ಮಹಾಭಾರತ ಕೃತಿಯನ್ನು ಓದಲು ಪ್ರೇರೇಪಿಸಿದ ಕಾದಂಬರಿ : ಕಾರ್ತಿಕೇಯ


"ಈ ಕಾದಂಬರಿಯನ್ನು ಮುಗಿಸಿ ಎಷ್ಟೋ ದಿವಸಗಳು ಸರಿದುಹೋಗಿದೆ, ಆದರೆ ಮನಸ್ಸಿನಲ್ಲಿರುವ ಯಯಾತಿ, ಶರ್ಮಿಷ್ಠೆಯರನ್ನು ಬೀಳ್ಕೊಡುವುದಕ್ಕೆ ಸಾಧ್ಯವೇ ಆಗುತ್ತಿಲ್ಲ, ನಾನು ಓದಿರುವುದರಲ್ಲಿ ಅತ್ಯಂತ‌ ಶ್ರೇಷ್ಠ ಕಾದಂಬರಿ ಇದು. ನಮ್ಮ ಸಮಾಜದಲ್ಲಿ ಇಂತಹ ಹಲವಾರು ಯಯಾತಿಯನ್ನು ಕಾಣಬಹುದು. ಕಾಮವಾಸನೆ ಅನ್ನವಾಸನೆಯಷ್ಟೇ ಸ್ವಭಾವಿಕವಾದದ್ದು ಆದರೆ ವಿಪರೀತವಾದದ್ದು ಎಲ್ಲವೂ ವಿಷವೇ " ಎನ್ನುತ್ತಾರೆ ವಿಮರ್ಶಕ ಕಾರ್ತಿಕೇಯ ಭಟ್‌. ಅವರು ಲೇಖಕ ವಿ.ಎಂ.ಇನಾಂದರ್ ಅವರ ಜ್ಞಾನಪೀಠ ಪುರಸ್ಕೃತ ಅನುವಾದಿತ ಕಾದಂಬರಿಯಯಾತಿ’ ಗೆ ಬರೆದ ವಿಮರ್ಶೆ ನಿಮ್ಮ ಓದಿಗಾಗಿ...

ನಾನು ಪದೇ ಪದೇ ಓದಲು ಆಪೇಕ್ಷೆ ಪಡುವ ನನ್ನ ಅಚ್ಚು ಮೆಚ್ಚಿನ ಕಾದಂಬರಿ ಯಯಾತಿ, ಮಹಾಭಾರತ ಕೃತಿಯನ್ನು ಓದಲು ಪ್ರೇರೇಪಿಸಿದ ಕಾದಂಬರಿ ಯಯಾತಿ. ಮೂಲ ಕೃತಿಗೆ ನ್ಯಾಯ ಒದಗಿದ ಇನಾಂದರ್ ರವರಿಗೆ ನಮನಗಳು.

