ಮನದ ಮಾತುಗಳೇ ಪದ್ಯಗಳಾದಾಗ: ಅಮೃತ ಎಂ.ಡಿ


"ಸಮಾಜದ ಆಗೂ-ಹೋಗುಗಳು ಎದೆಯ ಕದವ ಕಟ್ಟಿ ಕಣ್ಣೀರ ಹನಿ ಮಡುಗಟ್ಟಿ ನಿಂತಾಗ, ಗಂಟಲ ಪಸೆ ಒಣಗಿದಾಗ, ಗರ್ಭ ಕಟ್ಟಿದ ನೋವುಗಳು ಪದವಾಗಿ, ಪದ್ಯವಾಗಿ ಅಕ್ಷರ ರೂಪ ತಾಳುತ್ತವೆ. ಅಂತಹ ನಿದರ್ಶನಗಳಿಗೆ ಸಾಕ್ಷಿಯಾಗಿ ನಮ್ಮ ನಿಮ್ಮ ನಡುವಿನ ಕವಯತ್ರಿ ರೇಶ್ಮಾ ಗುಳೇದಗುಡ್ಡಾಕರ್ ಅವರು ಇದ್ದಾರೆ" ಎನ್ನುತ್ತಾರೆ ಅಮೃತ ಎಂ ಡಿ. ಅವರು ಲೇಖಕಿ ರೇಶ್ಮಾ ಗುಳೇದಗುಡ್ಡಾಕರ್ ಅವರ ‘ತಂಗುದಾಣ ಬೇಕು ಬದುಕಿಗೆ’ ಕವನ ಸಂಕಲನಕ್ಕೆ ಬರೆದ ಮುನ್ನುಡಿ ನಿಮ್ಮ ಓದಿಗಾಗಿ...

"ನೆಡ ಬೇಕಿದೆ ಮಾನವೀಯತೆ ಸಸಿಯ
ಬೆಳಸಿ ಉಳಿಸ ಬೇಕಿದೆ ಮನದ
ರಹದಾರಿಯ ತುಂಬಾ ಪ್ರೀತಿಯ
ನೆರಳ ಪಡೆಯಲು ಬದುಕಿನಲ್ಲಿ"

ಈ ಮೇಲಿನ ಸಾಲುಗಳು ಮಿಡಿಯುವ ಹೃದಯದ ಅಹವಾಲು ಗಳನ್ನು ಸಾರುತ್ತಿದೆ.

ಜೀವನದ ಮಹಲಿಗೆ ಹಿಡಿ ಪ್ರೀತಿ ಸಾಕು ಬದುಕ ಬಟ್ಟಲು ತುಂಬಲು,
ಮಾನವೀಯತೆ ಬೇಕು ಮನುಜ ಪಥ ಮೆರೆಯಲು
ಎಂಬ ತಾತ್ಪರ್ಯದೊಂದಿಗೆ.

"ಜಾಲಿಯ ಮರದಂತೆ ನೆರಳು‌
ನೀಡದೆ ಬದುಕಿ ಮನೆಯ ಮೇಲೆ
ಮನೆ ಕಟ್ಟಿದರೆ ಏನು‌ ಬಂತು?
ಮಮತೆ ಇಲ್ಲದ ಮನ,ಮನವೇ?
ಸ್ನೇಹವಿಲ್ಲದ ಬದುಕು ಬದುಕಲ್ಲ"

ಪ್ರಸ್ತುತ ಸಮಾಜಕ್ಕೆ ಹಿಡಿ ಪ್ರೀತಿ, ಮಮತೆ ತುಂಬಿದ ಕಾಳಜಿ ಬೇಕಿದೆ,ಆ ನಿಟ್ಟಿನಲ್ಲಿ ಇಲ್ಲಿ ಕವಯತ್ರಿ ಮನಸ್ಸು ತುಡಿಯುತ್ತಿದೆ.

