Date: 24-04-2020
Location: ಬೆಂಗಳೂರು
ಕನ್ನಡ ಭಾಷೆ, ಬದುಕು, ಸಾಹಿತ್ಯದ ವಿಚಾರ ಬಂದಾಗಲೆಲ್ಲಾ ಮಹಾನ್ ನಾಯಕರ ಜೊತೆ ಮೇರುನಟ ಡಾ. ರಾಜ್‌ಕುಮಾರ್ ಅವರ ಹೆಸರೂ ಇದ್ದೇ ಇರುತ್ತೆ. ರಾಜ್‌ಕುಮಾರ್ ಕರ್ನಾಟಕ ಮಾತ್ರವಲ್ಲ, ಜಗತ್ತು ಕಂಡ ಮೇರು ಕಲಾವಿದರಲ್ಲಿ ಒಬ್ಬರು. ಅದಕ್ಕೂ ಮಿಗಿಲಾಗಿ ನಾಡು-ನುಡಿಯ ಬಗ್ಗೆ ಅವರಿಗಿದ್ದ ಗೌರವ, ಕಾಳಜಿ ಅವರನ್ನು ಕನ್ನಡದ ಅಸ್ಮಿತೆಯಾಗಿ ಬೆಳೆಯುವಂತೆ ಮಾಡಿವೆ. ಚಿತ್ರರಂಗದಲ್ಲೂ ಕನ್ನಡ ಭಾಷೆಯನ್ನು ಅತ್ಯಂತ ಸುಂದರವಾಗಿ ಬಳಸಿದವರು ಡಾ. ರಾಜ್‌ಕುಮಾರ್. ತಮ್ಮ ಕಲಾಬದುಕಿನುದ್ದಕ್ಕೂ ಭಾಷೆಗೆ ಪೂಜನೀಯ ಸ್ಥಾನ ಕೊಟ್ಟ ರಾಜ್‌ಕುಮಾರ್ ಕನ್ನಡ ಪರ ಹೋರಾಟಗಳಲ್ಲೂ ತಮ್ಮನ್ನು ತೊಡಗಿಸಿಕೊಂಡವರು.
ಚಿತ್ರರಂಗ ಮಾತ್ರವಲ್ಲ ಕನ್ನಡ ಸಾಹಿತ್ಯ ಕ್ಷೇತ್ರಕ್ಕೂ ರಾಜ್‌ಕುಮಾರ್ ಅವರ ಕೊಡುಗೆ ಮಹತ್ವದ್ದು. ಕಲಾವಿದರಾಗಿ ಮೇರುಪರ್ವತದಂತೆ ಬೆಳೆದ ಅವರು ಕನ್ನಡದ ಅತೀ ಹೆಚ್ಚು ಕಾದಂಬರಿಯಾಧಾರಿತ ಚಿತ್ರಗಳಲ್ಲಿ ನಟಿಸಿದ ನಟ. ಕಾದಂಬರಿಗಳಿಗೆ ಜೀವ ತುಂಬಿದ ನಾಯಕ ಎಂದರೆ ತಪ್ಪಾಗಲಾರದು. ಕನ್ನಡ ಸಿನಿಮಾ ಕ್ಷೇತ್ರದಲ್ಲಿ ಕಾದಂಬರಿ ಆಧಾರಿತ ಚಿತ್ರಗಳ ನಿರ್ಮಾಣ ಆರಂಭವಾಗಿದ್ದು ಅರವತ್ತರ ದಶಕದಲ್ಲಿ. ಕನ್ನಡದ ಮೊದಲ ಕಾದಂಬರಿ ಆಧಾರಿತ ಚಿತ್ರ ‘ಕರುಣೆಯೇ ಕುಟುಂಬದ ಕಣ್ಣು’. 1962ರಲ್ಲಿ ಬಿಡುಗಡೆಯಾದ ಈ ಚಿತ್ರ, ಸಾಹಿತಿ ಕೃಷ್ಣಮೂರ್ತಿ ಪುರಾಣಿಕ್ ಅವರ `ಧರ್ಮದೇವತೆ’ ಕಾದಂಬರಿ ಆಧಾರಿತವಾದದ್ದು. ಈ ಚಿತ್ರದಲ್ಲಿ ಡಾ.ರಾಜ್‌ಕುಮಾರ್ ಅದ್ಭುತವಾಗಿ ಅಭಿನಯಿಸಿದ್ದಾರೆ. ಆನಂತರ ಸುಮಾರು ಮುವತ್ತಕ್ಕೂ ಹೆಚ್ಚಿನ ಕಾದಂಬರಿ ಆಧಾರಿತ ಚಿತ್ರಗಳಲ್ಲಿ ನ
ಟ ಸಾರ್ವಭೌಮ ಡಾ. ರಾಜ್‌ಕುಮಾರ್ ನಟಿಸಿದ್ದಾರೆ.
