ಮಹಿಳಾ ವೃತ್ತಿನಾಟಕಗಳ ಪ್ರಾಯೋಗಿಕ ವಿಮರ್ಶೆ

Date: 22-11-2021

Location: ಬೆಂಗಳೂರು


‘ವೃತಿರಂಗಭೂಮಿಯ ನಾಟಕಗಳನ್ನು ರಚಿಸಿದ ಎರಡನೇ ಮಹಿಳೆ ಪ್ರೇಮಾ ಬದಾಮಿ. 1961ರಲ್ಲಿ ನ್ಯಾಮತಿ ಕಮಲವ್ವ ಅವರ “ಮೂಲಾ ನಕ್ಷತ್ರ” ಪ್ರಕಟವಾದ ಐದು ದಶಕಗಳ ನಂತರ, ಪ್ರೇಮಾ ಬದಾಮಿಯವರಿಂದ ವೃತ್ತಿನಾಟಕಗಳು ಪ್ರಕಟವಾದವು’ ಎನ್ನುತ್ತಾರೆ ಲೇಖಕ ಬಸವರಾಜ ಸಬರದ. ಅವರು ‘ಮಹಿಳಾ ರಂಗಭೂಮಿ’ ಅಂಕಣದಲ್ಲಿ ಮಹಿಳಾ ವೃತ್ತಿನಾಟಕಗಳ ಕುರಿತು ವಿಶ್ಲೇಷಿಸಿದ್ದಾರೆ.

ನ್ಯಾಮತಿ ಕಮಲವ್ವನವರ “ಮೂಲಾ ನಕ್ಷತ್ರ” (ಪ್ರಥಮ ಮಹಿಳಾ ವೃತ್ತಿನಾಟಕ) ಮಹಿಳೆಯರು ವೃತ್ತಿರಂಗಭೂಮಿಯಲ್ಲಿ ಕಲಾವಿದೆಯರಾಗಿ ಬಹುದೊಡ್ಡ ಸಾಧನೆ ಮಾಡಿದ್ದಾರೆ. ಕೆಲವು ಮಹಿಳೆಯರು ನಾಟ್ಯ ಸಂಘಗಳನ್ನು ಸ್ಥಾಪಿಸಿ ಅನೇಕ ಕಲಾವಿದೆಯರಿಗೆ ಆಸರೆ ಕೊಟ್ಟಿದ್ದಾರೆ. ರಂಗಗೀತೆಗಳ ಮೂಲಕ ರಂಗ ಸಂಗೀತಗಳನ್ನು ಬೆಳೆಸಿದ್ದಾರೆ. ಆದರೆ ಮಹಿಳೆಯರು ವೃತ್ತಿನಾಟಕಗಳನ್ನು ರಚಿಸಿರುವುದು ತುಂಬ ವಿರಳ. ಆದರೆ ಕಮಲಾಬಾಯಿ ಬೆಂಗಳೂರು ಅವರು ವೃತ್ತಿನಾಟಕ ರಚಿಸುವುದರ ಮೂಲಕ ಪ್ರಥಮ ನಾಟಕಕಾರಳಾಗಿ ರಂಗಚರಿತ್ರೆಯಲ್ಲಿ ದಾಖಲಾಗಿದ್ದಾಳೆ. ಬೆಂಗಳೂರು ಪ್ರದೇಶದ ಈ ಮಹಿಳೆ ಉತ್ತರ ಕರ್ನಾಟಕದ ನಾಟಕ ಕಂಪನಿಗಳನ್ನು ಸೇರಿ ಒಬ್ಬ ನಟಿಯಾಗಿ ದೊಡ್ಡಸಾಧನೆ ಮಾಡುತ್ತಾಳೆ. ಚಿತ್ರಾಂಗದಾ, ದ್ರೌಪದಿ ಈ ರೀತಿಯ ಪೌರಾಣಿಕ ಪಾತ್ರಗಳಿಗೆ ಜೀವ ತುಂಬಿದ ಕಮಲಾಬಾಯಿ ವೃತ್ತಿರಂಗಭೂಮಿಯ ಪ್ರಸಿದ್ಧ ನಟಿಯಾಗುತ್ತಾಳೆ. ಈ ಕಮಲಾಬಾಯಿ ಉತ್ತರಕರ್ನಾಟಕದ ಪ್ರೇಕ್ಷಕರ ಬಾಯಿಯಲ್ಲಿ ಕಮಲವ್ವ ಆಗಿ ಜನಪ್ರಿಯಳಾಗುತ್ತಾಳೆ. ನಾಟಕ ಕಂಪನಿಯ ಮಾಲಕನಾಗಿದ್ದ ನ್ಯಾಮತಿ ಶಾಂತಪ್ಪ ಅವರನ್ನು ಮದುವೆಯಾದ ಕಮಲವ್ವ ಅವರ ಪ್ರೇರಣೆ-ಪ್ರೋತ್ಸಾಹದಿಂದ “ಮೂಲಾ ನಕ್ಷತ್ರ” ಎಂಬ ನಾಟಕ ರಚಿಸುತ್ತಾಳೆ. ಈ ನಾಟಕವು ಯಶಸ್ವಿ ರಂಗಪ್ರಯೋಗವಾಗುತ್ತದೆ. ಈ ನಾಟಕವು ಅನೇಕ ಪ್ರಯೋಗಗಳನ್ನು ಕಾಣುವುದರ ಮೂಲಕ ದಾಖಲೆಯಾಗುತ್ತದೆ. 1962ರ ಸಂದರ್ಭದಲ್ಲಿ ಈ ನಾಟಕ ಭರ್ಜರಿ ಪ್ರಯೋಗಗಳನ್ನು ಕಾಣುತ್ತದೆ. ಶಾಂತಪ್ಪನನ್ನು ಮದುವೆಯಾದ ನಂತರ ಈಕೆ ನ್ಯಾಮತಿ ಕಮಲವ್ವ ಎಂದು ಪ್ರಸಿದ್ಧಿ ಪಡೆಯುತ್ತಾಳೆ. ಕಮಲವ್ವ ದಿಟ್ಟ ಕಲಾವಿದೆಯಾಗಿದ್ದಳು. 1977ರಲ್ಲಿ ಪತಿಯ ಕಂಪನಿಯನ್ನು ಬಿಟ್ಟು ಸ್ವಂತ ಕಂಪನಿ ಕಟ್ಟುತ್ತಾಳೆ. ಒಬ್ಬ ಮಹಿಳೆ ದೊಡ್ಡ ನಟಿಯಾಗಿ, ನಾಟಕಕಾರಳಾಗಿ, ಕಂಪನಿ ಮಾಲಕಳಾಗಿ ಬೆಳೆದು ನಿಂತದ್ದು ತುಂಬ ಮಹತ್ವದ ಸಂಗತಿಯಾಗುತ್ತದೆ.

1962ರಲ್ಲಿ ಪ್ರಯೋಗ ಕಂಡ “ಮೂಲಾ ನಕ್ಷತ್ರ” ನಾಟಕವು 1961ರಲ್ಲಿಯೇ ರಚನೆಯಾದ ನಾಟಕ ವಾಗಿದೆ. ಅನೇಕ ಪ್ರಯೋಗಗಳನ್ನು ಕಂಡ ಈ ನಾಟಕ ಕೃತಿ ಪುಸ್ತಕ ರೂಪದಲ್ಲಿ ಪ್ರಕಟವಾಗಿದೆ. ಮೈಸೂರಿನ ಗೆಳೆಯರೊಬ್ಬರು ಈ ನಾಟಕವನ್ನು ತಾವು ಓದಿರುವುದಾಗಿ ಹೇಳಿದರು. ಆದರೆ ನನಗೆ ನಾಟಕದ ಪ್ರತಿ ಸಿಗಲಿಲ್ಲ. ಈ ನಾಟಕವನ್ನು ನೋಡಿದ ಉತ್ತರಕರ್ನಾಟಕದ ಹಿರಿಯರೊಂದಿಗೆ ಚರ್ಚಿಸಿ ಅದರ ಕಥಾವಸ್ತುವನ್ನು ತಿಳಿದುಕೊಂಡೆ ವೃತ್ತಿನಾಟಕಗಳ ಬಗೆಗೆ ಸಂಶೋಧನೆ ಮಾಡಿರುವ ಪಿ.ಎಚ್‍ಡಿ ಪದವಿ ಪಡೆದಿರುವ ಡಾ. ರಾಮಕೃಷ್ಣ ಮರಾಠೆಯವರು ನ್ಯಾಮತಿ ಕಮಲವ್ವನ “ಮೂಲಾ ನಕ್ಷತ್ರ” ಕುರಿತು ವಿವರಿಸಿದರು.

