗರದಲ್ಲಿ ವಿದ್ಯಾರ್ಥಿಗಳಾಗಿದ್ದವರು. ಹೈದರಾಬಾದ್ ಕರ್ನಾಟಕದ ಕಲಬುರ್ಗಿಗೆ ಅ.ನ.ಕೃ ಬರುವರೆಂದು ತಿಳಿದ ಈ ಭಾಗದ ಲೇಖಕರು, ಅವರಿಗೆ ಅರ್ಪಿಸಲು ತಮ್ಮ ತಮ್ಮ ಕಥೆಗಳನ್ನು ಒಂದೇ ಕೃತಿಯಲ್ಲಿ ಸಂಕಲಿಸಿ, ಅದಕ್ಕೆ 'ಸನ್ಮಾನ' ಎಂದು ಹೆಸರಿಟ್ಟು, ಅದನ್ನು ಅವರಿಗೆ ಅರ್ಪಿಸಿರುವುದೇ ಸಾಕ್ಷಿಯಾಗಿದೆ. ಈ ಎರಡು ಸಂಕಲನದ ಕಥೆಗಳು ಪ್ರಗತಿಶೀಲ ಸಾಹಿತ್ಯದ ಆಶಯಗಳನ್ನು ಹೊಂದಿವೆ. ಇದಕ್ಕೂ ಮುನ್ನ ರಾಯಚೂರು ಭಾಗದಿಂದ 1947ರಲ್ಲಿ ಹೊರಬಂದ 'ಮುಸುಕು ತೆರೆ' ಎಂದ ಸಂಕೀರ್ಣ ಕೃತಿಯಲ್ಲಿಯೇ ಪ್ರಗತಿಶೀಲರ ಪ್ರಭಾವ ಒಡೆದು ಕಾಣುತಿತ್ತು. ಇದೇ ಸಮಯದಲ್ಲಿ ಬಂದ ಎ.ಬಿ. ಮುತ್ತಾಳರ 'ಕಳಚಲಿದೆ ರತ್ನ' (1951) ಸಗರ ಕೃಷ್ಣಾಚಾರ್ಯರ 'ಆದರ್ಶ' (1960) ಹಾಗೂ ಶಿವಲೆಂಕರ 'ಅವಳೇ ಇವಳೂ' (1969) ಕಥಾ ಸಂಕಲನಗಳು ಹೆಚ್ಚಿನ ಪುರಾವೆಗಳನ್ನು ಒದಗಿಸುತ್ತವೆ.

ಶಿವಲೆಂಕ, ಸಿದ್ಧಯ್ಯ ಪುರಾಣಿಕ, ದೇವೇಂದ್ರ ಕುಮಾರ ಹಕಾರಿ, ಪಂಚಾಕ್ಷರಿ ಹಿರೇಮಠ, ಶಾಂತರಸ, ಚಂದ್ರಕಾಂತ ಕುಸನೂರು, ಜಯತೀರ್ಥ ರಾಜಪುರೋಹಿತ, ಜಿ.ವಿ. ವಿಸಾಜಿ ಮುಂತಾದವರ ಕಥೆಗಳಲ್ಲಿ, ಮಧ್ಯಮ, ಕೆಳವರ್ಗದ ಜನರ ತಲ್ಲಣಗಳು, ಕನಸುಗಳು, ಆಸೆ-ಆಕಾಂಕ್ಷೆಗಳು, ಭಾವುಕ-ರಂಜಕ ನೆಲೆಯಲ್ಲಿ ಪ್ರಗತಿಶೀಲ ಸಾಹಿತ್ಯದ ಆಶಯಗಳಿಗೆ ಅನುಗುಣವಾಗಿ ಪ್ರಕಟವಾಗಿವೆ. ಅದರಲ್ಲೂ ಕಲಾವಿದರನ್ನು ಕುರಿತ ಕಥೆಗಳೂ ವಿಶೇಷವಾಗಿವೆ.ಮೇಲೆ ಹೆಸರಿಸಿದ ಕಥೆಗಾರರಲ್ಲಿ ಶಾಂತರಸ, ಜಯತೀರ್ಥ ರಾಜಪುರೋಹಿತರು ಹೆಚ್ಚು ಕಥೆಗಳನ್ನು ಬರೆದವರು.