"ಕಂಡವರ ಮನೆಯ ಕಿಚ್ಚಲ್ಲಿ
ಚಳಿಕಾಸಿದ್ದು ಸಾಕು‌
ಒಮ್ಮೆ ತೆರೆದು ನೋಡಿ ನಿಮ್ಮ
ಮನೆಯೊಳಗಿನ ಕಿಡಿಗಳ ...!!?
ಹಚ್ಚಿ ಕರುಣೆಯ ಹಣತೆ ಎದೆಯ ಗೂಡಲ್ಲಿ
ಅದು ಬೆಳಕಾಗುವುದು ಹಲವರ ಬಾಳಲ್ಲಿ"

ಎದೆಯೊಳಗಿನ ಹರಿವು ಎಂಬ ಪದ್ಯದಲ್ಲಿ ಮೇಲಿನ ಸಾಲುಗಳ ನಾವು ಕಾಣಬಹುದು. ಸಣ್ಣ ಬುದ್ದಿಯ ತೊಡೆಯಿರಿ, ಬದುಕು ಸಾಗರದಂತೆ, ಒಳಿತಿನ ಹಣತೆಯ ಹಚ್ಚುವ, ಅಂಧಕಾರ ತೊಡೆದು ಬೆಳಕಿನ ಹೊಳಪು ಆವರಿಸುವಲ್ಲಿ ನಾವು ಹಣತೆ ಆಗೋಣ ಎಂಬ ಸಮಾಜಮುಖಿ ಚಿಂತನೆ ಇಲ್ಲಿ ಕಾಣುತ್ತದೆ..

"ದಿಟ್ಟತನ ನೋಡುಗರ ಎದೆಯಲ್ಲಿ
ಭಯದ ಬುಗುರಿಯ ಆಡಿಸಿತು
ಕ್ಷಣ ಮಾತ್ರದಲ್ಲಿ
ಸಂಕೋಲೆಗಳನ್ನು ಕಿತ್ತು ಒಸೆದಮೇಲೆ
ಹೆದರುವುದು ಯಾತಕ್ಕೆ ?
ಭವಿಷ್ಯಕ್ಕೂ ,ವಾಸ್ತವಕ್ಕೂ ..
ಬಿರುಗಾಳಿಗೆ ಸಿಕ್ಕ ತರಗೆಲೆಯಂತಾದವು
ಭಯದ ಭೂತಗಳು"

ಪಯಣ ಪದ್ಯದಲ್ಲಿ ಈ ಮೇಲಿನ ಸಾಲುಗಳನ್ನು ನಾವು ಕಾಣಬಹುದು . ನೇರ ದೃಷ್ಟಿ ,ನೇರ ಮಾತು, ಸತ್ಯ ಸತ್ಯತೆಗಳು ವಾಸ್ತವ ಮತ್ತು ಭವಿಷ್ಯದ ಅಂತರವನ್ನು ತಿಳಿಸುತ್ತವೆ ಎಂಬ ಸೂಕ್ಷ್ಮತೆಗಳನ್ನು ಇಲ್ಲಿ ಅರಿಯಬಹುದು.

"ಸದ್ದಿಲ್ಲದೆ ಬರುವ ಬದುಕಿನ
ರೋಚಕ ತಿರುವುಗಳಿಗೆ ಎದೆಕೊಟ್ಟು
ಕನಸುಗಳ ಬಲಿಕೊಟ್ಟು
ಸಮಯದ ಜೊತೆ ಓಡುತ್ತಾ
ಆಯಸ್ಸು ಕಳೆಯುವ ಯುವಜನತೆಗೆ
ಸಂಘರ್ಷದ ಕೊಡುಗೆ ನೀಡುವಿರಿ..!!!"