“ಮೂಲಾ ನಕ್ಷತ್ರ” ನಾಟಕದ ಕಥಾವಸ್ತುವು ಮೂಢನಂಬಿಕೆಗೆ ಸಂಬಂಧಿಸಿದ್ದಾಗಿದೆ. ಮೂಲಾ ನಕ್ಷತ್ರದಲ್ಲಿ ಹುಟ್ಟಿದವರಿಗೆ ಕೇಡಾಗುತ್ತದೆಂಬ ನಂಬಿಕೆಯಿದೆ. ಈ ನಂಬಿಕೆಗೆ ಯಾವುದೇ ಆಧಾರವಿಲ್ಲ. ವೈಜ್ಞಾನಿಕವಾಗಿ ಈ ತಿಳಿವಳಿಕೆಗೆ ಅರ್ಥವಿಲ್ಲ. ಆ ಕಾಲಘಟ್ಟದಲ್ಲಿ ಮೌಢ್ಯತೆ ಹೆಚ್ಚಾಗಿದ್ದ ಕಾಲದಲ್ಲಿ ಈ ನಾಟಕ ಪ್ರೇಕ್ಷಕರಲ್ಲಿ ಹೊಸ ಭರವಸೆಯನ್ನುಂಟು ಮಾಡುತ್ತದೆ.

ಮೂಲಾ ನಕ್ಷತ್ರದಲ್ಲಿ ಹುಟ್ಟಿದ ಕಾರಣಕ್ಕೆ ಏನೆಲ್ಲಾ ಕೆಡುಕು ಬರುತ್ತದೆಂಬುದು ಶುದ್ಧ ಸುಳ್ಳು. ಪುರೋಹಿತಶಾಹಿ ವ್ಯವಸ್ಥೆ ಇಂತಹ ಮೌಢನಂಬಿಕೆಗಳನ್ನು ಈ ವ್ಯವಸ್ಥೆಯಲ್ಲಿ ಬಿತ್ತಿಬಿಟ್ಟಿದೆ. ಈ ನಾಟಕದಲ್ಲಿಯೂ ಅದೇ ಪ್ರಸ್ತಾಪವಿದೆ. ಆದರೆ ನಾಟಕಕಾರ್ತಿ ಕೊನೆಗೆ ಇದರ ಆಶಯವನ್ನು ಸ್ಪಷ್ಟಪಡಿಸಿದ್ದಾರೆ. ಕಾಯಕ ಮಾಡುವುದರಿಂದ ಮಾತ್ರ ಮನುಷ್ಯ ಮುಂದೆ ಬರುತ್ತಾನೆಯೇ ಹೊರತು, ಹುಟ್ಟಿದ ಸಮಯ, ನಕ್ಷತ್ರಗಳಿಂದ ಅಲ್ಲವೆಂಬ ಸತ್ಯ ನಾಟಕದ ಕೊನೆಗೆ ಪ್ರಕಟ ವಾಗುತ್ತದೆ. ಇಂತಹ ಸಂಕೀರ್ಣ ವಿಷಯವನ್ನಿಟ್ಟುಕೊಂಡು ಮಹಿಳೆಯೊಬ್ಬಳು ಮೊದಲ ಬಾರಿಗೆ ವೃತ್ತಿರಂಗಭೂಮಿಗೆ ನಾಟಕ ರಚಿಸಿಕೊಟ್ಟದ್ದು ಐತಿಹಾಸಿಕವಾಗಿ ಗಮನ ಸೆಳೆಯುತ್ತದೆ.

ಪ್ರೇಮಾ ಬದಾಮಿಯವರ - ‘ಧರಿತ್ರಿ’
ವೃತಿರಂಗಭೂಮಿಯ ನಾಟಕಗಳನ್ನು ರಚಿಸಿದ ಎರಡನೇ ಮಹಿಳೆ ಪ್ರೇಮಾ ಬದಾಮಿ. 1961ರಲ್ಲಿ ನ್ಯಾಮತಿ ಕಮಲವ್ವ ಅವರ “ಮೂಲಾ ನಕ್ಷತ್ರ” ಪ್ರಕಟವಾದ ಐದು ದಶಕಗಳ ನಂತರ, ಪ್ರೇಮಾ ಬದಾಮಿಯವರಿಂದ ವೃತ್ತಿನಾಟಕಗಳು ಪ್ರಕಟವಾದವು. ನಟಿಯಾಗಿ ರಂಗಪ್ರವೇಶಿಸಿದ ಪ್ರೇಮಾ ಅವರು ಮೂಲತಃ ಬದಾಮಿಯವರು. ಅನೇಕ ಕಂಪನಿ ನಾಟಕಗಳ ಮುಖಾಂತರ ಒಬ್ಬ ರಂಗನಟಿಯಾಗಿ ಬೆಳೆದ ಪ್ರೇಮಾ ಅವರು ನಾಟಕರಚನೆಗೆ ಕೈಹಾಕಿದರು. ತಾವು ಪಡೆದಿರುವ ರಂಗಭೂಮಿಯ ಅನುಭವದ ಮೂಲಕ ಮಹತ್ವದ ನಾಟಕಕಾರರಾಗಿ ಬೆಳೆದು ನಿಂತರು. 2006ರಲ್ಲಿ ಇವರ “ಎಲ್ಲೋ ಜೋಗಪ್ಪ ನಿನ್ನ ಅರಮನೆ” ನಾಟಕ ಪ್ರಕಟವಾಯಿತು. 2014ರಲ್ಲಿ “ಚಿರಸ್ಥಾಯಿನಿ ಗುರುಪುಟ್ಟರಾಜ” ನಾಟಕ ರಚನೆಯಾಯಿತು. 2015ರಲ್ಲಿ “ಧರಿತ್ರಿ” ನಾಟಕ ಪ್ರಕಟವಾಗಿ ಅನೇಕ ರಂಗಪ್ರಯೋಗಗಳನ್ನು ಕಂಡಿತು. “ವಿಜಯವಾಣಿ” ಪತ್ರಿಕೆಯ ಮೂಖಾಂತರ ಅನೇಕ ರಂಗಕಲಾವಿದೆಯರನ್ನು ಪರಿಚಯಿಸಿದ ಕೀರ್ತಿ ಪ್ರೇಮಾ ಅವರಿಗೆ ಸಲ್ಲುತ್ತದೆ. ನಟನೆ-ನಿರ್ದೇಶನದ ಜತೆಗೆ ಪ್ರೇಮಾ, ನಾಟಕಕಾರರಾಗಿ ಬೆಳೆದು ನಿಂತಿರುವುದು ಮಹಿಳಾ ರಂಗಭೂಮಿಯ ಮಹತ್ವದ ಬೆಳವಣಿಗೆಯಾಗಿದೆ.

ಪ್ರೇಮಾ ಅವರು ಪ್ರಸಿದ್ಧ ರಂಗನಟಿಯಾಗಿರುವಂತೆ ಪ್ರಮುಖ ಲೇಖಕಿಯೂ ಆಗಿದ್ದಾರೆ. ನಾಟಕಗಳ ಜೊತೆಗೆ ಕಾವ್ಯ, ಜೀವನಚರಿತ್ರೆಯಂತಹ ಕೃತಿಗಳನ್ನು ರಚಿಸಿದ್ದಾರೆ. ಇದುವರೆಗೆ ಅನೇಕ ನಾಟಕಕಾರರು ವೃತ್ತಿರಂಗಭೂಮಿಗೆ ಮಹತ್ವದ ನಾಟಕಗಳನ್ನು ನೀಡಿದ್ದಾರೆ. ಆ ನಾಟಕಗಳೊಂದಿಗೆ ಪ್ರೇಮಾ ಬದಾಮಿಯವರ ನಾಟಕಗಳನ್ನು ಹೋಲಿಸಿ ನೋಡಿದಾಗ ತುಂಬ ವಿಶಿಷ್ಟತೆ ಕಾಣಿಸುತ್ತದೆ. ವೃತ್ತಿನಾಟಕಗಳಲ್ಲಿ ಸಾಮಾನ್ಯವಾಗಿ ಒಬ್ಬ ನಾಯಕ ಮತ್ತೊಬ್ಬ ಖಳನಾಯಕ ಇರುವುದು ಸಹಜವಾದುದಾಗಿದೆ. ಆದರೆ ಪ್ರೇಮಾ ಅವರು ಇಲ್ಲಿ ಸ್ತ್ರೀವಾದಿ ನೆಲೆಯಿಂದ ಈ ನಾಟಕವನ್ನು ರಚಿಸಿದ್ದಾರೆ. “ಧರಿತ್ರಿ” ನಾಟಕದ ನಾಯಕನೇ, ಖಳನಾಯಕನಾಗಿದ್ದಾನೆ. ತುಂಬ ವಿಶಿಷ್ಟವಾದ ತಿರುವನ್ನು ಈ ನಾಟಕ ಪಡೆದುಕೊಂಡಿದೆ.