ಕನ್ನಡ ಕಾದಂಬರಿ ಪರಂಪರೆಯನ್ನು ಗಮನಿಸಿದರೆ, ಅದು ಪ್ರಾದೇಶಿಕ ವೈಶಿಷ್ಟ್ಯವನ್ನು ದಾಖಲಿಸುತ್ತ ನಡೆದಿದೆ. ಪ್ರಾರಂಭದ ಕಾದಂಬರಿಗಳಲ್ಲಿ ಪ್ರಾದೇಶಿಕವ ಭಿನ್ನ ಜೀವನಕ್ರಮ, ಸಂಪ್ರದಾಯ-ನಂಬಿಕೆಗಳು, ಪ್ರಾಕೃತಿಕ ಪರಿಸರ, ಭಾಷೆ, ಸಾಜ್ಯ ಅನನ್ಯತೆಗಳು ದಾಖಲಾಗಿ ವೈವಿಧ್ಯಮಯ ಬದುಕು ಅನಾವರಣಗೊಂಡು ಮಲೆನಾಡಿನ ಬದುಕನ್ನು ಕುವೆಂಪು ಕಾದಂಬರಿಗಳು, ಕಡಲ ಪರಿಸರದ ಬಮು ಕಾರಂತರ ಕಾದಂಬರಿಗಳು, ಉತ್ತರ ಕರ್ನಾಟಕದ ಬದುಕನ್ನು ರಾವ್ ಬಹದ್ದೂರ ಮಿರ್ಜಿ ಅಣ್ಣಾರಾಯ, ಶಂಕರ ಮೊಕಾಸಿ ಪುಣೇಕರ್ ಮುಂತಾದವರ ಕಾದಂಬರಿಗಳು ಹಿಡಿದಿಟ್ಟಿವೆ. ಅದರಂತೆ ಹೈದರಾಬಾದ್ ಕರ್ನಾಟಕದ ಸಾಂಸ್ಕೃತಿಕ ಬದುಕ ಇಡಿಯಾಗಿ ಬಿಂಬಿಸುವ ಕಾದಂಬರಿಗಳು ಸ್ವಾತಂತ್ರ್ಯಪೂರ್ವದಲ್ಲಿ ಸಾಮಾಜಿಕ ರಾಜಕೀಯ ಕಾರಣಗಳಿಂದ ಹುಟ್ಟಿಕೊಳ್ಳಲಿಲ್ಲ. ಅರವತ್ತರ ದಶಕದಲ್ಲಿ ಹುಟ್ಟಿಕೊಡ 'ಬೆಳ್ಯ', 'ಯಾತನಾ ಶಿಬಿರ' 'ಹಾಲುಜೇನು' 'ಸುಳಿಗಾಳಿ' 'ಗೋಹರಜಾನ್ ಮಾಹಿತಿ : ಮತ್ತು ನಾನು', 'ಸಣ್ಣ ಗೌಡಸಾನಿ', 'ಕುರುಮಯ್ಯ ಮತ್ತು ಅಂಕುಶದೊಡ್ಡಿ', ಗತಿ, ಹಾಗೂ ಗೀತಾ ನಾಗಭೂಷಣ ಅವರ ಕಾದಂಬರಿಗಳು ಸ್ವಾತಂತ್ರ್ಯಪೂರ್ವದ ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ತಲ್ಲಣಗಳನ್ನು ಬಿಂಬಿಸಲು ಪ್ರಯತ್ನಿಸಿವೆ. ಸಾಮಾಜಿಕ ಸಂದರ್ಭದ ವಸ್ತುಸ್ಥಿತಿಯ ಚಿತ್ರಗಳು ಈ ಕಾದಂಬರಿಯಲ್ಲಿ ಮರುಸೃಷ್ಟಿ ಪಡೆದಿವೆ. ಕುತೂಹಲವೆಂದರೆ ಗ್ರಾಮಾಂತರ ಪ್ರದೇಶಗಳ ಸಾಂಸ್ಕೃತಿಕ ಏಳುಬೀಳಿನ ಬದುಕನ್ನು ಕಾಣಿಸುವ ಕಾದಂಬರಿಗಳು ಮಾತ್ರ ಇದುವರೆಗೂ ಸೃಷ್ಟಿಯಾಗುತ್ತಿದೆಯೇ ಹೊರತು ನಗರ ಪ್ರದೇಶದ ಬದುಕಿನ ವಿವರಗಳನ್ನು ಕಾಣಿಸುವ, 'ಆಧುನಿಕ ಬದುಕಿನ ತಲ್ಲಣಗಳನ್ನು ಕಟ್ಟಿಕೊಡುವ ಕಾದಂಬರಿಗಳು ಹುಟ್ಟಿಕೊಳ್ಳುತ್ತಿಲ್ಲ. ಈ ಮಾತು ಸಣ್ಣ ಕಥೆಗಳ ವಿಷಯದಲ್ಲಿಯೂ ನಿಜ. ಈ ಶತಮಾನದ ಪ್ರಾರಂಭದ ಹೊತ್ತಿನಲ್ಲಿ ಸೃಷ್ಟಿಯಾದ ಪ್ರಾದೇಶಿಕ ವೈಶಿಷ್ಟ್ಯವನ್ನು ಮುಂದುಮಾಡಿ ದಾಖಲಿಸುವ ಕಾದಂಬರಿಗಳು: ಈ ಭಾಗದವರಿಗೆ ತಡವಾಗಿ ಪ್ರೇರೇಪಿಸಿರುವುದರಿಂದಲೂ, ಸ್ವಾತಂತ್ರ್ಯ ಪೂರ್ವದಲ್ಲಿ ಬರೆಯುವ ಒತ್ತಡವನ್ನು ಸೃಷ್ಟಿಸಿಕೊಳ್ಳದೇ ಇರುವುದರಿಂದಲೂ, ಅರವತ್ತರ ದಶಕದಲ್ಲಿ ಬರೆಯಲು ತೊಡಗಿದ ಲೇಖಕರಿಗೆ ಸಹಜವಾಗಿ ತಮ್ಮ ಪ್ರಾದೇಶಿಕ ಅನನ್ಯತೆಯನ್ನು ಸೃಷ್ಟಿಸಲು ಪ್ರೇರಕವಾಗಿರಬೇಕು. ಈ ಸಂದಿಗ್ಧತೆಯಲ್ಲಿಯೇ ನವ್ಯ ಸಾಹಿತ್ಯ ಚಳುವಳಿ ಬಂದು ಹೋದದ್ದು ಈ ಭಾಗದವರ ಗಮನಕ್ಕೆ ಬರಲಿಲ್ಲ. ಬಂದರೂ ನವ್ಯ ಸಾಹಿತ್ಯದ ಧೋರಣೆಗಳು ಈ ಭಾಗದ ಲೇಖಕರಿಗೆ ಅಪರಿಚಿತವಾಗಿದ್ದವು. ಆಧುನಿಕ ಬದುಕಿನ ಆತಂಕಗಳು, ವ್ಯಕ್ತಿಗಳ ಅನಾಥಪ್ರಜ್ಞೆ ಮುಂತಾದ ಪರಿಸರವೇ ಈ ಭಾಗದ ಬರಹಗಾರರಿಗೆ ದಕ್ಕಲಿಲ್ಲ. ದಕ್ಕಸಿಕೊಳ್ಳಲು ನೋಡಿದವರಿಗೆ ಅದರ ಲಯವೇ ಸಿಗಲಿಲ್ಲ. ಹೀಗಾಗಿ (ಚಂದ್ರಕಾಂತ ಕುಸನೂರು ಅವರು 'ಚರ್ಚ್‌ಗೇಟ್' ಅಪವಾದ ಎಂಬಂತೆ ನವ್ಯ ಕಾದಂಬರಿ ಬರೆದಿದ್ದಾರೆ.) ಸ್ವಾತಂತ್ರ್ಯ ಪೂರ್ವ ಕಾದಂಬರಿಗಳ ಆಶಯಗಳ ಇನ್ನೊಂದು ರೂಪದಂತೆ ಕಾಣುವ ಬಂಡಾಯ ಸಾಹಿತ್ಯ ಚಳುವಳಿಯ ಕಾಲದಲ್ಲಿ ಹುಟ್ಟಿಕೊಂಡ ಧೋರಣೆಗಳು ಪುನಃ ಈ ಭಾಗದ ಲೇಖಕರಿಗೆ ಬರೆಯುವ ಒತ್ತಡಗಳನ್ನು ನಿರ್ಮಾಣ ಮಾಡಿದವು. ಪ್ರಾದೇಶಿಕ ಅನನ್ಯತೆಯನ್ನು ಕಟ್ಟಿಕೊಡುವ ಕಾದಂಬರಿಗಳ ಸೃಷ್ಟಿ ಅರವತ್ತರ ದಶಕದ ಹೊತ್ತಿಗೆ ಮುಗಿದು ಹೋಗಿ, ನವ್ಯ ಸಾಹಿತ್ಯ ಚಳುವಳಿಯ ಪ್ರೇರಣೆಯಿಂದ ಹುಟ್ಟಿಕೊಂಡ ನವ್ಯ ಕಾದಂಬರಿಗಳ ಅಬ್ಬರದ ಹೊತ್ತಿನಲ್ಲಿ ಈ ಭಾಗದ ಬರಹಗಾರರಿಗೆ, ಮುಗಿದು ಹೋದಂತೆ ಕಾಣಿಸುತ್ತಿದ್ದ ಪ್ರಾದೇಶಿಕ ವೈಶಿಷ್ಟ್ಯತೆಯನ್ನು ಹೊತ್ತ ಕಾದಂಬರಿಗಳ ಮಾದರಿಯಲ್ಲಿ ಬರೆಯಲೂ ಅನುಮಾನ ಪಟ್ಟಂತೆ ಕಾಣುತ್ತದೆ. ನವ್ಯ ಕಾದಂಬರಿಗಳಂತೆ ಬರೆಯಲು ಆ ಪ್ರಜ್ಞೆಯ ಅನುಭವದ ಕೊರತೆ. ಇಂಥ ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸಿದವರಲ್ಲಿ ಶಾಂತರಸ ಮತ್ತು ಜಂಬಣ್ಣ ಅಮರಚಿಂತರು ಮುಖ್ಯರು. ಅರವತ್ತರ ದಶಕದಲ್ಲಿ ಸ್ಥಳೀಯ ಬದುಕಿನ ವಿವರಗಳನ್ನು ಬಿಂಬಿಸುವ 'ಸಣ್ಣ ಗೌಡಸಾನಿ' ಎಂಬ ದೊಡ್ಡ ಕಾದಂಬರಿಯನ್ನು ಬರೆದರೂ ಪ್ರಕಟಿಸಲು ಹಿಂಜರಿಕೆ, ಈ ಹಿಂಜರಿಕೆಗೆ ಅದರ ಪ್ರಸ್ತುತತೆಯ ಪ್ರಶ್ನೆ ಒಂದು ಕಡೆಯಾದರೆ, ಇನ್ನೊಂದು ಪ್ರಕಾಶಕರ ಕೊರತೆ, ಅದರಂತೆ ಜಂಬಣ್ಣ ಅಮರಚಿಂತರ 'ಕುರುಮಯ್ಯ ಮತ್ತು ಅಂಕುಶದೊಡ್ಡಿ' ಕಾದಂಬರಿಯನ್ನು ಎಪ್ಪತ್ತರ ದಶಕದಲ್ಲಿ ದೊಡ್ಡವಾಗಿ ಅದು ಪ್ರಾದೇಶಿಕ ಅನನ್ಯತೆಯ ವಿವರಗಳಿಗಿಂತ ಬುಡಕಟ್ಟು ಜನಾಂಗದವರಾದ ಬದುಕಿನ ಕ್ರಮ ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ಕುರಿತು ಪ್ರಕಟವಾಗಲಿಲ್ಲ. ಇದಕ್ಕೂ `ಸಣ್ಣ ಗೌಡಸಾನಿ' ಕದಂಬರಿಯ ಪ್ರಕಟಣೆಗೆ ಹಿಂಜರಿಕೆಯೇ ಕಾರಣವಾಗಿರಬಹುದು. ದುರಂತವೆಂದರೆ ಅವು ಸೃಷ್ಟಿಯ ಅವಧಿಯಲ್ಲೇ ಪ್ರಕಟವಾಗಿದ್ದರೆ ಮಹತ್ವದ ಕಾದಂಬರಿಗಳ ಚರ್ಚೆಯಾಗುತ್ತಿದ್ದವು. ಆದರೆ ಅನೇಕ ಕಾರಣಗಳಿಂದ ಒಂದೂವರೆ ಎರಡು ಮೂರು ದಶಕಗಳ ಮೇಲೆ ಪ್ರಕಟವಾದವು. ಅದು ಮೂಲದ ಗಾತ್ರವನ್ನು ಕಳೆದುಕೊಂಡು ಸಂಕ್ಷಿಪ್ತರೂಪದಲ್ಲಿ ಪ್ರಕಟವಾದವು. ೧೯೮೮ರಲ್ಲಿ 'ಸಣ್ಣ ಗೌಡಸಾನಿ'ಯು 1994ರಲ್ಲಿ 'ಕುರುಮಯ್ಯ ಮತ್ತು ಅಂಕುಶದೊಡ್ಡಿ'ಯು ಹೊರಬಂದವು.