ಈ ಕಾದಂಬರಿಯನ್ನು ಮುಗಿಸಿ ಎಷ್ಟೋ ದಿವಸಗಳು ಸರಿದುಹೋಗಿದೆ, ಆದರೆ ಮನಸ್ಸಿನಲ್ಲಿರುವ ಯಯಾತಿ, ಶರ್ಮಿಷ್ಠೆಯರನ್ನು ಬೀಳ್ಕೊಡುವುದಕ್ಕೆ ಸಾಧ್ಯವೇ ಆಗುತ್ತಿಲ್ಲ, ನಾನು ಓದಿರುವಲ್ಲಿ ಅತ್ಯಂತ‌ ಶ್ರೇಷ್ಠ ಕಾದಂಬರಿ ಇದು. ಲೇಖಕರನ್ನು ಎಷ್ಟು ಹೊಗಳಿದರೂ ಸಾಲದು, ಅನುವಾದ ಮಾಡಿರುವ ಇನಾಂದಾರ್ ರವರಿಗೆ ನಮನಗಳು. ಇಲ್ಲಿ ಬರುವ ಯಯಾತಿ ಬರಿ ಪೌರಾಣಿಕದ ಯಯಾತಿಯಲ್ಲ, ನಮ್ಮ ಸಮಾಜದಲ್ಲಿ ಇಂತಹ ಹಲವಾರು ಯಯಾತಿಯನ್ನು ಕಾಣಬಹುದು. ಕಾಮವಾಸನೆ ಅನ್ನವಾಸನೆಯಷ್ಟೇ ಸ್ವಭಾವಿಕವಾದದ್ದು ಆದರೆ ವಿಪರೀತವಾದದ್ದು ಎಲ್ಲವೂ ವಿಷವೇ. ಯಯಾತಿ ಮಹಾರಾಜನೆ ಇರಬಹುದು ಆದರೆ ಅವನ ಜೀವನದಲ್ಲಿ ಆತ ಎಂದಿಗೂ ಸುಖವಾಗಿರಲೇ ಇಲ್ಲ ತಾನು ಅನುಭವಿಸಿದ ಎಲ್ಲಾ ಸುಖಗಳು ಕ್ಷಣಿಕ ಮಾತ್ರದ್ದು, ಇದೊಂದು ಪ್ರಣಯ ಕಥೆಯೇ ಇರಬಹುದು. ಮಗುವಾಗಿದ್ದ ಯಯಾತಿ, ಹುಡುಗನಾಗಿದ್ದಾಗ ಯಯಾತಿ, ಯೌವನದಲ್ಲಿ ಕಾಲಿರುಸುತ್ತಿದ್ದ ಯಯಾತಿ ಮತ್ತು ಬೆಳೆದು ದೊಡ್ಡವನಾದ ಯಯಾತಿ, ಇವರೆಲ್ಲರೂ ಒಬ್ಬರೆ ಆದರೆ ಎಲ್ಲಿಯೂ ಆತ ಸುಖಿಯಾಗಿರಲಿಲ್ಲ. ಯಯಾತಿ ಹುಟ್ಟಿದಾಗ‌ ಆತನ ತಾಯಿಯ ಬಳಿ ಓರ್ವ ಜ್ಯೋತಿಷಿ ಹೇಳಿದ್ದನಂತೆ, ಈ ಹುಡುಗ ಭಾಗ್ಯವಂತನಾಗುತ್ತಾನೆ, ಅರಸನಾಗುತ್ತಾನೆ ಎಲ್ಲ ಬಗೆಯ ಸುಖಗಳೂ ಆತನಿಗೆ ಸಿಕ್ಕುತ್ತವೆ. ಆದರೆ ಆತನು ಸುಖಿಯಾಗಿರಲಾರನೆಂದು. ಅಲ್ಲ, ಎಲ್ಲಾ ಬಗೆಯ ಸುಖಗಳಿದ್ದರೂ ತಾನು ಸುಖಿಯಾಗಿರಲಾರನೆಂದರೆ ಅವನೊಬ್ಬ ಹುಚ್ಚನೇ ಆಗಿರಬೇಕೆಂದುಕೊಂಡನು, ಆದರೆ ಋಷಿಯು ಹೇಳಿದ್ದು ಸತ್ಯವೂ ಹೌದು.

ಉದಾಹರಣೆಗೆ, ಯಯಾತಿಗೆ ಚಿಕ್ಕಂದಿನಲ್ಲಿ ಹೂಗಳೆಂದರೆ ಎಷ್ಟು ಪ್ರೀತಿ, ಅದರ ಮಕರಂದವನ್ನು ಹೀರುವುದರಲ್ಲಿರುವ ಸುಖ ಅದು ಅನುಭವಿಸುವವರಿಗೆ ತಿಳಿಯುತ್ತದೆ, ಬೆಂಕಿಯ ಕಿಡಿಗಳನ್ನು ಕಂಡರೆ ಹೂವುಗಳು ಎಂದು ಎಷ್ಟು ಸಂತಸಪಡುತ್ತಿದ್ದ, ಅರಮನೆಯ ನಂದನವನದಲ್ಲಿ ಹಲವಾರು ಹಕ್ಕಿಗಳನ್ನು ಕಂಡಾಗ ಎಷ್ಟು ಆನಂದ ಪಡುತ್ತಿದ್ದ, ಒಮ್ಮೆ ಜಿಂಕೆಗೆ ಗಾಯವಾಗಿ ಅದು ನೋವನ್ನು ಅನುಭವಿಸುವಾಗ ಎಷ್ಟು ಸಂಕಟಪಟ್ಟ, ಆಗ ಆ ಗಾಯಕ್ಕೆ ಔಷಧಿ ಹಾಕಿ ಅದು ಪುನಃ ಜಿಗಿಯಲು ಹೊರಟಾಗ‌ ಎಷ್ಟು ಆನಂದಪಟ್ಟ, ಆದರೆ ಅದೇ ಯಯಾತಿಯು ಯೌವನದಲ್ಲಿ ಕಾಲಿರಿಸಿದಾಗ ಬಿಲ್ಲು ವಿದ್ಯೆಯನ್ನು ಕಲಿಯುವಾಗ ಎಷ್ಟು ಹಕ್ಕಿಗಳನ್ನು ಕೊಂದ, ತನ್ನ ಪರಾಕ್ರಮವನ್ನು ತನ್ನ ತಾಯಿ ತಂದೆ ಎಷ್ಟು ಮೆಚ್ಚಿದರು. ತಾನು ಕೊಂದ ಹಕ್ಕಿಯ ಮಾಂಸವನ್ನು ತಾಯಿ‌ ಬೇಯಿಸಿ ಕೊಟ್ಟಾಗ ತಂದೆಯು ತುತ್ತು ತುತ್ತಿಗೂ ಚಪ್ಪರಿಸುತ್ತಾ ಹೇಗೆ ಹೊಗಳಿದರು, ಆದರೆ ತನ್ನ ಮನಸ್ಸಿನ ಸಂಕಟ ಅರ್ಥವಾಗುವುದಾದರೂ ಹೇಗೆ ಆ ಪಕ್ಷಿಯನ್ನು ಕೊಲ್ಲುವ ಮುಂಚೆ ಅವಕ್ಕೂ ನಮ್ಮ ಹಾಗೆ ಮಕ್ಕಳಿರುತ್ತವೆಯಲ್ಲವೇ, ತಾಯಿ ಹಿಂದುರುಗದಿದ್ದರೆ ಮಕ್ಕಳ ಗತಿಯೇನು, ಇದೇ ವಿಷಯವನ್ನು ‌ಗುರುಗಳಿಗೆ ಹೇಳಿದಾಗ, ಯುವರಾಜರೆ ಕ್ಷತ್ರಿಯ ಧರ್ಮ ಬೇಟೆಯಾಡುವುದೇ ಎಂದು ಬೇಟೆಯಾಡುವ ಪ್ರತಿಯೊಂದು ಜೀವಿಯ ಮೇಲೂ ಮಮತೆ‌ ಇರಬಾರದೆಂದರು. ಅದೇ ತಾನೊಂದು ಸಲ ತಾಯಿಯ ಮೇಲೆ ಕೋಪಿಸಿಕೊಂಡಾಗ ಆಕೆ ಎಷ್ಟು ಅತ್ತಳು, ಆಕೆಯ ಕಣ್ಣೀರು ತನ್ನ ಮೇಲೆ ಬಿದ್ದಾಗ ಅರಿವಾಯಿತು, ಮಾತಿಗಿಂತ ಸ್ಪರ್ಶ ಹೆಚ್ಚಿನದನ್ನು ಹೇಳಬಲ್ಲದು. ಆದರೆ ಅದು ಮನುಷ್ಯನ ಅಂತರಂಗವನ್ನು ತಟ್ಟಲಾರದು, ಆ ಕೆಲಸವನ್ನು ಕಣ್ಣೀರು ಮಾತ್ರ ಸಾಧಿಸಬಲ್ಲದು. ಎಷ್ಟಾದರೂ ಹೊಟ್ಟೆಯಲ್ಲಿ ಹುಟ್ಟಿದ‌ ಮಗುವೆಂದರೆ ತಾಯಿಗೆ ಕಣ್ಣುಗೊಂಬೆಯಲ್ಲವೆ. ಅದು ಮನುಷ್ಯರೇ ಇರಲಿ, ಪ್ರಾಣಿಯೇ ಇರಲಿ, ಹಕ್ಕಿಯೇ ಇರಲಿ. ಅರಮನೆಯಿಂದ ಆಚೆ ಹೋದ ತನ್ನನ್ನು ಎದುರು ನೋಡುವ ತಾಯಿಯನ್ನು ನೆನೆದರೆ ಅಬ್ಬ ಮಕ್ಕಳೆಂದರೆ ಎಷ್ಟು ಮಮತೆ, ಮಗು ಎಷ್ಟು ದೊಡ್ಡದಾದರೂ ತಾಯಿಯ ದೃಷ್ಟಿಯಲ್ಲಿ ಅದು ಎಂದಿಗೂ ಚಿಕ್ಕದೇ. ಇನ್ನೂ ಹಲವು ಉದಾಹರಣೆಗಳು. ದೇವಯಾನಿ ಶರ್ಮಿಷ್ಠೆಯರಂಥ ಇಬ್ಬರು ಚೆಲುವೆಯರ ಸಹವಾಸದ ಸುಖ ಯಯಾತಿಗೆ ಸಿಕ್ಕಿದರೂ ಆತ ತೃಪ್ತಿಯಾಗಲಿಲ್ಲ, ಯಯಾತಿಯ ಹಾಗೆ ಇಂದಿನ ಮನುಷ್ಯ ಕ್ಷಣಿಕ ಸುಖಗಳ ಬೆನ್ನಹಿಂದೆ ಓಡುವುದರಲ್ಲಿಯೇ ಮಗ್ನನಾಗಿದ್ದಾನೆ, ಹೆಚ್ಚು ಹೆಚ್ಚು ಪ್ರಮಾಣದಲ್ಲಿ ಅದು ತನ್ನದಾಗಬೇಕು ಎಂದು ಒದ್ದಾಡುತ್ತಿದ್ದಾನೆ. ಸುಖ ಮತ್ತು ಆನಂದ ಇವುಗಳ ನಡುವಿನ ವ್ಯತ್ಯಾಸ ಆತನಿಗೆ ತಿಳಿಯದಾಗಿದೆ. ಈ ಕಾದಂಬರಿ‌ ಯಯಾತಿಯ ಕಾಮದ ಕಥೆಯಾಗಿದೆ, ದೇವಯಾನಿಯ ಸಂಸಾರದ ಕಥೆಯಾಗಿದೆ, ಶರ್ಮಿಷ್ಠೆಯ ಪ್ರೀತಿಯ ಕಥೆಯಾಗಿದೆ, ಕಚನ ಭಕ್ತಿಯ ಕಥೆಯಾಗಿದೆ. ನಮ್ಮ ಸಮಾಜದಲ್ಲಿ ಹಲವಾರು ಯಯಾತಿ, ದೇವಯಾನಿ, ಶರ್ಮಿಷ್ಠೆ, ಕಚರನ್ನು ಕಾಣಬಹುದು.