ಜೀವನದ ತುಂಬಾ ಸಂಪ್ರೀತಿಯ ತಣ್ಣೆಳಲು ಬೀಸಲಿ , ಸಂಘರ್ಷದ ಸುಳಿಗಾಳಿ ನಮ್ಮ ಯುವ ಜನತೆಯ ಸುಳಿಯದಿರಲಿ ಎಂಬ ಕಾಳಜಿಯ ನೋಟಗಳ ನಾವು ನೋಡಬಹುದು

"ಟೀಕೆ ಟಿಪ್ಪಣಿ ಗಳ ಜಂಗುಳಿಯಲ್ಲಿ
ತನ್ನ ತಾ ಮರೆತ ಬದುಕಿಗೆ
ಸ್ಪೂರ್ತಿಯ ತುಂಬುವ
ತಣ್ಣನೆಯ ತಂಗಾಳಿಯ ತಂಗುದಾಣ ಬೇಕು"

ಕುಹಕ ನುಡಿಯಲು ನೂರು ಮಂದಿ ಇರಲಿ, ತಮ್ಮ ಲಾಲಸೆಗಳಲ್ಲಿ ಜಗವ ಮರೆಯಲಿ, ಆ ಗೊಡವೆಗಳ ದಾಟಿ ಬದುಕ ಬಟ್ಟಲು ತುಂಬಲು ಅರೆಗಳಿಗೆ ಶಾಂತಿಯ ವಾತಾವರಣ ಬೇಕು ಎಂದು ತುಡಿಯುವ ಮನ ಇಲ್ಲಿದೆ.

"ಯಾವ ಸಾಗರಕ್ಕೂ ಹೋಲಿಕೆಯಾಗದ
ಬದುಕಿನ ಅಲೆಗಳ ಓಟ .....
ಮೆಲ್ಲನೆ ದಡಕ್ಕೆ ಮುತ್ತಿಡುವವು
ಕೆಲವೊಮ್ಮೆ ಕೊಚ್ವಿಕೊಂಡ್ಯೊಯ್ಯುವವು
ದಡವನ್ನೇ ...."

ಭವ - ಸಾಗರ ದಾಟುವುದು ಸುಲಭದ ಮಾತಲ್ಲ, ಯಾವ ಅಲೆ ಯಾವಾಗ ಎಲ್ಲಿ ತಬ್ಬುವುದೋ, ನೂಕುವುದೋ ವರ್ತಮಾನಕ್ಕೆ ತಕ್ಕಂತೆ ಹೆಜ್ಜೆ ಹಾಕಬೇಕು ಎನ್ನುವಾಗ ಇಲ್ಲೊಂದು ಪ್ರಾಯೋಗಿಕ ನುಡಿ ಕಾಣಸಿಗುತ್ತದೆ.

"ಅಂತ್ಯ ಬೇಕಿದೆ ಈ ಕನಸನು
ಒಡೆದು ಹಾಕುವ ,ಕಲ್ಪನೆಗಳನು
ಜಡ್ಡು ಹಿಡಿಸುವ ಉದಾಸೀನಕೆ ..."

ಈ ಮೇಲಿನ ಸಾಲುಗಳು ಜೀವನದ ಅದಮ್ಯ ಚೈತನ್ಯ, ಉತ್ಸಾಹವನ್ನು ಸ್ಪುರಿಸುತ್ತವೆ.

"ಅರಿತಷ್ಟು ಆಗಸವು
ನಡೆದಷ್ಟು ಜಗವು ಇರಲು
ಪಯಣ ನಿಲ್ಲಿಸುವ ಧಾವಂತವೇಕೆ?
ನಿನ್ನೊಳಗಿನ ನೀನು ಎಲ್ಲಿಹೋದೆ ?"

ನಮ್ಮೊಳಗಿನ ಆಶಾವಾದಿತನ ನಮ್ಮನ್ನು ಕಾಯುತ್ತದೆ, ಕಾಡುತ್ತದೆ, ನಾವು ನಮಗಾಗಿ ಬದುಕ ಪುಟಗಳ ತಿರುವಲು ಹೊರಟರೆ ಜೀವನ ಅಕ್ಷಯ ಬಟ್ಟಲಾಗುತ್ತದೆ ಎಂಬ ಭರವಸೆಯ ಕಾಣಬಹುದು.