ರಾಜ್‌ಕುಮಾರ್ ಅವರ ಸಿನಿಮಾ ಬದುಕಿನಲ್ಲಿ ಹೆಸರು ತಂದುಕೊಟ್ಟ ಸಿನಿಮಾ ‘ಚಂದವಳ್ಳಿಯ ತೋಟ’. ಇದು ಕನ್ನಡದ ಹಿರಿಯ ಸಾಹಿತಿ ತ.ರಾ.ಸು ಅವರ ಕಾದಂಬರಿ ಆಧಾರಿತ ಚಿತ್ರ. ಅಲ್ಲದೇ ತ.ರಾ.ಸು ಅವರ ಏಳು ಕಾದಂಬರಿ ಆಧಾರಿತ ಸಿನಿಮಾಗಳಲ್ಲಿ ರಾಜ್‌ಕುಮಾರ್ ಅವರು ನಟಿಸಿದ್ದಾರೆ. ಇನ್ನೂ 1962ರಲ್ಲಿ ಬಿಡುಗಡೆಯಾದ ‘ತೇಜಸ್ವಿನಿ’ ಕೂಡಾ ಕಾದಂಬರಿಯಾಧಾರಿತ ಚಿತ್ರವಾಗಿದ್ದು, ಇದು ಕರ್ಮವೀರ ಮಾಸಿಕದಲ್ಲಿ ಪ್ರಕಟವಾದ ಗೋವಿಂದ ಮೂರ್ತಿ ದೇಸಾಯಿ ಅವರ ಸಣ್ಣಕತೆಗಳ ಸರಣಿಯಲ್ಲೊಂದಾದ ‘ಹೊಲತಿ ಕೋಟೆ’ ಕತೆ ಆಧಾರಿತ ಚಿತ್ರ. ಈ ಚಿತ್ರದಲ್ಲಿ ವರನಟ ಡಾ.ರಾಜ್‌ಕುಮಾರ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು.