ಈ ದೇಶಕ್ಕೆ ಸ್ವಾತಂತ್ರ್ಯ ದೊರೆತು ಏಳು ದಶಕಗಳು ಕಳೆದರೂ ಇಲ್ಲಿ ಸ್ತ್ರೀಸ್ವಾತಂತ್ರ್ಯಕ್ಕೆ, ಮಹಿಳಾ ಚಿಂತನೆಗೆ ಬೆಲೆ ಇಲ್ಲದಂತಾಗಿದೆ. ಹೆಣ್ಣಿನ ಭ್ರೂಣಹತ್ಯೆ ನಡೆಯುತ್ತಿರುವ ಈ ವ್ಯವಸ್ಥೆಯಲ್ಲಿ ಮಹಿಳೆಯನ್ನು ಸಮಾನತೆಯಿಂದ ಕಾಣುವ ದೃಷ್ಟಿಕೋನ ಇನ್ನೂ ಪೂರ್ಣವಾಗಿ ಬೆಳೆದಿಲ್ಲವೆಂದೇ ಹೇಳಬೇಕಾಗುತ್ತದೆ. ಮಹಿಳೆ ಇಂದು ಅನೇಕ ಕ್ಷೇತ್ರಗಳಲ್ಲಿ ಮಹತ್ವದ ಸಾಧನೆ ಮಾಡಿದ್ದಾಳೆ. ಸಾಂಸ್ಕೃತಿಕ ಕ್ಷೇತ್ರಕ್ಕಂತೂ ಬಹುದೊಡ್ಡ ಕೊಡುಗೆ ಕೊಟ್ಟಿದ್ದಾಳೆ. ಆದರೂ ಮಹಿಳೆ ಯರಿಗೆ ಸಿಗಬೇಕಾದ ಗೌರವ, ಆಕೆಗೆ ದೊರೆಯಬೇಕಾದ ಅವಕಾಶ ಇನ್ನೂ ದೊರೆತಿಲ್ಲವೆಂದೇ ಹೇಳಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಬಂದ “ಧರಿತ್ರಿ” ನಾಟಕ ಗಮನ ಸೆಳೆಯುತ್ತದೆ. ಪ್ರೇಮಾ ಅವರ ವೃತ್ತಿನಾಟಕಗಳ ಬಗೆಗೆ ಚರ್ಚೆ ನಡೆಯಬೇಕಾಗಿದೆ.

“ಧರಿತ್ರಿ” ನಾಟಕ ಹೆಸರೇ ಸೂಚಿಸುವಂತೆ, ಹೆಣ್ಣನ್ನು ಇಲ್ಲಿ ಧರಿತ್ರಿಗೆ-ಭೂಮಿಗೆ ಹೋಲಿಸಲಾಗಿದೆ. ಭೂಮಿಯಂತೆ ಹೆಣ್ಣು ಸಹನಾಶೀಲಳಾಗಿದ್ದಾಳೆ, ಪ್ರಕೃತಿಯಂತೆ ಎಲ್ಲವನ್ನು ಈ ಸಮಾಜಕ್ಕೆ ನೀಡುವ ತ್ಯಾಗ ಸ್ವಭಾವದವಳೂ ಆಗಿದ್ದಾಳೆ. ಈ ನಾಟಕವು ಅಂತಹ ಹೆಣ್ಣುಗಳ ಸಂಕೀರ್ಣ ಬದುಕನ್ನು ಅನಾವರಣಗೊಳಿಸುತ್ತದೆ. ಧೀರಜ ಎಂಬ ಶ್ರೀಮಂತ ಉದ್ಯಮಿ ಈ ನಾಟಕದ ನಾಯಕನೂ ಹೌದು, ಖಳನಾಯಕನು ಹೌದು. ನಾಯಕನಾದವನಲ್ಲಿ ತುಂಬ ಒಳ್ಳೆಯಗುಣಗಳು, ಖಳನಾಯಕನಾದವನಲ್ಲಿ ಬರೀ ಕೆಟ್ಟಗುಣಗಳಿರುತ್ತವೆಂದು ಇದುವರೆಗೆ ಪ್ರಕಟವಾಗಿರುವ ರಂಗನಾಟಕಗಳು ಹೇಳುತ್ತವೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಚಿತ್ರಿಸಿರುವ ಪ್ರೇಮಾ ಅವರು ಇಲ್ಲಿ ನಾಯಕನಲ್ಲಿಯೇ ಎರಡೂ ರೀತಿಯ ಗುಣಗಳನ್ನು ಕಂಡಿದ್ದಾಳೆ. ಯಾವುದೇ ವ್ಯಕ್ತಿಪರಿಪೂರ್ಣನಲ್ಲ, ಅವನಲ್ಲಿ ಒಳ್ಳೆಯ ಗುಣಗಳ ಜೊತೆಗೆ ಕೆಟ್ಟಗುಣಗಳೂ ಇರುತ್ತವೆ. ಆತ್ಮವಿಮರ್ಶೆಯ ಮೂಲಕ, ಪಶ್ಚಾತಾಪದ ಮೂಲಕ ಕೆಟ್ಟಗುಣಗಳನ್ನು ಕಳೆದುಕೊಳ್ಳುತ್ತಾ ಹೋಗಬೇಕಾಗುತ್ತದೆ. ಆಗ ಮನುಷ್ಯ ಪರಿಪೂರ್ಣತೆಯ ಕಡೆ ಹೋಗಲು ಸಾಧ್ಯವಾಗುತ್ತದೆ. ಇಂತಹ ಮಹತ್ವದ ಸಂದೇಶವನ್ನು ಈ ನಾಟಕ ಒಳಗೊಂಡಿದೆ.

ಈ ನಾಟಕದ ಮುಖ್ಯಪಾತ್ರವಾಗಿರುವ ಧೀರಜ, ಶ್ರೀಮಂಥ ಉದ್ಯಮಿಯಾಗಿ ಅನೇಕರಿಗೆ ಕೆಲಸ ಕೊಟ್ಟಿದ್ದಾನೆ. ಆದರೆ ತನ್ನ ಕಾಮಪೀಪಾಸೆಗೆ ಕೆಲವು ಹೆಣ್ಣುಮಕ್ಕಳನ್ನು ಬಳಸಿಕೊಂಡಿದ್ದಾನೆ. ಹಾಗೆಂದು ಈತ ಯಾವ ಮಹಿಳೆಯನ್ನೂ ರೇಪ್ ಮಾಡಿಲ್ಲ. ಹೆಣ್ಣುಮಕ್ಕಳ ಅಸಹಾಯಕತೆಯನ್ನು ದುರುಪಯೋಗಪಡಿಸಿಕೊಂಡು, ಅವರಿಗೆಲ್ಲ ಮೋಸ ಮಾಡಿದ್ದಾನೆ. ಈ ನಾಟಕದಲ್ಲಿ ಬರುವ ಎಲ್ಲ ಪಾತ್ರಗಳು ಧೀರಜನ ಸುತ್ತಲೇ ಸುತ್ತುತ್ತಿವೆ. ಹಾಗೆಂದಾಕ್ಷಣ ಆತ ನಾಯಕನಲ್ಲ, ನಾಯಕ-ಖಳನಾಯಕರಲ್ಲಿರುವ ಎರಡು ರೀತಿಯ ಗುಣಗಳು ಧೀರಜನಲ್ಲಿವೆ.

