''ಕವಿತೆಗಳು ಸುಮತಿ ಅವರಿಂದ ಸುಲಭವಾಗಿ ಸೃಜಿಸಬಲ್ಲವು. ಅವರ ಪ್ರತಿ ಕವಿತೆಯಲ್ಲಿಯೂ ಗಾಂಭೀರ್ಯತೆ ಇರುತ್ತದೆ. ಸಹಜ ಸೌಂದರ್ಯವಿರುತ್ತದೆ. ಧ್ವನಿಪೂರ್ಣತೆ ಇರುತ್ತದೆ. ಯಾರೊಬ್ಬರೂ ಸುಮತಿ ಅವರ ಕೈಹಿಡಿದು ಕವಿತೆಗಳನ್ನು ಬರೆಸಬೇಕಾಗಿಲ್ಲ. ಕವಿತೆಗಳು ತನ್ನಿಂತಾನೆ ಅವರಿಂದ ಹುಟ್ಟು ಪಡೆಯುತ್ತವೆ,'' ಎನ್ನುತ್ತಾರೆ ಯುವಲೇಖಕ ದೀಕ್ಷಿತ್ ನಾಯರ್. ಅವರು ಸುಮತಿ ಕೃಷ್ಣಮೂರ್ತಿ ಅವರ ‘ಹೆಣ್ಣಾಲದ ಮರ’ ಕೃತಿಗೆ ಬರೆದ ವಿಮರ್ಶೆ.
'ಸುಮ್ಮನೇ ದಕ್ಕುವುದಿಲ್ಲ ಕವಿತೆ ಹಾದಿ ಬದಿಯ ಬೇಲಿ ಹೂಗಳಂತೆ..
ವಿಧಿ ಬೀಸುವ ಕವಣೆ ಹೊಡೆತಗಳನೆದುರಿಸಬೇಕು
ನೋವುಗಳ ಸೋಪಾನ ಏರಬೇಕು
ನೆನಪುಗಳ ಜೋಪಾನ ಮಾಡಬೇಕು
ಗಾಯಗಳ ಸವರುತ್ತಾ ಒಮ್ಮೊಮ್ಮೆ ಬಿಕ್ಕಬೇಕು' ಎನ್ನುತ್ತಾರೆ ಕವಯಿತ್ರಿ ಸುಮತಿ ಕೃಷ್ಣಮೂರ್ತಿ. ಹೌದು. ಕವಿತೆ ಸುಮ್ಮನೆ ದಕ್ಕುವುದಿಲ್ಲ. ಆದರೆ ಸುಮತಿಯವರು ದಕ್ಕಿಸಿಕೊಂಡಿದ್ದಾರೆ. ತಾವು ದಕ್ಕಿಸಿಕೊಂಡಿದ್ದನ್ನು ಇತರರಿಗೂ ಸಮರ್ಥವಾಗಿ ದಾಟಿಸುತ್ತಾರೆ. ಕವಿತೆಗಳೊಂದಿಗೆಯೇ ಬೆರೆಯುತ್ತಾರೆ. ಕವಿತೆಯ ಜತೆಗೇ ಮಾತಿಗಿಳಿಯುತ್ತಾರೆ.
ಕವಿತೆಗಳು ಸುಮತಿ ಅವರಿಂದ ಸುಲಭವಾಗಿ ಸೃಜಿಸಬಲ್ಲವು. ಅವರ ಪ್ರತಿ ಕವಿತೆಯಲ್ಲಿಯೂ ಗಾಂಭೀರ್ಯತೆ ಇರುತ್ತದೆ. ಸಹಜ ಸೌಂದರ್ಯವಿರುತ್ತದೆ. ಧ್ವನಿಪೂರ್ಣತೆ ಇರುತ್ತದೆ. ಯಾರೊಬ್ಬರೂ ಸುಮತಿ ಅವರ ಕೈಹಿಡಿದು ಕವಿತೆಗಳನ್ನು ಬರೆಸಬೇಕಾಗಿಲ್ಲ. ಕವಿತೆಗಳು ತನ್ನಿಂತಾನೆ ಅವರಿಂದ ಹುಟ್ಟು ಪಡೆಯುತ್ತವೆ. ಆ ಮಟ್ಟಿಗೆ ಸುಮತಿಯವರು ಕವಿತೆ ಎಂಬ ಬೆರಗನ್ನು ಒಲಿಸಿಕೊಂಡಿದ್ದಾರೆ. ಒಟ್ಟಾರೆ ಸುಮತಿ ಅವರ ಪಾಲಿಗೆ ಕವಿತೆ ಸುಲಭ ಮತ್ತು ಆನಂದದಾಯಕ ಪ್ರಸವ.