‘ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ..’ ಎಂಬ ಎಂದಿಗೂ ಹೊಸತನವನ್ನು ಉಳಿಸಿಕೊಂಡಿರುವ ಗೀತೆಯನ್ನು ಕೊಟ್ಟ ಚಿತ್ರ ‘ಕುಲವಧು’ 1963ರಲ್ಲಿ ಬಿಡುಗಡೆಗೊಂಡಿತ್ತು. ಇದು ಸಹ ಲೇಖಕ ಕೃಷ್ಣಮೂರ್ತಿ ಪುರಾಣಿಕ್ ಅವರ ‘ಕುಲವಧು’ ಕಾದಂಬರಿ ಆಧಾರಿತ ಚಿತ್ರವಾಗಿದ್ದು, ಇದರಲ್ಲಿಯೂ ಕನ್ನಡದ ಮೇರು ನಟ ರಾಜ್‌ಕುಮಾರ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. 1966ರಲ್ಲಿ ತೆರೆಕಂಡ ಡಾ. ರಾಜ್‌ಕುಮಾರ್ ಅವರ ‘ಸಂಧ್ಯಾರಾಗ’, ಲೇಖಕ ಎ.ಎನ್. ಕೃಷ್ಣರಾವ್ ಅವರ ‘ಸಂಧ್ಯಾರಾಗ’ ಕಾದಂಬರಿ ಆಧಾರಿತ ಚಲನಚಿತ್ರವಾಗಿದೆ. ಹಾಗೂ 1967ರಲ್ಲಿ ತೆರೆಕಂಡ ‘ಚಕ್ರತೀರ್ಥ’ ಲೇಖಕ ತ.ರಾ.ಸು ಅವರ ‘ಚಕ್ರತೀರ್ಥ’ ಕಾದಂಬರಿಯಾಧಾರಿತ ಚಿತ್ರ. ಇನ್ನೂ 1968ರಲ್ಲಿ ತೆರೆಕಂಡ ಸರ್ವಮಂಗಳ ಚಿತ್ರ ಲೇಖಕ ಚದುರಂಗ ಅವರ ‘ಸರ್ವಮಂಗಳ’ ಕಾದಂಬರಿ ಆಧಾರಿತ ಚಿತ್ರವಾಗಿದೆ. ವರನಟ ಡಾ. ರಾಜ್‌ಕುಮಾರ್ ನಟಿಸಿರುವ ಈ ಚಿತ್ರವನ್ನು ಲೇಖಕ ಚದುರಂಗ ಅವರೇ ನಿದೇರ್ಶಿಸಿರುವುದು ಮತ್ತೊಂದು ವಿಶೇಷತೆ.
ಕನ್ನಡದ ಜನಪ್ರಿಯ ಕಾದಂಬರಿಗಾರ್ತಿ ತ್ರಿವೇಣಿ ಅವರ ‘ಹಣ್ಣೆಲೆ ಚಿಗುರಿದಾಗ’ ಕಾದಂಬರಿಯಾಧಾರಿತ ಚಿತ್ರ ಅದೇ ಹೆಸರಿನ ‘ಹಣ್ಣೆಲೆ ಚಿಗುರಿದಾಗ’. ಈ ಚಿತ್ರದಲ್ಲಿಯೂ ಡಾ. ರಾಜ್‌ಕುಮಾರ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಹಾಗೇ 1969ರಲ್ಲಿ ತೆರೆಕಂಡ ‘ಮಾರ್ಗದರ್ಶಿ’ ಚಿತ್ರ ಲೇಖಕ ತ.ರಾ.ಸು ಅವರ ‘ಮಾರ್ಗದರ್ಶಿ ಕಾದಂಬರಿ ಆಧಾರಿತ ಚಿತ್ರವಾಗಿದೆ. ಇನ್ನು ಬಿ. ಪುಟ್ಟಸ್ವಾಮಯ್ಯ ಅವರ ‘ಮಲ್ಲಮ್ಮನ ಪವಾಡ’ ಕಾದಂಬರಿ ಆಧಾರಿತ ಸಿನಿಮಾ ಮಲ್ಲಮ್ಮನ ಪವಾಡದಲ್ಲೂ ಡಾ.ರಾಜ್‌ಕುಮಾರ್ ನಟಿಸಿದ್ದಾರೆ. ಜೊತೆಗೆ 1969ರಲ್ಲಿ ತೆರೆಕಂಡ ‘ಪುನರ್ಜನ್ಮ’ ಸಹ ಲೇಖಕ ತ.ರಾ.ಸು ಅವರ ಪುನರ್ಜನ್ಮ ಕಾದಂಬರಿಯಾಧಾರಿತ ಚಿತ್ರವಾಗಿದೆ.