ರಾಘಣ್ಣ ಧೀರಜನ ವ್ಯವಹಾರವನ್ನು ನೋಡಿಕೊಳ್ಳುವ ಗುಮಾಸ್ತ, ಭಜರಂಗ್ ಕಾರ್ ಡ್ರೈವರ್, ಶಾಂತಾ-ಭಜರಂಗನ ಹೆಂಡತಿ. ಈಕೆಯೂ ಕೂಡ ಧೀರಜನ ಬಂಗಲೆಯಲ್ಲಿ ಕೆಲಸದಾಕೆಯಾಗಿದ್ದಾಳೆ. ಆರಾಧ್ಯ ಎಂಬ ಮಹಿಳೆ ಕೂಡಾ ಉದ್ಯಮಿಯಾಗಿದ್ದಾಳೆ, ಶ್ರೀಮಂತ ವಿಧವೆಯಾಗಿದ್ದಾಳೆ. ಇವಳ ಒಂಟಿತನವನ್ನು ಉಪಯೋಗಿಸಿಕೊಂಡ ಧೀರಜ ಇವಳೊಂದಿಗೆ ಅನೈತಿಕ ಸಂಬಂಧವನ್ನಿಟ್ಟು ಕೊಳ್ಳುತ್ತಾನೆ. ನಿಖಿತ ಒಬ್ಬ ಕಲಾವಿದೆ ಅವಳ ಮೇಲೂ ಧೀರಜ ಕಣ್ಣು ಹಾಕುತ್ತಾನೆ; ಅವಳನ್ನು ಮದುವೆಯಾಗುವುದಾಗಿ ಹೇಳಿ ಪ್ರೀತಿಯ ಹೆಸರಿನಲ್ಲಿ ಭೋಗಿಸುತ್ತಾನೆ. ರಮಾ ಎಂಬ ಶಿಕ್ಷಕಿ ಮೂರು ಮಕ್ಕಳ ತಾಯಿ, ಧೀರಜ ಹಣದ ಆಸೆ ತೋರಿಸಿ ಅವಳನ್ನು ಅನುಭವಿಸುತ್ತಾನೆ. ಪೂರ್ವಿ ಎಂಬ ಇಪ್ಪತ್ತು ವರ್ಷದ ಹುಡುಗಿಗೆ ತನ್ನ ಫ್ಯಾಕ್ಟರಿಯಲ್ಲಿ ಕೆಲಸಕೊಡಿಸುತ್ತಾನೆ. ನೀನು ನನ್ನ ಮಗಳ ಸಮಾನವೆಂದು ಮೊದಲು ಹೇಳಿದ ಧೀರಜ, ಅವಳ ಆರ್ಥಿಕ ತೊಂದರೆಯನ್ನು ಗಮನಿಸಿ ಹಣದ ಆಸೆ ತೋರಿಸಿ ಪ್ರೀತಿಸುವ ನಾಟಕವಾಡುತ್ತಾನೆ. ಆದರೆ ಪೂರ್ವಿ ಇವನ ಬಲೆಯಲ್ಲಿ ಬೀಳುವ ಮೊದಲೇ, ನಿಖಿತ ಪೂರ್ವಿಯನ್ನು ಎಚ್ಚರಿಸುತ್ತಾಳೆ. ಹೀಗೆ ಅನೇಕ ಹೆಣ್ಣು ಮಕ್ಕಳಿಗೆ ಆಸೆ ತೋರಿಸಿ, ಸುಳ್ಳು ಹೇಳಿ, ಮೋಸಮಾಡಿದ ಧೀರಜನನ್ನು ಪೊಲೀಸರು ಬಂಧಿಸಬಹುದಾಗಿತ್ತು. ಆದರೆ ಈ ನಾಟಕದಲ್ಲಿ ಹಾಗಾಗುವುದಿಲ್ಲ. ಇವನಿಂದ ಅನ್ಯಾಯಕ್ಕೊಳಗಾದ ಮಹಿಳೆಯರೆಲ್ಲ ಸೇರಿಕೊಂಡು ಇವನನ್ನು ಕಾರ್ನರ್ ಮಾಡುತ್ತಾರೆ. ಸ್ವತಃ ಇವನ ಹೆಂಡತಿ ಅನುಶ್ರೀಯ ಸಮ್ಮುಖದಲ್ಲಿಯೇ ಈ ಪ್ರಸಂಗವು ನಡೆಯುತ್ತದೆ. ಧೀರಜನಿಂದ ಮೋಸಹೋದ ಪ್ರತಿಯೊಬ್ಬ ಮಹಿಳೆ ಕೊನೆಗೆ ಪ್ರತಿಭಟನೆ ವ್ಯಕ್ತಪಡಿಸುತ್ತಾಳೆ. ಆಗ ಧೀರಜ ತನ್ನದು ತಪ್ಪಾಯಿತೆಂದು ಪಶ್ಚಾತಾಪ ಪಡುತ್ತಾನೆ. ಧೀರಜನ ಹೆಂಡತಿ ಅನುಶ್ರೀ ಒಬ್ಬ ಹೆಣ್ಣಾಗಿ ಈ ಎಲ್ಲ ಹೆಣ್ಣುಮಕ್ಕಳ ನೋವನ್ನು ಕಂಡು ಸಹಾಯ ಮಾಡಲು ಹೋಗುತ್ತಾಳೆ. ನಿಖಿತಳಿಗೆ ಹಣ ಕೊಡುತ್ತಾಳೆ. ರಮಾಳಿಗೆ ಬ್ಯಾಂಕ್ ಚೆಕ್ ಕೊಡುತ್ತಾಳೆ. ಪೂರ್ವಿಗೆ ಫ್ಯಾಕ್ಟ್ರಿಯನ್ನೇ ಕೊಟ್ಟು ಅವಳನ್ನು ಫ್ಯಾಕ್ಟ್ರಿಯ ಒಡತಿಯನ್ನಾಗಿ ಮಾಡುತ್ತಾಳೆ. ಆರಾಧ್ಯ ವಿಧವೆಯಾದುದರಿಂದ, ಅವಳಿಗೆ ಸಂಪತ್ತಿನ ಅಗತ್ಯವಿಲ್ಲದಿದ್ದುದರಿಂದ, ಧಿರಜನ ಕೈಗೆ ತಾಳಿಕೊಟ್ಟು ಆರಾಧ್ಯಳಿಗೆ ಕಟ್ಟುವಂತೆ ಸ್ವತಃ ಹೆಂಡತಿ ಅನುಶ್ರೀಯೇ ಹೇಳುತ್ತಾಳೆ. ಆದರೆ ಆರಾಧ್ಯ ಇದನ್ನು ಒಪ್ಪುವುದಿಲ್ಲ. ಧೀರಜನಿಂದ ಅನ್ಯಾಯಕ್ಕೊಳಗಾದ ಎಲ್ಲ ಹೆಣ್ಣು ಮಕ್ಕಳಿಗೂ ತನ್ನ ಆಸ್ತಿಯನ್ನು ಹಂಚಿಕೊಟ್ಟ ಅನುಶ್ರೀ ತನ್ನ ಇಬ್ಬರು ಹೆಣ್ಣುಮಕ್ಕಳು ಕೆಲಸಮಾಡುತ್ತಿದ್ದ ಅಮೇರಿಕಾಕ್ಕೆ ಹೊರಟು ಹೋಗುವುದಾಗಿ ಹೇಳುತ್ತಾಳೆ. ಆದರೆ ಧೀರಜ ತನ್ನ ತಪ್ಪನ್ನು ಒಪ್ಪಿಕೊಂಡು, ಕ್ಷಮಿಸಲು ಕೇಳಿಕೊಳ್ಳುತ್ತಾನೆ. ಉಳಿದ ದಿನಗಳನ್ನು ನಿನ್ನ ಮಡಿಲಿನಲ್ಲಿ ಮಗುವಾಗಿ ಕಳೆಯುವೆನೆಂದು ಬೇಡಿಕೊಳ್ಳುತ್ತಾನೆ. ಆಗ ಅನುಶ್ರೀ ಧರಿತ್ರಿಯಂತೆ ಅವನನ್ನು ಕ್ಷಮಿಸುತ್ತಾಳೆ. “ಕಾರ್ಯೇಸು ದಾಸಿ ಕರುಣೇಸು ಮಂತ್ರಿ...” ಎಂಬ ಶ್ಲೋಕದೊಂದಿಗೆ ನಾಟಕ ಮುಕ್ತಾಯ ವಾಗುತ್ತದೆ.

ಈ ನಾಟಕದ ಕಥಾವಸ್ತುವಿನಲ್ಲಿ ವೈವಿಧ್ಯತೆಯಿಲ್ಲ. ಕೇವಲ ಧೀರಜನ ಕಾಮಾಟದ ಪ್ರಸಂಗಗಳು, ಅಸಹಾಯಕ ರಾಗಿದ್ದ ಮಹಿಳೆಯರು ಇವನ ಕಾಮಾಟದ ಮೋಸಕ್ಕೆ ಬಲಿಯಾಗುವುದು, ಕೊನೆಗೆ ಅವನ ಹೆಂಡತಿ ಅನುಶ್ರೀಯೇ ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿ ಧರಿತ್ರಿಯ ಹಾಗೆ ಕಾಣಿಸಿಕೊಳ್ಳುವುದು, ಧಿರಜ ಪಶ್ಚಾತಾಪ ಪಡುವುದು, ಇವಿಷ್ಟೇ ಪ್ರಸಂಗಗಳ ಮೂಲಕ ನಾಟಕ ಮುಕ್ತಾಯವಾಗುತ್ತದೆ. ಅಸಹಾಯಕ ಹೆಣ್ಣುಮಕ್ಕಳ ಸಮಸ್ಯೆಗಳ ಬಗೆಗೆ ಮಾತನಾಡುವ ಈ ಕಾದಂಬರಿ ಕೊನೆಯಲ್ಲಿ ಆಶ್ಚರ್ಯಕರವಾದ ತಿರುವು ಪಡೆಯುತ್ತದೆ.