ಈ ಪ್ರಾಂತ್ಯದಲ್ಲಿ ಸ್ವಾತಂತ್ರೋತ್ತರದಲ್ಲಿ ಕಾದಂಬರಿಗಳ ಹುಟ್ಟಿಕೊಳ್ಳಲು ಶುರುವಾದರೂ ಪ್ರಾರಂಭದಲ್ಲಿ ಚರಿತ್ರೆಗೆ ಸಂಬಂಧಿಸಿದ ಕಾದಂಬರಿಗಳ ಬಂದವು. ಈ ಭಾಗದಲ್ಲಿ ಪ್ರಭಾವ ಬೀರಿದ ಶರಣರ ಚರಿತ್ರೆಗೆ ಸಂಬಂಧಿಸಿ ವಿಷಯವೇ ವಸ್ತು, ಶರಣರ ಪವಾಡಸದೃಶ ವ್ಯಕ್ತಿತ್ವದ ವೈಭವೀಕರಣ, ಭಕ್ತಿ- ಭಾವುಕತೆಯಿಂದ ಕೂಡಿದ 'ಮದಗಜ ಮಲ್ಲ' 'ಕುಂತಲೇಶ್ವರ' 'ಜಯಗೋದಾವರಿ’ 'ಕೂಗುತ್ತಿವೆ ಕಲ್ಲು' 'ಚೆಲ್ವ ಕೋಗಿಲೆ' 'ತ್ರಿಭವನ ಮಲ್ಲ’ ಮುಂತಾದ ಕಾದಂಬರಿಗಳು ಸೃಷ್ಟಿಯಾದವು. ಚಂದ್ರಕಾಂತ ಕುಸನೂರು ಅವರು ನವ್ಯ ಸಾಹಿತ್ಯ ಚಳುವಳಿಯ ಸಂದರ್ಭದಲ್ಲಿ ಅಸಂಗತ ನಾಟಕ, ನವ್ಯ ಕಾವ್ಯ, ಹಯಕುಗಳನ್ನು ಬರೆದು ತಮ್ಮನ್ನು ಗುರುತಿಸಿಕೊಂಡು ಇದುವರೆಗೂ ಅವರ ಹೆಸರು ನವ್ಯ ಸಾಹಿತ್ಯ ಚಳುವಳಿಯ ಕಾಲದಲ್ಲಿ ಮಾಡಿದ ಪ್ರಯೋಗಗಳ ಹಿನ್ನೆಲೆಯಲ್ಲಿ ಗುರುತಿಸಲಾಗುತ್ತದೆ. ಆದರೆ ಅವರು ಕಥೆಗಳನ್ನು ಕಾದಂಬರಿಗಳನ್ನು (ಚರ್ಚ್‌ಗೇಟ್' ಹೊರತುಪಡಿಸಿ) ವಾಸ್ತವ ಮಾರ್ಗದಲ್ಲಿ ಬರೆದಿದ್ದಾರೆ. ಅವರ ನವ್ಯ ಮಾದರಿಯ ಬರವಣಿಗೆಯನ್ನು ಹೊರತುಪಡಿಸಿದರೆ ಶತಮಾನದ ಮೊದಲರ್ಧ ಭಾಗದಲ್ಲಿ ನಡೆದ ರಾಜಕೀಯ ಸ್ಥಿತ್ಯಂತರಗಳಿಂದ ಉದ್ಭವಿಸಿ ಸಾಮಾಜಿಕ ಬಿಕ್ಕಟ್ಟುಗಳನ್ನು ತೋರಿಸುವ ಫಿಕ್ಷನ್ ಬರೆದಿದ್ದಾರೆ ಎಂಬುದು ಗೊತ್ತಾಗುತ್ತದೆ. 'ಯಾತನಾ ಶಿಬಿರ' ಕಾದಂಬರಿಯಲ್ಲಿ ಚಂದನಕೇರಿ ಎಂಬ ಹಳ್ಳಿಯನ್ನು, `ಗೋಹರಜಾನ್ ಮಾಲತಿ ಮತ್ತು ನಾನು’ ಕಾದಂಬರಿಯಲ್ಲಿ ಕಲಬುರ್ಗಿ ಮತ್ತು ಅದರ ಸುತ್ತ ಮುತ್ತಲಿನ ಹತ್ತಾರು ಹಳ್ಳಿಗಳನ್ನು ಕೇಂದ್ರವಾಗಿಟ್ಟುಕೊಳ್ಳಲಾಗಿದೆ. ಸ್ವಾತಂತ್ರ್ಯ ಹೋರಾಟ, ರಜಾಕಾರರ ದಾಳಿ, ನಿಜಾಮರ ಆಡಳಿತ ವ್ಯವಸ್ಥೆ, ಜಾತಿ ಗಲಭೆಗಳು ಮುಂತಾದ ಘಟನೆಗಳನ್ನು ತಮ್ಮ ಕಾದಂಬರಿಗಳಲ್ಲಿ ಚಿತ್ರಿಸಿದ್ದಾರೆ.