1996ರಲ್ಲಿ ತೆರೆಕಂಡ ‘ಉಯ್ಯಾಲೆ’ ಲೇಖಕ ಚದುರಂಗ (ಸುಬ್ರಹ್ಮಣ್ಯರಾಜ ಅರಸ್) ಅವರ ‘ಉಯ್ಯಾಲೆ’ ಕಾದಂಬರಿ ಆಧಾರಿತ ಚಿತ್ರವಾಗಿದ್ದು, 1970ರಲ್ಲಿ ತೆರೆಕಂಡ ‘ದೇವರ ಮಕ್ಕಳು’ ಲೇಖಕ ಮ.ನ. ಮೂರ್ತಿ ಅವರ `ಮೀನಾ’ ಕಾದಂಬರಿ ಆಧಾರಿತ ಚಿತ್ರವಾಗಿದೆ. ನುಗ್ಗೆಹಳ್ಳಿ ಪಂಕಜ ಅವರ ‘ಬರಲೇ ಇನ್ನು ಯಮುನ’ ಕಾದಂಬರಿ ಆಧಾರಿತ ಚಿತ್ರ ‘ಸಿಪಾಯಿ ರಾಮು’ಚಿತ್ರದ ರಾಜ್‌ಕುಮಾರ್ ನಟನೆ ಅತ್ಯದ್ಭುತವಾಗಿದೆ. 
ಡಾ. ರಾಜ್‌ಕುಮಾರ್ ಅವರಿಗೆ ಮತ್ತಷ್ಟು ಹೆಸರು ತಂದುಕೊಟ್ಟ ‘ಬಂಗಾರದ ಮನುಷ್ಯ’ ಲೇಖಕ ಟಿ.ಕೆ. ರಾಮರಾವ್ ಅವರ ‘ಬಂಗಾರದ ಮನುಷ್ಯ’ ಕಾದಂಬರಿ ಆಧಾರಿತ ಚಿತ್ರವಾಗಿದ್ದು, 1973ರಲ್ಲಿ ತೆರೆಕಂಡ ‘ಸ್ವಯಂವರ’ ಲೇಖಕ ಮ.ನ. ಮೂರ್ತಿ ಅವರ ‘ಸ್ವಯಂವರ’ ಕಾದಂಬರಿ ಚಿತ್ರವಾಗಿದೆ. ರಾಜ್‌ಕುಮಾರ್ ಅವರ ಪ್ರಸಿದ್ಧ ಚಿತ್ರಗಳಲ್ಲಿ ಒಂದಾದ 'ಎರಡು ಕನಸು’ ಕೂಡಾ ಲೇಖಕಿ ವಾಣಿ ಅವರ `ಎರಡು ಕನಸು’ ಕಾದಂಬರಿ ಆಧಾರಿತ ಚಿತ್ರವಾಗಿದೆ. ಇನ್ನೂ ಡಾ. ರಾಜ್‌ಕುಮಾರ್, ಮಂಜುಳಾ ಜೋಡಿಯ ಡೈಲಾಗ್ ಗಳಿಂದಲೇ ಇಂದಿಗೂ ಹಸಿರಾಗಿರುವ ‘ಸಂಪತ್ತಿಗೆ ಸವಾಲ್’ ಚಿತ್ರ ಲೇಖಕ ಬಿ.ಪಿ. ದುತ್ತಗಾರಿ ಅವರ ನಾಟಕ ಆಧಾರಿತ ಚಿತ್ರವಾಗಿದೆ.