ಈ ನಾಟಕದ ಪ್ರಮುಖ ಪಾತ್ರವಾದ ಧೀರಜನ ಮಾತುಗಳಲ್ಲಿಯೇ ಅವನ ವ್ಯಕ್ತಿತ್ವವೆಂತಹದೆಂಬುದು ಸ್ಪಷ್ಟವಾಗುತ್ತದೆ. “ಹೆಣ್ಣೆ ನಿನಗೆ ಸಹಾಯಮಾಡ್ತೀನಿ ಅಂದರೆ ಸಾಕು, ಸೆರಗು ಹಾಸಲು ಸಜ್ಜಾಗಿ ನಿಲ್ಲುವ ಸ್ವಭಾವ ಹೆಣ್ಣಿನದು. ಕೇವಲ ಸಹಾಯದ ಹಸ್ತ ತೋರಿಸುತ್ತ ಗೌರವ ಹುಟ್ಟಿಸಿಕೊಂಡು ನನಗೆ ಬೇಕಾದದ್ದನ್ನು ಗಿಟ್ಟಿಸಿಕೊಂಡು ಗೇಟಪಾಸಕೊಟ್ಟು, ಅಟ್ಟಿಸಿ ಬಿಡ್ತೀನಿ. ಇಫ್ ಮನಿ ಈಜ ದೇರ್, ಎವರೀಥಿಂಗ್ ಇನ್ ಅವರ್ ಹ್ಯಾಂಡ್ಸ್” (ಧರಿತ್ರಿ-ಪ್ರೇಮಾ ಬದಾಮಿ, ಚಂದನ ಪ್ರಕಾಶನ, ಧಾರವಾಡ-2015, ಪುಟ-31)

ಹೀಗೆ ಮಾತನಾಡುತ್ತಿದ್ದ ಧಿರಜ ತನ್ನ ಹೆಂಡತಿಯ ಆದರ್ಶಗುಣದಿಂದ ಬದಲಾಗುತ್ತಾನೆ. ತಾನು ಹಿಂದೆ ಮಾಡಿದ್ದೆಲ್ಲ ತಪ್ಪು ಎಂದು ಪಶ್ಚಾತಾಪ ಪಡುತ್ತಾನೆ. “ಅನು, ನಿನ್ನ ಮುಖ ನೋಡಿ ಹೇಳುವಷ್ಟು ಧೈರ್ಯಕೂಡ ನನ್ನಲ್ಲಿಲ್ಲ. ನನ್ನ ಕ್ಷಮೀಸ್ತಿಯಾ ಅಂತ ಕೇಳೋದಕ್ಕೂ ನಾನು ಅರ್ಹನಲ್ಲ. ನಾನು ಸುಖವಾಗಿರೋದಷ್ಟೆ ಜೀವನವೆಂದು ತಿಳಿದಿದ್ದೆ. ಮತ್ತೊಬ್ಬರನ್ನು ಸುಖವಾಗಿಡೋದರಲ್ಲಿ ಅದೆಷ್ಟು ಸ್ವರ್ಗಸುಖವಿದೆಯೆಂಬುದು ತಿಳಿದಿದ್ದು ಇವತ್ತು ನಿನ್ನಿಂದ”. (ಧರಿತ್ರಿ, ಪು-52)

ಬೇರೆ ನಾಟಕಗಳಲ್ಲಿ ನಾಯಕನಾದವನು ಶ್ರೇಷ್ಠ ಗುಣವನ್ನುಳ್ಳ ಆದರ್ಶವ್ಯಕ್ತಿಯಾಗಿರುತ್ತಾನೆ. ಖಳನಾಯಕನಾದ ವನು ದುಷ್ಟಗುಣವನ್ನುಳ್ಳ ಕ್ರೂರಿಯಾಗಿರುತ್ತಾನೆ. ಆದರೆ ಈ ನಾಟಕದಲ್ಲಿ ಮಹತ್ವದ ಬೆಳವಣಿಗೆಯನ್ನು ಕಾಣಬಹುದಾಗಿದೆ. ಒಬ್ಬ ವ್ಯಕ್ತಿಯಲ್ಲಿಯೇ ಒಳ್ಳೆಯ ಗುಣ, ಕೆಟ್ಟಗುಣ ಇರುತ್ತವೆ. ಪರಿಸರದ ಪ್ರಭಾವದಿಂದ ವ್ಯಕ್ತಿ ಬದಲಾವಣೆಯಾಗಲು ಸಾಧ್ಯವಿದೆ. ಪಶ್ಚಾತಾಪದಿಂದ ಆತ್ಮವಿಮರ್ಶೆಯ ಮೂಲಕ ಕೆಟ್ಟವರೂ ಕೂಡ ಒಳ್ಳೆಯವರಾಗಲು ಸಾಧ್ಯವಿದೆಯೆಂಬುದನ್ನು ಈ ನಾಟಕ ಹೇಳುತ್ತದೆ. ಕೆಟ್ಟವರನ್ನು, ದುಷ್ಟರನ್ನು ಶಿಕ್ಷಿಸುವದಕ್ಕಿಂತ ಅವರ ಮನಪರಿವರ್ತನೆ ಮಾಡಿ ಅಂತವರನ್ನು ಸರಿ ದಾರಿಗೆ ತರಬೇಕೆಂಬ ಸಂದೇಶ ಇಲ್ಲಿದೆ. ಇಲ್ಲಿಯ ಎಲ್ಲ ಮಹಿಳಾ ಪಾತ್ರಗಳು ಮುಕ್ತವಾಗಿ ಮಾತನಾಡುತ್ತವೆ. ಇದರಲ್ಲಿ ಧೀರಜನ ತಪ್ಪಿರುವಂತೆ, ತಮ್ಮದೂ ತಪ್ಪಿದೆಯೆಂದು ಒಪ್ಪಿಕೊಳ್ಳುತ್ತವೆ. ಧೀರಜನ ಹೆಂಡತಿ ಅನುಶ್ರೀ ಪಾತ್ರ ಆದರ್ಶದ ಪಾತ್ರವಾಗಿದೆ. ಇಂತಹ ಆದರ್ಶದ ವ್ಯಕ್ತಿಗಳು ಸಿಗುವುದು ಇಂದು ವಿರಳವಾಗಿದೆ.