ವಸಾಹತು ಕಾಲದಲ್ಲಿ ನೇರವಾಗಿ ಬ್ರಿಟಿಷ್ ಆಡಳಿತಕ್ಕೆ ಕಲ್ಯಾಣ ರ‍್ನಾಟಕ ಒಳಗಾಗದೆ ಇರುವುದರಿಂದ ಆಧುನಿಕ ಸೌಲಭ್ಯಗಳು ದೊರೆಯಲಿಲ್ಲ. ನಿಜಾಮರು ಇಲ್ಲಿ ಆಳ್ವಿಕೆ ಮಾಡುತ್ತಿದ್ದರಿಂದ ಇಂಗ್ಲಿಷ್ ಭಾಷೆ ಶೈಕ್ಷಣಿಕ ಹಾಗೂ ಆಡಳಿತ ಭಾಷೆಯಾಗಲಿಲ್ಲ. ಉರ್ದು ಭಾಷೆ ಶಿಕ್ಷಣ ಹಾಗೂ ಆಡಳಿತ ಭಾಷೆ ಆಯಿತು. ಇದರಿಂದ ಈ ಭಾಗದಲ್ಲಿ ದೊಡ್ಡ ಶಿಕ್ಷಣ ಕ್ರಾಂತಿ ನಡೆಯಲಿಲ್ಲ. ಈ ಪ್ರಕ್ರಿಯೆ ಸಾಹಿತ್ಯದ ಸೃಜನಶೀಲತೆಯ ಮೇಲೆ ಪರಿಣಾಮ ಬೀರಿತು ಎಂಬುದನ್ನು ಗಮನಿಸಬೇಕು. ಇದರಿಂದಾಗಿ ಇಲ್ಲಿಯ ಬರಹಗಾರರು ಇಂಗ್ಲಿಷ್ ಸಾಹಿತ್ಯವನ್ನು ವಿಶೇಷವಾಗಿ ಅಧ್ಯಯನ ಮಾಡಲಿಲ್ಲ. ನಾಡಿನ ಬೇರೆ ಭಾಗದಲ್ಲಾದ ಸಾಹಿತ್ಯಿಕ ಪ್ರಯೋಗಗಳು ಇಲ್ಲಿ ಆಗಲಿಲ್ಲ. ಅದೇನು ಕೊರತೆಯಲ್ಲ. ಆದರೆ ಸೃಜಶೀಲತೆಯನ್ನು ಗೊಂದಲದಲ್ಲಿ ಕೆಡವಿತು. ಅವರ ಅಭಿವ್ಯಕ್ತಿ ವಿಧಾನದ ಬಗ್ಗೆ ಒಂದು ಬಗೆಯ ಕೀಳರಿಮೆಗೆ ಕಾರಣವಾಯಿತು.