ಈಗಷ್ಟೇ ನಿನ್ನೆ ಬಿಡುಗಡೆಯಾದ ಅವರ 'ಹೆಣ್ಣಾಲದ ಮರ' ಕೃತಿಯೊಳಗಿನ ಕವಿತೆಗಳನ್ನು ಓದಿ ಅನುಭವಿಸುತ್ತಿದ್ದೆ. ಓದುತ್ತಾ ಹೋದಂತೆ ಪುಳಕಗೊಂಡೆ. ಅಲ್ಲಲ್ಲಿ ನಿಟ್ಟುಸಿರು ಬಿಟ್ಟೆ. ಕಣ್ಣೀರು ಒರೆಸಿಕೊಂಡೆ.'ಭಲೇ ಭಲೇ' ಅಂತಲೂ ನನ್ನಷ್ಟಕ್ಕೆ ನಾನೇ ಹೇಳಿದೆ.
ಸುಮತಿ ಅವರ 'ಹೆಣ್ಣಾಲದ ಮರ' ಪುಸ್ತಕದ ಬಹುತೇಕ ಕವಿತೆಗಳಲ್ಲಿ ಜೀವಂತಿಕೆ ಇದೆ. ಆರ್ದ್ರತೆ ಇದೆ. ಕನಸಿದೆ. ಭರವಸೆ ಇದೆ.ಹಾಗೆ ಹೊಸತೇನೋ ಇದೆ.
ಕವಿತೆ ಎಂದರೆ ಅಲರ್ಜಿ ಎನ್ನುವ ಕಾಲಘಟ್ಟದಲ್ಲಿ ಸುಮತಿ ಅವರು ತಮ್ಮ ಕವಿತೆಗಳ ಮೂಲಕ ಎನರ್ಜಿ ತುಂಬಿದ್ದಾರೆ.
ಪ್ರಾಸ ಬಳಕೆಯಲ್ಲಿ ಆಭಾಸ ಮತ್ತು ಆಯಾಸ ಮಾಡಿಕೊಳ್ಳದೆ ಅರ್ಥಪೂರ್ಣವಾಗಿ ಕವಿತೆಯನ್ನು ಕಟ್ಟಿದ್ದಾರೆ. ವಿಶೇಷ ಎಂಬಂತೆ ಅವರ ಕವಿತೆಗಳು ಲಯಬದ್ಧವಾಗಿವೆ. ನಾವು ನಮ್ಮದೇ ರಾಗದಲ್ಲಿ ಹಾಡಿಕೊಳ್ಳಲೂಬಹುದು. ಕಾವ್ಯ ರಸಿಕರಿಗೆ ಗೊಂದಲವನ್ನುಂಟು ಮಾಡದೆ ಹದವಾಗಿ ಕವಿತೆಗಳನ್ನು ರಚಿಸಿರುವ ಸುಮತಿ ಅವರ ಕಾವ್ಯ ತಪಸ್ಸಿಗೆ ಬಹುಪರಾಕ್ ಹೇಳಲೇಬೇಕು.