ತನ್ನ ಪತಿ ಹೀಗೆ ಕಾಮುಕನಾಗಿ ಬೇರೆ ಮಹಿಳೆಯರೊಂದಿಗೆ ಅನೈತಿಕ ಸಂಬಂಧ ಹೊಂದಿದ ವಿಷಯ ತಿಳಿದಾಗ ಅನುಶ್ರೀ ಕೂಡ ಬೇಸರ ವ್ಯಕ್ತಪಡಿಸುತ್ತಾಳೆ. ಹಾಗೆಂದು ಅವಳು ಗಂಡನ ಜತೆ ಜಗಳ ಮಾಡುವುದಿಲ್ಲ, ಅವನಿಗೆ ಡೈವೋರ್ಸ್ ಕೊಡುವುದಿಲ್ಲ, ನೊಂದು ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ. ಬದಲಾಗಿ ನೊಂದ ಮಹಿಳೆಯರನ್ನು ಮನೆಗೆ ಕರೆಯಿಸಿ, ಅವರಿಗೆ ನ್ಯಾಯ ಒದಗಿಸುತ್ತಾಳೆ. ಪಶ್ಚಾತಾಪ ಪಟ್ಟುಕೊಂಡ ಗಂಡನನ್ನು ಕ್ಷಮಿಸುತಾಳೆ. ಹೀಗಾಗಿ ಆಕೆ ಧರಿತ್ರಿಯಂತೆ ವಿಶಾಲ ಹೃದಯದವಳಾಗುತ್ತಾಳೆ. ಹೆಣ್ಣುಮಕ್ಕಳ ಪರಿಸ್ಥಿತಿ ಎಷ್ಟೊಂದು ಕಷ್ಟಕರವಾಗಿರುತ್ತದೆಂದು ತಿಳಿದ ಅನುಶ್ರೀ ಹೀಗೆ ಹೇಳಿದ್ದಾಳೆ. “ಸ್ತ್ರೀಯನ್ನು ಪೂಜಿಸುವ ಈ ದೇಶದಲ್ಲಿ ಸ್ತ್ರೀಯೇ ಯಾಕೆ ಶೋಷಣೆಗೆ ಒಳಗಾಗುತ್ತಿದ್ದಾಳೆ! ತಾಯಿಯಾಗಿ, ಸಹೋದರಿಯಾಗಿ, ಗೆಳತಿಯಾಗಿ, ಹೆಂಡತಿಯಾಗಿ, ಸೇವಕಿಯಾಗಿ, ಗುರುವಾಗಿ ಕಾರ್ಯನಿರ್ವಹಿಸುತ್ತಿರುವ ಹೆಣ್ಣನ್ನು ಒಂದು ವಸ್ತುವಿನಿಂತೆ ಯಾಕೆ ನೋಡುತ್ತಿದ್ದಾರೆ? ಅವಳಿಗೂ ಉಸಿರಿದೆ, ಮನಸ್ಸಿದೆ ಅಂತ ಯಾಕೆ ತಿಳಿಯುತ್ತಿಲ್ಲ? ವಿಕೃತನ ಮನಸ್ಸುಗಳಿಗೆ ಕೊನೆಯಿಲ್ಲವೆ?” (ಧರಿತ್ರಿ-ಪು:45) ಹೀಗೆ ಈ ಸಮಾಜ ವ್ಯವಸ್ಥೆಯಲ್ಲಿ ಪುರುಷಪ್ರಧಾನ ಸಂಸ್ಕೃತಿ ಹೇಗೆ ಮಹಿಳೆಯನ್ನು ಶೋಷಣೆ ಮಾಡುತ್ತಿದೆಯೆಂಬುದನ್ನು ತಿಳಿಸಿದ್ದಾಳೆ. ತನ್ನ ಗಂಡ ಈ ವ್ಯವಸ್ಥೆಯ ಪ್ರತಿನಿಧಿಯಾಗಿದ್ದಾನೆಂಬುದನ್ನು ತಿಳಿದುಕೊಂಡ ಆಕೆ ತೆಗೆದುಕೊಳ್ಳುವ ನಿರ್ಣಯಗಳು ಕುತೂಹಲಕಾರಿಯಾಗಿವೆ.

ಈ ವ್ಯವಸ್ಥೆ ಬದಲಾಗಬೇಕಾದರೆ, ತಪ್ಪು ಮಾಡುವವರಿಗೆ ತಿಳಿಹೇಳಬೇಕು, ಅನ್ಯಾಯವನ್ನು ಖಂಡಿಸಬೇಕೆಂದು ಹೇಳುವ ಪೂರ್ವಿಯ ಮಾತುಗಳು ಗಮನ ಸೆಳೆಯುತ್ತವೆ.“ಗಂಡ ಮಾಡುವ ತಪ್ಪನ್ನು ಹೆಂಡತಿ ಖಂಡಿಸಿದರೆ, ಮಗ ಮಾಡುವ ತಪ್ಪನ್ನು ತಾಯಿ ದಂಡಿಸಿದರೆ, ಅತ್ಯಾಚಾರ ಮಾಡಿದ ಯಾವುದೇ ಪುರುಷನನ್ನು ಕಾನೂನು ಗಲ್ಲಿಗೇರಿಸಿದರೆ, ಖಂಡಿತ ಹೆಣ್ಣು ಸ್ವತಂತ್ರಳಾಗುತ್ತಾಳೆ” (ಪು:48) ಎನ್ನುವ ಪೂರ್ವಿಯ ನುಡಿಗಳಲ್ಲಿ ಸ್ತ್ರೀವಾದದ ಆಶಯಗಳಿವೆ. ಅನ್ಯಾಯ-ಶೋಷಣೆಯ ವಿರುದ್ಧ ಪ್ರತಿಭಟಿಸಬೇಕೆಂಬ ವಿಚಾರಗಳಿವೆ.

ಈ ಕಾದಂಬರಿಯಲ್ಲಿ ಆರಾಧ್ಯ ಎಂಬ ಮಹಿಳೆ, ಒಬ್ಬ ಶ್ರೀಮಂತ ಉದ್ದಿಮೆಯಾಗಿದ್ದು, ಧೀರಜನ ಮೋಸಕ್ಕೆ ಬಲಿಬೀಳುತ್ತಾಳೆ. ಅವನು ಮದುವೆಯಾಗುವುದಾಗಿ ಭರವಸೆ ಕೊಟ್ಟಾಗ ನಂಬಿಬಿಡುತ್ತಾಳೆ. ಅನುಶ್ರೀಯ ತೀರ್ಮಾನ ವನ್ನು ಕಂಡು ಆರಾಧ್ಯ ಹೀಗೆ ಹೇಳುತ್ತಾಳೆ. “ಮೇಧಾವಿಗಳೆಲ್ಲ ಹೆಣ್ಣನ್ನು ಭೂಮಿಗೆ ಹೋಲಿಸುತ್ತಾರೆ ಅದು ಸತ್ಯ. ಸ್ತ್ರೀ ಅಂದರೇನೇ ‘ಧರತ್ರಿ’. ಧರ್ಮಕ್ಕೆ ಹೆಣ್ಣು ಯಾವಾಗಲೂ ಬದ್ದಳಾಗೆ ಇರುತ್ತಾಳೆನ್ನುವುದು ನಿಮಗೆ ತಿಳಿದರೆ ಸಾಕು. ಅನುಶ್ರೀ ಅವರೆ, ನೀವು ತ್ಯಾಗದ ಪ್ರತಿರೂಪ. ಹೆಂಡತಿಯೆಂದರೆ ಹೀಗಿರಬೇಕು ಅನ್ನುವುದಕ್ಕೆ ನೀವೊಂದು ನಿದರ್ಶನ’. (ಧರತ್ರಿ-ಪು:51) ಆರಾಧ್ಯಳ ಈ ನುಡಿಗಳಿಂದ ಅನುಶ್ರೀ ಎಂತಹ ತ್ಯಾಗಮಯಿಯೆಂಬುದು ಸ್ಪಷ್ಟವಾಗುತ್ತದೆ. ಆರಾಧ್ಯಯೆಂಬ ಹೆಸರು ಗಂಡಸು ಪಾತ್ರದ ಹೆಸರಿನಂತಿದೆ. ಕಾದಂಬರಿಕಾರ್ತಿ ಬೇರೆ ಹೆಸರನ್ನಿಡಬಹುದಾಗಿತ್ತು.

ಈ ಕಾದಂಬರಿಯ ಅಂತ್ಯ ಸುಖಾಂತವಾಗಿದೆ. ಅನೇಕ ಹೆಣ್ಣುಗಳನ್ನು ಮೋಸದಿಂದ ಅನುಭವಿಸಿದ ಧೀರಜನ ಮೇಲೆ ಇಲ್ಲಿಯ ಯಾವ ಮಹಿಳೆಯೂ ದೂರು ಕೊಡುವುದಿಲ್ಲ. ಹೀಗಾಗಿ ಧೀರಜನಿಗೆ ಶಿಕ್ಷೆಯಾಗುವುದಿಲ್ಲ. ಅವನು ತನ್ನ ತಪ್ಪು ಒಪ್ಪಿಕೊಂಡ ಕೂಡಲೇ ಎಲ್ಲರೂ ಕ್ಷಮಿಸಿ ಬಿಡುತ್ತಾರೆ. ಅನುಶ್ರೀಯಂತಹ ತ್ಯಾಗಮಯಿ ಮಹಿಳೆಯರು ತುಂಬ ವಿರಳ. ಬೇರೆ ನಾಟಕಗಳಲ್ಲಿ ತಪ್ಪು ಮಾಡಿದವರಿಗೆ, ಖಳನಾಯಕರಿಗೆ ಕೊನೆಗೆ ಶಿಕ್ಷೆಯಾಗುತ್ತದೆ. ಆದರೆ ಇಲ್ಲಿ ಪ್ರೇಮಾ ಬದಾಮಿಯವರು ಬೇರೆ ರೀತಿಯಿಂದ ಆಲೋಚಿಸಿದ್ದಾರೆ. ಒಬ್ಬ ಮನುಷ್ಯ ತಪ್ಪು ಮಾಡಿದಾಗ ಅವನಿಗೆ ಶಿಕ್ಷೆ ಕೊಡುವುದು ಸುಲಭ. ಆದರೆ ಅಂತವರ ಮನಪರಿವರ್ತನೆ ಶಿಕ್ಷೆಯಿಂದ ಆಗುತ್ತದೆಂದು ಹೇಳಲಾಗುವುದಿಲ್ಲ. ಆದುದರಿಂದ ಇಲ್ಲಿ ಲೇಖಕಿ ಮನುಷ್ಯನ ಮನಪರಿವರ್ತನೆಗೆ ಮಹತ್ವದ ಸ್ಥಾನ ನೀಡಿದ್ದಾರೆ. ಗಾಂಧೀಜಿಯವರ ತತ್ವದಂತೆ ಪಶ್ಚಾತಾಪಕ್ಕೆ ಇಲ್ಲಿ ಬೆಲೆ ಕೊಡಲಾಗಿದೆ.