ಇದನ್ನು ಸಮರ್ಥವಾಗಿ ಎದುರಿಸಿ ತಮ್ಮ ಅಸ್ತಿತ್ವವನ್ನು ಶಾಂತರಸರು ಸ್ಥಾಪಿಸಿದರು. ಕಿರಿಯ ಬರಹಗಾರರನ್ನು ಬೆನ್ನು ತಟ್ಟಿ ಬೆಳೆಸಿದರು. ರಾಜಶೇಖರ ನೀರಮಾನ್ವಿ, ಅಮರೇಶ ನುಗಡೋಣಿ, ಗೀತಾ ನಾಗಭೂಷಣರಂತಹ ಪ್ರತಿಭಾವಂತರು ತಮ್ಮ ಕಥನ ಕೌಶಲದಿಂದ ನಾಡಿನ ಗಮನ ಸೆಳೆದರು. ಹೊಸ ಕಥನ ಮಾದರಿಯನ್ನು ಸೃಷ್ಟಿಸಿದರು. ಇವರಿಂದ ಇಲ್ಲಿಯ ಬರಹಗಾರರು ಕಲಿಯುವುದು ಬಹಳವಿದೆ. ಭಾಷೆ, ಅನುಭವ, ಚಿಂತನೆಯನ್ನು ಇವರಷ್ಟು ಸಾಂದ್ರವಾಗಿ ಕಥನದಲ್ಲಿ ತಂದವರು ಅಪರೂಪ. ಸ್ವಯಂ ಏಕಲವ್ಯರಂತೆ ಈ ಸಿದ್ದಿಯನ್ನು ಸಾಧಿಸಿದ್ದಾರೆ.