"ತ್ರೇತಾಯುಗದ ಸೀತೆಗೆ ಕಾಡಾದರೂ
ಇತ್ತು

ನವಯುಗದ ಹೆಣ್ಣುಗಳಿಗೆ
ಕಾಂಕ್ರೀಟ್ ಕೋಣೆಯು ದಹಿಸುವದು
ಅಂತರಾತ್ಮವ ಬಡಿದು ಹಿಡಿದು
ಹಿಪ್ಪೆಮಾಡಿ ಸಂತಸ ಪಡುವುದು ..!"

"ಮಾತು ಭರ್ಜಿಗಿಂತಲೂ ಹರಿತವಾಗಿ
ಭಾವನೆಗಳ ಛಿದ್ರಗೂಳಿಸಿ
ಯಾವ ಹತಾರಕ್ಕೊ ಕಡಿಮೆ ಇಲ್ಲ ಎಂದವು
ಹೆಣ್ಣೆಂಬ ಕಾರಣಕ್ಕೆ ...!!!

ಕಾಯಬೇಕಾಗಿದ್ದು ಎದ್ದು
ದ್ವಂಸಮಾಡಿತು ಸದ್ದಿಲ್ಲದೆ ತಾನು

ಬಣ್ಣದ ತೆರೆ ಎಳೆದು ನೇಪಥ್ಯಕ್ಕೆ ಸರಿಯಿತು ."

ಹೆಣ್ಣಿನ ದುಃಖ, ಅಳಲು, ನೋವಿನ ಕಥೆಯನ್ನು ಪ್ರಸ್ತಾಪಿಸಿ ಸಮಾಜಮುಖಿಯಾಗಿ ಮಿಡಿಯುವ ಕವನಗಳು ಕಣ್ಣ ಅಪ್ಪೆಯನ್ನು ಆದ್ರಗೊಳಿಸುತ್ತದೆ.

"ಬೆಳೆಯುವ ನಾವು ಬೌದ್ಧಿಕವಾಗಿ
ಬೆಳೆಸುವ ನಾವು ಎದೆಗೆ ಬಿದ್ದ ಅಕ್ಷರವನು
ಸಮಾನತೆಯ ಕೊಳದಲಿ‌ ಮಿಂದೇಳಿಸುವ."

ಮನದ ಪ್ರಕ್ಷುಬ್ಬದ್ಧತೆಯ ತೊಡೆದು ಪ್ರಖರತೆಯ ಬೆಳಗು ಮೂಡಿಸುವ ಬದುಕ ಹಂದಣದಿ."

ಹೀಗೆ ಇಲ್ಲಿಯ ಪ್ರತಿಯೊಂದು ಕವನಗಳು ಕಗ್ಗತ್ತಲೆಯ ಮೇಲೆ ಬೆಳಕ ಚೆಲ್ಲುತಿವೆ, ನೋವಿನ ಗಾಯದ ಮೇಲೆ ಔಷದೀಯ ಪ್ರಹಾರ ಸಾಗುತ್ತಿದೆ.

ನೆಮ್ಮದಿಯ ತುಂಬಲು ಭಾವಗಳು ನಿಂತಿವೆ,
ಸಾಮಾಜಿಕತೆಯನ್ನು ಪ್ರಶ್ನಿಸುವ ಪ್ರಶ್ನಾವಳಿ ಇದೆ,
ಬುದ್ಧ, ಗಾಂಧಿಯ ಶಾಂತಿ ಪ್ರವಾಹ ಇದೆ, ಕಾರಂತ, ಕುವೆಂಪು ಅವರ ವೈಚಾರಿಕತೆಯ ಸ್ಪರ್ಶ ಇರುವ ಸಂವೇದನಾಶೀಲ ನೇಯ್ಗೆ. ಮತ್ತೆ ಮತ್ತೆ ಮಾತಾಡಿಸುವ ಪದಗಳ ಲಾಲಿತ್ಯವಿದೆ, ಎದೆಯ ಭಾರ ಶಮನಗೊಳಿಸುವ, ಹೊಸದೊಂದು ಆಲೋಚನೆಯ ತಟ್ಟುವ ಕ್ರಾಂತಿಯ ಗುಣ ಇದೆ. ಮುಂದುವರೆದು ನಮ್ಮೊಳಗೆ ತುಸು ವಿರಮಿಸಿ ತಂಗುವ ತಂಗುದಾಣದ ತಂಪು ವಾತಾವರಣದ ಅಕ್ಕರವಿದೆ.