ಈ ನಾಟಕದ ಉದ್ದೇಶ ಸ್ತ್ರೀವಾದವನ್ನು ಹೇಳುವುದಾಗಿಲ್ಲ. ಹಾಗೆಂದು ಇಲ್ಲಿ ಸ್ತ್ರೀವಾದವನ್ನು ವಿರೋಧಿಸುವುದಿಲ್ಲ, ಪೂರ್ವಿಯಂತಹ ಯುವತಿಯಲ್ಲಿ ಸ್ತ್ರೀವಾದದ ಆಶಯಗಳಿವೆ. ಹಾಗೆಂದು ಸಾಂಪ್ರದಾಯಿಕವಾದ ನಾಟಕವೂ ಇದಲ್ಲ. ವೃತ್ತಿರಂಗಭೂಮಿಯಲ್ಲಿ ಒಂದು ಹೊಸ ಪ್ರಯತ್ನವನ್ನು ಪ್ರೇಮಾ ಅವರು ಮಾಡಿದ್ದಾರೆ. ಆದರೆ ಇದು ಎಷ್ಟರಮಟ್ಟಿಗೆ ಪ್ರಾಕ್ಟಿಕಲ್ ಆಗಿದೆಯೆಂಬುದು ಹಾಗೆಯೇ ಉಳಿದು ಬಿಡುತ್ತದೆ. ಇಂದಿನ ಆಧುನಿಕ ಮಹಿಳೆ ಅನುಶ್ರೀಯ ಹಾಗೆ ತ್ಯಾಗಕ್ಕೆ ಸಿದ್ಧಳಾಗುವುದಿಲ್ಲ, ಬದಲಾಗಿ ತನ್ನ ಹಕ್ಕನ್ನು ಚಲಾಯಿಸುತ್ತಾಳೆ. ತನ್ನ ಆಸ್ತಿ-ಸಂಪತ್ತನ್ನೆಲ್ಲ ಆ ನೊಂದ ಮಹಿಳೆಯರಿಗೆ ಹಂಚಿಹಾಕಿ, ಆರಾಧ್ಯಳೊಂದಿಗೆ ಮದುವೆಯಾಗಿ, ಆ ವಿಧವೆಗೆ ಒಂದು ಬಾಳು ಕೊಡಬೇಕೆಂದು ಧೀರಜನಿಗೆ ಹೇಳುವ ಅನುಶ್ರೀಯಂತಹ ಪಾತ್ರ ತುಂಬ ವಿರಳ. ನೊಂದ ಮಹಿಳೆಯರಿಗೆ ಕೆಲವು ಶ್ರೀಮಂತರು ಪರಿಹಾರವನ್ನು ಕೊಡಬಹುದು, ತಾನು ತನ್ನ ಮಕ್ಕಳು ಇರುವಾಗ ಮತ್ತೊಂದು ಮಹಿಳೆಯನ್ನು ಧೀರಜನಿಗೆ ಮದುವೆ ಮಾಡಿಸಲು ಪ್ರಯತ್ನಿಸುವುದು, ಈ ಕಾಲದಲ್ಲಿ ನಡೆಯಲು ಸಾಧ್ಯವಿಲ್ಲ. ಆದರೂ ಅಂಥಹ ಒಂದು ಪ್ರಯತ್ನವನ್ನಿಲ್ಲಿ ಲೇಖಕಿ ಸೃಷ್ಟಿಸಿದ್ದಾರೆ.

ಕೊನೆಯ ದೃಶ್ಯದಲ್ಲಿ ಧೀರಜ ತನ್ನ ತಪ್ಪು ಒಪ್ಪಿಕೊಂಡು ಪಶ್ಚಾತಾಪ ಪಟ್ಟಂತೆ, ಅವನಿಂದ ಮೋಸಕ್ಕೊಳಗಾಗಿದ್ದ ಮಹಿಳೆಯರೂ ಕೂಡ ತಮ್ಮ ಅಸಹಾಯಕತೆಯಿಂದಾದ ತಪ್ಪನ್ನು ಒಪ್ಪಿಕೊಳ್ಳುತ್ತಾರೆ. ಧೀರಜ ಯಾವ ಮಹಿಳೆಯ ಮೇಲೂ ರೇಪ್ ಮಾಡಿರುವುದಿಲ್ಲ. ಅವರ ಅಸಹಾಯಕತೆಯನ್ನು ದುರ್ಬಳಕೆ ಮಾಡಿಕೊಂಡು, ಅವರಿಗೆ ಹಣದ, ನೌಕರಿಯ ಆಸೆ ತೋರಿಸಿ ತನ್ನ ಬಲೆಗೆ ಹಾಕಿಕೊಂಡಿರುತ್ತಾನೆ. ಅವನಿಂದ ಹಣಪಡೆದು, ನೌಕರಿಪಡೆದು ಅವನ ಮಾತಿಗೆ ಮರುಳಾಗಿ ಹೋದ ನಿಖಿತ, ಆರಾಧ್ಯ, ರಮಾ, ಪೂರ್ವಿ ಈ ಎಲ್ಲ ಮಹಿಳೆಯರೂ ಅವನ ವಿರುದ್ಧ ಮಾತನಾಡುವ ನೈತಿಕತೆಯನ್ನು ಕಳೆದುಕೊಂಡು ಬಿಡುತ್ತಾರೆ.

ಈ ನಾಟಕದಲ್ಲಿ ಹಾಸ್ಯ ಸನ್ನಿವೇಶಗಳಿದ್ದು ಭಜರಂಗ, ಅವನ ಪತ್ನಿ ಶಾಂತಾ ಮತ್ತು ಗುಮಾಸ್ತ ರಾಘಣ್ಣ ಅವರ ನಡುವೆ ನಡೆಯುವ ಸಂಭಾಷಣೆಗಳು ಹಾಸ್ಯಮಯವಾಗಿವೆ. ಧೀರಜನ ಕಾರಿನ ಡ್ರೈವರನಾಗಿದ್ದ ಭಜರಂಗ ಮತ್ತು ಅವನ ಹೆಂಡತಿ ಶಾಂತಾ ಬಡವರಾದರೂ ಕೆಟ್ಟಕೆಲಸ ಮಾಡಿದವರಲ್ಲ. ಗಂಡ-ಹೆಂಡತಿ ಎಷ್ಟೇ ಜಗಳ ಮಾಡಿದರೂ ಮತ್ತೆ ಪ್ರೀತಿಯಿಂದ ಬದುಕು ಸಾಗಿಸುತ್ತಾರೆ. ಅತಿಯಾಸೆಗೆ ಅವರು ಬಲಿಯಾಗುವುದಿಲ್ಲ. ಆದರೆ ಈ ನಾಲ್ವರು ಮಹಿಳೆಯರು ಧಿರಜನ ಮೋಸದ ಮಾತಿಗೆ ಮರುಳಾಗಿ ದಾರಿತಪ್ಪಿ ನಡೆಯುತ್ತಾರೆ. ಕಲಿಯದೇ ಇರುವ ಭಜರಂಗ ಮತ್ತು ಶಾಂತಾ ದಂಪತಿಗಳು ಆದರ್ಶ ದಾಂಪತ್ಯವನ್ನು ನಡೆಸಿದರೆ, ಕಲಿತ ನಿಖಿತ, ಆರಾಧ್ಯ, ರಮಾ, ಪೂರ್ವಿ ಇವರೆಲ್ಲ ಧೀರಜನಂತಹ ಮೋಸಗಾರನ ಮಾತಿಗೆ ಮರುಳಾಗುತ್ತಾರೆ. ಅವನಿಗೆ ಹೆಂಡತಿ-ಮಕ್ಕಳು ಇದ್ದ ವಿಷಯ ಗೊತ್ತಿದ್ದೂ ಅವನೊಂದಿಗೆ ಮದುವೆಯಾಗುವ ಕನಸು ಕಾಣುತ್ತಾರೆ. ಹೀಗೆ ಈ ನಾಟಕದಲ್ಲಿ ಮನುಷ್ಯರ ಗುಣ-ಸ್ವಭಾವದ ಆತ್ಮವಿಮರ್ಶೆ ನಡೆದಿದೆ. ಈ ನಾಟಕದಲ್ಲಿ ಯಾವುದೇ ಸಾಮಾಜಿಕ ಸಮಸ್ಯೆ, ಅಥವಾ ವರ್ತಮಾನದ ಸವಾಲುಗಳು ಕಾಣಿಸದೆ, ಕೌಟುಂಬಿಕ ಸಮಸ್ಯೆಯತ್ತ ನಾಟಕ ಮುಖಮಾಡುತ್ತದೆ. ಹೀಗಾಗಿ ಇಂದು ಈ ನಾಟಕ ಹೇಗೆ ಪ್ರಸ್ತುತ ಎಂಬ ಪ್ರಶ್ನೆ ಮಾತ್ರ ಹಾಗೇ ಉಳಿದು ಬಿಡುತ್ತದೆ. ಆದೂ ಪ್ರೇಮಾ ಅವರು ಒಂದು ಹೊಸ ಪ್ರಯೋಗವನ್ನು ಈ ನಾಟಕದ ಮೂಲಕ ಮಾಡಿದ್ದಾರೆ.

