Date: 30-09-2023
Location: ಬೆಂಗಳೂರು
ಬೆಂಗಳೂರಿನ ಸಪ್ನ ಬುಕ್ ಹೌಸ್ ಹಾಗೂ ಸಪ್ನ ಪರಿವಾರದಿಂದ ‘ಸುರೇಶ್ ಸಿ.ಷಾ ಅವರಿಗೊಂದು ಗೌರವ ನಮನ’ ಹಾಗೂ ನಾಲ್ಕು ಪುಸ್ತಕಗಳ ಅರ್ಪಣೆ ಕಾರ್ಯಕ್ರಮವು 2023 ಸೆಪ್ಟೆಂಬರ್ 30, ಶನಿವಾರದಂದು ನಗರದ ಹೋಟೆಲ್ ದಿ. ಲಲಿತ್ ಅಶೋಕ ಕುಮಾರದಲ್ಲಿ ನೆರವೇರಿತು.
ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ, “ಒಬ್ಬ ಬರಹಗಾರ ಅಥವಾ ಸಂಗೀತಗಾರನಿಗೆ ನಿರ್ದೇಶಕ ಅಥವಾ ಪ್ರಕಾಶಕನಿಲ್ಲದಿದ್ದರೆ ಜನರನ್ನು ತಲುಪುವ ಮಾಧ್ಯಮವಿರುತ್ತಿರಲಿಲ್ಲ. ಬರಹಗಾರರನ್ನು ಹಾಗೂ ಶ್ರೇಷ್ಠ ಚಿಂತಕರನ್ನು ಕರ್ನಾಟಕದ ಮೂಲೆ ಮೂಲೆಗೆ ಹಾಗೂ ದೇಶದಾದ್ಯಂತ ಪರಿಚಯಿಸಿದ್ದರೆ ಅದಕ್ಕೆ ಮೂಲಕ ಕಾರಣ ಇಂತಹ ಪಬ್ಲಿಷಿಂಗ್ ಹೌಸ್ ಗಳು. ಓದುಗ ಹಾಗೂ ಲೇಖಕನ ನಡುವಿನ ಕೊಂಡಿಯಾಗಿ ಪ್ರಕಾಶಕ ಸಂಸ್ಥೆಯು ಕಾರ್ಯನಿರ್ವಹಿಸುತ್ತದೆ,” ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಮಾತನಾಡಿ, “ಬೆಂಗಳೂರಿನಲ್ಲಿ ಇಂತಹ ಸಂಸ್ಥೆ ಸ್ಥಾಪನೆಯಾಗದಿದ್ದರೆ, ಪ್ರಸಕ್ತ ಸಾಹಿತ್ಯ ವಾತಾವರಣವನ್ನು ನಾವು ಕಲ್ಪಿಸಲು ಸಾಧ್ಯವಿಲ್ಲ. ಏಕೆಂದರೆ ಸಪ್ನ ಸಂಸ್ಥೆ ಹಿರಿಯ ಲೇಖಕರಿಂದ ಹಿಡಿದು ಅನೇಕ ಸಾಹಿತಿಗಳ ಪುಸ್ತಕವನ್ನು ಪ್ರಕಟ ಮಾಡಿದೆ. ಕನ್ನಡದ ಮೇಲಿನ ಸುರೇಶ್ ಷಾ ಅವರ ಭಕ್ತಿ ಮತ್ತು ಪ್ರೀತಿ ಮರೆಯುವ ಹಾಗಿಲ್ಲ. ಮೂರು ತಲೆಮೂರು ಕೂಡ ಕನ್ನಡ ಲೋಕದ ಸಂಸ್ಕೃತಿ ಹಾಗೂ ವಾತಾವರಣವನ್ನು ಸಮೃದ್ಧವಾಗಿ ಬೆಳೆಸುತ್ತಿದೆ. ಇನ್ನು ಸುರೇಶ್ ಸಿ. ಷಾ ಅವರ ಸಾಹಸ ಹಾಗೂ ಬದುಕಿನ ಏರಿಳಿತಗಳ ಕುರಿತು ಎಸ್.ಎಲ್. ಭೈರಪ್ಪ ಸೇರಿದಂತೆ ಅನೇಕ ಜನ ಸಾಹಿತಿಗಳು ಬರೆದಿರುವ ಬರಹವನ್ನು ಇಂದು ಬಿಡುಗಡೆಗೊಂಡಿರುವ ‘ಗ್ರಂಥಕೋಶ’ ಕೃತಿಯಲ್ಲಿ ಕಾಣಬಹುದು,” ಎಂದರು.