ನಟಸಾರ್ವಭೌಮನ ನಟನೆಗೆ ಕಳಸಪ್ರಾಯವಾದ ಮತ್ತೊಂದು ಚಿತ್ರ ‘ಮಯೂರ’. ಇದು ದೇವುಡು ನರಸಿಂಹಶಾಸ್ತ್ರಿ ಅವರ ಕಾದಂಬರಿ ಆಧಾರಿತ ಕ್ಲಾಸಿಕಲ್ ಸಿನಿಮಾವಾಗಿದ್ದು, ಎ.ಆರ್. ಆನಂದ್ ಅವರ ಸಣ್ಣಕತೆ ನಾನು ನೀನು ಜೊಡಿ ಕತೆ ಆಧಾರಿತ ಚಿತ್ರ ‘ನಾ ನಿನ್ನ ಮರೆಯಲಾರೆ’ ಕಲಾರಸಿಕರ ಪಾಲಿನ ರಾಜ ರಾಜ್‌ಕುಮಾರ್ ಅವರಿಗೆ ಮತ್ತಷ್ಟು ಹೆಸರುತಂದುಕೊಟ್ಟ ಚಿತ್ರವಾಗಿದೆ. ಸಾಹಿತಿ ಭಾರತೀಸುತ ಅವರ ‘ಗಿರಿಕನ್ಯೆ’ ಕಾದಂಬರಿ ಆಧಾರಿಚ ಚಿತ್ರ ‘ಗಿರಿ ಕನ್ಯೆ’, ಕೃಷ್ಣಮೂರ್ತಿ
ಪುರಾಣಿಕ್ ಅವರ ‘ಕುಣಿಯಿತು ಹೆಜ್ಜೆ ನಲಿಯಿತು ಗೆಜ್ಜೆ’ ಕಾದಂಬರಿ ಆಧಾರಿತ ಚಿತ್ರ ‘ಸನಾದಿ ಅಪ್ಪಣ್ಣ’, ಭಾರತೀಸುತ ಅವರ ‘ಹುಲಿಯ ಹಾಲಿನ ಮೇವು’, ವಾಣಿ ಅವರ ಕಾದಂಬರಿಯಾಧರಿತ ಚಿತ್ರ ‘ಹೊಸಬೆಳಕು’ ಎಲ್ಲವುಗಳಲ್ಲಿಯೂ ಕನ್ನಡಿಗರ ಕಣ್ಮಣಿಯಾಗಿರುವ ಡಾ. ರಾಜ್‌ಕುಮಾರ್ ಅದ್ಭುತವಾಗಿ ಅಭಿನಯಿಸಿದ್ದಾರೆ.
1983ರಲ್ಲಿ ತೆರೆಕಂಡ ‘ಕಾಮನಬಿಲ್ಲು’ ಚಿತ್ರ ಲೇಖಕಿ ಅಶ್ವಿನಿ ಅವರ `ಮೃಗತೃಷ್ಣ’ ಕಾದಂಬರಿ ಆಧಾರಿತವಾಗಿದ್ದು, 1984ರಲ್ಲಿ ತೆರೆಕಂಡ ‘ಸಮಯದ ಗೊಂಬೆ’ ಲೇಖಕಿ ಚಿತ್ರಲೇಖ ಅವರ `ಸಮಯದ ಗೊಂಬೆ’ ಕಾದಂಬರಿ ಆಧಾರಿತ ಚಿತ್ರವಾಗಿದೆ. ಇನ್ನು ವಿಜಯಾ ಸಾಸನೂರು ಅವರ ‘ಜ್ವಾಲಾಮುಖಿ’ ಕಾದಂಬರಿ ಆಧಾರಿತ ಸಿನಿಮಾ ‘ಜ್ವಾಲಾಮುಖಿ’ಯಲ್ಲಿಯೂ ವರನಟನ ಅದ್ಭುತ ನಟನೆಯನ್ನು ಕಾಣಬಹುದಾಗಿದೆ, ಜೊತೆಗೆ ನವಿರು ಪ್ರೇಮಕತೆಯುಳ್ಳ ಈ ಸಿನಿಮಾದ ಎಲ್ಲಾ ಹಾಡುಗಳನ್ನೂ ಡಾ. ರಾಜ್‌ಕುಮಾರ್ ಅವರೇ ಹಾಡಿರುವುದು ಈ ಚಿತ್ರದ ಮತ್ತೊಂದು ವಿಶೇಷತೆ.