ಪ್ರೇಮಾ ಅವರು ಈ ನಾಟಕದಲ್ಲಿ ಬಳಸಿದ ಭಾಷೆ ತುಂಬ ಸಹಜವಾಗಿದೆ. ಉತ್ತರಕರ್ನಾಟಕದ ಗಾದೆ ಮಾತು, ಪಡೆನುಡಿಗಳು ನಾಟಕಕ್ಕೆ ಕಳೆಕಟ್ಟಿವೆ. ರಂಗಭೂಮಿಯಲ್ಲಿ ಭಾಷೆ ಪ್ರಮುಖ ಪಾತ್ರವಹಿಸುತ್ತದೆ. ಆ ದೃಷ್ಟಿಯಿಂದ ಇಲ್ಲಿಯ ಸಂಭಾಷಣೆಗಳು ಗಮನ ಸೆಳೆಯುತ್ತವೆ. ಇಲ್ಲಿಯ ಅನೇಕ ಪಾತ್ರಗಳು ಗಾದೆ ಮಾತುಗಳನ್ನು ತಮ್ಮ ಮಾತಿನಲ್ಲಿ ಸಹಜವೆಂಬಂತೆ ಬಳಸುತ್ತಾರೆ.

ಕೆಲವು ಗಾದೆಮಾತುಗಳನ್ನಿಲ್ಲಿ ಗಮನಿಸಬಹುದಾಗಿದೆ.

 

*ಉರದಿದ್ದು ಊರಾಗ ಇರುದಿಲ್ಲಂತ, ಮೆರದಿದ್ದು ಕೇರ್ಯಾಗ ಇರುದಿಲ್ಲಂತ (ಪು:5)

* ಕಷ್ಟಕ್ಕ ಕರಿಬ್ಯಾಡ ಊಟಕ್ಕ ಮರಿಬ್ಯಾಡ ಅನ್ನಾವ ನೀನು (ಪು:6)

*ಖಬರಗೇಡಿ ಕೈಯಾಗ ಖೊಬ್ರಿಕೊಟ್ಟರs ಖೊಬ್ರಿ ಓದು ಸಬರದಾಗ ಇಟ್ಟಿತ್ತಂತ.

*ಅಂತಿಗೆಂತ ಕೂಡಿದ ಬೆಂತೂರ ಸಂತೆಂತ (ಪು.7)

*ಪಾಲಿಗೆ ಬಂದದ್ದು ಪಂಚಾಮೃತ (ಪು.7)

*ದಿಕ್ಕಿಲ್ಲದವರಿಗೆ ದೇವರೇ ಗತಿ (ಪು.7)

*ಸಡಲಕೊಟ್ಟ ನಾಯಿ ಜಗಲಿ ಮೂಸಿ ನೋಡಿತ್ತಂತ (ಪು.8)

*ಎಮ್ಮಿ ತಾನತಿಂದು, ಎತ್ತಿನ ಬಾಯಿಗೆ ಒರಿಸಿತಂತೆ (ಪು.32)

*ತಾಳಿದವನು ಬಾಳ್ಯಾನು (ಪು.33)

*ನನ್ನ ಗಂಗಾಳದಾಗ ಕತ್ತಿ ಬಿದ್ದೈತಿ, ಮಂದಿ ಗಂಗಾಳದಾಗ ನೊಣ ಆರಸಾಕ್ಹತ್ತೀನಿ (ಪು.35)

*ಗುರು ಇಲ್ಲದ ಮಠ ಅಲ್ಲ, ಹಿರೇರ ಇಲ್ಲದ ಮನಿಯಲ್ಲ (ಪು.40)

*ಮಳ್ಳಿ ಮಳ್ಳಿ ಮಂಚಕ್ಕ ಎಷ್ಟು ಕಾಲ ಅಂದ್ರ ಮೂರು ಮ್ಯಾಲೊಂದು ಅಂದಿತ್ತಂತ (ಪು.42)

*ಕೈಲಾಗದ ಹೇಡಿ ಮೈಯೇಲ್ಲಾ ಹರಕೊಂತಂತ (ಪು.42)

*ಮನಿ ಗೆದ್ದು ಮಾರುಗೆಲ್ಲು (ಪು.42)

*ಮೂಕ ದೆವ್ವನ ಕೂಡ ನಾಕು ದೆವ್ವ ಸತ್ತವಂತ (ಪು.43)

* ಬೆಳತನಕ ರಾಮಾಯಣ ಕೇಳಿ ರಾಮಗ ಸೀತಾ ಏನಾಗಬೇಕಂದ್ರಂತ (ಪು.44)

*ಕೆಟ್ಟಮ್ಯಾಲ ಬುದ್ದಿ ಬಂತಂತ (ಪು44)

ಈ ನಾಟಕದಲ್ಲಿ ಅನೇಕ ಪಡೆನುಡಿಗಳು ಬಳಕೆಯಾಗಿ ಪ್ರೇಕ್ಷಕನಲ್ಲಿ ಪರಿಣಾಮವನ್ನುಂಟುಮಾಡಿವೆ. “ಜುಟ್ಟುಕೋದು ಜೋಪಡಿಗೆ ಹಾಕತೇನಿ”, ಬಾಯಿಬಿಟ್ಟರs ಬಗರಿ ಕಟದಂಗ”, “ತೊಳದ ಬಂಗಾರ ಇದ್ದಂಗ”, “ತುಪ್ಪ ತಿಂದ ತಲಿನಾ ತಿಪ್ಪಿಗುಂಡಿ ಮಾಡಿದ್ರಿ”, “ಸುಡಗಾಡದಾಗ ಓದು ಸುಟ್ಟ ಬರ್ಲಿ”, “ಗೂಟಾ ಊರ್ಕೊಂಡು ಕುಂತೀನಿ”, “ಕಟದಗೊಂಬಿ ಹಾಂಗ ಇದ್ದ ನನ್ನ ಪಚಡಿ ಮಾಡಿಟ್ಟಿ”, “ಸೋಗಲಾಡಿ ಸುಬ್ಬ” ಇಂತಹ ಅನೇಕ ಪಡೆನುಡಿಗಳು ನಾಟಕದ ಸೌಂದರ್ಯವನ್ನು ಹೆಚ್ಚಿಸಿವೆ. ವೃತ್ತಿರಂಗಭೂಮಿಯಲ್ಲಿ ಮಹಿಳಾ ನಾಟಕಕಾರರೇ ಇಲ್ಲವೆನ್ನುವಾಗ ಪ್ರೇಮಾ ಬದಾಮಿ ತುಂಬ ಭರವಸೆ ಮೂಡಿಸಿದ್ದಾರೆ. ಅವರಿಂದ ಇನ್ನೂ ಮಹತ್ವದ ರಂಗನಾಟಕಗಳು ರಚನೆಯಾಗಲೆಂದು ಹಾರೈಸೋಣ.

ಈ ಅಂಕಣದ ಹಿಂದಿನ ಬರಹಗಳು:
ಮಹಿಳಾ ರಂಗಭೂಮಿ ಪರಂಪರೆ


MORE NEWS

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...