ರಾಜೇಶ್ ಎಕ್ಸ್ ಪೋರ್ಟ್ಸ್ ಲಿಮಿಟೆಡ್ ಅಧ್ಯಕ್ಷ ರಾಜೇಶ್ ಮೆಹ್ತಾ ಮಾತನಾಡಿ, “ಸುರೇಶ್ ಸಿ. ಷಾ ಅವರು ಒಬ್ಬ ಸಾಮಾನ್ಯ ಅಸಾಮಾನ್ಯ ಮನುಷ್ಯ. ಸಪ್ನ ಬುಕ್ ಹೌಸ್ ನಂತಹ ದೊಡ್ಡ ಪ್ರಕಾಶನ ಸಂಸ್ಥೆಯನ್ನು ಹುಟ್ಟುಹಾಕಿ ತಮ್ಮ ಮುಂದಿನ ಪೀಳಿಗೆಗೂ ಸಂಸ್ಥೆಯನ್ನು ಬೆಳೆಸುವಂತೆ ಮಾದರಿಯಾಗಿದ್ದಾರೆ,” ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಹಿರಿಯ ವಿದ್ವಾಂಸ ನಾಡೋಜ ಪ್ರೊ. ಹಂಪ ನಾಗರಾಜಯ್ಯ ಮಾತನಾಡಿ, “ಬೇರೆ ಪ್ರಾಂತ್ಯದಿಂದ ಬಂದ ಸುರೇಶ್ ಷಾ ಅವರು ಕನ್ನಡ, ಕರ್ನಾಟಕವನ್ನು ತನ್ನದೆಂದೇ ಅಪ್ಪಿಕೊಂಡರು. ಹಾಗೆ ಕರ್ನಾಟಕವು ಸುರೇಶ್ ಷಾ ಅವರನ್ನು ಅಪ್ಪಿಕೊಂಡಿತು. ಇದು ಒಬ್ಬ ವ್ಯಕ್ತಿ ಬದುಕಿದ ರೀತಿಯನ್ನು ತಿಳಿಸುತ್ತದೆ. ಹೀಗೆ ಸುರೇಶ್ ಷಾ ಅವರು ನಮ್ಮೆಲ್ಲರಿಗೂ ಮಾದರಿಯಾಗಿದ್ದಾರೆ. ನಾವು ಇಂದು ಈ ಕಾರ್ಯಕ್ರಮಕ್ಕೆ ಬಂದಿರುವ ಉದ್ದೇಶ ಸಂಸ್ಥೆ ನಮ್ಮದೆಂಬ ಭಾವನೆ,”ಎಂದು ತಿಳಿಸಿದರು.
ಸಪ್ನ ಬುಕ್ ಹೌಸ್ ನ ವ್ಯವಸ್ಥಾಪಕ ನಿರ್ದೇಶಕ ನಿತಿನ್ ಷಾ, ಸಪ್ನ ಬುಕ್ ಹೌಸ್ ಕನ್ನಡ ವಿಭಾಗದ ಮುಖ್ಯಸ್ಥ ಆರ್. ದೊಡ್ಡೇಗೌಡ, ನಿರ್ಮಲಾ ಗೋವಿಂದರಾಜು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಫೇಸ್ ಬುಕ್ ಪೇಜ್ ಮೂಲಕ ವೀಕ್ಷಿಸಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ.
2026ನೇ ಸಾಲಿನ ಟೊಟೊ ಪುರಸ್ಕಾರಕ್ಕೆ ಕನ್ನಡ ವಿಭಾಗದಲ್ಲಿ ಒಂಭತ್ತು ಜನ ಯುವ ಸೃಜನಶೀಲ ಬರಹಗಾರರ ಹೆಸರನ್ನ ಮೊದಲನೇ ಪಟ್ಟಿಗ...
ಧಾರವಾಡ: ಮಕ್ಕಳಲ್ಲಿ ಕಲ್ಪನಾ ಶಕ್ತಿ ಬೆಳೆಸುವುದರ ಜೊತೆಗೆ ಓದಿನ ಅಭಿರುಚಿ ಹಿಗ್ಗಿಸಬೇಕಿದೆ. ಅಂದಾಗ ಅವರು ಓದಿನ ರುಚಿಯೊಂ...
ಬೆಂಗಳೂರು: ಮನುಷ್ಯ ಸಂಸ್ಕೃತಿಯ ಬಹುದೊಡ್ಡ ಕೊಡುಗೆಯಾಗಿ ವಿಭಿನ್ನ ಭಾಷೆಯ ಬರವಣಿಗೆ ಸಮಾಜದ ಪ್ರತಿಬಿಂಬವಾಗಿವೆ. ಓರ್ವ ಉತ್...
©2025 Book Brahma Private Limited.