ಹಾಗೆ ಸುಮ್ಮನೆ ನಿಮ್ಮ ಓದಿಗೆ;
'ರೆಕ್ಕೆಯಾಗಬೇಕಿದ್ದ ಅಪ್ಪ
ಪುಕ್ಕ ಉದುರಿಸಿ ಕೈಕಟ್ಟಿ ನಿಂತ
ಅಮ್ಮ ಆಸ್ಥೆಯಿಂದ
ಒಂದೊಂದೇ ಗರಿ ಜೋಡಿಸಿದಳು'
Mother is truth ಎಂಬುದನ್ನು ತಮ್ಮ ಮೇಲಿನ ಕವಿತೆಯ ಸಾಲಿನ ಮೂಲಕ ಸುಮತಿ ನಿಜವಾಗಿಸಿದ್ದಾರೆ. ತನ್ನ ಅಮ್ಮನ ವ್ಯಕ್ತಿತ್ವವನ್ನು ಕಟ್ಟಿಕೊಡುವುದರೊಂದಿಗೆ ಮತ್ತೆ ಇಡೀ ಜಗತ್ತಿಗೆ ಅಮ್ಮನ ಮಹತ್ವವನ್ನು ಸಾರಿದ್ದಾರೆ. ನಮ್ಮ ಎದೆಯನ್ನು ಭಾರವಾಗಿಸಿದ್ದಾರೆ.
ಹೀಗೆ ಹೆಣ್ಣಾಲದ ಮರ ಕೃತಿಯಲ್ಲಿನ ಎಪ್ಪತ್ತಕ್ಕೂ ಮಿಕ್ಕು ಕವಿತೆಗಳು ನಮ್ಮನ್ನು ಕಾಡುತ್ತವೆ. ನನಗನಿಸುವ ಪ್ರಕಾರ ಸುಮತಿ ನಿಜಕ್ಕೂ ಕಾವ್ಯ ನ್ಯಾಯವನ್ನು ಒದಗಿಸಿದ್ದಾರೆ.
ಅವರು ಮತ್ತಷ್ಟು ಗಟ್ಟಿಯಾಗಲಿ. ಪರಂಪರೆಯ ಕವಿತೆಗಳನ್ನು ಓದಿಕೊಳ್ಳಲಿ. ಕವಿತೆ ಅವರನ್ನು ಪೊರೆಯಲಿ. ಕವಿತೆ ಅವರ ಬದುಕಾಗಲಿ. ಅವರಲ್ಲಿ ಕವಿತೆ ಪ್ರತಿಕ್ಷಣವೂ ಗರ್ಭ ಕಟ್ಟಲಿ.
ಕಾವ್ಯ ರಸಿಕರು 'ಹೆಣ್ಣಾಲದ ಮರ' ಕೃತಿಯನ್ನು ಓದಲೇಬೇಕು.
- ದೀಕ್ಷಿತ್ ನಾಯರ್
"ಹೆಗಲು" ಲೇಖಕರು : ಭಾರತಿ ಹೆಗಡೆ ಪ್ರಕಾಶಕರು : ಬೆನಕ ಬುಕ್ಸ ಬ್ಯಾಂಕ್. ಪುಟಗಳು : 142 ಬೆಲೆ: ₹180/-...
ಪುಸ್ತಕದ ಸಾರಾಂಶ "ಬದುಕು ದೀರ್ಘವಾಗಿರುವುದಕ್ಕಿಂತ ಶ್ರೇಷ್ಠವಾಗಿರಬೇಕು" ಎನ್ನುವ ನಿಟ್ಟಿನಲ್ಲಿ ಸಮಯ ನಿರ್ವಹ...
"ಇಲ್ಲಿನ ಯಾವ ಕತೆಗಳಲ್ಲೂ ಮಾನವ ಪಾತ್ರಗಳು ಇಣುಕುವುದಿಲ್ಲ, ಆದರೆ ಮನುಷ್ಯನ ಗುಣ-ಸ್ವಭಾವ, ನಡತೆ, ನಿಯತ್ತು, ನೀಚತನ...
©2025 Book Brahma Private Limited.