ಒಟ್ಟಿನಲ್ಲಿ ಮಿಡಿವ ತುಡಿವ ಮನಸಿನ ಮನದ ಮಾತುಗಳೇ ಪದ್ಯಗಳಾಗಿ ಹೊಮ್ಮಿವೆ. ಯಾವ ಸಿದ್ಧಾಂತಗಳಿಗೂ ಕಟ್ಟುಬಿದ್ದು ಕಾವ್ಯಾ ಕಟ್ಟಿಲ್ಲ ಅವರ ಒಳನೋಟ ಮಾತಾಡಿದೆ ಇನ್ನಷ್ಟು ಬರೆಯಲಿ, ಇನ್ನಷ್ಟು ಮಾಗಲಿ ಎಂಬುದಷ್ಟೇ ನನ್ನ ಮನದ ಆಶಯ ಕನ್ನಡ ಸಾರಸ್ವತ ಲೋಕದಲ್ಲಿ ನಿಮ್ಮ ಪುಟ್ಟ ಹೆಜ್ಜೆ ಗುರುತುಗಳು ಹೆಗ್ಗುರುತಾಗಿ ನಿಲ್ಲಲಿ .

 

 

 

 

 

 

MORE FEATURES

ಆಧುನಿಕ ಭರಾಟೆಗೆ ಸಿಕ್ಕು ಕುಂದುತ್ತಿರುವ ಪರಿಸರ ಕಾಳಜಿ..

27-02-2024 ಬೆಂಗಳೂರು

"ಮನುಷ್ಯನ ಬದುಕಿನಲ್ಲಿ ಹಾಸುಹೊಕ್ಕಾಗಿರುವ ಈ ಪ್ರಕೃತಿ, ಅದರೊಳಗಿನ ಅಚ್ಚರಿ, ದುರ್ಗಮ ಸನ್ನಿವೇಶಗಳನ್ನು ಎದುರಿಸಿ ಕ...

ಮಿಣುಕುಹುಳಗಳ ಬೆಳಕಿನ ಪರಿಷೆ: ಶಶಿಧರ ಹಾಲಾಡಿ

27-02-2024 ಬೆಂಗಳೂರು

"ಮಳೆಗಾಲದ ಒಂದು ದಿನ; ನಮ್ಮ ಹಳ್ಳಿಮನೆಯ ಮುಂಭಾಗದಲ್ಲಿರುವ ಪೋರ್ಟಿಕೋದಂತಹ ರಚನೆಯಲ್ಲಿ ಕುಳಿತಿದ್ದೆ; ಹಗಲು ಒಂದೆರಡ...

ಅನುಭವದ ಪ್ರತಿಫಲನದ ಬೆವರ ಹನಿಯ ಜೀವ

27-02-2024 ಬೆಂಗಳೂರು

"ವರ್ತಮಾನದ ಕವಿತೆಗಳಲ್ಲಿ ಪ್ರಾಸಪ್ರಯೋಗ ಬೇಕೋ ಬೇಡವೋ ಎಂಬ ಜಿಜ್ಞಾಸೆಯನ್ನು ಅತ್ತ ಕಟ್ಟಿಟ್ಟು ಮುಂದಿಟ್ಟ ಬಟ್ಟಲ ರಸ...