ಇಲ್ಲಿ ಬರುವ ಇನ್ನೂ ಹಲವಾರು ಪಾತ್ರಗಳು ಕಚ, ಶುಕ್ರಾಚಾರ್ಯರು, ಮುಕುಲಿಕೆ,ಅಲಕಾ, ಮಾಧವ, ಅಂಗೀರಸ ಇವರ ಬಗ್ಗೆ ಹೇಳುತ್ತಾ ಹೋದರೆ ಚಿಕ್ಕ ವಿಮರ್ಶೆ ಸಾಲದೂ, ಆದರೂ ನಾನು ಬರೆದಿರುವಲ್ಲಿ ಕೊಂಚ ಮಾಹಿತಿ ನೀಡಿದ್ದೇನೆ.

ಇಲ್ಲಿಗೇ ಓದುವುದನ್ನು ನಿಲ್ಲಿಸಲು ಸಾಧ್ಯವಿಲ್ಲ, ಮನಸ್ಸಿನಲ್ಲಿರುವ ಯಯಾತಿಯನ್ನು ಬೀಳ್ಕೊಡಲೇಬೇಕು ಆದರೆ ಏನೋ ಒಂದು ತರಹ ದುಃಖ. ಸಮಯ ಸಿಕ್ಕಾಗ ಖಂಡಿತ ಓದಿ.

- ಕಾರ್ತಿಕೇಯ

ಕಾರ್ತಿಕೇಯ ಅವರ ಲೇಖಕ ಪರಿಚಯಕ್ಕಾಗಿ

 

MORE FEATURES

ಸಾಮಾನ್ಯರ ಹಲವು ಪ್ರಶ್ನೆಗಳಿಗೆ ಇದರಲ್ಲಿ ಉತ್ತರವಿದೆ

25-04-2024 ಬೆಂಗಳೂರು

"ಓದುವ ಗುಣವನ್ನು ಕಳೆದುಕೊಂಡಿರುವ ನಮ್ಮ ನಾಗರಿಕರು ನಿಜಾರ್ಥದಲ್ಲಿ ಸತ್ಯ ಬೇಕಾದರೆ ಈ ಪುಸ್ತಕವನ್ನು ಓದಬೇಕು. ಮುಂದ...

ಬೆಟ್ಟ ಹತ್ತುವುದೆಂದರೆ ಕೇವಲ ಚಾರಣವಲ್ಲ, ಅದೊಂದು ಬದುಕಿನ ಪಯಣ

25-04-2024 ಬೆಂಗಳೂರು

"ಬೆಟ್ಟ ಹತ್ತುವುದೆಂದರೆ ಕೇವಲ ಚಾರಣವಲ್ಲ. ಅದೊಂದು ಬದುಕಿನ ಪಯಣ. ಪ್ರತಿ ಕ್ಷಣ ಎದಿರಾಗುವ ಅಪಾಯಗಳನ್ನು ಸಲೀಸಾಗಿ ಗ...

ನನ್ನ ಪತಿಯ ಪ್ರೋತ್ಸಾಹದಿಂದ ನನಗೆ ಬರೆಯುವ ಗೀಳು ಬಂತು

25-04-2024 ಬೆಂಗಳೂರು

‘ನನ್ನ ಪತಿಯ ಪ್ರೋತ್ಸಾಹದಿಂದ ನನಗೆ ಬರೆಯುವ ಗೀಳು ಬಂತು. ಹಾಗಾಗಿ, ಕೆಲವೊಂದು ಪುಸ್ತಕಗಳನ್ನು ಬರೆದಿದ್ದೇನೆ. 202...