MORE NEWS

ಸಾಮಾನ್ಯರ ರಂಗಭೂಮಿ : ವರ್ಷಕ್ಕೆ ಹದಿನಾಲ್ಕು ಸಾವಿರ ನಾಟಕಗಳ ದಾಖಲೆ

26-07-2024 ಬೆಂಗಳೂರು

"ಸೋಜಿಗವೆಂದರೆ ಬಹುತೇಕ ಅನಕ್ಷರಸ್ಥ ಗ್ರಾಮೀಣ ಕಲಾವಿದರ ಈ ರಂಗಉಮೇದು, ಸಿನೆಮಾ ಮತ್ತು ಕಿರು ತೆರೆಗಳಿಗೆ ಅಡಸ್ಯಾಡುವ...

ತುಳುವಿನೊಡನೆ ಸಹಸಂಬಂದ

20-07-2024 ಬೆಂಗಳೂರು

"ತುಳುವಿನ ಕುರಿತು ಮಾತನಾಡಬೇಕಾದ ಕೆಲವು ಮಹತ್ವದ ಅಂಶಗಳಿವೆ. ದಕ್ಕನದಲ್ಲಿ ವ್ಯಾಪಿಸಿಕೊಂಡಿರುವ ಅರಬಿ ಸಮುದ್ರದ ಕರಾ...

ಮತ್ಸ್ಯಾಸನ ಮತ್ತು ಪರಿವೃತ್ತ ಪಾರ್ಶ್ವಕೋನಾಸನ

19-07-2024 ಬೆಂಗಳೂರು

"`ಮತ್ಸ್ಯಾಸನ' ಮಾಡುವುದರಿಂದ ಬೆನ್ನುಮೂಳೆಯ ಮೇಲ್ಭಾಗದ ಸ್ನಾಯುಗಳು ವಿಶ್ರಾಂತಿ ಪಡೆಯಲು ಮತ್ತು ಬೆನ್ನುಮೂಳೆಯನ...