ಲೇಖಕಿ ಎಚ್.ಜಿ. ರಾಧದೇವಿ ಅವರ ‘ಅನುರಾಗದ ಅಂತಪುರ’ ಕಾದಂಬರಿ ಆಧಾರಿತ ಚಿತ್ರ ‘ಅನುರಾಗ ಅರಳಿತು’, ವಿಶಾಲಾಕ್ಷಿ ದಕ್ಷಿಣಮೂರ್ತಿ ಅವರ ವ್ಯಾಪ್ತಿ-ಪ್ರಾಪ್ತಿ ಕಾದಂಬರಿ ಆಧಾರಿತ ಚಿತ್ರ ‘ಜೀವನ ಚೈತ್ರ’ ಗಳಲ್ಲಿಯೂ ನಟ ಸಾಮ್ರಾಟನ ನಟನೆ ಅಮೋಘವಾಗಿದೆ. ಇನ್ನು ಲೇಖಕ ತ.ರಾ.ಸು ಅವರ ‘ಆಕಸ್ಮಿಕ ಅಪರಾಧಿ ಮತ್ತು ಪರಿಣಾಮ’ ಕಾದಂಬರಿ ಆಧಾರಿತ ಚಿತ್ರ ಆಕಸ್ಮಿಕದಲ್ಲೂ ಡಾ. ರಾಜ್‌ಕುಮಾರ್ ನಟಿಸಿದ್ದು, ಅವರ ಅಭಿನಯದ ಕೊನೆಯ ಚಿತ್ರವೂ ಇದಾಗಿದೆ. ಈ ಸಿನಿಮಾದಲ್ಲಿ ಡಾ. ರಾಜ್‌ಕುಮಾರ್ ಅವರೇ ಹಾಡಿರುವ ‘ಹುಟ್ಟಿದರೆ ಕನ್ನಡ ನಾಡಲಿ ಹುಟ್ಟಬೇಕು’ ಹಾಡು ನಾಡು-ನುಡಿಯ ಬಗೆಗಿದ್ದ ಅವರ ಪ್ರೇಮ ಮತ್ತು ಬದ್ಧತೆಗಳಿಗೆ ಇಂದಿಗೂ ಸಾಕ್ಷಿ ನುಡಿಯುತ್ತದೆ. ಅಲ್ಲದೇ ಈ ಹಾಡು ಕನ್ನಡಿಗರ ಭಾಷಾಪ್ರೇಮದ ಸಂಕೇತವಾಗಿಯೂ ಸದಾ ಕಾಲ ಹಸಿರಾಗಿದೆ. ನಾಡು ಕಂಡ ಮೇರು ನಟ, ಸರಳತೆಯನ್ನೇ ಬದುಕಿ ಆದರ್ಶವಾದ ಕನ್ನಡಿಗರ ಮನದ ರಾಜಕುಮಾರ, ಕರ್ನಾಟಕದ ಕೀರ್ತಿಯನ್ನು ಜಗತ್ತಿಗೆ ಸಾರಿದ ನಟಸಾರ್ವಭೌಮ ಡಾ. ರಾಜ್‌ಕುಮಾರ್ ಕನ್ನಡದ ಅಸ್ಮಿತೆಯಾಗಿ ಎಂದಿಗೂ ಅಜರಾಮರ.
ಬೆಂಗಳೂರು : ಕನ್ನಡ ಪುಸ್ತಕ ಪ್ರಾಧಿಕಾರದ (kannada Pustaka Pradhikara) ವತಿಯಿಂದ 2025-26ನೇ ಸಾಲಿನ ಯುವಬರಹಗಾರರ ಚ...
ಮಕ್ಕಳಿಗೆ ದೆವ್ವ, ಭೂತ ಮುಂತಾದ ಸಂಗತಿಗಳನ್ನು ಹೇಳಬಾರದೆಂದು ಹೇಳುತ್ತ ಅವರಲ್ಲಿ ಮತ್ತಷ್ಟು ಹೆದರಿಕೆ ಹುಟ್ಟಿಸಿರುತ್ತೇವೆ...
ಲಂಡನ್: ದಕ್ಷಿಣ ಭಾರತದ ಸಾಹಿತ್ಯ ಲೋಕ, ಅದರಲ್ಲೂ ಕನ್ನಡ ಸಾಹಿತ್ಯದ ಪಾಲಿಗೆ ಮೇ 20, 2025 ಸುವರ್ಣಾಕ್ಷರದಲ್ಲಿ ಬರೆದಿಡಬೇ...
©2025 Book Brahma Private Limited.